Breaking News

ಅಪ್ಪ-ಅಮ್ಮ ಮಕ್ಕಳಿಗೇನು ಕಲಿಸ್ಬೇಕು?

Puttur_Advt_NewsUnder_1
Puttur_Advt_NewsUnder_1

ಒಳ್ಳೆಯ ಹವ್ಯಾಸಗಳಿರಲಿ111

ಪ್ರತಿಯೊಬ್ಬ ವ್ಯಕ್ತಿ ಮನೋಲ್ಲಾಸಕ್ಕಾಗಿ ವಿವಿಧ ಹವ್ಯಾಸಗಳನ್ನು ಇಟ್ಟುಕೊಳ್ಳುತ್ತಾನೆ. ಅದು ಒಳ್ಳೆಯದು ಇರಬಹುದು ಅಥವಾ ಕೆಟ್ಟದಿರಬಹುದು. ಆರಂಭದಲ್ಲಿ ತಮಾಷೆಗಾಗಿ ಅಥವಾ ಗೆಳೆತನದ ಪ್ರಭಾವದಿಂದ ಹವ್ಯಾಸಗಳು ಶುರುವಾಗುತ್ತವೆ. ಕೆಟ್ಟ ಹವ್ಯಾಸಗಳು ಬೇಗನೆ ಅಂಟಿಕೊಳ್ಳುತ್ತವೆ. ಅವುಗಳಿಗೆ ಆಕರ್ಷಣೆ ಹೆಚ್ಚು. ನಿಧಾನವಾಗಿ ಚಟಕ್ಕೆ ತಿರುಗಿ ಅವುಗಳಿಂದ ಹೊರಬರಲಾರದ ಸ್ಥಿತಿ ತಲುಪುತ್ತಾನೆ. ಧೂಮಪಾನ, ಮದ್ಯಪಾನ, ತಂಬಾಕು ಸೇವನೆ, ಜೂಜು ಇತ್ಯಾದಿ ಕೆಟ್ಟ ಹವ್ಯಾಸಗಳು ಸಂಗದೋಷದಿಂದ, ಮಿತ್ರರ ಒತ್ತಡಕ್ಕೆ ಬಲಿಬಿದ್ದು ಅಂಟಿಕೊಳ್ಳುತ್ತವೆ. ಇವುಗಳು ಚಟಕ್ಕೆ ತಿರುಗಿದರಂತೂ ಆತ ಮೇಲೇಳುವುದು ಕಷ್ಟ.
ಬಾಲ್ಯದಲ್ಲಿ ಮಕ್ಕಳನ್ನು ತುಂಬಾ ಎಚ್ಚರದಿಂದ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಬೇಕು. ಸುಮಾರು ಪಿ.ಯು.ಸಿ. ಹಂತದವರೆಗೆ ಮಕ್ಕಳು ಯಾವ ದಿನ, ಯಾವ ಹಾದಿಯಲ್ಲಿ ಹೋದಾರೆಂದು ಊಹಿಸುವುದು ಕಷ್ಟ. ಅವರ ವರ್ತನೆಯನ್ನು ದಿನಾ ಗಮನಿಸುತ್ತಿರಬೇಕು. ತಂದೆ-ತಾಯಿ ಮಕ್ಕಳಲ್ಲಿ ನಿಕಟ ಸಂಪರ್ಕವಿರಿಸಿಕೊಂಡು ಕಲಿಯುವ ಶಾಲೆಗೆ ಹೋಗಿ ಶಿಕ್ಷಕರಲ್ಲಿ ಮಕ್ಕಳ ಬಗ್ಗೆ ವಿಚಾರಿಸುತ್ತಿರಬೇಕು. ಹಾದಿ ತಪ್ಪಿದರೆ ಶಾಲೆಗಳಲ್ಲಿ ಬೇಗನೆ ತಿಳಿಯುತ್ತದೆ.
