ಅಡಿಕೆ ಉತ್ಪನ್ನಗಳ ನಿಷೇಧದ ಭೀತಿ; ಗುಟ್ಕಾ ನಿಷೇಧ ಆದೇಶ ಹಿಂಪಡೆಯಲಿ- ಸರಕಾರಕ್ಕೆ ಎಪಿಎಂಸಿ ಸಾಮಾನ್ಯ ಸಭೆ ಆಗ್ರಹ

Puttur_Advt_NewsUnder_1
Puttur_Advt_NewsUnder_1

apmc

*2017-18ನೇ ಸಾಲಿಗೆ ರೂ. 2.15 ಕೋಟಿ ವೆಚ್ಚದ ವಾರ್ಷಿಕ ಕ್ರಿಯಾಯೋಜನೆ ತಯಾರಿ

* ರೈಲ್ವೇ ಮೇಲ್ಸೆತುವೆಗೆ ಶೇ.50 ಅನುದಾನ ನೀಡಲು ಎಪಿಎಂಸಿ ಬದ್ಧ

* ಎಪಿಎಂಸಿಗೆ ಸಂತೆಯನ್ನು ಉzಶಪೂರ್ವಕವಾಗಿ ಎಳೆದು ತಂದಿಲ್ಲ-ಕೃಷ್ಣ ಶೆಟ್ಟಿ

* ರೈತರ ಬಗ್ಗೆ ಕಾಳಜಿ ಇಲ್ಲದವರಿಂದ ಸಂತೆ ವಿಚಾರದಲ್ಲಿ ಗೊಂದಲ ಸೃಷ್ಠಿ-ಮಹೇಶ್ ರೈ

* ಸೆಸ್ ಸಂಗ್ರಹ: ಸೆಪ್ಟೆಂಬರ್‌ನಲ್ಲಿ ಶೇ.೬೨೭.೨೪ ಸಾಧನೆ

* ಡಿಸೆಂಬರ್ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ ‘ರೈತ ಸಭಾಭವನ’

ಪುತ್ತೂರು: ಗುಟ್ಕಾ ನಿಷೇಧ ಹಿನ್ನೆಲೆಯಲ್ಲಿ ಪಾನ್ ಮಸಾಲ ಮತ್ತು ತಂಬಾಕು ಪ್ರತ್ಯೇಕವಾಗಿ ಮಾರಾಟ ಮಾಡುವುದನ್ನು ರಾಜ್ಯದಲ್ಲೀಗ ನಿಷೇಧಿಸಲಾಗಿದ್ದು, ಪರಿಣಾಮವಾಗಿ ಅಡಿಕೆ ಉತ್ಪನ್ನಗಳ ನಿಷೇಧದ ಭೀತಿ ಎದುರಾಗಿರುವುದರಿಂದ ರಾಜ್ಯ ಸರಕಾರವು ಗುಟ್ಕಾ ನಿಷೇಧದ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ನಿರ್ಣಯ ಕೈಗೊಂಡ ಘಟನೆ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸಭೆಯು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬರವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.

ನಿರ್ದೇಶಕ ಮಹೇಶ್ ರೈ ಅಂಕೊತ್ತಿಮಾರುರವರು ಗುಟ್ಕಾ ನಿಷೇಧದ ಬಗ್ಗೆ ವಿಷಯ ಪ್ರಸ್ತಾಪಿಸಿ ಮಾತನಾಡಿ ತಂಬಾಕು ನಿಷೇಧದಡಿಯಲ್ಲಿ ಗುಟ್ಕಾ ನಿಷೇಧ ಮಾಡಿದ ನಂತರ ಪಾನ್‌ಮಸಾಲ ಮತ್ತು ತಂಬಾಕು ಪ್ರತ್ಯೇಕವಾಗಿ ಮಾರಾಟವಾಗುತ್ತಿತ್ತು, ಆದರೆ ಇದೀಗ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿಯವರಲ್ಲಾಗಲೀ, ಆರೋಗ್ಯ ಸಚಿವರಲ್ಲಾಗಲೀ ಸಭೆ ನಡೆಸದೇ ಏಕಾಏಕಿ ನಿರ್ಧಾರ ಕೈಗೊಂಡು ಪಾನ್ ಮಸಾಲ ಮತ್ತು ತಂಬಾಕು ಪ್ರತ್ಯೇಕ ಮಾರಾಟವನ್ನು ನಿಷೇಧ ಮಾಡಿರುವುದರಿಂದ ಅಡಿಕೆ ಉತ್ಪನ್ನಗಳ ನಿಷೇಧದ ಭೀತಿಯೂ ಉಂಟಾಗಿದೆ, ಹಾಗಾಗಿ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಸರಕಾರಕ್ಕೆ ಬರೆಯಬೇಕು ಎಂದು ಒತ್ತಾಯಿಸಿದರು. ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ, ನಿರ್ದೇಶಕರಾದ ಸೀತಾರಾಮ ಗೌಡ, ಅಬ್ದುಲ್ ಶಕೂರ್ ಹಾಜಿ ಧ್ವನಿಗೂಡಿಸಿದರು. ಅದರಂತೆ ನಿರ್ಣಯ ಕೈಗೊಂಡು ಸರಕಾರಕ್ಕೆ ಬರೆಯಲು ಸಭೆ ಒಪ್ಪಿಗೆ ನೀಡಿತು.

