Breaking News

ಪ್ಲಾಸ್ಟಿಕ್ ನಿಷೇಧ-ಜನ ಜಾಗೃತಿ ಸಭೆ; ಜನ ಜಾಗೃತಿ ಬಳಿಕ ಕಟ್ಟು ನಿಟ್ಟಿನ ಕಾನೂನು ಕ್ರಮ-ನಗರಸಭೆ ಎಚ್ಚರಿಕೆ

Puttur_Advt_NewsUnder_1
Puttur_Advt_NewsUnder_1

plastic

* ಪ್ಲಾಸ್ಟಿಕ್‌ನಿಂದ ಗಂಡಾಂತರ ತಪ್ಪಿದಲ್ಲ-ಡಾ. ನಿತ್ಯಾನಂದ ಪೈ

* ಜನರು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು-ರಾಜೇಶ್ ಬನ್ನೂರು

* ಜಾಗೃತಿ ಕಾರ‍್ಯಕ್ರಮ ಸಾಕಷ್ಟು ಆಗಿದೆ -ವಿಶ್ವನಾಥ ಗೌಡ

* ಪ್ಲಾಸ್ಟಿಕ್ ಉತ್ಪಾದನೆಯನ್ನೇ ರದ್ದು ಮಾಡಿಸಿ-ರಾಮಣ್ಣ ಗೌಡ

* ಕಾನೂನು ಆದೇಶ ಎರಡೂವರೆ ವರ್ಷದಲ್ಲಿ ಪಾಲನೆ ಆಗಿಲ್ಲ-ಮಹಮ್ಮದ್ ಆಲಿ

* ಮುಂದಿನ ಹಂತದಲ್ಲಿ ಕಾನೂನು ಕ್ರಮ-ರೂಪಾ ಶೆಟ್ಟಿ

ಸಭೆಯಲ್ಲಿ ಕೇಳಿ ಬಂದ ಮಾತುಗಳು

* ವರ್ತಕರಿಗೆ ದಂಡ ಹಾಕಿದರೆ ಸಾಲದು ಗ್ರಾಹಕರಿಗೂ ಹಾಕಿ

* ನಂದಿನಿ ಹಾಲಿನ ತೊಟ್ಟೆಯನ್ನು ಹೇಗೆ ನಿಷೇಧಿಸುತ್ತೀರಿ ?

* ನಾವು ಪ್ಲಾಸ್ಟಿಕ್ ಕೊಡದಿದ್ದರೆ ಗ್ರಾಹಕರು ಬೇರೆ ಅಂಗಡಿ ಕಡೆ ಹೋಗುತ್ತಾರೆ

* ಪ್ಲಾಸ್ಟಿಕ್ ಕೊಡದಿದ್ದರೆ ವ್ಯಾಪಾರ ನಷ್ಟ

* ದಾಳಿ ಮಾಡಿದಾಗ ಪ್ಲಾಸ್ಟಿಕ್ ಕಡಿಮೆಯಾಗಿತ್ತು

* ಪ್ಲಾಸ್ಟಿಕ್ ಮಾರಾಟ ನಿಷೇಧ ಬೋರ್ಡ್ ಹಾಕಿಸಿ

ಸಭೆಯಲ್ಲಿ ಬೆರಳೆಣಿಕೆ ವರ್ತಕರು

ವರ್ತಕರಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಕಾನೂನು ಅರಿವು ಮೂಡಿಸಲೆಂದೇ ಸಭೆ ಕರೆಯಲಾಗಿದೆ. ಪುತ್ತೂರಿನಲ್ಲಿ ಸುಮಾರು ೩೩೯೭ ಉದ್ದಿಮೆಗಳಿವೆ. ಸಾವಿರಕ್ಕೂ ಅಧಿಕ ವರ್ತಕರಿಗೆ ಸಭೆಯ ಬಗ್ಗೆ ನೊಟೀಸ್ ನೀಡಲಾಗಿದೆ. ಆದರೆ ಸಭೆಗೆ ಬೆರಳೆಣಿಕೆ ವರ್ತಕರು ಮಾತ್ರ ಬಂದಿರುವುದು ಆಶ್ಚಂiiಕರ ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ವಿಷಾದ ವ್ಯಕ್ತಪಡಿಸಿದರು.

