ಆರ್ಯಾಪು: ಸಿಂಡಿಕೇಟ್ ಬ್ಯಾಂಕ್‌ನ ಶಾಖೆ ಶುಭಾರಂಭ

ಬ್ಯಾಂಕಿಂಗ್ ವ್ಯವಹಾರದಿಂದ ಕಪ್ಪು ಹಣ ನಿರ್ಮೂಲನೆಸತೀಶ್ ಕಾಮತ್

ಪುತ್ತೂರು:ಜನರು ತಮ್ಮ ವ್ಯವಹಾರಗಳನ್ನು ಬ್ಯಾಂಕ್‌ಗಳ ಮುಖಾಂತರವೇ ನಡೆಸಬೇಕು. ಹೆಚ್ಚು ಹೆಚ್ಚು ವ್ಯವಹಾರಗಳನ್ನು ಬ್ಯಾಂಕ್‌ಗಳ ಮೂಲಕ ನಡೆಸುವುದರಿಂದ ದೇಶದಲ್ಲಿ ಕಪ್ಪು ಹಣದ ಪ್ರಮಾಣವನ್ನು ಕಡಿಮೆ ಮಾಡಬಹುದು. ಪ್ರಸ್ತುತ ಆರ್ಯಾಪು ಪಂಚಾಯತ್‌ನಲ್ಲಿ ಅತೀ ಹೆಚ್ಚು ಸದಸ್ಯರು ಬಿಜೆಪಿಯವರೇ ಆಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರ ಕನಸು ಈಡೇರಲು ಸಾಧ್ಯವಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಎಫ್‌ಜಿಎಂಓ ಮಣಿಪಾಲ ಇದರ ಫೀಲ್ಡ್ ಜನರಲ್ ಮ್ಯಾನೇಜರ್ ಸತೀಶ್ ಕಾಮತ್ ಹೇಳಿದರು.

