Breaking News

ಕರಾಯ ಕೋಮುಗಲಭೆ ಪ್ರಕರಣದಲ್ಲಿ ಅಮಾಯಕರ ಮೇಲೆ ಕೇಸು ದಾಖಲಾಗಿದ್ದರೆ ಪರಿಶೀಲನೆ: ಜನಸಂಪರ್ಕ ಸಭೆಯಲ್ಲಿ ಬೊರಸೆ ಭರವಸೆ

Puttur_Advt_NewsUnder_1
Puttur_Advt_NewsUnder_1

♦ ಉಪ್ಪಿನಂಗಡಿ ಪ್ರ.ದ. ಕಾಲೇಜ್ ಲ್ಯಾಪ್‌ಟಾಪ್ ಕಳವು ಪ್ರಕರಣ ವಾರದೊಳಗೆ ಉತ್ತಮ ಫಲಿತಾಂಶ

 ನೆಲ್ಯಾಡಿ ಒಪಿಯಲ್ಲಿ ಸಿಬ್ಬಂದಿ ಕೊರತೆ

♦ ಉಪ್ಪಿನಂಗಡಿಗೆ ಟ್ರಾಫಿಕ್ ಹೊರಠಾಣೆ ಬೇಕು

 ಗಾಂಜಾ ಮಾರಾಟ, ಹೆದ್ದಾರಿ ದರೋಡೆ ತಡೆಗೆ ಪೊಲೀಸ್ ಗಸ್ತು ಅಗತ್ಯ

ಉಪ್ಪಿನಂಗಡಿ: ಕರಾಯ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರ ಮೇಲೆ ಪ್ರಕರಣ ದಾಖಲು, ರೌಡಿ ಶೀಟರ್ ಓಪನ್ ಆಗಿದ್ದರೆ ಅವುಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಭರವಸೆ ನೀಡಿದ್ದಾರೆ.

ಠಾಣಾ ಪರಿಶೀಲನೆಗಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಸೆ.5ರಂದು ಆಗಮಿಸಿದ ಅವರು, ಸಂಜೆ ಉಪ್ಪಿನಂಗಡಿ ಸಿಎ. ಬ್ಯಾಂಕ್ ಹಾಲ್‌ನಲ್ಲಿ ಜನಸಂಪರ್ಕ ಸಭೆ ನಡೆಸಿದಾಗ ಕರಾಯ ಕೋಮು ಗಲಭೆ ಪ್ರಕರಣದ ಕುರಿತಾಗಿ ಸಾರ್ವಜನಿಕರು ಉಲ್ಲೇಖಿಸಿದಾಗ ಈ ಭರವಸೆ ನೀಡಿದ್ದಾರೆ.

ಕರಾಯ ಕೋಮು ಗಲಭೆ ಪ್ರಕರಣದ ಕುರಿತಾಗಿ ವಿಷಯ ಪ್ರಸ್ತಾಪಿಸಿದ ಜಿಲ್ಲಾ ಪಂಚಾಯತ್‌ನ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಅವರು, ಕಳೆದ ವರ್ಷ ಕರಾಯದಲ್ಲಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಎರಡು ಸಮುದಾಯಗಳ ಸುಮಾರು 200ರಷ್ಟು ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ. ಇದರಿಂದ ಈವರೆಗೆ ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲು ಹತ್ತದವರು ಪದೇ ಪದೇ ಅಲ್ಲಿಗೆ ಹೋಗುವಂತಾಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಇದಕ್ಕೆ ಸಂಬಂಧಿಸಿ ಕೇವಲ ಒಂದು ಪ್ರಕರಣ ಇದ್ದವರ ಮೇಲೂ ರೌಡಿ ಶೀಟರ್ ಓಪನ್ ಮಾಡಲಾಗಿದೆ. ಇದರಿಂದ ಜನರು ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಎಂದು ದೂರಿದರು.

