Breaking News

ಉಪ್ಪಿನಂಗಡಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ಸತತ ೩ ಸಭೆಗೆ ಗೈರು-7 ಮಂದಿಯ ಸದಸ್ಯತ್ವ ರದ್ದು

Puttur_Advt_NewsUnder_1
Puttur_Advt_NewsUnder_1

2

*ಪೇಟೆಯಲ್ಲಿ ಜಾಗದ ಸರ್ವೆ-ಒತ್ತುವರಿಯಾಗಿದ್ದರೆ ತೆರವಿಗಾಗಿ ಎಸಿಗೆ ವರದಿ *ತ್ಯಾಜ್ಯ ವಿಲೇವಾರಿಗಾಗಿ ಟ್ರ್ಯಾಕ್ಟರ್ ಖರೀದಿ *ಮೀಟರ್ ಅಳವಡಿಸದ ನೀರಿನ ಸಂಪರ್ಕ ಕಡಿತ-ಬಿಲ್ ಕಲೆಕ್ಟರ್‌ಗೆ ಅಧಿಕಾರ

ಉಪ್ಪಿನಂಗಡಿ: ಸತತವಾಗಿ ಮೂರು ಸಭೆಗಳಿಗೆ ಗೈರು ಹಾಜರಾದ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಯ ಏಳು ಮಂದಿ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸುವ ನಿರ್ಣಯವನ್ನು ಬುಧವಾರ ನಡೆದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಹಾಗೂ ಸಮಿತಿಯ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪವಾಗಿ ಸತತವಾಗಿ ಮೂರು ಸಭೆಗಳಿಗೆ ಗೈರು ಹಾಜರಾದ ಸಮಿತಿಯ ಸದಸ್ಯರಾದ ಭವಿತಾ, ಎ.ಜೆ., ಜಲಜಾಕ್ಷಿ, ಗಿರೀಶ್ ಹೆಗ್ಡೆ, ಇಸ್ಮಾಯೀಲ್ ತಂಙಳ್, ಸಂತೋಷ್, ವಸಂತ ಪೂಜಾರಿ, ನಾಸೀರ್ ಮಠ ಅವರ ಸದಸ್ಯತ್ವವನ್ನು ರದ್ದುಗೊಳಿಸಲು ತೀರ್ಮಾನಿಸಲಾಯಿತು. ಪುತ್ತೂರು ಸಹಾಯಕ ಆಯುಕ್ತರ ಆದೇಶದಂತೆ ಉಪ್ಪಿನಂಗಡಿ ಪೇಟೆಯೊಳಗೆ ಜಿಲ್ಲಾ ಪಂಚಾಯತ್ ನಿಗದಿ ಪಡಿಸಿದಂತೆ ರಸ್ತೆ ಬದಿಯ ಜಾಗದ ಸರ್ವೆ ನಡೆಸಿ, ಒತ್ತುವರಿಯಾಗಿದ್ದರೆ ಅದರ ತೆರವಿಗಾಗಿ ಎಸಿಯವರಿಗೆ ವರದಿ ನೀಡಲು ತೀರ್ಮಾನಿಸಲಾಯಿತು. ಇದೇ ಸಂದರ್ಭ ಮುಹಮ್ಮದ್ ಕೆಂಪಿ ಮಾತನಾಡಿ, ಪೇಟೆಯೊಳಗೆ ಚರಂಡಿ ಒತ್ತುವರಿ ನಡೆದಿದ್ದರೆ, ಅದನ್ನು ತಕ್ಷಣ ತೆರವುಗೊಳಿಸುವ ಕಾರ್ಯವಾಗಬೇಕು. ಆಗ ಜಾಗದ ಸಮಸ್ಯೆ ಸರಿಪಡಿಸಲು ಸಾಧ್ಯ ಎಂದರು.
ತ್ಯಾಜ್ಯ ವಿಲೇವಾರಿಗಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ಗೆ ಟ್ರ್ಯಾಕ್ಟರ್ ಖರೀದಿಸಲು ಸಭೆಯಲ್ಲಿ ಅನುಮತಿ ನೀಡಲಾಯಿತು. ನೀರಿನ ಶುಲ್ಕಕ್ಕಿಂತ ನೀರು ಸರಬರಾಜು ಶುಲ್ಕ ಜಾಸ್ತಿ ಬರುತ್ತಿದ್ದು, ಇದು ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ. ಆದ್ದರಿಂದ ಇದರ ಬಗ್ಗೆ ನಿಗಾವಹಿಸಲು ಸೂಚಿಸಲಾಯಿತ್ತಲ್ಲದೆ, ನೀರು ಸರಬರಾಜಿಗೆ ಹಣದ ಕೊರತೆಯಾದಾಗ ನಿಧಿ ೨ರಿಂದ ಹಣ ವರ್ಗಾವಣೆ ಮಾಡಲು ಸೂಚಿಸಲಾಯಿತು. ಅಲ್ಲದೇ, ಕುಡಿಯುವ ನೀರಿಗೆ ಮೀಟರ್ ಅಳವಡಿಕೆ ಕಡ್ಡಾಯವಾಗಿದ್ದು, ಮೀಟರ್ ಅಳವಡಿಸದ ನೀರು ಬಳಕೆದಾರರ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಬಿಲ್ ಕಲೆಕ್ಟರ್‌ಗೆ ಅಧಿಕಾರ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಗ್ರಾಮಾಂತರ ವ್ಯಾಪ್ತಿಯಲ್ಲಿ ಪಂಚಾಯತ್‌ನ ನೀರಿನ ಸ್ಥಾವರಗಳಿಗೆ ಅಳವಡಿಸಿದ್ದ ಅಟೋ ಸ್ಟಾರ್ಟರ್‌ಗಳನ್ನು ತೆರವುಗೊಳಿಸಲು ಹಾಗೂ ಇನ್ನು ಮುಂದೆ ಕುಡಿಯುವ ನೀರಿನ ಪೈಪುಗಳು ಒಡೆದುಹೋದಲ್ಲಿ ಅದಕ್ಕೆಂದೇ ಪ್ರತ್ಯೇಕ ಟೆಂಡರ್ ಕರೆದು, ಅವರಿಗೆ ಕಾಮಗಾರಿಯನ್ನು ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸಮಿತಿಯ ಉಪಾಧ್ಯಕ್ಷ ಜಯಂತ ಪೊರೋಳಿ, ಖಜಾಂಚಿ ಉಷಾಚಂದ್ರ ಮುಳಿಯ, ಸದಸ್ಯರಾದ ಚಂದ್ರಶೇಖರ ಮಡಿವಾಳ, ರಾಜಗೋಪಾಲ ಹೆಗ್ಡೆ, ಚಂದ್ರಾವತಿ, ಕವಿತಾ, ಸುಶೀಲಾ, ಚಂದ್ರಾವತಿ ಹೆಗ್ಡೆ, ಸಿದ್ದೀಕ್ ಕೆಂಪಿ, ವಿಶ್ವನಾಥ ಮುಂಡ್ರಪ್ಪಾಡಿ, ಆದಂ, ಪ್ರಶಾಂತ್ ಪೆರಿಯಡ್ಕ, ಶಾಂಭವಿ ರೈ ಮತ್ತಿತರರು ಉಪಸ್ಥಿತರಿದ್ದರು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್ ಸ್ವಾಗತಿಸಿದರು. ಕಾರ್ಯದರ್ಶಿ ರೋಹಿತ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.