‘ನಮಗೆ ರಸ್ತೆ ನಿರ್ಮಿಸಿ ಕೊಡಿ’;ಗುರುಂಪುನಾರ್ ಮೂವಪ್ಪುನಲ್ಲಿ ರಸ್ತೆ ನಿರ್ಮಿಸುವಂತೆ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ನಗರಸಭೆಯಲ್ಲಿ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

rasthe rasthe3ಅಧ್ಯಕ್ಷರಿಂದ ಪ್ರತಿಭಟನಾಕಾರರ ಜೊತೆ ಸ್ಥಳ ಪರಿಶೀಲನೆ ವರ್ಗ ಸ್ಥಳ ಮಾಲಕರ ಒಪ್ಪಿಗೆ ಪತ್ರದ ಬಳಿಕ ರಸ್ತೆ ನಿರ್ಮಾಣದ ಭರವಸೆ

* ಹಂತಹಂತವಾಗಿ ಎಲ್ಲವನ್ನು ಸರಿ ಮಾಡುವ – ಜಯಂತಿ ಬಲ್ನಾಡ್

* ರಸ್ತೆ ನಿರ್ಮಾಣಕ್ಕೆ ಮೊದಲು ನಾವೇ ಸ್ಥಳಪರಿಶೀಲನೆ ನಡೆಸಿದ್ದು- ಹೆಚ್.ಮಹಮ್ಮದ್ ಆಲಿ

* ಭೂಸ್ವಾಧೀನ ಅರ್ಜಿ ಹಣಕಟ್ಟದೆ ಅಸಿಂಧು ಆಗಿದೆ – ಹೆಚ್. ಮಹಮ್ಮದ್ ಆಲಿ

* 12 ಫೀಟ್ ಆದರೂ ರಸ್ತೆ ಮಾಡಿ ಕೊಡುವ ಭರವಸೆ – ಹೆಚ್. ಮಹಮ್ಮದ್ ಆಲಿ

* ಎಸ್ಸಿ.ಎಸ್ಟಿ ಅನುದಾನ ಇರುವುದೇ ರಸ್ತೆ ಅಭಿವೃಧ್ದಿಗಾಗಿ, ಭೂಸ್ವಾಧೀನಕ್ಕಲ್ಲ – ರೂಪಾ ಶೆಟ್ಟಿ

* ಸ್ಥಳ ಮಾಲಕರುಗಳಿಂದ ಒಪ್ಪಿಗೆ ಪತ್ರ ಸಿಕ್ಕಿದ ತಕ್ಷಣ ರಸ್ತೆ ನಿರ್ಮಾಣ ಭರವಸೆ- ಆಲಿ

 * ದಲಿತರ ಹಕ್ಕುಗಳನ್ನು ಕಸಿಯುವ ಹುನ್ನಾರ- ಶೇಷಪ್ಪ ಬೆದ್ರಕಾಡು

* ಅಧಿಕಾರಿ,ಜನಪ್ರತಿನಿಧಿಗಳು ಲಾಭಿಗೆ ಮಣಿದಿದ್ದಾರೆ- ಗಿರಿಧರ ನಾಯ್ಕ

* ದಲಿತರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ- ಅಣ್ಣಿ ಯೆಳ್ತಿಮಾರ್

 ಪುತ್ತೂರು: ಪಡ್ನೂರು ಮತ್ತು ಬನ್ನೂರು ಗ್ರಾಮದ ಗುರುಂಪುನಾರ್‌ನಿಂದ ಮೂವಪ್ಪು ತನಕ ಸುಮಾರು 1.5 ಕಿ.ಮಿ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಸ್ಥಳೀಯ ನಾಗರಿಕರು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ಪುತ್ತೂರು ನಗರಸಭೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ ಮತ್ತು ಪ್ರತಿಭಟನಾಕಾರರ ಆಗ್ರಹಕ್ಕೆ ಸ್ಪಂದಿಸಿದ ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರು ಪ್ರತಿಭಟನಾಕಾರರ ಮುಖಂಡರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ವರ್ಗ ಜಾಗದವರು ತಮ್ಮ ಸ್ಥಳವನ್ನು ಬಿಟ್ಟು ಕೊಡುವ ಒಪ್ಪಿಗೆ ಪತ್ರ ಕೊಡುವುದಾದರೆ ರಸ್ತೆ ಮಾಡಿ ಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇದಕ್ಕೊಪ್ಪಿದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದ ಘಟನೆ ಅ.17ರಂದು ನಡೆದಿದೆ.

