‘ಸರ್ಫಿಂಗ್‌’ ಸಾಧಕಿಗೆ ಬೇಕಾಗಿವೆ ‘ಹೆಲ್ಪಿಂಗ್‌’ ಕೈಗಳು; ಈಕೆ ಅಂತಿಂಥ ಬಾಲೆಯಲ್ಲ,,, ಕಡಲ ಸವಾರೆ…

Puttur_Advt_NewsUnder_1
Puttur_Advt_NewsUnder_1

surfing1 surfing2

ವಿಶೇಷ ವರದಿ: ಉಮೇಶ್ ಮಿತ್ತಡ್ಕ

ಅದು ಕಡಲ ತೀರ… ಅಬ್ಬರದ ಅಲೆಗಳನ್ನು ನೋಡಿದರನೇ ಎದೆ ಝುಂ ಎನ್ನುತ್ತದೆ. ಇನ್ನು ಅಲೆಗಳ ನಡುವೆ ಈಜುವುದೆಂದರೆ ಇನ್ನೂ ಕಠಿಣವಾದುದು. ಅಂತಹುದರಲ್ಲಿ ಅಲೆಗಳನ್ನು ಎದುರಿಸಿ ಅವುಗಳ ಮೇಲೆ ಸವಾರಿ ಮಾಡುವುದೆಂದರೆ ದುಸ್ಸಾಹಸ ಅಲ್ಲದೆ ಮತ್ತೇನು? ಇಂತಹ ಸಾಹಸಮಯ ಜಲಕ್ರೀಡೆಯೇ ಸರ್ಫಿಂಗ್. ಇದು ಸಾಮಾನ್ಯರಿಗಾಗುವ ಕ್ರೀಡೆಯಲ್ಲ.. ಎದೆಗಾರಿಕೆ ಬೇಕು.. ಕಲಿಕೆಯ ಛಲಗಾರಿಕೆ ಬೇಕು.. ಕರಾವಳಿ ತೀರದವರು ಮತ್ತು ವಿದೇಶದಲ್ಲಿ ಇಂತಹ ಕ್ರೀಡೆಗೆ ಹೆಚ್ಚು ಮಂದಿ ಆಸಕ್ತರಾಗುತ್ತಾರೆ. ಇಂತಹ ವಿಶೇಷ ಸಾಧನೆ ಮಾಡುವಲ್ಲಿ ಮನ ಮಾಡಿ ಕೀರ್ತಿ ತರುತ್ತಿರುವ ನಮ್ಮೂರಿನ ಬಾಲೆ ಸಿಂಚನಾಳಿಗೆ ಕಡಲ ಅಲೆಗಳು ನೀರ ಸಿಂಚನವಾಗಿ ಪರಿಣಮಿಸಿದೆ. ಈಕೆಯ ಕಲಿಕೆಯ ಹುಮ್ಮನಸ್ಸು, ಏನಾದರು ಮಾಡಬೇಕೆಂಬ ಛಲ ಈಕೆಯನ್ನು ಸಮುದ್ರದಲ್ಲಿ ತೇಲುವ ಹಾಗೆ ಮಾಡಿದೆ. ಈಕೆಯ ಸಾಧನೆಗಳೆಂಬ ಅಲೆಗಳು ರಾಷ್ಟ್ರದಾದ್ಯಂತ ಸಂಚರಿಸುತ್ತಿದೆ. ರಾಷ್ಟ್ರ ಮಟ್ಟದ ಪ್ರತಿಭೆಯಾಗಿರುವ ಸಿಂಚನಾಳು ಪ್ರತಿಭೆಯ ಸಿಂಚನಕ್ಕೆ ಸಹಾಯ ಹಸ್ತದ ನೀರಧಾರೆಗೆ ಮುಖವಿಟ್ಟಿದ್ದಾಳೆ.

