ಕಲ್ಲುಗುಡ್ಡೆಯಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2ನೇ ಶಾಖೆ ಉದ್ಘಾಟನೆ

kallugudde-bank-udghatane

kallu4 kallu1 kallu2 kallu3

e67237d3-fb50-40a3-99bc-6f27fdb471b7

2 1

ಸಹಕಾರ ಸಂಘಗಳು ಊರಿನ ಅಭಿವೃದ್ಧಿಗೆ ಪೂರಕ: ತಮ್ಮಯ್ಯ ಬಳ್ಳಾಲ್

* 2006 ರಲ್ಲಿ ಬ್ಯಾಂಕಿಂಗ್ ಸೇವೆ, 2015ರಲ್ಲಿ ಕಡಬ ಶಾಖೆ, 2016ರಲ್ಲಿ ಕಲ್ಲುಗುಡ್ಡೆ ಶಾಖೆ ಆರಂಭ

*ಹಳ್ಳಿ ಜನರಿಗೆ ಸಹಕಾರಿಯಾಗಲಿ-ಫಾ.ಆಂಟನಿ

* ಪಟ್ಟಣದಿಂದ ಹಳ್ಳಿಗೆ ಬ್ಯಾಂಕಿಂಗ್ ಸೇವೆ- ಫಾ.ಕ್ಲಿಂಟೋ

* ಕಲ್ಲುಗುಡ್ಡೆಗೆ ಇನ್ನೂ ಬ್ಯಾಂಕ್‌ಗಳು ಬರಲಿ-ಪಿ.ಪಿ.ವರ್ಗೀಸ್

*ಬಿಲ್ಲವರಿಗೆ ಸೀಮಿತವಾಗಿಲ್ಲ-ಭವಾನಿ ಚಿದಾನಂದ

*ಪ್ರತಿ ಗ್ರಾಮಗಳಲ್ಲೂ ಶಾಖೆ ತೆರೆಯಲಿ-ಸಂಜೀವ ಪೂಜಾರಿ

*ಊರಿನ ಅಭಿವೃದ್ಧಿಗೆ ಉದ್ಯಮ ಬರಬೇಕು-ಸ್ಯಾಮುವೆಲ್ ಜೋಸ್

* ಹಳ್ಳಿ ಅಭಿವೃದ್ಧಿಯ ಸಂಕೇತ-ಗಣೇಶ್ ಕೈಕುರೆ

* ಬ್ಯಾಂಕ್‌ನ ಉನ್ನತಿಗೆ ಸಹಕಾರ-ಸದಾನಂದ ಗೌಡ

* ಉಳಿತಾಯ ಜನರ ನೆರವಿಗೆ ಬರಲಿ-ಮಹಾವೀರ ಜೈನ್

* ವರ್ಷಕ್ಕೊಂದು ಶಾಖೆ ಆರಂಭಗೊಳ್ಳಲಿ-ಅಬ್ದುಲ್ ಖಾದರ್

* ಬಡಜನರಿಗೆ ಪ್ರಯೋಜನ ಸಿಗಲಿ-ಶಶಿಧರ್ ಎಂ.ಕೆ

ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2ನೇ ಶಾಖೆ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಜೆ.ಜೆ.ಪ್ಲಾಜಾದಲ್ಲಿ ಅ.27ರಂದು ಉದ್ಘಾಟನೆಗೊಂಡಿತು.

