Breaking News

ಕಡಬ ಮುಗೇರ ಯುವ ವೇದಿಕೆ ಸಭೆ ‘ದೌರ್ಜನ್ಯದ ವಿರುದ್ಧ ಹೋರಾಟ ಅನಿವಾರ‍್ಯ’

Puttur_Advt_NewsUnder_1
Puttur_Advt_NewsUnder_1

kadabaಕಡಬ: ಮುಗೇರ ಜನಾಂಗದವರಿಗೆ ಮೇಲ್ವರ್ಗದ ಕೆಲವರಿಂದ ಪದೇ ಪದೇ ದೌರ್ಜನ್ಯ ನಡೆಯುತ್ತಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಡಬ ವಲಯ ಮುಗೇರ ಯುವ ವೇದಿಕೆಯ ಅಧ್ಯಕ್ಷ ವಸಂತ ಕುಬಲಾಡಿ ಹೇಳಿದ್ದಾರೆ. ಕಡಬ ಅಂಬೇಡ್ಕರ್ ಭವನದಲ್ಲಿ ಅ.೧೬ ರಂದು ನಡೆದ ಮುಗೇರ ಯುವ ವೇದಿಕೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಮುಗ್ಧರಾಗಿರುವ ಮುಗೇರ ಜನಾಂಗವು ಮೇಲ್ವರ್ಗದವರ ದೌರ್ಜನ್ಯಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ. ಇತ್ತೀಚೆಗೆ ಎಡಮಂಗಿಲದ ಡೆಕ್ಕಳದಲ್ಲಿ ನಡೆದ ದೌರ್ಜನ್ಯ ಪ್ರಕರಣದಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯಿಂದ ಸಾಧ್ಯವಾಗಲಿಲ್ಲ. ಇಂತಹ ಹಲವಾರು ಪ್ರಕರಣಗಳು ನಡೆಯುತ್ತಿದ್ದು ಎಲ್ಲಾ ಮೂಲ ಸೌಕರ್ಯಗಳನ್ನು ದಲಿತರು ಹೊಂದಿದ್ದಾರೆ ಎಂದು ಪ್ರಚಾರದಲ್ಲಿದ್ದರೂ ಯಾವುದನ್ನೂ ನ್ಯಾಯಯುತವಾಗಿ ಪಡೆಯಲಾರದೆ ಮೂಕಪ್ರೇಕ್ಷಕರಾಗಿರುವ ಪರಿಸ್ಥಿತಿ ನಮಗಾಗಿದ್ದು ನಾವು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರಲ್ಲದೆ ಇನ್ನೂ ಮುಗೇರ ಜನಾಂಗದವರು ತಮ್ಮ ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸದಿದ್ದರೆ ಮೇಲ್ವರ್ಗದವರ ಹೆಚ್ಚಿನ ಉಪಟಳವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾದೀತು ಎಂದು ಎಚ್ಚರಿಸಿದರು. ಉಪಾಧ್ಯಕ್ಷ ವಿನಯ ಗುರಿಯಡ್ಕ ಮಾತನಾಡಿ ಮುಗೇರ ಜನಾಂಗವು ಅತಿಯಾಗಿ ಹಿಂದುಳಿಯಲು ಈಗಿನ ರಾಜಕೀಯವೇ ಮುಖ್ಯ ಕಾರಣವಾಗಿದೆ. ಯಾವುದೇ ಇಲಾಖೆಗೆ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದರೂ ಜನಪ್ರತಿನಿಧಿಗಳ ಶಿಫಾರಸ್ಸು ಇಲ್ಲದೆ ನೇರವಾಗಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ರಾಜಕೀಯದ ಹಿಂದೆ ಓಡಾಟ ಮಾಡಬೇಕಾದಂತಹ ಪರಿಸ್ಥಿತಿ ನಮ್ಮದಾಗಿದ್ದು ಇದಕ್ಕೆ ಕಡಿವಾಣ ಹಾಕಲು ನಾವೆಲ್ಲ ಒಗ್ಗಟ್ಟಾಗಬೇಕಾಗುತ್ತದೆ ಎಂದರು.
ರಾಜು ಹೊಸ್ಮಠ ಮಾತನಾಡಿ ಮುಗೇರ ಜನಾಂಗವು ಸರ್ಕಾರಿ ಸೌಲಭ್ಯದಿಂದ ಸಂಪೂರ್ಣ ವಂಚಿತರಾಗುತ್ತಿದ್ದು ಯಾವುದೇ ಇಲಾಖೆಯಿಂದ ಸೌಲಭ್ಯದ ಬಗ್ಗೆ ಸ್ಪಷ್ಟ ಮಾಹಿತಿ ಸಿಗದೆ ಮುಗೇರ ಜನಾಂಗಕ್ಕೆ ಸರಕಾರ ನೀಡುವ ಅನುದಾನ ಖರ್ಚಾಗದೆ ಹಿಂದಕ್ಕೆ ಹೋಗುತ್ತಿರುವುದು ನಮ್ಮ ದೌರ್ಭಾಗ್ಯವಾಗಿದೆ ಎಂದರು.
ಕಡಬ ಗ್ರಾ.ಪಂ.ಸದಸ್ಯ ಹರ್ಷ, ಲಿಂಗಪ್ಪ ಪಣೆಮಜಲು, ಶೀನಪ್ಪ ದೇರೋಳಿ, ನವೀನ್ ಕುಬಲಾಡಿ, ಬಾಬು ಬೆಳ್ಳಿಪ್ಪಾಡಿ, ಶೀನಪ್ಪ ಗೋಳಿತೊಟ್ಟು, ರವಿ ಎಡಮಂಗಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿನಯ ಗುರಿಯಡ್ಕ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.