‘ಬಂದ್-ಗಲಭೆ ವಿರೋಧಿ’ ಸುದ್ದಿ ಆಂದೋಲನಕ್ಕೆ ಜನರ ಅಭೂತಪೂರ್ವ ಬೆಂಬಲ, ಬಂದ್, ಗಲಭೆಗಳಲ್ಲಿ ತೊಂದರೆಗೊಳಗಾದವರಿಗೆ, ರಕ್ಷಣೆಗೆ ನಾಯಕರ ನಿರ್ಧಾರ, ಆಂದೋಲನ ವಿಫಲಗೊಳಿಸಲು ಕೇಡಿಗಳಿಂದ ಪ್ರಯತ್ನ-ಅವರ ಬಗ್ಗೆ ಮುನ್ನೆಚ್ಚರಿಕೆ

Puttur_Advt_NewsUnder_1
Puttur_Advt_NewsUnder_1
ಡಾ.ಯು.ಪಿ.ಶಿವಾನಂದ ups@suddimahithi.com
ಡಾ.ಯು.ಪಿ.ಶಿವಾನಂದ
[email protected]

ಬಲಾತ್ಕಾರದ ಬಂದ್, ಕೋಮುಗಲಭೆಗಳಿಗೆ ಬೆಂಬಲ ನೀಡುವವರು ಜನ ವಿರೋಧಿಗಳು ಮಾತ್ರವಲ್ಲ, ದೇಶದ್ರೋಹಿಗಳು. ಬಂದ್‌ನಿಂದ ನಷ್ಟಕ್ಕೊಳಗಾದವರಿಗೆ ಕರೆಕೊಟ್ಟವರೇ ಪರಿಹಾರ ಕೊಡಬೇಕು ಎಂದು ಸುಪ್ರಿಂಕೋರ್ಟ್ ನೀಡಿರುವ ಆದೇಶ ಜನರ ಮನಸ್ಸನ್ನು ಮುಟ್ಟಿದೆ. ಇಷ್ಟರವರೆಗೆ ಹೆದರಿ ಬಂದ್ ಮಾಡಿಕೊಂಡಿದ್ದವರು ಬಲಾತ್ಕಾರದ ಬಂದ್ ಬೇಡ, ಗಲಭೆ ಬೇಡ ಎಂದು ಧೈರ್ಯದಿಂದ ಹೇಳಿ ಮುಂದೆ ಬರುತ್ತಿದ್ದಾರೆ. ಅಲ್ಲಲ್ಲಿ ಸುದ್ದಿ ಆಂದೋಲನದ ಫಲಕ ಅಳವಡಿಸುತ್ತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಅಂತಹ ಸಂದರ್ಭದಲ್ಲಿ ತೊಂದರೆಗೊಳಗಾಗುವವರಿಗೆ ರಕ್ಷಣೆ ನೀಡಲು ಜನನಾಯಕರು ಮುಂದೆ ಬರುತ್ತಿದ್ದಾರೆ. ‘ಬಂದ್, ಗಲಭೆ ಮಾಡಿಸಿಯೇ ಸಿದ್ದ’ ಎಂದು ಹೇಳುವ ಸಮಾಜ ಘಾತುಕ ಶಕ್ತಿಗಳನ್ನು ಶಿಕ್ಷೆಗೊಳಪಡಿಸಲು ಮತ್ತು ಸಮಾಜದಿಂದಲೇ ಹೊರಗೆ ಹಾಕಲು ಜನರು ಸನ್ನದ್ಧರಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪುತ್ತೂರನ್ನು ಬಂದ್ ಮುಕ್ತ, ಗಲಭೆ ಮುಕ್ತ ತಾಲೂಕನ್ನಾಗಿ ಘೋಷಣೆ ಮಾಡಲು ತಾಲೂಕಿನ ಸಮಿತಿ ರಚನೆಯಾಗಲಿದೆ. ಅದರಲ್ಲಿ ನಗರಕ್ಕೆ, ಗ್ರಾ.