ರೆಂಜಿಲಾಡಿ ಬೀಡಿನ ಅರಸರಾದ ತಮ್ಮಯ್ಯ ಯಾನೆ ಯಶೋಧರ ಬಳ್ಳಾಲ್‌ರವರು ನೂತನ ಶಾಖೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಹಕಾರಿ ಸಂಘ ಸಹಕಾರದ ಮನೋಭಾವನೆಯಲ್ಲಿ ಬೆಳೆಯಬೇಕು. ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಊರಿನ ಅಭಿವೃದ್ಧಿಗೆ ಪೂರಕವಾಗಿವೆ. ಲಕ್ಷ್ಮೀಪೂಜೆಯ ಸುಸಂದರ್ಭದಲ್ಲಿ ಲಕ್ಷ್ಮೀಯ ರೂಪದಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ಕಲ್ಲುಗುಡ್ಡೆಗೆ ಬಂದಿದೆ. ಈ ಸಂಘದ ಬೆಳವಣಿಗೆಗೆ ಊರಿನ ಎಲ್ಲರೂ ಸಹಕಾರ ನೀಡಬೇಕು. ಸಂಘವನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೇ ಒಂದೇ ಮನೆಯ ಮಕ್ಕಳಂತೆ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ದೇವರು ಅನುಗ್ರಹಿಸಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ಇಚಿಲಂಪಾಡಿ ಸೈಂಟ್ ತೋಮಸ್ ಮಲಂಕರ ಕ್ಯಾಥೋಲಿಕ್ ಮತ್ತು ನೂಜಿಬಾಳ್ತಿಲ ಪ್ರೊ.ಕೆಥೀಡ್ರಲ್ ಚರ್ಚ್‌ನ ವಿಕಾರ್ ಫಾ.ಆಂಟನಿಯವರು ಮಾತನಾಡಿ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2ನೇ ಶಾಖೆ ಉತ್ತಮವಾಗಿ ಕಾರ‍್ಯನಿರ್ವಹಿಸುವ ಮೂಲಕ ಉತ್ತರೋತ್ತರವಾಗಿ ಬೆಳೆಯಲಿ. ಇದರಿಂದ ಈ ಪ್ರದೇಶದ ಜನರಿಗೂ ಸಂಪೂರ್ಣ ಸಹಕಾರ ಸಿಗಲಿ ಎಂದು ಹಾರೈಸಿದರು. ಇನ್ನೋರ್ವ ಅತಿಥಿ ರೆಂಜಿಲಾಡಿ ಸೈಂಟ್ ಮೆರೀಸ್ ಸೊನೊರೋ ಚರ್ಚ್‌ನ ಫಾ.ಕ್ಲಿಂಟೋ ಮ್ಯಾಥ್ಯೂರವರು ಮಾತನಾಡಿ, ಪ್ರತಿಯೋರ್ವರಿಗೂ ಬ್ಯಾಂಕಿಂಗ್ ಸೇವೆಯ ಅಗತ್ಯವಿದೆ. ಬ್ಯಾಂಕಿಂಗ್ ಸೇವೆಗಳೂ ಪಟ್ಟಣದಿಂದ ಹಳ್ಳಿಗಳಿಗೂ ಕಾಲಿಡುತ್ತಿವೆ. ಇದರಿಂದ ಹಳ್ಳಿಗಳು ಮುಂದೆ ಅಭಿವೃದ್ಧಿಯಾಗಲಿದೆ. ಸಹಕಾರ ಸಂಘಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.

ನಗದು ಪತ್ರ ಬಿಡುಗಡೆ: ನಗದುಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್‌ರವರು, ಗ್ರಾಮೀಣ ಪ್ರದೇಶವಾದ ಕಲ್ಲುಗುಡ್ಡೆಯಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ 2ನೇ ಶಾಖೆ ಆರಂಭಿಸಿರುವುದು ಅಭಿನಂದನಾರ್ಹವಾಗಿದೆ. ಇಲ್ಲಿ ಮೂರ್ತೆದಾರರ ಸಂಖ್ಯೆ ಕಡಿಮೆ ಇದೆ. ಈ ಪ್ರದೇಶದ ಎಲ್ಲರೂ ಬ್ಯಾಂಕಿಂಗ್ ವ್ಯವಹಾರ ಆರಂಭಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ಸಾರ್ವಜನಿಕರಲ್ಲೂ ಉಳಿತಾಯದ ಮನೋಭಾವ ಬೆಳೆಸಿ ಆರ್ಥಿಕ ಸ್ವಾವಲಂಬಿಗಳಾಗಿ ಬೆಳೆಯಲು ಸಂಘ ಸಹಕಾರಿಯಾಗಲಿ. ಕಲ್ಲುಗುಡ್ಡೆಗೆ ಇನ್ನೂ ಹೆಚ್ಚಿನ ಬ್ಯಾಂಕ್‌ಗಳು ಬರಲಿ. ಗ್ರಾಮೀಣ ಪ್ರದೇಶ ಪಟ್ಟಣವಾಗಿ ಬೆಳೆಯಲಿ ಎಂದು ಹೇಳಿದರು.

