ಕುಂತೂರು: ಮನೆಯಿಂದ ಚಿನ್ನಾಭರಣ, ನಗದು ಕಳ್ಳತನ ಹಗಲಿನಲ್ಲಿ ಮನೆ ಪ್ರವೇಶಿಸಿ ರಾತ್ರಿ ಕೃತ್ಯವೆಸಗಿ ಪರಾರಿ; ಮನೆಯವರ ಶಂಕೆ

Puttur_Advt_NewsUnder_1
Puttur_Advt_NewsUnder_1

3 4 5 6 7 8ಪೆರಾಬೆ: ಕುಂತೂರು ಗ್ರಾಮದ ಮುಡಿಪಿನಡ್ಕ ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಹಾಗೂ ನಗದು ಸೇರಿ 70 ಸಾವಿರ ರೂ. ಮೌಲ್ಯದ ಸೊತ್ತು ಕಳ್ಳತನಗೊಂಡ ಘಟನೆ ಅ.15ರಂದು ಮುಂಜಾನೆ ಬೆಳಕಿಗೆ ಬಂದಿದೆ. ಹಗಲಿನ ವೇಳೆಯಲ್ಲಿ ಮನೆಯೊಳಗೆ ಪ್ರವೇಶಿಸಿ ಅವಿತುಕೊಂಡು ರಾತ್ರಿ ವೇಳೆ ಕಳವು ಕೃತ್ಯ ನಡೆಸಲಾಗಿದೆ ಎಂದು ಮನೆಯವರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಬರುವ ಕುಂತೂರು ಪೇಟೆಯಲ್ಲಿ ರಾಜ್ಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿ ಇರುವ ಮುಡಿಪಿನಡ್ಕ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು ಗೋದ್ರೆಜ್‌ನಲ್ಲಿ ಇರಿಸಲಾಗಿದ್ದ ಉಂಗುರ, ಚೈನು, ಕಿವಿಯೋಲೆ ಹಾಗೂ 50 ಸಾವಿರ ನಗದು ಕಳವುಗೊಂಡಿದೆ ಎಂದು ವರದಿಯಾಗಿದೆ. ಕಳ್ಳರು ಮನೆ ಬಾಗಿಲು ಮುರಿದು ಒಳಪ್ರವೇಶಿಸಿರುವ ಬಗ್ಗೆ ಯಾವುದೇ ಕುರುಹು ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಹಗಲಿನ ವೇಳೆಯಲ್ಲಿಯೇ ಕಳ್ಳರು ಮನೆಯೊಳಗೆ ಪ್ರವೇಶಿಸಿ ಅವಿತು ರಾತ್ರಿ ಮನೆಯವರು ನಿದ್ರೆಗೆ ಜಾರಿದ ಮೇಲೆ ಕಳ್ಳತನ ಕೃತ್ಯವೆಸಗಿ ಪರಾರಿಯಾಗಿರಬಹುದೆಂದು ಹೇಳಲಾಗಿದೆ. ಮನೆ ಮಾಲೀಕ ಅಬ್ದುಲ್ ರಹಿಮಾನ್‌ರವರ ತಾಯಿ ಆಸಿಯಮ್ಮ ಮುಂಜಾನೆ 4 ಗಂಟೆ ವೇಳೆಗೆ ಎದ್ದು ಬಂದ ವೇಳೆ ಹಿಂಬದಿ ಬಾಗಿಲು ತೆರೆದುಕೊಂಡಿರುವುದು ಗಮನಕ್ಕೆ ಬಂದಿದ್ದು ಬಳಿಕ ಕಳ್ಳತನ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.  ಅಬ್ದುಲ್ ರಹಿಮಾನ್‌ರವರು ಲಾರಿ ಚಾಲಕರಾಗಿದ್ದು ಇವರ ಇಬ್ಬರು ಪುತ್ರರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಕಳೆದ ರಾತ್ರಿ ಮನೆಯಲ್ಲಿ ಅಬ್ದುಲ್ ರಹಿಮಾನ್, ಅವರ ಪತ್ನಿ ಪಾತುಂಞಿ,ಮಗಳು ಮಿಶ್ರಿಯಾ, ತಾಯಿ ಆಸಿಯಮ್ಮ ಇದ್ದಿದ್ದು ನಾಲ್ವರು ಮನೆಯ ಜಗಲಿಯಲ್ಲಿ ಕಿಟಕಿ ಬಾಗಿಲು ಮುಚ್ಚಿ ಮಲಗಿದ್ದರು. ಮನೆಯಲ್ಲಿ ಮೂರು ಬೆಡ್‌ರೂಂಗಳಿದ್ದು ಮೂರು ರೂಮ್‌ನಲ್ಲಿದ್ದ ಗೋದ್ರೆಜ್ ಜಾಲಾಡಿದ ಕಳ್ಳರು ಒಂದು ಗೋದ್ರೇಜ್‌ನಲ್ಲಿ ಕರಡಿಗೆಯೊಂದರಲ್ಲಿ ಇರಿಸಲಾಗಿದ್ದ 1 ಸಪೂರದ ಬಂಗಾರದ ಚೈನು, 1 ಜೊತೆ ಮಕ್ಕಳ ಕಿವಿಯ ಸಣ್ಣ ರಿಂಗ್, ಮಕ್ಕಳ 3 ಉಂಗುರ ದೋಚಿದ್ದಾರೆ. ಅಲ್ಲದೇ ಎರಡು ಗೋದ್ರೆಜ್‌ಗಳಲ್ಲಿದ್ದ ಅಂದಾಜು 50 ಸಾವಿರ ರೂ.,ನಗದು ದೋಚಿದ್ದಾರೆ ಎಂದು ವರದಿಯಾಗಿದೆ. ಗೋದ್ರೆಜ್‌ನಲ್ಲಿದ್ದ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿದ್ದು ಪಾಸ್‌ಪೋರ್ಟ್ ಸೇರಿದಂತೆ ಇತರೇ ದಾಖಲೆ ಪತ್ರಗಳನ್ನು ಮನೆಯ ಹಿಂಬದಿ ಎಸೆಯಲಾಗಿದೆ. ಕಳ್ಳರು ಹಗಲಿನ ವೇಳೆಯಲ್ಲಿ ಮನೆಯೊಳಗೆ ಪ್ರವೇಶಿಸಿ ಅವಿತುಕೊಂಡು ರಾತ್ರಿ ಮನೆಯವರೆಲ್ಲರೂ ನಿದ್ರೆಗೆ ಜಾರಿದ ಬಳಿಕ ಈ ಕೃತ್ಯವೆಸಗಿ ಪರಾರಿಯಾಗಿರಬಹುದು ಎಂದು ಮನೆಯವರು ಶಂಕಿಸಿದ್ದಾಾರೆ.