ಸಂಪ್ಯದಲ್ಲಿರುವ ಆರ್ಯಾಪು ಗ್ರಾ.ಪಂ ಕಟ್ಟಡದಲ್ಲಿ ಸಿಂಡಿಕೇಟ್ ಬ್ಯಾಂಕ್ ಆರ್ಯಾಪು ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್ ಸ್ಥಾಪನೆಯಾದ ಬಳಿಕ ಗ್ರಾಮೀಣ ಭಾಗದ ಜನರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಕೃಷಿ ಹಾಗೂ ರೈತರ ಅಭಿವೃದ್ಧಿಯ ದೃಷ್ಠಿಯಿಂದ ದೇಶದಲ್ಲಿ ಪ್ರಥಮ ಬಾರಿಗೆ ಕೃಷಿ ಸಾಲ ನೀಡಿದ ಕೀರ್ತಿ ಸಿಂಡಿಕೇಟ್ ಬ್ಯಾಂಕ್‌ಗೆ ಸಲ್ಲುತ್ತದೆ. ಬ್ಯಾಂಕ್‌ಗಳು ರಾಷ್ಟ್ರೀಕೃತಗೊಂಡ ಬಳಿಕ ರಿಸರ್ವ್ ಬ್ಯಾಂಕ್ ಕೃಷಿ ಸಾಲಕ್ಕೆ ಮಾನ್ಯತೆ ಮಾಡಿದೆ. ಪಿಗ್ಮಿ ಸಂಗ್ರಹಣೆಯ ಮೂಲಕ ಬ್ಯಾಂಕ್ ೧೯೨೮ರಲ್ಲಿ ಜನರ ಬಳಿಗೆ ಹೋಗಲು ಪ್ರಾರಂಭಿಸಿದೆ. ಸ್ವ-ಉದ್ಯೋಗಕ್ಕೂ ಬ್ಯಾಂಕ್‌ನಿಂದ ಸಾಲ ದೊರೆಯುತ್ತಿದೆ ಎಂದ ಅವರು, ಈ ಭಾಗದ ಜನರ ಬೇಡಿಕೆಯಂತೆ ಶಾಖೆ ಪ್ರಾರಂಭಿಸಲಾಗಿದ್ದು ಶೀಘ್ರದಲ್ಲೇ ಎಟಿಎಂ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ಡಿಜಿಟಲ್ ಬ್ಯಾಂಕಿಂಗ್‌ಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಶಾಖೆಗಳ ಮುಖಾಂತರ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಜನರಿಗೆ ಅನುಕೂಲವಾಗಲಿದೆ-ಗೀತಾ: ನೂತನ ಶಾಖೆಯನ್ನು ಉದ್ಘಾಟಿಸಿದ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಎಂ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಪ್ರಾರಂಭಗೊಂಡಿದ್ದು ಆರ್ಯಾಪು, ಕುರಿಯ ಎರಡು ಗ್ರಾಮಗಳ ವ್ಯಾಪ್ತಿಯ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಅಕ್ಷಯ ಗ್ರೂಪ್‌ನ ಮ್ಹಾಲಕ ಜಯಂತ ನಡುಬೈಲು ಮಾತನಾಡಿ, ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ರಾಷ್ಟ್ರೀಕೃತ ಬ್ಯಾಂಕ್‌ಗಳ ಸೇವೆಗಳು ಇಂದು ಹಳ್ಳಿಗಳಿಗೂ ವ್ಯಾಪಿಸಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸೇವೆಯು ಜನರಿಗೆ ಹತ್ತಿರವಾಗುತ್ತಿದೆ. ಜನರು ಇದರ ಸಧುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಬ್ಯಾಂಕ್‌ನ ಉಪ ಮಹಾಪ್ರಬಂಧಕ ಎನ್ ಸೀತಾರಾಮ ಸೋಮಯಾಜಿ ಮಾತನಾಡಿ, ೯೧ವರ್ಷಗಳಷ್ಟು ಇತಿಹಾಸವಿರುವ ನಮ್ಮ ಬ್ಯಾಂಕ್ ದೇಶದ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖ ವಹಿಸುತ್ತಿದೆ. ಜಿಲ್ಲೆಯಲ್ಲಿ ೮೩ನೇ ಶಾಖೆಯಾಗಿ ಆರ್ಯಾಪುನಲ್ಲಿ ಪ್ರಾರಂಭಗೊಂಡಿದ್ದು ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸುತ್ತಿದೆ ಎಂದು ಹೇಳಿದರು. ಆರ್ಯಾಪು ಗ್ರಾ.ಪಂ ಪಿಡಿಓ ಜಗದೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಿಕರ ಪರವಾಗಿ ಮಾತನಾಡಿದ ತಾ.ಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವರವರು, ಬೆಳೆಯುತ್ತಿರುವ ಗ್ರಾಮಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ನ ಅವಶ್ಯಕತೆಯಿದೆ. ಶಾಖೆ ತೆರೆಯುವಂತೆ ಜನರ ಬಹುದಿನದ ಬೇಡಿಕೆಯಿದ್ದು ಇದೀಗ ಕಾಲಕೂಡಿ ಬಂದಿದ್ದು ಸಂತೋಷತಂದಿದೆ ಎಂದರು. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಟಿಎಂ ಪ್ರಾರಂಭಿಸಬೇಕು ಎಂದು ಅವರು ಮನವಿ ಮಾಡಿದರು. ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಗೋಕುಲ್‌ನಾಥ್ ಪಿ.ವಿ, ಪ್ರಾಂಶುಪಾಲೆ ಹೇಮಲತಾ, ಆರ್ಯಾಪು ಗ್ರಾ.ಪಂ ಉಪಾಧ್ಯಕ್ಷ ವಸಂತ ಶ್ರೀದುರ್ಗಾ, ಸದಸ್ಯರಾದ ಜಯಂತ ಶೆಟ್ಟಿ, ವಿಶ್ವನಾಥ ಗೌಡ, ತುಳಿಸಿ, ಸುಧಾಮಣಿ, ಜಯಂತಿ, ಕುಸುಮಾ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ಎಪಿಎಂಸಿಯ ಸಿಂಡಿಕೇಟ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪುಂಡಲೀಕ ಸ್ವಾಗತಿಸಿದರು. ಮುರಳೀಧರ ಕಾರ್ಯಕ್ರಮ ನಿರೂಪಿಸಿ, ಆರ್ಯಾಪು ಶಾಖಾ ವ್ಯವಸ್ಥಾಪಕ ವೆಂಕಪ್ಪ ನಾಯ್ಕ ವಂದಿಸಿದರು. ಆರ್ಯಾಪು ಗ್ರಾ.ಪಂ ಸದಸ್ಯ ವಿಜಯ ಬಿ.ಎಸ್, ಕಾರ್ಯದರ್ಶಿ ಪದ್ಮಕುಮಾರಿ, ಪುತ್ತೂರು ಶಾಖೆಯ ವ್ಯವಸ್ಥಾಪಕ ಬಸಪ್ಪ, ಸಿಸಿಎಫ್ ಮ್ಯಾನೇಜರ್ ಜಯಶೀಲ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಶಾಖಾ ಸಿಬಂದಿಗಳಾದ ಎ.ಅಚ್ಚುತ್ತ ನಾಯಕ್ ಹಾಗೂ ಶಂಕರ್ ಸಹಕರಿಸಿದರು.

