Breaking News

ಬಾಳ ಬೆಳಗುವ ಹಬ್ಬ ದೀಪಾವಳಿ

Puttur_Advt_NewsUnder_1
Puttur_Advt_NewsUnder_1

deepaಹಬ್ಬಗಳು ಒಂದು ಚಿಂತನೆ: ನಮ್ಮ ನಾಡು ನುಡಿ ಸಂಸ್ಕೃತಿಗಳ ಪ್ರತೀಕವೇ ಹಬ್ಬಗಳು. ಹಬ್ಬವಿಲ್ಲದ ಮನೆ, ಊರು, ಕೇರಿ, ದೇಶ, ರಾಷ್ಟ್ರವಿಲ್ಲ. ಪ್ರಪಂಚದ ನಾನಾ ಕಡೆಗಳಲ್ಲಿ ಅವರವರ ಆಚಾರ-ವಿಚಾರ ಸಂಸ್ಕೃತಿಗಳಿಗೆ ಅನುಗುಣವಾಗಿ ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಪಡುತ್ತಾರೆ. ನಾವು ಭಾರತೀಯರು. ಪ್ರಪಂಚದ ಯಾವ ಜನಾಂಗ ರಾಷ್ಟ್ರದವರೂ ಆಚರಿಸದಷ್ಟು ಹಬ್ಬಗಳನ್ನು ಆಚರಿಸಿ ನಮ್ಮ ನಾಡು, ನುಡಿ, ಸಂಸ್ಕೃತಿ, ಆಚಾರ ವಿಚಾರಗಳನ್ನು ತೆರೆದಿಡುತ್ತೇವೆ. ಪ್ರಾಣಿಗಳ, ಮರಗಳ, ನದಿ, ಸರೋವರ, ಸರ್ಪಗಳ, ದೇವ-ದೇವಿಯರ ಹೆಸರಲ್ಲಿ ನಾವು ಹಬ್ಬಗಳನ್ನು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮ ದೇಶವನ್ನು ‘ಹಬ್ಬಗಳ ದೇಶ ೞವೆಂದು ಕರೆದರೂ ಅತಿಶಯೋಕ್ತಿಯಾಗಲಾರದು.
ಎಲ್ಲಾ ಹಬ್ಬಗಳನ್ನು ಎಲ್ಲರೂ ಆಚರಿಸುವುದಿಲ್ಲ. ಧರ್ಮ, ಸಂಪ್ರದಾಯ, ನಂಬಿಕೆ, ದೈವ ದೇವರು, ಕುಲಾಚಾರ, ದೇಶಾಚಾರಗಳನ್ನು ಅನುಸರಿಸಿ ಹಬ್ಬ ಆಚರಿಸುವುದನ್ನು ನಾವು ಗಮನಿಸಬಹುದು. ಭಕ್ತಿ, ಜ್ಞಾನ, ಕರ್ಮ, ವಿಧಿ, ವಿಧಾನಗಳನ್ನು ಒಟ್ಟು ಸೇರಿಸಿ, ಸದ್ಭಾವನೆಗಳೊಂದಿಗೆ ಹಬ್ಬ ಆಚರಿಸುತ್ತೇವೆ. ಗುರುಹಿರಿಯರನ್ನು ಗೌರವಿಸಿ ಸಂತಸಪಡುತ್ತೇವೆ. ನಮ್ಮ ಮುಂದಿನ ಭವಿಷ್ಯವಾಗಿರುವ ಮಕ್ಕಳಿಗೆ ಸಂಸ್ಕೃತಿ-ಸಂಪ್ರದಾಯಗಳ ಮಹತ್ವವನ್ನು ತಿಳಿಸುವ ಮಹತ್ಕಾರ್ಯವೂ ಹಬ್ಬಗಳ ಉದ್ದೇಶವಾಗಿದೆ.
ಹಬ್ಬಗಳನ್ನು ಆಚರಿಸದಿದ್ದರೆ ದೈವ-ದೇವರುಗಳು ಅಸಮಾಧಾನಗೊಳ್ಳುವರು. ಅಗಲಿದ ಪಿತೃಗಳಿಗೆ ಮೋಕ್ಷ ಪ್ರಾಪ್ತಿಯಾಗದು. ‘ಮಳೆ’ ಬಾರದೆ, ಬೆಳೆ ಬೆಳೆಯದೆ ‘ಇಳೆ’ ಸಂಕಷ್ಟಕ್ಕೊಳಗಾಗುವುದು ಎಂಬಿತ್ಯಾದಿ ನಂಬಿಕೆಗಳು ಎಲ್ಲಾ ಕಾಲದ, ಎಲ್ಲಾ ದೇಶಗಳ ಜನರ ಮನಸ್ಸನ್ನಾಳುತ್ತವೆ ಎಂಬ ಬಲ್ಲವರ ಮಾತು ಮಾನ್ಯವಾದುದು. ಮೂಲ ನಂಬಿಕೆಗಳೊಂದಿಗೆ, ಮೂಢನಂಬಿಕೆಗಳಿಗೆ ಅವಕಾಶವಿಲ್ಲದ ರೀತಿಯಲ್ಲಿ ಸಂಕಲ್ಪ ಭಾವದಿಂದ ನಾವು ಯಾವುದೇ ಹಬ್ಬ-ಹರಿದಿನಗಳನ್ನು ಆಚರಿಸಿದ್ದೇ ಆದರೆ ಮನಸ್ಸಿಗೆ ಒಂದು ರೀತಿಯ ಸಮಾಧಾನ-ಸಂತೃಪ್ತಿ ಆಗುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ.
