Breaking News

ರಾಜೇಶ್ ಬನ್ನೂರುರವರು ಮೊದಲು ಮಹಿಳೆಯರಿಗೆ ಗೌರವ ಕೊಡುವುದನ್ನು  ಕಲಿಯಲಿ ಹಾಗೂ ಒಳ್ಳೆಯ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಲಿ-ಜಯಂತಿ ಬಲ್ನಾಡು

Puttur_Advt_NewsUnder_1
Puttur_Advt_NewsUnder_1

ಅಧ್ಯಕ್ಷರನ್ನು ಅವಮಾನಿಸಿಲ್ಲ: ಬನ್ನೂರು ನಗರಸಭಾಧ್ಯಕ್ಷರನ್ನು ಅವಮಾನಿಸಿ ನಾನು ಯಾವುದೇ ಮಾತನಾಡಿಲ್ಲ.ಅವರು ಒಳ್ಳೆಯವರು. ಅವರನ್ನು ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಒಂದು ವೇಳೆ ಅವರು ತಪ್ಪಿ ಏನಾದರೂ ಹೇಳಿಕೆ ನೀಡಿದರೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇವೆ ಎಂದು ನಾನು ಹೇಳಿದ್ದೆ ಎಂದು ರಾಜೇಶ್ ಬನ್ನೂರು ಪ್ರತಿಕ್ರಿಯಿಸಿದ್ದಾರೆ. ಬ್ರೋಕರ್‌ಗಳ, ಗುತ್ತಿಗೆದಾರರ ಪರ ಇರುವವರು ಯಾರು ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿರುವ ರಾಜೇಶ್ ಬನ್ನೂರು, ಅಧ್ಯಕ್ಷರು ರಬ್ಬರ್ ಸ್ಟ್ಯಾಂಪ್ ಎಂಬ ತನ್ನ ಹೇಳಿಕೆಗೆ ನಾನು ಬದ್ಧ ಎಂದು ಹೇಳಿದ್ದಾರೆ. ಪರವಾನಿಗೆ ರಹಿತವಾಗಿ ಉದ್ಯಮ ನಡೆಸುವ ವಿಚಾರ ಪ್ರಸ್ತಾಪಿಸಿ, ತಾಕತ್ತು ಇದ್ದರೆ ನೀವೇ ನಿಮ್ಮ ಹೆಸರಲ್ಲಿ ಸ್ವತ: ಪರವಾನಿಗೆ ರಹಿತವಾಗಿ ನಗರಸಭೆಗೆ ಸಡ್ಡು ಹೊಡೆದು ಉದ್ಯಮ ನಡೆಸಿ ಆಗ ನೋಡೋಣ ಎನ್ನುವ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬನ್ನೂರು, ನಾನು ಮತ್ತು ಜಯಂತಿ ನಾಯ್ಕ್ ಅಂಗಡಿಯಲ್ಲಿ ಪಾಲುದಾರರು, ನಗರಸಭಾ ಸದಸ್ಯರಾಗಿರುವ ಕಾರಣಕ್ಕಾಗಿ ನಮಗೆ ಲೈಸೆನ್ಸ್ ಪಡೆದುಕೊಳ್ಳಲಾಗದ ಕಾರಣ ಲೈಸೆನ್ಸ್ ಬೇರೆಯವರ ಹೆಸರಿನಲ್ಲಿ ಕೇಳಿರುವುದು ಹೊರತು