ಪುತ್ತೂರು: ನ್ಯಾಯಾಲಯದ ಆದೇಶದಂತೆ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲೇಬೇಕಾಗಿದೆ. ರಾಜ್ಯ ಸರಕಾರ ಪರಿಸರ ಸಂರಕ್ಷಣಾ ಕಾಯಿದೆಯ ಕಲಂ 5 ರನ್ವಯ 40 ಮೈಕ್ರಾನ್‌ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈ ಚೀಲ ಮತ್ತಿತರ ಉತ್ಪನ್ನಗಳ ಮೇಲೆ ನಿಷೇಧ ಇರುವ ಅಧಿಸೂಚನೆ ಹೊರಡಿಸಿ ಎರಡೂವರೆ ವರ್ಷ ಸಮೀಪಿಸಿದ್ದರೂ ಇನ್ನೂ ಆದೇಶ ಕಟ್ಟುನಿಟ್ಟಾಗಿ ಜಾರಿಗೊಂಡಿಲ್ಲ. ಈ ನಿಟ್ಟಿನಲ್ಲಿ ಮುಂದೆ ಜನರಲ್ಲಿ ಜಾಗೃತಿ ಮೂಡಿಸಿ ಬಳಿಕ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಎಚ್ಚರಿಸಿದೆ. ಪ್ಲಾಸ್ಟಿಕ್ ನಿಷೇಧದ ಕುರಿತು ಅ.27ರಂದು ಸಂಜೆ ಸಮುದಾಯ ಭವನದಲ್ಲಿ ನಗರಸಭೆ ವತಿಯಿಂದ ನಡೆಸಲಾದ ಜನಜಾಗೃತಿ ಸಭೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್‌ರವರು ಅಧ್ಯಕ್ಷತೆ ವಹಿಸಿದ್ದರು.

ಸಭೆಯ ಪ್ರಾರಂಭದಲ್ಲಿ ನಗರಸಭೆ ಸಮುದಾಯ ಸಂಘಟಕ ಉಸ್ಮಾನ್‌ರವರು ಸರಕಾರದಿಂದ ಬಂದ ಸುತ್ತೋಲೆ, ನ್ಯಾಯಾಲಯದ ಆದೇಶ, ಕಾಲ ಕಾಲಕ್ಕೆ ನಡೆದ ಬೆಳವಣಿಗೆಗಳನ್ನು ವಿವರಿಸಿದರು. ಪ್ಲಾಸ್ಟಿಕ್ ನಿಷೇಧ ಕುರಿತು ಸಭೆಯಲ್ಲಿ ಉಪಸ್ಥಿತರಿದ್ದ ವರ್ತಕರು ತಮ್ಮ ಅಭಿಪ್ರಾಯ ಮಂಡಿಸಿ, ತಮ್ಮ ತಮ್ಮ ಸಮಸ್ಯೆಗಳ ಕುರಿತು ತಿಳಿಸಿದರು. ಪ್ಲಾಸ್ಟಿಕ್ ಬಳಕೆ ವಿರುದ್ಧ ವ್ಯಾಪಾರಿಗಳ ಮೇಲೆ ಮಾತ್ರ ದಂಡ ಪ್ರಯೋಗ ಮಾಡುವ ಬಗ್ಗೆ ಪ್ರಸ್ತಾಪ ಇದೆ. ಆದರೆ ಅದು ಗ್ರಾಹಕರಿಗೂ ಅನ್ವಯ ಆಗಬೇಕು. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಧ್ವನಿವರ್ಧಕದ ಮೂಲಕ ಪ್ರಚಾರ ಹಮ್ಮಿಕೊಳ್ಳಬೇಕು. ಶಾಲೆ-ಶಾಲೆಯಲ್ಲಿ ಜಾಗೃತಿ ಮೂಡಿಸಬೇಕು ಎಂದು ವರ್ತಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್‌ನಿಂದ ಗಂಡಾಂತರ ತಪ್ಪಿದಲ್ಲ: ಬಳಕೆದಾರರ ವೇದಿಕೆಯ ಡಾ. ನಿತ್ಯಾನಂದ ಪೈಯವರು ಮಾತನಾಡಿ ಸಭೆಯಲ್ಲಿ ಇದ್ದವರು ಕೇವಲ ವ್ಯಾಪಾರದ ಲಾಭ ನಷ್ಟದ ಬಗ್ಗೆ, ಗ್ರಾಹಕರ ಅನುಕೂಲದ ಬಗ್ಗೆ ಮಾತ್ರ ಮಾತನಾಡುತ್ತಿದ್ದೀರಿ. ಪ್ಲಾಸ್ಟಿಕ್‌ನಿಂದ ನಾಳಿನ ಪೀಳಿಗೆ ಭಾರೀ ಗಂಡಾಂತರಕ್ಕೆ ಸಿಲುಕುವ ಅಪಾಯದ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ ಎಂದರು. ಈಗಾಗಲೇ ಕೆಲವೊಮ್ಮೆ ಅಂಗಡಿಗಳಿಗೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಆದರೆ ಇದೊಂದೇ ಪರಿಹಾರವಲ್ಲ ಎಂದರು.

