ನಗರಸಭೆ ಆಡಳಿತ ವೈಫಲ್ಯ-ಬಿಜೆಪಿ ಸದಸ್ಯರಿಂದ ಡಿ.ಸಿ.ಗೆ ದೂರು ಅಧ್ಯಕ್ಷರು , ಪೌರಾಯುಕ್ತರ ತಪ್ಪು ಕಾರ್ಯಗಳ ಬಗ್ಗೆ ಗಂಭೀರ ನಿರ್ಣಯಕ್ಕೂ ಸಿದ್ಧ

Puttur_Advt_NewsUnder_1
Puttur_Advt_NewsUnder_1

12

* ನಗರಸಭೆ ಅಧ್ಯಕ್ಷರಿಂದ ಏಕಪಕ್ಷೀಯ ನಿರ್ಣಯ  * ಸಂತೆ ಸ್ಥಳಾಂತರಕ್ಕೆ ಸದಸ್ಯರೊಂದಿಗೆ ಚರ್ಚಿಸಿಲ್ಲ * ಚರ್ಚೆಯಾಗದ ವಿಷಯ ನಮೂದಿಸಿ ಸುಳ್ಳು ನಿರ್ಣಯ ದಾಖಲು * ಬಹುಮತ ನಿರ್ಣಯ ದಾಖಲಿಸಲು ಪೌರಾಯುಕ್ತರಿಗೆ ಆದೇಶ ನೀಡಬೇಕು: * ಸದಸ್ಯರ ಅಭಿಪ್ರಾಯಕ್ಕೆ ವಿರುದ್ಧವಾಗಿ ವರ್ತನೆ * ಒಪ್ಪಿಗೆ ಇಲ್ಲದೆ ಯಾರೋ ವಕೀಲರ ನೇಮಕ * ತರಕಾರಿ ಅಂಗಡಿಗೆ ಅನುಮತಿ ತಿರಸ್ಕಾರ * ವಿಶೇಷ ಸಭೆ ಕರೆದಿಲ್ಲ- ಸ್ಥಾಯಿ ಸಮಿತಿ ಸಭೆ ನಡೆಸುತ್ತಿಲ್ಲ * ಅರ್ಜಿಗಳು ವಿಲೇವಾರಿ ಆಗದೆ ತಿಂಗಳುಗಟ್ಟಲೆ ಕಳೆದಿದೆ * ಅನುದಾನ ಬಂದಿದ್ದರೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ * ಟೆಂಡರ್ ಕರೆಯದೇ ಕಾನೂನು ಬಾಹಿರವಾಗಿ ಕಾಮಗಾರಿ ನಡೆಸುತ್ತಾರೆ * ಮಹಮ್ಮದ್ ಆಲಿಯವರು ಕಡತಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ * ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ * ನಗರಸಭೆಯಲ್ಲಿ ಹುದ್ದೆಗಳು ಖಾಲಿ

ಪುತ್ತೂರು: ನಗರಸಭೆ ಆಡಳಿತ ವೈಫಲ್ಯದ ಕಂಡಿದ್ದು ಅಧ್ಯಕ್ಷರು ಆಡಳಿತ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ ಏಕಪಕ್ಷೀಯವಾಗಿ ಆಡಳಿತದಲ್ಲಿ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಸಾಮಾನ್ಯ ಸಭೆಯಲ್ಲೂ ಬಹುಮತದ ನಿರ್ಣಯ ಕೈಗೊಳ್ಳುವುದಿಲ್ಲ. ಈ ಕುರಿತು ನಗರಸಭೆ ಪೌರಾಯುಕ್ತರಿಗೆ ಸರಿಯಾದ ನಿರ್ದೇಶನ ನೀಡಿ ಆದೇಶ ಮಾಡಬೇಕೆಂದು ನಗರಸಭೆ ಬಿಜೆಪಿ ಸದಸ್ಯರುಗಳು ಅ.28ರಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ರವರಿಗೆ ನಿರೀಕ್ಷಣಾ ಮಂದಿರದಲ್ಲಿ ಮನವಿ ಸಲ್ಲಿಸಿದ್ದಾರೆ.
