ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1

‘ಸಾಮಾಜಿಕ ಬದ್ಧತೆಯ ಪೇಸ್ ಸಮಾಜದ ಫೇಸ್ ಆಗಲಿ’

ಪುತ್ತೂರು: ಬದ್ಧತೆ ಹಾಗೂ ಸಂಬಂಧ ಎಂಬುದು ಕೇವಲ ಕಾಗದದಲ್ಲಿ ಉಳಿಯುವಂತಹ ಕೆಲಸವಾಗಬಾರದು. ಸಾಮಾಜಿಕ ಬದ್ಧತೆ ಹಾಗೂ ಸಂಬಂಧ ಗಟ್ಟಿಯಾಗಬೇಕಾದರೆ ವ್ಯಕ್ತಿಯಲ್ಲಿನ ಮನಸ್ಥಿತಿಯು ಅಸ್ಥಿರವಾಗಿ ಕೆಲಸ ಮಾಡದೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದು ಅಂಕಣಕಾರ ಮತ್ತು ಪತ್ರಕರ್ತರಾದ ನಾ.ಕಾರಂತ ಪೆರಾಜೆರವರು ಹೇಳಿದರು.

ಅವರು ಅ.12 ರಂದು ಸಂಜೆ ಜೈನ ಭವನದ ಬಳಿಯ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆದ ನೆಹರುನಗರ ಸತ್‌ಚಿತ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್(ಪೇಸ್)ನ 2016-17ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ಬದುಕನ್ನು ಕಟ್ಟಿಕೊಳ್ಳಲು ನಾವು ಸೇವಿಸುವ ನೀರು ಮತ್ತು ಆಹಾರ ಪ್ರಮುಖ ಪಾತ್ರ ವಹಿಸುತ್ತದೆ ಮಾತ್ರವಲ್ಲದೆ ದೊಡ್ಡ ಸವಾಲಾಗಿಯೂ ಪರಿಣಮಿಸಿದೆ. ಕಳೆದ ಬೇಸಗೆಯಲ್ಲಿ ನೀರಿನ ಅಭಾವ ಎಷ್ಟರಮಟ್ಟಿಗೆ ಬಾಧಿಸಿದೆ ಮತ್ತು ಅನಿವಾರ್ಯವಾಗಿ ತಿನ್ನುವಂತಹ ಆಹಾರವು ವಿಷಕಂಠವಾಗಿರುವುದು ಕರಾವಳಿ ಮಾತ್ರವಲ್ಲ ಭಾರತದಾದ್ಯಂತ ಇದರ ಪರಿಣಾಮದ ಬಿಸಿ ಗೊತ್ತಾಗಿದೆ ಎಂದ ಅವರು ಈ ನಿಟ್ಟಿನಲ್ಲಿ ಸಾಮಾಜಿಕ ಬದ್ಧತೆಯ ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಾನವನ ಆರೋಗ್ಯದ ಬಗ್ಗೆಯೂ ಗಮನಹರಿಸಿ ಪೇಸ್ ಸಂಸ್ಥೆಯು ಸಮಾಜದ ಫೇಸ್ ಆಗಿ ಗುರುತಿಸಲಿ ಎಂದು ಅವರು ಹೇಳಿದರು.

ಶಿಕ್ಷಕರು ಮತ್ತು ಇಂಜಿನಿಯರ‍್ಸ್‌ಗಳ ನಡುವೆ ನಿಕಟಸಂಪರ್ಕವಿದೆ-ಕೃಷ್ಣರಾಜ ಕೆದಿಲಾಯ: ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಶಿಕ್ಷಕ ಕೃಷ್ಣರಾಜ ಕೆದಿಲಾಯರವರು ಮಾತನಾಡಿ, ಭಾರತದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ. ಅದೇ ರೀತಿ ಆ ನಾಲ್ಕು ಗೋಡೆಗಳು ಇಂಜಿನಿಯರ‍್ಸ್‌ರವರ ತಾಂತ್ರಿಕ ನೈಪುಣ್ಯತೆಯಿಂದ ನಿರ್ಮಾಣಗೊಂಡಿರುತ್ತದೆ, ಆದ್ದರಿಂದ ಶಿಕ್ಷಕರು ಮತ್ತು ಇಂಜಿನಿಯರ‍್ಸ್‌ಗಳ ನಡುವೆ ನಿಕಟಸಂಪರ್ಕವಿರುವುದರಿಂದ ಭಾರತದ ಭವಿಷ್ಯ ಕಟ್ಟಲು ಶಿಕ್ಷಕರ ಮತ್ತು ಇಂಜಿಯರ‍್ಸ್‌ಗಳ ಪ್ರಮುಖ ಪಾತ್ರವಿದೆ ಎಂದ ಅವರು ಸಂಘಟನೆಗಳು ಮುಖ್ಯವಲ್ಲ ಆದರೆ ಸಂಘಟನೆಗಳು ಸಮಾಜಕ್ಕೆ ಯಾವ ರೀತಿಯ ಕೊಡುಗೆಯನ್ನು ನೀಡುತ್ತದೆ ಎಂಬುದು ಬಹಳ ಮುಖ್ಯವಾಗಿರುತ್ತದೆ ಎಂದು ಅವರು ಹೇಳಿದರು.