ಹಬ್ಬಗಳೆಂದರೆ… ಸಂಭ್ರಮ. ಮನೆ, ಮಂದಿರ, ಗುಡಿಗೋಪುರ, ಊರಿಗೆ ಊರೇ ತಳಿರು ತೋರಣಗಳಿಂದ ಸಿಂಗರಿಸಲ್ಪಡುತ್ತವೆ. ಹಳೆಯ ಗೋಡೆಗಳಿಗೆ ಬಣ್ಣದ ಸಾರಣೆಗಳಾಗುತ್ತವೆ. ಮನೆ ಮಂದಿಯೆಲ್ಲ… ಬಣ್ಣ ಬಣ್ಣದ ಹೊಸ ಹೊಸ ಉಡುಗೆ-ತೊಡುಗೆಗಳಿಂದ ಸಂಭ್ರಮ ಉಲ್ಲಾಸಗಳಿಂದ ಓಡಾಡುತ್ತಾರೆ. ಸಂಗೀತ, ನಾಟಕ, ಹರಿಕಥೆ, ನೃತ್ಯ, ಗೋಷ್ಠಿ, ಉಪನ್ಯಾಸ ಇತ್ಯಾದಿಗಳು ಒಡಲು ತುಂಬುತ್ತವೆ… ಮಾನಸಿಕ ನೆಮ್ಮದಿ ನೀಡುತ್ತವೆ… ಸಿಡಿಯುವ ಪಟಾಕಿ ಬಿರುಸು ಬಾಣಗಳಿಗೆ ಲೆಕ್ಕವಿಡುವವರು ಯಾರು?? ಒಟ್ಟಿನಲ್ಲಿ ಸಂಭ್ರಮ ಮನೆ ಮಾಡುತ್ತವೆ. ದ್ವೇಷಾಸೂಯೆ, ದುರ್ಭಾವಗಳು ಮರೆಯಾಗುತ್ತವೆ… ಜನರ-ಜನರ ಮಧ್ಯೆ ಭಾವೈಕ್ಯದ ಬೆಸುಗೆಯಾಗುತ್ತದೆ.
ಹಬ್ಬಗಳು ನಮ್ಮನ್ನೆಲ್ಲ ಒಂದುಗೂಡಿಸಲಿ… ಬಾಳ ಬೆಳಗುವ ಬೆಳಕಾಗಲಿ. ನಮ್ಮೊಳಗಿನ ನರಕಾಸುರ ಭಾವಗಳು ಅಳಿದು ಸದ್ಭಾವ ಪಥಗಳಲ್ಲಿ ಜೊತೆಯಾಗಿ ಹೆಜ್ಜೆ ಯಿಡೋಣ… ಶಾಂತಿ-ಸೌಹಾರ್ದತೆ ನೆಲೆಗೊಳಿಸೋಣ… ಈ ಆಶಯಗಳೊಂದಿಗೆ ನಾವು ಆಚರಿಸುವ ಯುಗಾದಿ ರಾಮನವಮಿ ಗುರುಪೂರ್ಣಿಮಾ ಶ್ರೀಕೃಷ್ಣ ಜನ್ಮಾಷ್ಟಮಿ ವಿನಾಯಕ ಚತುರ್ಥಿ ಶರನ್ನವರಾತ್ರಿ-ವಿಜಯದಶಮಿ ಮಹಾಶಿವರಾತ್ರಿ ಹೋಳಿ ಹುಣ್ಣಿಮೆ… ಮೊದಲಾದ ಹಬ್ಬಗಳಲ್ಲಿ ನಮ್ಮೆಲ್ಲರ ಬಾಳ ಬೆಳಗುವ ಹಬ್ಬವೆಂದರೆ ರಂಗು, ರಂಗಿನ… ಮನ-ಮನೆ-ಸಂಭ್ರಮಿಸುವ ಹಬ್ಬಗಳ ರಾಜನೇ ‘ದೀಪಾವಳಿ…’
ದೀಪಾವಳೀ: ಆಶ್ವಯುಜ ಕೃಷ್ಣ ಚತುರ್ದಶಿಯಿಂದ ಕಾರ್ತಿಕ ಶುಕ್ಲ ದ್ವಿತೀಯಾವರೇಗೆ ಆಚರಿಸಲ್ಪಡುವ ಬೆಳಕಿನ ಹಬ್ಬ ದೀಪಾವಳಿ ಹಿರಿಯ-ಕಿರಿಯರಾದಿ ಸಂಭ್ರಮಿಸುವ ಬಣ್ಣ ಬಣ್ಣದ ಬೆಳಕಿನಾಟದ ಹಬ್ಬ.
