ಕರೋಪಾಡಿ: ಕಾಡು ಪ್ರಾಣಿಗಿಟ್ಟ ಸ್ಪೋಟಕ ಸಿಡಿದು ದನ ಸಾವು ಕಾನೂನು ಕ್ರಮಕ್ಕೆ ಒತ್ತಾಯ

8ವಿಟ್ಲ: ಕಾಡು ಪ್ರಾಣಿಗಳ ಬೇಟೆಗೆಂದು ಬಂದಿದ್ದ ತಂಡವೊಂದು ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗಾಗಿ ಇಟ್ಟ ಸ್ಪೋಟಕದಿಂದ ದನವೊಂದರ ಮುಖ ಛಿದ್ರಗೊಂಡು ಸಾವನ್ನಪ್ಪಿದ ಘಟನೆ ಕರೋಪಾಡಿ ಗ್ರಾಮದ ಚೆಲ್ಲಂಗಾರು ಎಂಬಲ್ಲಿ ಅ.18ರಂದು ನಡೆದಿದೆ.
ಚೆಲ್ಲಂಗಾರು ನಿವಾಸಿ ರಾಧಾಕೃಷ್ಣ ಮೂಲ್ಯರವರಿಗೆ ಸೇರಿದ 4 ವರ್ಷದ ಹಸುವನ್ನು ದಿನನಿತ್ಯ ಗುಡ್ಡಕ್ಕೆ ಬಿಡಲಾಗುತ್ತಿದ್ದು, ಅಲ್ಲಿ ಹೊಟ್ಟೆ ತುಂಬಿಸಿಕೊಂಡು ತನ್ನ ಪಾಡಿಗೆ ಅದು ಮನೆಗೆ ಹಿಂತಿರುಗುತ್ತಿತ್ತು. ಅ.17ರಂದು ಬೆಳಗ್ಗೆ ಚೆಲ್ಲಂಗಾರು ಗುಡ್ಡಕ್ಕೆ ತೆರಳಿದ ದನ ಸಂಜೆಯಾದರೂ ಮನೆಗೆ ಹಿಂತಿರುಗದ ಹಿನ್ನಲೆಯಲ್ಲಿ ರಾಧಾಕೃಷ್ಣ ಹಾಗೂ ಅವರ ತಾಯಿ ಅಪ್ಪಿರವರು ಗುಡ್ಡಕ್ಕೆ ತೆರಳಿ ದನವನ್ನು ಹುಡುಕಾಟ ನಡೆಸುತ್ತಿದ್ದ ಸಂದರ್ಭ ದನ ಮರವೊಂದರ ಕೆಳಗೆ ಮುಖ ಛಿದ್ರವಾಗಿ ರಕ್ತ ಇಳಿಸುತ್ತಾ ನಿಂತುಕೊಂಡಿರುವುದು ಕಾಣಿಸಿದೆ.
ತಕ್ಷಣ ಮನೆಯವರ ಸಹಾಯದೊಂದಿಗೆ ಗುಡ್ಡದಿಂದ ಮನೆಗೆ ಹೊತ್ತುಕೊಂಡು ಹೋಗಿ ಚಿಕಿತ್ಸೆ ನೀಡುವ ಪ್ರಯತ್ನವನ್ನೂ ಮಾಡಲಾಗಿತ್ತು. ಕುತ್ತಿಗೆ ಹಾಗೂ ಬಾಯಿಯ ಭಾಗ ಸುಟ್ಟು ಸಿಡಿದು ಹೋದ ಹಿನ್ನಲೆ ಹಾಗೂ ತೀವ್ರ ರಕ್ತಸ್ರಾವದಿಂದ ಹಸು ತಡ ರಾತ್ರಿ ಅಸುನೀಗಿತು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ವಿಟ್ಲ ಠಾಣೆಯ ಎಎಸೈ ಆನಂದ ಪೂಜಾರಿ, ಸಿಬ್ಬಂದಿಗಳಾದ ರಾಮಚಂದ್ರ, ರಮೇಶ, ಜಯಕುಮಾರ್, ಪ್ರವೀಣ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಡ್ಯನಡ್ಕ ಪಶು ವೈದ್ಯ ಪರಮೇಶ್ವರ ನಾಯ್ಕ ಅವರು ಶವ ಪರೀಕ್ಷೆ ನಡೆಸಿದ್ದಾರೆ.ವಿಟ್ಲದ ಬಜರಂಗದಳದ ಮುಖಂಡ ಜಯಂತ ಸಿ.ಎಚ್, ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ಮೊದಲಾದವರು ಬೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕೃತರನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.