ನೂಜಿಬಾಳ್ತಿಲ ಗ್ರಾ.ಪಂ.ಸಾಮಾನ್ಯ ಸಭೆ – ಕಲ್ಲುಗುಡ್ಡೆ ವಿಜಯಾ ಬ್ಯಾಂಕ್ ಕಛೇರಿ ಸ್ಥಳಾಂತರ ವಿಚಾರ ಚರ್ಚೆ ತಂದೆ ತಾಯಿಯ ಕಿರುಕುಳ ಮಕ್ಕಳ ಶಿಕ್ಷಣಕ್ಕೆ ತೊಂದರೆ-ಕ್ರಮ ಕೈಗೊಳ್ಳಲು ಸೂಚನೆ 

17

*ಪಂಚಾಯತ್‌ನಲ್ಲಿ ಸಿಬಂದಿಗಳು ಸ್ಪಂದಿಸಬೇಕು *ಕುಡಿಯುವ ನೀರಿನ ಬಗ್ಗೆ ಕಟ್ಟುನಿಟ್ಟಿನ ಕ್ರಮ *ಕೊಳವೆ ಬಾವಿ ಅಗತ್ಯ ಇರುವಲ್ಲಿ ಎನ್.ಒ.ಸಿ ನೀಡಲು ಸಲಹೆ *ಬೀದಿ ನಾಯಿಗಳ ಉಪಟಳ ಕ್ರಮ ಕೈಗೊಳ್ಳಲು ಆಗ್ರಹ
ಉಪ ಸಮಿತಿ ರಚನೆ :  ಸಾಮಾನ್ಯ ಸಭೆಯಲ್ಲಿ ಉಪಸಮಿತಿ ರಚಿಸಲಾಯಿತು. ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ಸದಸ್ಯರಾಗಿ ವಲ್ಸ ಕೆ.ಜೆ, ಪುಷ್ಪಲತಾ, ಹರೀಶ್ ಎನ್, ಪಿ.ಯು ಸ್ಕರಿಯಾ. ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ ಅಧ್ಯಕ್ಷರಾಗಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಸದಸ್ಯರಾದ ರಾಮಚಂದ್ರ ಗೌಡ ಎಸ್, ಹೊನ್ನಮ್ಮ, ಅಮ್ಮಣಿ ಜೋಸೆಫ್, ಜಾನಕಿರವರನ್ನು ಆಯ್ಕೆ ಮಾಡಲಾಯಿತು. ಸಾಮಾಜಿಕ ನ್ಯಾಯ ಸಮಿತಿ: ಅಧ್ಯಕ್ಷರಾಗಿ ರಾಜು ಗೋಳಿಯಡ್ಕ, ಸದಸ್ಯರಾಗಿ ಸದಾನಂದ ಗೌಡ, ರಾಮಚಂದ್ರ ಗೌಡ ಎಸ್, ಕೆ.ಜೆ ತೋಮಸ್, ರಜಿತಾ ಪದ್ಮನಾಭ.
ಕಡಬ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿರುವ ವಿಜಂಯ ಬ್ಯಾಂಕ್ ಕಛೇರಿ ಸ್ಥಳಾಂತರ ವಿಚಾರದಲ್ಲಿ ಚರ್ಚೆ ನಡೆದು ಬ್ಯಾಂಕ್ ಹಾಗೂ ಕಟ್ಟಡ ಮಾಲಕರನ್ನು ಕರೆದು ವಿಚಾರಿಸಲು ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯವರಿಗೆ ಸೂಚಿಸಿದ ಘಟನೆ ನೂಜಿಬಾಳ್ತಿಲ ಗ್ರಾ.ಪಂ. ನ ಸಾಮಾನ್ಯ ಸಭೆಯಲ್ಲಿ ನಡೆದಿದೆ. ಸಭೆಯು ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕರವರ ಅಧ್ಯಕ್ಷತೆಯಲ್ಲಿ ಅ.22ರಂದು ನಡೆಯಿತು.