ದಲಿತರ ಹಕ್ಕುಗಳನ್ನು ಕಸಿಯುವ ಹುನ್ನಾರ– ಶೇಷಪ್ಪ ಬೆದ್ರಕಾಡು

ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಶೇಷಪ್ಪ ಬೆದ್ರಕಾಡು ಮಾತನಾಡಿ, 32 ವರ್ಷಗಳಿಂದ ಸಮಸ್ಯೆ ಇದ್ದರೂ ನಗರಸಭೆ ಮೌನ ವಹಿಸಿದೆ. ಗುರುಂಪುನಾರ್ ಭಾಗದಲ್ಲಿ 22 ಮನೆಗಳಿದ್ದು, ಎಸ್ಟಿ, ಎಸ್ಸಿ ಮತ್ತು ಇತರ ಸಮುದಾಯಗಳ ಮನೆಗಳೂ ಇವೆ. ಈ ಪ್ರದೇಶಕ್ಕೆ ರಸ್ತೆ ಇಲ್ಲದ ಕಾರಣ ಸುಮಾರು 1.5 ಕಿ.ಮೀ  ಉದ್ದಕ್ಕೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಆದರೆ ಇವತ್ತಿನ ತನಕ ನಮ್ಮ ಬೇಡಿಕೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ದಲಿತರ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ಇದು. ಅದಕ್ಕೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಕೈಜೋಡಿಸಿದ್ದಾರೆ ಎಂದು ಆರೋಪಿಸಿದ ಅವರು, ಇದೇ ಪರಿಸ್ಥಿತಿ ಅಧ್ಯಕ್ಷರ ಮನೆಗೂ ಬರುತ್ತಿದ್ದರೆ ಸುಮ್ಮನಿರುತ್ತಿದ್ದರೇ ಎಂದು ಪ್ರಶ್ನಿಸಿದರು.

ಅಧಿಕಾರಿ,ಜನಪ್ರತಿನಿಧಿಗಳು ಲಾಭಿಗೆ ಮಣಿದಿದ್ದಾರೆ- ಗಿರಿಧರ ನಾಯ್ಕ

ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಗಿರಿಧರ ನಾಯ್ಕರವರು ಮಾತನಾಡಿ, ರಸ್ತೆಯ ಬೇಡಿಕೆ ಇದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ಮಾಡಲು ವರ್ಗ ಜಾಗ ತೊಂದರೆ ಆಗಿದೆ ಎಂದು ಯಾರದ್ದೋ ಲಾಭಿಗೆ ಮಣಿದಿದ್ದಾರೆ. ವರ್ಗ ಜಾಗ ಇದ್ದರೆ ಸ್ವಾಧೀನತೆ ಪ್ರಕ್ರಿಯೆಗಾಗಿ ಅದನ್ನು ಮೇಲಾಧಿಕಾರಿಗಳಿಗೆ ಬರೆದು  ಕಳುಹಿಸಬಹುದಿತ್ತು. ಆದರೆ ಅದನ್ನು ಮಾಡದೆ ದಲಿತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಸರಕಾರ ಕೊಡುವ 1 ರೂಪಾಯಿಯ ಅಕ್ಕಿಯನ್ನು ಮನೆಗೆ ತಲುಪಿಸಲು ರೂ.೧೫೦ ಖರ್ಚು ತಗಲುತ್ತಿದೆ. ಆದರೂ ಇತ್ತ ಕಡೆ ನಗರಸಭೆ ಗಮನ ಹರಿಸಿಲ್ಲ ಎಂದು ಆರೋಪಿಸಿದ ಅವರು ನಮ್ಮ ಬೇಡಿಕೆ ಈಡೇರದಿದ್ದರೆ ಬೇಡಿಕೆ ಈಡೇರುವ ತನಕ ಅಹೋರಾತ್ರಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ರಸ್ತೆ ನಿರ್ಮಾಣಕ್ಕಿಟ್ಟ ಹಣ ಎಲ್ಲಿ ಹೋಯಿತು:

ಕಳೆದ ತಿಂಗಳಲ್ಲಿ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಮತ್ತು ಸದಸ್ಯ ಮಹಮ್ಮದ್ ಆಲಿಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ರಸ್ತೆ ನಿರ್ಮಾಣಕ್ಕಾಗಿ ರೂ.೫ ಲಕ್ಷ ಇಡಲಾಗಿದೆ. ಮುಂದಿನ ವಾರದಲ್ಲಿ ಕೆಲಸ ಆರಂಭವಾಗಲಿದೆ ಎಂದು ಹೇಳಿ ಹೋಗಿದ್ದಾರೆ. ಆದರೆ ವಾರ ಕಳೆದರೂ ಇನ್ನೂ ಕೆಲಸ ಪ್ರಾರಂಭಗೊಂಡಿಲ್ಲ. ಆ ೫ ಲಕ್ಷ ಹಣ ಎಲ್ಲಿ ಹೋಗಿದೆ ಎಂದು ಗಿರಿಧರ ನಾಯ್ಕ ಪ್ರಶ್ನಿಸಿದರು.

ದಲಿತರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ– ಅಣ್ಣಿ ಯೆಳ್ತಿಮಾರ್

ದಲಿತ್ ಸೇವಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಿ ಯೆಳ್ತಿಮಾರ್ ಮಾತನಾಡಿ, ನಗರ ಮುಖ್ಯ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮಾಡಿ ಕೊಡುತ್ತಾರೆ ದಲಿತರು ಇರುವಲ್ಲಿ ಮಾತ್ರ ರಸ್ತೆ ನಿರ್ಮಾಣಕ್ಕೆ ತಡ ಮಾಡುತ್ತಾರೆ. ಕೆಳ ಮತ್ತು ಮೇಲ್ವರ್ಗ ಎಂಬ ತಾರತಮ್ಯ ಧೋರಣೆ ಮಾಡುತ್ತಿರುವ ನಗರಸಭೆಯವರು ದಲಿತರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಗರಸಭೆ ಅಧ್ಯಕ್ಷೆ, ಸದಸ್ಯರಿಂದ ಪ್ರತಿಭಟನಾಕಾರರ ಜೊತೆ ಮಾತುಕತೆ: ಪ್ರತಿಭಟನಾಕಾರರ ಬೇಡಿಕೆ ಆಲಿಸಿದ ಬಳಿಕ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡುರವರು ಮಾತನಾಡಿ ನಾನು ಅಧಿಕಾರಕ್ಕೆ ಬಂದು ೬ ತಿಂಗಳಾಯಿತಷ್ಟೆ.  ಹಂತಹಂತವಾಗಿ ಎಲ್ಲವನ್ನು ಸರಿ ಮಾಡಿಸುವ ಎಂದರು. ಆಕ್ಷೇಪಿಸಿದ ಪ್ರತಿಭಟನಾಕಾರರು ನೀವು ಬಂದು ಆರು ತಿಂಗಳಾಗಿರಬಹುದು. ನಿಮ್ಮ ಸಿಬಂದಿಗಳಿಗೆ ನಮ್ಮ ಸಮಸ್ಯೆಗಳ ಕುರಿತು ತಿಳಿದಿದೆ. ಅವರಿಂದ ವಿಚಾರಿಸಿ ತಿಳಿದು ಕೊಳ್ಳಬೇಕಾಗಿತ್ತು. ಇದು ಇವತ್ತು ನಿನ್ನೆಯ ಸಮಸ್ಯೆ ಅಲ್ಲ. ೨ ವರ್ಷದಲ್ಲಿ ರಸ್ತೆಗಾಗಿ ೪ ಬಾರಿ ಪ್ರತಿಭಟನೆ ಮಾಡಿದ್ದೇವೆ ಎಂದರು. ಅಧ್ಯಕ್ಷರ ಪರವಾಗಿ ಸದಸ್ಯ ಹೆಚ್. ಮಹಮ್ಮದ್ ಆಲಿಯವರು ಮಾತನಾಡಿ ಗುರುಂಪುನಾರ್ ಮೂವಪ್ಪುವಿನಲ್ಲಿ ವರ್ಗ ಜಾಗ ಇರುವುದರಿಂದ ಎಲ್ಲರ ಸಹಕಾರ ಪಡೆದು ರಸ್ತೆಗೆ ಜಾಗ ಬಿಟ್ಟು ಕೊಟ್ಟ ಬಳಿಕ ರಸ್ತೆ ನಿರ್ಮಾಣ ಮಾಡಬಹುದು. ಈ ಕುರಿತು ವರ್ಗ ಜಾಗದವರಲ್ಲಿ ಮಾತುಕತೆ ನಡೆಸಬೇಕೆಂದು ಗಿರಿಧರ ನಾಯ್ಕರಿಗೆ ಫೋನ್ ಮಾಡಿ ನಾನೇ ತಿಳಿಸಿದ್ದೆ ಎಂದರು. ಆಕ್ಷೇಪಿಸಿದ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಶೇಷಪ್ಪ ಬೆದ್ರಕಾಡುರವರು ೨೦೧೫ರ ಜು ೧೩ರ ಡಿ.ಸಿ. ಆದೇಶದಲ್ಲಿ ರಸ್ತೆ ನಿರ್ಮಾಣವನ್ನು ಶೇ.೧೦೦ ಅನುದಾನದಲ್ಲಿ ನಗರಸಭೆ ಮಾಡಿಕೊಡಬೇಕೆಂದು ಇದೆ ಎಂದು ಆದೇಶ ಪ್ರತಿ ತೋರಿಸಿದರು. ಅಲ್ಲದೆ ಅಲ್ಲಿ ಭೂಸ್ವಾಧೀನವನ್ನೂ ನಗರಸಭೆಯೇ ಮಾಡಬೇಕು ಎಂದರು. ಉತ್ತರಿಸಿದ ಮಹಮ್ಮದ್ ಆಲಿಯರು ನೇರವಾಗಿ ನಗರಸಭೆ ಭೂಸ್ವಾಧೀನ ಮಾಡಲು ಆಗುವುದಿಲ್ಲ. ಭೂಸ್ವಾಧೀನ ಪ್ರಕ್ರಿಯೆಗೆ ನಾವು ಹಣ ಕಟ್ಟಬೇಕು. ಆದರೆ ಈ ಹಿಂದಿನ ಆಡಳಿತ ನೀಡಿದ ಭೂಸ್ವಾಧೀನ ಅರ್ಜಿ ಹಣಕಟ್ಟದೆ ಅಸಿಂಧು ಆಗಿದೆ ಎಂದರು. ಭೂಸ್ವಾಧೀನಕ್ಕಾಗಿ ಅಲ್ಲಿ ಎಷ್ಟೆಷ್ಟು ಜಾಗ ಹೋಗಲಿದೆ ಎಂಬುದಕ್ಕೆ ಸರ್ವೆ ಆಗಿರುವ ಕುರಿತು ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಗಿರಿಧರ ನಾಯ್ಕರವರು ಆಲಿಯವರಿಗೆ ನಕ್ಷೆ ಪ್ರತಿ ನೀಡಿದರು. ಇದನ್ನು ನೋಡಿದ ಆಲಿಯವರು ಮುಂದೆ ನಾವು ಇಲ್ಲಿ ಮಾತುಕತೆ ನಡೆಸಿದರೆ ಆಗುವುದಿಲ್ಲ. ನಾವು ಸ್ಥಳಕ್ಕೆ ಭೇಟಿ ನೀಡುವ ಎಂದು ಪ್ರತಿಭಟನಾಕಾರರೊಂದಿಗೆ ಸ್ಥಳ ಪರಿಶೀಲನೆಗೆ ಹೋದರು.

ಅಧ್ಯಕ್ಷ, ಸದಸ್ಯರಿಂದ ಸ್ಥಳ ಪರಿಶೀಲನೆ: ಪ್ರತಿಭಟನೆ ಬಳಿಕ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯರಾದ ಹೆಚ್. ಮಹಮ್ಮದ್ ಆಲಿ, ಮುಖೇಶ್ ಕೆಮ್ಮಿಂಜೆ, ಪೌರಾಯುಕ್ತೆ ರೂಪಾ ಶೆಟ್ಟಿ, ಇಂಜಿನಿಯರ್ ತುಳಸಿದಾಸ್, ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಶೇಷಪ್ಪ ಬೆದ್ರಕಾಡು, ಸ್ಥಳೀಯರಾದ ಶಾಂತಿ, ಶೇಷಪ್ಪ, ರಿಕ್ಷಾ ಚಾಲಕರು, ಮತ್ತಿತರ ಮುಖಂಡರು ಗುರುಂಪುನಾರ್ ಮೂವಪ್ಪು ರಸ್ತೆ ನಿರ್ಮಾಣ ಆಗ್ರಹವಿರುವ ಸ್ಥಳಕ್ಕೆ ತೆರಳಿದರು. ಅಲ್ಲಿ ಪ್ರಾರಂಭದ ಹಂತದಲ್ಲಿ ನೂರು ಮೀಟರ್ ದೂರದ ತನಕ ರಸ್ತೆ ಮಾಡುವ ಕುರಿತು ಅಕ್ಕಪಕ್ಕದ ಸ್ಥಳದ ಮಾಲಕರಲ್ಲಿ ಮಾತನಾಡಿ ತೀರ್ಮಾನಕ್ಕೆ ಬರಲಾಯಿತ್ತಾದರೂ ಪ್ರಾರಂಭದ ಕಾಲುದಾರಿಯ ಅಕ್ಕಪಕ್ಕದ ಸ್ಥಳದ ಮಾಲಕರಾದ ಅದ್ರಾಮ ಮತ್ತು ಕುಂಞಿಅಹಮ್ಮದ್‌ವರು ಮಾತುಕತೆಗೆ ಲಭ್ಯವಾಗಿಲ್ಲವಾಗಿತ್ತು. ಈ ನಿಟ್ಟಿನಲ್ಲಿ ಅವರನ್ನು ಮಾತುಕತೆಗೆ ಕರೆಸಿ ಮಾತನಾಡುವ ಜವಾಬ್ದಾರಿಯನ್ನು ಮಹಮ್ಮದ್ ಆಲಿಯವರು ವಹಿಸಿಕೊಂಡರು. ಉಳಿದಂತೆ ವರ್ಗಜಾಗದವರಾದ ಚಂದ್ರಶೇಖರ್, ಶಿವರಾಮ ಆಚಾರ್ಯ, ಚಂದ್ರಶೇಖರ್ ಭಟ್‌ರವರಲ್ಲಿ ಮಾತುಕತೆ ನಡೆಸಲಾಯಿತು. ನಗರಸಭೆಯಿಂದ ರಸ್ತೆ ನಿರ್ಮಾಣಕ್ಕೆ ೨೪ ಫೀಟ್ ಜಾಗ ಬೇಕಾಗಿದೆ. ಆದರೆ ೧೨ ಫೀಟ್ ಆದರೂ ರಸ್ತೆ ಮಾಡಿ ಕೊಡುವ ಭರವಸೆಯನ್ನು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡುನೀಡಿದರು. ಧ್ವನಿಗೂಡಿಸಿದ ಪೌರಾಯುಕ್ತೆ ರೂಪಾ ಶೆಟ್ಟಿಯವರು ನಗರಸಭೆ ಎಸ್ಸಿ.ಎಸ್ಟಿ ಅನುದಾನ ಇರುವುದೇ ರಸ್ತೆ ಅಭಿವೃದ್ಧಿಗಾಗಿ. ಆದರೆ ರಸ್ತೆಗಾಗಿ ವರ್ಗ ಜಾಗವನ್ನು ಭೂಸ್ವಾಧೀನ ಮಾಡಿಸಲು ಈ ಅನುದಾನ ಆಗುವುದಿಲ್ಲ ಎಂದರು. ಸ್ಥಳ ಪರಿಶೀಲನೆ ನಡೆಸಿದ ಬಳಿಕ ನಗರಸಭೆಗೆ ಬಂದು ಪ್ರತಿಭಟನೆಯಲ್ಲಿ ನಿರತರಾದವರನ್ನು ನಗರಸಭೆ ಮೀಟಿಂಗ್ ಹಾಲ್‌ಗೆ ಕರೆಸಿ ಮಾತುಕತೆ ನಡೆಸಲಾಯಿತು. ಸ್ಥಳ ಪರಿಶೀಲನೆ ಮತ್ತು ಅಲ್ಲಿ ನಡೆದ ವಿಚಾರವನ್ನು ಅವರಿಗೆ ಮನವರಿಕೆ ಮಾಡಿ ಮುಂದೆ ರಸ್ತೆ ನಿರ್ಮಾಣ ಮಾಡಲು ಭರವಸೆ ನೀಡಿದ ವಿಚಾರವನ್ನು ತಿಳಿಸಲಾಯಿತು. ದಲಿತ್ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಶೇಷಪ್ಪ ಬೆದ್ರಕಾಡುರವರು ಮಾತನಾಡಿ ನಮ್ಮ ಒಂದು ಹಂತದ ಬೇಡಿಕೆ ಈಡೇರಿದೆ. ಮುಂದೆ ಹಂತ ಹಂತವಾಗಿ ರಸ್ತೆ ಪೂರ್ಣಗೊಳಿಸುವ. ಈ ನಿಟ್ಟಿನಲ್ಲಿ ನಾವು ರಸ್ತೆ ಆಗುವ ತನಕದ ಅಹೋರಾತ್ರಿ ಪ್ರತಿಭಟನೆಯುನ್ನು ಇಲ್ಲಿಗೆ ಮುಗಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ ಎಸ್.ಐ ಒಮನ, ಸಂಚಾರ ಠಾಣಾ ಎಸ್.ಐ ನಾಗರಾಜ್ ಮತ್ತು ಸಿಬಂದಿಗಳು ಉಪಸ್ಥಿತರಿದ್ದರು. ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಮಾಜಿ ಗೌರವಾಧ್ಯಕ್ಷ ದಾಮೋದರ್ ಮುರ, ಸದಸ್ಯರಾದ ಸುರೇಂದ್ರ ನಾಯ್ಕ್ ಪಡ್ಡಾಯೂರು, ಸತೀಶ್ ಕೆ. ಕೃಷ್ಣನಗರ, ಸ್ಥಳೀಯ ನಿವಾಸಿ ಕೇಶವ ಗುರುಂಪುನಾರ್, ಸುರೇಂದ್ರ ನಾಯ್ಕ, ಪುರುಷೋತ್ತಮ, ಮುರಳೀಧರ, ಶಾಂತಿ, ಶೇಷಪ್ಪ ಪೂಜಾರಿ, ಜಯರಾಮ ಗುರುಂಪುನಾರ್, ಹೇಮಚಂದ್ರ ಗೌಡ, ಚಂದ್ರಶೇಖರ್ ನಾಯ್ಕ ರೆಂಜಳ, ಪೂವಪ್ಪ ಗುರುಂಪುನಾರ್, ಗೋಪಾಲ, ಶ್ರೀಧರ್, ಮೋಹನ್ ಕುಮಾರ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾ ನಿರತರಿಗೆ ಮಧ್ಯಾಹ್ನ ಸಂಘಟಕರು ಗಂಜಿ ಊಟದ ವ್ಯವಸ್ಥೆಯನ್ನು ನಗರಭೆ ಆವರಣ ಬಳಿ ಮಾಡಲಾಗಿತ್ತು.

ಅನ್ಯ ಕಾರ‍್ಯಕ್ರಮಕ್ಕೆ ತೆರಳಿದ್ದ ಅಧ್ಯಕ್ಷರು:

ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡುರವರಿಗೆ ಪ್ರತಿಭಟನೆ ನಡೆಯುವ ವಿಚಾರ ತಿಳಿಯದ ಕಾರಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಶ್ರೀ.ಕ್ಷೇ.ಧ.ಗ್ರಾ.ಯೋ. ಕೇಂದ್ರ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲಿಂದ ನಗರಸಭೆಗೆ ಬಂದಾಗ ಪ್ರತಿಭಟನೆ ನಡೆಯುತ್ತಿರುವುದನ್ನು ತಿಳಿದು ಪ್ರತಿಭಟನಾಕಾರರ ಬೇಡಿಕೆಯನ್ನು ಆಲಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಮಹಮ್ಮದ್ ಆಲಿ, ಮುಖೇಶ್ ಕೆಮ್ಮಿಂಜೆ, ಪೌರಯುಕ್ತೆ ರೂಪಾ ಶೆಟ್ಟಿಯವರು ಮಾತುಕತೆ ನಡೆಸಿದರು.

.19ಕ್ಕೆ ಒಪ್ಪಿಗೆ ಪತ್ರಕ್ಕಾಗಿ ವರ್ಗ ಜಾಗದವರ ಸಭೆ

ಏಕಾ ಏಕಿಯಾಗಿ ರಸ್ತೆ ನಿರ್ಮಣ ಮಾಡಲು ಆಗುವುದಿಲ್ಲ. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕು. ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡುತ್ತೇವೆ ಎಂದು ಒಪ್ಪಿಗೆ ನೀಡುವುದಾದರೆ ಜಾಗದ ಮಾಲಕರ ಒಪ್ಪಿಗೆ ಪತ್ರ ನಮಗೆ ಬೇಕು. ಈ ನಿಟ್ಟಿನಲ್ಲಿ ಅ.19ಕ್ಕೆ ವರ್ಗ ಜಾಗದವರ ಸಭೆ ನಡೆಸುವ. ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡುತ್ತೇವೆ ಎಂದು ಹೇಳುವವರನ್ನು ನೀವು ಕರೆಸಬೇಕು. ಪ್ರಾರಂಭದ ಕಾಲು ದಾರಿಯ ಬಳಿ ಇರುವ ಜಾಗದ ಮಾಲಕರಾದ ಅದ್ರಾಮ ಮತ್ತು ಕುಂಞಿಅಹಮ್ಮದ್‌ರವರನ್ನು ನಾನು ಕರೆಸುತ್ತೇನೆ ಎಂದು ಹೆಚ್. ಮಹಮ್ಮದ್ ಆಲಿಯವರು ಹೇಳಿದರು.

* ನಗರಸಭೆ ಆವರಣದೊಳಗೆ ಕುಳಿತು ಪ್ರತಿಭಟನೆ

* ಪ್ರತಿಭಟನೆಗೆ ಸ್ಪಂದನೆ ಕಾಣದ ವೇಳೆ ಕಚೇರಿಗೆ ಮುತ್ತಿಗೆ

* ಪ್ರತಿಭಟನಾಕಾರರಿಗೆ ಆವರಣದಲ್ಲೇ ಮಧ್ಯಾಹ್ನ ಗಂಜಿ ಊಟ

* ರಸ್ತೆ ನಿರ್ಮಾಣದ ಭರವಸೆ ಬಳಿಕ ಚಪ್ಪಾಳೆ ಮೂಲಕ ಪ್ರತಿಭಟನೆ ಹಿಂತೆಗೆತ

1947ರ ಸ್ವಾತಂತ್ರ್ಯ ದಲಿತರಿಗೆ ಸಿಕ್ಕಿಲ್ಲ

ಮಿನಿವಿಧಾನಸೌಧ ಬಳಿಯಿಂದ ನಗರಸಭೆ ಆವರಣಕ್ಕೆ ಮೆರವಣಿಗೆ ಮೂಲಕ ಬಂದ ಪ್ರತಿಭಟನಾಕಾರರು, ಆವರಣದೊಳಗೆ ಕುಳಿತು ಪ್ರತಿಭಟನೆ ನಡೆಸಿದರು. ನಗರಸಭೆ ಅಧ್ಯಕ್ಷೆ, ಪೌರಾಯುಕ್ತೆ, ಸದಸ್ಯರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, 1947ರ ಸ್ವಾತಂತ್ರ್ಯ ದಲಿತರಿಗೆ ಸಿಕ್ಕಿಲ್ಲ ಎಂದು ಘೋಷಣೆ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಮಧ್ಯಾಹ್ನದ ವೇಳೆ ಪ್ರತಿಭಟನಾಕಾರರು ನಗರಸಭೆ ಪೌರಾಯುಕ್ತರ ಕಚೇರಿಗೆ ಹೋದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಿ ಕಚೇರಿಯಿಂದ ಹೊರಗೆ ಕರೆದೊಯ್ದರು. ಬಳಿಕ ಕಚೇರಿ ಆವರಣದ ಮೆಟ್ಟಲಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

1_2

1

2

4

6

7

8

9

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.