ಜನರು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು:  ಸದಸ್ಯ ರಾಜೇಶ್ ಬನ್ನೂರು ಮಾತನಾಡಿ, ನಾವು ಮತ್ತೊಬ್ಬರನ್ನು ತೋರಿಸುವ ಮೊದಲು ನಾವು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಅದಕ್ಕೆ ಯಶಸ್ಸು ಸಿಗುತ್ತದೆ. ನ್ಯಾಯಾಲಯದ ಆದೇಶವನ್ನು ನಗರಸಭೆ ಪಾಲಿಸಬೇಕು. ಜನಜಾಗೃತಿ ಹಿಂದಿನಿಂದಲೂ ಮಾಡುತ್ತಾ ಬಂದಿದೆ. ಇನ್ನು ನೇರ ದಾಳಿ ಮಾಡಬಹುದಿತ್ತು. ಆದರೂ ಅಧ್ಯಕ್ಷರು ಇನ್ನೊಮ್ಮೆ ಸಭೆ ಕರೆದಿದ್ದಾರೆ ಎಂದರೆ ಜನರು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಜಾಗೃತಿ ಕಾರ‍್ಯಕ್ರಮ ಸಾಕಷ್ಟು ಆಗಿದೆ: ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡರವರು ಮಾತನಾಡಿ ಬೇರೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಮಾರುತ್ತಾರೆ ಎಂದು ಬೊಟ್ಟು ಮಾಡುವ ಬದಲು ನಾವು ನಿಯಂತ್ರಣ ಮಾಡೋಣ. ಈಗಾಗಲೇ ಜಾಗೃತಿ ಕಾರ್ಯಕ್ರಮ ಸಾಕಷ್ಟು ಮಾಡಿರುವ ಕಾರಣ ಇನ್ನೂ ಅದನ್ನೇ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಪ್ಲಾಸ್ಟಿಕ್ ಉತ್ಪಾದನೆಯನ್ನೇ ರದ್ದು ಮಾಡಿಸಿ:  ಸದಸ್ಯ ರಾಮಣ್ಣ ಗೌಡ ಹಲಂಗ ಮಾತನಾಡಿ, ಪ್ಲಾಸ್ಟಿಕ್ ನಿಷೇಧದ ಸುತ್ತೋಲೆಯಲ್ಲಿ ಬದಲಿ ವ್ಯವಸ್ಥೆಯ ಪ್ರಸ್ತಾಪ ಇಲ್ಲ. ವ್ಯಾಪಾರಸ್ಥ ಮಾರಾಟ ಮಾಡಬಾರದು ಎಂದಿದೆ ಹೊರತು, ಗ್ರಾಹಕ ಬಳಕೆ ಮಾಡಿದರೆ ಅದಕ್ಕೇನು ಕ್ರಮ ಎಂದಿಲ್ಲ. ಇಲ್ಲಿ ಗ್ರಾಹಕ, ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬದಲು, ಅದರ ಉತ್ಪಾದನೆಯನ್ನು ರದ್ದುಗೊಳಿಸಲಿ ಎಂದು ಹೇಳಿದರು.

