ಸರಕಾರಿ ಆಸ್ಪತ್ರೆ ಕಚೇರಿ ಲೆಕ್ಕಪತ್ರದಲ್ಲಿ ಹಣದ ಅವ್ಯವಹಾರ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಬಹಿರಂಗ

Puttur_Advt_NewsUnder_1
Puttur_Advt_NewsUnder_1

govt

* ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಶಾಸಕಿ, ಎಸಿ ಸೂಚನೆ

* ಆಡಿಟ್ ಪರಿಶೀಲನೆ ವೇಳೆ ಅವ್ಯವಹಾರ ಬೆಳಕಿಗೆ  

*ರೂಲ್ಸ್‌ಗಳೆಲ್ಲಾ ಬುಕ್‌ನಲ್ಲಿ ಮಾತ್ರ – ಎ.ಸಿ    

*36 ನಿರ್ಣಯಕ್ಕೂ ಅನುಮೋದನೆ ಇಲ್ಲ  

* ಶುದ್ಧ ನೀರಿನ ಘಟಕ, ತಾತ್ಕಾಲಿಕ ವಿಶ್ರಾಂತಿ ಕೊಠಡಿ ನಿರ್ಮಾಣ  

*ನಮಗೆ ಪಿ.ಎಫ್ ಹಣ ಬಂದಿಲ್ಲ  

*ಪೆಟ್ರೋಲ್ ಪಂಪ್‌ಗೆ 1.12 ಲಕ್ಷ ರೂ.ಡೀಸಿಲ್ ಮೊತ್ತ ಬಾಕಿ

ಪುತ್ತೂರು: ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆ ಕಚೇರಿ ಲೆಕ್ಕ ಪತ್ರದಲ್ಲಿ ಹಣದ ಅವ್ಯವಹಾರ ನಡೆದಿದೆ ಎನ್ನುವ ವಿಚಾರ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಬೆಳಕಿಗೆ ಬಂದಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ರಾಜ್ಯ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಸಹಾಯಕ ಕಮೀಷನರ್ ಡಾ. ರಾಜೇಂದ್ರ ಕೆ.ವಿಯವರು ಸೂಚನೆ ನೀಡಿದ್ದಾರೆ.

ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಸಹಾಯಕ ಕಮೀಷನರ್ ಡಾ. ರಾಜೇಂದ್ರ ಕೆ.ವಿ ಅವರ ನೇತೃತ್ವದಲ್ಲಿ ಆಸ್ಪತ್ರೆಯ ರಕ್ಷಾ ಸಮಿತಿ ಸಭೆ ಅ.21ರಂದು ನಡೆಯಿತು. ಸಭೆಯಲ್ಲಿ ಲೆಕ್ಕಪತ್ರ ಮಂಡನೆ ವೇಳೆ ಸರಿಯಾದ ಲೆಕ್ಕಪತ್ರವಿಲ್ಲದೆ ಅನುದಾನವನ್ನು ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಸಭೆಯಲ್ಲಿ ಜಮಾ ಖರ್ಚು ವಿವರಗಳ ಮಾಹಿತಿ ಪರಿಶೀಲನೆಯ ಸಂದರ್ಭದಲ್ಲಿ ದ್ವಿತೀಯ ದರ್ಜೆ ಸಹಾಯಕ ಕಿರಣ್ ಮತ್ತುಆಸ್ಪತ್ರೆಯ ಜನರಲ್ ಎಕೌಂಟೆಂಟ್ ಯೋಗಾನಂದ ಎಂಬವರು ಸರಕಾರಿ ನಿಯಮಾವಳಿಯನ್ನು ಮೀರಿ ಖರ್ಚು ಮಾಡಿದ್ದು ಕಂಡು ಬಂದಿದೆ.  ಈ ಪೈಕಿ ಕಿರಣ್‌ರವರು ತನ್ನ ತಪ್ಪನ್ನು ಒಪ್ಪಿಕೊಂಡು ಹಣವನ್ನು ವಾರದೊಳಗೆ ಮರು ಪಾವತಿಸುವುದಾಗಿ ಲಿಖಿತ ಹೇಳಿಕೆ ನೀಡಿರುವುದನ್ನು ಶಾಸಕಿಯವರು ಓದಿದರು.