ಪ್ರೀತಿಯೇ ಸಾಧನೆಗೆ ಮೆಟ್ಟಿಲಾಯಿತು:

ಎಳೆಯ ವಯಸ್ಸಿನಲ್ಲಿಯೇ ಸಮುದ್ರವೆಂದರೆ ಸಿಂಚನಾಳಿಗೆ ಎಲ್ಲಿಲ್ಲದ ಖುಷಿ.. ಕುಟುಂಬದೊಡನೆ ಸಮುದ್ರ ತೀರಕ್ಕೆ ಹೋದರೆ ಅಲ್ಲಿಂದ ಪಕ್ಕನೆ ಕದಲುವವಳಲ್ಲ.. ಈ ಪ್ರೀತಿಯೇ ಇಂದು ಆಕೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದೆ. ತನ್ನ 3-4 ನೇ ವಯಸ್ಸಿನಲ್ಲಿಯೇ ಬಾಲವನದಲ್ಲಿ ಈಜಲು ಪ್ರಾರಂಭಿಸಿದ್ದ ಈಕೆ ತನ್ನ ಮಾವ ಅಂತರಾಷ್ಟ್ರೀಯ ಈಜು ತರಬೇತುದಾರ ಪಾರ್ಥ ವಾರಣಾಸಿಯವರಿಂದ ಈಜು ತರಬೇತಿ ಕಲಿತು ಬಳಿಕ ಸರ್ಫಿಂಗ್ ಕಡೆ ಒಲವು ತೋರಿಸಿದರು. ಈಕೆಯ ಸಹೋದರಿ ಶಿವಾನಿ ಡಿ. ಗೌಡ ಸ್ವಿಮ್ಮಿಂಗ್ ಪ್ರತಿಭೆ. ಅಕ್ಕಳಿಗಿಂತ ವಿಭಿನ್ನ ಸಾಧನೆ ಮಾಡಬೇಕೆಂಬ ಈಕೆಯ ಮನೋತ್ಸಾಹವನ್ನು ಅಮ್ಮ ಮೀನಾಕ್ಷಿ ಡಿ. ಗೌಡ ಎಂದೂ ಕುಂದಿಸಲಿಲ್ಲ. ಈಕೆಯ ತುಂಬು ಉತ್ಸಾಹ ಇಂದು ‘ಭಾರತದ ಪ್ರಪ್ರಥಮ ಅತ್ಯಂತ ಕಿರಿಯ ಸರ್ಫರ್‌’ ಎಂಬ ಹೆಗ್ಗಳಿಕೆಗೆ ತಲುಪಿಸಿದೆ. ಮೂಲ್ಕಿಯ ಮಂತ್ರ ಸರ್ಫ್ ಕ್ಲಬ್‌ನಲ್ಲಿ ಧ್ರುವದಾಸ್, ಕಿರಣ್ ಕುಮಾರ್ ಹಾಗೂ ಶಮಂತ್ ಕುಮಾರ್‌ರವರಿಂದ ಬೇಕಲ ಕೋಟೆ, ತಣ್ಣೀರು ಬಾವಿ, ಪಣಂಬೂರ್ ಬೀಚ್, ಕಾಪು ಮತ್ತು ಮೂಲ್ಕಿ ಬೀಚ್‌ಗಳಲ್ಲಿ ತನ್ನ ತರಬೇತಿಗಳನ್ನು ಪಡೆದಿರುವ ಈಕೆ ಸರ್ಫಿಂಗ್ ಸ್ಪರ್ಧೆಗಳಲ್ಲಿ ತೀರ್ಪುಗಾರರ ವಿಶೇಷ ಆಕರ್ಷಣೆಗೆ ಪಾತ್ರವಾದವರು.