ಕಲ್ಲುಗುಡ್ಡೆ ವಿಜಯ ಬ್ಯಾಂಕ್ ಕಛೇರಿ ಬೇರೆ ಕಟ್ಟಡಕ್ಕೆ ಸ್ಥಳಾಂತರ ವಿಚಾರ: ಗ್ರಾ.ಪಂ. ಸದಸ್ಯ ರಾಜು ಗೋಳಿಯಡ್ಕ ಮಾತನಾಡಿ ಕಲ್ಲುಗುಡ್ಡೆ ವಿಜಯ ಬ್ಯಾಂಕ್‌ನ ಬದಲಾವಣೆ ಬಗ್ಗೆ ಸಿಬ್ಬಂದಿಗಳು ರಾಜಕೀಯ ಮಾಡುತ್ತಿದ್ದಾರೆ, ಸ್ಯಾಮುವೆಲ್ ಜೋಸ್ ಗ್ರಾ.ಪಂ.ಗೆ ನೀಡಿದ ದೂರಿನಂತೆ ೧೫ ವರ್ಷಕ್ಕೆ ಎಗ್ರಿಮೆಂಟ್ ಮಾಡಿಕೊಂಡಿದ್ದರೂ ಈಗ ಏಕಾಏಕಿ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸುವುದೆಂದು ಬ್ಯಾಂಕಿನವರು ನೋಟೀಸ್ ನೀಡಿದ್ದು ಈ ಬಗ್ಗೆ ಸಾಮುವೆಲ್ ಜೋಸ್‌ರವರು ಇದು ನ್ಯಾಯ ಸಮ್ಮತವಲ್ಲವೆಂದು ದೂರಿಕೊಂಡಿದ್ದಾರೆ ಎಂದು ಹೇಳಿದರು. ಈ ಬಗ್ಗೆ ಅಧ್ಯಕ್ಷ ಸದಾನಂದ ಗೌಡ ಉತ್ತರಿಸಿ ಕಟ್ಟಡ ಮಾಲಕರು ಹಾಗೂ ಬ್ಯಾಂಕಿನವರು ಯಾವ ರೀತಿಯಲ್ಲಿ ಒಪ್ಪಂದ ಮಾಡಿಕೊಂಡಿರುತ್ತಾರೆ ಎಂಬುದು ನಮಗೆ ಗೊತ್ತಿಲ್ಲ ಎಂದಾಗ ಹರೀಶ್ ಎನ್. ಮಾತನಾಡಿ ಈಗ ನಾವು ಸಂಬಂಧಪಟ್ಟ ಕಟ್ಟಡ ಮಾಲಕರು ವಾಣಿಜ್ಯ ಕಟ್ಟಡಕ್ಕೆ ಅಥವಾ ವಾಸ್ತವ್ಯಕ್ಕೆ ಎಂದು ಯಾವ ರೀತಿಯಲ್ಲಿ ಗ್ರಾ.ಪಂ.ಗೆ ಅರ್ಜಿ ಕೊಟ್ಟಿದ್ದಾರೆಯೋ ಅದಕ್ಕೆ ಪೂರಕವಾಗಿ ಕಟ್ಟಡವನ್ನು ಪರಿಶೀಲಿಸಿ ಅನುಮತಿ ನೀಡಬೇಕಾಗುತ್ತದೆ ಎಂದರಲ್ಲದೆ, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿ ಮಾತನಾಡಿದ ಪಿ.ಡಿ.ಒ ಜಯಪ್ರಕಾಶ್ ರವರು ಲೈಸನ್ಸ್‌ಗೆ ನೀಡಿದ ಅರ್ಜಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್‌ರವರು ಬ್ಯಾಂಕಿನವರು ಈ ವಿಚಾರದಲ್ಲಿ ಅನ್ಯಾಯ ಮಾಡಿದ್ದಾರೆ. ಈ ಊರಿಗೆ ಬ್ಯಾಂಕನ್ನು ತರಿಸಿದ ಕಟ್ಟಡ ಮಾಲಕ ಸಾಮುವೆಲ್ ಜೋಸ್‌ರವರು ಬ್ಯಾಂಕಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದರೂ ಏಕಾಏಕಿ ಬ್ಯಾಂಕ್ ಕಛೇರಿ ಬದಲಾಯಿಸಲು ಮುಂದಾಗಿದ್ದು ಸರಿಯಿಲ್ಲ ಎಂದು ಹೇಳಿದರಲ್ಲದೆ ಬ್ಯಾಂಕ್‌ನವರನ್ನು ಹಾಗೂ ಕಟ್ಟಡ ಮಾಲಕ ಸಾಮುವೆಲ್ ಜೋಸ್‌ರವರನ್ನು ಗ್ರಾ.ಪಂ.ಗೆ ಕರೆಸಿ ಎಲ್ಲರ ಸಮಕ್ಷಮ ವಿಚಾರಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು. ಬಳಿಕ ಅಧ್ಯಕ್ಷರಾದ ಸದಾನಂದ ಗೌಡ ಬ್ಯಾಂಕ್‌ನವರನ್ನು, ಕಟ್ಟಡ ಮಾಲಕರನ್ನು ಕರೆದು ವಿಚಾರಿಸುವಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಗೆ ಸೂಚಿಸಿದರು
ತಂದೆ ತಾಯಿಯ ಕಿರುಕುಳ ಮಕ್ಕಳ ಶಿಕ್ಷಣಕ್ಕೆ ತೊಂದರೆ: ಸದಸ್ಯೆ ರಜಿತಾ ಪದ್ಮನಾಭರವರು ಗೋಳಿಯಡ್ಕ ಅಣ್ಣಪ್ಪ ದಂಪತಿ ತನ್ನ ಮಕ್ಕಳನ್ನು ಶಾಲಾ ಫೀಸು ಕಟ್ಟದೆ ಶಾಲೆಗೂ ಹೋಗಲು ಬಿಡದೆ ಕಿರಿಕುಳ ನೀಡುತ್ತಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ, ಗಂಡ ಹೆಂಡತಿ ಇಬ್ಬರು ನಿರಂತರ ಮದ್ಯಪಾನ ಮಾಡಿ ಮನೆಯಲ್ಲಿ ಜಗಳ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ, ಇವರ ಹಿರಿಯ ಪುತ್ರ ಬೆಥನಿ ಪ್ರೌಢಶಾಲೆಗೆ ಹೋಗುತ್ತಿದ್ದು ಶಾಲಾ ಫೀಸನ್ನು ಕಟ್ಟದೆ ಶಾಲೆಗೂ ಕಳುಹಿಸದೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಸದಸ್ಯರಾದ ಪುಷ್ಪಲತಾ ಧ್ವನಿ ಗೂಡಿಸಿದರೆ ರಾಜು ಗೋಳಿಯಡ್ಕ, ತೋಮಸ್ ಕೆ.