ಗ್ರಾಹಕರ ಅನಿಸಿಕೆಗಳು

ಆರ್ಯಾಪುನಲ್ಲಿ ಬ್ಯಾಂಕ್ ತೆರೆಯುವಂತೆ ೧೫೦ಕ್ಕೂ ಅಧಿಕ ಮಂದಿಯ ಸಹಿಮಾಡಿ ಬ್ಯಾಂಕ್‌ನ ಪ್ರಾದೇಶಿಕ ಕಛೇರಿಗೆ ಮನವಿ ಮಾಡಿದ್ದೇವೆ. ಅಲ್ಲದೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು, ಶಾಸಕರುಗಳಿಗೆ ಮಾನವಿ ಮಾಡಿದ್ದೇವೆ. ಇದೀಗ ನಮ್ಮ ಬೇಡಿಕೆಯಂತೆ ಶಾಖೆ ಪ್ರಾರಂಭಗೊಂಡಿರುವುದು ಸಂತೋಷ ತಂದಿದೆ.

ಪದ್ಮನಾಭ ನಾಯ, ಕೊಲ್ಯ

ಬ್ಯಾಂಕ್‌ನ ಶಾಖೆ ಪ್ರಾರಂಭಗೊಂಡಿರುವುದು ಅನುಕೂಲವಾಗಿದೆ. ತಂದೆಯ ಪಿಂಚಣಿ ಹಣವು ಸಿಂಡಿಕೇಟ್ ಬ್ಯಾಂಕ್ ಮೂಲಕವೇ ಬರುತ್ತಿದ್ದು ಈ ತನಕ ನಾವು ಪಾಣಾಣೆ ಶಾಖೆಯನ್ನು ಅವಲಂಭಿಸಬೇಕಿತ್ತು. ನಮ್ಮ ಪರಿಸರದಲ್ಲೇ ಶಾಖೆ ಪ್ರಾರಂಭಗೊಂಡಿದ್ದು ಖಾತೆ ವರ್ಗಾಯಿಸಿ ವ್ಯವಹಾರ ಮಾಡಲು ಅನುಕೂಲವಾಗಿದೆ.