ಅಸಾಮಾನ್ಯ ಕ್ರೀಡೆ:

ಈಕೆ ಅಲೆಗಳ ಎದುರು ಆಟವಾಡಲು ಶುರು ಮಾಡಿದ್ದು 2014ರಲ್ಲಿ ಬೇಕಲಕೋಟೆಯಲ್ಲಿ.. ಬಳಿಕ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನೂ ತನ್ನದಾಗಿಸಿಕೊಂಡಿದ್ದರು. ತರಬೇತಿಯ ವೇಳೆಯಲ್ಲಿ ಕಠಿಣ ಪರಿಶ್ರಮ ಬೇಕಾಗಿತ್ತು. ನೀರಿನೊಳಗೆ ಉಸಿರಾಟದ ನಿಯಂತ್ರಣವನ್ನೂ ಸಾಧಿಸಬೇಕಿತ್ತು. ಎಲ್ಲಕ್ಕಿಂತ ಮುಖ್ಯ ತನಗಿಂತ ಹಿರಿಯ ಸರ್ಫರ್‌ಗಳು ಹಾಗೂ ವೃತ್ತಿಪಟುಗಳ ಮುಂದೆ ಈಕೆ ತನ್ನ ಪ್ರತಿಭೆ ಬೆಳಗಿಸಲು ಅವಕಾಶ ಪಡೆದಿದ್ದರು. ಡೈವ್ ಮಾಡುವ ವೇಳೆ ನೀರಿಗೆ ಬಿದ್ದರೆ ಉಪ್ಪು ನೀರು ಕುಡಿಯಲೇಬೇಕಿತ್ತು. ಭಯಹುಟ್ಟಿಸುವ ಗಜಗಾತ್ರದ ಅಲೆಗಳೇ ಈ ಕ್ರೀಡೆಯ ಸ್ವಾರಸ್ಯ. ಅವುಗಳಿಗೆ ಸಡ್ಡುಹೊಡೆದು ಅಲೆಯಂತೆ ತಾನೂ ಡೈವ್ ಮಾಡಿಕೊಂಡು ಹೋಗುವ ರೀತಿಗಳು ವಿಶೇಷ ಅಂಕಗಳಿಗೆ ಎಡೆಮಾಡಿಕೊಡುತ್ತವೆ. ಹೆಚ್ಚೆಚ್ಚು ಅಲೆಗಳು ಇರುವ ಬೀಚ್‌ಗಳೇ ಈ ಕ್ರೀಡೆಯ ಅಂಕಣ.

ದುಬಾರಿ ಕ್ರೀಡೆ:

ಸರ್ಫಿಂಗ್ ಕ್ರೀಡೆ ಸಾಹಸಮಯವಾದುದಷ್ಟೇ ಇದರ ತರಬೇತಿಯೂ ಅಷ್ಟೇ ದುಬಾರಿಯಾಗಿದೆ. ಈಕೆ ಮೂಲ್ಕಿಯ ಮಂತ್ರ ಸರ್ಫ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಪ್ರತಿ ಶನಿವಾರ ಆದಿತ್ಯವಾರ ಅಲ್ಲದೇ ರಜಾ ದಿನಗಳಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ದಿನಕ್ಕೆ 300-350 ರೂ. ಖರ್ಚು. ಅಲ್ಲದೇ ಸ್ಪರ್ಧೆಗಳಿಗೆ ಹೋಗುವಾಗ ಅಮ್ಮ ಮಗಳ ಖರ್ಚು ವೆಚ್ಚಕ್ಕೆ ಪ್ರತೀ ಸ್ಪರ್ಧೆಗೆ ಕನಿಷ್ಠ ರೂ. 4000 ದಷ್ಟು ಖರ್ಚಾಗುತ್ತಿದೆ. ಇನ್ನು ಸರ್ಫಿಂಗ್ ಬೋರ್ಡ್‌ಗೆ ಕನಿಷ್ಠ ಅಂದರೂ ಒಂದಕ್ಕೆ 50 ಸಾವಿರ ರೂ. ಇದೆ. ಪ್ರಸ್ತುತ ಇರುವ ಬೋರ್ಡ್‌ನ್ನು ಬಹುಮಾನವಾಗಿ ಪಡೆದಿದ್ದಾರೆ. ತರಬೇತಿಯ ವೇಳೆ ಅದೂ ಮುರಿಯಲ್ಪಟ್ಟಿರುವುದರಿಂದ ಹೊಸ ಬೋರ್ಡ್‌ನ ಅಗತ್ಯತೆಯಿದೆ.