ಜೆ ಯವರು ವಿಚಾರದ ಬಗ್ಗೆ ಸತ್ಯಾಸತ್ಯತೆ ತಿಳಿದುಕೊಂಡು ಪರೀಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು ಈ ಬಗ್ಗೆ ಮತ್ತೆ ಮಾತನಾಡಿದ ಸದಸ್ಯೆ ವಲ್ಸ ಕೆ.ಜೆ ಯವರು ಮಕ್ಕಳು ದೂರಿದಂತೆ ಏಕಾಏಕಿ ವಿಚಾರ ತಿಳಿದುಕೊಳ್ಳದೆ ತೀರ್ಮಾನಿಸುವುದು ಬೇಡ. ಈ ಬಗ್ಗೆ ಅವನು ಓದುತ್ತಿರುವ ಶಾಲೆಯ ಮುಖ್ಯಸ್ಥರಲ್ಲೂ ವಿಚಾರಿಸಿಕೊಳ್ಳಬೇಕೆಂದರು. ಇದಕ್ಕೆ ರಾಮಚಂದ್ರ ಗೌಡ ಜಾಲು, ಹರೀಶ್ ಎನ್, ಹೊನ್ನಮ್ಮ, ಧ್ವನಿಗೂಡಿಸಿ ಯಾವುದೇ ವಿಚಾರದಲ್ಲೂ ದೂರು ಬಂದಲ್ಲಿ ಸತ್ಯಾಸತ್ಯತೆ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಬೇಕೆಂದು ಸಲಹೆ ನೀಡಿದರು. ಬಳಿಕ ಉತ್ತರಿಸಿದ ಅಧ್ಯಕ್ಷರು ಯಾವುದೇ ದೂರನ್ನು ಏಕಾಏಕಿ ತೀರ್ಮಾನ ಕೈಗೊಳ್ಳುವುದಿಲ್ಲ. ದೂರಿನ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಿ ವಿಚಾರದ ಸತ್ಯತೆಯನ್ನು ಸರಿಯಾಗಿ ತಿಳಿದುಕೊಂಡು ತೀರ್ಮಾನ ಕೈಗೊಳ್ಳಲಾಗುವುದು. ಆದರೆ ಮಕ್ಕಳು ವಿದ್ಯಾಭ್ಯಾಸದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎಂದು ಹೇಳಿ ವಿದ್ಯಾರ್ಥಿಗೆ ನಾಳೆಯಿಂದಲೇ ಶಾಲೆಗೆ ಹೋಗುವಂತೆ ಸೂಚಿಸಿದರಲ್ಲದೆ ಅವರ ತಂದೆ ತಾಯಿ ಹಾಗೂ ಸಾರ್ವಜನಿಕ ದೂರುದಾರರನ್ನು ವಿಚಾರಿಸಲಾಗುವುದು ಎಂದರು. ಈ ಬಗ್ಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ರವರು ಸಂಬಂಧಪಟ್ಟ ಬೆಥನಿ ಶಾಲೆಗೆ ದೂರವಾಣಿ ಕರೆ ಮಾಡಿ ವಿಚಾರಿಸಿದರು. ಅಲ್ಲಿ ಪರೀಕ್ಷಾ ಫೀಸು ಕಟ್ಟಿದ್ದು ಶಾಲಾ ಫೀಸು ಬಾಕಿ ಇದ್ದರೂ ಶಾಲೆಗೆ ಬರುವುದಕ್ಕೆ ಯಾವುದೇ ಆಕ್ಷೇಪಣೆ ನೀಡಿರುವುದಿಲ್ಲ ಎಂದವರು ಹೇಳಿದರು.
