ಶಿರಾಡಿ ರಸ್ತೆ: ನೆನೆಗುದಿಗೆ ಬಿದ್ದ 2ನೇ ಹಂತದ ಕಾಮಗಾರಿ ಇನ್ನೂ ವಿಳಂಬ, ಡಿಸೆಂಬರ್ ಮುನ್ನ ಆರಂಭ ಅನುಮಾನ..!

Puttur_Advt_NewsUnder_1
Puttur_Advt_NewsUnder_1
  • ವರ್ಷ ಕಳೆದರೂ ಆರಂಭ ಆಗದ ಕಾಮಗಾರಿ
  • ಕಾಮಗಾರಿ ಆರಂಭದಿಂದಲೇ ಘಾಟ್ ರಸ್ತೆ ಬಂದ್
  • ಧರ್ಮಸ್ಥಳ-ಗುಂಡ್ಯ-ಸುಬ್ರಹ್ಮಣ್ಯ ರಸ್ತೆ ಆರಂಭದಲ್ಲಿ ಬಂದ್ ಇಲ್ಲ
  • ಮಳೆ ಕಡಿಮೆ ಆದ ಬಳಿಕ ಆರಂಭ-ರಾಘವನ್

advt-jpg1

advt-jpg2
ವಿಶೇಷ ವರದಿ/ಚಿತ್ರಗಳು: ಸಿದ್ದಿಕ್ ನೀರಾಜೆ
ಉಪ್ಪಿನಂಗಡಿ: ಶಿರಾಡಿ ಘಾಟ್ ೨ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳೆದ ೧ ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಕಳೆದ ಮಳೆಗಾಲ ಮುಗಿದ ಬಳಿಕ ಜನವರಿ ತಿಂಗಳಿನಲ್ಲಿ ಆರಂಭ ಆಗಬೇಕಾಗಿದ್ದ ಕಾಮಗಾರಿ ಇನ್ನೂ ಆರಂಭ ಆಗದೆ ಇದ್ದು, ಈ ವರ್ಷದಲ್ಲಿ ಆರಂಭ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಡಿಸೆಂಬರ್ ಕೊನೆಗೆ ಅಥವಾ ಮುಂದಿನ ಜನವರಿ ಬಳಿಕವಷ್ಟೇ ಕಾಮಗಾರಿ ಆರಂಭ ಆಗುವ ಸಾಧ್ಯತೆಗಳು ವ್ಯಕ್ತವಾಗಿದೆ. ಶಿರಾಡಿ ಘಾಟ್-ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ ೧೨.೩೮ ಕಿ.ಮೀ ಕಾಂಕ್ರೀಟ್ ರಸ್ತೆ ೨ನೇ ಹಂತದ ಕಾಮಗಾರಿಗೆ ೮೫.೨೮ ಕೋಟಿ ರೂಪಾಯಿ ಮಂಜೂರು ಆಗಿದ್ದು, ಇದರಲ್ಲಿ ೧೨.೩೮ ಕಿ.ಮೀ. ಕಾಂಕ್ರಿಟೀಕರಣಕ್ಕೆ ೬೩.೧೦ ಕೋಟಿ ರೂಪಾಯಿ, ಉಳಿದಂತೆ ೨೧ ಕಿ.ಮಿ. ಡಾಂಬರೀಕರಣಕ್ಕೆ ೨೨.೧೮ ಕೋಟಿ ರೂಪಾಯಿ ಮೀಸಲು ಇಡಲಾಗಿದ್ದು, ಕಾಂಕ್ರೀಟ್ ರಸ್ತೆ ೮.೫ ಮೀಟರ್, ಡಾಂಬರೀಕರಣ ೭ ಮೀಟರ್ ಅಗಲ ಇದ್ದು, ಈ ಮಧ್ಯೆ ೫೦ ಅಡ್ಡ ಮೋರಿಗಳು ಆಗಬೇಕಾಗಿದೆ. ವರ್ಷದ ಹಿಂದೆ ಪ್ರಾರಂಭ ಆಗಿ ಪೂರ್ಣಗೊಳ್ಳಬೇಕಾಗಿದ್ದ ಕಾಮಗಾರಿ ಇಲ್ಲಿ ಇನ್ನೂ ಆರಂಭವೇ ಆಗದೆ ಬಾಕಿ ಉಳಿದಿದೆ.