ಸಭಾ ಕಾರ‍್ಯಕ್ರಮ ಉದ್ಘಾಟನೆ: ಸಭಾ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾ.ಪಂ.ಸದಸ್ಯೆ ಭವಾನಿ ಚಿದಾನಂದ, ಮೂರ್ತೆದಾರರ ಸೇವಾ ಸಹಕಾರಿ ಸಂಘ ಕೇವಲ ಬಿಲ್ಲವ ಸಮುದಾಯಕ್ಕೆ ಸೀಮಿತಗೊಳ್ಳದೇ ಎಲ್ಲಾ ಧರ್ಮದವರನ್ನೂ ಸೇರಿಸಿಕೊಂಡು ಮುನ್ನಡೆಯುತ್ತಿದೆ. ಗ್ರಾಮೀಣ ಪ್ರದೇಶವಾದ ಕಲ್ಲುಗುಡ್ಡೆಯಲ್ಲಿ ಸಹಕಾರಿ ಸಂಘದ ಸೇವೆ ಆರಂಭಗೊಂಡಿರುವುದು ಊರಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಗಣಕ ಯಂತ್ರ ಉದ್ಘಾಟನೆ: ಗಣಕಯಂತ್ರ ಉದ್ಘಾಟಿಸಿದ ಮಂಗಳೂರು ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಮಾತನಾಡಿ,ಪೇಟೆ, ಪಟ್ಟಣಗಳಲ್ಲಿ ಹಲವು ಬ್ಯಾಂಕ್‌ಗಳಿವೆ. ಹಳ್ಳಿ ಪ್ರದೇಶದ ಜನರಿಗೂ ಬ್ಯಾಂಕಿಂಗ್ ಸೇವೆ ದೊರೆಯಬೇಕಾದಲ್ಲಿ ಹಳ್ಳಿಗಳಿಗೂ ಬ್ಯಾಂಕಿಂಗ್ ಸೇವೆ ವಿಸ್ತಾರಗೊಳ್ಳಬೇಕು. ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ತನ್ನ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲೂ ಶಾಖೆ ತೆರೆಯಬೇಕು. ಇದಕ್ಕೆ ಬಲ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿಕೊಳ್ಳಬೇಕೆಂದು ಹೇಳಿದರು.

ಭದ್ರತಾ ಕೋಶ ಉದ್ಘಾಟನೆ: ಭದ್ರತಾ ಕೋಶ ಉದ್ಘಾಟಿಸಿದ ಕಲ್ಲುಗುಡ್ಡೆ ಜೆ.ಜೆ.ಪ್ಲಾಜಾದ ಮಾಲಕ ಸ್ಯಾಮುವೆಲ್ ಜೋಸ್ ಮಾತನಾಡಿ, ಊರಿನ ಅಭಿವೃದ್ಧಿಗೆ ಅನೇಕ ಉದ್ಯಮಗಳು ಬರಬೇಕು. ಹಳ್ಳಿಯಾಗಿದ್ದ ಕಲ್ಲುಗುಡ್ಡೆ ಪಟ್ಟಣವಾಗಿ ಬೆಳೆಯುತ್ತಿದೆ. ೩೦ ಲಕ್ಷ ರೂ.ಬಂಡವಾಳ ಹಾಕಿ ಕಲ್ಲುಗುಡ್ಡೆಗೆ ವಿಜಯ ಬ್ಯಾಂಕ್ ಬರುವಂತೆ ಮಾಡಿzವೆ. ಆದರೆ ಇದೀಗ ಬ್ಯಾಂಕ್ ಇಲ್ಲಿಂದ ಬೇರೆಡೆ ಶಿಫ್ಟ್ ಆಗುತ್ತಿದೆ. ಇದು ವರ್ಗಾವಣೆಗೊಂಡರೆ ಇಲ್ಲಿಗೆ ಬೇರೆ ಬ್ಯಾಂಕ್ ಬರಲು ಪ್ರಯತ್ನಿಸುತ್ತೇವೆ. ಮೂರ್ತೆದಾರರ ಸೇವಾ ಸಹಕಾರಿ ಸಂಘದ ೨ನೇ ಶಾಖೆ ಆರಂಭಗೊಂಡಿರುವುದರಿಂದ ಊರಿನ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.