ಇಂಜಿನಿಯರಿಂಗ್/ವಿಶ್ವೇಶ್ವರಯ್ಯ, ಪುತ್ತೂರು/ಪೇಸ್ ಆಗಬೇಕು-ಎಸ್.ಕೆ ಆನಂದ್ ಕುಮಾರ್: ನೆಹರುನಗರ ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದ್ ಕುಮಾರ್‌ರವರು ಮಾತನಾಡಿ, ಮನುಷ್ಯನ ಮೂಲ ಅವಶ್ಯಕತೆಗಳನ್ನು ಪೂರೈಸುವುದು ಸಿವಿಲ್ ಇಂಜಿನಿಯರ‍್ಸ್‌ಗಳು. ಇಂಜಿನಿಯರಿಂಗ್ ಕೇತ್ರದಲ್ಲಿ ಸರ್ ವಿಶ್ವೇಶ್ವರಯ್ಯರವರು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಇಂಜಿನಿಯರಿಂಗ್ ಡೇ ಸಂದರ್ಭದಲ್ಲಿ ಕೂಡಲೇ ‘ವಿಶ್ವೇಶ್ವರಯ್ಯ’ರವರ ನೆನಪಾದಂತೆ ಪೇಸ್ ಸಂಸ್ಥೆ ಕೂಡ ಜನರಲ್ಲಿ ನಿಕಟವರ್ತಿಗಳಾಗಿ ಕೆಲಸ ನಿರ್ವಹಿಸುತ್ತಾ ಸಂಸ್ಥೆಯ ಗುರಿ ಹಾಗೂ ಧ್ಯೇಯಗಳನ್ನು ಅರಿತು ಮುಂದೆ ಸಾಗಿ ಪುತ್ತೂರು ಎಂದು ಹೇಳುವಾಗ ತಟ್ಟನೇ ‘ಪೇಸ್’ ಎಂದು ನೆನಪಾಗುವಂತೆ ಕೆಲಸ ಕೈಂಕರ್ಯಗಳನ್ನು ಮಾಡಬೇಕಾಗಿದೆ ಎಂದರು.  ಅಧ್ಯಕ್ಷತೆ ವಹಿಸಿದ ನೂತನ ಅಧ್ಯಕ್ಷ  ವೆಂಕಟ್ರಾಜ್ ಪಿ.ಜಿ,ರವರು ಮಾತನಾಡಿ, ಪೇಸ್ ಸಂಸ್ಥೆಯನ್ನು ಅಭಿವೃದ್ಧಿಗೊಳಿಸುವ ಬಹಳ ದೊಡ್ಡ ಜವಾಬ್ದಾರಿಯು ನನ್ನ ಮುಂದಿದ್ದು ಮುಂದಿನ ಕಾರ್ಯಕ್ರಮಗಳಿಗೆ  ಪ್ರತಿಯೊಬ್ಬರ ಸಹಕಾರವನ್ನು ಆಶಿಸಿದರು. ನಿರ್ಗಮನ ಅಧ್ಯಕ್ಷ ಸತ್ಯನಾರಾಯಣ ಭಟ್‌ರವರು ಸ್ವಾಗತಿಸಿ ಮಾತನಾಡಿ, ಸಂಘ-ಸಂಸ್ಥೆಯು ಬೆಳವಣಿಗೆ ಹೊಂದಬೇಕಾದರೆ ಹಾಜರಾತಿಯೊಂದಿಗೆ ತನ್ನ ಕಾರ್ಯದಲ್ಲಿ ಪ್ರಬುದ್ಧತೆಯನ್ನು ತೋರಬೇಕಾಗಿದೆ ಎಂದು ಹೇಳಿ ತನ್ನ ಅಧಿಕಾರಾವಧಿಯಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿ ಮುಂದಿನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ಲೋಗೋ ಅನಾವರಣ: ನೂತನ ಅಧ್ಯಕ್ಷ ವೆಂಕಟ್ರಾಜ್‌ರವರ ಕೈಚಳಕದಲ್ಲಿ ಸರ್ ವಿಶ್ವೇಶ್ವರಯ್ಯರವರ ಭಾವಚಿತ್ರವಿರುವ ಪೇಸ್ ಸಂಸ್ಥೆಯ ನೂತನ ಲೋಗೋವನ್ನು ಗೌರಾವಾಧ್ಯಕ್ಷ ಎಸ್.ಕೆ ಆನಂದ್ ಕುಮಾರ್‌ರವರು ಅನಾವರಣಗೊಳಿಸಿದರು.