ಯಾರ್‍ಯಾರೋ ಅಮಾಯಕರನ್ನು ಪುಸಲಾಯಿಸಿ, ಪರವಾನಿಗೆ ರಹಿತವಾಗಿ ಉದ್ಯಮ ನಡೆಸಲು ಪ್ರೋತ್ಸಾಹಿಸಿಲ್ಲ ಎಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪುತ್ತೂರು ನಗರಸಭಾ ಅಧ್ಯಕ್ಷಳಾಗಿ ಕಳೆದ ೫ ತಿಂಗಳಿನಿಂದ ಭ್ರಷ್ಟಾಚಾರ ರಹಿತವಾದ ಜನಪರವಾದ ಉತ್ತಮ ಆಡಳಿತವನ್ನು ನೀಡುತ್ತಿದ್ದೇನೆ. ರಾಜೇಶ್ ಬನ್ನೂರುರವರು ಅಧ್ಯಕ್ಷರಾಗಿ ಎರಡುವರೆ ವರ್ಷದಲ್ಲಿ ಮಾಡದಂತಹ ಕೆಲಸವನ್ನು ನಾನು ೫ ತಿಂಗಳಲ್ಲಿ ಮಾಡಿ ತೋರಿಸಿರುತ್ತೇನೆ. ರಾಜೇಶ್ ಬನ್ನೂರುರವರು ಅಧ್ಯಕ್ಷರಾಗಿ ಅನುಭವವಿದ್ದರೂ ಕೌನ್ಸಿಲ್ ಸಭೆಯಲ್ಲಿ ಅಜೆಂಡಾ ಬಿಟ್ಟು ಮಾತನಾಡುವುದು, ಅಸಂಬದ್ದ ಪ್ರಶ್ನೆಗಳನ್ನು ಕೇಳುವುದು ನಗರಸಭಾ ಸದಸ್ಯರನ್ನು ‘ಹುಚ್ಚ’ ಎಂದು ಅಸಂವಿಧಾನಿಕ ಪದವನ್ನು ಬಳಸಿ ಗಲಭೆ ಎಬ್ಬಿಸಿರುವಂತಹ ವ್ಯಕ್ತಿಯಾಗಿದ್ದು, ಇಂತಹವರಿಂದ ನಾನು ಪಾಠ ಕಲಿಯಬೇಕಾಗಿಲ್ಲ. ಗೌರವ  ಕೊಡದೆ ಅಹಂಕಾರದಲ್ಲಿ ಮಾತನಾಡುತ್ತಿರುವ ರಾಜೇಶ್ ಬನ್ನೂರುರವರು ಮೊದಲು ಮಹಿಳೆಯರಿಗೆ ಗೌರ ಕೊಡುವುದನ್ನು ಕಲಿಯಲಿ ಹಾಗೂ ಒಳ್ಳೆ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಲಿ ಎಂದು ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು ಹೇಳಿದ್ದಾರೆ. ನನ್ನನ್ನು ರಬ್ಬರ್ ಸ್ಟಾಂಪ್, ಕೋಮದಲ್ಲಿದ್ದೇನೆ ಎಂಬ ಪದವನ್ನು ಬಳಕೆ ಮಾಡಿ ಹೀಯಾಳಿಸಿ ಪತ್ರಿಕೆ ಹೇಳಿಕೆ ನೀಡಿ ಓರ್ವ ಪರಿಶಿಷ್ಟ ಪಂಗಡ ಮಹಿಳೆಯಾದ ನನ್ನನ್ನು ಅವಮಾನಿಸಿರುವ ಇವರ ನಡವಳಿಕೆಯಿಂದ ತಾನು ಎಂತಹ ವ್ಯಕ್ತಿ ಎಂದು ತೋರಿಸಿಕೊಟ್ಟಿರುತ್ತಾರೆ. ನನ್ನ ರಾಜಿನಾಮೆ ಕೇಳಲು ಇವರು ಯಾರು? ನಾನು ಇವರ ಹಂಗಿನಿಂದ ಅಧ್ಯಕ್ಷಳಾಗಿರುವುದಿಲ್ಲ.