ಲಾಕರ್‌ನಲ್ಲಿದ್ದ ಚಿನ್ನ ಸೇಫ್ : ಬೆಡ್‌ರೂಂ ಒಂದರ ಸೇಫ ಲಾಕರ್‌ನಲ್ಲಿ ಸುಮಾರು 10 ಪವನ್‌ನಷ್ಟು ಚಿನ್ನ ಇದ್ದು ಇದು ಸೇಫ್ ಆಗಿಯೇ ಇದೆ. ಈ ಗೋದ್ರೆಜ್‌ನಲ್ಲೂ ಕಳ್ಳರು ಚಿನ್ನ, ಹಣಕ್ಕಾಗಿ ಜಾಲಾಡಿದ್ದರೂ ಸೇಫ್ ಲಾಕರ್‌ನಲ್ಲಿದ್ದ ಚಿನ್ನ ಕಳ್ಳತನವಾಗಿಲ್ಲ. ಈ ಗೋದ್ರೆಜ್‌ನಲ್ಲಿದ್ದ ಹಣ ಕಳವುಗೈದಿದ್ದಾರೆ ಎಂದು ವರದಿಯಾಗಿದೆ.

ಶ್ವಾನದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ: ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕಡಬ ಠಾಣಾ ಎಎಸ್‌ಐ ರವಿಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶ್ವಾನದಳದ ಸಿಬ್ಬಂದಿ ಶರತ್ ಹಾಗೂ ಬೆರಳಚ್ಚು ತಜ್ಞರಾದ ಪ್ರಕಾಶ್, ಸತೀಶ್‌ರವರು ಆಗಮಿಸಿ ತಪಾಸಣೆ ನಡೆಸಿದ್ದಾಾರೆ. ಉಪ್ಪಿನಂಗಡಿ ಸರ್ಕಲ್ ಇನ್‌ಸ್‌‌ಪೆಕ್ಟರ್ ಅನಿಲ್ ಎಸ್.ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಮಾಲೀಕ ಅಬ್ದುಲ್ ರಹಿಮಾನ್‌ರವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪರಿಚಯಸ್ಥರದ್ದೇ ಕೃತ್ಯ:  ಅಬ್ದುಲ್ ರಹಿಮಾನ್‌ವರ ಮನೆಯಲ್ಲಿ ಮೂರು ಬೆಡ್ ರೂಂಗಳಿದ್ದರೂ ಯಜಮಾನ, ಪತ್ನಿ, ತಾಯಿ, ಮಗಳು ಜೊತೆಯಾಗಿ ಎದುರಿನ ಜಗಲಿಯಲ್ಲಿ ಮಲಗಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇದ್ದವರೇ, ಅಥವಾ ಅಬ್ದುಲ್ ರಹಿಮಾನ್‌ರವರ ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದು ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಹಗಲಿನಲ್ಲಿ ಮನೆಯೊಳಗೆ ಪ್ರವೇಶಿಸಿ ಸ್ಟೋರ್ ರೂಂ.ನಲ್ಲಿ ಅವಿತುಕೊಂಡು ರಾತ್ರಿ ಮನೆಯವರೆಲ್ಲರೂ ನಿದ್ರೆಗೆ ಜಾರಿದ ಮೇಲೆ ಕಳ್ಳತನ ಮಾಡಿ ಹಿಂಬಾಗಿಲ ಮೂಲಕ ಪರಾರಿಯಾಗಿರಬಹುದು ಎಂಬ ಸಂಶಯದ  ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ಮನೆಯ ಬಾಗಿಲು ಒಡೆಯದೇ ಮನೆಯೊಳಗಿಂದ ನಡೆದಿರುವ ಈ ಕಳ್ಳತನದ ಬಗ್ಗೆ ಹಲವು ಸಂಶಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಾಗಿದೆ.

ಅ.14ರಂದು ನಾನು ಪುತ್ತೂರಿಗೆ ಹೋಗಿದ್ದು ಮನೆಯಲ್ಲಿ ಪತ್ನಿ ಮಾತ್ರ ಇದ್ದರು. ಈ ವೇಳೆ ಕಳ್ಳರು ಮನೆಯೊಳಗೆ ಪ್ರವೇಶಿಸಿ ಸ್ಟೋರ್ ರೂಂ.,ನಲ್ಲಿ ನಮಗೆ ತಿಳಿಯದಂತೆ ಬಚ್ಚಿಟ್ಟುಕೊಂಡಿರಬಹುದು. ರಾತ್ರಿ ಸೆಕೆ ಇದ್ದ ಹಿನ್ನೆಲೆಯಲ್ಲಿ ನಾವು ನಾಲ್ವರೂ ಜಗಲಿಯಲ್ಲಿ ಮಲಗಿದ್ದೇವು. ನಾವು ನಿದ್ರೆಗೆ ಜಾರಿದ ಬಳಿಕ ಕಳ್ಳರು ಕೃತ್ಯವೆಸಗಿ ಪರಾರಿಯಾಗಿದ್ದಾಾರೆ. 50 ಸಾವಿರ ರೂ., ನಗದು, ಉಂಗುರ,ಚೈನು,ಕಿವಿಯೋಲೆಗಳು ಕಳವುಗೊಂಡಿವೆ.-ಅಬ್ದುಲ್ ರಹಿಮಾನ್, ಮನೆ ಮಾಲೀಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.