ಪದಗ್ರಹಣ ಕಾರ್ಯಕ್ರಮ: 2016-17ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಎಸ್.ಕೆ ಆನಂದ್ ಕುಮಾರ್‌ರವರು ಮುಂದುವರೆಯಲಿದ್ದು ಅಧ್ಯಕ್ಷರಾಗಿ ವೆಂಕಟ್ರಾಜ್ ಪಿ.ಜಿ, ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಎ, ಉಪಾಧ್ಯಕ್ಷರಾಗಿ ಶಂಕರ ಭಟ್, ಕೋಶಾಧಿಕಾರಿಯಾಗಿ ಪ್ರಶಾಂತ್, ಜೊತೆ ಕಾರ್ಯದರ್ಶಿಯಾಗಿ ಅರ್ಜುನ್ ಎಸ್.ಕೆ, ನಿಕಟಪೂರ್ವ ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಮತ್ತು ನಿರ್ದೇಶಕರುಗಳಾಗಿ ಹರೀಶ್ ಪುತ್ತೂರಾಯ, ಜಯಪ್ರಕಾಶ್ ಎ.ಎಲ್.,ಸಂದೇಶ್ ಮಯ್ಯ, ಬಾಲಕೃಷ್ಣ ಭಟ್, ಸತ್ಯಗಣೇಶ್‌ರವರು ಪದಗ್ರಹಣವನ್ನು ಸ್ವೀಕರಿಸಿದರು.

ಸನ್ಮಾನ: ಬಾಲ್ಯದಲ್ಲಿ ಕಡುಬಡತನವಿದ್ದು ಕಲಿಕೆಯ ಅದಮ್ಯ ಉತ್ಸಾಹವಿದ್ದರೂ ತನ್ನ ಕಲಿಕೆಯ ಸಂದರ್ಭದಲ್ಲಿ ತನ್ನನ್ನು ಪ್ರೋತ್ಸಾಹಿಸಿದ ಕೃಷಿಕರಾದ ಡೆಂಬಾಳ ಗೋಪಾಲಕೃಷ್ಣ ಭಟ್ ಹಾಗೂ ಶಾರದಾ ಜಿ.ಭಟ್ ದಂಪತಿಯರನ್ನು ಈ ಸಂದರ್ಭದಲ್ಲಿ ಅಧ್ಯಕ್ಷ ವೆಂಕಟ್ರಾಜ್ ಕುಟುಂಬಸ್ಥರು ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನಿತರ ಪರಿಚಯವನ್ನು ನಿರ್ದೇಶಕ ಸತ್ಯಗಣೇಶ್‌ರವರು ಮಾಡಿದರು.

ಸೇರ್ಪಡೆ: ಪೇಸ್ ಸಂಸ್ಥೆಗೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಶಿವಪ್ರಸಾದ್ ಹಾಗೂ ರವೀಶ್ ಕೆಮ್ಮಾಯಿರವರನ್ನು ನೂತನ ಅಧ್ಯಕ್ಷ ವೆಂಕಟ್ರಾಜ್‌ರವರು  ಹೂ ನೀಡಿ ಸ್ವಾಗತಿಸಿದರು.

ಅಧ್ಯಕ್ಷರಿಗೆ ಹೂಹಾರ ಹಾಕಿ ಸ್ವಾಗತ: ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟ್ರಾಜ್ ಪಿ.ಜಿರವರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷರುಗಳು ಮತ್ತು ಆಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯ ಪರವಾಗಿ ಡೀಲರ್ ಸಚಿನ್ ಟ್ರೇಡರ‍್ಸ್‌ನ ಮಾಲಕ ಮಂಜುನಾಥ ನಾಯಕ್‌ರವರು ಹೂಹಾರ ಹಾಕಿ ಸ್ವಾಗತಿಸಿದರು.

ಹೂ ನೀಡಿ ಗೌರವ: 2006ರಲ್ಲಿ ಸ್ಥಾಪನೆಯಾದ ಪೇಸ್ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಮಾಜಿ ಅಧ್ಯಕ್ಷರುಗಳಾದ ಗೌರವಾಧ್ಯಕ್ಷ ಎಸ್.ಕೆ.ಆನಂದ್ ಕುಮಾರ್, ಪ್ರಸನ್ನ ಭಟ್, ವಸಂತ ಭಟ್, ಸಂತೋಷ್ ಶೆಟ್ಟಿ, ಕೇಶವ ಭಟ್, ರವಿರಾಂ, ರವೀಂದ್ರ ಪಿ, ಗೋಪಿನಾಥ್ ಶೆಟ್ಟಿ, ಸತ್ಯನಾರಾಯಣ ಭಟ್‌ರವರಿಗೆ ಹೂ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು.

