ಬಲಾತ್ಕಾರದ ಬಂದ್, ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿರುವವರ ಮತ್ತು ವಾಟ್ಸಪ್-ಫೇಸ್‌ಬುಕ್‌ನಲ್ಲಿ ಅಸಭ್ಯ ಕಮೆಂಟ್ ಹಾಕಿ ಆಂದೋಲನದ ವಿರುದ್ಧ ಕಾನೂನು ಬಾಹಿರವಾಗಿ ಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಎಸ್.ಪಿ.ಗೆ ಸೂಚನೆ-ಡಿ.ಸಿ

ಸುದ್ದಿ ವೇದಿಕೆಯ ಸಂತೋಷ್ ಕುಮಾರ್, ಜ್ಯೋತಿಪ್ರಕಾಶ್ , ಭಾಸ್ಕರ್ ರೈ ಜಿಲ್ಲಾಧಿಕಾರಿಳಲ್ಲಿ ವಿಷಯವನ್ನು ತಿಳಿಸುತ್ತಿರುವುದು
ಸುದ್ದಿ ವೇದಿಕೆಯ ಸಂತೋಷ್ ಕುಮಾರ್, ಜ್ಯೋತಿಪ್ರಕಾಶ್ , ಭಾಸ್ಕರ್ ರೈ ಜಿಲ್ಲಾಧಿಕಾರಿಳಲ್ಲಿ ವಿಷಯವನ್ನು ತಿಳಿಸುತ್ತಿರುವುದು

ಪುತ್ತೂರು: ಬಲಾತ್ಕಾರದ ಬಂದ್-ಕೋಮು ಅಥವಾ ಇನ್ನಿತರ ಯಾವುದೇ ಗಲಭೆಗೆ ಪ್ರಚೋದನೆ ನೀಡುತ್ತಿರುವವರ ಬಗ್ಗೆ ಮತ್ತು ‘ಸುದ್ದಿ ವೇದಿಕೆ’ಯ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನವನ್ನು ಕಾನೂನು ಬಾಹಿರವಾಗಿ ವಿರೋಧಿಸುತ್ತಿರುವವರ, ವಾಟ್ಸಪ್-ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವ, ಬಂದ್ ಗಲಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ  ಕಮೆಂಟ್ ಹಾಕುತ್ತಿರುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಸುದ್ದಿ ವೇದಿಕೆಗೆ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