ಸುಸಂಸ್ಕೃತ ಪೋಷಕರಲ್ಲಿ ಹಲವು ಹವ್ಯಾಸಗಳಿರುತ್ತವೆ. ಸಂಗೀತ, ಯಕ್ಷಗಾನ, ಓದುವುದು, ಸಮಾಜಸೇವೆ, ಧ್ಯಾನ, ಯೋಗಾಸನ, ಚಿತ್ರಕಲೆ ಮುಂತಾದವುಗಳು. ತಂದೆ-ತಾಯಿ ಇವುಗಳಲ್ಲಿ ಆಸಕ್ತಿ ಹೊಂದಿದ್ದರೆ ಮಕ್ಕಳಿಗೆ ತಾನಾಗಿ ಅಭ್ಯಾಸವಾಗುತ್ತದೆ. ಶ್ರೇಷ್ಠತೆ ಸಾಧಿಸಲು ಸುಲಭಸಾಧ್ಯ. ಇಂತಹ ಹವ್ಯಾಸಗಳು ಕೌಟುಂಬಿಕ ಪರಿಸರಕ್ಕೆ ತಕ್ಕಂತೆ, ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಬಹುದು. ಮಕ್ಕಳನ್ನು ಒಳ್ಳೆಯ ಹವ್ಯಾಸಗಳಲ್ಲಿ ತೊಡಗಿಸುವುದು ಒಳ್ಳೆಯದು.
ನಿತ್ಯಾನುಷ್ಠಾನ : ಹಿರಿಯರು ಮಕ್ಕಳ ಜೊತೆಗಿದ್ದರೆ ಅವರು ತುಂಬಾ ಲವಲವಿಕೆಯಿಂದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಬೆಂಬಿಡದೆ ಎಚ್ಚರಿಸುತ್ತಿರಬೇಕು. ಮುಂಜಾನೆ ಬೇಗ ಏಳುವುದು, ದೇವರ ಧ್ಯಾನ, ಯೋಗಾಸನ, ಸ್ನಾನ ಇವುಗಳಿಗೆ ಒಂದಷ್ಟು ಅಲ್ಪ ಸಮಯವನ್ನು ಮೀಸಲಿರಿಸಬೇಕು. ವೇಳಾಪಟ್ಟಿಯನ್ನು ತಯಾರಿಸಿ ಓದಿಸಬೇಕು. ನಿಗದಿತ ವೇಳೆಯಲ್ಲಿ ಶಾಲೆಗೆ ಹೊರಡಬೇಕು. ಸಂಜೆ ಸಕಾಲಕ್ಕೆ ಶಾಲೆಯಿಂದ ಬರುತ್ತಾರೋ ಎಂಬುದನ್ನು ಗಮನಿಸಬೇಕು. ಇಂದಿನ ಮಕ್ಕಳು ತುಂಬಾ ಹೆಚ್ಚು ಸಮಯ ಆಟಕ್ಕೆ ಮೀಸಲಿರಿಸುತ್ತಾರೆ. ಕಲಿಯುವ ಮಕ್ಕಳು ಇದರ ಬಗ್ಗೆ ತುಂಬಾ ಎಚ್ಚರವಹಿಸಬೇಕು. ಸಂಜೆಯ ವೇಳೆ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸ್ನಾನ ಮಾಡುವುದು ತುಂಬಾ ಅಗತ್ಯ. ಪತ್ರಿಕೆ ಓದುವುದು, ವಾರ್ತೆಗಳನ್ನು ಕೇಳುವುದಕ್ಕೆ ಒಂದಷ್ಟು ಸಮಯ ಮೀಸಲಿರಿಸಬೇಕು. ನಿತ್ಯವೂ ನಿಯಮಿತವಾಗಿ ಕೆಲಸಗಳನ್ನು ಮಾಡುತ್ತಾ ಹೋದರೆ ಸಮಯದ ಸದುಪಯೋಗವಾಗುತ್ತದೆ. ಕೆಟ್ಟ ಆಲೋಚನೆಗಳಿಗೆ ಸಮಯ ಸಿಗಲಾರದು.