ನನ್ನಲ್ಲಿ ಚರ್ಚಿಸಿ ನನ್ನ ಒಪ್ಪಿಗೆ ಮೇರೆಗೆ ಅಹಮ್ಮದ್ ಆಲಿಯವರು ಪತ್ರಿಕೆ ಹೇಳಿಕೆ ನೀಡುತ್ತಿದ್ದಾರೆ ನಮ್ಮ ಆಡಳಿತದಲ್ಲಿ ನನ್ನ ಪಕ್ಷದ ಹಿರಿಯ ಅನುಭವಿ ಸದಸ್ಯರಾದ ಮಹಮ್ಮದ್ ಆಲಿ ಹಾಗೂ ಇನ್ನಿತರ ನಗರಸಭಾ ಸದಸ್ಯರ ಸಲಹೆ ಸೂಚನೆ ಪಡಕೊಂಡೆ ಅಂತಿಮ ತೀರ್ಮಾನಕ್ಕೆ ಬಂದು ಒಳ್ಳೆಯ ಆಡಳಿತ ನಡೆಸುತ್ತಿದ್ದೇನೆ. ನನ್ನ ಪರವಾಗಿ ಯಾರು ಹೇಳಿಕೆ ನೀಡಬೇಕು ಎಂಬುದರ ಬಗ್ಗೆ ತೀರ್ಮಾನಿಸುವ ಅಧಿಕಾರ ನನಗೆ ಇರುತ್ತದೆ ಇದನ್ನು ಪ್ರಶ್ನಿಸುವ ಅಧಿಕಾರ ಹಾಗೂ ನೈತಿಕತೆ ರಾಜೇಶ್ ಬನ್ನೂರುರವರಿಗಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಜಯಂತಿ ಬಲ್ನಾಡು, ನಾನು ಅಧಿಕಾರಕ್ಕೆ ಬಂದು ೫ ತಿಂಗಳಲ್ಲಿ ಮಾಡಿರುವ ಎಲ್ಲಾ ಜನಪರ ಕಾರ್ಯಕ್ರಮಗಳಿಗೆ ಇವರು ಅಡ್ಡಿ ಪಡಿಸಿದ್ದೇ ಹೊರತು ಸಹಕಾರ ನೀಡಿರುವುದಿಲ್ಲ. ಅಕ್ರಮ ಕಟ್ಟಡ, ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ಹಾಗೂ ಬ್ರೋಕರ್‌ಗಳ ಪರವಾಗಿ ಯಾವಾಗಲೂ ಇರುವ ರಾಜೇಶ್ ಬನ್ನೂರುರವರು ಸಂತೆ ವಿಚಾರದಲ್ಲಿ ಯಾಕಿಷ್ಟು ಗದ್ದಲ ಎಬ್ಬಿಸುತ್ತಿದ್ದಾರೆ ಎಂಬುದರ ಬಗ್ಗೆ ಹಾಗೂ ಇದರ ಹಿಂದೆ ಇರುವ ಮರ್ಮವೇನೆಂಬುದರ ಬಗ್ಗೆ ಪುತ್ತೂರಿನ ಜನತೆಗೆ ಗೊತ್ತಿದೆ. ಕೊಳಚೆ ಪೈಪು ವಿಚಾರಕ್ಕೆ ಸಂಬಂಧಿಸಿದಂತೆ ೫೦ ಜನರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ್ದೇವೆ ಎಂದು ಸುಳ್ಳು ಹೇಳಿಕೆಯನ್ನು ನೀಡಿರುವುದನ್ನು ನಾನು ಖಂಡಿಸುತ್ತೇನೆ. ಯಾವುದೇ ಪತ್ರಿಕೆ ಹೇಳಿಕೆ ನೀಡುವಾಗ ದಾಖಲೆ ಇಟ್ಟು ಮಾತನಾಡಲಿ ಇಲ್ಲದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಎದುರಿಸಬೇಕಾದೀತು