ಹೌದು, ಸಾಲಂಕೃತವಾಗಿ ಬೆಳಗುವ ದೀಪಗಳು ಬಣ್ಣ ಬಣ್ಣದ ಪ್ರಭೆಯನ್ನು ಚಿಮ್ಮುವ ಮತಾಪುಗಳ ಸಂಭ್ರಮದಿಂದ ಕೂಡಿದ, ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಮುದಗೊಳಿಸುವ, ಬಾಳನ್ನೇ ಬೆಳಗುವ ಹಬ್ಬ ದೀಪಾವಳಿ ಅಥವಾ ದಿವಾಳೀ… ನಮ್ಮ ಹಬ್ಬಗಳ ಪರಂಪರೆಯಲ್ಲೆಲ್ಲ ಅತ್ಯಂತ ಜನಪ್ರಿಯವಾದ, ಮನ-ಮನೆ ತುಂಬಿದ ಹಬ್ಬ. ದೇಶ-ವಿದೇಶಗಳಲ್ಲಿ ಇರುವ ಬಂಧು-ಬಾಂಧವರು ಶುಭಾಶಯಗಳ ವಿನಿಮಯ ಮಾಡಿಕೊಂಡು, ಉಡುಗೊರೆಗಳನ್ನು ಪರಸ್ಪರ ಹಂಚಿ ಕೊಂಡು ಬದುಕನ್ನೇ ಬೆಳಗಿಸುವ ದೀಪಾವಳಿಗೆ ಪರ್ಯಾಯ ಪದ ಬೇರೆ ಬೇಕೇ??
‘ದೀಪಾವಳಿ’ ಹಬ್ಬ ಹುಟ್ಟಿ ಬೆಳೆವರ ಬಗ್ಗೆ ತಿಳಿಯುವುದು ಅಷ್ಟು ಸುಲಭ ಸಾಧ್ಯವಲ್ಲ… ಆಧಾರಗಳ, ವಿದ್ವಾಂಸರ ಅಭಿಪ್ರಾಯಗಳ ಪ್ರಕಾರ ಕ್ರಿಸ್ತಾಬ್ದ ಒಂದು ಸಾವಿರ ವರ್ಷಗಳ ಮೊದಲೇ ಆಚರಣೆಗೊಂಡಿತ್ತೆಂದು ಪ್ರತೀತಿ. ಕೆಲವೊಂದು ಶಾಸ್ತ್ರ ಗ್ರಂಥಗಳಲ್ಲಿ ‘ದೀಪಾವಳಿ’ ಹಬ್ಬವನ್ನು ಭೂಲೋಕದ ಜನ ಪರಸ್ಪರ ಸಂತಸದಿಂದ ನಲಿಯುವ, ಸಂಭ್ರಮಿಸುವ ‘ಕೌಮುದೀ ಉತ್ಸವ’ ಎಂದೂ ಗೌರವಿಸಲಾಗಿದೆ.
ಸಾಮಾನ್ಯವಾಗಿ ‘ದೀಪಾವಳಿ’ ಮೂರು ದಿನಗಳ ಕಾಲ ಸಂಭ್ರಮೋಲ್ಲಾಸಗಳಿಂದ ಆಚರಿಸಲ್ಪಡುವ ಹಬ್ಬವಾದರೂ, ದ್ವಿತೀಯಾ, ತೃತೀಯಾ ಸೇರಿದರೆ ಅದರ ಅವಧಿ ನಾಲ್ಕು ದಿನ ಆಗುತ್ತದೆ ಎನ್ನುತ್ತಾರೆ ಕೆಲವು ವಿದ್ವಾಂಸರು. ಸಾಮಾನ್ಯವಾಗಿ ದೀಪಾವಳಿ ಹಬ್ಬ ಅಕ್ಟೋಬರ್ ತಿಂಗಳ ಕೊನೆಯ ಮತ್ತು ನವಂಬರ್ ತಿಂಗಳ ಆದಿ ಭಾಗದಲ್ಲಿ ಬರುತ್ತದೆ. (ಈ ಬಾರಿ ಅ.೨೯ ಶನಿವಾರ ನರಕ ಚತುರ್ದಶಿ, ಅ.೩೦ ಆದಿತ್ಯವಾರ ೞಅಮಾವಾಸ್ಯೆೞ, ಅ.೩೧ ಸೋಮವಾರ ಬಲಿಪಾಡ್ಯಮಿ, ಗೋಪೂಜೆ, ಅಂಗಡಿ ಪೂಜೆ (೨೦೧೬).
