ಪಡುಮಲೆ ಕೋಟಿ-ಚೆನ್ನಯರ ಮೂಲಸ್ಥಾನದಲ್ಲಿ ಸಾಮೂಹಿಕ ಸಂಕಲ್ಪ

Puttur_Advt_NewsUnder_1
Puttur_Advt_NewsUnder_1

padumale*ನ: 12, 13ರಂದು ನೇಮೋತ್ಸವ * ಜನವರಿ 1ರಂದು ಶಿಲಾನ್ಯಾಸ

ಪುತ್ತೂರು: ತುಳುನಾಡಿನ ಕಾರಣಿಕ ಶಕ್ತಿಗಳಾದ ಅವಳಿ ವೀರರು ಕೋಟಿ-ಚೆನ್ನಯರ ಮೂಲಸ್ಥಾನ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಪುನರುತ್ಥಾನ ಪೂರ್ವ ಸಾಮೂಹಿಕ ಪ್ರಾರ್ಥನೆ ಮತ್ತು ಸಂಕಲ್ಪ ಅ.25ರಂದು ನಡೆಯಿತು.

ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ಮೂಲಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಮಂಗಳೂರು ಅವರ ನೇತೃತ್ವದಲ್ಲಿ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರಾದ ಲೀಲಾವತಿ ಪೂಜಾರಿ ಮತ್ತು ಮಕ್ಕಳ ಸಮ್ಮುಖದಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಲೋಕೇಶ್ ಶಾಂತಿರವರು ಸಾಮೂಹಿಕ ಪ್ರಾರ್ಥನೆ, ಸಂಕಲ್ಪ ನೆರವೇರಿಸಿಕೊಟ್ಟರು.

ನವೆಂಬರ್ 12 ಮತ್ತು 13ರಂದು ಕ್ಷೇತ್ರದ ಆದಿ ದೈವ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ, ಯಜಮಾನ ಗಡಿ ಪ್ರದಾನ, ಸ್ವರ್ಣ ನಿಧಿ ಕುಂಭ ಸ್ಥಾಪನೆ, ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮಗಳು ನಡೆಯಲಿವೆ. 2017ರ ಜನವರಿ ಒಂದರಂದು ಕೋಟಿ – ಚೆನ್ನಯ ಮೂಲಸ್ಥಾನ ಗರಡಿ, ಗುರು ಸಾಯನ ಬೈದ್ಯರು – ಮಾತೆ ದೇಯಿ ಬೈದ್ಯೆತಿ ಧರ್ಮಚಾವಡಿ, ದೇಯಿ ಬೈದ್ಯೆತಿ ಸಮಾಧಿ, ಸರೋಳಿ ಸೈಮಂಜ ಕಟ್ಟೆ, ಬೆರ್ಮೆರ್ ಗುಂಡ, ಕುಪ್ಪೆ ಪಂಜುರ್ಲಿ ದೈವಸ್ಥಾನ ನಿರ್ಮಾಣ ಮತ್ತು ಧೂಮಾವತಿ ದೈವಸ್ಥಾನ ಪುನರುತ್ಥಾನಕ್ಕೆ ಶಿಲಾನ್ಯಾಸ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಸಂಬಂಧಿಸಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ನವೆಂಬರ್ ೧೩ರ ನೇಮೋತ್ಸವದಂದು ನಡೆಯುವ ಮಹಾ ಅನ್ನ ಸಂತರ್ಪಣೆ, ಪಾರ್ಕಿಂಗ್ ವ್ಯವಸ್ಥೆ, ಪ್ರಚಾರ ಕಾರ್ಯ ಇನ್ನಿತರ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಆಯಾ ತಾಲೂಕುಗಳಲ್ಲಿ ರಚನೆಯಾಗಿರುವ ಜೀರ್ಣೋದ್ಧಾರ ಸೇವಾ ಸಮಿತಿಗಳ ನೆರವನ್ನು ಈ ಸಂದರ್ಭದಲ್ಲಿ ಪ್ರಕಟಿಸಲಾಯಿತು.

ಕೋಟಿ – ಚೆನ್ನಯ ಮೂಲಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚಿತ್ತರಂಜನ್‌ರವರು ಸಿದ್ಧತೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.  ಸಮಿತಿಯ ಕಾರ್ಯಾಧ್ಯಕ್ಷರಾದ ಪೀತಾಂಬರ ಹೇರಾಜೆ ಬೆಳ್ತಂಗಡಿ, ಜಯಂತ ನಡುಬೈಲ್ ಪುತ್ತೂರು, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಳೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ನಾವರ, ಯುವವಾಹಿನಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸದಾನಂದ ಉಂಗಿಲ ಬೈಲ್, ಮಂಗಳೂರು ಕೋಟಿ – ಚೆನ್ನಯ ಯುವ ವೇದಿಕೆಯ ಪ್ರಮುಖರಾದ ಡಾ.ನವೀನ್ ಮರಿಕೆ, ಅಶೋಕ್ ಬೊಳ್ಳಾಡಿ, ಭಾಸ್ಕರ್ ಬಪ್ಪಳಿಗೆ, ನಾರಾಯಣ ಪೂಜಾರಿ ನಂಜೆ, ಮಹಾಬಲ ಪೂಜಾರಿ, ನಾರಾಯಣ ಪೂಜಾರಿ ಮಚ್ಚಿನ, ಮಂಜುನಾಥ ಸಾಲಿಯಾನ್ ಬೆಳ್ತಂಗಡಿ, ಶೇಖರ ಬಂಗೇರ, ಜಗನ್ನಾಥ ಬಂಗೇರ, ಪದ್ಮನಾಭ ಸಾಲಿಯಾನ್, ಜಯರಾಮ ಬಂಗೇರ ಕೇದೆ ಉಪಸ್ಥಿತರಿದ್ದರು.

ಗೆಜ್ಜೆಗಿರಿ ಕುರಿತ ಸಿನಿಮಾ….

* ಕೋಟಿ-ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಮಾತೆ ದೇಯಿ ಬೈದ್ಯೆತಿ ಹಾಗೂ ಗುರು ಸಾಯನ ಬೈದ್ಯರ ಮೂಲಕ್ಷೇತ್ರವಾಗಿದ್ದು, ಇಲ್ಲಿನ ಚರಿತ್ರೆಯ ಬಗ್ಗೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಇದರ ಆಡಿಯೋ ಬಿಡುಗಡೆ ಶೀಘ್ರದಲ್ಲೇ ಗೆಜ್ಜೆಗಿರಿಯಲ್ಲಿ ನಡೆಯಲಿದೆ.

* ಗೆಜ್ಜೆಗಿರಿ ನಂದನ ಕ್ಷೇತ್ರದ ಬಗ್ಗೆ ಕೋಟಿ-ಚೆನ್ನಯ ಯುವ ವೇದಿಕೆಯ ಉತ್ಸಾಹಿ ತರುಣರು ನಿರ್ಮಿಸಲಿರುವ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಸಾಕ್ಷ್ಯಚಿತ್ರವನ್ನು ಭಕ್ತರೇ ನಿರ್ಮಿಸುತ್ತಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

* ಗೆಜ್ಜೆಗಿರಿ ಕ್ಷೇತ್ರದ ಮಹಿಮೆ ಸಾರುವ ಧ್ವನಿ ಸುರುಳಿಯನ್ನು ಭಕ್ತ ಸಹೋದರರು ನಿರ್ಮಾಣ ಮಾಡುತ್ತಿದ್ದು, ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಧ್ವನಿ ಸುರುಳಿ ಬಿಡುಗಡೆ ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.