ಪಂಚಾಯತ್‌ನಲ್ಲಿ ಸಿಬಂದಿಗಳು ಸ್ಪಂದಿಸಬೇಕು: ಪಂಚಾಯತ್‌ನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲ ರೀತಿಯಲ್ಲೂ ಸಹಕರಿಸುವುದಲ್ಲದೆ ಜನರ ಸಮಸ್ಯೆಗೆ ಸಿಬ್ಬಂದಿಗಳು ಸ್ಪಂದಿಸಬೇಕಾಗಿದ್ದು, ಆಗುವ ಕೆಲಸಗಳಿಗೆ ಪೂರಕ ದಾಖಲೆ ನೀಡುವಂತೆ ಮಾಹಿತಿ ನೀಡುವುದಲ್ಲದೆ ಆಗದ ಕೆಲಸಗಳಿಗೆ ಅಲೆದಾಡಿಸದೆ ನೇರವಾಗಿ ಸರಿಯಾದ ಮಾಹಿತಿ ನೀಡುವಂತೆ ಸದಸ್ಯರ ಸಲಹೆಗಳಿಗೆ ಸ್ಪಂದಿಸಿದ ಅಧ್ಯಕ್ಷರು ಸಿಬ್ಬಂದಿಗಳಿಗೆ ಈ ಬಗ್ಗೆ ಸೂಚನೆ ನೀಡಿದರು. ಈ ಬಗ್ಗೆ ಜಿ.ಪಂ. ಸದಸ್ಯರು ಕೂಡಾ ಮಾತನಾಡಿ ನಮ್ಮ ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ ಪಿಡಿಒ ಒಬ್ಬ ಉತ್ತಮ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಉಳಿದ ಸಿಬ್ಬಂದಿಗಳಿಗೂ ಕೆಲಸದ ಒತ್ತಡ ಇರುತ್ತಿದ್ದು ಸ್ವಲ್ಪ ಸುಧಾರಿಸಿಕೊಂಡು ಜನರಿಂದ ಹಾಗೂ ಜನಪ್ರತಿನಿಧಿಗಳಿಗೆ ಸಹಕರಿಸಬೇಕೆಂದರು. ಪಂಚಾಯತ್ ಸಿಬ್ಬಂದಿಗಳಿಗೆ ಅವರವರ ಹುದ್ದೆಗೆ ಹೊಂದಿಕೊಂಡು ಸಂಬಳ ಪರಿಷ್ಕರಿಸಲು ತೀರ್ಮಾನಿಸಲಾಯಿತು.
ಕುಡಿಯುವ ನೀರಿನ ಬಗ್ಗೆ ಕಟ್ಟುನಿಟ್ಟಿನ ಕ್ರಮ: ಕುಡಿಯುವ ನೀರಿನ ಬಗ್ಗೆ ಈ ವರ್ಷ ಭಾರೀ ಸಮಸ್ಯೆ ಉಂಟಾಗುವ ಭೀತಿ ಇದ್ದು ಯಾವುದೇ ಕಾರಣಕ್ಕೂ ಫಲಾನುಭವಿಗಳು ಪ್ರತೀ ತಿಂಗಳು ಸರಿಯಾಗಿ ಬಿಲ್ಲು ಪಾವತಿಸಬೇಕು. ಅಲ್ಲದೆ ಅರ್ಧ ಇಂಚಿಗಿಂತ ಹೆಚ್ಚಿನ ನಳ್ಳಿ ಅಳವಡಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ನಳ್ಳಿ ಕಟ್ ಮಾಡಲಾಗುವುದು ಎಂದು ಸಭೆಯಲ್ಲಿ ಎಲ್ಲಾ ಸದಸ್ಯರು ಒಕ್ಕೊರಳಿನಿಂದ ತೀರ್ಮಾನ ಕೈಗೊಂಡಿದ್ದು ನೀರಿನ ವಿಚಾರದಲ್ಲಿ ಯಾವುದೇ ಮುಲಾಜಿ ಇಲ್ಲದೆ ಕ್ರಮಕೈಗೊಳ್ಳಬೇಕೆಂದು ಸಿಬ್ಬಂದಿಗಳಿಗೆ ಅಧ್ಯಕ್ಷ ಸದಾನಂದ ಗೌಡ ಸೂಚಿಸಿದರು. ಪ್ರತಿಯೊಬ್ಬ ಸದಸ್ಯರು ಅವರವರ ವಾರ್ಡ್‌ನ ಫಲಾನುಭವಿಗಳ ನಳ್ಳಿ ನೀರಿನ ಬಗ್ಗೆ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಸಹಕರಿಸಬೇಕೆಂದು