ಡೊನ್ ಬೊಸ್ಕೊ ಕ್ಲಬ್‌ನಿಂದ ಸಮುದಾಯದ ಶಿಕ್ಷಕರಿಗೆ ಅಭಿನಂದನೆ: ಸ್ಪಷ್ಟ ಉದ್ಧೇಶ, ಪೂರಕ ದೃಷ್ಟಿಕೋನವಿದ್ದಾಗ ಸೇವೆಗೆ ನಿಜವಾದ ಅರ್ಥ-ಫ್ರಾನ್ಸಿಸ್ ಡಿ’ಕುನ್ಹಾ

Puttur_Advt_NewsUnder_1
Puttur_Advt_NewsUnder_1

don

  • 45 ಮಂದಿ ನಿವೃತ್ತ ಶಿಕ್ಷಕರಿಗೆ ಸನ್ಮಾನ
  • 130 ಮಂದಿ ಹಾಲಿ ಶಿಕ್ಷಕರಿಗೆ ಸನ್ಮಾನ
  • ನಿವೃತ್ತ ಶಿಕ್ಷಕರಿಗೆ, ಹಾಲಿ ಶಿಕ್ಷಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ
  • ಅತಿಥಿ ಗಣ್ಯರು ನಿವೃತ್ತ ಹಾಗೂ ಹಾಲಿ ಶಿಕ್ಷಕರ ಬಳಿಗೆ ಹೋಗಿ ಸನ್ಮಾನ