2017-18ನೇ ಸಾಲಿಗೆ ರೂ. 2.15 ಕೋಟಿ ವೆಚ್ಚದ ವಾರ್ಷಿಕ ಕ್ರಿಯಾಯೋಜನೆ ತಯಾರಿ:

2017-18ನೇ ಸಾಲಿನಲ್ಲಿ ಸಮಿತಿಯ ಹೆಚ್ಚುವರಿ ನಿಧಿ ಮತ್ತು ಇತರೆ ಮೂಲಗಳಿಂದ ಬಂದ ಆದಾಯದ ಉಳಿಕೆ ಮೊತ್ತ ರೂ. 2,15,30,707 ರಲ್ಲಿ 2017-18ನೇ ಸಾಲಿಗೆ ವಾರ್ಷಿಕ ಕ್ರಿಯಾಯೋಜನೆ ತಯಾರಿಸಿ ಸಕ್ಷಮ ಪ್ರಾಧಿಕಾರಕ್ಕೆ ಮಂಜೂರಾತಿಗಾಗಿ ಸಲ್ಲಿಸಲು ನಿರ್ಣಯಿಸಲಾಯಿತು. 2017-18ನೇ ಸಾಲಿನಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಅಂಗಡಿ ಮತ್ತು ಗೋದಾಮುಗಳ ದುರಸ್ತಿ ಕಾಮಗಾರಿ, ಆವರಣ ಗೋಡೆ, ತಡೆಗೋಡೆ ನಿರ್ಮಾಣ ಕಾಮಗಾರಿ, ಚರಂಡಿ ಹಾಗೂ ಡೆಕ್‌ಸ್ಲ್ಯಾಬ್ ಅಳವಡಿಸುವ ಕಾಮಗಾರಿ, ಆಡಳಿತ ಕಛೇರಿಯ ವಿಸ್ತರಣಾ ಕಟ್ಟಡದ ನೆಲ ಅಂತಸ್ತಿನಲ್ಲಿ ಮಿನಿ ಹಾಲ್ ನಿರ್ಮಿಸುವ ಕಾಮಗಾರಿ, ಕಡಬ ಉಪಮಾರುಕಟ್ಟೆ ಪ್ರಾಂಗಣದಲ್ಲಿನ ಅಂಗಡಿ ಮಳಿಗೆಗಳ ಎದುರುಗಡೆ ಇಂಟರ್ ಲಾಕ್ ಅಳವಡಿಸುವ ಕಾಮಗಾರಿ, ನಿಯಮ 60 ಸಿ ಅಡಿ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದು ಅಧ್ಯಕ್ಷ ಕೃಷ್ಣ ಶೆಟ್ಟಿಯವರು ಹೇಳಿದರು.

ರೈಲ್ವೇ ಮೇಲ್ಸೇತುವೆಗೆ ಶೇ.50 ಅನುದಾನ ನೀಡಲು ಎಪಿಎಂಸಿ ಬದ್ಧ:

ಸಾಲ್ಮರ ರೈಲ್ವೇ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಎಪಿಎಂಸಿಯಿಂದ ಶೇ.50 ಅನುದಾನ ನೀಡಲು ಸಮಿತಿ ಬದ್ಧವಾಗಿದೆ ಎಂದು ಕೃಷ್ಣ ಶೆಟ್ಟಿಯವರು ಹೇಳಿದರು. ಈ ವರ್ಷ ಎಪಿಎಂಸಿಗೆ ಸೆಸ್ ಸಂಗ್ರಹದಲ್ಲಿ ರೂ.5 ಕೋಟಿಗಿಂತಲೂ ಹೆಚ್ಚು ಹಣ ಬರುತ್ತಿರುವುದರಿಂದ ಮತ್ತು ಎಪಿಎಂಸಿಯಲ್ಲಿ ಈಗಾಗಲೇ ಶೇ.80 ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯಗೊಂಡಿರುವುದರಿಂದ ರೈಲ್ವೇ ಮೇಲ್ಸೇತುವೆಗೆ ಯಾರು ಅನುದಾನ ನೀಡದಿದ್ದರೂ ಎಪಿಎಂಸಿಯು ಶೇ.50 ಅನುದಾನ ನೀಡಲು ತಯಾರಿದೆ. ರೈಲ್ವೇ ಮೇಲ್ಸೇತುವೆ ನಿರ್ಮಾಣ ವಿಚಾರವು ಕೇವಲ ಎಪಿಎಂಸಿ, ನಗರಸಭೆಯಿಂದ ಮಾತ್ರ ಸಾಧ್ಯವಿಲ್ಲ, ಹಾಗಾಗಿ ಈ ಸಂಬಂಧ ಸಂಸದರು, ಶಾಸಕರು, ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿ, ಅಧಿಕಾರಿಗಳನ್ನು ಕರೆಸಿಕೊಂಡು ಚರ್ಚೆ ನಡೆಸಿ ಅಂತಿಮ ಅಭಿಪ್ರಾಯಕ್ಕೆ ಬರಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಎಪಿಎಂಸಿಗೆ ಸಂತೆಯನ್ನು ಉದ್ದೇಶಪೂರ್ವಕವಾಗಿ ಎಳೆದು ತಂದಿಲ್ಲ-ಕೃಷ್ಣ ಶೆಟ್ಟಿ

ಎಪಿಎಂಸಿಯಲ್ಲಿ ಸಂತೆ ಕಟ್ಟೆ ಇದ್ದುದರಿಂದ ಇಲ್ಲಿ ಸಂತೆ ನಡೆಸಬೇಕೆಂದು ನಮ್ಮ ಬೇಡಿಕೆಯಾಗಿತ್ತು, ಎ.ಸಿಯವರು ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸುವುದನ್ನು ನಿರ್ಬಂಧಿಸಿ ಎಪಿಎಂಸಿಗೆ ಸ್ಥಳಾಂತರ ಮಾಡಿರುವುದನ್ನು ಸ್ವಾಗತಿಸಿ ಎಪಿಎಂಸಿಯಲ್ಲಿ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದ್ದೇವೆ ಹೊರತು ನಾವೇನು ಸಂತೆಯನ್ನು ಉದ್ದೇಶಪೂರ್ವಕವಾಗಿ ಎಳೆದು ತಂದಿಲ್ಲ ಎಂದು ಅಧ್ಯಕ್ಷ ಕೃಷ್ಣ ಶೆಟ್ಟಿಯವರು ಹೇಳಿದ್ದಾರೆ. ಸಭೆಯಲ್ಲಿ ಸಂತೆ ವಿಚಾರದಲ್ಲಿ ಚರ್ಚೆ ನಡೆಸಿ ಮಾತನಾಡಿದ ಅವರು ನಗರದ ಕಿಲ್ಲೆ ಮೈದಾನದಿಂದ ಎಪಿಎಂಸಿಗೆ ಸಂತೆ ಸ್ಥಳಾಂತರಗೊಂಡಾಗ ಸಂತೆ ನಗರಸಭೆಯ ಬಳಿಯೇ ನಡೆಯಬೇಕು ಎಂದು ಕೆಲವರು ವಾದ ನಡೆಸಿ ಗೊಂದಲ ಉಂಟುಮಾಡಿದರು, ಆದರೆ ಈವರೆಗೆ ನಗರದಲ್ಲಿ ಸಂತೆಗೆ ಸೂಕ್ತವಾದ ಜಾಗವನ್ನು ಗುರುತು ಮಾಡಲು ನಗರಸಭೆಗಾಗಲೀ, ಗೊಂದಲ ಎಬ್ಬಿಸಿದವರಿಗಾಗಲೀ ಸಾಧ್ಯವಾಗಲಿಲ್ಲ ಹಾಗಾಗಿ ನಗರಸಭೆ ಸಂತೆಗೆ ಸೂಕ್ತ ಜಾಗ ಒದಗಿಸುವವರೆಗೆ ಸಂತೆ ಎಪಿಎಂಸಿಯಲ್ಲಿಯೇ ನಡೆಯುತ್ತದೆ ಮತ್ತು ಅದಕ್ಕೆ ಬೇಕಾದ ಎಲ್ಲಾ ಪೂರಕ ವ್ಯವಸ್ಥೆ ಕಲ್ಪಿಸಲು ಎಪಿಎಂಸಿ ಬದ್ಧವಾಗಿದೆ, ನಗರಸಭೆಯವರು ಸಂತೆಯನ್ನು ನಗರದಲ್ಲೇ ನಡೆಸುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಕೃಷ್ಣ ಶೆಟ್ಟಿಯವರು ಹೇಳಿದರು.