ಅಧ್ಯಕ್ಷರು ಸೂಚಿಸಿದಂತೆ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಕುಡಿಯುವ ನೀರಿನ ಸಿಬ್ಬಂದಿ ವಿಕ್ರಂರವರು ಸಮಸ್ಯೆ ಬಗ್ಗೆ ವಿವರಿಸಿ ಕೆಲವು ಕಡೆಗಳಲ್ಲಿ ಫಲಾನುಭವಿಗಳು ನಳ್ಳಿ ಅರ್ಧ ಇಂಚು ಹಾಕಲು ಒಪ್ಪುವುದಿಲ್ಲ. ಇನ್ನು ಕೆಲವು ಕಡೆಗಳಲ್ಲಿ ನಳ್ಳಿ ನೀರಿನ ಫಲಾನುಭವಿಗಳಲ್ಲಿ ಬಿಲ್ಲು ಕಟ್ಟಲು ಹಾಗೂ ಅರ್ಧ ಇಂಚು ನಳ್ಳಿ ಅಳವಡಿಸಲು ತಿಳಿಸಿದಾಗ ಕೆಲವರು ಸಂಬಂಧಪಟ್ಟ ವಾರ್ಡ್‌ನ ಸದಸ್ಯರಿಗೆ ತಿಳಿಸಿ ನಮ್ಮ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ತಿಳಿಸಿದಾಗ ಯಾವುದೇ ಕಾರಣಕ್ಕೂ ಸದಸ್ಯರು ನಳ್ಳಿ ನೀರಿನ ಬಗ್ಗೆ ಫಲಾನುಭವಿಗಳಿಗೆ ಸಹಕರಿಸಿದೆ. ಗ್ರಾ.ಪಂ.ನ ಅಭಿವೃದ್ದಿ ದೃಷ್ಟಿಯಿಂದ ಈ ಬಗ್ಗೆ ಎಲ್ಲರೂ ಸಹಕರಿಸಬೇಕೆಂದು ಅಧ್ಯಕ್ಷರು ಹೇಳಿದರು. ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.
ಕೊಳವೆ ಬಾವಿ ಅಗತ್ಯ ಇರುವಲ್ಲಿ ಎನ್.ಒ.ಸಿ ನೀಡಲು ಸಲಹೆ: ಸರಕಾರದ ನಿಯಮದಂತೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಈ ವರ್ಷ ಕುಡಿಯುವ ನೀರಿನ ಕೊರತೆ ಉಂಟಾಗುವ ಪರಿಸ್ಥಿತಿ ಇರುವುದರಿಂದ ಯಾವುದೇ ಕಾರಣಕ್ಕೂ ಕೊಳವೆಬಾವಿಗೆ ಅನುಮತಿ ನೀಡಲು ಅವಕಾಶವಿಲ್ಲ. ಜಿಲ್ಲಾಧಿಕಾರಿಗಳೇ ಅನುಮತಿ ನೀಡಲು ಅವಕಾಶವಿದೆ ಎಂದು ಪಿಡಿಒ ಸರ್ಕುಲರ್ ಓದಿ ತಿಳಿಸಿದಾಗ ಆಕ್ಷೇಪಿಸಿದ ಸದಸ್ಯ ಕೆ.ಜೆ ತೋಮಸ್ ನಾವು ಪಂಚಾಯತ್‌ನಿಂದ ಕುಡಿಯುವ ನೀರಿನ ಕೊಳವೆ ಬಾವಿಗೆ ವಿರೋಧಿಸುವುದು ಅಷ್ಟು ಸಮಂಜಸವಲ್ಲ. ಈ ಬಗ್ಗೆ ಸೂಕ್ತ ಸ್ಥಳದ ದಾಖಲೆ ನೀಡಿದರೆ ಎನ್.ಒ.ಸಿ ನೀಡುವಂತೆ ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿ.ಡಿ.ಒ ಯಾವುದೇ ಕಾರಣಕ್ಕೂ ಕೊಳವೆ ಬಾವಿಗೆ ಅವಕಾಶ ಇಲ್ಲ ಎಂದು ಉತ್ತರಿಸಿದರು. ಸದಸ್ಯೆ ರಜಿತಾ ಪದ್ಮನಾಭರವರು ಒಂದು ವೇಳೆ ಯಾರಾದರೂ ಅವರವರ ಸ್ಥಳದಲ್ಲಿ ನಮ್ಮ ಗಮನಕ್ಕೆ ಬಾರದೆ ಕೊಳವೆ ಬಾವಿ ತೆಗೆದರೆ ಏನು ಕ್ರಮ ಎಂದು ಪ್ರಶ್ನಿಸಿದರು.