ಸಂತೆ ಸ್ಥಳಾಂತರಕ್ಕೆ ಸದಸ್ಯರೊಂದಿಗೆ ಚರ್ಚಿಸಿಲ್ಲ: ವಾರದ ಸಂತೆಯನ್ನು ಏಕಾ ಏಕಿಯಾಗಿ ಜನರಿಗೆ, ರೈತರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗುವುದನ್ನು ಪರಿಗಣಿಸದೆ ನಗರಸಭೆಯ ಸದಸ್ಯರೊಂದಿಗೆ ಚರ್ಚಿಸದೇ ದೂರದ ಸ್ಥಳಕ್ಕೆ ಸ್ಥಳಾಂತರಿಸಲು ಸಹಾಯಕ ಕಮೀಷನರ್ ನೀಡಿದ ತಾತ್ಕಾಲಿಕ ಆದೇಶವನ್ನು ವಿರೋಧಿಸಿ ವಿಶೇಷ ಸಭೆಯನ್ನು ಕರೆಯಲು ನಾವು ಕೋರಿದ ನಂತರ ನಡೆದ ವಿಶೇಷ ಸಭೆಯಲ್ಲಿ ನಿರ್ಣಯವನ್ನು ಮತಕ್ಕೆ ಹಾಕದೆ ವಿಶೇಷ ಸಭೆಯಲ್ಲಿ ಚರ್ಚೆಯಾಗದ ವಿಷಯಗಳನ್ನು ನಮೂದಿಸಿ ಸುಳ್ಳು ನಿರ್ಣಯವನ್ನು ದಾಖಲಿಸಿದ್ದಾರೆ. ಉಚ್ಛನ್ಯಾಯಾಲಯದಿಂದ ನಗರಸಭೆಗೆ ನೋಟೀಸು ಬಂದಿದ್ದರೂ ಈ ಕುರಿತು ಉಚ್ಚ ನ್ಯಾಯಾಲಯದಲ್ಲಿ ನಗರಸಭೆಯ ಸದಸ್ಯರ ಬಹುಮತದ ಅಭಿಪ್ರಾಯವನ್ನು ತಿಳಿಸುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಜೊತೆಗೆ ನಗರಸಭೆ ಒಪ್ಪಿಗೆ ಇಲ್ಲದೆ ಯಾರೋ ವಕೀಲರನ್ನು ನೇಮಿಸಿದ್ದಾರೆ ಎಂದು ತಿಳಿದು ಬಂದಿದ್ದು ಒಟ್ಟಿನಲ್ಲಿ ನಗರಸಭೆ ಆಡಳಿತ ಜನರ ವಿರುದ್ಧವಾಗಿ ನಡೆದು ಕೊಳ್ಳುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ತರಕಾರಿ ಅಂಗಡಿಗೆ ಅನುಮತಿ ಕೊಟ್ಟಿಲ್ಲ: ನಗರಸಭ ಕಚೇರಿ ಬಳಿಯಲ್ಲಿನ ಖಾಸಗಿ ಕಟ್ಟಡದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯೊಬ್ಬರು ತರಕಾರಿ ಅಂಗಡಿ ತೆರೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದಾಗ ವಿನಾ ಕಾರಣ ಬಡ ವ್ಯಕ್ತಿಗೆ ತೊಂದರೆ ನೀಡುವ ಸಲುವಾಗಿ ಯಾವುದೇ ಕಾರಣವಿಲ್ಲದೆ ಅವರ ಅರ್ಜಿಯನ್ನು ತಿರಸ್ಕರಿಸಿರುತ್ತಾರೆ. ಈ ವಿಚಾರದಲ್ಲಿ ವಿಶೇಷ ಸಭೆ ಕರೆಯಲು ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರೂ ನಮ್ಮ ಕೇಳಿಕೆಯನ್ನು ಪರಿಗಣಿಸಿಲ್ಲ. ನಗರಸಭೆಯ ವ್ಯಾಪ್ತಿಯಲ್ಲಿ ಕೃಷಿಯೇತರ ಭೂಮಿಗೆ ಖಾತೆಗಳನ್ನು ನೀಡಲಾಗಿಲ್ಲ. ಅರ್ಜಿಗಳೆಲ್ಲಾ ವಿಲೇವಾರಿ ಮಾಡದೆ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಅಕ್ಟೋಬರ್ ತಿಂಗಳಾದರೂ ವ್ಯಾಪಾರ ಪರವಾನಿಗೆ ನೀಡದಿರುವುದರಿಂದ ವ್ಯಾಪಾರಸ್ಥರಿಗೆ ಅವರ ವ್ಯವಹಾರಕ್ಕೆ ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಟೆಂಡರ್ ಪ್ರಕ್ರಿಯೆ ನಡೆಯದೆ ಕಾನೂನು ಬಾಹಿರ ಕಾಮಗಾರಿ ನಡೆಸುತ್ತಿದ್ದಾರೆ: ನಗರಸಭೆಗೆ ಸರಕಾರದಿಂದ ಅಭಿವೃದ್ಧಿಗಾಗಿ ಅನುದಾನ ಬಂದಿದ್ದರೂ ಅದರ ಸದ್ವಿನಿಯೋಗವಾಗಿಲ್ಲ. ಟೆಂಡರ್ ಪ್ರಕ್ರಿಯೆ ನಡೆಸದೇ ಕಾನೂನು ಬಾಹಿರವಾಗಿ ಹೊಸ ಕಾಮಗಾರಿ ನಡೆಸುತ್ತಿದ್ದಾರೆ. ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರುತ್ತಿದೆ. ನಗರಸಭೆ ಸದಸ್ಯ ಮಹಮ್ಮದ್ ಆಲಿಯವರು ಬೆಳಗ್ಗಿನಿಂದ ಸಂಜೆಯ ತನಕ ಕಚೇರಿಯಲ್ಲಿ ಸುತ್ತಾಡುತ್ತಾ ನಗರಸಭೆಯ ಕಡತಗಳನ್ನು ತನ್ನ ವಶದಲ್ಲಿಟ್ಟು ಕೊಂಡು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.