ಪಂ, ತಾಲೂಕಿಗೆ, ಶೈಕ್ಷಣಿಕ, ಸಂಘ ಸಂಸ್ಥೆಗಳಿಗೆ ಹಾಗೂ ಇತರರು ಸೇರಿದಂತೆ ಒಟ್ಟು 50 ಜನರ ಸಮಿತಿ ರಚಿಸಲಾಗುವುದು. ಸುದ್ದಿ ಆಂದೋಲನಕ್ಕೆ ಬೆಂಬಲ ನೀಡಿದವರೆಲ್ಲರೂ ಮತ್ತು ರಕ್ಷಣೆ ಕೇಳಿದವರು ವೇದಿಕೆಯ ಸದಸ್ಯರಾಗಿರುತ್ತಾರೆ. ಆಯಾ ಊರಿನಲ್ಲಿ ರಕ್ಷಣೆ ನೀಡಲು ಬರುವ ನಾಯಕರೇ  ಅಲ್ಲಿಯ ವೇದಿಕೆಯ ನಾಯಕರಾಗಿರುತ್ತಾರೆ. ಅಲ್ಲಲ್ಲಿ ವಾರ್ಡ್‌ಗಳಲ್ಲಿ, ಗ್ರಾಮಗ್ರಾಮಗಳಲ್ಲಿ ಜನರು ಸಂಘಟಿತರಾಗಿ ಜನರ ರಕ್ಷಣೆಗೆ ಬದ್ಧರಾಗಿ ನಿಂತರೆ ಮತ್ತು ಅದಕ್ಕೆ ಪೊಲೀಸರ, ಆಡಳಿತದ ರಕ್ಷಣೆ ದೊರೆತರೆ, ಆಂತರಿಕ ಭಯೋತ್ಪಾದನೆ ನಿಲ್ಲುವುದು ಮಾತ್ರವಲ್ಲ ಹೊರಗಿಂದ ಬಂದು ಯಾರಿಗೂ ಭಯೋತ್ಪಾದನೆ ಮಾಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿಯೇ ಈ ಆಂದೋಲನದ ಪ್ರಾರಂಭದಲ್ಲಿ ನಮ್ಮೊಳಗಿನ ಭಯೋತ್ಪಾದನೆಯನ್ನು ನಾವು ನಿವಾರಿಸಿಕೊಳ್ಳಬೇಕು. ಆಗ ನಮಗೆ ಯಾರ ಹೆದರಿಕೆಯೂ ಇರುವುದಿಲ್ಲ. ಇಲ್ಲದಿದ್ದರೆ ದಿನನಿತ್ಯ ಎಲ್ಲಿ ಗಲಭೆಗಳಾಗುತ್ತಿದೆಯೋ, ಯಾವಾಗ ಬಂದ್ ಆಗುವುದೋ ಎಂಬ ಹೆದರಿಕೆಯಲ್ಲಿ ಜನ ಬದುಕಬೇಕಾದೀತು ಎಂಬುದನ್ನು ಈ ಹಿಂದೆ ಬರೆದಿದ್ದೇನೆ. ನಮ್ಮ-ಮಕ್ಕಳ ಉತ್ತಮ ಭವಿಷ್ಯಕ್ಕಾಗಿಯಾದರೂ ಈ ಆಂದೋಲನದ ಮೂಲ ತತ್ವವಾದ ‘ನಮ್ಮ ನಮ್ಮ ರಕ್ಷಣೆ ನಮ್ಮಿಂದಲೇ ಮತ್ತು ಊರಿಂದಲೇ ಪ್ರಾರಂಭವಾಗಬೇಕು’ ಎಂಬುದನ್ನು ಆಚರಣೆಗೆ ತರೋಣ ಅಲ್ಲವೇ?

