ಮಕ್ಕಳಂತೆ ನಲಿದು ಕಲಿಯುತ್ತಿರುವ ಶಿಕ್ಷಕರು; ಜಿಲ್ಲಾ ಮಟ್ಟದ ಸ್ಕೌಟ್ಸ್& ಗೈಡ್ಸ್ ಶಿಕ್ಷಕರ ಶಿಬಿರ

Puttur_Advt_NewsUnder_1
Puttur_Advt_NewsUnder_1

sandipani img_20161020_124831

* ಉಮೇಶ್ ಮಿತ್ತಡ್ಕ

ಶಿಸ್ತು, ಸಂಯಮ, ಸೇವೆಯ ಪ್ರತೀಕ

ಭಾರತದಲ್ಲಿ ಮೊದಲ ಬಾರಿಗೆ ಸ್ಕೌಟ್ ಚಟುವಟಿಕೆ ಆರಂಭವಾದದು 1909ರಲ್ಲಿ. ನಿವೃತ್ತ ಕ್ಯಾಪ್ಟನ್ ಟಿ ಎಚ್ ಬೇಕರ್ ಎಂಬವರು ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯಲ್ಲಿ ಒಂದು ಬಾಯ್ ಸ್ಕೌಟ್ ತಂಡದ ರೂಪದಲ್ಲಿ ಆರಂಭಿಸಿದರು. 1917ರ ಮಾರ್ಚ್ 21ರಂದು ಭಾರತದಲ್ಲಿ ದೇಶೀಯ ಮಕ್ಕಳಿಗೆ ಸ್ಕೌಟ್ ಚಳವಳಿ ಅಧಿಕೃತವಾಗಿ ಆರಂಭವಾಯಿತು. ರಾಷ್ಟ್ರೀಯ ನಾಯಕರಾದ ಪಂಡಿತ ಮದನ ಮೋಹನ ಮಾಳವೀಯ, ಪಂಡಿತ ಹೃದಯನಾಥ ಕುಂಜ್ರು ಮತ್ತು ಪಂಡಿತ ಶ್ರೀರಾಮ್ ಬಾಜಪೈ ಸೇರಿ ಸೇವಾ ಸಮಿತಿ ಸ್ಕೌಟ್ ಎಸೋಸಿಯೇಶನನ್ನು ಸ್ಥಾಪಿಸಿದರು. ನಿಸರ್ಗದ ಮಡಿಲಲ್ಲಿ ಬೆರೆತು ಸಮನ್ವಯದಿಂದ ಜೀವನ ನಡೆಸುವಲ್ಲಿ ಬೇಕಾದ ಶಿಸ್ತು, ಸಂಘಟನೆ ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಕಾರ್ಯಕ್ರಮವಾಗಿ ಸ್ಕೌಟ್ & ಗೈಡ್ಸ್ ಬೆಳಕು ಚೆಲ್ಲುತ್ತಿದೆ.

