ಕೆರ್ಮಾಯಿ ರಸ್ತೆಯ ಅಧೋಗತಿ ಸಂಚಾರಕ್ಕೆ ಅಯೋಗ್ಯ-ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

Puttur_Advt_NewsUnder_1
Puttur_Advt_NewsUnder_1

kermayi ಕಡಬ: ಮರ್ದಾಳ -ಕೆರ್ಮಾಯಿ ಜಿ.ಪಂ.ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ದುರಸ್ಥಿಗೊಳಿಸದ ಜನಪ್ರತಿನಿಧಿಗಳ ಬಗ್ಗೆ ರೊಚ್ಚಿಗೆದ್ದ ಸಾರ್ವಜನಿಕರು ಚುನಾವಣೆ ಬಹಿಷ್ಕರಿಸಿ ಜ.28 ರಂದು ಬ್ಯಾನರ್ ಅಳವಡಿಸಿದ್ದಾರೆ.

ಮರ್ದಾಳದಿಂದ -ಕೆರ್ಮಾಯಿ ಬಜಕೆರೆಯ ಮೂಲಕ ಕೋಡಿಂಬಾಳವನ್ನು ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಆಯೋಗ್ಯವಾಗಿದ್ದು ಹೊಂಡಗುಂಡಿಗಳಿಂದ ತುಂಬಿ ಸವಾರರು ಪರದಾಡುವಂತಾಗಿದೆ. ಬಂಟ್ರ, 102  ನೆಕ್ಕಿಲಾಡಿ ಮತ್ತು ಐತ್ತೂರು, ಕೋಡಿಂಬಾಳ ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಬಜಕೆರೆ ರೈಲ್ವೇ ಸ್ಟೇಷನ್, ಕೆರ್ಮಾಯಿ ಸರಕಾರಿ ಪ್ರಾಥಮಿಕ ಶಾಲೆ, ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆ, 4  ಚರ್ಚುಗಳು, 1 ಭಜನಾ ಮಂದಿರ, ದೇವಸ್ಥಾನ-ದೈವಸ್ಥಾನಗಳು ಮತ್ತು ಎನ್.ಕೂಪ್, ಮಾಯಿಪಾಜೆ, ಗುರಿಯಡ್ಕ ಪರಿಶಿಷ್ಟ ಕಾಲನಿ ಮತ್ತು ಪಾದೆಮಜಲು ಪರಿಶಿಷ್ಟ ಕಾಲನಿಗೆ ಇದೇ ರಸ್ತೆಯ ಮೂಲಕ ಸಂಪರ್ಕವಿದ್ದು  ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ರಸ್ತೆಯ ಕೋರಿಯಾರ್ ಎಂಬಲ್ಲಿ ಕುಮಾರಧಾರಾ ನದಿಯು ಹರಿಯುತ್ತಿದ್ದು, ಈ ನದಿಗೆ ಕೋರಿಯಾರ್ ಎಂಬಲ್ಲಿ ಸೇತುವೆ ನಿರ್ಮಾಣದ ಪ್ರಸ್ತಾಪ ಹಲವು ವರ್ಷಗಳದ್ದು. ನದಿಯ ಇನ್ನೊಂದು ಪಾರ್ಶ್ವದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ‘ಬಳ್ಪ’ ಗ್ರಾಮವಿದ್ದು, ಸೇತುವೆ ನಿರ್ಮಾಣವಾದಲ್ಲಿ ಸುಲಭವಾಗಿ ಸುಳ್ಯ ತಾಲೂಕನ್ನು ಸಂಪರ್ಕಿಸಬಹುದಾಗಿದೆ. ರಸ್ತೆ ಅಭಿವೃದ್ಧಿಯ ಬಗ್ಗೆ ಬಹಳ ಹಿಂದಿನಿಂದಲೂ ಸಹಿ ಸಂಗ್ರಹ ಮಾಡಿ ಶಾಸಕರಿಗೆ, ಸಂಸದರಿಗೆ, ಜಿಲ್ಲಾಧಿಕಾರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನ ಮಾತ್ರ ಶೂನ್ಯ. ಮರ್ದಾಳ ಕೆರ್ಮಾಯಿ ರಸ್ತೆಯ ಅಭಿವೃದ್ದಿ ಬಗ್ಗೆ ಮನವಿ ಸಲ್ಲಿಸಿ ಒತ್ತಡ ತಂದು ಭ್ರಮನಿರಸನಗೊಂಡಿದ್ದು ಜನಪ್ರತಿನಿಧಿಗಳು ಪಕ್ಷದ ಮುಖಂಡರು  ಚುನಾವಣಾ ಸಮಯದಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸುವುದರೊಂದಿಗೆ ಇನ್ನೇನು ಕೆಲಸ ಪ್ರಾರಂಭಿಸಲಾಯಿತು ಎಂಬಂತೆ ಅಲ್ಲಲ್ಲಿ ಅಲ್ಪಸ್ವಲ್ಪ  ಜಲ್ಲಿ  ತಂದು ರಾಶಿ ಹಾಕಿ ಚುನಾವಣೆ ಮುಗಿದ ನಂತರ ಅದನ್ನು ಎತ್ತಿಕೊಂಡು ಹೋಗುವುದು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಜನಪ್ರತಿನಿಧಿಗಳು ಆಗಮಿಸಿ ಟೊಳ್ಳು ಭರವಸೆಯೊಂದಿಗೆ ಜನರನ್ನು ಮೂರ್ಖರನ್ನಾಗಿಸಿ ಹೋಗುವುದಲ್ಲದೆ ಮತ್ತೇನೂ ಪ್ರಯೋಜನವಿಲ್ಲವೆನ್ನುತ್ತಾರೆ ಊರವರು. ಈ ರಸ್ತೆಯು ಸುಮಾರು ೨೫ ವರ್ಷಗಳ ಹಿಂದೆ ಡಾಮರೀಕರಣವಾಗಿದ್ದು, ತದ ನಂತರ ಒಂದು ಸಲ ಅಂದಾಜು 1 ಕಿ.ಮೀ. ತೇಪೆ ಕಾರ್ಯ ಮತ್ತು ಕಳೆದ ಸಾಲಿನಲ್ಲಿ 50 ಮೀಟರ್ ಕಾಂಕ್ರೀಟ್ ಹಾಕಿದ್ದು ಬಿಟ್ಟರೆ ಇನ್ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ. ಈ ರಸ್ತೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸು ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಲಾಗದೆ ಬಸ್ಸುಗಳನ್ನು ಅರ್ಧದಲ್ಲೇ ತಿರುಗಿಸಿ ಹೋದ ಉದಾಹರಣೆಯಿದೆ. ಕೆಲವೊಂದು ವಾಹನಗಳು ಸಂಚರಿಸುವಾಗ ಶಾಲಾ ಮಕ್ಕಳ ಸಮವಸ್ತ್ರದಲ್ಲಿ ಕೆಸರು ಎರಚಿ ಅದೆಷ್ಟೋ ಮಕ್ಕಳು ಶಾಲೆಗೆಂದು ಮನೆಯಿಂದ ಬಂದು ಅರ್ಧದಿಂದಲೇ ಹಿಂತಿರುಗಿ ಮನೆಗೆ ಹೋದದ್ದಿದೆ.  ವಿವಿಧ ರಾಜಕೀಯ ಪಕ್ಷದ ಮುಖಂಡರು ದಿನನಿತ್ಯ ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದರೂ ಇದರ ಬಗ್ಗೆ ಗಮನಹರಿಸದಿರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರಣವನ್ನು ಮುಂದಿಟ್ಟುಕೊಂಡು ಪಕ್ಷ ಭೇದ ಮರೆತು ನಾಗರೀಕರು ಒಂದಾಗಿದ್ದು, ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಲು ಊರವರು ನಿರ್ಧರಿಸಿದ್ದಾರೆ.