ತಾ.ಪಂ.ಸದಸ್ಯ ಗಣೇಶ್ ಕೈಕುರೆ ಮಾತನಾಡಿ, ಮೂರ್ತೆದಾರರು ಶ್ರಮ ಜೀವಿಗಳು. ಜನರಿದ್ದಲ್ಲಿ ಸಾಕಷ್ಟು ಅವಕಾಶಗಳಿವೆ. ಇದರ ಸದುಪಯೋಗಪಡಿಸಿಕೊಳ್ಳಬೇಕು. ಹಳ್ಳಿಗಳಿಗೂ ಬ್ಯಾಂಕಿಂಗ್ ಸೇವೆ ವಿಸ್ತಾರಗೊಳ್ಳುತ್ತಿರುವುದು ಅಭಿವೃದ್ಧಿಯ ಸಂಕೇತವಾಗಿದೆ. ಮೂರ್ತೆದಾರರ ಸೇವಾ ಸಹಕಾರಿ ಸಂಘದ ಶಾಖೆ ಕಲ್ಲುಗುಡ್ಡೆಯಲ್ಲಿ ಆರಂಭಗೊಂಡಿರುವುದು ಊರಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅದೇ ರೀತಿ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಮಾತನಾಡಿ, ಊರಿಗೆ ಬಂದಿರುವ ಬ್ಯಾಂಕ್‌ನಲ್ಲಿ ಠೇವಣಿ ಸೇರಿದಂತೆ ಇತರೇ ರೀತಿಯಲ್ಲಿ ವ್ಯವಹರಿಸುವ ಮೂಲಕ ಬ್ಯಾಂಕ್‌ನ ಉನ್ನತಿಗೆ ಸಹಕರಿಸಬೇಕು. ನೂಜಿಬಾಳ್ತಿಲ ಗ್ರಾಮದಲ್ಲಿ ಬಿಲ್ಲವ ಸಮುದಾಯದ ಜನ ಬಹಳಷ್ಟು ಕಡಿಮೆ ಇದ್ದರೂ ದೃಢ ಮನಸ್ಸಿನಿಂದ ಮೂರ್ತೆದಾರರ ಸಹಕಾರಿ ಸಂಘದ ಶಾಖೆ ಇಲ್ಲಿ ಆರಂಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಕುರಿಯಾಳಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅಧ್ಯಕ್ಷ ಮಹಾವೀರ ಜೈನ್ ಮಾತನಾಡಿ, ನಮ್ಮ ಉಳಿತಾಯ ನಮ್ಮೂರಿನ ಜನರ ಕಷ್ಟಗಳಿಗೆ ನೆರವಾಗಲಿ. ಸರ್ವಧರ್ಮದವರನ್ನೂ ಸೇರಿಸಿಕೊಂಡು ಬ್ಯಾಂಕಿಂಗ್ ಸೇವೆ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಬ್ಯಾಂಕ್‌ನಿಂದಲೂ ಸಮಾಜಮುಖಿ ಕೆಲಸಗಳು ನಡೆಯಲಿ. ದೇವರ ಅನುಗ್ರಹದಿಂದ ಸಂಘ ಬೆಳೆಯಲಿ ಎಂದು ಹಾರೈಸಿದರು. ಕಡಬ ವರ್ತಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಮಾತನಾಡಿ, ೨೮ ವರ್ಷಗಳ ಹಿಂದೆ ಕಲ್ಲುಗುಡ್ಡೆಗೆ ರಸ್ತೆ ಸಂಪರ್ಕ ಸೇರಿದಂತೆ ಯಾವುದೇ ಮೂಲಭೂತ ಸೌಕರ‍್ಯಗಳಿರಲಿಲ್ಲ. ಮೂಲಭೂತ ಸೌಕರ‍್ಯಗಳಿಗೆ ಒತ್ತಾಯಿಸಿ ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದರು. ಈ ವಿಚಾರ ರೇಡಿಯೋದಲ್ಲಿ ಪ್ರಸಾರಗೊಳ್ಳುತ್ತಿದ್ದಂತೆ ವಿವಿಧ ಪಕ್ಷಗಳ ಮುಖಂಡರು ಇಲ್ಲಿಗೆ ಬಂದು ಭರವಸೆ ನೀಡಿ ಮನವೊಲಿಕೆ ನಡೆಸಿದ್ದರು. ಆದರೂ ಇಲ್ಲಿನ ಗ್ರಾಮಸ್ಥರು ಪಟ್ಟು ಸಡಿಲಿಸಿರಲಿಲ್ಲ. ಕೊನೆ ಕ್ಷಣದಲ್ಲಿ ಮತದಾರರೇ ಮನಸ್ಸು ಬದಲಾಯಿಸಿ ಮತ ಚಲಾಯಿಸಿದ್ದರು. ಅಂತಹ ಕಲ್ಲುಗುಡ್ಡೆ ಇಂದು ಗಮನ ಸೆಳೆಯುವ ರೀತಿಯಲ್ಲಿ ಬೆಳೆದು ನಿಂತಿದೆ. ನಾರಾಯಣಗುರುಗಳ ತತ್ವದಂತೆ ಇಲ್ಲಿ ಎಲ್ಲಾ ಸಮುದಾಯದ ಜನರನ್ನು ಸೇರಿಸಿಕೊಂಡು ಇಲ್ಲಿ 2ನೇ ಶಾಖೆ ಆರಂಭಗೊಂಡಿದೆ. ಮುಂದಿನ ವರ್ಷ ಸಂಘದ ೩ನೇ ಶಾಖೆಯೂ ಆರಂಭಗೊಳ್ಳಲಿ. ಅದೇ ರೀತಿ ಪ್ರತಿ ವರ್ಷವೂ ಸಂಘ ಗ್ರಾಮ ಗ್ರಾಮಗಳಲ್ಲಿ ಶಾಖೆ ಆರಂಭಿಸಲಿ. ಜನರಲ್ಲಿ ಉಳಿತಾಯದ ಮನೋಭಾವ ಬೆಳೆಸಲಿ ಎಂದು ಹಾರೈಸಿದರು.