ರವಿ ಇಳಂತಿಲ, ಯು.ರಾಮ, ಅಬ್ದುರ್ರಹ್ಮಾನ್, ಯು.ಟಿ. ತೌಸೀಫ್ ಆಶ್ರಫ್ ಕರಾಯ ಸೇರಿದಂತೆ ಸಭೆಯಲ್ಲಿದ್ದ ಹಲವರು ಇದಕ್ಕೆ ಪೂರಕವಾಗಿ ಮಾತನಾಡಿದರು. ಈ ಸಂದರ್ಭ ಪೊಲೀಸರೇ ಅಮಾಯಕರ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂಬ ಆರೋಪ ಕೂಡಾ ಸಭೆಯಲ್ಲಿ ಕೇಳಿ ಬಂತು. ಈ ಸಂದರ್ಭ ಮಾತನಾಡಿದ ಎಸ್ಪಿ ಭೂಷಣ್ ಜಿ. ಬೊರಸೆ ಅವರು, ಕರಾಯ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ೩೮ ಪ್ರಕರಣ ದಾಖಲಾಗಿದೆ. ಇದೆಲ್ಲಾ ಪರಸ್ಪರರು ದೂರು ಕೊಟ್ಟಿದ್ದೆ ವಿನಹ ಪೊಲೀಸರು ಸ್ವಯಂ ಆಗಿ ಯಾರೊಬ್ಬರ ಮೇಲೆಯೂ ದೂರು ದಾಖಲಿಸಿಲ್ಲ. ಸಂಶಯವಿದ್ದವರು ಠಾಣೆಗೆ ಬಂದರೆ ದೂರಿನ ಪ್ರತಿಯನ್ನು ನೀಡಲಾಗುವುದು ಎಂದರಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರ ಮೇಲೆ ಪ್ರಕರಣ ದಾಖಲು, ರೌಡಿ ಶೀಟರ್ ಓಪನ್ ಆಗಿರುವುದು ನಡೆದಿದ್ದರೆ, ಅವುಗಳನ್ನು ಮರು ಪರಿಶೀಲನೆಗೊಳಪಡಿಸಲಾಗುವುದು ಎಂದು ಭರವಸೆ ನೀಡಿದರು.

ವಾರದೊಳಗೆ ಉತ್ತಮ ಫಲಿತಾಂಶ:

ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಲ್ಯಾಪ್‌ಟಾಪ್ ಹಾಗೂ ಪ್ರೊಜೆಕ್ಟರ್ ಕಳವು ಪ್ರಕರಣದ ತನಿಖೆ ವಿಳಂಬವಾಗಿರುವ ಬಗ್ಗೆ ತಾಲೂಕು ಕೆಡಿಪಿ ಸದಸ್ಯ ಅಶ್ರಫ್ ಬಸ್ತಿಕ್ಕಾರ್ ಪ್ರಶ್ನಿಸಿದಾಗ, ಉತ್ತರಿಸಿದ ಎಸ್ಪಿಯವರು ಒಂದು ವಾರದೊಳಗೆ ಉತ್ತಮ ಫಲಿತಾಂಶ ದೊರೆಯಲಿದೆ ಎಂದರು.

ನೆಲ್ಯಾಡಿ ಒಪಿಯಲ್ಲಿ ಸಿಬ್ಬಂದಿ ಕೊರತೆ:

ಕೋಮು ಸೂಕ್ಷ ಪರಿಸರವೆಂದು ಪೊಲೀಸ್ ಕಡತದಲ್ಲಿ ಉಲ್ಲೇಖವಾಗಿರುವ ಗೋಳಿತೊಟ್ಟು, ನೆಲ್ಯಾಡಿ, ಕೊಕ್ಕಡ ವ್ಯಾಪ್ತಿಯು ನೆಲ್ಯಾಡಿಯಲ್ಲಿರುವ ಹೊರಠಾಣೆ ವ್ಯಾಪ್ತಿಗೆ ಬರುತ್ತದೆ. ಆದರೆ ಇಲ್ಲಿ ಸಿಬ್ಬಂದಿ ಕೊರತೆಯಿದ್ದು, ಇರುವ ಸಿಬ್ಬಂದಿ ಎಲ್ಲವನ್ನೂ ನಿಭಾಯಿಸಬೇಕಾಗಿದೆ. ಅಲ್ಲದೇ, ಪೊಲೀಸರ ಓಡಾಟಕ್ಕಾಗಿ ಸುಸ್ಥಿತಿಯ ವಾಹನದ ವ್ಯವಸ್ಥೆಯೂ ಠಾಣೆಯಲ್ಲಿಲ್ಲ. ಇದ್ದ ವಾಹನ ಹಳತಾಗಿದೆ ಎಂದು ಅಬೂಬಕ್ಕರ್ ಕೆ.ಇ. ತಿಳಿಸಿದರು.

ಇದಕ್ಕುತ್ತರಿಸಿದ ಎಸ್ಪಿಯವರು, ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದಲ್ಲದೆ, ಹೆದ್ದಾರಿ ಗಸ್ತುದಳಕ್ಕಾಗಿ ಜಿಲ್ಲೆಗೆ 3 ಅಥವಾ 4 ವಾಹನಗಳು ಬರಲಿದ್ದು, ಅವುಗಳಲ್ಲಿ ಒಂದನ್ನು ನೆಲ್ಯಾಡಿ ವ್ಯಾಪ್ತಿಗೆ ನೀಡಲಾಗುವುದು ಎಂದರು.

