ಕೊಳವೆಬಾವಿ ಕೊರೆಯಲು ನಿಷೇಧ ಸಡಿಲಗೊಳಿಸಲು ಬನ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಆಗ್ರಹ

Puttur_Advt_NewsUnder_1
Puttur_Advt_NewsUnder_1

bannuru

ಪುತ್ತೂರು: ಕೊಳವೆ ಬಾವಿ ಕೊರೆಯಲು ಹೇರಿದ್ದ ನಿಷೇಧ ಕಾನೂನನ್ನು ಸಡಿಲಗೊಳಿಸಬೇಕು ಎಂದು ಬನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದಾರೆ.

ಸಭೆಯು ಅಧ್ಯಕ್ಷೆ ರಮಣಿ ಡಿ ಗಾಣಿಗರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಿಡಿಓ ಶಾಂತರಾಮ್ ಮಾತನಾಡಿ, ಕೊಳೆವೆ ಬಾವಿಕೊರೆಯದಂತೆ ಸರಕಾರದಿಂದ ಆದೇಶ ಬಂದಿದೆ. ಕೊಳವೆ ಬಾವಿ ಕೊರೆಯಬೇಕಾದರೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯ. ಇದಕ್ಕೆ ಪಂಚಾಯತ್‌ನಿಂದ ಎನ್‌ಓಸಿ ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ರಮಣಿ ಡಿ ಗಾಣಿಗರವರು ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಬಹುತೇಕವಾಗಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಲಾಗಿದೆ. ಅಲ್ಲದೆ ಕೃಷಿ ಕಾರ್ಯಗಳಿಗೂ ಕೊಳವೆ ಬಾವಿಯ ನೀರು ಅಗತ್ಯವಾಗಿದೆ. ಇದೀಗ ನಿಷೇಧ ಮಾಡಿರುವುದರಿಂದ ತೀರಾ ತೊಂದರೆಯಾಗಲಿದ್ದು ಕಾನೂನಿನಲ್ಲಿ ಸ್ವಲ್ಪ ಸಡಿಲಿಕೆ ಮಾಡಬೇಕು ಎಂದರು. ಇದಕ್ಕೆ ಧ್ವನಿ ಗೂಡಿಸಿದ ಸದಸ್ಯ ರತ್ನಾಕರ ಪ್ರಭು ಕೊಳವೆ ಬಾವಿ ಕೊರೆಯಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕಾಗಿರುವುದರಿಂದ ವಿಳಂಬವಾಗುತ್ತದೆ. ಇದರಿಂದ ತುರ್ತು ನೀರು ಒದಗಿಸುವುದು ಕಷ್ಟದ ಕೆಲಸವಾಗಿದ್ದು, ರೈತನ ಬೆಳೆಗಳು ನಾಶವಾಗುವ ಸಾಧ್ಯತೆಗಳಿವೆ ಎಂದರು. ಈಶ್ವರ ಭಟ್ ಮಾತನಾಡಿ, ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಗ್ರಾ.ಪಂನಿಂದ ಅಥವಾ ಸದಸ್ಯರಿಂದಾಗಲಿ ತಡೆ ಹಿಡಿಯುವುದು ಕಷ್ಟ. ಇದರಿಂದ ನಾವು ಗ್ರಾಮದಲ್ಲಿ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೊಳವೆ ಬಾವಿ ಕೊರೆಯುವ ಯಂತ್ರಗಳನ್ನೇ ಸರಕಾರ ನಿಷೇಧ ಮಾಡಬೇಕು. ಆಗ ಸಮಸ್ಯೆ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದರು. ಈ ಬಗ್ಗೆ ನಿಷೇಧ ಕಾನೂನನ್ನು ಸಡಿಲಿಕೆ ಮಾಡಬೇಕು ಎಂದು ಮನವಿ ಮಾಡುವುದಾಗಿ ನಿರ್ಣಯ ಕೈಗೊಳ್ಳಲಾಯಿತು.

೨೦೧೬-೧೭ನೇ ಸಾಲಿನ ೧೪ನೇ ಹಣಕಾಸಿನಲ್ಲಿ ಹೆಚ್ಚುವರಿ ಅನುದಾನದಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ೭ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಯಿತು. ಪಂಚಾಯತ್‌ರಾಜ್‌ನ ೭೩ನೇ ತಿದ್ದು ಪಡಿಯ ಪ್ರಕಾರ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಬನ್ನೂರು ಹಾಗೂ ಚಿಕ್ಕಮುಡ್ನೂರು ಗ್ರಾಮಗಳಿಗೆ ಪ್ರತ್ಯೇಕ ಪಡಿತರ ವಿತರಣಾ ಕೇಂದ್ರ ತೆರೆಯುವಂತೆ ತಹಶೀಲ್ದಾರ್‌ಗೆ ಮನವಿ, ವಾರ್ಡ್ ಸಭೆಗಳಿಗೂ ಇಲಾಖಾಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಬೇಕು, ಸದಸ್ಯರ ಗೌರವ ಧನ ಏರಿಕೆಯಾಗಬೇಕು ಹಾಗೂ ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡುವಾಗ ಮಳೆ ಕೊಯ್ಲು ಕಡ್ಡಾಯಗೊಳಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಉಪಾಧ್ಯಕ್ಷ ಜಿನ್ನಪ್ಪ ಗೌಡ, ಸದಸ್ಯರಾದ ಶುಭ, ಲತಾ, ಗಿರಿಜಾ, ಜಯ, ಅಣ್ಣಿ ಪೂಜಾರಿ, ಯಶೋಧ ಟಿ ನಾಯ್ಕ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಶಾಂತರಾಮ್ ಸ್ವಾಗತಿಸಿ, ವಂದಿಸಿದರು. ಲೆಕ್ಕಸಹಾಯಕಿ ಜಯಂತಿ ಹಾಗೂ ಸಿಬಂದಿ ಸುನಂದ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.