ಪುತ್ತೂರು: ವರ್ಲ್ಡ್ ವುಮೆನ್ ಲೀಡರ್ಶಿಪ್ ಕಾಂಗ್ರೆಸ್ ಡಾ. ಆಶಾ ಶಂಕರ್ ಭಂಡಾರಿಯವರಿಗೆ ‘ಸುಪರ್ ವುಮೆನ್ ಅಚೀವರ್’ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ಡಾ. ಆಶಾರವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಟೆಲಿಕಾಂ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಪುತ್ತೂರಿನ ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದು, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಳಿಯೂರುಕಟ್ಟೆ ಸ.ಹಿ.ಪ್ರಾ. ಶಾಲೆ ಹಾಗೂ ಕುರಿಯ ಸ.ಹಿ.ಪ್ರಾ. ಶಾಲೆಗಳಲ್ಲಿ ಮಾಡಿರುತ್ತಾರೆ. ಪದವಿ ಶಿಕ್ಷಣವನ್ನು ಮಂಗಳೂರಿನ ಬೆಸೆಂಟ್ ವುಮೆನ್ಸ್ ಕಾಲೇಜು ಮತ್ತು ಮೈಸೂರಿನ ಮಹಾರಾಜಾ ಕಾಲೇಜುಗಳಲ್ಲಿ ಪಡೆದು, ಎಂ.ಎಸ್.ಡಬ್ಲ್ಯು. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸುವುದರೊಂದಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು. ಮುಂದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನವ ಸಂಪನ್ಮೂಲ ವಿಭಾಗದಲ್ಲಿ ಡಾಕ್ಟರೇಟ್ (ಪಿಎಚ್.ಡಿ.) ಪದವಿ ಗಳಿಸಿದ್ದಾರೆ. ಮಾನವ ಸಂಪನ್ಮೂಲ ಕಾರ್ಯ ಕ್ಷೇತ್ರದಲ್ಲಿ ಅಭ್ಯಸಿಸುತ್ತಿರುವ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವುದು ಇವರ ಹವ್ಯಾಸ. ಇವರು ಕಾರ್ಯನಿಮಿತ್ತ ಡೆನ್ಮಾರ್ಕ್, ಯು.ಎ.ಇ., ಜಪಾನ್, ಸಿಂಗಾಪೂರ್, ಚೈನಾ, ಹಾಂಗ್ಕಾಂಗ್ ಮುಂತಾದ ದೇಶಗಳಿಗೆ ಪ್ರಯಾಣ ಮಾಡಿ ತಮ್ಮ ಕಾರ್ಯಶೀಲತೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಪ್ರಾಥಮಿಕ ಶಾಲೆಯಲ್ಲಿರು ವಾಗಲೇ ಆಟೋಟ ಸ್ಪರ್ಧೆಗಳಲ್ಲಿ ಆಸಕ್ತಿ ವಹಿಸಿದ್ದ ಇವರ ಕ್ರೀಡಾ ಪ್ರತಿಭೆ ಯನ್ನು ಗುರುತಿಸಿ ಕರ್ನಾಟಕ ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆ ಯು ಕ್ರೀಡಾ ಹಾಸ್ಟೆಲ್ಗೆ ಆಯ್ಕೆ ಮಾಡಿ ತರಬೇತಿ ನೀಡಿತ್ತು. ಮಂಗಳೂರು, ಮೈಸೂರು ವಿಶ್ವವಿದ್ಯಾ ನಿಲಯ, ಕರ್ನಾಟಕ ರಾಜ್ಯ ಹಾಗೂ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಹತ್ತು ಹಲವು ಕ್ರೀಡಾಕೂಟಗಳಲ್ಲಿ ಹಲವಾರು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಇವರು ಕುರಿಯ ಗ್ರಾಮದ ಡಿಂಬ್ರಿಗುತ್ತು ಕೊರಗಪ್ಪ ರೈ ಮತ್ತು ಬೆಳಿಯೂರುಬೀಡು ವಸಂತಿ ಕೆ. ರೈರವರ ಪುತ್ರಿ.