ಕಳಾರದಲ್ಲಿ ಕಾಂಗ್ರೆಸ್ ಸಭೆ : ಯಾರೇ ಅಭ್ಯರ್ಥಿಯಾದರೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿ ಗೆಲ್ಲಿಸಿ-ಪಿ.ಪಿ. ವರ್ಗೀಸ್

Puttur_Advt_NewsUnder_1
Puttur_Advt_NewsUnder_1

kalara

ಕಡಬ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ  ಕಾಂಗ್ರೆಸ್ ಕಾರ್ಯಕರ್ತರ ಸಭೆ ಜ.25ರಂದು ಕಳಾರದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ ವರ್ಗೀಸ್‌ರವರು, ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತೀ ಗ್ರಾ.ಪಂ.ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅನುದಾನ ಒದಗಿಸುವುದಲ್ಲದೆ ಎಲ್ಲಾ ಜನಾಂಗದವರನ್ನು ಸಮಾಜದಲ್ಲಿ ಸಬಲೀಕರಣ ಹೊಂದುವಂತೆ ಮಾಡಲು ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಭೂ ಮಸೂದೆ, ಭೂಮಿ ಒಡೆತನ, ಅಕ್ರಮ ಸಕ್ರಮ, ಮನೆ ನಿವೇಶನ, ವಸತಿ ಯೋಜನೆ, 94ಸಿ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಸಹಕಾರಿ ಸಂಸ್ಥೆಗಳ ಮೂಲಕ ಸಾಲ ಯೋಜನೆ, ಬಡ್ಡಿ ಮನ್ನಾ, ಸಾಲ ಮನ್ನಾ, ಅಲ್ಪಸಂಖ್ಯಾತರ ಹಿಂದುಳಿದವರ ದೀನದಲಿತರ ಸಾಲ ಮನ್ನಾ, ವಸತಿ ಯೋಜನೆ ಸಾಲ ಮನ್ನಾ ಬೇರೆ ಬೇರೆ ರೀತಿಯಲ್ಲಿ ಪಿಂಚಣಿ, ವಿಧವಾ ವೇತನ, ಅಂಗವಿಕಲ ವೇತನ, ಹಸಿವು ಮುಕ್ತ ಪಡಿತರ ವಿತರಣೆ, ಬಿಸಿಯೂಟ ಸೇರಿದಂತೆ ನಿರೀಕ್ಷೆಗೂ ಮೀರಿದ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ನೀಡಿದೆ. ಕಡಬ ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲೂ ಪದವಿ ಪೂರ್ವ ಮಹಾವಿದ್ಯಾಲಯ ಇಲ್ಲದಿದ್ದರೂ ಇಲ್ಲಿಯ ಶಾಸಕರಿಗೆ ಕಳೆದ 25 ವರ್ಷಗಳಿಂದಲೂ ಇಲ್ಲಿಗೆ ಒಂದು ಮಹಾವಿದ್ಯಾಲಯದ ಬೇಡಿಕೆ ಈಡೇರಿಸಲು ಸಾಧ್ಯವಾಗಿಲ್ಲ. ಅವರೇ ಇಲ್ಲಿಯ ಪದವಿ ಕಾಲೇಜಿನ ಅಧ್ಯಕ್ಷರಾಗಿದ್ದರೂ ಈ ಭಾಗದ ಬೇಡಿಕೆ ಈಡೆರಿಸದೇ ಇರುವುದು ವಿಷಾದನೀಯ. ಈಗ ನಮ್ಮ ಸರಕಾರ ಇರುವುದರಿಂದ ನಾವಿಲ್ಲಿ ಹೋರಾಟ ಸಮಿತಿಯನ್ನು ರಚಿಸಿಕೊಂಡು ಸರಕಾರದ ಗಮನ ಸೆಳೆದಿದ್ದು ಇದಕ್ಕೆ ಸ್ಪಂಧಿಸಿದ ಸರಕಾರ 5 ಎಕ್ರೆ ಸ್ಥಳವನ್ನು ಮಹಾವಿದ್ಯಾಲಯಕ್ಕೆ  ನಿಗದಿಗೊಳಿಸಿ ಮುಂದಿನ ವರ್ಷದಿಂದಲೇ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲು ಮುಂದಾಗಿರುವುದು ಸಂತೋಷ ತಂದಿದೆ. ಇಚ್ಚಾಶಕ್ತಿಯೊಂದಿಗೆ ಕೆಲಸ ಮಾಡಿದ್ದಲ್ಲಿ ಯಾವ ಕಾರ್ಯವನ್ನು ಸಾಧಿಸಬಹುದೆಂಬುದಕ್ಕೆ ಇದು ನಿದರ್ಶನವಾಗಿದೆ ಎಂದರು.  ನಾವು ಯಾವತ್ತೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಶಕ್ತಿ ಮೀರಿ ಶ್ರಮಿಸಬೇಕು. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಹೇಳಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬಳ್ಳೇರಿಯವರು ಮಾತನಾಡಿ ಕಾಂಗ್ರೆಸ್ ಪಕ್ಷದ ಗೆಲುವು ನಮ್ಮೆಲ್ಲರ ಗೆಲುವು. ನಾವು ಏನನ್ನಾದರೂ ಪಡೆದುಕೊಂಡಿದ್ದರೆ ಅದು ಕಾಂಗ್ರೆಸ್‌ನಿಂದ ಎಂಬುದನ್ನು ಮರೆಯಬಾರದು, ಈ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ದುಡಿಯುವ, ನಾವು ಯಾವತ್ತೂ ಕಡಬ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತ ದೊರೆಕಿಸುವಲ್ಲಿ ಪ್ರಯತ್ನಿಸಿದ್ದೇವೆ.  ಈ ಸಲ ಕೂಡಾ ಎಲ್ಲಾ ಚುನಾವಣೆಗಳಿಗಿಂತ ಹೆಚ್ಚು ಮತ ಬರುವಂತೆ ಪ್ರಯತ್ನ ಮಾಡಬೇಕೆಂದರು.

ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ರಾಯ್ ಅಬ್ರಾಹಂ ಮಾತನಾಡಿ ಸೌಲಭ್ಯಕ್ಕಾಗಿ ಎಲ್ಲರಿಗೂ ಕಾಂಗ್ರೆಸ್ ಬೇಕಾಗುತ್ತದೆ. ಆದರೆ ಚುನಾವಣೆ ಬರುವಾಗ ಕೆಲವರು ಆಚೆ ಈಚೆ ನೋಡುತ್ತಾರೆ. ಕೆಲವು ನಮ್ಮ ಅಲ್ಪಸಂಖ್ಯಾತರೂ ಬಿಜೆಪಿ ಪಕ್ಷ ಸೇರಿಕೊಂಡು ಕಾಂಗ್ರೆಸ್‌ಗೆ ಎದುರಾಗುತ್ತಾರೆ. ಆದರೆ ಬಿಜೆಪಿ ಯವರು ಅಲ್ಪಸಂಖ್ಯಾತರನ್ನು ಗೆಲ್ಲಲು ಅಸ್ತ್ರವಾಗಿ ಬಳಸುತ್ತಾರೆ ವಿನಃ ಅವರ ಬೈಠಕ್‌ಗಳಲ್ಲಿ ಅವರ ಗುಪ್ತ ಏಜಂಡಾದಲ್ಲಿ ಅಲ್ಪಸಂಖ್ಯಾತರನ್ನು ಎಂದು ಸೇರಿಸುವುದಿಲ್ಲ. ಆದರೂ ಕೆಲವರಿಗೆ ಇನ್ನು ಇದು ಅರ್ಥವಾಗಿಲ್ಲ. ಏನಿದ್ದರೂ ಕಾಂಗ್ರೆಸ್ ಪಕ್ಷವೇ ಎಲ್ಲರ ಸಂರಕ್ಷಣೆ ಮಾಡುವ ಪಕ್ಷವಾಗಿದ್ದು ಯಾರೇ ಅಭ್ಯರ್ಥಿಯಾದರೂ ಒಟ್ಟಾಗಿ ಕೆಲಸ ಮಾಡಬೇಕೆಂದರು. ಇನ್ನು ಕೆಲವು ಅಲ್ಪಸಂಖ್ಯಾತರು ಎಸ್.ಡಿ.ಪಿ.ಐ, ಪಿಡಿಪಿ ಮೊದಲಾದ ಪಕ್ಷ ಮಾಡಿಕೊಂಡು ಮುಸ್ಲಿಂ ಓಟುಗಳನ್ನು ಒಡೆಯುವ ತಂತ್ರ ಮಾಡುತ್ತಾರೆ. ಇದಕ್ಕೂ ಹಿಂದಿನ ಬಾಗಿಲಿನಿಂದ ಬಿಜೆಪಿಯವರು ಸಪೋರ್ಟು ಮಾಡುತ್ತಾರೆ. ಎಷ್ಟು ಅಲ್ಪಸಂಖ್ಯಾತರು ಬೇರೆ ಪಕ್ಷಕ್ಕೆ ಹೋದರೆ ಅಷ್ಟು ಬಿಜೆಪಿಗೆ ಲಾಭ ಎಂಬುದನ್ನು ಅವರು ಮನಗಂಡಿದ್ದಾರೆ ಎಂದರು.

ಉಪಾಧ್ಯಕ್ಷ ಎಸ್.ಅಬ್ದುಲ್ ಖಾದರ್ ಮಾತನಾಡಿ, ಕಡಬ 1 ನೇ ವಾರ್ಡ್‌ನಿಂದಲೇ ಕಾಂಗ್ರೆಸ್‌ನ ಬಲವರ್ಧನೆಯಾಗಿದ್ದು ಅತೀ ಹೆಚ್ಚಿನ ಮತಗಳನ್ನು ಪಡೆಯುವ ಕ್ಷೇತ್ರವಾಗಿದೆ. ಇಲ್ಲಿ ಎಲ್ಲರೂ ಒಟ್ಟಾಗಿ ಜಾತಿಮತ ಬೇಧವಿಲ್ಲದೆ ಕಾಂಗ್ರೆಸ್‌ನ್ನು  ಬೆಂಬಲಿಸುತ್ತಾರೆ.  ಅದೇ ರೀತಿ ಕಾಂಗ್ರೆಸ್‌ನಿಂದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ ಎಲ್ಲ ಕಡೆಗಳಲ್ಲೂ ಇದೇ ರೀತಿ ಉತ್ಸಾಹದಿಂದ ಕಾಂಗ್ರೆಸ್ ಬೆಂಬಲಿಸಿದರೆ ಕಾಂಗ್ರೆಸ್‌ನ ಅಭ್ಯರ್ಥಿಗಳೇ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದರು.