ಬಹುಮುಖ ಪ್ರತಿಭೆ: ಆಸಕ್ತಿಯಿಂದ ಹರಿದು ಬಂದ ಸರ್ಫಿಂಗ್ ಪ್ರತಿಭೆಗೆ ಈಕೆ ವಿಶೇಷ ಮಣೆ ಹಾಕಿದ್ದರೆ, ತನ್ನಲ್ಲಿ ಅರಳಿದ ಇತರ ಪ್ರತಿಭೆಗಳನ್ನು ಎಂದೂ ಧಿಕ್ಕರಿಸಿಲ್ಲ. ಚಟುವಟಿಕೆಗಳ ಆಗರ ನಗರದ ಸುದಾನ ಶಾಲೆಯಲ್ಲಿ ನಲಿ ನಲಿದು ಬೆಳೆದ ಈಕೆ ಈಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ. ಶಾಲೆಯ ಗೈಡ್ಸ್‌ನಲ್ಲಿ ರಾಷ್ಟ್ರಪತಿ ಪುರಸ್ಕಾರದವರೆಗೆ ತಲುಪಿದ್ದಾರೆ. ಸ್ವಿಮ್ಮಿಂಗ್, ಬ್ರೇಕ್ ಡ್ಯಾನ್ಸ್, ಸ್ಕೇಟಿಂಗ್ ನಲ್ಲೂ ಆಸಕ್ತಿ ತೋರುತ್ತಿರುವ ಈಕೆ ನಾಣ್ಯ ಸಂಗ್ರಹ, ಸ್ಟ್ಯಾಂಪ್ ಸಂಗ್ರಹದಂತಹ ಹವ್ಯಾಸವನ್ನೂ ರೂಢಿಸಿಕೊಂಡಿದ್ದಾರೆ. ಈಗಾಗಲೇ ೫೦ಕ್ಕಿಂತ ಅಧಿಕ ರಾಷ್ಟ್ರಗಳ ನಾಣ್ಯಗಳು ಈಕೆಯ ಸಂಗ್ರಹ ಪೆಟ್ಟಿಗೆಯೊಳಗೆ ಸೇರಿವೆ. ಇನ್ನು ಕಲಿಕೆಯಲ್ಲಂತೂ ಬರಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 90% ಕ್ಕಿಂತ ಅಧಿಕ ಅಂಕ ಗಳಿಸುವೆನೆಂಬ ಭರವಸೆಯ ಭಾವ ತಳೆದಿದ್ದಾರೆ. ಸರ್ಫಿಂಗ್ ಸಾಧನೆಗೆ ತಾನು ಕಲಿಯುತ್ತಿರುವ ಸುದಾನ ಶಾಲೆಯ ಆಡಳಿತ ಮಂಡಳಿ, ಅಧ್ಯಾಪಕ ಸಹಕಾರವನ್ನು ನೆನೆದೂ ಈಕೆ ಸಂತಸಪಡುತ್ತಾರೆ.