ಅದನ್ನು ಪಂಚಾಯತ್ ಪಡೆದುಕೊಂಡು ಸಾರ್ವಜನಿಕ ಕುಡಿಯುವ ನೀರಿಗೆ ಬಳಸಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲ ಎಂದು ಪಿಡಿಒ ಹೇಳಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಜಿ.ಪಂ. ಸದಸ್ಯ ಪಿ.ಪಿ ವರ್ಗೀಸ್ ಎನ್.ಒ.ಸಿ ಜಿಲ್ಲಾಧಿಕಾರಿಗಳು ನೀಡುವುದಾಗಿದ್ದರೂ ಗ್ರಾ.ಪಂ.ಗೆ ಬರುವ ಅರ್ಜಿಗಳಿಗೆ ಪೂರಕವಾಗಿ ಸ್ಪಂದಿಸಿ ಸೂಕ್ತ ದಾಖಲೆಗಳನ್ನು ಪಡೆದು ಅತೀ ಅಗತ್ಯ ಇರುವಲ್ಲಿ ಎನ್‌ಒಸಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಪತ್ರ ಕಳುಹಿಸಿಕೊಡಬೇಕೆಂದು ಸಲಹೆ ನೀಡಿದರು.
ಬೀದಿ ನಾಯಿಗಳ ಉಪಟಳ ಕ್ರಮ ಕೈಗೊಳ್ಳಲು ಆಗ್ರಹ: ಶಾಲಾ ಕಾಲೇಜು ಅಂಗನವಾಡಿ ಕಟ್ಟಡಗಳು ಕಲ್ಲುಗುಡ್ಡೆ ಪೇಟೆ ಗೋಳಿಯಡ್ಕ ಪೇರಡ್ಕ, ಮೀನಾಡಿ , ಬೇರಿಕೆ ಶಾಲಾ ವಠಾರ, ರಾಜ್ಯ ಹೆದ್ದಾರಿ, ಅಂಗಡಿ ಮುಂಗಟ್ಟುಗಳಲ್ಲಿ ಬೀದಿ ನಾಯಿಗಳ ಉಪಟಳ ನಡೆಯುತ್ತಿದ್ದು ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು ಶಾಲೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರು ಅರ್ಜಿ ಬಂದ ಬಗ್ಗೆ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಏನಾದರೂ ಕ್ರಮ ಜರುಗಿಸದಿದ್ದಲ್ಲಿ ಮುಂದೆ ತುಂಬಾ ಅನಾಹುತಗಳು ಸಂಭವಿಸಬಹುದೆಂದು ಸದಸ್ಯರು ಗಮನ ಸೆಳೆದರು. ಈ ಬಗ್ಗೆ ಒಂದು ಕಾವಲು ಸಮಿತಿ ರಚಿಸುವ ಎಂದು ಹೇಳಿದ ಪಿ.ಪಿ.ವರ್ಗೀಸ್ ನಾಯಿಗಳನ್ನು ಕೊಲ್ಲುವ ಹಾಗಿಲ್ಲ. ನಾಯಿಗಳಿಂದ ಎಷ್ಟೇ ತೊಂದರೆ ಆದರೂ ನಾವು ಅದನ್ನು ಸಹಿಸಿಕೊಳ್ಳಬೇಕಷ್ಟೆ. ಹುಚ್ಚುನಾಯಿಗಳನ್ನು, ಬೀದಿಯಲ್ಲಿ ಅಲೆದಾಡುವ ನಾಯಿಗಳನ್ನು ಕೊಲ್ಲುವಾಗಿಲ್ಲ. ಹೀಗಾದರೆ ಏನು ಮಾಡಲು ಸಾಧ್ಯ ಎಂದರು. ಈ ಬಗ್ಗೆ ಸದಸ್ಯರು ಬೀದಿ ನಾಯಿಗಳ ಉಪಟಳವನ್ನು ನಿಯಂತ್ರಿಸಲು ಏನಾದರೂ ಕ್ರಮ ಕೈಗೊಳ್ಳಬೇಕೆಂದರು.
