ಉಪ್ಪಿನಂಗಡಿ: ಆಟೋ ರಿಕ್ಷಾ ಚಾಲಕ-ಮಾಲಕರ ತುರ್ತು ಸಭೆ ಗ್ರಾಪಂ. ಶುಲ್ಕ ವಸೂಲಿಗೆ ಆಕ್ಷೇಪ-ಒಮ್ಮತದ ತೀರ್ಮಾನ-ಸೌಹಾರ್ದಯುತ ಪರಿಹಾರ

Puttur_Advt_NewsUnder_1
Puttur_Advt_NewsUnder_1

uppiಉಪ್ಪಿನಂಗಡಿ: ಇಲ್ಲಿನ ಪೇಟೆಯಲ್ಲಿ ಅಟೋ ರಿಕ್ಷಾಗಳ ನಿಲುಗಡೆಗೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಶುಲ್ಕ ವಿಧಿಸುತ್ತಿದೆ ಎಂದು ಆರೋಪಿಸಿ ಇಲ್ಲಿ ಕಾರ‍್ಯಾಚರಿಸುತ್ತಿರುವ ಫ್ರೆಂಡ್ಸ್ ಆಟೋ ಚಾಲಕ ಮಾಲಕರ ಸಂಘ, ಸ್ನೇಹ ಸಂಗಮ, ಬಿ.ಎಂ.ಎಸ್. ಅಟೋ ಚಾಲಕ ಮಾಲಕರ ಸಂಘಟನೆಗಳು ಜ. 15ರಂದು ತುರ್ತು ಸಭೆ ನಡೆಸಿ, ಸಂಘಟನೆಗಳ ಮುಖಂಡರುಗಳ ಉಪಸ್ಥಿತಿಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಯಿತು.

ಸ್ನೇಹ ಸಂಗಮ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿ ಗ್ರಾಮ ಪಂಚಾಯಿತಿ ವಿಧಿಸಿರುವ 2  ರೂಪಾಯಿ ಬದಲಿಗೆ 1  ರೂಪಾಯಿ ನೀಡುವ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ಬಳಿಕ ಇದಕ್ಕೆ ಸಮ್ಮತಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಈಗ ವಿಧಿಸಿರುವ ಶುಲ್ಕ 720 ರ ಬದಲಾಗಿ ವಾರ್ಷಿಕವಾಗಿ 380 ರೂಪಾಯಿ ವಸೂಲಿ ಮಾಡುವ ಬಗ್ಗೆ ಘೋಷಿಸಿದ್ದು, ಅದಕ್ಕೆ ರಿಕ್ಷಾ ಚಾಲಕರು ಸಮ್ಮತಿಸುವ ಮೂಲಕ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಯಿತು.

ಸಭೆಯಲ್ಲಿ ರಿಕ್ಷಾ ಚಾಲಕ ಸಂಘದ ಪದಾಧಿಕಾರಿಗಳಾದ ಪಿ. ಅಬ್ಬಾಸ್, ಪೂವಣಿ ಗೌಡ, ಸುರೇಶ್ ಮಡಿವಾಳ, ಅಬ್ಬಾಸ್ ಪಯಣಿಗ, ಝಕರಿಯಾ ಮುಸ್ಲಿಯಾರ್, ರಮೇಶ್ ಕುಲಾಲ್ ಮಾತನಾಡಿ ಗ್ರಾಮ ಪಂಚಾಯಿತಿ ಶುಲ್ಕ ವಸೂಲಿ ಮಾಡುವ ಮೂಲಕ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದೆ, ಶುಲ್ಕ ವಸೂಲಿ ಮಾಡುವುದಕ್ಕೆ ನಮ್ಮ ವಿರೋಧ ಇದೆ, ನಮ್ಮಿಂದ ವರ್ಷಕ್ಕೆ 720  ರೂಪಾಯಿ ಕೊಡಲು ಸಾಧ್ಯವಿಲ್ಲ ಎಂದು ಸಭೆಯ ಗಮನ ಸೆಳೆದರು.