ಪತ್ರಿಕೆಗಳನ್ನು ಓದುವುದು : ರಾತ್ರಿ ಮಲಗುವ ವೇಳೆ ದಿನಪತ್ರಿಕೆ, ವಾರಪತ್ರಿಕೆಗಳಲ್ಲಿರುವ ಜ್ಞಾನವರ್ಧಕ ವಿಷಯಗಳನ್ನು ಓದುವ ಹವ್ಯಾಸ ಉತ್ತಮ. ಮಕ್ಕಳಲ್ಲಿ ಇಂತಹ ಅಭ್ಯಾಸದಿಂದ ಲೋಕಾನುಭವ ಹೆಚ್ಚುತ್ತದೆ. ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಇದು ಒಳ್ಳೆಯ ಹವ್ಯಾಸ. ಕೆಲವು ವೃತ್ತಿಗಳಿಗೆ ಸಾಮಾನ್ಯಜ್ಞಾನ ತೀರಾ ಅವಶ್ಯ. ಮಕ್ಕಳಲ್ಲಿ ಸಾಮಾಜಿಕಪ್ರಜ್ಞೆ ಬರಲು ಇದು ಸಹಕಾರಿ.
ಪುಸ್ತಕ ಸಂಗ್ರಹ : ಮಕ್ಕಳ ತರಗತಿಯ ಮಟ್ಟಕ್ಕೆ ಅನುಗುಣವಾಗಿ ಪುಸ್ತಕ ಸಂಗ್ರಹಿಸಲು ಪ್ರೋತ್ಸಾಹ ಕೊಡಬೇಕು. ಸುಮಾರು ನಾಲ್ಕೈದು ತರಗತಿಗಳವರೆಗೆ ನೀತಿಕಥೆ, ಪ್ರಾಣಿ-ಪಕ್ಷಿಗಳ ಕಥೆ, ಹಾಸ್ಯದ ಕಥೆಗಳನ್ನು ಓದಲು ಅವಕಾಶ ಕೊಡಬೇಕು. ಇದರಿಂದ ಸುಲಭವಾಗಿ ಓದಲು ಕಲಿಯುತ್ತಾರೆ. ಸುಮಾರು ಹತ್ತನೇ ತರಗತಿಯವರೆಗೆ ಬೇರೆ ಬೇರೆ ವಿಷಯಗಳಿಗೆ ಸಂಬಂಧಿತ ಪುಸ್ತಕಗಳು, ಪ್ರಬಂಧ, ಜನರಲ್ ನಾಲೇಜ್, ಹತ್ತನೇ ತರಗತಿಯ ನಂತರ ಏನು? ಮುಂತಾದ ಪುಸ್ತಕಗಳನ್ನು ಓದಲಾರಂಭಿಸುವುದು ಉತ್ತಮ. ಇಂತಹ ಪುಸ್ತಕಗಳನ್ನು ಮನೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿಡಬೇಕು. ಅದಕ್ಕೆ ನಿಗದಿತ ಜಾಗ ಇರಬೇಕು. ಮಾತ್ರವಲ್ಲ, ಕಣ್ಣಮುಂದೆ ಇರಬೇಕು. ತಂದೆ-ತಾಯಿ ಕೆಲವು ಪುಸ್ತಕಗಳನ್ನು ಓದಿ ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಮಕ್ಕಳಿಗೆ ಆಗಾಗ ಹೇಳುತ್ತಿದ್ದರೆ ಅವರ ಆಸಕ್ತಿ ಹೆಚ್ಚುತ್ತದೆ. ಓದಿದ ಬಳಿಕ ಚರ್ಚಿಸುವ ಅಭ್ಯಾಸ ಉತ್ತಮ. ಜ್ಞಾನವರ್ಧಕ ಪುಸ್ತಕಗಳನ್ನು ಮಕ್ಕಳು ಸುಲಭದಲ್ಲಿ ಓದಲಾರರು. ಹಿರಿಯರು ಓದಿ ಮಕ್ಕಳಿಗೆ ತಿಳಿಸುತ್ತಿರಬೇಕು. ಮಕ್ಕಳ ವಿದ್ಯಾಭ್ಯಾಸ ಮುಗಿಯುವ ಹೊತ್ತಿಗೆ ಮನೆಯಲ್ಲೊಂದು ಉತ್ತಮ ಗ್ರಂಥ ಭಂಡಾರ ನಿರ್ಮಾಣವಾಗುತ್ತದೆ. ಮುಂದೆ ದೊಡ್ಡದಾದಂತೆ ವೃತ್ತಿಗೆ ಪೂರಕ ಪುಸ್ತಕಗಳು, ಆಧ್ಯಾತ್ಮಿಕ ಚಿಂತನೆಯ ಪುಸ್ತಕಗಳ ಸಂಗ್ರಹಕ್ಕೆ ಬಾಲ್ಯದ ಅಭ್ಯಾಸಗಳು ನಾಂದಿಯಾಗುತ್ತವೆ.