ಆಡಿಟ್ ಪರಿಶೀಲನೆ ವೇಳೆ ಅವ್ಯವಹಾರ ಬೆಳಕಿಗೆ :

2014-15 ರ ಆಡಿಟ್ ಆಗದೆ 2015 -16ರ ಆಡಿಟ್ ಹೇಗಾಯಿತು ಎಂದು ಸಹಾಯಕ ಕಮಿಷನರ್ ಡಾ ರಾಜೇಂದ್ರ ಕೆ.ವಿ ಪ್ರಶ್ನಿಸಿದರು. ಧ್ವನಿಗೂಡಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್  ಇದನ್ನೇ ಪ್ರಶ್ನಿಸಿದರು. ಈ ವೇಳೆ ಸಹಾಯಕ ಕಮೀಷನರ್ ರೂ. 1ಲಕ್ಷದ 15ಸಾವಿರ ಹಣ ಓಚರ್ ಒಳಗಡೆ ತುಂಬಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಕುರಿತು ಆಸ್ಪತ್ರೆಯ ಸಿಬಂದಿ ಕಿರಣ್ ಒಪ್ಪಿಕೊಂಡು ಬರಕೊಂಡಿದ್ದಾರೆ. ಇದೊಂದು ಕ್ರಿಮಿನಲ್ ಅಫೆನ್ಸ್ ಎಂದರು. ಉತ್ತರಿಸಿದ ರಾಮಕೃಷ್ಣ ರಾವ್ ಅವರು ರೂ. ೧ಲಕ್ಷ ಚಿಲ್ಲರೆ ಹಣ ಪಾವತಿಸಿಲ್ಲ ಎಂದು ಹೇಳಲಾಗುವುದಿಲ್ಲ. ಅದಕ್ಕಿಂತ  ಹೆಚ್ಚಿನ ಹಣವೂ ಅವ್ಯವಹಾರ ಆಗಿರಬಹುದು. ಈ ನಿಟ್ಟಿನಲ್ಲಿ ಸರಿಯಾದ ಮಾಹಿತಿ ಬೇಕು ಎಂದರು.  ಆಸ್ಪತ್ರೆಯ ಕ್ಯಾಶ್ ಹ್ಯಾಂಡಲ್ ಮಾಡುವ ಕಿರಣ್ ಆಳ್ವರನ್ನು ಪ್ರಶ್ನಿಸಿದರು. ಕಿರಣ್‌ರವರು ಉತ್ತರಿಸಿ ಹೌದು ಸರ್ ಎಂದರಲ್ಲದೆ ಸಿ.ಎಯವರು ಫುಲ್ ಡೀಟೈಲ್ಸ್ ಕೊಡಲಿಲ್ಲ ಎಂದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರದೀಪ್‌ರವರು ಮಾತನಾಡಿ ಅಕೌಂಟೆಂಟ್ ಲೋಕಾನಂದ್‌ರವರು ಪಾಸ್ ಬುಕ್‌ನಲ್ಲಿರುವ ಓಪನಿಂಗ್ ಬ್ಯಾಲೆನ್ಸ್ ನೋಡಿ ಮಾಡಿದ್ದಾರೆ ಎಂದರು. ಜಿಲ್ಲಾ ಆರೋಗ್ಯಾಧಿಕಾರಿಯವರು ಮಾತನಾಡಿ ತನಗೆ ಅನಾರೋಗ್ಯವಿರುವ ಕಾರಣಗಳಿಂದ ಲೆಕ್ಕಾಚಾರಗಳನ್ನು ನೀಡುವಾಗ ತೊಂದರೆಯಾಗಿದೆ ಎಂದು ಕಿರಣ್ ತಿಳಿಸಿದ್ದಾರೆ. ಅಲ್ಲದೆ ವಾರದ ಒಳಗಾಗಿ ಹಣವನ್ನು ಮರುಪಾವತಿ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಏನಿದ್ದರೂ ಈ ಬಗ್ಗೆ ಕ್ರಿಮಿನಲ್ ಕೇಸ್ ದಾಖಲಾಗಬೇಕು. ಸುಮ್ಮನೆ ಕೂತು ಏನೇ ಮಾಡಿದರೂ ಸರಕಾರದಿಂದ ಸಂಬಳ ಸಿಗುತ್ತದೆ ಎಂದಾದರೆ ಕೂಡಲೇ ಸಸ್ಪೆಂಡ್ ಆಗಬೇಕು. ಇಲಾಖೆಯಿಂದ ಅವರ ಮೇಲೆ ಯಾವ ಕ್ರಮ ಕೈಗೊಳ್ಳುತ್ತೀರೋ ತಿಳಿಸಿ ಎಂದು ಎ.ಸಿ. ಹೇಳಿದರು. ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಈ ಕಥೆಯನ್ನು ತಿಳಿಸಿದರೆ ೞಹೌದಮ್ಮ ಯಾರವೞ ಎಂದು ಕೇಳಿ ಅವರ ಮೇಲೆ ಆಕ್ಷನ್ ತೆಗೆದು ಕೊಳ್ಳುತ್ತಾರೆ ಎಂದರು.  ಜಿಲ್ಲಾ ಆರೋಗ್ಯಾಧಿಕಾರಿಯವರು ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು ಎಂದರು.