ಅಂದು ಸಾಂದೀಪನಿ ಮಹರ್ಷಿಗಳ ಆಶ್ರಮದ ಪರಿಸರದಲ್ಲಿ ಶಿಷ್ಯರನ್ನು ಕೂಡಿಸಿಕೊಂಡು ಗುರುಗಳು ಪಾಠ ಕಲಿಸಿಕೊಡುತ್ತಿದ್ದ ಆಹ್ಲಾದಕರ ವಾತಾವರಣ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಆವರಣದಲ್ಲಿ ಮತ್ತೆ ಮರುಕಳಿಸಿದೆ. ಇಲ್ಲಿ ಶಿಕ್ಷಕರು ಮಕ್ಕಳಾಗಿದ್ದಾರೆ. ಮಕ್ಕಳಂತೆಯೇ ಪಾಠ ಕಲಿಯುತ್ತಿದ್ದಾರೆ. ಹಾಡುತ್ತಿದ್ದಾರೆ.. ನಲಿಯುತ್ತಿದ್ದಾರೆ.. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಾಗತಿಕ ಸಂಸ್ಥೆಯಾಗಿರುವ ಸ್ಕೌಟ್ಸ್ & ಗೈಡ್ಸ್‌ನ ಜಿಲ್ಲಾ ಘಟಕದ ಮೂಲಕ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರಿಗಾಗಿ ಸ್ಕೌಟ್ಸ್ & ಗೈಡ್ಸ್ ಪ್ರಾಥಮಿಕ ತರಬೇತಿ ನಡೆಯುತ್ತಿದೆ. ಜಿಲ್ಲೆಯ ವಿವಿಧ ಶಾಲೆಗಳಿಂದ 194 ಶಿಬಿರಾರ್ಥಿಗಳು ಭಾಗವಹಿಸುವುದರೊಂದಿಗೆ ಪ್ರಥಮ ಬಾರಿಗೆ ಅತ್ಯಧಿಕ ಮಂದಿ ಶಿಬಿರಾರ್ಥಿಗಳು ಹೊಂದಿರುವ ಕ್ಯಾಂಪ್ ಎಂಬ ದಾಖಲೆಯನ್ನೂ ಮಾಡಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಶಿಸ್ತು, ಸಂಯಮ ಹಾಗೂ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಅಳವಡಿಸಬೇಕೆಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಾರಿ ಸರಕಾರಿ ಶಿಕ್ಷಕರಿಗೆ ಈ ತರಬೇತಿಯನ್ನು ಕಡ್ಡಾಯಗೊಳಿಸಿದೆ.
ಶಿಶುಮಂದಿರಗಳಲ್ಲಿ ‘ಬನ್ನಿ’, ಪ್ರಾಥಮಿಕ ಶಾಲೆಗಳಲ್ಲಿ ಕಬ್ಸ್ & ಬುಲ್‌ಬುಲ್ಸ್, ಪ್ರೌಢ ಶಾಲೆಗಳಲ್ಲಿ ಸ್ಕೌಟ್ಸ್ & ಗೈಡ್ಸ್ ಎಂಬ ಘಟಕಗಳು ಮಕ್ಕಳಲ್ಲಿ ಶಿಸ್ತು, ನಿಯಮ, ಜೀವನದ ಮೌಲ್ಯಗಳ ಜೊತೆಗೂಡಿ ದೇಶಪ್ರೇಮದ ಭಾವನೆಯನ್ನು ಬಿತ್ತುವಲ್ಲಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ಮಕ್ಕಳಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂಬ ಕೂಗು ಇಲಾಖೆಗೂ ಕೇಳಿಸಿರುವ ಹಿನ್ನೆಲೆಯಲ್ಲಿ ಈ ಘಟಕಗಳ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಮಾಡಬೇಕೆಂಬ ಇರಾದೆ ಹೊಂದಲಾಗಿದೆ.
ಪ್ರಾಥಮಿಕ ತರಬೇತಿಗಳನ್ನು ಇಂತಹ ಶಿಬಿರದ ಮೂಲಕ ಮಾಡಲಾಗುತ್ತಿದೆ. ಎರಡನೇ ಹಂತದ ಕೋರ್ಸ್‌ಗಳನ್ನು ಜಿಲ್ಲಾ ಘಟಕದಲ್ಲಿಯೇ ಕೊಡಲಾಗುತ್ತಿದೆ. ವರ್ಷದಲ್ಲಿ ಎರಡು ಬಾರಿ ರಾಜ್ಯ ಮಟ್ಟದ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಾರ್ಥನೆ, ಧ್ವಜಗೀತೆ, ರಾಷ್ಟ್ರಗೀತೆ ಮತ್ತು ಶಿಸ್ತು ಸಂಯಮ ಜೀವನ ಮೌಲ್ಯಗಳ ಪಾಠಗಳ ಜೊತೆಗೆ ಪ್ರತಿಜ್ಞೆ ಬೋಧನೆಯ ಮೂಲಕ ಆದರ್ಶ ಶಿಕ್ಷಕರನ್ನಾಗಿ ರೂಪಿಸುವ ಕಾರ್ಯ ಈ ಶಿಬಿರದ ಮೂಲಕ ನಡೆಯುತ್ತಿದೆ. ೧೨ ಮಂದಿ ವಿಶೇಷ ತರಬೇತುದಾರರಿಂದ ತರಬೇತಿ ಮಾಡಲಾಗುತ್ತಿದ್ದು ಪ್ರತಿದಿನ ಶಿಬಿರಾಗ್ನಿ ಮೂಲಕ ಸಾಂಸ್ಕೃತಿಕ ಚಟುವಟಿಕೆ ಶಿಕ್ಷಕರಲ್ಲಿ ಸಂಭ್ರಮ ಮನೆಮಾಡಿಸಿದೆ. ೭ ದಿವಸಗಳ ಕಾಲ ತರಬೇತಿ ನಡೆದು ಅ. ೨೪ರಂದು ಸಮಾಪನಗೊಳ್ಳಲಿದೆ.
ಅ. ೨೦ರಂದು ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವಾಲ್ಟರ್ ಡಿ’ಮೆಲ್ಲೋ, ಸ್ಕೌಟ್ಸ್ & ಗೈಡ್ಸ್‌ನ ಜಿಲ್ಲಾ ಚೀಫ್ ಕಮಿಷನರ್ ಎನ್.ಜಿ. ಮೋಹನ್, ಸ್ಕೌಟ್ ಕಮಿಷನರ್ ರಾಮಶೇಷ ಶೆಟ್ಟಿ, ವಾಸುದೇವ ಬೋಳೂರು ಹಾಗೂ ಬಂಟ್ವಾಳ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಜಿ.ಬಿ. ಬಾಗೇವಾಡಿ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