ಪ್ರತೀ ವರ್ಷ ಬಂದ ಅನುದಾನದಲ್ಲಿ ಕ್ಷೇತ್ರಾದ್ಯಂತ ವಿಂಗಡಿಸಿಕೊಂಡು ಕೆರ್ಮಾಯಿ ರಸ್ತೆಗೂ ಮೋರಿ ರಚನೆ ಕಾಂಕ್ರೀಟಿಕರಣ, ರಸ್ತೆ ರಿಪೇರಿಗೆ ಅನುದಾನ ಒದಗಿಸಿದ್ದೇನೆ. ಈ ವರ್ಷ ಕೂಡಾ 5 ಲಕ್ಷ ಅನುದಾನ ಇಟ್ಟಿದ್ದು ಕಾಮಗಾರಿ ಪ್ರಾರಂಭಿಸಲು ಕಂಟ್ರಾಕ್ಟ್‌ದಾರರು ಜಲ್ಲಿ ತಂದು ಹಾಕಿ ಜ.20 ರಂದು ಕೆಲಸ ಪ್ರಾರಂಭಿಸಲು ಹೋದಾಗ ಅಲ್ಲಿಯವರು ಈಗ ಚುನಾವಣೆ ಸಂದರ್ಭದಲ್ಲಿ ಕೆಲಸ ಮಾಡುವುದು ಬೇಡ ಎಂದಿದ್ದಾರೆ. ಇದರಿಂದಾಗಿ ಕಾಮಗಾರಿ ಆರಂಭಗೊಂಡಿಲ್ಲ. ಜತೆಗೆ ಸಡಕ್ ಯೋಜನೆಯಡಿ ಅಭಿವೃದ್ಧಿಗೊಳಿಸಲು ಈ ರಸ್ತೆಯನ್ನು ಸೇರ್ಪಡೆಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಯಿತು.

-ಕುಮಾರಿ ವಾಸುದೇವನ್

ನಮ್ಮೂರಿನ ರಸ್ತೆಯ ವಿಷಯದಲ್ಲಿ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ನಮ್ಮನ್ನು ಕಡೆಗಣಿಸಿದ್ದಾರೆ. ನಾವು ಊರವರೆಲ್ಲಾ ಒಟ್ಟಾಗಿದ್ದು, ಕೆರ್ಮಾಯಿ ರಸ್ತೆ ಸರಿಯಾಗುವವರೆಗೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ.

-ವೆಂಕಟ್ರಮಣ ಭಟ್ ಪಟ್ರೋಡಿ, ಸಾಮಾಜಿಕ ಮುಂದಾಳು

ಈ ರಸ್ತೆಯ ದುರವಸ್ಥೆಯಿಂದಾಗಿ ದಿನನಿತ್ಯದ ದುಡಿಮೆಯು ವಾಹನದ ರಿಪೇರಿಗೆ ಸಾಲುತ್ತಿಲ್ಲ. ಮರ್ದಾಳ-ಕೆರ್ಮಾಯಿ ರಸ್ತೆಯು ಅಧಿಕಾರಿ ವರ್ಗದವರ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.

-ಅಬ್ದುಲ್ ರಹಿಮಾನ್, ಅಟೋ ಚಾಲಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.