Breaking News

ಬಜತ್ತೂರು ಗ್ರಾ.ಪಂ. ಸಾಮಾನ್ಯ ಸಭೆ – ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅರಣ್ಯ ಪಾಲಕ, ರಕ್ಷಕರಿಂದ ಅಡ್ಡಿ- ಆರೋಪ ಜಿಲ್ಲಾಧಿಕಾರಿ, ಸಚಿವರಿಗೆ ದೂರು ನೀಡಲು ನಿರ್ಣಯ

Puttur_Advt_NewsUnder_1
Puttur_Advt_NewsUnder_1

5ಉಪ್ಪಿನಂಗಡಿ: ಕಂದಾಯ ಇಲಾಖೆಯವರು ಅಂಬೇಡ್ಕರ್ ಭವನಕ್ಕೆಂದು ಜಾಗ ಗುರುತಿಸಿ ಕೊಟ್ಟಿದ್ದರೂ, ಅದು ಅರಣ್ಯ ಇಲಾಖೆಯ ಜಾಗ ಎಂದು ಅರಣ್ಯ ರಕ್ಷಕ ಹಾಗೂ ಪಾಲಕರೋರ್ವರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂಬ ಆರೋಪ ಬಜತ್ತೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿಬಂದಿದ್ದು, ಇವರ ವಿರುದ್ಧ ಅರಣ್ಯ ಸಚಿವರು, ಸಮಾಜಕಲ್ಯಾಣ ಸಚಿವರು ಹಾಗೂ ಜಿಲ್ಲಾಧಿಕಾರಿಯವರಿಗೆ ದೂರು ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಮಾಧವ ಪೂಜಾರಿ ಒರುಂಬೋಡಿರವರು, ಮಂಜಿಪಳ್ಳದಲ್ಲಿ 2.10 ಎಕರೆ ಡಿಸಿ ಮನ್ನಾ ಜಾಗವಿದೆ. ಈ ಜಾಗವನ್ನು ಕಂದಾಯ ಇಲಾಖೆಯವರು ಸರ್ವೇ ನಡೆಸಿ, ಗಡಿಗುರುತು ಮಾಡಿಕೊಟ್ಟಿದ್ದು, ಅದರಲ್ಲಿ 10 ಸೆಂಟ್ಸ್ ಜಾಗವನ್ನು ಅಂಬೇಡ್ಕರ್ ಭವನಕ್ಕೆಂದು ಅಳತೆ ಮಾಡಿ ನೀಡಿದ್ದಾರೆ. ಆದರೆ, ಇದು ಅರಣ್ಯ ಇಲಾಖೆಯ ಜಾಗ ಎಂಬ ಆಕ್ಷೇಪ ಬಂದಿದ್ದರಿಂದ ಒಟ್ಟು ನಾಲ್ಕು ಬಾರಿ ಕಂದಾಯ ಇಲಾಖೆಯಿಂದ ಇಲ್ಲಿ ಅಳತೆ ಕಾರ್ಯ ನಡೆಸಿದಾಗಲೂ ಮೊದಲು ಗಡಿಗುರುತು ಮಾಡಿದ್ದ ಜಾಗವೇ ಡಿಸಿ ಮನ್ನಾ ಜಾಗವೆಂದು ಸಾಬೀತಾಗಿದೆ. ಆದ್ದರಿಂದ ಇಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾದಾಗ ಅರಣ್ಯ ರಕ್ಷಕ ಸಂಜೀವರವರು ಇದಕ್ಕೆ ಅಡ್ಡಿಪಡಿಸುತ್ತಿದ್ದು, ಇದು ಅರಣ್ಯ ಇಲಾಖೆಯ ಜಾಗ ಇಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿದರೆ ಪ್ರಕರಣ ದಾಖಲಿಸುವುದಾಗಿ ನನ್ನನ್ನು ಸೇರಿದಂತೆ, ಪಂಚಾಯತ್ ಅಧ್ಯಕ್ಷರು ಮತ್ತು ಅಲ್ಲಿನ ದಲಿತ ಯುವಕರನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದರು. ಧ್ವನಿಗೂಡಿಸಿದ ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆರವರು, ಅರಣ್ಯ ಪಾಲಕ ಕಮಲಾಕ್ಷ ಅವರೂ ಅರಣ್ಯ ರಕ್ಷಕರೊಂದಿಗೆ ಸೇರಿಕೊಂಡು ಕಾಮಗಾರಿ ನಡೆಸಲು ಬಿಡುತ್ತಿಲ್ಲ ಎಂದು ಆಪಾದಿಸಿದರು.