ಉಪ್ಪಿನಂಗಡಿಗೆ ಟ್ರಾಫಿಕ್ ಹೊರಠಾಣೆ:

ಕಲ್ಲೇರಿ, ಕರಾಯ, ಗೋಳಿತೊಟ್ಟು ಹೀಗೆ ದೂರದ ಪ್ರದೇಶದಲ್ಲಿ ರಸ್ತೆ ಅಪಘಾತಗಳು ಸಂಭವಿಸಿದಾಗ ಅಲ್ಲಿಗೆ ಪುತ್ತೂರಿನ ಸಂಚಾರಿ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಳ್ಳಬೇಕು. ಆದ್ದರಿಂದ ಉಪ್ಪಿನಂಗಡಿಯಲ್ಲಿ ಸಂಚಾರಿ ಹೊರಠಾಣೆ ಸ್ಥಾಪಿಸಬೇಕೆಂಬ ಒತ್ತಾಯ ಬಂದಾಗ, ಉತ್ತರಿಸಿದ ಎಸ್ಪಿಯವರು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಅಪಘಾತಗಳು ನಡೆದಾಗ ಸಂಚಾರಿ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪುವಂತೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಹೆಚ್ಚಿನ ಸರಕಾರಿ ಬಸ್‌ಗಳು, ಲಾರಿಗಳು ಸೇರಿದಂತೆ ಕೆಲವು ಘನ ವಾಹನಗಳಲ್ಲಿ ಬ್ರೇಕ್ ಲೈಟ್ ಇರುವುದಿಲ್ಲ. ಅವರು ವಾಹನ ಚಲಾಯಿಸುವಾಗ ಸಾರಿಗೆಯ ಸೂಚನೆಯನ್ನು ಪಾಲನೆ ಮಾಡದೆ ವಾಹನ ಚಲಾಯಿಸುತ್ತಾರೆ. ಕೆಲವು ಖಾಸಗಿ ಬಸ್‌ಗಳವರು ರಸ್ತೆಯಲ್ಲೇ ಬಸ್‌ಗಳನ್ನು ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸುವುದು, ಹತ್ತಿಸುವುದು ಮಾಡುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುವಂತಾಗಿದೆ ಎಂದು ರಾಮನಗರ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ತಿಳಿಸಿದರು. ಹೆದ್ದಾರಿಯಲ್ಲಿ ಸಾಲುಸಾಲಾಗಿ ಒಮ್ಮೆಲೆ ೩-೪ ಅನಿಲ ಟ್ಯಾಂಕರ್ ಹಾಗು ಕಂಟೈನರ್ ವಾಹನಗಳನ್ನು ಚಲಾಯಿಸುವುದರ ಬಗ್ಗೆ ಹಾಗೂ ಅತೀ ವೇಗದಲ್ಲಿ ಘನ ವಾಹನಗಳನ್ನು ಚಲಾಯಿಸುವ ಬಗ್ಗೆ, ಕುಡಿದು ವಾಹನ ಚಲಾಯಿಸುವ ಬಗ್ಗೆ, ಹೆಚ್ಚುತ್ತಿರುವ ಗಾಂಜಾ ಮಾರಾಟದ ಬಗ್ಗೆ ದೂರುಗಳು ಕೇಳಿ ಬಂದವು ಹಾಗೂ ಹೆದ್ದಾರಿ ದರೋಡೆ ನಡೆಯದಂತೆ ಪೊಲೀಸರು ಗಸ್ತು ನಡೆಸಬೇಕೆಂಬ ಆಗ್ರಹವೂ ಸಭೆಯಲ್ಲಿ ಪ್ರಸ್ತಾಪವಾಯಿತು. ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿರುವ ಬಗ್ಗೆ ಕೈಲಾರ್ ರಾಜಗೋಪಾಲ ಭಟ್ ಪ್ರಸ್ತಾಪಿಸಿದಾಗ ಜನಸಂದಣಿ ಹೆಚ್ಚಿರುವ ಸಮಯದಲ್ಲಿ ಅಲ್ಲಿಗೆ ಓರ್ವ ಪೊಲೀಸ್ ಹಾಗೂ ಓರ್ವ ಹೋಂಗಾರ್ಡ್ ಅನ್ನು ನಿಯೋಜಿಸುವುದಾಗಿ ತಿಳಿಸಿದ ಎಸ್ಪಿ ಭೂಷಣ್ ಜಿ. ಬೊರಸೆ, ಸಭೆಯ ಬಳಿಕ ಬ್ಯಾಂಕ್ ರಸ್ತೆಗೆ ಭೇಟಿ ನೀಡಿ, ಸುಗಮ ಸಂಚಾರಕ್ಕೆ ಪಂಚಾಯತ್  ನಿಯಮಗಳ ಬಗ್ಗೆ ಪರಿಶೀಲಿಸಿದರು. ವೇದಿಕೆಯಲ್ಲಿ ಪುತ್ತೂರು ಎಎಸ್ಪಿ ರಿಷ್ಯಂತ್ ಇದ್ದರು. ಸಭೆಯಲ್ಲಿ ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ, ಬಾರ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಪೈ, ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ, ಪೌಲೋಸ್ ಶಿರಾಡಿ, ಮುಹಮ್ಮದ್ ಕೆಂಪಿ, ಅಝೀಝ್ ನಿನ್ನಿಕಲ್ಲ್, ಶ್ರೀಕಾಂತ್ ಶೆಟ್ಟಿ,  ಅಶ್ರಫ್ ಕರಾಯ, ರಿಯಾಝ್ ಕಡವಿನಬಾಗಿಲು, ಲತೀಫ್ ರಾಮನಗರ, ಸುರೇಶ್ ಮಡಿವಾಳ ಮತ್ತಿತರರು ಇದ್ದರು. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ ಹಾಗೂ ಉಪ್ಪಿನಂಗಡಿ ಎಸ್‌ಐ ತಿಮ್ಮಪ್ಪ ನಾಯ್ಕ ಈ ಸಂದರ್ಭ ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆ, ಕಾನೂನು ದುರುಪಯೋಗ: ಆರೋಪ

