Breaking News

‘ಪತ್ರಕರ್ತರು ಗುಮಾಸ್ತರಾಗಬಾರದು- ಬೆಳೆಯುವ ಪ್ರವೃತ್ತಿ ಹೊಂದಬೇಕು’- ಪತ್ರಕರ್ತರ ಸಂಘದಲ್ಲಿ ಸನ್ಮಾನ ಸ್ವೀಕರಿಸಿ ಗೋಪಾಲಕೃಷ್ಣ ಕುಂಟಿನಿ ಹೇಳಿಕೆ

Puttur_Advt_NewsUnder_1
Puttur_Advt_NewsUnder_1

paper

ಪುತ್ತೂರು: ಪತ್ರಕರ್ತರು ಗುಮಾಸ್ತರಾಗಬಾರದು, ಪತ್ರಕರ್ತರು ಪರಿಸ್ಥಿತಿ ಮೀರಿ ಬೆಳೆಯುವ ಪ್ರವೃತ್ತಿ ಹೊಂದಬೇಕು ಎಂದು ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಹೇಳಿದರು.

ಉಪ್ಪಿನಂಗಡಿಯಲ್ಲಿ ನವೆಂಬರ್ ೫ರಂದು ನಡೆಯಲಿರುವ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಮತ್ತು ಅಗ್ರಾಳ ಪುರಂದರ ರೈ ಪ್ರತಿಷ್ಠಾನದ ಪ್ರಶಸ್ತಿ ಪುರಸ್ಕೃತರಾಗಿರುವ ಗೋಪಾಲಕೃಷ್ಣ ಕುಂಟಿನಿಯವರು ಅ.28ರಂದು ಪತ್ರಿಕಾ ಭವನದಲ್ಲಿ ನಡೆದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸಾಮಾನ್ಯ ಸಭೆಯಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು. ಪತ್ರಕರ್ತರು ಯಾವತ್ತೂ ಗುಮಾಸ್ತರಾಗಬಾರದು, ಪತ್ರಿಕಾ ಹೇಳಿಕೆ, ಪತ್ರಿಕಾಗೋಷ್ಠಿಗೆ ಸೀಮಿತವಾಗಬಾರದು, ಪರಿಸ್ಥಿತಿಯನ್ನು ಮೀರಿ ನಿಂತು ಬೆಳೆಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಒಳ್ಳೊಳ್ಳೆಯ ಚಿಂತನೆಗಳನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದರು. ಪತ್ರಕರ್ತರಾಗಿ ಸಾಧನೆ ಮಾಡಲು ಜರ್ನಲಿಸಂ ಮಾಡುವುದೇ ಮುಖ್ಯ ಅಲ್ಲ, ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯನ್ನೇ ಗಮನಿಸಿ, ಅದರಲ್ಲಿ ಜರ್ನಲಿಸಂ ಕೋರ್ಸ್ ಮಾಡಿದವರು ಕಡಿಮೆ ಇದ್ದರೂ ಒಳ್ಳೆಯ ಪತ್ರಿಕೆಯಾಗಿ ಸುದ್ದಿ ಬಿಡುಗಡೆ ಹೊರ ಹೊಮ್ಮಿದೆ, ಇದಕ್ಕೆ ಒಳ್ಳೆಯ ಚಿಂತನೆ ಮತ್ತು ಸಾಧನೆಯೇ ಕಾರಣವಾಗಿದೆ ಎಂದ ಕುಂಟಿನಿಯವರು ಪುತ್ತೂರಿನ ಪತ್ರಕರ್ತರು ಭ್ರಷ್ಟಾಚಾರಿಗಳಲ್ಲ, ಇತರ ಎಲ್ಲಾ ಕಡೆಯೂ ಪುತ್ತೂರಿನ ಪತ್ರಕರ್ತರ ಬಗ್ಗೆ ಒಳ್ಳೆಯ ಹೆಸರಿದೆ ಎಂದರು. ಸಂಘದ ಸ್ಥಾಪಕಾಧ್ಯಕ್ಷ ಬಿ.ಟಿ. ರಂಜನ್ ಉಪ್ಪಿನಂಗಡಿ, ಹಾಲಿ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಕಾರ್ಯದರ್ಶಿ ಯು.ಎಲ್. ಉದಯ ಕುಮಾರ್‌ರವರು ಕುಂಟಿನಿಯವರನ್ನು ಶಾಲು ಹೊದಿಸಿ ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಸಿದ್ದೀಕ್ ನೀರಾಜೆ, ಶೇಖ್ ಜೈನುದ್ದೀನ್ ನೆಲ್ಲಿಕಟ್ಟೆ ಮತ್ತು ಸದಸ್ಯ ಸುಧಾಕರ ಸುವರ್ಣ ತಿಂಗಳಾಡಿರವರು ಮಾತನಾಡಿ ಕುಂಟಿನಿಯವರಿಗೆ ಅಭಿನಂದನೆ ಸಲ್ಲಿಸಿದರು.