ಈ ಸಂದರ್ಭ ಇತರೆ ಕೆಲ ಸದಸ್ಯರೂ ಈ ಬಗ್ಗೆ ಮಾತನಾಡಿ, ಕೆಲವೊಂದು ಸಾರ್ವಜನಿಕ ಕಾಮಗಾರಿಗಳು ನಡೆಯುವಾಗ ಇವರು ಅಡ್ಡಿ ಪಡಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಅರಣ್ಯ ರಕ್ಷಕ ಸಂಜೀವ ಹಾಗೂ ಅರಣ್ಯ ಪಾಲಕ ಕಮಲಾಕ್ಷರವರ ಮೇಲೆ ಜಿಲ್ಲಾಧಿಕಾರಿ, ಅರಣ್ಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ದೂರು ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಆದೇಶ ಸಡಿಲಿಸಲು ಸರಕಾರಕ್ಕೆ ಪತ್ರ: ಕೊಳವೆಬಾವಿ ನಿರ್ಮಾಣಕ್ಕೆ ಪಂಚಾಯತ್ ಪರವಾನಿಗೆ ನೀಡದಂತೆ ಸರಕಾರ ಆದೇಶಿಸಿದ್ದರಿಂದ ಕೃಷಿಕರಿಗೆ ತೊಂದರೆಯಾಗಿದೆ. ಆದ್ದರಿಂದ ಈ ಆದೇಶವನ್ನು ಸಡಿಲಿಸುವಂತೆ ಸರಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸದಸ್ಯ ಗಣೇಶ್ ಕಿಂಡೋವು ಮಾತನಾಡಿ, ಹೊಸದಾಗಿ ಪಂಪ್ ಅಳವಡಿಸಲು ವಿದ್ಯುತ್ ಸಂಪರ್ಕಕ್ಕೆ ಪಂಚಾಯತ್ ಎನ್‌ಒಸಿ ನೀಡುವುದಿಲ್ಲ. ಇದರಿಂದಾಗಿ ಹಳೆಯ ಕೊಳವೆ ಬಾವಿಯಿದ್ದು, ಹೊಸದಾಗಿ ಪಂಪ್ ಅಳವಡಿಸುವವರಿಗೆ, ಸ್ಲರಿ (ಗೊಬ್ಬರ ಗುಂಡಿ)ಗೆ ಪಂಪ್ ಅಳವಡಿಸುವವರಿಗೆ ತೊಂದರೆಯಾಗಿದೆ ಎಂದು ದೂರಿದರು. ಇದಕ್ಕುತ್ತರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್, ಇಂತಹ ಪ್ರಕರಣಗಳಿಗೆ ಸ್ಥಳ ಪರಿಶೀಲಿಸಿದ ಬಳಿಕ ಪಂಚಾಯತ್ ಎನ್‌ಒಸಿ ನೀಡಲಿದೆ ಎಂದರು. ಅಯೋಧ್ಯಾನಗರ – ಪಂರ್ದಾಜೆ ರಸ್ತೆಯಲ್ಲಿ ಖಾಸಗಿ ವ್ಯಕ್ತಿಯೋರ್ವರು ನೀರ ಹರಿವಿಗೆ ತಡೆಯೊಡ್ಡಿದ್ದು, ಇದರಿಂದ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಾಮಾಜಿಕ ನ್ಯಾಯ ಸಮಿತಿ ಮೂಲಕ ಇತ್ಯರ್ಥ ಪಡಿಸಲು ನಿರ್ಧರಿಸಲಾಯಿತು.
ಎಂಜಿರಡ್ಕದಲ್ಲಿರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ತ್ಯಾಜ್ಯ ಎಸೆಯದಂತೆ ಮುಚ್ಚಳ ಅಳವಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಳ್ಳುವ ಸಂದರ್ಭ ಬೆದ್ರೋಡಿಯಲ್ಲಿರುವ ಸಾರ್ವಜನಿಕ ಕೆರೆ ಮುಚ್ಚಿಹೋಗಲಿದೆ. ಆದ್ದರಿಂದ ಈ ಭಾಗದಲ್ಲಿ ಫ್ಲೆಓವರ್ ನಿರ್ಮಿಸಿ ಈ ಕೆರೆಯನ್ನು ಉಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ನೀಡಲು ನಿರ್ಧರಿಸಲಾಯಿತು.