ನರಕ ಚತುರ್ದಶೀ: ನರಕ ಚತುರ್ದಶೀ ಎನಿಸಿರುವ ಆಶ್ವಯುಜ ಕೃಷ್ಣ ಚತುರ್ದಶೀ ಈ ಸಂಭ್ರಮ ದೀಪಾವಳೀ ಹಬ್ಬದ ಮೊದಲ ದಿನ. ಮೂಲತಃ ಮೃತ್ಯು ದೇವತೆಯೂ, ನರಕಾಧಿಪತಿಯೂ ಆದ ಯಮ ದೇವರಾಯನನ್ನು ಪೂಜಿಸಿ, ‘ನರಕದ ಶಿಕ್ಷೆಯಿಂದ ಪಾರು ಮಾಡು ದೇವಾ…’ ಎಂದು ಬೇಡುವ ದಿನವೂ ಹೌದು. ಭಗವಾನ್ ಶ್ರೀಕೃಷ್ಣನು ಪ್ರಾಗ್ ಜ್ಯೋತಿಷಪುರ (ಅಸ್ಸಾಂ)ದ ರಕ್ಕಸಾಧಿ ಪತಿ ನರಕಾಸುರನನ್ನು ವಧಿಸಿದ ವಿಜಯೋತ್ಸವದ ದಿನವೂ ಹೌದು. ಆ ದಿನ ಸೂರ್ಯೋದಯಕ್ಕೆ ಮುನ್ನ ಅಭ್ಯಂಜನ ಸ್ನಾನ ಮಾಡಿ ವ್ರತಧಾರಿಗಳು ತಮ್ಮ ತಮ್ಮ ಪಾಪಕೃತ್ಯಗಳ ನಾಶಕ್ಕಾಗಿ ಕಾಯಾ, ವಾಚಾ, ಮನಸಾ ಪ್ರಾರ್ಥಿಸಿ ಯಮದೇವನಿಗೆ ಅವನ ಸಂತೃಪ್ತಿಗಾಗಿ ಎಳ್ಳು ಬೆರೆಸಿದ ನೀರನ್ನು ಬೊಗಸೆಯಲ್ಲಿ ತುಂಬಿಕೊಂಡು ತರ್ಪಣವನ್ನರ್ಪಿಸಿ ನರಕಾಸುರನಿಗೆ ಒಂದು ದೀಪವನ್ನು ಬೆಳಗಿಸುವುದು ವಾಡಿಕೆ. ಹಬ್ಬವು ಚತುರ್ದಶೀ ದಿನ ಆರಂಭವಾಗುವುದರಿಂದ ಹದಿನಾಲ್ಕು ಬಗೆಯ ಕಾಯಿ ಪಲ್ಯಗಳನ್ನೊಳಗೊಂಡ ಭೂರಿ ಭೋಜನ ಮಾಡಿ ಅಂದು ಸಂಜೆ ತನ್ನ ಮನೆಯ ಎಲ್ಲಾ ಭಾಗಗಳಿಗೂ ಬೆಳಕಾಗುವಂತೆ ಸಾಲು ದೀಪಗಳಿಂದ ಅಲಂಕರಿಸಿ ಸಂಭ್ರಮ ಪಡಲಾಗುತ್ತದೆ… ಎನ್ನುತ್ತಾರೆ. ಶ್ರೇಷ್ಠ ಧಾರ್ಮಿಕ ಚಿಂತಕರಾದ ‘ಸ್ವಾಮಿ ಹರ್ಷಾನಂದ’ ಅವರು. ಊರಿನ ಎಲ್ಲಾ ದೇವಾಲಯಗಳು ನ್ಯಾಯ ಆರಾಧನಾ ಕಟ್ಟೆಗಳೂ ದೀಪಾಲಂಕಾರಗಳಿಂದ ಝಗಮಗಿಸುತ್ತವೆ.
ಅಮಾವಾಸ್ಯೆ: ನರಕ ಚತುರ್ದಶೀಯ ಮರುದಿನ ಅಮಾವಾಸ್ಯೆ. ಇದು ವರ್ಷದ ಅತ್ಯಂತ ಕತ್ತಲೆಯ ದಿನವೆಂದು ಪರಿಗಣಿಸಲ್ಪಟ್ಟಿದೆ. ಅಭ್ಯಂಜನ, ಶ್ರೀಲಕ್ಷ್ಮೀ ಪೂಜೆ, ಕೀರ್ತಿಶೇಷ ಹಿರಿಯರಿಗೆ ಪಿತೃತರ್ಪಣ, ಸದ್ಭಾಬ್ರಾಹ್ಮಣರಿಗೆ ಅನ್ನಸಂತರ್ಪಣೆ, ಹಗಲಿಡೀ ನಿರಶನ ವ್ರತ… ಇವು ಈ ದಿನದಿಂದ ನಡೆಸಬೇಕಾದ ಮುಖ್ಯ ಕಾರ್ಯ-ವಿಧಿ-ವಿಧಾನಗಳು. ಈ ದಿನದ ರಾತ್ರಿಯಲ್ಲೂ ದೀಪಾಲಂಕರಣ ಕಣ್ಣು ತುಂಬುತ್ತವೆ. ಇದು ವಿಶೇಷವಾಗಿ ಶ್ರೀ ಲಕ್ಷ್ಮೀ ಪೂಜೆಗಾಗಿ ವಿಧಿಸಿರುವ ದಿನ.
ಜಗನ್ಮಾತೆಯಾದ ಸರ್ವೇಶ್ವರಿಯ ಅವತಾರಗಳು ಸಹಸ್ರಾರು. ದೇವಾದಿ ದೇವತೆಗಳಿಂದ ಪೂಜಿಸಲ್ಪಡುವ ಶ್ರೀ ಜಗದೀಶ್ವರಿಯು ಭೂಮಿಯ ಸ್ವರೂಪದಿಂದ ನಮ್ಮನ್ನೆಲ್ಲ ಸಲಹುತ್ತಿದ್ದಾರೆ. ಜಲರೂಪದಿಂದ ಜಗತ್ತನ್ನು ತೃಪ್ತಿಪಡಿಸುತ್ತಿದ್ದಾಳೆ. ಸಮಸ್ತ ಸ್ತ್ರೀಯರಲ್ಲಿ, ಸಮಸ್ತ ವಿದ್ಯೆಗಳಲ್ಲಿ, ಸಮಸ್ತ ಜೀವ-ಜಂತುಗಳಲ್ಲಿ ೞದೇವಿೞ ನೆಲೆಸಿದ್ದಾಳೆ… ಎಂಬ ನಂಬಿಕೆ ನಮ್ಮದು. ‘ಸರ್ವರೂಪಮಯೀ ದೇವೀ ಸರ್ವಂ ದೇವಿಮಯ ಜಗತ್|| ಆತ್ಮೋ ಹರಿ… ವಿಶ್ವ ರೂಪಾಂತ್ವಾನಮಾಮಿ ಪರಮೇಶ್ವರೀಂ’.