ಈ ಮಧ್ಯೆ ಸ್ನೇಹ ಸಂಗಮ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಫಾರೂಕ್ ಬೆದ್ರೋಡಿ ಮಾತನಾಡಿ “ಪಂಚಾಯಿತಿ ದಬ್ಬಾಳಿಕೆ ಮಾಡಿ ವಸೂಲಿ ಮಾಡಿಲ್ಲ, 3 ತಿಂಗಳ ಹಿಂದೆ ಸಭೆ ನಡೆಸಿ ವಿಷಯ ತಿಳಿಸಿತ್ತು, ಅದರಂತೆ ಜನವರಿಯಿಂದ ವಸೂಲಿ ಮಾಡಲು ಹೊರಟಿದೆ, ದಿನನಿತ್ಯ ೩ ರೂಪಾಯಿಯಂತೆ ೧೦೮೦ ರೂಪಾಯಿ ಶುಲ್ಕ ನಿಗದಿ ಪಡಿಸಿತ್ತು, ಅದರಂತೆ ಸುಮಾರು 51  ಮಂದಿ ಈಗಾಗಲೇ ಪಾವತಿ ಮಾಡಿದ್ದಾರೆ, ತದ ನಂತರ ಮತ್ತೆ ಪಂಚಾಯಿತಿ ಅಧ್ಯಕ್ಷರಲ್ಲಿ ವಿನಂತಿಸಿದ ಮೇರೆಗೆ ೭೮೦ ರೂಪಾಯಿಗೆ ಇಳಿಸಿದ್ದಾರೆ. ಹೀಗಿರುವಾಗ ಸುಳ್ಳು ಆಪಾದನೆ ಸರಿ ಅಲ್ಲ ಎಂದರು. ಅದೇನಿದ್ದರೂ ಇನ್ನು ಮುಂದೆ ಪಾವತಿಸಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ, ಬಿಎಂಎಸ್ ಅಟೋ ಚಾಲಕ, ಮಾಲಕರ ಸಂಘದ ಗೌರವಾಧ್ಯಕ್ಷ ಕೇಶವ ಗೌಡ ಮಾತನಾಡಿ, ಗ್ರಾಮ ಪಂಚಾಯಿತಿಗೂ ಅದರದ್ದೇ ಆದ ಹಕ್ಕು ಮತ್ತು ಕರ್ತವ್ಯವಿದೆ. ಆದ್ದರಿಂದ ಅದನ್ನು ಪ್ರತಿಯೋರ್ವರೂ ಗೌರವಿಸಬೇಕು. ಇದೀಗ ವಿಧಿಸಿರುವ ಶುಲ್ಕವನ್ನು ಸಂಪೂರ್ಣ ರದ್ದುಗೊಳಿಸಬೇಕೆಂದು ಒತ್ತಾಯಿಸುವುದು ಸರಿ ಅಲ್ಲ, ಈಗ ವಿಧಿಸಿರುವ ಮೊತ್ತವನ್ನು ಪರಿಷ್ಕರಿಸಿ, ರಿಕ್ಷಾ ಚಾಲಕರಿಗೆ ಹೊರೆಯಾಗದಂತೆ ಶುಲ್ಕ ವಿಧಿಸುವಂತೆ ಮನವಿ ಮಾಡೋಣ ಎಂದು ಸಲಹೆ ನೀಡಿದರು.

ಸ್ನೇಹ ಸಂಗಮ ಅಟೋ ಚಾಲಕ ಮಾಲಕರ ಸಂಘದ ಸ್ಥಾಪಕಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಫ್ರೆಂಡ್ಸ್ ಅಟೋ ಚಾಲಕ, ಮಾಲಕರ ಸಂಘದ ಕಾನೂನು ಸಲಹೆಗಾರ ಮಹೇಶ್ ಕಜೆ, ಸ್ನೇಹ ಸಂಗಮದ ಸಲಹೆಗಾರ ನಝೀರ್ ಮಠ ಮತ್ತಿತರರು ಸಲಹೆ ಸೂಚನೆ ನೀಡಿ, ಕೇಶವ ಬಜತ್ತೂರು ಅವರ ಮಾತಿಗೆ ಬೆಂಬಲ ವ್ಯಕ್ತಪಡಿಸಿದರು.

 ಅಂತಿಮವಾಗಿ ವಾರ್ಷಿಕ ಶುಲ್ಕವನ್ನು 300 ರೂಪಾಯಿಗೆ ಇಳಿಸುವುದು, ರಿಕ್ಷಾದವರಿಂದ ಶುಲ್ಕ ವಸೂಲಾತಿಗೆ ಗುತ್ತಿಗೆದಾರರಿಗೆ ಅವಕಾಶ ಕೊಡದಂತೆ ಒತ್ತಾಯಿಸುವುದು. ರಿಕ್ಷಾ ಚಾಲಕರ ಸಂಘಟನೆಗಳ ಮುಖಂಡರ ಮೂಲಕ ಈ ಹಣವನ್ನು ನೇರವಾಗಿ ಪಂಚಾಯತ್‌ಗೆ ನೀಡುವುದು. ರಿಕ್ಷಾ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸುವುದು ಮುಂತಾದ ಪ್ರಮುಖ ನಿರ್ಣಯಗಳನ್ನು ಕೈಗೊಂಡು ಬಳಿಕ ಸಭೆಗೆ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅವರನ್ನು ಕರೆಸಿ, ತಮ್ಮ ಬೇಡಿಕೆಗಳ ಮನವಿಯನ್ನು ಅವರ ಮುಂದಿಟ್ಟರು.

 ಘನ ತ್ಯಾಜ್ಯ ನಿರ್ವಹಣೆ ವೆಚ್ಚ-ಅಧ್ಯಕ್ಷ:  ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮಾತನಾಡಿ ರಿಕ್ಷಾ ಪಾರ್ಕಿಂಗ್ ಶುಲ್ಕ ವಸೂಲಿ ಬಗ್ಗೆ ೩ ವರ್ಷದ ಹಿಂದೆ ನಿರ್ಣಯ ಆಗಿದೆ, ಇದೀಗ ಪಂಚಾಯಿತಿ ಅಭಿವೃದ್ಧಿ ದೃಷ್ಠಿಯಿಂದ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಪಂಚಾಯತ್‌ಗೆ ದಿನಕ್ಕೆ 4 ರಿಂದ 5  ಸಾವಿರದವರೆಗೆ ಖರ್ಚು ಬರುತ್ತದೆ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ, ಆದ್ದರಿಂದ ನೀವು ನಿಮ್ಮದೇ ಹಠಕ್ಕೆ ಬೀಳಬೇಡಿ. ಶುಲ್ಕ ಕಡಿಮೆ ಮಾಡಬೇಕಾದರೆ ನನ್ನ ಒಬ್ಬನ ತೀರ್ಮಾನ ಅಲ್ಲ, ಪಂಚಾಯಿತಿ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಅಂತಿಮ ಶುಲ್ಕ ವಿಧಿಸುವ ನಿರ್ಧಾರಕ್ಕೆ ಬರುತ್ತೇನೆ ಎಂದರು.

 ಈ ಬಗ್ಗೆ ಚರ್ಚೆಗಳು ಮತ್ತೆ ಮುಂದುವರಿದಾಗ ಕೊನೆಗೆ ಇವರ ಬೇಡಿಕೆಗೆ ಮಣಿದ ಪಂಚಾಯಿತಿ ಅಧ್ಯಕ್ಷ ರಹಿಮಾನ್ ವಾರ್ಷಿಕವಾಗಿ ರಿಕ್ಷಾವೊಂದಕ್ಕೆ 380 ರೂಪಾಯಿ ಶುಲ್ಕ ವಿಧಿಸುವುದಾಗಿ ತಿಳಿಸಿದರು ಹಾಗೂ ಈ ಹಣವನ್ನು ಪಂಚಾಯತ್‌ಗೆ ನೇರವಾಗಿ ಪಾವತಿಸುವುದು ಸೇರಿದಂತೆ ರಿಕ್ಷಾ ಚಾಲಕರ ಇನ್ನಿತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

 ಸಭೆಯಲ್ಲಿ ಸ್ನೇಹ ಸಂಗಮದ ಗೌರವಾಧ್ಯಕ್ಷ ಡಾ. ರಾಜಾರಾಮ್, ಫ್ರೆಂಡ್ಸ್ ಸಂಘಟನೆಯ ಗೌರವಾಧ್ಯಕ್ಷ ಜಯಂತ ಪೊರೋಳಿ, ಕಾನೂನು ಸಲಹೆಗಾರರಾದ ನಝೀರ್ ಬೆದ್ರೋಡಿ, ಅಶ್ರಫ್ ಅಗ್ನಾಡಿ, ರವಿಕಿರಣ್ ಕೊಲ, ೩೪ನೇ ನೆಕ್ಕಿಲಾಡಿ ನಾಗರಿಕ ಸೇವಾ ಸಮಿತಿಯ ಅಬ್ದುಲ್ ರಹಿಮಾನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ  ಸೋಮನಾಥ, ತಾಲೂಕು ಪಂಚಾಯಿತಿ ಸದಸ್ಯ ಉಮೇಶ್ ಶೆಣೈ, ಬಿಎಂಎಸ್ ಪುತ್ತೂರು ಘಟಕದ ರಂಜನ್, ಉಪ್ಪಿನಂಗಡಿಯ ಎಲ್ಲಾ ಅಟೋ ರಿಕ್ಷಾ  ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ವಾರ್ಷಿಕ ರೂ.720 ರ ಬದಲು ರೂ. 380  ವಸೂಲಿ

ರಿಕ್ಷಾ ಚಾಲಕರೇ ಗ್ರಾ.ಪಂ.ಗೆ ನೇರವಾಗಿ ಪಾವತಿಸುವುದು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.