ಬೆದ್ರೋಡಿ ಶಾಲೆಯಲ್ಲಿ ಮತಗಟ್ಟೆಗೆ ಮನವಿ: ಬೆದ್ರೋಡಿಯವರಿಗೆ ವಳಾಲ್‌ನಲ್ಲಿ ಮತದಾನ ಕೇಂದ್ರವಿದ್ದು, ಈ ಭಾಗದವರಿಗೆ ವಳಾಲ್‌ಗೆ ಬರಲು ದೂರವಾಗುವುದರಿಂದ ಈ ಭಾಗದವರಿಗೆ ಬೆದ್ರೋಡಿ ಶಾಲೆಯಲ್ಲಿ ಮತಗಟ್ಟೆ ತೆರೆಯಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ನಿವೇಶನ ಮರುವಶಕ್ಕೆ ಚಿಂತನೆ: ಕಳೆದ ೪-೫ ವರ್ಷಗಳ ಹಿಂದೆ ಮಣಿಕ್ಕಳ ಕಾಲನಿಯಲ್ಲಿ ಮನೆ ನಿವೇಶನ ಹಂಚಲಾಗಿದ್ದು, ಕೆಲವರು ಅಲ್ಲಿ ಇನ್ನೂ ಮನೆ ನಿರ್ಮಿಸಿಲ್ಲ. ಆದ್ದರಿಂದ ಅಂತಹವರಿಗೆ ನೀಡಿದ ನಿವೇಶನವನ್ನು ಪಂಚಾಯತ್ ಮರುವಶ ಪಡೆಯಲು ತೀರ್ಮಾನಿಸಲಾಯಿತ್ತಲ್ಲದೆ, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಇತರ ಫಲಾನುಭವಿಗಳಿಗೆ ಆ ನಿವೇಶನಗಳನ್ನು ಹಂಚಲು ನಿರ್ಧರಿಸಲಾಯಿತು.
ನೀರಿನ ಕನೆಕ್ಷನ್ ಶುಲ್ಕ ವಾಪಸ್ ಇಲ್ಲ: ಬಜತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕಾಗಿ 1,000 ರೂಪಾಯಿ ಸಂಪರ್ಕ ಶುಲ್ಕ ವಿಧಿಸಲಾಗುತ್ತಿತ್ತು. ಈ ಹಿಂದೆ ನೀರಿನ ಸಂಪರ್ಕ ಬೇಡವಾದರೆ ಅದರಲ್ಲಿ ೭೫೦ ರೂಪಾಯಿಯನ್ನು ವಾಪಸ್ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಸಾರ್ವಜನಿಕರಿಗೆ ಪಂಚಾಯತ್‌ನ ನೀರಿನ ಸಂಪರ್ಕ ಬೇಡವಾದರೆ, ಕಡಿತಗೊಳಿಸುವ ಸಂದರ್ಭ ಅವರು ಪಾವತಿಸಿದ ಸಂಪರ್ಕ ಶುಲ್ಕದ ಹಣವನ್ನು ವಾಪಸ್ ನೀಡದಿರಲು ನಿರ್ಣಯ ಕೈಗೊಳ್ಳಲಾಯಿತು. ರುದ್ರಭೂಮಿ ಅಭಿವೃದ್ಧಿಗಾಗಿ 67,500 ರೂಪಾಯಿ ಅನುದಾನ ಬಂದಿದ್ದು, ಅದನ್ನು ಗಾಣದಮೂಲೆಯಲ್ಲಿರುವ ಕ್ರೈಸ್ತರ ದಫನ ಭೂಮಿಯ ಅಭಿವೃದ್ಧಿಗೆ ನೀಡಲು ತೀರ್ಮಾನಿಸಲಾಯಿತು. ಪಂಚಾಯತ್ ಉಪಾಧ್ಯಕ್ಷೆ ಸುಜಾತ ಎನ್., ಸದಸ್ಯರಾದ ಪ್ರೆಸಿಲ್ಲಾ ಡಿಸೋಜಾ, ರಾಜೇಶ್ ಕುಮಾರ್, ತೇಜಕುಮಾರಿ, ಲೀಲಾವತಿ, ನವೀನ, ಸೇಸಪ್ಪ ಗೌಡ, ಶಶಿತ, ಆನಂದ ಕೆ.ಎಸ್., ಮಾಧವ ಪೂಜಾರಿ, ಕಮಲಾಕ್ಷಿ, ಗಣೇಶ್ ಕೆ., ಚಂಪಾ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್, ಸರಕಾರದ ಸುತ್ತೋಲೆ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಚಂದ್ರಾವತಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.