ಕಟ್ಟತ್ತಡ್ಕ ಶ್ರೀ ನಾರಾಯಣ ಗುರುಮಠ ಮತ್ತು ಮಿಷನ್‌ನ ಅಧ್ಯಕ್ಷ ಎಂ.ಕೆ.ಶಶಿಧರ್ ಮಾತನಾಡಿ, ಕಲ್ಲುಗುಡ್ಡೆ ಶಾಖೆಯಿಂದ ಊರಿನ ಬಡ ಜನರಿಗೆ ಪ್ರಯೋಜನ ಸಿಗಲಿ. ಗ್ರಾಮದ ಪ್ರತಿಯೊಬ್ಬರಿಗೂ ಬ್ಯಾಂಕಿನ ಸೇವೆ ಸಿಗುವಂತಾಗಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ ಎಂಬ ಸಂದೇಶದಂತೆ ಕಲ್ಲುಗುಡ್ಡೆಯಲ್ಲಿ ಎಲ್ಲಾ ಧರ್ಮದವರನ್ನೂ ಸೇರಿಸಿಕೊಂಡು ಸರ್ವಧರ್ಮ ಸಮ್ಮೇಳನದ ಮಾದರಿಯಲ್ಲಿ ಕಾರ‍್ಯಕ್ರಮ ನಡೆಸಲಾಗಿದೆ. ತಾಲೂಕಿನಲ್ಲಿ ಕುಂಬ್ರ, ಪುತ್ತೂರು, ನರಿಮೊಗರು, ಉಪ್ಪಿನಂಗಡಿ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘಗಳಿದ್ದು ಈ ಪೈಕಿ ಕಳೆದ ಸಾಲಿನಲ್ಲಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ೧೦೦ ಕೋಟಿ ರೂ.,ವ್ಯವಹಾರ ನಡೆಸಿ ದಾಖಲೆ ನಿರ್ಮಿಸಿದೆ. ಚಂದ್ರಶೇಖರ ಆಲಂಕಾರುರವರ ನೇತೃತ್ವದಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಉತ್ತಮ ಕೆಲಸ ಮಾಡುತ್ತಿದೆ. ಎಲ್ಲಾ ಧರ್ಮದವರನ್ನೂ ಸೇರಿಸಿಕೊಂಡು, ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸುವ ಕಾರ‍್ಯಕ್ರಮ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಸಂಘವು ತನ್ನ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಶಾಖೆ ಆರಂಭಿಸುವಂತಾಲಿ ಎಂದು ಶುಭಹಾರೈಸಿದರು.

