ಕುಂಬ್ರ ಪೇಟೆಗೆ ಕುಡಿಯುವ ನೀರಿನ ವ್ಯವಸ್ಥೆ ಶೀಘ್ರ ಆಗಬೇಕು

Puttur_Advt_NewsUnder_1
Puttur_Advt_NewsUnder_1

 ಒಳಮೊಗ್ರು ವಿಶೇಷ ಗ್ರಾಮ ಸಭೆ

ಪುತ್ತೂರು: ದಿನದಿಂದ ದಿನಕ್ಕೆ ಬೆಳೆಯುತ್ತಿರುವ, ಕುಂಬ್ರ ಪೇಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಹಿಂದೆ ಪೇಟೆಯ ಮಧ್ಯೆ ಕುಡಿಯುವ ನೀರಿನ ಟಾಂಕಿ ಇತ್ತು. ಆದರೆ ಇದೀಗ ಟಾಂಕಿ ಕೂಡ ಇಲ್ಲ ಆದ್ದರಿಂದ ಶೀಘ್ರವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಒಳಮೊಗ್ರು ಗ್ರಾಮ ಪಂಚಾಯತ್‌ನ ವಿಶೇಷ ಗ್ರಾಮ ಸಭೆಯಲ್ಲಿ ತಮ್ಮ ಬೇಡಿಕೆ ಮುಂದಿಟ್ಟರು.

ಸಭೆಯು ಗ್ರಾ.ಪಂ ಅಧ್ಯಕ್ಷ ಯತಿರಾಜ ರೈ ನೀರ್ಪಾಡಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಕಛೇರಿಯಲ್ಲಿ ನಡೆಯಿತು. ರಕ್ಷಿತ್ ರೈ ಮುಗೇರುರವರು ವಿಷಯ ಪ್ರಸ್ತಾಪಿಸಿ, ಕುಂಬ್ರ ಪೇಟೆಯಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಜಾಸ್ತಿಯಾಗುತ್ತಿದೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಹಿಂದೆ ಇದ್ದ ಟಾಂಕಿಯನ್ನು ಕೂಡ ತೆಗೆಯಲಾಗಿದೆ ಆದ್ದರಿಂದ ಈ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವಂತೆ ಕೇಳಿಕೊಂಡರು. ಈ ಬಗ್ಗೆ ನಿರ್ಣಯಿಸಲಾಯಿತು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾರವರು ಮಾತನಾಡಿ ಮುಂದಿನ 5 ವರ್ಷಗಳ ಅವಧಿಯಲ್ಲಿ ಗ್ರಾಮದಲ್ಲಿ ಆಗಬೇಕಾದ ಸಮಗ್ರ ಅಭಿವೃದ್ಧಿ ಯೋಜನೆಗಳ ಬಗ್ಗೆ ಬೇಡಿಕೆಯ ಪಟ್ಟಿಯನ್ನು ತಯಾರಿಸಿದರು. ಗ್ರಾಮಸ್ಥರಿಂದ ತಮ್ಮ ವಾರ್ಡ್‌ಗಳ ಅಭಿವೃದ್ಧಿಗಳ ಬೇಡಿಕೆಯನ್ನು ಸ್ವೀಕರಿಸಲಾಯಿತು.

ಗ್ರಾ.ಪಂಗೆ ಸುಸಜ್ಜಿತ ಕಟ್ಟಡ ಬೇಕು: ಒಳಮೊಗ್ರು ಗ್ರಾಮ ಪಂಚಾಯತ್‌ನ ಈಗಿರುವ ಕಟ್ಟಡವು ತೀರಾ ನಾದುರಸ್ತಿಯಲ್ಲಿದ್ದು ಗ್ರಾ.ಪಂಗೆ ಸುಸಜ್ಜಿತವಾದ ಕಟ್ಟಡದ ಅವಶ್ಯಕತೆ ಇದೆ. ಆದ್ದರಿಂದ ಈ ಕೂಡಲೇ ನೂತನ ಕಟ್ಟಡಕ್ಕೆ ಅನುದಾನ ಇಡುವಂತೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ರಕ್ಷಿತ್ ರೈ ಮುಗೇರು ಹೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಯತಿರಾಜ್ ರೈಯವರು ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಬರೆದುಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಅನುದಾನ ಬರಬಹುದು ಎಂದು ಹೇಳಿದರು.

ವಿಶೇಷ ಗ್ರಾಮ ಸಭೆಯ ಪ್ರಚಾರ ಕಮ್ಮಿಯಾಗಿದೆ

ವಿಶೇಷ ಗ್ರಾಮ ಸಭೆಯ ಬಗ್ಗೆ ಪ್ರಚಾರದ ಕೊರತೆ ಇದೆ. ಸಭೆ ಇರುವುದು ಬಹುತೇಕ ಜನರಿಗೆ ಗೊತ್ತಿಲ್ಲ. ಮೈಕ್‌ನಲ್ಲಿ ಪ್ರಚಾರ ಮಾಡಿದರೆ ಒಳ್ಳೆಯದು. ಪ್ರಚಾರ ಇಲ್ಲದಿದ್ದರೆ ಜನ ಬರುವುದಿಲ್ಲ ಎಂದು ರಾಜೇಶ್ ಹೇಳಿದರು. ಇದು ವಿಶೇಷ ಗ್ರಾಮ ಸಭೆಯಾಗಿದೆ. ಈಗಾಗಲೇ ವಾರ್ಡ್ ಸಭೆಗಳನ್ನು ನಡೆಸಲಾಗಿದ್ದು, ಜನರ ಬೇಡಿಕೆಗಳನ್ನು ಅಲ್ಲಿಯೇ ಪಟ್ಟಿ ಮಾಡಲಾಗಿದೆ. ಎಲ್ಲಾ ವಾರ್ಡ್‌ನಿಂದಲೂ ಜನರ ಅಭಿವೃದ್ಧಿ ಪರ ಬೇಡಿಕೆ ಬಂದಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಅಧ್ಯಕ್ಷರು ಸ್ಪಷ್ಟನೆ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಸುನಂದಾ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಶಶಿಕಿರಣ್ ರೈ, ಮಹೇಶ್, ಶಶಿಕುಮಾರ್, ವಸಂತಿ ಆರ್.ಶೆಟ್ಟಿ, ಉಷಾನಾರಾಯಣ್, ಚಂದ್ರಕಲಾ, ವಿಶ್ವನಾಥ, ತ್ರಿವೇಣಿ ಪಲ್ಲತ್ತಾರು, ಸುಂದರಿ ಡಿ, ಭಾಗೀರಥಿ ಕೈಕಾರ, ಸುಂದರಿ ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ ಸ್ವಾಗತಿಸಿ,ವಂದಿಸಿದರು. ಸಿಬ್ಬಂದಿ ಶ್ರೀಮತಿ ಗುಲಾಬಿ, ಶ್ರೀಮತಿ ಜಾನಕಿ ಸಹಕರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.