ರೈತರ ಬಗ್ಗೆ ಕಾಳಜಿ ಇಲ್ಲದವರಿಂದ ಸಂತೆ ವಿಚಾರದಲ್ಲಿ ಗೊಂದಲ ಸೃಷ್ಠಿ-ಮಹೇಶ್ ರೈ:

ಶಾಸಕರು, ಎಪಿಎಂಸಿಯ ನಾಮನಿರ್ದೇಶಿತ ಸದಸ್ಯ ಮತ್ತು ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೋರ್ವರ ಮಾತನ್ನು ಕೇಳಿ ಪುತ್ತೂರು ಸಂತೆ ಚಿಂದಿಯಾಗಿದೆ ಎಂದು ರಾಜಕೀಯವಾಗಿ ಹೊಟ್ಟೆತುಂಬಿಸಿಕೊಳ್ಳುತ್ತಿರುವ ನಗರಸಭೆ ಸದಸ್ಯರೋರ್ವರು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ನಿರ್ದೇಶಕ ಮಹೇಶ್ ರೈ ಅಂಕೊತ್ತಿಮಾರು ಹೇಳಿದರು. ಸಂತೆ ಸ್ಥಳಾಂತರ ವಿಚಾರದಲ್ಲಿ ಈವರೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಅಧ್ಯಕ್ಷರುಗಳು ಯಾವುದೇ ಹೇಳಿಕೆ, ಗೊಂದಲಗಳನ್ನು ಮಾಡಿಲ್ಲ, ಆದರೆ ರೈತರ ಬಗ್ಗೆ ಕಾಳಜಿ ಇಲ್ಲದ ಕೆಲ ವ್ಯಕ್ತಿಗಳು ಮಾತ್ರ ಸಂತೆಯ ವಿಚಾರದಲ್ಲಿ ನಿರಂತರವಾಗಿ ಗೊಂದಲ ಸೃಷ್ಠಿ ಮಾಡಿ ಸಂತೆಯನ್ನು ಚಿಂದಿ ಮಾಡಿದ್ದಾರೆ. ನಾನು ಓರ್ವ ಎಪಿಎಂಸಿ ನಿರ್ದೇಶಕನಾಗಿ ಸಮಿತಿಯ ನಿರ್ಣಯ, ಬೇಡಿಕೆ, ವ್ಯವಸ್ಥೆಗಳಿಗೆ ಬೆಲೆ ಕೊಟ್ಟಿzನೆ ಹೊರತು ನಾನು ಹೇಳಿz ಆಗಬೇಕು ಎಂದು ಯಾವತ್ತೂ ಹಠ ಇಡಿದಿಲ್ಲ, ಎಪಿಎಂಸಿ ಅಧ್ಯಕ್ಷರಾಗಲೀ, ಶಾಸಕರಾಗಲೀ ಅವರು ಕೂಡ ಎ.ಸಿ ಯವರ ಆದೇಶವನ್ನು ಪಾಲಿಸಿದ್ದಾರೆಯೇ ಹೊರತು ಯಾವುದೇ ವೈಯುಕ್ತಿಕ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಮಹೇಶ್ ರೈ  ಹೇಳಿದರು. ನಗರಸಭೆಯವರು ಸಂತೆ ವಿಚಾರದಲ್ಲಿ ಮಾತನಾಡುವುದನ್ನು ನಿಲ್ಲಿಸಿ ವ್ಯಾಪಾರಸ್ಥರಿಗೆ ಸಂತೆಗೆ ಬೇಕಾದ ಸೂಕ್ತ ಜಾಗ ಒದಗಿಸಿಕೊಡಲು ಪ್ರಯತ್ನಿಸಲಿ ಎಂದು ನಿರ್ದೇಶಕ ಪ್ರಮೋದ್ ಕೊಳ್ತಿಗೆ ಹೇಳಿದರು.