ಪುತ್ತೂರು: ಕೇವಲ ಕರ್ತವ್ಯ ಮಾಡಿದರೆ ಆಯಿತು ಎನ್ನುವ ಭಾವನೆ ಶಿಕ್ಷಕರಲ್ಲಿ ಮೂಡಬಾರದು. ಬದಲಾಗಿ ಶಾಲೆಯ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಕರು ಸ್ಪಷ್ಟ ಉದ್ಧೇಶ ಹಾಗೂ ಪೂರಕ ದೃಷ್ಟಿಕೋನದಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದಾಗ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದು ಮಂಗಳೂರು ಪದುವಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಫ್ರಾನ್ಸಿಸ್ ಡಿ’ಕುನ್ಹಾರವರು ಹೇಳಿದರು.
ಅವರು ಅ.೨೩ ರಂದು ಮಾದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಮಾದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್‌ನ ವತಿಯಿಂದ ಕ್ಲಬ್‌ನ ಸುವರ್ಣ ವರ್ಷದ ಪ್ರಯುಕ್ತ ಹಮ್ಮಿಕೊಳ್ಳಲಾದ ಏಳನೇ ಕಾರ್ಯಕ್ರಮವಾದ ಪುತ್ತೂರು, ಮರೀಲ್ ಮತ್ತು ಬನ್ನೂರು ಚರ್ಚ್ ವ್ಯಾಪ್ತಿಯ ಕ್ರೈಸ್ತ ಸಮುದಾಯದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಹಾಲಿ ಶಿಕ್ಷಕ-ಶಿಕ್ಷಕಿಯರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಕರು ಕೇವಲ ಸೇವೆಯಿಂದ ನಿವೃತ್ತಿ ಹೊಂದಬಹುದು ಆದರೆ ಶಿಕ್ಷಕ ಸ್ಥಾನದಿಂದ ಎಂದಿಗೂ ನಿವೃತ್ತಿ ಇಲ್ಲ. ರಾಷ್ಟ್ರಪತಿಗಳನ್ನು ಮಾಜಿ ರಾಷ್ಟ್ರಪತಿಗಳೆಂದು ಉಲ್ಲೇಖ ಮಾಡಬಹುದು. ಶಿಕ್ಷಕರನ್ನು ಮಾಜಿ ಶಿಕ್ಷಕನೆಂದು ಹೇಳಿಕೊಳ್ಳಲು ಬರುವುದಿಲ್ಲ. ಯಾಕೆಂದರೆ ಪ್ರತಿಯೊಬ್ಬ ಶಿಕ್ಷಕ ತಾನು ಸೇವೆಯಲ್ಲಿದ್ದಾಗಲಿ ಅಥವಾ ನಿವೃತ್ತಿ ಹೊಂದಲಿ, ಅವರು ‘ಶಿಕ್ಷಕ’ರೆಂದೇ ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ, ಆದ್ದರಿಂದ ಸಮಾಜದಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನಮಾನವಿದೆ ಎಂದ ಅವರು ಯಾವುದೇ ಸಮುದಾಯವಾಗಲಿ ಯಾರು ಶಿಕ್ಷಕರನ್ನು ಗೌರವದಿಂದ ಕಾಣುತ್ತಾರೋ ಆ ಸಮುದಾಯ ಸಮಾಜದಲ್ಲಿ ಉನ್ನತಿ ಹೊಂದುತ್ತದೆ ಎಂದರಲ್ಲದೆ ಆ ನಿಟ್ಟಿನಲ್ಲಿ ಕ್ರೈಸ್ತ ಸಮುದಾಯ ಶಿಕ್ಷಕರನ್ನು ಸದಾ ಗುರುತಿಸುವಂತಹ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ನಕಾರಾತ್ಮಕ ಧೋರಣೆ ಬಿಟ್ಟು ಸಕಾರಾತ್ಮಕ ಧೋರಣೆ ವಹಿಸಿ-ವಂ|ಆಲ್ಫ್ರೆಡ್: ಆಶೀರ್ವಚನ ನೀಡಿದ ಮಾದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಆಲ್ಫ್ರೆಡ್ ಜಾನ್ ಪಿಂಟೋರವರು, ಡೊನ್ ಬೊಸ್ಕೊ ಕ್ಲಬ್ ಆಗಲಿ ಸಿಎಲ್‌ಸಿ ಸಂಸ್ಥೆಯಾಗಲಿ ಸಾಮಾಜಿಕ ಕಳಕಳಿಯಿರುವ ರೋಟರಿ ಅಥವಾ ಲಯನ್ಸ್ ಕ್ಲಬ್‌ಗಿಂತ ಏನೂ ಕಡಿಮೆಯಿಲ್ಲ. ಕ್ರೈಸ್ತ ಸಮುದಾಯದ ಪವಿತ್ರಸಭೆಯೊಳಗಡೆ ಇವೆರಡೂ ಸಂಸ್ಥೆಗಳು ಅತ್ಯುನ್ನತವಾಗಿ ಕರ್ತವ್ಯ ನಿರ್ವಹಿಸುತ್ತಿವೆ ಎಂದರು. ಪ್ರತಿಯೊಬ್ಬರೂ ಸಂಸ್ಥೆಯ ಕುರಿತು ನಕಾರಾತ್ಮಕ ಧೋರಣೆಯನ್ನು ತಾಳದೆ ಸಕಾರಾತ್ಮಕ ಚಿಂತನೆಯನ್ನು ತೋರ್ಪಡಿಸಬೇಕು, ಶಿಕ್ಷಣ ಸಂಸ್ಥೆಗಳ ಉದ್ಧಾರಕ್ಕೆ ಮತ್ತು ಅದರ ಉದ್ಧೇಶದ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ನಡೆಸಿದಾಗ ಸಂಸ್ಥೆಯು ಅಭಿವೃದ್ಧಿ ಪಥದತ್ತ ಸಾಗುವತ್ತ ಕಾರ್ಯೋನ್ಮುಖರಾಗಬೇಕು ಎಂದರು.
ವಿದ್ಯೆಯು ಮಾನವನಿಗೆ ಅನ್ನವನ್ನು ನೀಡುತ್ತದೆ-ಕ್ಲೋಡಿಯಸ್ ಡಿ’ಸೋಜ: ಅಭಿನಂದನಾ ಭಾಷಣಗೈದ ಕ್ಲಬ್‌ನ ಕಾರ್ಯದರ್ಶಿ ಕ್ಲೋಡಿಯಸ್ ಡಿ’ಸೋಜರವರು ಮಾತನಾಡಿ, ಅನ್ನದಾನವೆಂಬುದು ಶ್ರೇಷ್ಟವಾದ ದಾನವಾಗಿದೆ ಎಂಬುದು ನಿಜ. ಅನ್ನದಾನ ಮಾಡಿದಾಗ ಕ್ಷಣ ಮಾತ್ರಕ್ಕೆ ಉದರ ತುಂಬುತ್ತದೆ. ಆದರೆ ವಿದ್ಯಾದಾನವೆಂಬುದು ಮಾನವನಿಗೆ ಜೀವನಪರ್ಯಂತ ಅನ್ನವನ್ನು ಒದಗಿಸಿಕೊಡುತ್ತದೆ. ಆದ್ದರಿಂದ ಮಾನವನ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸುವ ಶಿಕ್ಷಣ ಕೊಡುವ ಶಿಕ್ಷಕರು ನಿಜಕ್ಕೂ ಗೌರವಕ್ಕೆ ಪಾತ್ರರು ಎಂದರು. ವಿವಿಧ ಕುಟುಂಬದಿಂದ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಶಿಕ್ಷಕರು ವಿವಿಧ ಮನಸ್ಥಿತಿಯುಳ್ಳ ಮಕ್ಕಳ ಹಾಗೂ ಮಕ್ಕಳ ಹೆತ್ತವರ ಧೋರಣೆ, ಸರಕಾರದ ಮತ್ತು ವಿಶ್ವವಿದ್ಯಾಲಯದ ವಿವಿಧ ನೀತಿ-ನಿಯಮಗಳು, ಆಡಳಿತ ಮಂಡಳಿಯ ಕಟ್ಟುಪಾಡುಗಳು, ಸ್ಥಳೀಯ ಹಿರಿಯ ನಾಗರಿಕರ ವರ್ತನೆಯ ಮಧ್ಯೆ ಶಿಕ್ಷಣ ಕಲಿಸುವ ಗುರುತರ ಜವಾಬ್ದಾರಿ ನಿರ್ವಹಿಸುವ ಶಿಕ್ಷಕರನ್ನು ನಾವು ಗೌರವಿಸಬೇಕಾಗಿದೆ ಎಂದು ಅವರು ಹೇಳಿದರು.
ಸನ್ಮಾನ/ಅಭಿನಂದನೆ: ಅತಿಥಿಗಣ್ಯರು ನಿವೃತ್ತ ಶಿಕ್ಷಕರಿಗೆ ಮತ್ತು ಹಾಲಿ ಶಿಕ್ಷಕ-ಶಿಕ್ಷಕಿಯರಿಗೆ ಕಾದಿರಿಸಲಾದ ಆಸನಗಳಲ್ಲಿ ಆಸೀನರಾದ ಪುತ್ತೂರು, ಮರೀಲ್ ಮತ್ತು ಬನ್ನೂರು ಚರ್ಚ್ ವ್ಯಾಪ್ತಿಯ ಕ್ರೈಸ್ತ ಸಮುದಾಯದ ಶಿಕ್ಷಕರ ಬಳಿಗೆ ಹೋಗಿ ೪೫ ಮಂದಿ ನಿವೃತ್ತ ಶಿಕ್ಷಕರಿಗೆ ಶಾಲು ಹೊದಿಸುವ ಮೂಲಕ ಹಾಗೂ ೧೩೦ ಮಂದಿ ಹಾಲಿ ಶಿಕ್ಷಕ-ಶಿಕ್ಷಕಿಯರಿಗೆ ಹೂ ಮತ್ತು ಸ್ಮರಣಿಕೆ ನೀಡುವ ಮೂಲಕ ಅಭಿನಂದಿಸಲಾಯಿತು. ಹಿಂದೆ ಶಿಕ್ಷಕರಾಗಿದ್ದು ಪ್ರಸ್ತುತ ಉದ್ಯಮಿಯಾಗಿರುವ ಕ್ಲಬ್‌ನ ಸಂಯೋಜಕ ಜೋನ್ ಕುಟಿನ್ಹಾ, ವಿಜಯಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿ, ಕ್ಲಬ್‌ನ ಅಧ್ಯಕ್ಷ ಜೋನ್ ಮಸ್ಕರೇನ್ಹಸ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಾದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ಜ್ಯೋ ಡಿ’ಸೋಜ, ಕ್ಲಬ್‌ನ ಸುವರ್ಣ ಸಮಿತಿಯ ಗೌರವಾಧ್ಯಕ್ಷ ಮೈಕಲ್ ಡಿ’ಸೋಜ, ಅಧ್ಯಕ್ಷ ಜೋನ್ ಮಸ್ಕರೇನ್ಹಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಾನೆಟ್ ಪಾಸ್ ಮತ್ತು ಬಳಗ ಪ್ರಾರ್ಥಿಸಿದರು. ಕ್ಲಬ್‌ನ ಸಂಯೋಜಕ ಜೋನ್ ಕುಟಿನ್ಹಾ ಸ್ವಾಗತಿಸಿ, ಸದಸ್ಯ ಫೆಬಿಯನ್ ಗೋವಿಯಸ್ ವಂದಿಸಿದರು. ಸದಸ್ಯರಾದ ಫೆಲಿಕ್ಸ್ ಡಿ’ಕುನ್ಹಾ, ರೋಯ್ಸ್ ಪಿಂಟೋ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರವೀಣ್ ಪಿಂಟೋರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಅನಿಲ್ ಪಾಸ್ ಕಾರ್ಯಕ್ರಮ ನಿರೂಪಿಸಿದರು.

ಸವಣೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್‌ರವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯು ‘ಶಿಕ್ಷಣ ಕಾಶಿ’ ಎಂದು ಉಲ್ಲೇಖ ಮಾಡಿರುವುದು ಅಕ್ಷರಶಃ ಸತ್ಯ. ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಸಮುದಾಯದ ಹಿರಿಯ ಶಿಕ್ಷಕರ ಪರಿಶ್ರಮದ ಅಡಿಪಾಯವೇ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣಕ್ಕೆ ಪ್ರಸಿದ್ಧಿಯಾಗಿದೆ. ಸಮಾನತೆ ಮತ್ತು ಶಿಸ್ತನ್ನೇ ಬಂಡವಾಳವಾಗಿಟ್ಟುಕೊಂಡ ಕ್ರೈಸ್ತ ಸಮುದಾಯವು ಶಿಕ್ಷಣ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೇಶದ ನಿರ್ಮಾಣ ಮಾಡುವಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿಸಿದೆ ಎಂಬುದು ಶ್ಲಾಘನೀಯ.
-ಫ್ರಾನ್ಸಿಸ್ ಡಿ’ಕುನ್ಹಾ, ಮುಖ್ಯ ಶಿಕ್ಷಕರು, ಪದುವಾ ಪ್ರೌಢಶಾಲೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.