ಕೆಲವರು ಸುಳ್ಳು ದೂರನ್ನು ನೀಡುವ ಮೂಲಕ ಪೊಲೀಸ್ ಇಲಾಖೆ ಹಾಗೂ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಿಜವಾಗಿ ಪೆಟ್ಟು ತಿಂದವನೇ ಹಲ್ಲೆ ನಡೆಸಿದ ಆರೋಪಿಯಾಗುವಂತಾಗಿದೆ. ಆದ್ದರಿಂದ ಪೊಲೀಸರು ದೂರು ದಾಖಲಿಸುವಾಗ ಪರಿಶೀಲನೆ ನಡೆಸಬೇಕು. ಅಲ್ಲದೆ, ಸುಳ್ಳು ದೂರು ನೀಡುವವರ ಮೇಲೆ ಕ್ರಮಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂತು.

ಬೀಟ್‌ಗೋರ್ವ ಪೊಲೀಸ್: ಎಸ್ಪಿ

ಪೊಲೀಸ್ ಇಲಾಖೆಯು ಜನರಿಗೆ ಇನ್ನಷ್ಟು ಹತ್ತಿರವಾಗಲಿ ಎಂಬ ಉದ್ದೇಶದಿಂದ ಒಂದು ಬೀಟ್‌ಗೆ ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿದೆ. ಉದಾಹರಣೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4 ಗ್ರಾಮಗಳಿಗೆ ಒಂದು ಬೀಟ್ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಇಲ್ಲಿ 5 ಬೀಟ್‌ಗಳಿವೆ. ಇಲ್ಲಿ ಒಂದೊಂದು ಬೀಟ್‌ಗಳನ್ನು ಒಬ್ಬೊಬ್ಬ ಪೊಲೀಸ್‌ಗೆ ಹಂಚಲಾಗಿದೆ. ಒಂದು ಬೀಟ್‌ನ ಎಲ್ಲಾ ಗ್ರಾಮಗಳ ಜವಾಬ್ದಾರಿ ಆ ಬೀಟ್‌ಗೆ ಸಂಬಂಧಿಸಿದ ಪೊಲೀಸರದ್ದಾಗಿರುತ್ತದೆ. ಇವರು ತಮಗೆ ಸಂಬಂಧಿಸಿದ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಆದ್ದರಿಂದ ಇನ್ನು ಮುಂದೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪೊಲೀಸ್ ಇನ್ಸ್‌ಪೆಕ್ಟರ್ ಅವರಲ್ಲಿಯೇ ಹೇಳಬೇಕಂತಿಲ್ಲ. ಇವರಲ್ಲಿ ಹೇಳಿ ಅದಕ್ಕೆ ಪರಿಹಾರಗಳನ್ನು ಪಡೆದುಕೊಳ್ಳಬಹುದು.

ಭೂಷಣ್ ಜಿ. ಬೊರಸೆ, ಎಸ್ಪಿ ಮಂಗಳೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.