ಸಂಘಕ್ಕೆ ಸಂದ ಗೌರವ-ಸಂತೋಷ್:

ಸಭೆಯ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರರವರು ಮಾತನಾಡಿ, ಪತ್ರಕರ್ತರ ಸಂಘದ ಸ್ಥಾಪಕ ಕಾರ್ಯದರ್ಶಿಯೂ ಆಗಿರುವ ಗೋಪಾಲಕೃಷ್ಣ ಕುಂಟಿನಿಯವರಿಗೆ ಅಗ್ರಾಳ ಪುರಂದರ ರೈ ಪ್ರತಿಷ್ಠಾನದ ಪ್ರಶಸ್ತಿ ಬಂದಿರುವುದು ಮತ್ತು ಸಾಹಿತ್ಯ ಸಮ್ಮೇಳನದಂತಹ ಶ್ರೇಷ್ಠ ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷತೆ ವಹಿಸಲು ಅವಕಾಶ ಸಿಕ್ಕಿರುವುದು ಕುಂಟಿನಿಯವರಿಗೆ ಮಾತ್ರ ಸಂದ ಗೌರವ ಅಲ್ಲ, ಇದು ನಮ್ಮ ಪತ್ರಕರ್ತರ ಸಂಘಕ್ಕೆ ಸಂದ ಗೌರವವೂ ಆಗಿದೆ ಎಂದರು. ನಮ್ಮ ಸಂಘವನ್ನು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಯೋಜನೆ ರೂಪಿಸಲಾಗಿದ್ದು ವಿವಿಧ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ ಸಂತೋಷ್‌ರವರು ಪತ್ರಕರ್ತರ ಸಂಘದ ಅಧ್ಯಕ್ಷನಾಗಿರುವ ನನ್ನ ಹೆಸರು ಉಲ್ಲೇಖಿಸಿ ಕೆಲವರು ವಾಟ್ಸಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ, ಹೆಣ್ಣು ಮಕ್ಕಳ ಬಗ್ಗೆ ಕೀಳು ದೃಷ್ಠಿಯ ಸಂದೇಶ ರವಾನಿಸುತ್ತಿರುವ ದಿನೇಶ್ ಜೈನ್, ತೀರ್ಥರಾಮನಂತವರ ಕಮೆಂಟ್‌ಗಳಿಗೆ ನಾವು ಬಗ್ಗುವುದಿಲ್ಲ, ಅವರಂತವರನ್ನು ಮತ್ತು ಅವರಿಗೆ ಬೆಂಬಲ ಕೊಡುವವರನ್ನು ಹೇಗೆ ಎಲ್ಲಿ ಎದುರಿಸಬೇಕು ಎಂಬುದು ಗೊತ್ತಿದೆ, ಆದರೆ, ಪತ್ರಕರ್ತರ ಸಂಘದ ಹೆಸರನ್ನು ದುರ್ಬಳಕೆ ಮಾಡುತ್ತಿರುವ ಇಂತವರ ಬಗ್ಗೆ ಸಂಘ ಗಮನಿಸಬೇಕಿದೆ ಎಂದರು. ನಂತರ ಈ ಬಗ್ಗೆ ಚರ್ಚೆ ನಡೆದು ವಾಟ್ಸಪ್‌ನಲ್ಲಿ ಅಪಪ್ರಚಾರ, ತೇಜೋವಧೆ ನಡೆಸುತ್ತಿರುವ ಕೃತ್ಯವನ್ನು ಸಂಘವು ಒಕ್ಕೊರಳಿನಿಂದ ಖಂಡಿಸಿ ನಿರ್ಣಯ ಅಂಗೀಕರಿಸಿತು. ಸಂಘದ ಕಾರ್ಯದರ್ಶಿ ಯು.ಎಲ್. ಉದಯ ಕುಮಾರ್ ಸ್ವಾಗತಿಸಿ ಉಪಾಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು ವಂದಿಸಿದರು. ಉಪಾಧ್ಯಕ್ಷ ಕಿರಣ್ ಪ್ರಸಾದ್ ಕುಂಡಡ್ಕ ಮತ್ತು ಜತೆ ಕಾರ್ಯದರ್ಶಿ ನಝೀರ್ ಕೊಯಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಹರೀಶ್ ಕೃಷ್ಣಾ ಸ್ಟುಡಿಯೋ, ಸದಸ್ಯರಾದ ಕರುಣಾಕರ ರೈ ಸಿ.ಎಚ್, ಮಹೇಶ್ ಪುಚ್ಚಪ್ಪಾಡಿ, ಉಮಾಶಂಕರ್ ಪಾಂಗ್ಲಾಯಿ, ಸೋನಿ ಗೊನ್ಸಾಲ್ವಿಸ್, ನಾರಾಯಣ ನಾಯ್ಕ್ ಅಮ್ಮುಂಜ, ಸಿ.ಶೇ.ಕಜೆಮಾರ್, ಲೋಕೇಶ್ ಬನ್ನೂರು, ಸುಧಾಕರ ಪಡೀಲ್, ರಾಜೇಶ್ ಪಟ್ಟೆ, ಯತೀಶ್ ಉಪ್ಪಳಿಗೆ, ಸಂಶುದ್ದೀನ್ ಸಂಪ್ಯ, ಕುಮಾರ್ ಕಲ್ಲಾರೆ, ಅನೀಶ್ ಕುಮಾರ್ ಮರೀಲ್, ಕೃಷ್ಣಪ್ರಸಾದ್ ಬಲ್ನಾಡು ಮತ್ತು ಶ್ರವಣ್ ಕುಮಾರ್ ನಾಳರವರು ಸಭೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಸದಸ್ಯರ ಪಟ್ಟಿ ಹಾಗೂ ಗುರುತಿನ ಚೀಟಿಯನ್ನು ಸಭೆಯಲ್ಲಿ ಅಂತಿಮಗೊಳಿಸಲಾಯಿತು.