ಸಂಘದ ಅಧ್ಯಕ್ಷರ ಮಾತು:..ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ ಆಲಂಕಾರುರವರು, ಮೂರ್ತೆದಾರರಿಂದ ಸ್ಥಾಪನೆಗೊಂಡಿದ್ದರೂ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಕೇವಲ ಒಂದೇ ಸಮುದಾಯಕ್ಕೆ ಸೀಮಿತಗೊಳ್ಳದೇ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವದಂತೆ ಸಮಾಜದ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಕಾರ‍್ಯನಿರ್ವಹಿಸುತ್ತಿದೆ. 1991ರಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ಸ್ಥಾಪನೆಗೊಂಡಿದೆ. ಸಂಘದ ವ್ಯಾಪ್ತಿಗೆ ಒಳಪಟ್ಟ 16 ಗ್ರಾಮಗಳಲ್ಲಿ ಹಿಂದೆ 83 ಮಂದಿ ಮೂರ್ತೆದಾರರಿದ್ದು, ಇದೀಗ ಈ ಸಂಖ್ಯೆ 5ಕ್ಕೆ ಇಳಿಕೆಯಾಗಿದೆ. 2006ರಲ್ಲಿ ಆಲಂಕಾರಿನಲ್ಲಿ ಬ್ಯಾಂಕಿಂಗ್ ಸೇವೆ ಆರಂಭಗೊಂಡಿದ್ದು 2015ರಲ್ಲಿ ಕಡಬದಲ್ಲಿ ಪ್ರಥಮ ಶಾಖೆ ತೆರೆದಿದೆ. ಇದೀಗ ಕಲ್ಲುಗುಡ್ಡೆಯಲ್ಲಿ 2ನೇ ಶಾಖೆ ಆರಂಭಗೊಳ್ಳುತ್ತಿದೆ. ಕಲ್ಲುಗುಡ್ಡೆಯಲ್ಲಿ ಶಾಖೆ ತೆರೆಯಲು ಸಲಹಾ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ಹಾಗೂ ಇತರೇ ಸದಸ್ಯರು ಹೆಚ್ಚಿನ ಕೆಲಸ ನಿರ್ವಹಿಸಿದ್ದಾರೆ. ಜೆ.ಜೆ.ಪ್ಲಾಜಾದ ಮಾಲಕ ಸ್ಯಾಮುವೆಲ್‌ರವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಇಲ್ಲಿ ಬ್ಯಾಂಕಿಂಗ್ ವ್ಯವಹಾರದೊಂದಿಗೆ ಪಿಗ್ಮಿ, ಠೇವಣಿ ಸಂಗ್ರಹ. ಅದೇ ರೀತಿ ಸಾಲ ವಿತರಣೆಯೂ ನಡೆಯಲಿದೆ. ಇದು ನಮ್ಮ  ಸಂಸ್ಥೆ ಎಂಬ ಭಾವನೆಯೊಂದಿಗೆ ಊರಿನ ಜನರು ಸಹಕರಿಸಬೇಕೆಂದು ಹೇಳಿದರು.

ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ವೆಂಕಟರಮಣ ಗೌಡ ಎಸ್.ಎಚ್., ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ  ಶ್ರೀಧರ ಪೂಜಾರಿ ಕಂಪ, ಗೋಳಿಯಡ್ಕ ಎಸ್‌ಎನ್‌ಡಿಪಿ ಅಧ್ಯಕ್ಷ ಮಧುರಾಜನ್, ಕಲ್ಲುಗುಡ್ಡೆ ನೂರುಲ್ ಹುದಾ ಮಸ್ಜಿದ್ ಅಧ್ಯಕ್ಷ ಖಾದರ್ ಸಾಹೇಬ್ ಕಲ್ಲುಗುಡ್ಡೆ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಕೆ.ಜಯಕರ ಪೂಜಾರಿ ಕಲ್ಲೇರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೆಯ್ಯಲ್ಗ, ಕಡಬ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಜಿನ್ನಪ್ಪ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಠೇವಣಿ ರಹಿತವಾಗಿ ಸಂಘದ ಶಾಖೆಗೆ ಸ್ಥಳವಕಾಶ ನೀಡಿದ ಕಲ್ಲುಗುಡ್ಡೆ ಜೆ.ಜೆ.ಪ್ಲಾಜಾದ ಮಾಲಕ ಸಾಮುವೆಲ್ ಜೋಸ್-ಸಿನಿ ಜೋಸ್ ದಂಪತಿ ಮತ್ತು ಕಲ್ಲುಗುಡ್ಡೆ ಶಾಖಾ ಸಲಹಾ ಸಮಿತಿ ಅಧ್ಯಕ್ಷ ವಸಂತಪೂಜಾರಿ ಬದಿಬಾಗಿಲು-ರೇಖಾ ವಸಂತಪೂಜಾರಿ ದಂಪತಿಯನ್ನು ಕಾರ‍್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಲ್ಲುಗುಡ್ಡೆ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷ ಅಭಿಲಾಷ್ ಪಿ.ಕೆ., ಸದಸ್ಯರುಗಳಾದ ಗೋಪಿನಾಥನ್ ನಿಡ್ಮೇರ್, ಶ್ರೀಧರ ಪೂಜಾರಿ ಕಂಪ, ಹರಿಶ್ಚಂದ್ರ ಪಲಯಮಜಲು, ದೇಜಪ್ಪ ಪೂಜಾರಿ ಕಂಪ, ಕುಸುಮಾಧರ ಎನ್ಕಾಜೆ, ಸಂಜೀವ ಪೂಜಾರಿ ನೈಲ, ಸೀಮಾ ಶಶಿಧರ್‌ರವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜೆ.ಜೆ.ಪ್ಲಾಜಾ ಮಾಲಕ ಸ್ಯಾಮುವೆಲ್ ಜೋಸ್‌ರವರಿಗೆ, ಕಲ್ಲುಗುಡ್ಡೆ ಉಳ್ಳಾಲ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಸುಂದರಿಯವರಿಗೆ  ಠೇವಣಿ ಪತ್ರ ಹಾಗೂ ತೋಮಸ್ ಒ.ಎಂ. ರವರಿಗೆ ಮೊದಲ ಪಾಸ್ ಬುಕ್ ವಿತರಿಸಲಾಯಿತು.

ಆಡಳಿತ ಮಂಡಳಿ ಅಧ್ಯಕ್ಷ ಕೆ.ಚಂದ್ರಶೇಖರ ಆಲಂಕಾರು, ನಿರ್ದೇಶಕರಾದ ತಿಮ್ಮಪ್ಪ ಕರ್ಕೇರ, ಬಿ.ಕೆ.ಸುಂದರ, ಸಂಜೀವ ಬಿ. ಬಟ್ಲಡ್ಕ, ಸೇಸಪ್ಪ ಪೂಜಾರಿ, ಲಕ್ಷ್ಮೀಶ ಬಂಗೇರ ಪೆಲತ್ತೋಡಿ, ಉಮೇಶ್ ಕೋಡ್ಲ, ಮೀನಾಕ್ಷಿ ಹರೀಶ್ ಆರಾಟಿಗೆ, ಗಂಗಾರತ್ನ ವಸಂತ್ ಅಗತ್ತಾಡಿ, ಕಲ್ಲುಗುಡ್ಡೆ ಶಾಖಾ ಸಲಹಾ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು, ಉಪಾಧ್ಯಕ್ಷ ಅಭಿಲಾಷ್ ಪಿ.ಕೆ., ಸದಸ್ಯರುಗಳಾದ ಗೋಪಿನಾಥನ್ ನಿಡ್ಮೇರ್, ಹರಿಶ್ಚಂದ್ರ ಪಲಯಮಜಲು, ಕುಸುಮಾಧಾರ ಎನ್ಕಾಜೆ, ಸಂಜೀವ ಪೂಜಾರಿ ನೈಲ, ದೇಜಪ್ಪ ಪೂಜಾರಿ ಕಂಪ, ಕಡಬ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಜಿನ್ನಪ್ಪ ಸಾಲ್ಯಾನ್, ಸದಸ್ಯ ಆನಂದ ಟೈಲರ್ ಕಡಬ ಅತಿಥಿಗಳಿಗೆ ತಾಂಬೂಲ ನೀಡಿ, ಶಾಲು ಹೊದಿಸಿ ಗೌರವಿಸಿದರು.