ಸ್ಥಾಯಿ ಸಮಿತಿ ಸಭೆ ನಡೆಸುತ್ತಿಲ್ಲ: ಸ್ಥಾಯಿ ಸಮಿತಿ ಸಭೆಗಳನ್ನು ಸಮಯಕ್ಕೆ ಸರಿಯಾಗಿ ನಡೆಸಬೇಕಾಗಿದ್ದು ಈ ಕುರಿತು ನಾವು ಲಿಖಿತ ಮನವಿ ಮಾಡಿದ್ದರೂ ಪೌರಾಯುಕ್ತರು ಸಭೆಗಳನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ಮನಿಯಲ್ಲಿ ತಿಳಿಸಿದ್ದಾರೆ.
ಹುದ್ದೆಗಳು ಖಾಲಿ: ನಗರಸಭೆಯ ರೆವೆನ್ಯೂ ಇನ್ಸ್‌ಪೆಕ್ಟರ್, ಬಿಲ್ ಕಲೆಕ್ಟರ್, ಇಂಜಿನಿಯರ್ ಮತ್ತಿತರ ಹುದ್ದೆಗಳು ಖಾಲಿ ಇದ್ದು. ಈ ಕುರಿತು ನೇಮಕಾತಿಗೆ ಕೂಡಾ ಪ್ರಸ್ತಾವನೆಯನ್ನು ಅಧ್ಯಕ್ಷರು ಸಲ್ಲಿಸುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ನಗರಸಭೆ ಆಯುಕ್ತರ ಮತ್ತು ಅಧ್ಯಕ್ಷರ ಗಮನಕ್ಕೆ ತಂದರೂ ಅನಾವಶ್ಯಕವಾಗಿ ನಮ್ಮ ಮೇಲೆ ಸುಳ್ಳು ಆಪಾದನೆಗಳನ್ನು ಮಾಡಿ ಪತ್ರಿಕಾ ಹೇಳಿಕೆ ನೀಡಿ ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ನಗರಭೆಯ ಆಡಳಿತವನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ನಗರಭೆಯಲ್ಲಿ ಬಹುಮತ ಹೊಂದಿರುವ ನಾವು ಜನರ ಹಿತದೃಷ್ಟಿಯಿಂದ ನಗರಸಭೆಯ ಅಧ್ಯಕ್ಷರ ಮತ್ತು ಪೌರಾಯುಕ್ತರ ತಪ್ಪು ಕಾರ್ಯಗಳ ಬಗ್ಗೆ ನಗರಸಭೆಯಲ್ಲಿ ಗಂಭೀರ ನಿರ್ಣಯಗಳನ್ನು ಕೈಗೊಳ್ಳಬೇಕಾದೀತು. ಇದರಿಂದ ನಗರಸಭೆ ಆಡಳಿತ ಸ್ಥಗಿತಗೊಂಡಲ್ಲಿ ಅದಕ್ಕೆ ಅಧ್ಯಕ್ಷರು ಮತ್ತು ಪೌರಾಯುಕ್ತರೇ ಹೊಣೆಯಾಗುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಭಂಡಾರಿ, ಸದಸ್ಯರಾದ ಜೀವಂಧರ್ ಜೈನ್, ರಾಮಣ್ಣ ಗೌಡ, ಸುಜೀಂದ್ರ ಪ್ರಭು, ಬಾಲಚಂದ್ರ, ಹರೀಶ್ ನಾಕ್, ವನಿತಾ ಕೆ.ಟಿ, ಯಶೋಧಾ ಹರೀಶ್ ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.