ವಾಟ್ಸಪ್ ಸಂದೇಶ ರವಾನೆಗೆ ಖಂಡನೆ

ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ.ಯು.ಪಿ.ಶಿವಾನಂದರವರನ್ನು ಪತ್ರಿಕಾ ದಿನಾಚರಣೆಯಂದು ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿರುವ ಮತ್ತು ಡಾ. ಯು.ಪಿ. ಶಿವಾನಂದರವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಪತ್ರಕರ್ತರ ಸಂಘದವರೊಂದಿಗೆ ಸ್ನೇಹಕೂಟ ಏರ್ಪಡಿಸಿರುವ ವಿಚಾರವನ್ನು ವ್ಯಂಗ್ಯ ಮಾಡಿ ವಾಟ್ಸಪ್ ಸಂದೇಶ ರವಾನಿಸಿದ ಸಂಘದ ಸದಸ್ಯರೋರ್ವರ ನಿಲುವನ್ನು ಸಭೆಯಲ್ಲಿ ಖಂಡಿಸಿ ನಿರ್ಣಯ ಅಂಗೀಕರಿಸಲಾಯಿತು. ಸನ್ಮಾನ ಮತ್ತು ಸ್ನೇಹಕೂಟದ ವಿಷಯವನ್ನು ನಿಂದಿಸಿದ್ದ ಸಂಘದ ಸದಸ್ಯರಾಗಿರುವ ಡೈಝಿವರ್ಲ್ಡ್‌ನ ವರದಿಗಾರ ಕೃಷ್ಣಪ್ರಸಾದ್ ಬಲ್ನಾಡುರವರು ‘ಸಂಘದ ಸದಸ್ಯರಿಗೆ ಬಾಡೂಟ, ಸಿಬ್ಬಂದಿಗಳಿಗೆ ಜೈಲೂಟ’ ಎಂದು ವಾಟ್ಸಪ್‌ನಲ್ಲಿ ಸಂದೇಶ ರವಾನಿಸಿದ್ದ ವಿಷಯ ಸಭೆಯಲ್ಲಿ ಚರ್ಚೆಗೆ ಬಂತು. ಡಾ. ಶಿವಾನಂದರವರನ್ನು ಸನ್ಮಾನಿಸಲು ಸಂಘವೇ ನಿರ್ಣಯ ಅಂಗೀಕರಿಸಿದ್ದು, ಡಾ. ಶಿವಾನಂದರವರು ಸ್ನೇಹಕೂಟ ಏರ್ಪಡಿಸಿದಾಗಲೂ ಸಂಘವೇ ಒಪ್ಪಿಗೆ ಸೂಚಿಸಿತ್ತು. ಪತ್ರಕರ್ತರ ಸಂಘಕ್ಕೂ ಸುದ್ದಿ ಬಳಗಕ್ಕೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಈಗಲೂ ನಾವೆಲ್ಲರೂ ಒಟ್ಟಾಗಿದ್ದೇವೆ. ಅಕಸ್ಮಾತ್, ಸನ್ಮಾನ ಮತ್ತು ಸ್ನೇಹಕೂಟ ಬೇಡ ಎಂದಾಗಿದ್ದಲ್ಲಿ ಅದನ್ನು ಸಂಘದೊಳಗೆ ಚರ್ಚಿಸಬೇಕಿತ್ತು, ಅಭಿಪ್ರಾಯ ತಿಳಿಸಬೇಕಿತ್ತು. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವುದು ಸರಿಯಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಒಳ್ಳೆಯ ವಿಚಾರಕ್ಕೆ ಸಾಮಾಜಿಕ ಜಾಲತಾಣಗಳು ಬಳಕೆಯಾಗಬೇಕು, ಅದು ಬಿಟ್ಟು ಅಪಪ್ರಚಾರ ಮಾಡಲು ಅಲ್ಲ ಎಂದು ಸಭೆಯಲ್ಲಿ ಸದಸ್ಯರು ಅಭಿಪ್ರಾಯ ಮಂಡಿಸಿದರಲ್ಲದೆ, ಕೆಲವು ದುರ್ಬಲ ಮನಸ್ಸಿನವರು, ತೆವಳು ತೀರಿಸುವವರು ಇಂತಹ ಕೃತ್ಯ ಎಸಗುತ್ತಾರೆ ಎಂದು ಅನಿಸಿಕೆ ವ್ಯಕ್ತಪಡಿಸಿ ಈ ಘಟನೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಬೇಕು ಎಂದರು. ಸಂಘದ ನಿರ್ಣಯವನ್ನು ಟೀಕಿಸಿ ಯಾರಾದರೂ ಸಂದೇಶ ರವಾನಿಸಿದ್ದರೆ ಅದನ್ನು ಸಂಘದ ಗಮನಕ್ಕೆ ತರಬೇಕಿತ್ತು, ಅದು ಬಿಟ್ಟು ಸಂಘವನ್ನು ಅವಮಾನಿಸಿ ಸದಸ್ಯರೇ ಸಂದೇಶ ರವಾನೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿ ಬಳಿಕ ಸಭೆಯಲ್ಲಿ ಒಮ್ಮತದಿಂದ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಸಂದೇಶ ರವಾನಿಸಿರುವ ಕೃಷ್ಣಪ್ರಸಾದ್ ಬಲ್ನಾಡುರವರೊಂದಿಗೆ ಸಂಘದ ಕಾರ್ಯದರ್ಶಿಯವರು ಮಾತುಕತೆ ನಡೆಸಿ ಮುಂದಕ್ಕೆ ಈ ರೀತಿ ಆಗದಂತೆ ನೋಡಿಕೊಳ್ಳುವುದು ಎಂದೂ ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ, ಸದಸ್ಯರು ಸಂಘದ ವಿಚಾರಕ್ಕೆ ವಿರುದ್ಧವಾಗಿ ಹೋದಾಗ ಅವರನ್ನು ಸದಸ್ಯತ್ವದಿಂದ ವಜಾ ಮಾಡಲು ಬೈಲಾದಲ್ಲಿ ಅವಕಾಶ ಇದೆ ಎಂಬುದನ್ನು ಚರ್ಚಿಸಲಾಯಿತು. ವಾಟ್ಸಪ್‌ನಲ್ಲಿ ಸಂದೇಶ ರವಾನೆಯ ವಿಚಾರ ಪ್ರಸ್ತಾಪವಾಗುವ ತನಕ ಕೃಷ್ಣಪ್ರಸಾದ್‌ರವರು ಸಭೆಯಲ್ಲಿ ಹಾಜರಿದ್ದರಾದರೂ ಚರ್ಚೆಯ ವೇಳೆ ಸಭೆಯಲ್ಲಿರಲಿಲ್ಲ. ಸಭೆ ಮುಕ್ತಾಯದ ವೇಳೆಗೆ ಅವರು ಮತ್ತೆ ಪತ್ರಿಕಾ ಭವನಕ್ಕೆ ಬಂದಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.