ಬಂದ್ ಮತ್ತು ಗಲಭೆ-ಅವರ ಆದಾಯಕ್ಕಾಗಿ ಒಳ್ಳೆಯ ಕಸುಬು

ಈ ಆಂದೋಲನವನ್ನು ವಿಫಲಗೊಳಿಸುವ ಮೂಲ ಉದ್ಧೇಶ ಇಟ್ಟುಕೊಂಡು ಕೆಲವರು ಗಂಭೀರ ಪ್ರಯತ್ನ ನಡೆಸುತ್ತಿದ್ದಾರೆ. ಬಲಾತ್ಕಾರದ ಬಂದ್ ಬೇಕು, ಕೋಮು ಗಲಭೆಗಳು ಬೇಕು ಎಂದು ವಾದಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕವಾಗಿ ವೇದಿಕೆಯ ಸದಸ್ಯರನ್ನು ನಿಂದಿಸುತ್ತಿದ್ದಾರೆ. ಸುದ್ದಿ ಪತ್ರಿಕೆಯ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಐಸಿಎಸ್‌ನವರು ತಮ್ಮ ಜಾಲಕ್ಕೆ ಅಮಾಯಕರನ್ನು ಏನೇನೋ ಹೇಳಿ ಸೆಳೆದುಕೊಂಡಂತೆ ಅಮಾಯಕರನ್ನು ಇಲ್ಲಿ ಬಲೆಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಆಂದೋಲನವನ್ನು ಕೈಗೆತ್ತಿಕೊಂಡಿರುವ ಸುದ್ದಿ ಪತ್ರಿಕೆಗೆ-ಜಾಹಿರಾತು ಕೊಡಬೇಡಿ, ಓದಬೇಡಿ.  ಸುದ್ದಿ ಪತ್ರಿಕೆಯವರು ಮತ್ತು ಆಂದೋಲನದವರು ಧರ್ಮದ್ರೋಹಿಗಳು ಮತ್ತು ದೇಶದ್ರೋಹಿಗಳು, ಸುದ್ದಿಗೆ ಶ್ರದ್ಧಾಂಜಲಿ ಎಂದೆಲ್ಲಾ ಹೇಳುತ್ತಾ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಕೊಟ್ಟವರನ್ನು ಮತ್ತು ಪುತ್ತೂರು ನಗರಸಭೆ ಸದಸ್ಯರನ್ನು ಅವರ ಕೆಲಸವನ್ನು ನಿಂದಿಸಿ ಅವಹೇಳನ ಮಾಡಿದ್ದಾರೆ.  ಅದರಲ್ಲಿ ಇತರ ಪತ್ರಿಕೆಗಳಲ್ಲಿ ಕೆಲಸ ಮಾಡುವ ಕೆಲವರು ‘ಸುದ್ದಿ ನಿಂತರೆ ತಮಗೆ ಜಾಹೀರಾತಿನ ಲಾಭವಿದೆ’ ಎಂದು ಯೋಚಿಸಿ ಅವರೊಂದಿಗೆ ಸೇರಿಕೊಂಡಿದ್ದಾರೆ. ಅದು ಅತ್ಯಂತ ಬೇಸರದ ಸಂಗತಿ. ಈ ಆಂದೋಲನವನ್ನು ವಿಫಲಗೊಳಿಸುವವರ ಉದ್ದೇಶ ಏನೆಂದು ವಿಚಾರಿಸಿದಾಗ ‘ಇಷ್ಟರವರೆಗೆ ಬಂದ್ ಗಲಭೆ ಮಾಡಿ ಹೆದರಿಸಿ, ಹಣ ವಸೂಲಿ ಮಾಡುತ್ತಿದ್ದ ಅವರ ಆದಾಯಕ್ಕೆ ಹೊಡೆತ ಬೀಳುತ್ತಿದೆ ಮಾತ್ರವಲ್ಲ ಮೊದಲು ಹೆದರಿ ಅವರಿಗೆ ನಮಸ್ಕರಿಸುತ್ತಿದ್ದವರು ಈಗ ಅಂತಹವರನ್ನು ಹುಚ್ಚು ನಾಯಿಗಳಂತೆ ಪರಿಗಣಿಸಿ ದೂರವಿರಿಸುತ್ತಿರುವುದೇ ಕಾರಣವೆಂದು ತಿಳಿದು ಬಂದಿದೆ’. ಅವರನ್ನು ಸಹ ಚರ್ಚೆಗೆ ಕರೆದು ಮಾತನಾಡಿ ಅವರ ಮನಃಪರಿವರ್ತನೆ ಮಾಡುವಂತೆ ನಮ್ಮ ವೇದಿಕೆಯಿಂದ ಪ್ರಯತ್ನಿಸುತ್ತಿದ್ದಾರೆ.  ಅಂತಹವರು ತಮ್ಮ ಸಂಪರ್ಕದಲ್ಲಿದ್ದರೆ ತಾವು ಅವರನ್ನು ಸರಿ ಪಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.

“ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೇದಿಕೆಯ ಆಂದೋಲನ ಕುರಿತು ಚರ್ಚಿಸುವವರ ಗಮನಕ್ಕೆ-ಕುಳಿತು ನೇರ ಚರ್ಚೆ ಮಾಡಿ”

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುದ್ದಿ ಆಂದೋಲನದ ಪರವಾಗಿ, ಕೆಲವರು ವಿರೋಧವಾಗಿ ಮಾತನಾಡುವುದು ಕಂಡುಬಂದಿದೆ. ವಿಷಯಾಧಾರಿತವಾಗಿ ಚರ್ಚೆ ಮಾಡಿದರೆ ಅಲ್ಲಿ ವೈಯಕ್ತಿಕ ನಿಂದನೆ ಇರುವುದಿಲ್ಲ. ವಿಷಯ ತಪ್ಪೇ, ಸರಿಯೇ? ಎಂಬುದು ಮಾತ್ರ ಮುಖ್ಯವಾಗುತ್ತದೆ. ತಮಗೆ ವಿಷಯದ ಕುರಿತು ಚರ್ಚೆ ಮಾಡಬೇಕೆಂದಿದ್ದರೆ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಚರ್ಚೆಗೆ ದಿನಾಂಕಗಳನ್ನು ನಿಗದಿಪಡಿಸುತ್ತೇವೆ. ಸುದ್ದಿ ವೇದಿಕೆಯವರು ನಿಮ್ಮ ಗುಂಪಿನವರೊಂದಿಗೆ ನೇರವಾಗಿ ಚರ್ಚೆ ನಡೆಸುತ್ತಾರೆ. ಅದಕ್ಕೆ ಬೇಕಿದ್ದರೆ ನಿಮ್ಮ ನಾಯಕರನ್ನು ಕರೆದು ತನ್ನಿ. ನೀವು ಹೇಳಿದ ವಿಷಯಗಳು ಸರಿಯಿದ್ದರೆ ನಿಮ್ಮ ತಾಣದಲ್ಲಿ ಅದನ್ನು ಹಾಕಿಕೊಳ್ಳಿ. ಅದನ್ನು ಒಪ್ಪಿಕೊಂಡು ಪತ್ರಿಕೆಯಲ್ಲಿ ಸಹ ಪ್ರಚಾರ ಪಡಿಸಲು ನಾವು ತಯಾರಿದ್ದೇವೆ. ನಿಮ್ಮ ವಾದ ತಪ್ಪಾಗಿದ್ದರೆ, ನೀವು ಹೇಳಿದ್ದು ಸರಿಯಿಲ್ಲದಿದ್ದರೆ ನಿಮ್ಮ ತಾಣದಲ್ಲಿ ಹಾಕಿಕೊಳ್ಳಲು  ಒಪ್ಪಿಕೊಳ್ಳಿ. ಪತ್ರಿಕೆಯಲ್ಲಿಯೂ ಅದನ್ನು ಪ್ರಕಟಿಸುತ್ತೇವೆ. ಆ ಚರ್ಚೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಸಾಮಾಜಿಕ ಗಣ್ಯರನ್ನು ಬೇಕಿದ್ದರೆ ಆಹ್ವಾನಿಸುತ್ತೇವೆ. ಇಲ್ಲದಿದ್ದರೆ ವಿಷಯವನ್ನು ತಿಳಿಯದೇ ಅಥವಾ ಏನನ್ನಾದರೂ ಗ್ರಹಿಸಿಕೊಂಡು ಅಭಿಪ್ರಾಯಗಳನ್ನು ಹಂಚಿಕೊಂಡರೆ ಯಾವುದೋ ದುರುದ್ದೇಶ ಇಟ್ಟುಕೊಂಡು ಮಾತನಾಡುವವರ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ. ನಿಮ್ಮ ಜಾಲತಾಣದ ನಾಯಕರಿಗೆ ಈ ಪಂಥಾಹ್ವಾನವನ್ನು ಸ್ವೀಕರಿಸಲು ಹೇಳಿ. ಇಲ್ಲದಿದ್ದರೆ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಲು ತಿಳಿಸಿ.  ಹೇಡಿಗಳಂತೆ ಹಿಂದಿನಿಂದ ಬಾಯಿಗೆ ಬಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕುಳಿತು ಮಾತನಾಡಿ ಊರಿನ ಸ್ವಾಸ್ಥ್ಯವನ್ನು ಹಾಳು ಮಾಡುವುದು ಬೇಡ ಎಂಬ ಎಚ್ಚರಿಕೆಯನ್ನು-ಬಲಾತ್ಕಾರದ ಬಂದ್‌ನ್ನು ಮತ್ತು ಕೋಮುಗಲಭೆಗಳನ್ನು ಸಮರ್ಥಿಸುವ ಆ ದೇಶ ದ್ರೋಹಿಗಳಿಗೆ ನೀಡಿರಿ. ಇಲ್ಲದಿದ್ದರೆ ದ್ವೇಷ ಹರಡುವ ಜಾಲತಾಣದವರ ಮೇಲೆ ಯಾವ ರೀತಿಯ ಕಾನೂನು ಕ್ರಮಕೈಗೊಳ್ಳಬಹುದೋ, ಅದನ್ನೆಲ್ಲಾ ಸುದ್ದಿ ವೇದಿಕೆಯಿಂದ ಮಾಡಲಾಗುವುದು.