‘ಶ್ರೀ ಲಕ್ಷ್ಮೀ’ ಸಂಪತ್ತಿನ ಅಧಿದೇವತೆ… ಅವಳಿಗೆ ‘ಶ್ರೀ’ ಎಂದೂ ಹೆಸರಿದೆ. ದವಸ, ಧನ, ಧಾನ್ಯ, ಹಸು, ಹೊಲ, ಚಿನ್ನ, ಬೆಳ್ಳಿ ಮೊದಲಾದವು ಸಂಪತ್ತು ಭಾಗ್ಯಗಳು ಶ್ರೀ ಲಕ್ಷ್ಮಿಯ ಅನುಗ್ರಹವಾದರೆ ಈ ಸಂಪತ್ತುಗಳೆಲ್ಲ ನಮಗೆ ಒಲಿಯುತ್ತವೆ ಎಂಬ ನಂಬಿಕೆಗಳಿಂದ ಶ್ರೀ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ.
ಶ್ರೀ ಲಕ್ಷ್ಮೀಯನ್ನು ನಮ್ಮ ಹಿರಿಯರು ‘ಭಾಗ್ಯ ದೇವತೆ’ ಎಂದು ತಿಳಿದು ಪೂಜಿಸುತ್ತಾ ಬಂದಿದ್ದಾರೆ. ಅವಳನ್ನು ಭಕ್ತಿಯಿಂದ ಪೂಜಿಸುವುದರಿಂದ, ಭಜಿಸುವುದ ರಿಂದ ಭವರೋಗಾದಿಗಳು ಅಳಿದು ಆಯಸ್ಸು, ತೇಜಸ್ಸು, ಧನ, ಧಾನ್ಯ ಸಂಪತ್ತು ವರ್ಧಿಸುತ್ತದೆ ಎಂಬ ನಂಬಿಕೆ ನಮ್ಮೆಲ್ಲರ ಬದುಕಲ್ಲಿ ನೆಲೆಯಾಗಿದೆ.
ಪದ್ಮಾನನೇ… ಪದ್ಮ ವಿಪದ್ಮ ಪತ್ರೇ…
ಪದ್ಮಪ್ರಿಯೇ ಪದ್ಮದಲಾಯತಾಕ್ಷಿ…|
ವಿಶ್ವಪ್ರಿಯೇ ವಿಶ್ವಮನೋನುಕೂಲೇ…
ತತ್ವಾದ ಪದ್ಮಂ ಮಯಿ ಸಂನಿಧತ್ಸ್ವ||
ಸ್ವಗಾಧಿಪತಿ ದೇವೇಂದ್ರನು ಶ್ರೀ ಲಕ್ಷ್ಮೀಯನ್ನು ಹೀಗೆ ಸ್ತುತಿಸಿದ್ದಾನಂತೆ… ‘ಓ ದೇವೀ… ಸರ್ವಲೋಕಗಳಿಗೂ ಜನನಿಯಾದ ನಿನಗೆ ನಮಸ್ಕಾರ… ಸಕಲ ಕಾರ್ಯಗಳೂ ಸಿದ್ಧಿಸುವುದಕ್ಕೆ ನೀನೇ ಕಾರಣಳಮ್ಮ… ನೀನು ಲೋಕಪಾವನಿ, ಐಶ್ವರ್ಯ ಮತ್ತು ಬುದ್ಧಿಶಕ್ತಿ ಅದು ನಿನ್ನಿಂದಲೇ ದೊರೆಯುತ್ತವೆ. ಸಕಲ ವಿದ್ಯಾ ಸ್ವರೂಪಿಣಿಯಾದ ‘ಸರಸ್ವತಿ’ಯೂ ನೀನೇ… ಮುಕ್ತಿದಾಯಿನಿಯಾದ ಆತ್ಮ ವಿದ್ಯೆಯೂ ನೀನೇ. ಹೇ ಮಹಾದೇವಿ… ಮಡದಿ, ಮಕ್ಕಳು, ಮನೆ, ಮಿತ್ರ, ಧನ, ಧಾನ್ಯಗಳೆಲ್ಲವೂ ನಿನ್ನ ನೋಟದಿಂದಲೇ ಭಕ್ತಕೋಟಿಗಳಿಗೆ ಲಭಿಸುತ್ತವಮ್ಮ… ಓ… ತಾಯೇ… ನೀನೂ, ನಿನ್ನ ಪತಿಯಾದ ಶ್ರೀಮನ್ನಾರಾಯಣನು ಈ ವಿಶ್ವವನ್ನೇ ವ್ಯಾಪಿಸಿ ನಿಂತಿದ್ದೀರಿ… ದೇಹದ ಆರೋಗ್ಯವೂ, ಜ್ಞಾನ ಸಂಪತ್ತು, ಮಾನಸಿಕ ಸೌಖ್ಯ ಎಲ್ಲವೂ… ನಿನ್ನ ಕರುಣೆಯಿಂದಲೇ ಲಭಿಸುತ್ತವಮ್ಮ… ನೀನು ಈ ಲೋಕದ ಜನನಿ… ಲೋಕಪಾವನಿ… ಶ್ರೀ ಮಹಾವಿಷ್ಣು ಈ ಲೋಕದ ತಂದೆ… ಓ… ತಾಯೇ… ದೇವೀ… ಜಗನ್ಮಾತೆ… ನಿನ್ನ ದಯೆ ಇಲ್ಲದಿದ್ದರೆ… ಬದುಕೇ ಶೂನ್ಯವಮ್ಮಾ… ಅಮ್ಮಾ… ತಾಯೇ… ನಮ್ಮನ್ನೆಂದಿಗೂ ಕೈಬಿಡ ಬೇಡವಮ್ಮಾ (ಕೃಪೆ: ರಾಷ್ಟ್ರೋತ್ಥಾನ ಸಾಹಿತ್ಯ)
ಈ ಸಂಕಲ್ಪದೊಂದಿಗೆ ನಡೆಯುವ ಶ್ರೀ ಲಕ್ಷ್ಮೀ ಪೂಜೆ ಜನಮಾನಸದಲ್ಲಿ ಭಕ್ತಿಯ ಸುಧೆಯನ್ನೇ ಹರಿಸುತ್ತದೆ. ಬಂಗಾಳದಲ್ಲಿ ಈ ದಿನ ಇಡೀ ರಾತ್ರಿ ಲಕ್ಷ್ಮೀ ಪೂಜೆಗೆ ಬದಲಾಗಿ ಶ್ರೀ ಕಾಳಿಕಾ ಮಾತೆಯ ಮೃಣ್ಮಯ ಮೂರ್ತಿಯ ಪೂಜೆ ನಡೆಯುವುದು ವಾಡಿಕೆ. ಆದ್ದರಿಂದ ಅಲ್ಲಿ ಈ ಅಮಾವಾಸ್ಯೆಯನ್ನು ‘ಶ್ರೀ ಕಾಳೀ ಪೂಜಾ ದಿನ’ ಎಂದು ಕರೆಯುವರು. ದೇಶದ ನಾನಾ ಭಾಗಗಳಲ್ಲಿ ಇದು ವರ್ತಕರಿಗೆ, ಉದ್ಯಮಿಗಳಿಗೆ ಅತ್ಯಂತ ಪವಿತ್ರವಾದ ದಿನವಾಗಿದೆ. ಆದಿನ ಅವರೆಲ್ಲ ಶ್ರೀ ಲಕ್ಷ್ಮೀಯನ್ನೂ, ತಮ್ಮ ಲೆಕ್ಕದ ಪುಸ್ತಕಗಳನ್ನೂ ಪೂಜಿಸಿ ಹೊಸ ಲೆಕ್ಕಗಳನ್ನು ಪ್ರಾರಂಭಿಸುವರೆಂಬ ನಂಬಿಕೆಯಿದೆ. ಸ್ನೇಹಿತರನ್ನು, ವರ್ತಕ ಮಿತ್ರರನ್ನು, ಗ್ರಾಹಕ ಮಿತ್ರರನ್ನು ಬರಮಾಡಿಕೊಂಡು, ತಾಂಬೂಲ, ಸಿಹಿ-ಮಿಠಾಯಿಗಳಿಂದ ಪುರಸ್ಕರಿಸುವುದು ಬದುಕಿನ ಒಂದು ಅಮೂಲ್ಯ ಕ್ಷಣವಾಗಿದೆ.
ಬಲಿಪಾಡ್ಯಮಿ: ಅಮಾವಾಸ್ಯೆಯ ಮರುದಿನ ‘ಬಲಿಪಾಡ್ಯಮೀ’ (ಬಲಿಪ್ರತಿಪದ್) ಎಂದು ಕರೆಯಲ್ಪಡುವ ಕಾರ್ತಿಕ ಶುಕ್ಲ ಪಾಡ್ಯಮೀ… ನಮ್ಮ ಪಂಚಾಂಗಗಳಲ್ಲಿ ಅತ್ಯಂತ ಪವಿತ್ರವೆನಿಸಿರುವ ‘ಮೂರುವರೆ’ ದಿನಗಳಲ್ಲಿ ಇದು ಮೂರನೇಯದು. ಮೊದಲನೆಯ ಎರಡು ಚಾಂದ್ರಮಾನ ಯುಗಾದಿ ಮತ್ತು ‘ವಿಜಯದಶಮೀ…’ ಮೂರನೇಯ ದಿನ ಕೆಲವರಿಗೆ ‘ಬಲಿಪಾಡ್ಯಮಿ’ಯಾದರೆ ಇನ್ನು ಕೆಲವರಿಗೆ ‘ಅಕ್ಷಯ ತೃತೀಯಾ’. ಉಳಿದ ಅರ್ಧ ದಿನವೇ ಈ ಲೆಕ್ಕದಲ್ಲಿ ಸೇರಿದ ಅರ್ಧ!!