ಎಪಿಎಂಸಿ ನಿರ್ದೇಶಕರಾದ ಸಾಜ ರಾಧಾಕೃಷ್ಣ ಆಳ್ವ, ರಂಗನಾಥ ರೈ, ಮಾಣಿಕ್ಯರಾಜ್, ತ್ರಿವೇಣಿ ಕರುಣಾಕರ ಪೆರ‍್ವೋಡಿ, ಅಬ್ದುಲ್ ಶಕೂರ್ ಹಾಜಿ, ಪ್ರಮೋದ್, ಸೋಮನಾಥ, ಗುರುನಾಥ ಗೌಡ, ಶಾಲಿನಿ, ಶೀನಪ್ಪ ಗೌಡ, ಯಶೋಧರರವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಹೆಚ್.ಕೆ ಕೃಷ್ಣಮೂರ್ತಿ ಸ್ವಾಗತಿಸಿ ವಂದಿಸಿದರು. ಲೆಕ್ಕಿಗ ರಾಮಚಂದ್ರ ಜಮಾ-ಖರ್ಚು ಮಂಡಿಸಿದರು.

ಡಿಸೆಂಬರ್ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ ರೈತ ಸಭಾಭವನ

ಸುಮಾರು ರೂ.1 ಕೋಟಿ ವೆಚ್ಚದಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ನಿರ್ಮಾಣಗೊಂಡಿರುವ ರೈತ ಸಭಾಭವನ, ಅತಿಥಿ ಗೃಹ ಮತ್ತು ಪ್ರವೇಶ ದ್ವಾರವು ಡಿಸೆಂಬರ್ ಮೊದಲ ವಾರದಲ್ಲಿ ಉದ್ಘಾಟನೆಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಅಧ್ಯಕ್ಷ ಕೃಷ್ಣ ಶೆಟ್ಟಿಯವರು ಸಭೆಗೆ ಮಾಹಿತಿ ನೀಡಿದರು. ಉದ್ಘಾಟನಾ ಸಮಾರಂಭಕ್ಕೆ ರಾಜ್ಯ ಎಪಿಎಂಸಿ ಸಚಿವ ಎಸ್. ಮಲ್ಲಿಕಾರ್ಜುನ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರನ್ನು ಆಹ್ವಾನಿಸಿ, ತಾಲೂಕಿನ ಎಲ್ಲಾ ರೈತ ಬಾಂಧವರನ್ನು ಪಾಲ್ಗೊಳ್ಳುವಂತೆ ಮಾಡಿ ಅದ್ಧೂರಿ ಕಾರ್ಯಕ್ರಮ ನಡೆಸಲು  ಸಭೆಯಲ್ಲಿ ತೀರ್ಮಾನಿಸಲಾಯಿತು.

ಸೆಸ್ ಸಂಗ್ರಹ: ಸೆಪ್ಟೆಂಬರ್‌ನಲ್ಲಿ ಶೇ.627.24 ಸಾಧನೆ

ಸೆಸ್ ಸಂಗ್ರಹದಲ್ಲಿ ಪ್ರತಿ ತಿಂಗಳು ದಾಖಲೆ ನಿರ್ಮಿಸುತ್ತಿರುವ ಪುತ್ತೂರು ಎಪಿಎಂಸಿ ಸೆಪ್ಟೆಂಬರ್ ಒಂದೇ ತಿಂಗಳಿನಲ್ಲಿ ರೂ. 43.91 ಲಕ್ಷ ವಸೂಲಾತಿ ಮಾಡುವ ಮೂಲಕ ಶೇ. 627.24 ಸಾಧನೆ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಇಲಾಖೆಯಿಂದ ರೂ. 7 ಲಕ್ಷ ಗುರಿ ನೀಡಲಾಗಿತ್ತು ಎಂದು ಪ್ರಭಾರ ಕಾರ್ಯದರ್ಶಿ ಹೆಚ್.ಕೆ ಕೃಷ್ಣಮೂರ್ತಿಯವರು ಹೇಳಿದರು.

ತಂಬಾಕು ನಿಷೇಧಕ್ಕೆ ನಮ್ಮ ವಿರೋಧವಿಲ್ಲ, ಆದರೆ ತಂಬಾಕು ನಿಷೇಧದಡಿಯಲ್ಲಿ ಪಾನ್ ಮಸಾಲವನ್ನು ನಿಷೇಧ ಮಾಡಿರುವುದು ಸರಿಯಲ್ಲ, ಈ ರೀತಿಯಾದರೇ ಅಡಿಕೆ ಉತ್ಪನ್ನಗಳಿಗೂ ನಿಷೇಧದ ಭೀತಿ ಉಂಟಾಗಿದೆ ಆ ನಿಟ್ಟಿನಲ್ಲಿ ಸರಕಾರ ಕೂಡಲೇ ಆದೇಶವನ್ನು ಪರಿಶೀಲಿಸಿ ಅಡಿಕೆ ಕೃಷಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.

-ಕೃಷ್ಣ ಶೆಟ್ಟಿ, ಎಪಿಎಂಸಿ ಅಧ್ಯಕ್ಷರು

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.