ಬಾಬು ನಾಯ್ಕ, ಕಿನ್ನಿಮಜಲು,

ನಮ್ಮ ವ್ಯವಹಾರಗಳು ಸಿಂಡಿಕೇಟ್ ಬ್ಯಾಂಕ್ ಮುಖಾಂತರ ನಡೆಯುತ್ತಿದೆ. ಪುತ್ತೂರು ಶಾಖೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅಲ್ಲಿ ಸಾಲು ನಿಂತು ಕಾಯಬೇಕಾಗಿತ್ತು. ಇಲ್ಲಿ ಶಾಖೆ ಪ್ರಾರಂಭಗೊಂಡಿದ್ದು ನಮಗೆ ವ್ಯವಹರಿಸಲು ಅನುಕೂಲವಾಗಲಿದೆ. ನಮ್ಮ ಖಾತೆಯನ್ನು ಹೊಸ ಶಾಖೆಗೆ ವರ್ಗಾಯಿಸಿ ಇಲ್ಲಿಯೇ ವ್ಯವಹಾರ ಮಾಡಲಾಗುವುದು.

ನವೀನ್ ಕುಕ್ಕಾಡಿ, ಇಲೆಕ್ಟ್ರಿಷಿಯನ್

ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿ ಆರ್ಯಾಪು ಗ್ರಾಮಸ್ಥರ ವ್ಯವಹಾರಗಳು ಸಿಂಡಿಕೇಟ್ ಬ್ಯಾಂಕ್ ಮುಖಾಂತರ ನಡೆಯುತ್ತಿದೆ. ಇದಕ್ಕಾಗಿ ಪಂಚಾಯತ್ ಮುಖಾಂತರ ಮನವಿ ಮಾಡಿ ಶಾಖೆ ತೆರೆಯುವಂತೆ ಒತ್ತಾಯಿಸಿದ್ದೇವೆ. ಪಂಚಾಯತ್ ಕಟ್ಟಡದಲ್ಲೇ ಶಾಖೆ ಪ್ರಾರಂಭಗೊಂಡಿದ್ದು ಗ್ರಾಮಸ್ಥರಿಗೆ ಸುಲಭವಾಗಿ ವ್ಯವಹರಿಸಬಹುದಾಗಿದೆ.

ವಸಂತ ಗೌಡ, ಕುಕ್ಕಾಡಿ, ವ್ಯಾಪಾರಸ್ಥ

ಉಡುಪಿ ಹಾಗೂ ದ.ಕ ಜಿಲ್ಲೆಯಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರುವವರ ಸಂಖ್ಯೆ ತೀರಾ ಕಡಿಮೆ. ಇದರಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಗ್ರಾಹಕರ ಜೊತಗೆ ಸಂವಹನದ ಕೊರತೆಯಿದೆ. ಬ್ಯಾಂಕಿಂಗ್ ಪರೀಕ್ಷೆಗಳು ನಡೆದರೂ ಹಾಜರಾಗುವವರ ಸಂಖ್ಯೆ ತೀರಾ ಕಡಿಮೆ. ಇದರಿಂದಾಗಿ ಇತರ ರಾಜ್ಯಗಳ ಸಿಬಂದಿಗಳನ್ನು ನೇಮಕ ಮಾಡುವುದು ಅನಿವಾರ್ಯವಾಗಿದೆ. ಜಿಲ್ಲೆಯ ಬ್ಯಾಂಕ್‌ಗಳಲ್ಲಿರುವ ಭಾಷಾ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯುವ ಜನತೆ ಬ್ಯಾಂಕಿಂಗ್ ಕ್ಷೇತ್ರದತ್ತ ಆಕರ್ಷಿತರಾಗಬೇಕು. ಜಿಲ್ಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕಿಂಗ್ ಕೇತ್ರಕ್ಕೆ ಬಂದರೆ ಭಾಷಾ ಸಮಸ್ಯೆ ನಿವಾರಣೆಯಾಗುತ್ತದೆ.

-ಸತೀಶ್ ಕಾಮತ್, ಫೀಲ್ಡ್ ಜನರಲ್ ಮ್ಯಾನೇಜರ್, ಎಫ್‌ಜಿಎಂಓ ಮಣಿಪಾಲ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.