ಗುರುಹಿರಿಯರ ಒಡನಾಟ : ಮಕ್ಕಳು ತಮಗಿಂತ ಹಿರಿಯರಲ್ಲಿ ಮಾತಾಡುವ ಹವ್ಯಾಸವಿಟ್ಟುಕೊಳ್ಳುವುದು ತುಂಬಾ ಅಗತ್ಯ. ಒಂಬತ್ತನೇ ತರಗತಿಯ ಮಗು ಹತ್ತನೇ ತರಗತಿಯವರ ಜೊತೆ, ಪಿ.ಯು.ಸಿ.ಯ ಮಕ್ಕಳು ವೃತ್ತಿಪರ ವಿದ್ಯಾರ್ಥಿಗಳ ಜೊತೆ ಸಂಪರ್ಕವಿಟ್ಟುಕೊಂಡಾಗ ಕಲಿಕೆ ಸುಲಭವಾಗುತ್ತದೆ. ಭಯದ ವಾತಾವರಣ ಕಡಿಮೆಯಾಗುತ್ತದೆ. ಹಿರಿಯ ವಿದ್ಯಾರ್ಥಿಗಳ ಜೊತೆಗಿನ ಕಲಿಕಾ ಒಡನಾಟ ಒಳ್ಳೆಯದು. ಕುಟುಂಬದ ಹಿರಿಯ ವಿದ್ಯಾರ್ಥಿಗಳು, ಬೇರೆ ಬೇರೆ ವೃತ್ತಿಗಳಲ್ಲಿರು ವವರ ಜೊತೆ ಮಾತಾಡುತ್ತಿದ್ದರೆ ಅವರ ಮಾರ್ಗದರ್ಶನ ಸಿಗುತ್ತದೆ. ಗುರುಗಳ ಜೊತೆ ಮಾತಾಡುವುದರಿಂದ ವಿಶೇಷ ಮಾರ್ಗದರ್ಶನ ಲಭ್ಯವಾಗುತ್ತದೆ. ಅನುಭವಿಗಳ ಒಡನಾಟ ಯಾವತ್ತೂ ಉತ್ತಮ. “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಎಂಬ ಮಾತು ಸತ್ಯ.
ಸಂಗೀತ : ಸಂಗೀತ ಸಾತ್ವಿಕ ಬದುಕಿಗೆ ಬುನಾದಿ. ಸಂಗೀತ ಅಭ್ಯಾಸದಿಂದ ಏಕಾಗ್ರತೆ ಹೆಚ್ಚುತ್ತದೆ. ಸಂಗೀತಕ್ಕೆ ಪೂರಕವಾದ ಮೃದಂಗ, ಘಟಂ, ವಯಲಿನ್ ಮುಂತಾದ ವಾದ್ಯಗಳನ್ನು ನುಡಿಸಲು ಅಭ್ಯಾಸ ಮಾಡಬಹುದು. ಇವೆಲ್ಲವುಗಳು ಮಕ್ಕಳಿಗೆ ಒಳ್ಳೆಯ ಹವ್ಯಾಸಗಳು. ಒಮ್ಮೆ ಇದರಲ್ಲಿ ತೊಡಗಿಕೊಂಡರೆ ಅದರಲ್ಲೇ ತಲ್ಲೀನರಾಗಿ ಬಿಡುತ್ತಾರೆ. ಕೆಟ್ಟ ಹವ್ಯಾಸಗಳಿಗೆ ಬಲಿಬೀಳುವುದು ತಪ್ಪುತ್ತದೆ.