ಡಾ. ಯು.ಪಿ. ಶಿವಾನಂದ ಸುದ್ದಿ ವೇದಿಕೆ 

 ಪುತ್ತೂರು, ಸುಳ್ಯ, ಬೆಳ್ತಂಗಡಿ

ಹಿಂದಿನ ಸಂಪಾದಕೀಯಗಳು

18/1/2016

* ‘ಸುದ್ದಿ ವೇದಿಕೆಯ ಆಂದೋಲನ’ಕ್ಕೆ ಜನತೆಯ ಅಪೂರ್ವ ಬೆಂಬಲ, ‘ಬಂದ್ ಮುಕ್ತ, ಗಲಭೆ ಮುಕ್ತ ಪುತ್ತೂರು’ ಘೋಷಣೆಗೆ ದಿನಗಣನೆ

11/1/2016

* ಬಲಾತ್ಕಾರದ ಬಂದ್, ಗಲಭೆಗಳನ್ನು ಬೆಂಬಲಿಸುವವರನ್ನು ಶಿಕ್ಷೆಗೆ ಗುರಿಪಡಿಸಿ, ಬಹಿಷ್ಕರಿಸಿ, ಅತ್ಯಾಚಾರಕ್ಕೆ ಸಮನಾದ ಆ ಬಂದ್‌ಗಳನ್ನು ವೈಭವೀಕರಿಸದೆ, ಸಮರ್ಥಿಸದೇ- ತೊಂದರೆಗೊಳಗಾದ ಜನಸಾಮಾನ್ಯರ ರಕ್ಷಣೆಗೆ ನಿಲ್ಲಲು ಮಾಧ್ಯಮಗಳಿಗೆ ಕರೆ

4/1/2016

* ಗಲಭೆ ಕೇಸಿಗೆ ಒಳಗಾಗುವ ಯುವಕರಿಗೆ ಭವಿಷ್ಯತ್ತಿಲ್ಲ-ಶಾಂತಿ ಸಾಮರಸ್ಯದ ಬದುಕು ರೂಪಿಸುವಂತಾಗಲು ಮನೆಯವರ, ಊರಿನವರ, ಪರವೂರಿನ ಹಿತೈಷಿಗಳ, ಮಾಧ್ಯಮಗಳ ಬೆಂಬಲ ಅಗತ್ಯ

28/12/2015

* ಭಯದ ವಾತಾವರಣ ಮತ್ತು ಬಂದ್‌ಗೆ ಕರೆಕೊಡುವವರ ಗೂಂಡಾಗಿರಿಗೆ ಹೆದರಿ ಜನರು ಬಂದ್ ಮಾಡುತ್ತಾರೆ : ಜನನಾಯಕರು, ಆಡಳಿತ, ಪೊಲೀಸರು- ಜನತೆಗೆ ರಕ್ಷಣೆ ಮತ್ತು ಪರಿಹಾರ ಕೊಡಬೇಕಾಗಿದೆ- ಅಲ್ಲಲ್ಲಿ ಫಲಕ ಅಳವಡಿಸಬೇಕಾಗಿದೆ