ಪ್ರಬಲ ಅಸುರ ಚಕ್ರವರ್ತಿ ಮಹಾ’ಬಲಿ’ಯನ್ನು ಶ್ರೀ ಮಹಾವಿಷ್ಣು ತನ್ನ ವಾಮಾನಾವತಾರದ ಮೂಲಕ ದಮನ ಮಾಡಿದ, ಪಾತಾಳಕ್ಕೆ ತುಳಿದ ಬಲಿ ಪಾಡ್ಯಮಿಯ ಹಿನ್ನೆಲೆಯ ಕಥೆಯನ್ನು ನಾನಾ ಕಾರ್ಯಕ್ರಮಗಳ ಮೂಲಕ ಕಟ್ಟಿ ಕೊಡುವ ಪ್ರಯತ್ನ ಹರಿಕಥೆ, ನಾಟಕ, ಚಿತ್ರಗಳ ಮೂಲಕ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಅಂದು ರಾತ್ರಿ ರಾಜ-ಮಹಾರಾಜರುಗಳು ಬಲಿಯನ್ನು ಭಕ್ತಿ ಶ್ರದ್ಧೆಗಳಿಂದ ಪೂಜಿಸಿ ಇಡೀ ರಾತ್ರಿ ಜಾಗರಣೆ ಮಾಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರತರಾಗುತ್ತಿದ್ದರಂತೆ. ಆ ದಿನ ನೀಡಿದ ದಾನ ಅಕ್ಷಯ ಫಲಪ್ರದ ದಾನವಾಗುತ್ತದೆ ಎಂಬ ನಂಬಿಕೆಯೂ ಬಲವಾಗಿದೆ.
ಗೋಪೂಜೆ: ಬಲಿ ಪ್ರತಿಪದಾ ಅಂಗವಾಗಿ ನಡೆಯುವ ಇನ್ನೊಂದು ಪವಿತ್ರ ಆಚರಣೆ ಹಸು, ಎತ್ತುಗಳ ಗೋ ಪೂಜೆ.
‘ಗೋವು’ ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ; ಮಾತ್ರವಲ್ಲದೆ ನಮ್ಮೆಲ್ಲರ ಅನ್ನದ ಮೂಲವೂ ಹೌದು. ಗ್ರಾಮೀಣ ಜನರ ಜೀವನಾಡಿ… ಕುಟುಂಬ ದೊಡನೆ ಅವಿಭಾಜ್ಯ ಸಂಬಂಧ ಹೊಂದಿರುವ ಸದಸ್ಯ ಕೃಷಿಯ ಆಧಾರ. ‘ಗಾವೋ ವಿಶ್ವಸ್ಯ ಮಾತಕಃ’ ಗೋವು ಚಲಿಸುವ ದೇವಾಲಯ, ಔಷಧಾಲಯ, ತೀರ್ಥಾಲಯ, ಋಗ್ವೇದದ ಕಾಲದಲ್ಲಿಯೇ ಗೋವಿನ ಮೇಲೆ ಪ್ರೀತಿ, ಸಹಾನುಭೂತಿ ಮತ್ತು ಅನುಕಂಪ ಇದ್ದುದು ಋಷಿಮುನಿಗಳ ಆಧಾರ ಗ್ರಂಥಗಳಿಂದ ವೇದ್ಯವಾಗುತ್ತದೆ. ತನ್ನ ಜೀವಮಾನದ ಹೆಚ್ಚಿನ ಭಾಗ ಮನುಷ್ಯರಿಗೆ ಅತ್ಯಗತ್ಯವಾದ ಪೌಷ್ಠಿಕ ಆಹಾರ ಹಾಲನ್ನು ಒದಗಿಸುವ ಈ ಮಹಾಮಾತೆ… ಮಹಾ ಸಾಧು… ಸರ್ವ ಮಾನ್ಯ… ಸರ್ವ ಪೂಜ್ಯ… ಮಹಾಭಾರತದ ‘ಯಕ್ಷಪ್ರಶ್ನೆ’ ವ್ಯಾಖ್ಯಾನದಲ್ಲಿ ಯಕ್ಷ-‘ಸರ್ವರ ಮಾತೆ ಯಾರು??’ ‘ಅಮೃತ ಯಾವುದು??’ ಎಂದು ಕೇಳಿದಾಗ ಧರ್ಮರಾಯ… ‘ಗೋಮಾತೆ…’ ‘ಹಾಲು’ ಎಂದುತ್ತರಿಸುತ್ತಾನೆ. ತಾಯ ಹಾಲು ದೊರೆಯದಾದಾಗ… ಹಸುವಿನ ಹಾಲಿನಿಂದಲೇ ದೊಡ್ಡವರಾದವರು ನಾವಲ್ಲವೇ?? ‘ನಮ್ಮ ಹುಟ್ಟಿ ನಿಂದ… ಚಟ್ಟದವರೇಗೆ’ ಅಗತ್ಯವಿರುವ ‘ಈ ಅಮೃತದಾಯಿ’ ಮಾತೆಯನ್ನು ‘ಗೋಮಾತೆ’ ಯೆಂದು ಪೂಜಿಸಬೇಕಾದ ನಾವಿಂದು ಏನು ಮಾಡುತ್ತಿದ್ದೇವೆ??… ಆತ್ಮಾವಲೋಕನ ಮಾಡಬೇಕಾಗಿದೆ. ಹಾಲಿನ ಮಾರಾಟ, ಗೋ ಮಾರಾಟ, ಗೋ ಹತ್ಯೆ… ಇಂಥ ಪಾಪ ಕೃತ್ಯಗಳಲ್ಲೇ ಕೆಲ ಜನ-ಮನ-ಮಗ್ನವಾಗಿರುವುದು ಒಂದು ದುರಂತ!! ಮೂವತ್ತ ಮೂರು ಕೋಟಿ ದೇವಾನು ದೇವತೆಗಳ ಮಹಾಮಾತೆಯಾಗಿರುವ ಗೋಮಾತೆಗೆ ನಾವೆಲ್ಲ ಶಿರಬಾಗಿ ನಮಿಸುವ ಈ ಪರ್ವಕಾಲ ಸಂಪದ್ಭರಿತವಾಗಲಿ.