ತರಬೇತಿಯಲ್ಲಿನ ಅಂಶಗಳು:
* ಶಾಲೆಗಳಲ್ಲಿ ಘಟಕಗಳನ್ನು ಹೇಗೆ ಮಾಡುವುದು
* ಒಳ್ಳೆಯ ಶಿಕ್ಷಕ/ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುವುದು
* ಶಿಕ್ಷಕನಿಗಿರಬೇಕಾದ ಗುಣಶ್ರೇಷ್ಠತೆಗಳು
* ಮಕ್ಕಳ ಸಂಘಟನೆ
* ಘಟಕ ನಿರ್ವಹಿಸಲು ಬೇಕಾದ ತರಬೇತಿಗಳು

ಇದೊಂದು ಜೀವನ ಬದಲಾವಣೆಯ ಶಿಬಿರವೂ ಹೌದು. ಋಣಾತ್ಮಕ ದೃಷ್ಟಿಕೋನ ಹಾಗೂ ಅವಗುಣಗಳನ್ನು ಹೊಂದಿರುವ ಎಷ್ಟೋ ಮಂದಿ ಶಿಕ್ಷಕರು ಇಂತಹ ಶಿಬಿರದ ಬಳಿಕ ಆದರ್ಶ ಶಿಕ್ಷಕರಾಗಿ ಬದಲಾವಣೆಯ ಹೊಂದಿರುವ ಘಟನೆಗಳು ಸಾಕಷ್ಟಿವೆ. ಹಾಗಾಗಿ ನಿವೃತ್ತಿ ಪಡೆದಿದ್ದರೂ ಈ ಸೇವೆಯಲ್ಲಿ ಸಂತೃಪ್ತಿ ಹೊಂದಿದ್ದೇನೆ

-ಎಂ.ಜಿ. ಕಜೆ ನಿವೃತ್ತ ಜಿಲ್ಲಾ ಸಂಯೋಜಕರು, ಸ್ಕೌಟ್ಸ್ & ಗೈಡ್ಸ್

ಸೇವಾ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕಾದರೆ ಶಿಕ್ಷಕರಲ್ಲಿ ಮೊದಲು ಮೂಡಬೇಕೆಂಬ ದಿಶೆಯಲ್ಲಿ ಜಿಲ್ಲಾ ಮಟ್ಟದ ಶಿಬಿರವನ್ನು ನಮ್ಮಲ್ಲಿ ನಡೆಸಲು ಅವಕಾಶ ದೊರಕಿರುವುದಕ್ಕೆ ಸಂತೋಷವಾಗಿದೆ.

– ಭಾಸ್ಕರ ಆಚಾರ್ ಹಿಂದಾರ್ ಸಂಚಾಲಕರು, ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.