ಕಡಬ ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್ ಅಧ್ಯಕ್ಷ ಧರಣೇಂದ್ರ ಜೈನ್ ಮಾತನಾಡಿ ಕಾಂಗ್ರೆಸ್ ಎಂಬುದು ಸಮುದ್ರ ಇದರಲ್ಲಿರುವ ನೀರನ್ನು ಬತ್ತಿಸಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ಕಾಂಗ್ರೆಸ್ ಪಕ್ಷವು ಇತಿಹಾಸವುಳ್ಳ ಬಹುದೊಡ್ಡ ಪಕ್ಷವಾಗಿದ್ದು ಅದೆಷ್ಟೋ ನಾಯಕರನ್ನು ಕಾರ್ಯಕರ್ತರನ್ನು ಕಟ್ಟಿ ಬೆಳೆಸಿದ ಪಕ್ಷವಾಗಿದೆ.  ಕಾರ್ಯಕರ್ತರಾಗಿ ದುಡಿದ ಅದೆಷ್ಟೋ ವ್ಯಕ್ತಿಗಳು ಜನಪ್ರತಿನಿಧಿಗಳಾಗಿ ಗ್ರಾ.ಪಂ, ತಾ.ಪಂ., ಜಿ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರಾಗಿ ಶಾಸಕರಾಗಿ, ಸಂಸದರಾಗಿ, ವಿಧಾನಪರಿಷತ್ ಸದಸ್ಯರಾಗಿ ವಿವಿಧ ನಿಗಮಗಳ ಅಧ್ಯಕ್ಷರಾಗಿ ಪದಾಧಿಕಾರಿಗಳಾಗಿ ವಿವಿಧ ಸಮಿತಿಗಳ ಅಧ್ಯಕ್ಷರೂ, ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದಲ್ಲದೆ ರಾಜ್ಯ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಪ್ರಧಾನಿಯಾಗಿ ರಾಷ್ಟ್ರಪತಿಗಳಾಗಿ ಅಧಿಕಾರ ನಿರ್ವಹಿಸಿ ಈ ದೇಶದ ಒಳಿತಿಗಾಗಿ ಶ್ರಮಿಸಿದ್ದಾರೆ. ಇಂತಹ ಪಕ್ಷದಲ್ಲಿ ದುಡಿಯುವುದೆಂದರೆ ನಮಗೆಲ್ಲರಿಗೂ ಹೆಮ್ಮೆಯಾಗಿದೆ. ಪಕ್ಷದಲ್ಲಿ ಸೋಲು ಗೆಲುವು ಸಾಮಾನ್ಯ ಆದರೆ ಪಕ್ಷದ ನಿಷ್ಟಾವಂತರಾಗಿ ದುಡಿದಲ್ಲಿ ಒಂದಲ್ಲ ಒಂದು ದಿನ ನಮಗೆ ಯಾವುದೇ ಒಂದು ಪದಾಧಿಕಾರ ಒಳಿದು ಬರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಪಂಚಾಯತ್ ಸದಸ್ಯರಾದ ಸಿಜೆ ಸೈಮನ್ ಮಾತನಾಡಿ ಕಡಬ ೧ನೇ ವಾರ್ಡ್‌ನಿಂದ ಅತೀ ಹೆಚ್ಚಿನ ಮತಗಳನ್ನು ಕಂಗ್ರೆಸ್ ಪಕ್ಷಕ್ಕೆ ದೊರಕಿಸುವಲ್ಲಿ  ನಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ವಿವಿಧ ಗ್ರಾ.ಪಂ.ಸದಸ್ಯರಾದ ಸುಲೈಮಾನ್ ಪಿ, ಶಾಲಿನಿ ಸತೀಶ್ ನಾಕ್, ಫಝಲ್ ಕೋಡಿಂಬಾಳ, ಮಹಮ್ಮದಾಲಿ, ಶೆರೀಫ್ ಎ.ಎಸ್, ಉಪಸ್ಥಿತರಿದ್ದರು. ಪ್ರಮುಖರಾದ ಚಂದ್ರಶೇಖರ ಕರ್ಕೇರ,  ಸತೀಶ್ ನಾಕ್ ಮೇಲಿನ ಮನೆ, ಮಾಜಿ ಸದಸ್ಯ ಬಾಬು ಕಳಾರ, ಇಸ್ಮಾಯಿಲ್ ಯುಡಿಎಸ್ ಕಳಾರ, ಉಸ್ಮಾನ್ ತೆಮರಡ್ಡ,  ಸೇರಿದಂತೆ ಕಡಬ 1ನೇ ವಾರ್ಡ್‌ಗೆ ಸಂಬಂಧಪಟ್ಟ ಹೆಚ್ಚಿನ ಮತದಾರರು, ಮಹಿಳೆಯರು, ಕಾರ‍್ಯಕರ್ತರು ಭಾಗವಹಿಸಿದ್ದರು. ಕಡಬ  ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಹನೀಫ್ ಕೆ.ಎಂ ಸ್ವಾಗತಿಸಿ ಸತೀಶ್ ನಾಕ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.