‘ಸಾರಾಯಿ ದಂಧೆ ವಿರುದ್ಧ ಕ್ರಮ ಕೈಗೊಳ್ಳಿ’ ಜಿಲ್ಲಾಮಟ್ಟದ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಆಗ್ರಹ

Puttur_Advt_NewsUnder_1
Puttur_Advt_NewsUnder_1

sabhe sabhe1

*ಪೊಲೀಸ್ ಇಲಾಖೆ ಪೂರ್ಣ ಸಹಕಾರ ನೀಡುತ್ತದೆ. ಕಂದಾಯ ಇಲಾಖೆಯದ್ದೇ ಸಮಸ್ಯೆ

 *ಗುರುಂಪುನಾರ್ ರಸ್ತೆ ಮಾಡಿಕೊಡದಿದ್ದರೆ ನಾವೇ ರಸ್ತೆ ಮಾಡುತ್ತೇವೆ

* ಅಕ್ರಮ ಸಾರಾಯಿ ದಂಧೆಗೆ ಕಡಿವಾಣ ಹಾಕಿ

 *ಬ್ರಹ್ಮನಗರದ ದಲಿತ ಮನೆಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ

* ರಿಕ್ಷಾದವರಿಂದ ಬ್ರಹ್ಮನಗರದ ಯುವತಿಯರಿಗೆ ಕಿರುಕುಳ

 *ಅಕ್ರಮ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಿ

* ಗ್ರಾ.ಪಂ ಸದಸ್ಯರಿಂದ ಎಸ್ಸಿ ಸೌಲಭ್ಯ ದುರುಪಯೋಗ

* ಸಬ್‌ರಿಜಿಸ್ಟ್ರಾರ್ ಕಚೇರಿ ಸ್ಥಳವನ್ನು ಅಂಬೇಡ್ಕರ್ ಭವನಕ್ಕೆ ಮೀಸಲಿಡಿ

* ದಲಿತ ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿರುವ ಬೆಳ್ಳಾರೆ ಕಾಲೇಜು ಕೇಸರಿ ಶಾಲು

* ಚಕ್ರವರ್ತಿ ಸೂಲಿಬೆಲೆಯವರ ಮೇಲೆ ಕಾನೂನುಕ್ರಮ ಕೈಗೊಳ್ಳಿ

* ಪೇಜಾವರ ಸಾಮೀಜಿಗೆ ಅಸ್ಪಶ್ಯತೆ ಕುರಿತು ಮಾತನಾಡುವ ಹಕ್ಕಿಲ್ಲ

* ಪತ್ರಕರ್ತನೆಂದು ಹೇಳುವ ಇಬ್ಬತ್ತುಲ್ಲ ಪತ್ತೆ ಆಗಿಲ್ಲ

* ಬಂಟ್ವಾಳದಲ್ಲಿ ಟ್ರಾಫಿಕ್ ಸಮಸ್ಯೆ

ಪುತ್ತೂರು:  ಜಿಲ್ಲಾ ಪೊಲೀಸ್, ಪುತ್ತೂರು ಉಪವಿಭಾಗದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಪರಿಶೀಲನಾ ಸಭೆ ಅ.28ರಂದು ಪುತ್ತೂರು ಪುರಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಾಸೆ ನೇತೃತ್ವದಲ್ಲಿ ನಡೆಯಿತು.

ಗುರುಂಪುನಾರ್ ರಸ್ತೆ ಮಾಡಿಕೊಡದಿದ್ದರೆ ನಾವೇ ಮಾಡುತ್ತೇವೆ:

ದ.ಕ ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಗಿರಿಧರ ನಾಯ್ಕರವರು ಮಾತನಾಡಿ ನಗರಸಭೆ ಪ್ರದೇಶದಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದರೆ ಬಡವರಿಗೆ ಜಮೀನು ಸಿಗುತ್ತಿಲ್ಲ ಶ್ರೀಮಂತರಿಗೆ ಸಿಗುತ್ತದೆ. ಬಲ್ನಾಡಿನ ಪರಿಶಿಷ್ಟ ಜಾತಿಯ ವ್ಯಕ್ತಿಯೋರ್ವರು 1998 ರಲ್ಲಿ ಅಕ್ರಮ -ಸಕ್ರಮ ಅರ್ಜಿ ಸಲ್ಲಿಸಿದ್ದರೂ ಹಕ್ಕುಪತ್ರ ನೀಡಲಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ. ಆದರೆ 2013 ರಲ್ಲಿ ಗುರುಪುಂನಾರ್‌ನಲ್ಲಿ 14 ಸೆಂಟ್ಸ್ ಜಾಗಕ್ಕಾಗಿ ಮುಸ್ಲಿಂ ವ್ಯಕ್ತಿಯೋರ್ವರು ಅರ್ಜಿ ಸಲ್ಲಿಸಿದಾಗ ಅವರಿಗೆ ಜಾಗ ಮಂಜೂರು ಮಾಡಲಾಗಿದೆ. ದಲಿತರಿಗೆ ನೀಡದ ಅವಕಾಶವನ್ನು ಮತ್ತೊಬ್ಬರಿಗೆ ಹೇಗೆ ನೀಡಿದ್ದು, ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಉತ್ತರಿಸಿದ ಪೌರಾಯುಕ್ತರು ಅದು ತಾಲೂಕು ಕಚೇರಿಗೆ ಸಂಬಂಧಿಸಿದ ವಿಚಾರ. ನಗರಸಭೆಯಲ್ಲಿ ಶೇ.20 ಮತ್ತು 10 ಅಡಿಯಲ್ಲಿ ಅನುದಾನ ಒದಗಿಸಲು ಆಗುತ್ತದೆ. ಅಕ್ರಮ ಸಕ್ರಮದ ವಿಚಾರದಲ್ಲಿ ನಮಗೆ ಕೈ ಹಾಕಲು ಆಗುವುದಿಲ್ಲ ಎಂದರು. ಆಕ್ಷೇಪಿಸಿದ ಗಿರಿಧರ ನಾಯ್ಕರವರು ಗುರುಂಪುನಾರ್‌ನಲ್ಲಿ ದಲಿತ ಸಮುದಾಯ ಇರುವ ಕಡೆಗಳಲ್ಲಿ 70 ವರ್ಷಗಳಿಂದ ರಸ್ತೆ ಇಲ್ಲ. ಸುಮಾರು 32 ವರ್ಷದಿಂದ ಅಲ್ಲಿನ ಜನ ರಸ್ತೆಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ ಅಲ್ಲಿ ಒಂದಿಂಚು ರಸ್ತೆ ಮಾಡಿ ಕೊಡಲಿಲ್ಲ. ಆದರೆ ಹಿಂದೆ ಇದ್ದ ರಸ್ತೆ ಜಾಗದಲ್ಲಿ 14 ಸೆಂಟ್ಸ್ ಅಕ್ರಮ ಸಕ್ರಮ ಮಾಡಿಕೊಟ್ಟಿದ್ದೀರಿ ಎಂದರು.  ಉತ್ತರಿಸಿದ ಪೌರಾಯುಕ್ತರು ಅದು ವರ್ಗ ಜಾಗ ಎಂದರು. ಆಕ್ಷೇಪಿಸಿದ ಗಿರಿಧರ ನಾಯ್ಕರವರು ಅದು ವರ್ಗ ಜಾಗವಲ್ಲ ಅದು ಅಕ್ರಮ ಸಕ್ರಮದಿಂದ ಸಿಕ್ಕಿರುವ ಜಾಗ. ಮೂಲಭೂತ ಸೌಕರ್ಯದ ಅವಶ್ಯಕತೆ ಇದ್ದಾಗ ಅಕ್ರಮ ಸಕ್ರಮ ಜಾಗವನ್ನು ಹಿಂದಕ್ಕೆ ಪಡೆಯಲು ಸರಕಾರಕ್ಕೆ ರೈಟ್ಸ್ ಇದೆ ಎಂದರು. ಉತ್ತರಿಸಿದ ಎಸ್ಪಿ ಭೂಷನ್ ಗುಲಾಬ್ ರಾವ್ ಬೊರಸೆಯವರು, ನೀವು ದಾಖಲಾತಿ ಕೊಡಿ. ೧೫ ದಿನಗಳಲ್ಲಿ ಉತ್ತರ ಕೊಡುವ ಎಂದರು. ನಾವು ಹಿಂದೆಯೇ ದಾರಿ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಪೌರಾಯುಕ್ತರಿಗೆ ಕೊಟ್ಟಿದ್ದೇವೆ. ಜಿಲ್ಲಾಧಿಕಾರಿಗಳು ಕೂಡಾ ರಸ್ತೆಯನ್ನು ಶೆ.100 ಅನುದಾನದಲ್ಲಿ ನಗರಸಭೆ ಮಾಡಿಸಿಕೊಡಬೇಕೆಂದು ಆದೇಶ ನೀಡಿದ್ದಾರೆ. ಆದರೆ ನಗರಸಭೆಯವರು ಇನ್ನೂ ನಮಗೆ ರಸ್ತೆ ಮಾಡಿ ಕೊಡಲು ರಾಜಕೀಯ ಮಾಡುತ್ತಿದ್ದಾರೆ ಎಂದು ಗಿರಿಧರ ನಾಯ್ಕ ಹೇಳಿದರು.  ಉತ್ತರಿಸಿದ ಪೌರಾಯುಕ್ತರು ಈಗಾಗಲೆ ