1 ವರ್ಷವಾದರೂ ಗಡಿ ಗುರುತು ಮಾಡಿಕೊಡದ ಸರ್ವೇಯರ್; ನೆಲ್ಯಾಡಿಯಲ್ಲಿ ಮಂಗಳೂರು ವಿವಿ ಘಟಕ ಕಾಲೇಜು ಸ್ಥಾಪನೆಗೆ ಹಿನ್ನಡೆ

Puttur_Advt_NewsUnder_1
Puttur_Advt_NewsUnder_1

ವರದಿ: ಹರೀಶ್ ಬಾರಿಂಜ

ನೆಲ್ಯಾಡಿ: ಮಂಗಳೂರು ವಿಶ್ವ ವಿದ್ಯಾನಿಲಯದ ಘಟಕ ಕಾಲೇಜು ನೆಲ್ಯಾಡಿಯಲ್ಲಿ ಸ್ಥಾಪನೆಗೆ ವಿಶ್ವವಿದ್ಯಾನಿಲಯದವರು ಮುಂದೆ ಬಂದಿದ್ದರೂ ಸರ್ವೇಯರ್‌ರವರು ಇದಕ್ಕೆ ಸಂಬಂಧಿಸಿದ ಸರಕಾರಿ ಜಾಗದ ಗಡಿಗುರುತು ಮಾಡಿಕೊಡದೇ ಇದ್ದ ಹಿನ್ನೆಲೆಯಲ್ಲಿ ಕಾಲೇಜು ಸ್ಥಾಪನೆಗೆ ಹಿನ್ನಡೆಯಾಗಿದೆ.

ನೆಲ್ಯಾಡಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಘಟಕ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ನೆಲ್ಯಾಡಿ ಗ್ರಾಮದ ಕಲ್ಲಚೆಡವು ಎಂಬಲ್ಲಿರುವ ಸರ್ವೆ ನಂ.೧೮೫/ಪಿ೧ರ ೪೩ ಎಕ್ರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಈ ಜಾಗ ಅರಣ್ಯ ಇಲಾಖೆಯ ಪಂಜ ವಲಯಕ್ಕೆ ಬರುತ್ತಿರುವುದರಿಂದ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಜಾಗ ಮಂಜೂರುಗೊಳಿಸುವ ಸಂಬಂಧ ಅರಣ್ಯ ಇಲಾಖೆ ಅಭಿಪ್ರಾಯ ಕೋರಿ ಸರ್ವೆ ನಂ.೧೮೫ರ ನಕಾಶೆ ಹಾಗೂ ಪಹಣಿಯನ್ನು ಉಲ್ಲೇಖಿಸಿ ನೆಲ್ಯಾಡಿ ಗ್ರಾ.ಪಂ.ನಿಂದ ೨೪-೯-೨೦೧೫ರಂದು ಪಂಜ ವಲಯ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಈ ಪತ್ರಕ್ಕೆ ಪ್ರತಿಯಾಗಿ ಪಂಜ ವಲಯ ಅರಣ್ಯ ಅಧಿಕಾರಿಗಳು ೮-೭-೨೦೧೫ಕ್ಕೆ ನೆಲ್ಯಾಡಿ ಗ್ರಾ.ಪಂ. ಪಿಡಿಒರವರಿಗೆ ಪತ್ರ ಬರೆದಿದ್ದು, ’ಮಂಗಳೂರು ವಿಶ್ವ ವಿದ್ಯಾನಿಲಯದ ಘಟಕ ಕಾಲೇಜು ಸ್ಥಾಪಿಸಲು ಪ್ರಸ್ತಾಪಿಸಿದ ಜಾಗದ ಗಡಿ ಗುರುತು ಇರುವುದಿಲ್ಲ. ಅಲ್ಲದೇ ಸದ್ರಿ ನಕಾಶೆಯಲ್ಲಿ ತಹಶೀಲ್ದಾರರ ದೃಢೀಕರಣವೂ ಇರುವುದಿಲ್ಲ. ಆದ್ದರಿಂದ ಪ್ರಸ್ತಾಪಿಸಿದ ಜಾಗದ ನಕಾಶೆಯನ್ನು ಗುರುತಿಸಿ, ತಹಶೀಲ್ದಾರರಿಂದ ದೃಢೀಕರಿಸಿದ ನಕಾಶೆಯನ್ನು ಕಚೇರಿಗೆ ಕಳುಹಿಸಿಕೊಟ್ಟಲ್ಲಿ ಹಾಗೂ ಗಡಿ ಗುರುತು ತೋರಿಸಿಕೊಡಲು ಸಿಬ್ಬಂದಿಯವರನ್ನು ನಿಯೋಜಿಸಿದಲ್ಲಿ ಇಲಾಖಾ ಅಭಿಪ್ರಾಯ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದರು.

ತಹಶೀಲ್ದಾರ್‌ಗೆ ಪತ್ರ: ಪಂಜ ವಲಯ ಅರಣ್ಯಾಧಿಕಾರಿಗಳ ಪತ್ರದಂತೆ ನೆಲ್ಯಾಡಿ ಗ್ರಾಮ ಪಂಚಾಯತ್‌ನಿಂದ ೧೭-೧೦-೨೦೧೫ಕ್ಕೆ ಪುತ್ತೂರು ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿದ್ದು ನೆಲ್ಯಾಡಿ ಗ್ರಾಮದ ಸರ್ವೆ ನಂಬ್ರ ೧೮೫/ಪಿ೧ರ ಸರ್ಕಾರಿ ಭೂಮಿಯಲ್ಲಿ ೪೩ ಎಕ್ರೆಯನ್ನು ಗಡಿಗುರುತು ಮಾಡಿ ನಕಾಶೆಯನ್ನು ತಮ್ಮ ಸಹಿಯೊಂದಿಗೆ ದೃಢೀಕರಿಸಿ ಕೊಡುವಂತೆ ಕೇಳಿಕೊಳ್ಳಲಾಗಿತ್ತು. ಬಳಿಕ ತಹಶೀಲ್ದಾರ್ ಕಚೇರಿಯಿಂದ ಭೂಮಾಪಕರ ಕಚೇರಿಗೆ ಈ ಬಗ್ಗೆ ಪತ್ರ ಬರೆಯಲಾಗಿತ್ತು.

೧ ವರ್ಷವಾದರೂ ಸರ್ವೆಗೆ ಬಂದಿಲ್ಲ: ಗಡಿ ಗುರುತು ಮಾಡಿಕೊಡುವಂತೆ ಪಂಚಾಯತ್‌ನಿಂದ ತಹಶೀಲ್ದಾರ್ ಕಚೇರಿಗೆ ಪತ್ರ ಬರೆದು ೧ ವರ್ಷವಾದರೂ ಸರ್ವೆ ಕಾರ‍್ಯ ಇನ್ನೂ ನಡೆದಿಲ್ಲ. ಸರಕಾರಿ ಇಲಾಖೆಗೆ ಸಂಬಂಧಿಸಿದ ಜಾಗದ ಸರ್ವೆಗೆ ಸರ್ವೇಯರ್‌ಗಳಿಗೆ ಲಂಚ ಕೊಡುವವರು ಯಾರೂ ಇಲ್ಲ. ಆದ್ದರಿಂದಲೇ ಅವರು ಸರ್ವೆಗೆ ಬರುತ್ತಿಲ್ಲ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಮಂಗಳೂರು ವಿವಿಗೆ ಜಾಗ ನೀಡದೇ ಇದ್ದಲ್ಲಿ ನೆಲ್ಯಾಡಿಯಲ್ಲಿ ಆರಂಭಗೊಳ್ಳಬೇಕಿದ್ದ ಮಂಗಳೂರು ವಿವಿ ಕಾಲೇಜ್ ಘಟಕ ಬೇರೆ ಎಲ್ಲಿಗೋ ಶಿಫ್ಟ್ ಆಗುವ ಸಾಧ್ಯತೆಯೂ ಇದೆ. ಮಂಗಳೂರು ವಿವಿ ಘಟಕ ನೆಲ್ಯಾಡಿಯಲ್ಲಿ ಆರಂಭಗೊಂಡಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಬಗ್ಗೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಗಡಿ ಗುರುತು ಮಾಡಿಕೊಡಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಮಂಗಳೂರು ವಿಶ್ವ ವಿದ್ಯಾನಿಲಯದ ಘಟಕ ಕಾಲೇಜು ನೆಲ್ಯಾಡಿಯಲ್ಲಿ ಸ್ಥಾಪನೆಗೆ ನಿರ್ಧರಿಸಲಾಗಿದೆ. ಇದಕ್ಕೆ ಜಾಗದ ಅವಶ್ಯಕತೆ ಇದ್ದು ಈ ಸಂಬಂಧ ನೆಲ್ಯಾಡಿ ಗ್ರಾಮ ಪಂಚಾಯತ್‌ಗೆ ತಿಳಿಸಲಾಗಿದೆ. ಆದರೆ ಜಾಗ ಇನ್ನೂ ಗುರುತಿಸಿಕೊಟ್ಟಿಲ್ಲ. ಜಾಗ ನೀಡಿದಲ್ಲಿ ನೆಲ್ಯಾಡಿಯಲ್ಲಿಯೇ ಮಂಗಳೂರು ವಿಶ್ವ ವಿದ್ಯಾನಿಲಯದ ಘಟಕ ಕಾಲೇಜು ಆರಂಭಗೊಳ್ಳಲಿದೆ.

-ವಿಜಯಕುಮಾರ್ ಸೊರಕೆ ಸಿಂಡಿಕೇಟ್ ಸದಸ್ಯರು, ಮಂಗಳೂರು ವಿವಿ

ಮಂಗಳೂರು ವಿಶ್ವ ವಿದ್ಯಾನಿಲಯದವರು ನೆಲ್ಯಾಡಿಯಲ್ಲಿ ವಿವಿಯ ಘಟಕ ಕಾಲೇಜು ಆರಂಭಿಸಲು ಮುಂದಾಗಿದ್ದಾರೆ. ಇದಕ್ಕೆ ಅಂದಾಜು ೫೦ ಎಕ್ರೆ ಜಾಗ ಬೇಕಾಗಿದೆ. ನೆಲ್ಯಾಡಿ ಗ್ರಾಮದ ಕಲ್ಲಚೆಡವು ಎಂಬಲ್ಲಿ ೪೩ ಎಕ್ರೆ ಸರಕಾರಿ ಜಾಗವಿದ್ದು ಇದರ ಗಡಿ ಗುರುತು ಮಾಡಿಕೊಡುವಂತೆ ಸರ್ವೇಯರ್‌ಗಳಿಗೆ ಪತ್ರ ಮುಖೇನ ಕೇಳಿಕೊಳ್ಳಲಾಗಿದೆ. ಆದರೆ ಸರ್ವೆಯರ್‌ಗಳು ಜಾಗದ ಗಡಿ ಗುರುತು ಮಾಡಿಕೊಡದೇ ಇರುವುದರಿಂದ ಘಟಕ ಕಾಲೇಜು ಆರಂಭಕ್ಕೆ ಹಿನ್ನಡೆಯಾಗಿದೆ. ಗಡಿ ಗುರುತು ಮಾಡಿಕೊಡುವಂತೆ ೧ ವರ್ಷದ ಹಿಂದೆಯೇ ತಹಶೀಲ್ದಾರ್‌ಗೆ ಪತ್ರ ಬರೆದು ಕೇಳಿಕೊಳ್ಳಲಾಗಿದೆ. ಅಲ್ಲದೇ ಈ ಬಗ್ಗೆ ಪದೇ ಪದೇ ದೂರವಾಣಿ ಕರೆ ಮಾಡಿ ನೆನಪಿಸಲಾಗುತ್ತಿದೆ. ಆದರೂ ಸರ್ವೆಯರ್‌ಗಳು ಗಡಿಗುರುತು ಮಾಡಲು ಅಳತೆಗೆ ಬರುತ್ತಿಲ್ಲ. ನೆಲ್ಯಾಡಿಗೆ ಮಂಗಳೂರು ವಿವಿ ಘಟಕ ಕಾಲೇಜು ಕೈತಪ್ಪಿದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ

-ಉಷಾ ಅಂಚನ್, ತಾ.ಪಂ.ಸದಸ್ಯರು

ಕೋಡಿಂಬಾಡಿ ಗ್ರಾಮದ ಮರು ಸರ್ವೆಗೆ ಸಂಬಂಧಿಸಿದಂತೆ ತಾಲೂಕು ಸರ್ವೆಯರ್ ಮಂಗಳೂರು ಡಿಸಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಗಡಿ ಗುರುತು ಮಾಡಿಕೊಡಲು ೧ ವರ್ಷದ ಹಿಂದೆ ನೆಲ್ಯಾಡಿ ಗ್ರಾಮ ಪಂಚಾಯತ್‌ನಿಂದ ಅರ್ಜಿ ಬಂದಿರುವ ಬಗ್ಗೆ ಮಾಹಿತಿ ಇಲ್ಲ. ನಾನು ನಾಲ್ಕು ತಿಂಗಳ ಹಿಂದೆ ಇಲ್ಲಿಗೆ ಬಂದಿರುತ್ತೇನೆ. ಸದ್ರಿ ಜಾಗದ ಅಳತೆ ಮಾಡಿ ತಕ್ಷಣ ಗಡಿಗುರುತು ಮಾಡಿ ನಕಾಶೆ ತಯಾರಿಸಿ ಕೊಡುತ್ತೇವೆ

-ಮಂಜುನಾಥ್, ಸೂಪರ್‌ವೈಸರ್ ಭೂಮಾಪನಾ ಇಲಾಖೆ

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.