ರೂಲ್ಸ್‌ಗಳೆಲ್ಲಾ ಬುಕ್‌ನಲ್ಲಿ ಮಾತ್ರ – ಎ.ಸಿ :

ಕಳೆದ ೨ ವರ್ಷಗಳ ವಾರ್ಷಿಕ ವರದಿಯ ಕುರಿತು  ಶಾಸಕರು ಮತ್ತು ಸಹಾಯಕ ಕಮೀಷನರ್ ಪ್ರಶ್ನಿಸಿದಾಗ ಅದರಲ್ಲಿಯೂ ಸಾಕಷ್ಟು ಲೋಪಗಳು ಕಂಡು ಬಂದಿದ್ದು,  ಆಸ್ಪತ್ರೆಯ ಜನ್‌ರಲ್ ಎಕೌಂಟೆಂಟ್ ಯೋಗಾನಂದ ಅವರು ಸರಕಾರದ  ಸುತ್ತೋಲೆಯನ್ನು ಮೀರಿ ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂತು.  ಸುತ್ತೋಲೆಯಲ್ಲಿ ರೂ. ೫ ಸಾವಿರಕ್ಕಿಂತ ಅಧಿಕ ಖರ್ಚು ಮಾಡಲು ಉಪವಿಭಾಗಾಧಿಕಾರಿಗಳ ಅನುಮೋದನೆ, ರೂ. ೨೫ಸಾವಿರಕ್ಕಿಂತ ಅಧಿಕ ಖರ್ಚು ಮಾಡಲು ಆಸ್ಪತ್ರೆ ರಕ್ಷಾ ಸಮಿತಿಯ ಅನುಮೋದನೆ ಹಾಗೂ ರೂ. ೨ ಲಕ್ಷಕ್ಕಿಂತ ಅಧಿಕ ಖರ್ಚು ಮಾಡಲು ಶಾಸಕಿ ಅವರ ಅನುಮೋದನೆ ಪಡೆಯಬೇಕಾಗಿತ್ತು. ಅದರೆ ಸುತ್ತೋಲೆಯನ್ನು  ಮೀರಿ ಹಣವನ್ನು ಖರ್ಚು ಮಾಡಲಾಗಿತ್ತು. ಮತ್ತು ಈ ಬಗ್ಗೆ ಸರಿಯಾದ ದಾಖಲೆಗಳೂ ಲಭ್ಯವಿರಲಿಲ್ಲ. ಈ ಬಗ್ಗೆ ತೀವ್ರ ಆಕ್ರೋಶಿತರಾದ ಉಪವಿಭಾಗಾಧಿಕಾರಿಗಳು ಸರಕಾರದ ಹಣವನ್ನು ತಮಗಿಷ್ಟ ಬಂದಂತೆ ಖರ್ಚು ಮಾಡಿರುವುದಕ್ಕೆ ತರಾಟೆಗೆತ್ತಿಕೊಂಡರು. ಖರ್ಚು ಮಾಡಿರುವ ಸಂಪೂರ್ಣ ವಿವರಗಳನ್ನು ಮುಂದಿನ ಸಭೆಯಲ್ಲಿ ಸಲ್ಲಿಸುವಂತೆ ಸೂಚನೆ ನೀಡಿದರು. ಸುತ್ತೋಲೆಯನ್ನು ಮೀರಿ ಹಣ ಬಳಕೆಯಾಗಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

