ಅ.29: ಕಲ್ಲುಗುಂಡಿಯಲ್ಲಿ ಕೀಲಾರು ಸಂಸ್ಮರಣೆ, ಸಂಪಾಜೆ ಯಕ್ಷೋತ್ಸವ

Puttur_Advt_NewsUnder_1
Puttur_Advt_NewsUnder_1

keelaruಪುತ್ತೂರು: ಸಂಪಾಜೆಯ ಡಾ|ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಡಾ|ಕೀಲಾರು ಗೋಪಾಲಕೃಷ್ಣಯ್ಯರವರ ಸಂಸ್ಮರಣೆ ಮತ್ತು ಸಂಪಾಜೆ ಯಕ್ಷೋತ್ಸವ-2016 ಅ.29ರಂದು ಕಲ್ಲುಗುಂಡಿ ಶಾಲಾ ವಠಾರದಲ್ಲಿ  ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಸುಬ್ರಹ್ಮಣ್ಯ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಮಹಾಸ್ವಾಮಿ ಆಶೀರ್ವಚನ ನೀಡಲಿದ್ದಾರೆ. ವೈದಿಕ ವಿದ್ವಾಂಸ ವೇ|ಮೂ|ಅಮೈ ಅನಂತಕೃಷ್ಣ ಭಟ್‌ರಿಗೆ ಅಭಿನಂದನೆ, ಪ್ರಸಿದ್ದ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟರಿಗೆ ಸನ್ಮಾನ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗರಿಗೆ ಶೇಣಿ ಪ್ರಶಸ್ತಿ ಪ್ರದಾನ ನಡೆಯಲಿದ್ದು ಮೂರ್ತಿ ದೇರಾಜೆ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ವೇ|ಮೂ|ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡಲಿದ್ದಾರೆ.

ಅಪರಾಹ್ನ 2 ಗಂಟೆಗೆ ಜಿಲ್ಲೆಯ ಪ್ರಸಿದ್ಧ ಕಲಾವಿದರುಗಳ ಸಂಗಮದೊಂದಿಗೆ ಯಕ್ಷಗಾನ ಪ್ರಾರಂಭವಾಗಲಿದೆ. ‘ಸಹಸ್ರ ಕವಚ’, ‘ಮಾರುತಿ ಪ್ರತಾಪ’ ‘ಉತ್ತಮ ಸೌದಾಮಿನಿ’ ಹಾಗೂ ‘ವಿಶ್ವಮೋಹನ’ ಎಂಬ ನಾಲ್ಕು ಪ್ರಸಂಗಗಳು ಸುಮಾರು 24 ಗಂಟೆಗಳ ಅವಧಿಯಲ್ಲಿ ನಡೆಯಲಿದ್ದು, ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಮೇಳಗಳ ಸುಮಾರು 140 ಕ್ಕೂ ಮಿಕ್ಕಿ ಕಲಾವಿದರ ಸಂಗಮದಲ್ಲಿ ಈ ಪ್ರಸಂಗಗಳು ಕಲಾಭಿಮಾನಿಗಳ ಮನಸೂರೆಗೊಳ್ಳಲಿದೆ. ತೆಂಕುತಿಟ್ಟಿನ ಮೂರು ಹಾಗೂ ಬಡಗುತಿಟ್ಟಿನ ಒಂದು ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಪಾಜೆ ಯಕ್ಷೋತ್ಸವ ಯಕ್ಷಗಾನ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದು ರಾಜ್ಯ ಹೊರರಾಜ್ಯದಿಂದ ಸಾವಿರಾರು ಮಂದಿ ಯಕ್ಷಗಾನ ಅಭಿಮಾನಿಗಳು ಭಾಗವಹಿಸಲಿದ್ದಾರೆ.

ಜಿಲ್ಲೆಯ ಯಕ್ಷರಂಗದ ಇತಿಹಾಸ:

ಕಳೆದ ಬಾರಿಯಷ್ಟೇ ಸಂಪಾಜೆ ಯಕ್ಷೋತ್ಸವ 25ನೇ ವರ್ಷದ ಬೆಳ್ಳಿಹಬ್ಬವನ್ನು ಯಕ್ಷ ಸಂಭ್ರಮದಿಂದಲೇ ಆಚರಿಸಿಕೊಂಡಿದೆ. ಜಿಲ್ಲೆಯ 25 ಕಡೆಗಳಲ್ಲಿ ವರ್ಷವಿಡೀ ಯಕ್ಷಗಾನ ತಾಳಮದ್ದಳೆ ಆಯೋಜಿಸಿ ಸಮಾಪನಕ್ಕೆ ಕಲ್ಲುಗುಂಡಿಯಲ್ಲಿ ಮೂರು ರಂಗಸ್ಥಳಗಳಲ್ಲಿ ಏಕಕಾಲದಲ್ಲಿ ‘ದೇವಿ ಮಹಾತ್ಮೆ’ ಯಕ್ಷಗಾನ ನಡೆದು ಯಕ್ಷಗಾನ ರಂಗದಲ್ಲಿ ಮಾತ್ರವಲ್ಲದೇ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸದಲ್ಲಿ ದಾಖಲೆ ಸೃಷ್ಠಿಸಿತ್ತು. ಪ್ರತೀ ವರ್ಷ ನಡೆಯುವ ಯಕ್ಷೋತ್ಸವ ಬರಿಯ ಯಕ್ಷಗಾನದ ಸವಿಯನ್ನು ಕಲಾಭಿಮಾನಿಗಳಿಗೆ ನೀಡುವುದಲ್ಲದೇ ಊಟೋಪಚಾರದಲ್ಲೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ಸಾವಿರಾರು ಮಂದಿಗೆ ಹೊತ್ತು ಬಿಡದೆ ಸುಗ್ರಾಸ ಭೋಜನ, ಉಪಾಹಾರ ಅಚ್ಚುಕಟ್ಟಾಗಿ ನಡೆಯುತ್ತದೆ. ವರ್ಷದಿಂದ ವರ್ಷಕ್ಕೆ ಕಲಾಭಿಮಾನಿಗಳ ಸಂಖ್ಯೆ ವೃದ್ಧಿಯಾಗುತ್ತಿರುವುದರಿಂದ ಶಾಲೆಯ ಹಿಂಭಾಗದಲ್ಲಿ ವಿಶೇಷವಾಗಿ ಮೈದಾನ ಮಾಡಲಾಗಿದ್ದು, ಮಾತ್ರವಲ್ಲದೆ ಅಲ್ಲಲ್ಲಿ ಎಲ್‌ಸಿಡಿಗಳ ಮೂಲಕ ಯಕ್ಷಗಾನವನ್ನು ಸವಿಯಬಹುದಾಗಿದೆ. ಇನ್ನು ತೆಂಕುತಿಟ್ಟಿನ ಯಕ್ಷರಂಗದ ಎಲ್ಲಾ ಕಲಾವಿದರ ಸಂಗಮ ಕ್ಷೇತ್ರವಾಗಿಯೇ ಪರಿಣಮಿಸಿದೆ. ಕಲಾವಿದರ ಪೈಪೋಟಿಯ ಯಕ್ಷಾಭಿನಯವಂತೂ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತದೆ. ಯುವ ಭಾಗವತರ ದ್ವಂದ್ವ, ತ್ರಿಂದ್ವ ಹಾಡುಗಾರಿಕೆ, ಪ್ರಸಂಗಗಳಿಗೆ ಪೂರ್ವಯೋಜಿತವಾಗಿಯೇ ಕಲಾವಿದರ ಅಚ್ಚುಕಟ್ಟಾದ ಸಂಯೋಜನೆ, ಎಳ್ಳಷ್ಟೂ ರಸ ಕುಸಿಯದ ಪ್ರಸಂಗಗಳು ಯಕ್ಷೋತ್ಸವದ ಒಟ್ಟಂದವನ್ನು ಇಮ್ಮಡಿಗೊಳಿಸುತ್ತಿವೆ. ಕಲಾಪೋಷಕ ಟಿ. ಶ್ಯಾಮ ಭಟ್‌ರವರ ಒಟ್ಟು ಉಸ್ತುವಾರಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಕೀಲಾರು, ಉಪಾಧ್ಯಕ್ಷ ಕೀಲಾರು ರಾಜಾರಾಮ, ಕಾರ್ಯದರ್ಶಿ ಶ್ರೀಮತಿ ಸುಮನ ಶ್ಯಾಮ್ ಭಟ್‌ರವರ ನೇತೃತ್ವದಲ್ಲಿ ನೂರಾರು ಕಾರ‍್ಯಕರ್ತರ ಒಗ್ಗೂಡುವಿಕೆಯಲ್ಲಿ ಕಾರ‍್ಯಕ್ರಮವು ಜಿಲ್ಲೆಯ ಜನಮಾನಸದಲ್ಲಿ ಹಾಸುಹೊಕ್ಕಿದೆ.

’ಕೀಲಾರು ಅಣ್ಣೆರ್’

ಸಂಪಾಜೆಯ ಜನಮಾನಸದಲ್ಲಿ ನೆಲೆಯಾಗಿರುವ ಅಪೂರ್ವ ವ್ಯಕ್ತಿತ್ವದ ಡಾ. ಕೀಲಾರು ಗೋಪಾಲಕೃಷ್ಣಯ್ಯ ’ಕೀಲಾರು ಅಣ್ಣೆರ್’ ಎಂದೇ ಕರೆಯಲ್ಪಟ್ಟವರು. ಭೂಮಸೂದೆ ಜಾರಿಯಾದ ಕಾಲದಲ್ಲಿ ತನ್ನ ಒಕ್ಕಲು ಮನೆಗಳಿಗೆ ಡಿಕ್ಲರೇಶನ್ ಕೊಡಲು ತಾನೇ ಮುಂದೆ ನಿಂತು ಭೂಮಿಯನ್ನು ಮಂಜೂರು ಮಾಡಿಸಿ ಪ್ರಖ್ಯಾತರಾದ ಇವರು ಕೀಲಾರು ನಿಧಿ ಭವಿಷ್ಯಕ್ಕೆ ಅಕ್ಷಯವಾಗಲೆಂಬ ಆಶಯದಿಂದ ೧೪೩ ಶಾಶ್ವತ ನಿಧಿಯನ್ನು ಸ್ಥಾಪಿಸಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಅಸಹಾಯಕರಿಗೆ ನೆರವಾಗಿ ಬಡವರ ಬಂಧು ಎಂದೇ ಜನಜನಿತರಾದವರು. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಸಮಾಜಮುಖಿ ಚಿಂತಕರಾಗಿದ್ದರು. ೧೯೦೧ರಿಂದ ಯಕ್ಷಗಾನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದ ಇವರು ವಿಧಿವಶರಾದ ಬಳಿಕ ೨೦೦೪ರಿಂದ ಅವರ ಸಂಸ್ಮರಣೆಯೊಂದಿಗೆ ಕೀಲಾರು ಪ್ರತಿಷ್ಠಾನದ ವತಿಯಿಂದ ಯಕ್ಷೋತ್ಸವ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.