ಬಲಾತ್ಕಾರದ ಬಂದ್ ಮತ್ತು ಕೋಮು ಅಥವಾ ಇನ್ನಿತರ ಯಾವುದೇ ಗಲಭೆಯ ವಿರುದ್ಧ ಹಲವು ವರ್ಷಗಳಿಂದಲೂ ಜನಾಂದೋಲನ ನಡೆಸುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ವೇದಿಕೆಯ ಬಗ್ಗೆ ವಾಟ್ಸಪ್-ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅಸಭ್ಯ, ಅಸಹ್ಯ, ಕಾನೂನು ಬಾಹಿರ ‘ಕಮೆಂಟ್’ಗಳನ್ನು ಹಾಕುತ್ತಿರುವುದು, ಸುದ್ದಿಯನ್ನು ಬಂದ್ ಮಾಡಬೇಕು, ಸುದ್ದಿಯ ಸಂಪಾದಕರ ತಲೆಗೆ ಕಲ್ಲು ಹೊಡೆಯಬೇಕು, ಬಂದ್ ನಡೆಯಲೇ ಬೇಕು, ಗಲಭೆ ಆಗಲೇ ಬೇಕು, ಬಲಾತ್ಕಾರವಾಗಿಯಾದರೂ ಬಂದ್ ಮಾಡಿಸಿಯೇ ಸಿದ್ಧ ಎಂಬಿತ್ಯಾದಿ ‘ಚಾಟ್’ಗಳನ್ನು ನಡೆಸುತ್ತಿರುವುದಲ್ಲದೆ, ಮಾನಹಾನಿಕರ ರೀತಿಯಲ್ಲಿ ‘ಶೇರ್’ ಮಾಡುತ್ತಿರುವವರ ಹೆಸರು, ಸ್ಟೇಟಸ್, ಭಾವಚಿತ್ರ, ವಿಳಾಸವನ್ನು ಸುದ್ದಿ ವೇದಿಕೆಯು ದಾಖಲೆ ಸಹಿತ ಜಿಲ್ಲಾಧಿಕಾರಿಯವರಿಗೆ ನೀಡಿದೆ. ಅಲ್ಲದೆ, ಈ ಹಿಂದೆ ಬೆಳ್ತಂಗಡಿಯ ಪತ್ರಿಕೆಯ ಜಾಹೀರಾತಿನಲ್ಲಿ ಕಣ್ತಪ್ಪಿನಿಂದಾಗಿ ಪ್ರಕಟಗೊಂಡ ಜಾಹೀರಾತಿಗೆ ಸಂಬಂಧಿಸಿ ತಕ್ಷಣವೇ ಪತ್ರಿಕಾ ಬಳಗ ಅಂದು ಕ್ಷಮೆ ಯಾಚಿಸಿದ್ದರೂ, ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದರೂ ಕೆಲವು ವ್ಯಕ್ತಿಗಳು ವಾಟ್ಸಪ್, ಫೇಸ್‌ಬುಕ್‌ನಲ್ಲಿ ಇದೇ ಜಾಹೀರಾತನ್ನು ಪದೇ ಪದೇ ಪ್ರಕಟಿಸಿ ಕಾನೂನು ಉಲ್ಲಂಘಿಸುತ್ತಿರುವುದಲ್ಲದೆ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಬಗ್ಗೆಯೂ ಸಚಿತ್ರವಾಗಿ ತಿಳಿದುಕೊಂಡ ಜಿಲ್ಲಾಧಿಕಾರಿಯವರು, ಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ, ಅಂತವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸಾಮಾನ್ಯ ಜನರ ಧ್ವನಿಯಾಗಿ, ಜನಪರ ಹೋರಾಟವಾಗಿ ಆಂದೋಲನ ನಡೆಸುತ್ತಿರುವ “ಸುದ್ದಿ”ಗೆ ವಾಟ್ಸಪ್-ಫೇಸ್‌ಬುಕ್ ಮೂಲಕ ಸವಾಲು ಹಾಕುತ್ತಿರುವ, ಅಪಪ್ರಚಾರ ನಡೆಸುತ್ತಿರುವ, ಬೆದರಿಕೆ ಒಡ್ಡುತ್ತಿರುವ ವ್ಯಕ್ತಿಗಳನ್ನು ‘ನೋಟ್’ ಮಾಡಲಾಗುತ್ತದೆ, ಕಾನೂನು ಬಾಹಿರ ಕೃತ್ಯಗಳಾದ ಬಲಾತ್ಕಾರದ ಬಂದ್, ಕೋಮು ಗಲಭೆಗಳು ಆಗಲೇ ಬೇಕು ಎಂದು ಪ್ರಚೋದನೆ ನೀಡುತ್ತಿರುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿದ್ದು ಕಾನೂನು ಕ್ರಮ ಕೈಗೊಳ್ಳಲು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ‘ಸುದ್ದಿ ಪತ್ರಿಕೆ ವಿರೋಧಿ ಬಳಗ’ ಮುಂತಾದ ವಾಟ್ಸಪ್-ಫೇಸ್‌ಬುಕ್ ಗುಂಪು ಕಟ್ಟಿಕೊಂಡಿರುವ ‘ವೀರ’ರ ಜತೆ ಕೈ ಜೋಡಿಸಿಕೊಂಡು ಸುದ್ದಿ ವಿರುದ್ಧ ‘ಸಮರ’ ಸಾರಿರುವ ಕೆಲವು ಪತ್ರಿಕೆ ಹಾಗೂ ಮಾಧ್ಯಮದ ಪ್ರತಿನಿಧಿಗಳ ‘ನಡವಳಿಕೆ’ಯ ಕುರಿತು ಆಯಾಯ ಪತ್ರಿಕೆ ಹಾಗೂ ಮಾಧ್ಯಮದ ಪ್ರಮುಖರಿಗೆ ದಾಖಲೆ ಸಹಿತ ಮಾಹಿತಿ ನೀಡಲಾಗಿದ್ದು ಪೂರಕ ಸ್ಪಂದನ ವ್ಯಕ್ತವಾಗಿದೆ. ಸೈಬರ್ ಕಾನೂನುಗಳನ್ನು ಉಲ್ಲಂಘಿಸಿ ವಾಟ್ಸಪ್-ಫೇಸ್‌ಬುಕ್‌ಗಳನ್ನು ಬಳಕೆ ಮಾಡುತ್ತಿರುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸುದ್ದಿ ವೇದಿಕೆಯು ಈಗಾಗಲೇ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.