ಮುಗಿಸುವ ಮುನ್ನ: ‘ಕತ್ತಲು ಬೆಳಕು’ ನಮ್ಮ ಬದುಕಿನ ಅವಿಭಾಜ್ಯ ಅಂಗಗಳು. ‘ಕತ್ತಲು’ ಅಂಧಕಾರ ಅಜ್ಞಾನದ ಪ್ರತೀಕ. ‘ಬೆಳಕು’ ಚೈತನ್ಯದ ಜ್ಞಾನದ ಪ್ರತೀಕ. ನಾವು ಯಾರೂ ಕತ್ತಲನ್ನು ಬಯಸುವುದಿಲ್ಲ… ಬೆಳಕಿಗೇ ಹಾ…ತೊರೆಯುವವರು ನಾವು… ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮೆಲ್ಲರನ್ನು ಕೊಂಡೊಯ್ಯುವ ಈ ಬೆಳಕಿನ ಹಬ್ಬ ‘ದೀಪಾವಳಿ’ ಆಗಬಾರದು ಎಂದೂ ಶೋಕಾವಳಿ… ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವ ಭಕ್ತಿ, ಶ್ರದ್ಧೆ, ಸಂಭ್ರಮ, ಉಲ್ಲಾಸ, ಆದರ್ಶಗಳಿಂದ ಕೂಡಿರುವ ನಮ್ಮೆಲ್ಲ ಜೀವನ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ನಮ್ಮದಾಗಬೇಕು. ಜಾತಿ, ಮತ, ಧರ್ಮ, ಭೇದಗಳನ್ನು ಮರೆತು ಸೌಹಾರ್ದತೆಯ ಸೇತುವೆಗಳ ನಿರ್ಮಾಣವಾಗಬೇಕು. ಸರ್ವ ಜನಾಂಗದ ಶಾಂತಿಯ ಹೂದೋಟವಾಗಬೇಕು… ‘ಬದುಕು’ ದೇವರು ನಮಗೆ ನೀಡಿರುವ ಅನರ್ಘ್ಯ ೞಕೊಡುಗೆ…ೞ ನಾವು ಬದುಕಬೇಕು… ಇತರರ ಬದುಕ ಬೆಳಗ ಬೇಕು… ಪ್ರೀತಿಸಬೇಕು… ಇದೇ ನಿಜವಾದ ನಮ್ಮ ಬದುಕಾಗಬೇಕು.
ನಮ್ಮೆಲ್ಲರ ಎದೆಯಾಳದ ಪ್ರೀತಿ ಗುಡಿಯಲ್ಲಿ… ಶಾಂತಿ-ನೀತಿಯ… ಆ..ನಂದದಾ ನಂದಾದೀಪ ನಿತ್ಯ ಬೆಳಗುತ್ತಿರಲಿ… ಮತ್ತೆ… ಮತ್ತೆ… ಇಂಥ ಹಬ್ಬ ಗಳ ಸಂಭ್ರಮದಲ್ಲಿ ನಾವೆಲ್ಲ ಒಟ್ಟು ಸೇರಿ ಬಾಂಧವ್ಯದ ಜ್ಯೋತಿಗಳಾಗೋಣ… ಮಾನವತೆಯ ಸಾಕ್ಷಿಗಳಾಗೋಣ… ವಿಶ್ವ ಬಾಂಧವ್ಯದ ಬೆಸುಗೆಯೊಂದಿಗೆ; ನಮ್ಮ ತನವನ್ನು ಕೆಣಕುವವರಿಗೆ ದಿಟ್ಟ ಹೆಜ್ಜೆಗಳೊಂದಿಗೆ… ಉತ್ತರ ಕೊಡೋಣ… ಭಾರತ ಮಾತೆಯ ಸುಪುತ್ರರಾಗಿ, ವೀರ ಯೋಧ ಸೇನಾನಿಗಳಾಗಿ, ರೈತರಾಗಿ, ಸಮಾಜದ ನಾನಾ ಕ್ಷೇತ್ರಗಳಲ್ಲಿ ಸಾಧಕರಾಗಿ ಬೆಳಗಿ ಬೆಳಕಾಗೋಣ…
ಬನ್ನಿ… ಬಾಲ ಬೆಳಗುವ ಹಬ್ಬ ‘ದೀಪಾವಳಿ’
ಹರಡಲಿ… ಎಲ್ಲೆಲ್ಲೂ ‘ಹರ್ಷಾವಳಿ’
ತೊಲಗಿಸಲಿ… ‘ಶೋಕಾವಳಿ…’
ಮೆರೆಯಲಿ ಆ…ನಂದದಾ… ಪ್ರಭಾವಳಿ…!!!
kukku

ನಾರಾಯಣ ರೈ ಕುಕ್ಕುವಳ್ಳಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.