* ಬಲಾತ್ಕಾರದ ಬಂದ್ ಬೆಂಬಲಿಗರೊಂದಿಗೆ ಬಹಿರಂಗ ಚರ್ಚೆಗೆ ಆಹ್ವಾನ

21/12/2015

* ‘ಬಲಾತ್ಕಾರದ ಬಂದ್ ಕಾನೂನು ಬಾಹಿರ- ಅತ್ಯಾಚಾರಕ್ಕೆ ಸಮ’-ತಜ್ಞರೆಲ್ಲರ ಅಭಿಪ್ರಾಯ

7/12/2015

* ಬಂದ್‌ಗೆ ಕರೆ ಕೊಟ್ಟವರೇ-ಜನರಿಗೆ ಆಗುವ ಕಷ್ಟ ನಷ್ಟಗಳಿಗೆ ಜವಾಬ್ದಾರರು, ಅವರಿಗೆ ಪರಿಹಾರ ಕೊಡಲೇಬೇಕು-ಸುಪ್ರೀಂ ಕೋರ್ಟ್ ತೀರ್ಪು

30/11/2015

* ಬಂದ್, ಗಲಭೆ, ಭಯೋತ್ಪಾದನೆಯಿಂದ ತೊಂದರೆಗೊಳಗಾದ ಜನರೇ-ತಮ್ಮ ತಮ್ಮ ರಕ್ಷಣೆಗೆ ಎದ್ದೇಳಿ, ಭಯವನ್ನು ಬಿಡಿ, ಸ್ವಾಭಿಮಾನಕ್ಕಾಗಿ ಒಗ್ಗಟ್ಟಾಗಿ ಹೋರಾಟ ನಡೆಸಿ, ನಾಯಕರ ಕಣ್ಣು ತೆರೆಸಿ, ಪುತ್ತೂರು ಬಂದ್ ಮುಕ್ತ, ಗಲಭೆ ಮುಕ್ತ ತಾಲೂಕಾಗಲಿ

28/11/2015

* ‘ಸುದ್ದಿ ಪತ್ರಿಕೆ’ ಜನತೆಗೆ ತೊಂದರೆ ಕೊಡುವವರ ವಿರುದ್ಧ ಬಂದ್‌ನಿಂದ ನೊಂದವರ, ಕಷ್ಟದಲ್ಲಿರುವವರ ಧ್ವನಿಯಾಗಿದೆ

27/11/2015

* ಗಾಂಧಿ ಜನಿಸಿದ ನಾಡಿನಲ್ಲಿ ‘ಸಬ್ ಕೇ ಸಾಥ್’ ಘೋಷಣೆ ಮೊಳಗಲಿ, ನಿಮ್ಮ ದ್ವೇಷಕ್ಕೆ ನಮ್ಮನ್ನು ಬಲಿ ಮಾಡಬೇಡಿ, ನಮ್ಮನ್ನು ಬದುಕಲು ಬಿಡಿ, ಹರೀಶ್, ಸಮೀವುಲ್ಲಾ ಸ್ನೇಹ ಎಲ್ಲರಿಗೂ ಮಾದರಿಯಾಗಲಿ

25/11/2015

* ಸರ್ಕಾರಕ್ಕೆ ಬಿಸಿಮುಟ್ಟಿಸಲು ಇನ್ನೊಬ್ಬರ ಬಲಿ ತೆಗೆದುಕೊಳ್ಳುವ ಬದಲು ಬಂದ್‌ಗೆ ಕರೆಕೊಟ್ಟವರು ತಾವೇ ಆತ್ಮಾಹುತಿ ಮಾಡಿಕೊಂಡರೆ ಒಳಿತಲ್ಲವೇ?

23/11/2015

* ಜಾಗತಿಕ ಭಯೋತ್ಪಾದನೆಗಿಂತ ಊರಿನ ಭಯೋತ್ಪಾದನೆ ನಮಗೆ ಅಪಾಯಕಾರಿ, ಕೋಮು ಸೂಕ್ಷ್ಮ ಪ್ರದೇಶ ಪಟ್ಟಿಯಿಂದ ಹೊರ ಬಾರದಿದ್ದರೆ-ಪುತ್ತೂರು ಉದ್ಧಾರವಾದೀತೇ? ಬಂದ್‌ನಿಂದ ನಷ್ಟಕ್ಕೊಳಗಾದವರಿಗೆ ಪರಿಹಾರ ಸಿಗಲೇಬೇಕಲ್ಲವೇ?

16/11/2015

* ಬಲಾತ್ಕಾರದ ಬಂದ್‌ಗಳನ್ನು, ಕೋಮು ಗಲಭೆಗಳನ್ನು ನಿಲ್ಲಿಸಲು ಗ್ರಾಮ ಗ್ರಾಮಗಳಲ್ಲಿ ಜನಾಂದೋಲನಕ್ಕೆ ಕರೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.