ಇನ್ನೂ ಬಾರದ ಯಂತ್ರಗಳು: ಕಾಮಗಾರಿ ಆರಂಭಿಸಲು ಇಲ್ಲಿಗೆ ಅಗತ್ಯ ಯಂತ್ರಗಳು ಬಾರದೇ ಇದ್ದುದರಿಂದಾಗಿ ವಿಳಂಬ ಆಗಿದೆ ಎಂದು ಹೇಳಲಾಗುತ್ತಿದ್ದು, ಕಾಂಕ್ರೀಟು ಮಿಕ್ಸಿಂಗ್‌ಗೆ ಸಿಮೆಂಟು ಮಿಶ್ರಣದ ಯಂತ್ರ ಮಾತ್ರ ಬಂದಿದೆ. ಉಳಿದಂತೆ ಅಗತ್ಯ ಯಂತ್ರಗಳು ಬಾರದೇ ಇರುವುದರಿಂದಾಗಿ ಕಾಮಗಾರಿ ಇನ್ನೂ ವಿಳಂಬ ಆಗಲಿದೆ ಎಂದು ಹೇಳಲಾಗುತ್ತಿದೆ.
ಸಬ್ ಗುತ್ತಿಗೆ: ರಸ್ತೆ ಕಾಮಗಾರಿ ಮೆ| ಜಿ.ವಿ.ಆರ್. ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಟೆಂಡರು ಆಗಿದ್ದರೂ, ಸಂಸ್ಥೆ ಈ ಕಾಮಗಾರಿಯನ್ನು “ಸೂರ್ಯೋದಯ ಕನ್‌ಸ್ಟ್ರಕ್ಷನ್, ಬೆಂಗಳೂರು” ಸಂಸ್ಥೆಗೆ ವಹಿಸಿಕೊಟ್ಟಿದೆ. ಅದರಂತೆ ಈ ಸಂಸ್ಥೆ ೨೦೧೫ರ ಅಕ್ಟೋಬರ್ ಬಳಿಕ ಗುಂಡ್ಯ ಅಡ್ಡಹೊಳೆ ಎಂಬಲ್ಲಿ ಮಿಕ್ಸಿಂಗ್‌ಗಾಗಿ ಜಾಗ ಗುರುತಿಸಿಕೊಂಡು ಕಾಮಗಾರಿಗೆ ಬೇಕಾಗುವ ಮರಳು, ಜಲ್ಲಿ, ಕಬ್ಬಣ ಮೊದಲಾದ ಕಚ್ಛಾ ಸಾಮಾಗ್ರಿಗಳು ಶೇಕಡಾ ೫೦ರಷ್ಟು ದಾಸ್ತಾನು ಮಾಡಲಾಗಿದ್ದು, ಯಂತ್ರೋಪಕರಣಗಳು ಆಗಮಿಸಿದ ಬಳಿಕವಷ್ಠೇ ಕಾಮಗಾರಿ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಆರಂಭ ಆಗಬೇಕಿತ್ತು: ಮೊದಲನೇ ಹಂತದ ಕಾಮಗಾರಿ ೨೩೭.೦೦ (ಹೆಗ್ಗದ್ದೆ) ರಿಂದ ೨೫೦.೬೨೦(ಕೆಂಪುಹೊಳೆ)ವರೆಗೆ ೧೧.೭೭ ಕಿ.ಮೀ. ಕಾಂಕ್ರಿಟೀಕರಣ ೬೯.೯೦ ಕೋಟಿ ರೂಪಾಯಿಯಲ್ಲಿ ಆಗಿದ್ದು ೨೦೧೫ ಆಗಸ್ಟ್ ೯ರಂದು ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪರವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಕೇಂದ್ರ ಭೂಸಾರಿಗೆ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಉಪಸ್ಥಿತಿಯಲ್ಲಿ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಸಚಿವರು ೨ನೇ ಹಂತದ ಕಾಮಗಾರಿ “ಮೆ| ಜಿ.ವಿ.ಆರ್. ಕನ್‌ಸ್ಟ್ರಕ್ಷನ್ ಹೈದರಾಬಾದ್ ಸಂಸ್ಥೆಗೆ ಟೆಂಡರ್ ಆಗಿದ್ದು, ಸೆಪ್ಟೆಂಬರ್ ಯಾ ಮಳೆಗಾಲ ಮುಗಿದ ಬಳಿಕ ಕಾಮಗಾರಿ ಆರಂಭ ಆಗಲಿದೆ” ಎಂದು ತಿಳಿಸಿದ್ದರು. ಆದರೆ ಆ ಬಳಿಕ ೨ ಮಳೆಗಾಲ ಮುಗಿಯುತ್ತಾ ಬಂದಿದ್ದರೂ ಕಾಮಗಾರಿ ಮಾತ್ರ ಆರಂಭ ಆಗಲೇ ಇಲ್ಲ.