ನಿರ್ಗಮನ ಅಧ್ಯಕ್ಷ ಸತ್ಯನಾರಾಯಣ ಭಟ್‌ರವರ ಪತ್ನಿ ವಿನಯ, ನೂತನ ಅಧ್ಯಕ್ಷ ವೆಂಕಟ್ರಾಜ್‌ರವರ ಪತ್ನಿ ಚೈತ್ರಮಂಗಲಾ ಉಪಸ್ಥಿತರಿದ್ದರು. ನಮಿತಾ ಪ್ರಾರ್ಥಿಸಿದರು. ಇಂಜಿನಿಯರ್‌ಗಳಾದ ಸಂತೋಷ್ ಶೆಟ್ಟಿ, ಪ್ರಸನ್ನ ಭಟ್, ಕೇಶವ ಭಟ್, ಹರೀಶ್ ಪುತ್ತೂರಾಯರವರು ಅತಿಥಿಗಳಿಗೆ ಹೂ ನೀಡಿ ಸ್ವಗತಿಸಿದರು. ರವಿರಾಂರವರು ಸಂಸ್ಥೆಯ ಸ್ಥಾಪನೆ, ಉದ್ಧೇಶ ಹಾಗೂ ಚಟುವಟಿಕೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಜಿನಿಯರ್‌ಗಳಾದ ರವೀಂದ್ರ ಪಿ, ಸಂದೇಶ್ ಮಯ್ಯರವರು ಅತಿಥಿಗಳ ಪರಿಚಯ ಮಾಡಿದರು. ನಿರ್ಗಮನ ಕಾರ್ಯದರ್ಶಿ ಶಂಕರ್ ಭಟ್ ವರದಿ ವಾಚಿಸಿ, ಕೋಶಾಧಿಕಾರಿ ರಾಘವೇಂದ್ರ ಭಟ್ ಲೆಕ್ಕಪತ್ರ ಮಂಡಿಸಿದರು. ನೂತನ ಕಾರ್ಯದರ್ಶಿ ಕಿಶೋರ್ ಕುಮಾರ್ ವಂದಿಸಿದರು. ನಿರ್ದೇಶಕ ಅರ್ಜುನ್ ಎಸ್.ಕೆ ಹಾಗೂ ಮಾಜಿ ಅಧ್ಯಕ್ಷ ವಸಂತ ಭಟ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಯೊಂದು ಕ್ಷೇತ್ರದಲ್ಲೂ ಇಂದು ತಂತ್ರಜ್ಞಾನ ಬಹಳ ಮುಂದುವರಿದಿದೆ. ಆಹಾರದ ವಿಷವರ್ತುಲದಲ್ಲಿ ಇಂದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ನಾವು ಸೇವಿಸುವ ಇಂದಿನ ವಿಷ ಆಹಾರವು ಆರೋಗ್ಯದ ಮೇಲಿನ ಭಯೋತ್ಪಾದನೆಯಂತಾಗಿದೆ. ಉತ್ತಮ ಆಹಾರದ ಬಗ್ಗೆ ಎಲ್ಲರೂ ಕಾಳಜಿ ವಹಿಸಿಬೇಕು ಮತ್ತು ಸಶಕ್ತ ಆರೋಗ್ಯದ ನಿರ್ಮಾಣದೊಂದಿಗೆ ಉತ್ತಮ ಮನಸ್ಥಿತಿಯ ಸಾಮಾಜಿಕ ಬದ್ಧತೆ ಎಲ್ಲರದಾಗಬೇಕು. -ನಾ.ಕಾರಂತ ಪೆರಾಜೆ, ಅಂಕಣಕಾರ ಮತ್ತು ಪತ್ರಕರ್ತರು

civil1

ಡೆಂಬಾಳ ಗೋಪಾಲಕೃಷ್ಣ ಭಟ್ ಹಾಗೂ ಶಾರದಾ ಜಿ.ಭಟ್ ದಂಪತಿಗೆ ಸನ್ಮಾನ
ಡೆಂಬಾಳ ಗೋಪಾಲಕೃಷ್ಣ ಭಟ್ ಹಾಗೂ ಶಾರದಾ ಜಿ.ಭಟ್ ದಂಪತಿಗೆ ಸನ್ಮಾನ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.