೩೬ ನಿರ್ಣಯಕ್ಕೂ ಅನುಮೋದನೆ ಇಲ್ಲ:

ಆರೋಗ್ಯ ಇಲಾಖೆ ನಿರ್ಣಯವನ್ನು ಸಮರ್ಪಕವಾಗಿ ನಮೂದಿಸಿಲ್ಲ. ನಿರ್ಣಯದ ಎಲ್ಲಾ ವಿವರಗಳಲ್ಲಿ ಕಾಮಗಾರಿಗೆ ಬಳಸಿದ ಖರ್ಚಾದ ಹಣದ ವಿವರ ಇಲ್ಲ. ಇದರಲ್ಲಿ ಸರಿಯಾದ ಅಂಕಿ-ಅಂಶ ಇಲ್ಲ. ಕೆಲವು ನಿಯಮ ಪ್ರಕಾರ ಅನುಷ್ಠಾನಗೊಂಡಿಲ್ಲ. ಹಾಗಾಗಿ ಆರೋಗ್ಯ ಸಮಿತಿ ಸಭೆಯಲ್ಲಿ ಮಂಡಿಸಿದ ೩೬ ನಿರ್ಣಯಕ್ಕೆ ಅನುಮೋದನೆ ನೀಡಲಾಗುವುದಿಲ್ಲ ಎಂದು ಸಹಾಯಕ ಕಮಿಷನರ್ ಹೇಳಿದರು. ೨೦೧೬-೧೭ ನೇ ಸಾಲಿನ ಆಯವ್ಯಯ ಪಟ್ಟಿಯಲ್ಲಿ ೨೦ ಲಕ್ಷ ರೂ. ನಲ್ಲಿ ೫ ಲಕ್ಷ ಹಣವನ್ನು ಔಷಧ ಖರೀದಿಗೆ ಇಟ್ಟಿರುವುದನ್ನು ಪ್ರಶ್ನಿಸಿದ ಡಾ.ರಾಜೇಂದ್ರ ಕೆ.ವಿಯವರು  ಆಸ್ಪತ್ರೆಯ ಅಭಿವೃದ್ಧಿಗೆ ಬಳಕೆ ಮಾಡಬೇಕಾದ ಹಣವನ್ನು ಔಷಧ, ಇನ್ನಿತ್ತರ ಕೆಲಸಕ್ಕೆ ವಿನಿಯೋಗಿಸಿದರೆ ಹೇಗಾಗುತ್ತದೆ ಎಂದರು.

ಶುದ್ಧ ನೀರಿನ ಘಟಕ, ತಾತ್ಕಾಲಿಕ ವಿಶ್ರಾಂತಿ ಕೊಠಡಿಗೆ ನಿರ್ಮಾಣ:

ಆಸ್ಪತ್ರೆಯ ಅಭಿವೃದ್ಧಿ ದೃಷ್ಟಿಯಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಪ್ರಸ್ತಾಪ ಮಾಡಲಾಯಿತು. ಸಹಾಯಕ ಕಮೀಷನರ್‌ರವರು ಅನುದಾನ ಲಿಮಿಟ್‌ಗೆ ಸಂಬಂಧಿಸಿ ನಾವು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಬೇಕಾಗಿದೆ. ಕೆಲವೊಂದು ಸೌಲಭ್ಯವನ್ನು ಸಂಸ್ಥೆಗಳಿಂದ ಕೊಡುಗೆಯಾಗಿ ಪಡೆಯಲು ಸಾಧ್ಯವಿದೆ ಎಂದರು. ಶಾಸಕರು ಮಾತನಾಡಿ ಶುದ್ದ ನೀರಿನ ಘಟಕವನ್ನು ಕರ್ಣಾಟಕ ಬ್ಯಾಂಕ್ ಸಂಸ್ಥೆಯವರು ನೀಡುವುದಾಗಿ ಭರವಸೆ ನೀಡಿದ್ದಾರೆ ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಯವರು ಬ್ಯಾಂಕ್ ಅಧ್ಯಕ್ಷರನ್ನು ಸಂಪರ್ಕಿಸಿದರೆ ಆಯಿತು ಎಂದರು. ತಾತ್ಕಾಲಿಕ ವಿಶ್ರಾಂತಿ ಕೊಠಡಿಗೆ ಸಂಬಂಧಿಸಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಎಸ್ಟಿಮೇಟ್ ಮಾಡಬೇಕು. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಮಾಡಬೇಕು ಎಂದು ಶಾಸಕರು ಹೇಳಿದರು.