ಬಂದಿದ್ದ ಯಂತ್ರ ತೆರವು: ಇಲ್ಲಿಗೆ ಕಳೆದ ಜನವರಿ ತಿಂಗಳಿನಲ್ಲಿ ಬೃಹತ್ ಫೇವರ್ ಯಂತ್ರವೊಂದನ್ನು ತಂದಿರಿಸಲಾಗಿತ್ತು, ಬಳಿಕ ಅದನ್ನು ಇದೇ ಸಂಸ್ಥೆಯ ಮೂಲಕ ನಡೆಯುವ ಜಾವಗಲ್-ಬಾಣಾವರ ರಸ್ತೆ ಕಾಮಗಾರಿ ನಡೆಯುವಲ್ಲಿಗೆ ಕೊಂಡೊಯ್ಯಲಾಗಿದೆ ಎಂದು ಹೇಳಲಾಗಿತ್ತು. ಹೀಗಾಗಿ ಕಳೆದ ೧ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿ ಪ್ರಾರಂಭ ಆಗದೇ ಇದ್ದುದರಿಂದಾಗಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದ್ದು, ಸಂಸ್ಥೆಯ ವಿರುದ್ಧ ವ್ಯಾಪಕ ದೂರುಗಳು ವ್ಯಕ್ತವಾಗಿದೆ. ಒಟ್ಟಿನಲ್ಲಿ ೨ನೇ ಹಂತದ ಕಾಂಕ್ರಿಟೀಕರಣ ಕಾಮಗಾರಿ ಯಾಕೆ ಆರಂಭ ಆಗುತ್ತಿಲ್ಲ ಎನ್ನುವುದು ಸಾರ್ವತ್ರಿಕ ಪ್ರಶ್ನೆಯಾಗಿದೆ.

ಅ. ೧೫ರಿಂದ ಬಂದ್ ಆಗಲ್ಲ, ಮಳೆ ಕಡಿಮೆ ಆದ ತಕ್ಷಣ ಆರಂಭ-ರಾಘವನ್: ಕಾಮಗಾರಿ ಆರಂಭ ಮಾಡುವುದಕ್ಕೆ ಅಗತ್ಯ ಫೇವರ್ ಯಂತ್ರವೊಂದು ಬರುವುದಕ್ಕೆ ಬಾಕಿ ಇರುವುದರಿಂದಾಗಿ ವಿಳಂಬ ಆಗಿದೆ, ಆದರೆ ಅ. ೧೫ರಿಂದ ಶಿರಾಡಿ ಘಾಟ್ ರಸ್ತೆ ಬಂದ್ ಆಗಲ್ಲ, ಏನಿದ್ದರೂ ಮಳೆ ಕಡಿಮೆ ಆದ ಬಳಿಕ ಕಾಮಗಾರಿ ಆರಂಭ ಆಗಲಿದ್ದು, ಆ ಬಳಿಕ ಬಂದ್ ಆಗಲಿದೆ. ಕಾಮಗಾರಿ ಪೂರ್ಣಗೊಳಿಸಲು ೨೦೧೬ ಜೂನ್ ತನಕ ಅವಧಿ ಇದೆ, ಮಾರ್ಚ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಸುಪರಿಂಟೆಂಡೆಂಟ್ ಇಂಜಿನಿಯರ್ ರಾಘವನ್ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಕಾಮಗಾರಿ ಆರಂಭದಿಂದಲೇ ಘಾಟ್ ರಸ್ತೆ ಬಂದ್: ಧರ್ಮಸ್ಥಳ-ಗುಂಡ್ಯ-ಸುಬ್ರಹ್ಮಣ್ಯ ರಸ್ತೆ ಆರಂಭದಲ್ಲಿ ಬಂದ್ ಇಲ್ಲ-ಸೂರ್‍ಯೋದಯ: ಕಾಮಗಾರಿ ಆರಂಭ ಆಗುವಾಗಲೇ ಶಿರಾಡಿ ಘಾಟ್ ಬಂದ್ ಮಾಡಬೇಕಾಗುತ್ತದೆ, ಇಲ್ಲಿ ೨ ಮೀಟರ್ ರಸ್ತೆ ಅಗಲ ಆಗುವುದರಿಂದಾಗಿ ಒಂದು ಬದಿಯಲ್ಲಿ ಕಾಮಗಾರಿ ನಡೆಯುವಾಗ ಇನ್ನೊಂದು ಬದಿಯಲ್ಲಿ ವಾಹನಗಳ ಓಡಾಟ ಅಸಾಧ್ಯ ಮತ್ತು ಕಾಮಗಾರಿ ನಡೆಸುವುದಕ್ಕೂ ಕಷ್ಟ ಆಗಲಿದೆ. ಆದ ಕಾರಣ ಘಾಟ್ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಕೇಳಿ ಕೊಳ್ಳಲಾಗಿದೆ ಮತ್ತು ಧರ್ಮಸ್ಥಳ-ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯನ್ನು ಕೊನೆ ಕ್ಷಣದಲ್ಲಿ ಈ ಭಾಗದಲ್ಲಿ ಕಾಮಗಾರಿ ನಡೆಸುವಾಗ ಮಾತ್ರ ಬಂದ್ ಮಾಡುವುದಾಗಿದೆ ಎಂದು ಕಾಮಗಾರಿಯ ಗುತ್ತಿಗೆ ಸಂಸ್ಥೆ “ಸೂರ್‍ಯೋದಯ ಕನ್‌ಸ್ಟ್ರಕ್ಷನ್, ಬೆಂಗಳೂರು” ಸಂಸ್ಥೆಯ ಯೋಜನಾ ವ್ಯವಸ್ಥಾಪಕ ರಾಮ್‌ಜಿ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.