Breaking News

ನೆಲ್ಯಾಡಿ ಜಿ.ಪಂ.ಕ್ಷೇತ್ರ :ಕಾಂಗ್ರೆಸ್‌ನಿಂದ ನಾಲ್ವರ ಹೆಸರು ಹೈಕಮಾಂಡ್‌ಗೆ ರವಾನೆ- ಸರ್ವೋತ್ತಮ ಗೌಡ, ಉಷಾ ಅಂಚನ್, ಕೆ.ಪಿ.ತೋಮಸ್, ಯತೀಶ್ ಬಾನಡ್ಕ ಹೆಸರು ಶಿಫಾರಸು

Puttur_Advt_NewsUnder_1
Puttur_Advt_NewsUnder_1

kangr

ಪುತ್ತೂರು: ಸತತ ಎರಡು ಬಾರಿ ಗೆದ್ದು ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿರುವ ಬಿಜೆಪಿಗೆ ನೆಲ್ಯಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸಲು ಸಜ್ಜಾಗಿದೆ. ಈ  ಹಿನ್ನೆಲೆಯಲ್ಲಿ ಪಕ್ಷ ಗೆಲ್ಲುವ ಅಭ್ಯರ್ಥಿಗೆ ಟಿಕೇಟ್ ನೀಡಲು ಮಂದಾಗಿದೆ. ಈಗಾಗಲೇ ನಾಲ್ವರು ಆಕಾಂಕ್ಷಿಗಳ ಪಟ್ಟಿ ಹೈಕಮಾಂಡ್‌ಗೆ ರವಾನೆಯಾಗಿದ್ದು ಇನ್ನೆರಡು ದಿನಗಳಲ್ಲಿ ಹೆಸರು ಘೋಷಣೆಯಾಗುವ ಸಾಧ್ಯತೆಯೂ ಇದೆ.

ನೆಲ್ಯಾಡಿ ಜಿ.ಪಂ.ಕ್ಷೇತ್ರ ಈ ಬಾರಿ ಸಾಮಾನ್ಯಕ್ಕೆ ಮೀಸಲಾಗಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಕೆಡಿಪಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಉಷಾ ಅಂಚನ್, ಜಿಲ್ಲಾ ಕಾಂಗ್ರೆಸ್ ಸದಸ್ಯ ಕೆ.ಪಿ.ತೋಮಸ್, ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಬಾನಡ್ಕ ಹೆಸರು ಹೈಕಮಾಂಡ್‌ಗೆ ರವಾನೆಯಾಗಿದೆ. ಈ ನಾಲ್ವರಲ್ಲಿ ಒಬ್ಬರಿಗೆ ಟಿಕೇಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಭಾರಿ ಕಡಬ ಜಿ.ಪಂ.ಕ್ಷೇತ್ರವೂ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿರುವುದರಿಂದ ಎರಡೂ ಕ್ಷೇತ್ರಗಳಲ್ಲೂ ಜಾತಿ ಲೆಕ್ಕಾಚಾರದ ಆಧಾರದಲ್ಲಿ ಟಿಕೆಟ್ ಹಂಚಿಕೆಯಾಗುವ ಸಾಧ್ಯತೆ ಇದೆ. ಈ ರೀತಿಯಾದಲ್ಲಿ ಸರ್ವೋತ್ತಮ ಗೌಡ, ಉಷಾ ಅಂಚನ್, ಕೆ.ಪಿ.ತೋಮಸ್‌ರವರ ಪೈಕಿ ಒಬ್ಬರಿಗೆ ನೆಲ್ಯಾಡಿ ಜಿ.ಪಂ.ಕ್ಷೇತ್ರದಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇರುವುದಾಗಿ ಪಕ್ಷದ ಮೂಲಗಳು ಖಚಿತ ಪಡಿಸಿವೆ. ಆದರೂ ಕೊನೆ ಕ್ಷಣದಲ್ಲಿ ಬೇರೆಯವರಿಗೆ ಟಿಕೆಟ್ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಹೈಕಮಾಂಡ್‌ಗೆ ಸಲ್ಲಿಕೆಯಾಗಿರುವ ಪಟ್ಟಿಯಲ್ಲಿ ತಾ.ಪಂ.ಮಾಜಿ ಸದಸ್ಯರೂ ಆಗಿರುವ ಕೆಡಿಪಿ ಸದಸ್ಯ ಸರ್ವೋತ್ತಮ ಗೌಡ ಹಾಗೂ ತಾ.ಪಂ.ಸದಸ್ಯೆ ಉಷಾ ಅಂಚನ್‌ರವರ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಕಾರ‍್ಯಕರ್ತರ ಸಭೆಯಲ್ಲೂ ಜಿ.ಪಂ. ಸ್ಥಾನಕ್ಕೆ ಇವರಿಬ್ಬರ ಹೆಸರು ಪ್ರಬಲವಾಗಿ ಕೇಳಿಬಂದಿದೆ ಎಂದು ವರದಿಯಾಗಿದೆ. ಜಿಲ್ಲಾ ಕಾಂಗ್ರೆಸ್ ಸದಸ್ಯರೂ ಆಗಿರುವ ಪಕ್ಷದ ಹಿರಿಯ ಮುಖಂಡ ಕೆ.ಪಿ.ತೋಮಸ್‌ರವರಿಗೆ ಈ ಬಾರಿ ಅವಕಾಶ ನೀಡಬೇಕೆಂದು ಕಾರ‍್ಯಕರ್ತರೂ ಸಭೆಯಲ್ಲಿ ಪಕ್ಷದ ಮುಖಂಡರಿಗೆ ಒತ್ತಾಯ ಮಾಡಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಮಾಹಿತಿ ಮತ್ತು ತಂತ್ರಜ್ಞಾನ ಘಟಕದ ಅಧ್ಯಕ್ಷರೂ ಆಗಿರುವ ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಬಾನಡ್ಕರವರ ಹೆಸರೂ ಕೇಳಿಬಂದಿದ್ದು ಅವರೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಟ್ಟಿನಲ್ಲಿ ಹೈಕಮಾಂಡ್‌ಗೆ ರವಾನೆಯಾಗಿರುವ ಪಟ್ಟಿಯಲ್ಲಿರುವ ನಾಲ್ವರೂ ಆಕಾಂಕ್ಷಿಗಳು ಪಕ್ಷದ ಪ್ರಭಾವಿ ನಾಯಕರಾಗಿದ್ದು ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದಾರೆ.

ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಪಟ್ಟಿಯಲ್ಲಿ ಹೆಸರಿರುವ ನಾಲ್ವರೂ ಆಕಾಂಕ್ಷಿಗಳೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಿರುವುದಾಗಿ ತಿಳಿಸಿದ್ದಾರೆ. ನೆಲ್ಯಾಡಿ ಜಿ.ಪಂ. ಕ್ಷೇತ್ರ ಈ ಭಾರಿ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದೆ. ಆದ್ದರಿಂದ ಸ್ಪರ್ಧೆಗೆ ನಮಗೆ ಅವಕಾಶ ದೊರೆತಿದೆ. ಪಕ್ಷ ಅವಕಾಶ ನೀಡಿದಲ್ಲಿ ಸ್ಪರ್ಧಿಸುತ್ತೇನೆ. ಗೆದ್ದು ಬರುವ ವಿಶ್ವಾಸವಿದೆ ಎಂದು ಸರ್ವೋತ್ತಮ ಗೌಡ ಪ್ರತಿಕ್ರಿಯಿಸಿದ್ದಾರೆ.

ನೆಲ್ಯಾಡಿ ಜಿ.ಪಂ.,ಹಾಗೂ ತಾ.ಪಂ.,ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧೆಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದೇನೆ. ನೆಲ್ಯಾಡಿ ಜಿ.ಪಂ.ಕ್ಷೇತ್ರಕ್ಕೆ ಒಳಪಟ್ಟ ನಾಲ್ಕು ತಾ.ಪಂ.ಕ್ಷೇತ್ರಗಳ ಪೈಕಿ ಕೌಕ್ರಾಡಿ, ನೆಲ್ಯಾಡಿ, ಗೋಳಿತ್ತೊಟ್ಟಿನಲ್ಲಿ ನಡೆದ ಪಕ್ಷದ ಕಾರ‍್ಯಕರ್ತರ ಸಭೆಯಲ್ಲಿ ಜಿ.ಪಂ.ಗೆ ನನಗೆ ಅವಕಾಶ ನೀಡಬೇಕೆಂಬ ಬೇಡಿಕೆ ಕಾರ‍್ಯಕರ್ತರಿಂದ ಬಂದಿದೆ. ಅವಕಾಶ ನೀಡಿದಲ್ಲಿ ಸ್ಪರ್ಧಿಸುತ್ತೇನೆ ಎಂದು ಉಷಾ ಅಂಚನ್ ಪ್ರತಿಕ್ರಿಯಿಸಿದ್ದಾರೆ.

ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ. ನೆಲ್ಯಾಡಿ ಮಂಡಲ ಪಂಚಾಯತ್‌ನ ಮಾಜಿ ಸದಸ್ಯನೂ ಆಗಿದ್ದೇನೆ. ಈ ಭಾರಿ ನೆಲ್ಯಾಡಿ ಜಿ.ಪಂ.ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಅವಕಾಶ ನೀಡಿದಲ್ಲಿ ಸ್ಪರ್ಧೆಗೆ ಸಿದ್ಧನಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಡಿಸಿಸಿ ಸದಸ್ಯರೂ ಆಗಿರುವ ಕೆ.ಪಿ.ತೋಮಸ್‌ರವರು ಪ್ರತಿಕ್ರಿಯಿಸಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ, ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಅನುಭವ ಇದೆ. ರಾಮಕುಂಜ ಗ್ರಾ.ಪಂ.ಗೆ ಎರಡು ಅವಧಿಯಲ್ಲಿ ಸದಸ್ಯನಾಗಿ ಆಯ್ಕೆಗೊಂಡಿದ್ದೇನೆ. ಕಳೆದ ೧೧ ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಕೊಂಡಿದ್ದೇನೆ. ಸರಕಾರದ ಸವಲತ್ತುಗಳನ್ನು ಬಡ ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಇದೀಗ ನೆಲ್ಯಾಡಿ ಜಿ.ಪಂ.ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು ಪಕ್ಷದ ಜವಾಬ್ದಾರಿ ನೀಡಿದಲ್ಲಿ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಯತೀಶ್ ಬಾನಡ್ಕ ಪ್ರತಿಕ್ರಿಯಿಸಿದ್ದಾರೆ.

ಹೈಕಮಾಂಡ್ ತೀರ್ಮಾನವೇ ಫೈನಲ್

ನೆಲ್ಯಾಡಿ ಜಿ.ಪಂ.ಕ್ಷೇತ್ರಕ್ಕೆ ಸರ್ವೋತ್ತಮ ಗೌಡ, ಉಷಾ ಅಂಚನ್, ಕೆ.ಪಿ.ತೋಮಸ್ ಹಾಗೂ ಯತೀಶ್ ಬಾನಡ್ಕ ಆಕಾಂಕ್ಷಿಗಳಾಗಿದ್ದಾರೆ. ನೆಲ್ಯಾಡಿ ಜಿ.ಪಂ.ಕ್ಷೇತ್ರಕ್ಕೆ ಒಳಪಟ್ಟ ಕೌಕ್ರಾಡಿ, ನೆಲ್ಯಾಡಿ, ಗೋಳಿತ್ತೊಟ್ಟು ಹಾಗೂ ರಾಮಕುಂಜ ತಾ.ಪಂ.ಕ್ಷೇತ್ರಗಳಲ್ಲಿ ಪಕ್ಷದ ಕಾರ‍್ಯಕರ್ತರ ಸಭೆ ನಡೆಸಿ ಈ ಸಂಬಂಧ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ನಾಲ್ವರು ಆಕಾಂಕ್ಷಿಗಳ ಹೆಸರನ್ನು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಜಿಲ್ಲಾಧ್ಯಕ್ಷರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರಿಗೆ ಕಳುಹಿಸಿಕೊಡಲಾಗಿದೆ. ಜಿಲ್ಲೆಗೆ ಪಕ್ಷದ ವೀಕ್ಷಕರಾಗಿರುವ ವಿ.ಆರ್.ಸುದರ್ಶನ್ ಹಾಗೂ ರಮಾನಾಥ ರೈಯವರು ಪಟ್ಟಿ ಅಂತಿಮಗೊಳಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಹೆಸರು ಅಂತಿಮಗೊಳ್ಳಲಿದೆ.

ಪಿ.ಪಿ.ವರ್ಗೀಸ್, ಅಧ್ಯಕ್ಷರು ಕಡಬ ಬ್ಲಾಕ್ ಕಾಂಗ್ರೆಸ್

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.