ಇತರ ಹವ್ಯಾಸಗಳು : ಚಿತ್ರಕಲೆ ಮಕ್ಕಳ ಏಕಾಗ್ರತೆಗೆ ಒಳ್ಳೆಯದು. ಬಾಲ್ಯದಿಂದಲೇ ಇದರ ಅಭಿರುಚಿ ಆರಂಭಗೊಳ್ಳಬೇಕು. ಇವುಗಳ ಅಭ್ಯಾಸಕ್ಕೆ ಇಂದು ವಿಶೇಷ ತರಬೇತಿ ಕೇಂದ್ರಗಳಿವೆ. ದಿನದಲ್ಲಿ ಸ್ವಲ್ಪ ಸಮಯ ತೊಡಗಿಸಿಕೊಳ್ಳಬಹುದು. ಯಕ್ಷಗಾನ ಅಭ್ಯಾಸ, ರಾಮಾಯಣ, ಮಹಾಭಾರತ, ಪುರಾಣಜ್ಞಾನ ನೀಡುತ್ತದೆ. ಇವುಗಳು ಮಾತುಗಾರಿಕೆ ಬೆಳೆಸಿಕೊಳ್ಳಲು ಒಳ್ಳೆಯದು. ಯಕ್ಷಗಾನ ಹವ್ಯಾಸ ಬದುಕಿನ ಶಿಕ್ಷಣವನ್ನು ಕಲಿಯಲು ಸಹಕಾರಿ. ಕರಕುಶಲ ವಸ್ತುಗಳ ತಯಾರಿಕೆ, ಮೋಡೆಲ್‌ಗಳ ತಯಾರಿಕೆ- ಹೀಗೆ ನಾನಾ ವಿಧದ ಒಳ್ಳೆಯ ಹವ್ಯಾಸಗಳಿವೆ.
ಮಕ್ಕಳು ಅವರವರ ಆಸಕ್ತಿಗೆ ತಕ್ಕಂತೆ ಅಭ್ಯಾಸ ಮಾಡಬೇಕು. ಎಲ್ಲವನ್ನು ಕಲಿಸಬೇಕೆಂಬ ಹಂಬಲ ಬೇಡ. ವಿದ್ಯಾಭ್ಯಾಸ ಕಾಲದಲ್ಲಿ ಒಂದು ಮಿತಿಯೊಳಗೆ ಇಂತಹ ಹವ್ಯಾಸ ಇಟ್ಟುಕೊಳ್ಳಬೇಕು. ರಜಾದಿನ ಗಳನ್ನು ಇದಕ್ಕಾಗಿ ಬಳಸಿಕೊಳ್ಳಬೇಕು. ಇಂತಹ ಚಟುವಟಿಕೆಗಳೇ ಅಧಿಕವಾದರೆ ಕಲಿಕೆಯಲ್ಲಿ ಹಿಂದುಳಿಯಬಹುದು. ನಿರ್ದಿಷ್ಟ ಹಂತದವರೆಗೆ ವಿದ್ಯಾಭ್ಯಾಸ ಪೂರೈಸಿ ಇಂತಹ ಹವ್ಯಾಸಗಳನ್ನು ವೃತ್ತಿಯಾಗಿ ಸ್ವೀಕರಿಸಿದರೂ ಸಂಪಾದನೆ ಸಾಧ್ಯವಿದೆ. ಇವುಗಳಿಗೆ ತುಂಬಾ ಬೇಡಿಕೆ ಇದೆ. ವಿಶಿಷ್ಟ ಸಾಧನೆ ಮಾಡಿದಲ್ಲಿ ಆಕರ್ಷಣೀಯವಾಗಿ ಹಮ್ಮಿಕೊಂಡು ಜನಪ್ರಿಯಗೊಳಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.