ಹಣಕಾಸಿನ ಪ್ರೋತ್ಸಾಹದ ನಿರೀಕ್ಷೆಯಲ್ಲಿ:

ಪುತ್ತೂರಿನ ನಗರ ಕಲ್ಲೇಗದಲ್ಲಿ ಬರಿಯ 7 ಸೆಂಟ್ಸ್ ಜಾಗದಲ್ಲಿ ಮನೆ ಮಾಡಿ ವಾಸ್ತವ್ಯವಿರುವ ಟಿ.ಡಿ. ಗೌಡ ಹಾಗೂ ಮೀನಾಕ್ಷಿ ಟಿ.ಡಿ. ಗೌಡ ದಂಪತಿ ಪುತ್ರಿಯಾಗಿರುವ ಈಕೆಗೆ ಉದಾರ ದಾನಿಗಳ ಪ್ರೋತ್ಸಾಹದ ಅಗತ್ಯವಿದೆ. ಮೀನಾಕ್ಷಿಯವರು ಹಿರಿ ಮಗಳು ಸ್ವಿಮ್ಮಿಂಗ್‌ನಲ್ಲಿ ಮಿಂಚಲು ಸಣ್ಣಮಟ್ಟಿನ ಆರ್ಥಿಕ ಸಂಗ್ರಹವನ್ನು ಹಾಗೋ ಹೀಗೋ ಮಾಡಿದ್ದರು. ಕಿರಿ ಮಗಳ ಸರ್ಫಿಂಗ್ ಉತ್ಸಾಹ ಪ್ರಾರಂಭದಲ್ಲಿ ಹೆಮ್ಮೆಯೆನಿಸಿದರೂ ಈಗ ಸ್ಪರ್ಧೆಗಳು, ತರಬೇತಿ, ಸರ್ಫಿಂಗ್ ಬೋರ್ಡ್‌ಗಳಿಗೆ ತಗಲುವ ಖರ್ಚು ನೋಡಿ ಆಕಾಶ ದಿಟ್ಟಿಸುತ್ತಾರೆ. ಮಗಳ ಕುಂದದ ಉತ್ಸಾಹದ ಮುಂದಡಿ ಅಮ್ಮನನ್ನು ಹಿಂದಡಿಯಿಡಿಸುತ್ತಿದೆ. ಸರಕಾರವೂ ಇದುವರೆಗೆ ಯಾವುದೇ ಸಹಾಯಹಸ್ತ ಚಾಚಿಲ್ಲ. ಧರ್ಮಸ್ಥಳ ಕ್ಷೇತ್ರ ಸೇರಿದಂತೆ ಕೆಲವೊಂದು ಖಾಸಗಿ ಸ್ಥಳೀಯ ಸಂಸ್ಥೆಯವರು ಸಹಾಯ ನೀಡಿರುವುದಾದರೂ ಸಾಕಾಗುತ್ತಿಲ್ಲ. ಪ್ರೋತ್ಸಾಹದ ನುಡಿಗಳನ್ನು ಕೇಳಬೇಕಾದ ಇವರು ಕೆಲವೊಂದು ಕಡೆ ೞಇಂತಹ ದುಬಾರಿ ವೆಚ್ಚದ ಕ್ರೀಡೆ ನಮಗೆಲ್ಲಾ ಯಾಕೆ ಬೇಕು?ೞ ಎಂಬ ಮಾತುಗಳನ್ನೂ ಕೇಳಿಸಿಕೊಂಡಿರುವ ಬಗ್ಗೆ ಹೇಳುತ್ತಾ ಮಗಳ ಉತ್ಸಾಹದ ಮುಂದೆ ಅಸಹಾಯಕತೆಯ ಉದ್ವೇಗಕ್ಕೆ ಒಳಗಾಗುತ್ತಾರೆ.

ಈಕೆಯ ಸಾಧನೆಯನ್ನು ಗುರುತಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ 50ನೇ ವಾರ್ಷಿಕ ಸಮಾವೇಶದಲ್ಲಿ ಸಂಘದ ವತಿಯಿಂದ ರೂ. 1,50,000 ಆರ್ಥಿಕ ಸಹಾಯ ನೀಡಲಾಗಿದೆ.