ಕಲ್ಲುಗುಡ್ಡೆ ಶಾಖಾ ಸಲಹಾ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು ಸ್ವಾಗತಿಸಿ, ಉಪಾಧ್ಯಕ್ಷ ಅಭಿಲಾಷ್ ಪಿ.ಕೆ.ವಂದಿಸಿದರು. ಶಿಕ್ಷಕ ಗಣೇಶ್ ನಡುವಾಲ್ ಕಾರ‍್ಯಕ್ರಮ ನಿರೂಪಿಸಿದರು. ಸುನೀತಾ ಗಣರಾಜ್ ಪ್ರಾರ್ಥಿಸಿದರು. ಕಡಬ ಶಾಖಾ ವ್ಯವಸ್ಥಾಪಕ ಯೋಗೀಶ್ ಕುಮಾರ್ ಅಗತ್ತಾಡಿ, ಸಿಬ್ಬಂದಿಗಳಾದ ರಂಜಿನಿ ಆರ್.ಕೆ., ರಕ್ಷಿತ್ ಎ., ಸುಂದರ ಪಲತ್ತಡ್ಕ, ಹರ್ಷಿತ್ ಮಾಯಿಲ್ಗ, ಶಿಲ್ಪಾ ಕೆ.ಎಸ್., ಪ್ರಗತಿಠೇವಣಿ ಸಂಗ್ರಾಹಕರಾದ ರಾಮಚಂದ್ರ ಎನ್., ಧನಂಜಯ ಎನ್., ಸತೀಶ ಪಟ್ಟೆ, ಶಶಿಧರ್, ಸರಫ ದಯಾನಂದ ಆಚಾರ್ ಸಹಕರಿಸಿದರು. ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ, ತಾ.ಪಂ.ಸದಸ್ಯೆ ಪಿ.ವೈ ಕುಸುಮಾ, ಕಲ್ಲುಗುಡ್ಡೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕಿಟ್ಟು ಕೆ, ನೂಜಿಬಾಳ್ತಿಲ ಗ್ರಾ.ಪಂ.ಸದಸ್ಯ ಕೆ.ಜೆ ತೋಮಸ್, ನೆಲ್ಯಾಡಿ ರಬ್ಬರ್ ಸೊಸೈಟಿಯ ನಿರ್ದೇಶಕ ಸತ್ಯಾನಂದ ಬೊಳ್ಳಾಜೆ, ನೂಜಿಬಾಳ್ತಿಲ ಗ್ರಾ.ಪಂ.ಮಾಜಿ ಸದಸ್ಯ ಶ್ರೀಧರ ಗೌಡ ಮಿತ್ತೋಡಿ, ಶ್ರೀಕ್ಷೇ.ಧ.ಗ್ರಾ.ಯೋಜನೆಯ ಕೊಣಾಜೆ ಒಕ್ಕೂಟದ ಅಧ್ಯಕ್ಷ ದಯಾನಂದ ಬೇಂಗತ್ತಡ್ಕ, ನೂಜಿಶ್ರೀ ಉಳ್ಳಾಲ್ತಿ ದೈವಸ್ಥಾನದ ಮಾಜಿ ಕಾರ‍್ಯದರ್ಶಿ ಲಿಂಗಪ್ಪ ಗೌಡ ಕಾಣದಬಾಗಿಲು, ನೂಜಿಬಾಳ್ತಿಲ ರಬ್ಬರ್ ಉತಾದಕರ ಸಂಘದ ಅಧ್ಯಕ್ಷ ಡಾ| ಬೇಬಿ ಮ್ಯಾಥ್ಯು, ಆಲಂಕಾರು ಮೂರ್ತೆದಾರರ ಸೇ.ಸ.ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ, ಕಡಬ ಸಿಎ ಬ್ಯಾಂಕ್‌ನ ಮಾಜಿ ಅಧ್ಯಕ್ಷ ವಸಂತ ಗೌಡ ಮಾರಪ್ಪೆ, ಕಡಬ ಗ್ರಾ.ಪಂ.ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ, ಸ್ಥಳೀಯ ಪ್ರಮುಖರಾದ ಅಣ್ಣು ಪೂಜಾರಿ ಪಾಲಪ್ಪೆ, ದಾಮೋದರ ಪೂಜಾರಿ ಕಾಣಿಯೂರು, ಜಯ ಕುಮಾರ್ ಜೈಭಗವಾನ್, ಜಿನೇಂದ್ರ ಇಂದ್ರ ಬಸ್ತಿ ಉಪಸ್ಥಿತರಿದ್ದರು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ತರಪಾಡಿ ಪ್ರಸಾದ್ ಶಾಂತಿಯವರ ನೇತೃತ್ವದಲ್ಲಿ ಗಣಹೋಮ ಹಾಗೂ ಪೂಜಾ ವಿಧಿವಿಧಾನಗಳು ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.