ಕಾನೂನು ಆದೇಶ ಎರಡೂವರೆ ವರ್ಷದಲ್ಲಿ ಪಾಲನೆ ಆಗಿಲ್ಲ: ಸದಸ್ಯ ಹೆಚ್ ಮಹಮ್ಮದ್ ಆಲಿ ಮಾತನಾಡಿ, ಇಲ್ಲಿ ಕಾನೂನಿನ ಆದೇಶ ಪಾಲನೆ ಮಾಡಬೇಕಾದದ್ದು ನಿಯಮ. ಈ ಹಿಂದೆ ಎರಡೂವರೆ ವರ್ಷದಲ್ಲಿ ಪಾಲನೆಯಲ್ಲಿ ಗಂಭೀರತೆ ಮೂಡಿಲ್ಲ. ಆದರೆ ಮುಂದೆ ಹಂತಹಂತವಾಗಿ ಪ್ಲಾಸ್ಟಿಕ್ ನಿಷೇಧ ಮಾಡಲೇ ಬೇಕು ಎಂದರು. ಒಂದು ಬೀದಿಯ ಅಂಗಡಿಗಳ ಮೇಲೆ ದಾಳಿ ಮಾಡಿದಾಗ ಮತ್ತೊಂದು ಬೀದಿಯ ವರ್ತಕರೂ ಕೂಡ ಅದನ್ನು ಪಾಠವಾಗಿ ಸ್ವೀಕರಿಸಬೇಕು. ಅದರ ಬದಲು ನಮ್ಮಲ್ಲಿ ದಾಳಿ ಆಗಿಲ್ಲ ಎಂದು ಕಾದು ಕುಳಿತರೆಂದರೆ ಅಂಥ ಅಂಗಡಿ ಮುಚ್ಚಿಸಬೇಕಾಗುತ್ತದೆ. ಪ್ಲಾಸ್ಟಿಕ್ ಉತ್ಪಾದನೆಯೇ ಬಂದ್ ಮಾಡಿ ಎಂದು ನಾವೆಲ್ಲ ಹೇಳಬಹುದೇ ಹೊರತು ಅದು ನಮ್ಮ ಕೈಯಲ್ಲಿ ಇಲ್ಲ. ಪ್ಲಾಸ್ಟಿಕ್ ಕೈಚೀಲ ಮಾರುವವರ ಮೇಲೆ ನಾವು ಕ್ರಮ ಕೈಗೊಳ್ಳಬಹುದೇ ಹೊರತು ಗ್ರಾಹಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನಮಗಿಲ್ಲ ಎಂದರು.

ಮುಂದಿನ ಹಂತದಲ್ಲಿ ಕಾನೂನು ಕ್ರಮ:  ಪೌರಾಯುಕ್ತೆ ರೂಪಾ ಶೆಟ್ಟಿ ಮಾತನಾಡಿ, 2013-14ನೇ ಸಾಲಿನಲ್ಲಿ ನಿಷೇಧ ಕಾನೂನು ರೂಪದಲ್ಲಿ ಜಾರಿ ಬಂದಿದೆ. ಆ ಬಳಿಕ ಜಾಗೃತಿ ಕಾರ್ಯ ನಡೆದಿದೆ. ಆದರೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬಿದ್ದಿಲ್ಲ. ಹಾಗಾಗಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾದದು ಅನಿವಾರ್ಯ. ಈ ನಿಟ್ಟಿನಲ್ಲಿ ಮುಂದಿನ ಹಂತದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ನಗರಸಭಾ ಸದಸ್ಯರಾದ  ಸುಜೀಂದ್ರ ಪ್ರಭು, ಮುಖೇಶ್ ಕೆಮ್ಮಿಂಜೆ, ವನಿತಾ ಕೆ.ಟಿ., ಜೆಸಿಂತಾ ಮಸ್ಕರೇನಸ್, ಜಯಲಕ್ಷ್ಮೀ ಸುರೇಶ್, ಹರೀಶ್ ನಾಕ್,  ನಾಮ ನಿರ್ದೇಶಿತ ಸದಸ್ಯೆ ರೂಪರೇಖಾ ಆಳ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.