ನಮಗೆ ಪಿ.ಎಫ್ ಹಣ ಬಂದಿಲ್ಲ:

ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ ವರ್ಷದ ಪಿಎಫ್ ಹಣ ಬಂದಿಲ್ಲ ಎಂದು ಸಹಾಯಕ ಕಮೀಷನರ್‌ರವರಿಗೆ ಹೊರಗುತ್ತಿಗೆದಾರ ಸುಧಾಕರ್ ಮನವಿ ಮಾಡಿದರು. ಈ ಕುರಿತು ಪತ್ರ ಬರೆಯುವ. ಜೊತೆಗೆ ಈ ಹಿಂದಿನ ಗುತ್ತಿಗೆದಾರರ ಹಣ ಆಸ್ಪತ್ರೆಯಲ್ಲಿದೆ. ಅದನ್ನು ವಿಂಗಡಿಸಿ ಕೊಡುವ ಚಿಂತನೆ ಮಾಡುವ ಎಂದು ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಆಸ್ಪತ್ರೆಯ ಆವರಣದಲ್ಲಿ ಔಷಧಿ ಕೊಠಡಿ, ನಂದಿನಿ ಮಿಲ್ಕ್ ಕೌಂಟರ್, ಸಬ್‌ಜೈಲ್‌ನ ಆವರಣದಲ್ಲಿ ಮಿನಿ ಕ್ಯಾಂಟಿನ್ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಪೆಟ್ರೋಲ್ ಪಂಪ್‌ಗೆ ಡೀಸೆಲ್ ಮೊತ್ತ ಬಾಕಿ:

ಆಸ್ಪತ್ರೆಯ ಆಂಬುಲೆನ್ಸ್ ಹಳೆಯದಾಗಿದ್ದು ಹೊಸ ವಾಹನ ಖರಿದೀಸುವ ಕುರಿತು ಆಸ್ಪತ್ರೆಯ ವಾಹನದ ಚಾಲಕರು ಸಭೆಯಲ್ಲಿ ಮನವಿ ಮಾಡಿದರು. ಜೊತೆಗೆ ಪೆಟ್ರೋಲ್ ಪಂಪ್‌ಗೆ ರೂ.೧ಲಕ್ಷದ ೧೨ಸಾವಿರ ಡೀಸೆಲ್ ಬಿಲ್ ಬಾಕಿ ಇದೆ. ಹಾಗಾಗಿ ನಮಗೆ ಡೀಸೆಲ್ ಸಿಗುವುದು ಕಷ್ಟ ಎಂದರಲ್ಲದೆ ಕಳೆದ ಬಾರಿ ಶಾಸಕರಿಗೆ ಮನವಿ ಮಾಡಿ ರೂ. ೨ಲಕ್ಷ ಅನುದಾನ ತೆಗೆಸಿ ಕೊಟ್ಟಿದ್ದಾರೆ ಎಂದರು. ಉತ್ತರಿಸಿದ ಶಾಸಕರು ಈ ಬಾರಿಯೂ ತೆಗೆಸಿ ಕೊಡುವ ನನಗೆ ಲೆಟರ್ ಕೊಡಿ ಎಂದರು. ಸಭೆಯಲ್ಲಿ ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ. ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ, ನಗರ ಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಜಿಲ್ಲಾ ಆರೋಗ್ಯ ನಿರೀಕ್ಷಕ ರಾಜೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರದೀಪ್,  ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ನಯನ ರೈ, ಚಂದ್ರಶೇಖರ್ ರೈ ಇಳಂತಾಜೆ, ಅಬ್ದುಲ್ ರಹಿಮಾನ್ ಆಝಾದ್, ಎನ್. ಮಂಜುನಾಥ್, ಪೌರಾಯುಕ್ತೆ ರೂಪಾ ಶೆಟ್ಟಿ, ಆಸ್ಪತ್ರೆಯ ನರ್ಸಿಂಗ್ ಸುಫರ್‌ವೈಸರ್ ರತ್ನಾ, ವೈದ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.