ಭವಿಷ್ಯದಲ್ಲಿ ಭಾರತವನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಕೀರ್ತಿಯನ್ನು ನಮ್ಮೂರಿಗೆ ತರುವ ಪೋರೆ ಈಕೆ ಯಾಕಾಗಬಾರದು ? ಮುಂದೆ ಹೆಜ್ಜೆ ಇಡಲು ಈಕೆಗೆ ಬೇಕಾಗಿರುವುದು ಸಹಾಯದ ಹಸ್ತ. ನೆರವು ನೀಡುವವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಪುತ್ತೂರು ಶಾಖೆಯ ಅ/.ಘೆಟ.: ೬೪೧೮೫೦೬೪೫೯೧- ಸಿಂಚನಾ ಡಿ. ಗೌಡ ಖಾತೆಗೆ ಜಮೆ ಮಾಡಬಹುದಾಗಿದೆ.

ಅಂತರಾಷ್ಟ್ರೀಯ ಸರ್ಫರ್ ಆಗಬೇಕು. ವಿಶ್ವಚಾಂಪಿಯನ್ ಆಗಬೇಕು. 2020 ಟೋಕಿಯೋ ಒಲಂಪಿಕ್‌ವರೆಗೂ ಮುನ್ನುಗ್ಗಬೇಕೆಂಬ ಹೆಬ್ಬಯಕೆ ಇದೆ. ಉನ್ನತ ಮಟ್ಟದ ತರಬೇತಿ, ತರಬೇತುದಾರರ ಅಗತ್ಯವಿದೆ. ಸ್ಥಳೀಯ ದಾನಿಗಳು, ಸಂಸ್ಥೆಗಳು ಆರ್ಥಿಕ ಸಹಕಾರವನ್ನಿತ್ತರೆ ಗುರಿ ಸಾಧಿಸುವ ಅಛಲ ನಂಬಿಕೆಯಿದೆ.

– ಸಿಂಚನಾ ಡಿ. ಗೌಡ

ಭಾರತದ ಅತ್ಯಂತ ಕಿರಿಯ ಸರ್ಫರ್

ಎಷ್ಟೋ ಅನಗತ್ಯ ಕೆಲಸಗಳಿಗೆ ಹಣಕಾಸು ವಿನಿಯೋಗ ಮಾಡುವ ಸ್ಥಳೀಯ ಸರಕಾರಗಳು ಸುತ್ತೋಲೆ, ಸರಕಾರದ ನಿಯಮಗಳಲ್ಲೇ ಸುತ್ತಾಡದೆ ಸ್ಥಳೀಯವಾಗಿ ಬೆಳೆಯುವ ಪ್ರತಿಭೆಗಳಿಗೆ ಹಣಕಾಸಿನ ಪ್ರೋತ್ಸಾಹವನ್ನು ನೀಡುವಲ್ಲಿ ಯಾಕೆ ಚಿಂತಿಸುತ್ತಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಸಾಧನೆಯ ಮೆಟ್ಟಿಲನೇರುತ್ತಾ….

ಪುತ್ತೂರು ಅಕ್ವೆಟಿಕ್ ಕ್ಲಬ್‌ನ ಸದಸ್ಯೆಯಾಗಿ ಕಳೆದ 10 ವರ್ಷಗಳಲ್ಲಿ ರಾಜ್ಯಮಟ್ಟದ ಹಲವಾರು ಸ್ವಿಮ್ಮಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಈಕೆ 100 ಕ್ಕೂ ಅಧಿಕ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಕೇವಲ 8 ತಿಂಗಳ ಸರ್ಫಿಂಗ್ ತರಬೇತಿ ಬಳಿಕ 2014 ರಲ್ಲಿ ಚೆನ್ನೈನಲ್ಲಿ ನಡೆದ ನ್ಯಾಷನಲ್ ಓಪನ್ ವುಮೆನ್ಸ್ ಸರ್ಫಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ. ಇದು ಈಕೆಯ ಸರ್ಫಿಂಗ್ ಸಾಧನೆಯ ಪ್ರಥಮ ಮೆಟ್ಟಿಲಾಗಿತ್ತು.

surfing

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.