ವಸತಿ ಯೋಜನೆಯಲ್ಲಿ ಅರಣ್ಯ ಪ್ರದೇಶ ಹೊರತುಪಡಿಸಿ ಗೋಮಾಳ, ಗೋಚರ ಸೇರಿದಂತೆ ನಿವೇಶನ ರಹಿತರು ವಾಸ್ತವ್ಯವಿರುವ ಜಾಗವನ್ನು ನೋಂದಾವಣೆಗೆ ವಿನಾಯಿತಿ ನೀಡಿ ವಸತಿ ಯೋಜನೆಯಲ್ಲಿ ಅರ್ಹರಿಗೆ ವಸತಿಗೆ ಅವಕಾಶ ನೀಡಲಾಗುವುದು ಎಂದು ಪಿಡಿಒ ತಿಳಿಸಿದಂತೆ ಎಲ್ಲಾ ಸದಸ್ಯರು ಈ ಬಗ್ಗೆ ಮನೆ ಇಲ್ಲದವರಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಮುಂದಿನ ವರ್ಷದಿಂದ ಈ ಬಗ್ಗೆ ಪರಿಶೀಲಿಸಿ ಅರ್ಹರಿಗೆ ವಸತಿ ಯೋಜನೆಯಲ್ಲಿ ಸಹಕರಿಸಲಾಗುವುದೆಂದರು. ಸಭೆಯಲ್ಲಿ ಗ್ರಾ.ಪಂ, ಉಪಾಧ್ಯಕ್ಷೆ ಭವಾನಿ, ಜಿ.ಪಂ ಸದಸ್ಯರಾದ ಕುಟ್ರುಪ್ಪಾಡಿ ತಾ.ಪಂ. ಸದಸ್ಯ ಗಣೇಶ್ ಕೈಕುರೆ, ಗ್ರಾ.ಪಂ ಸದಸ್ಯರಾದ ಕೆ.ಜೆ. ತೋಮಸ್, ರಾಜು ಗೋಳಿಯಡ್ಕ, ರಾಮಚಂದ್ರ ಗೌಡ ಯಸ್, ಹರೀಶ್ ಯನ್, ವಲ್ಸ ಕೆ.ಜೆ ಹೊನ್ನಮ್ಮ ಪಾಲೆತ್ತಡ್ಕ, ಪುಷ್ಪಲತಾ ಪೇರಡ್ಕ , ಜಾನಕಿ ಕಲ್ಲುಗುಡ್ಡೆ, ಕಲ್ಲುಗುಡ್ಡೆ ಅಂಗನವಾಡಿ ಕಾರ್‍ಯಕರ್ತೆ ಅಮೀನ.ಕೆ ನೂಜಿಬಾಳ್ತಿಲ ಕಿ.ಆ. ಸಹಾಯಕಿ ದಯಕಿರಣ್, ರೆಂಜಿಲಾಡಿ ಕಿ.ಆ.ಸಹಾಯಕಿ ಮಧುರ ಚರ್ಚೆಯಲ್ಲಿ ಪಾಲ್ಗೊಂಡರು.
ನಾಡಗೀತೆಯೊಂದಿಗೆ ಸಭೆ ಪ್ರಾರಂಭವಾಯಿತು. ಬಳಿಕ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ಸ್ವಾಗತಿಸಿ ವರದಿ ಮಂಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.