ಎಂದು ಎಚ್ಚರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನಾನು ತಿಂಗಳಿಗೆ ಒಮ್ಮ ಸಭೆ ಕರೆಯುವುದಿಲ್ಲ ಎಂದು ಆರೋಪಿಸಿರುತ್ತಾರೆ. ಇವರು ಅಧ್ಯಕ್ಷರಾಗಿದ್ದಾಗ ಹಾಗೂ ಬಳಿಕದ ಬಿಜೆಪಿ ಆಡಳಿತದಲ್ಲಿ ತಿಂಗಳಿಗೆ ಸರಿಯಾಗಿ ಸಭೆ ಕರೆದಿದ್ದಾರೆಯೇ? ಎಂದು ಪ್ರಶ್ನಿಸಿದ ಅಧ್ಯಕ್ಷರು, ಪರವಾನಗಿ ರಹಿತವಾಗಿ ಉದ್ಯಮ ನಡೆಸುತ್ತೇವೆ ಎಂದು ನಗರಸಭಾ ಕಾನೂನಿಗೆ ಸವಾಲು ಹಾಕಿರುವ ರಾಜೇಶ್ ಬನ್ನೂರುರವರೇ ತಾಕತ್ತು ಇದ್ದಲ್ಲಿ ನಿಮ್ಮ ಹೆಸರಲ್ಲಿ ನೀವೇ ಸ್ವತಃ ಪರವಾನಗಿ ರಹಿತವಾಗಿ ನಗರಸಭೆಗೆ ಸೆಡ್ಡು ಹೊಡೆದು ಉದ್ಯಮ ನಡೆಸಿ ಆಗ ನೋಡೋಣ. ಯಾರೋ ಅಮಾಯಕರನ್ನು ಪುಸಲಾಯಿಸಿ ಅವರಿಂದ ಪರವಾನಿಗೆ ರಹಿತವಾಗಿ ಉದ್ಯಮ ನಡೆಸಲು ಪ್ರೋತ್ಸಾಹಿಸಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಬೇಡಿ. ನಿಮ್ಮ ಅಧಿಕಾರದ ಅವಧಿಯಲ್ಲಿ ಏನೆಲ್ಲಾ ಘನಂದಾರಿ ಕೆಲಸ ಮಾಡಿರುತ್ತೀರಿ ಎಂಬುದರ ಬಗ್ಗೆ ನಮ್ಮಲ್ಲಿ ದಾಖಲೆ ಇರುತ್ತದೆ ಎಂದು ಹೇಳಿಕೆಯಲ್ಲಿ ಅಧ್ಯಕ್ಷೆ ಜಯಂತಿ ಬಲ್ನಾಡು ತಿಳಿಸಿದ್ದಾರೆ.

ಈ ಹಿಂದೆ ಉಷಾ ನಾಯಕ್, ಪ್ರೇಮಲತಾ ರಾವ್, ಸುಗುಣ ಶೆಟ್ಟಿ, ಕಮಲಾ ಆನಂದ್ ಎಂಬ ಮಹಿಳೆಯರು ಬಿಜೆಪಿ ಆಡಳಿತದಲ್ಲಿ ಅಧ್ಯಕ್ಷರಾಗಿದ್ದಾಗ ಅವರ ಪರವಾಗಿ ರಾಜೇಶ್ ಬನ್ನೂರು ಹಾಗೂ ಜೀವಂಧರ್ ಜೈನ್ ಮಾತಾನಾಡುತ್ತಿರಲಿಲ್ಲವೇ..? ಕೌನ್ಸಿಲ್ ಸಭೆಯಲ್ಲಿ ಈ ಮಹಿಳಾ ಅಧ್ಯಕ್ಷರ ಪರವಾಗಿ ಇವರಿಬ್ಬರೂ ಉತ್ತರ ನೀಡುತ್ತಿರಲಿಲ್ಲವೇ…? ಈಗ ಯಾಕೆ ಇವರಿಗೆ ಹೊಟ್ಟೆ ಕಿಚ್ಚು.- ಜಯಂತಿ ಬಲ್ನಾಡು, ನಗರಸಭಾಧ್ಯಕ್ಷರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.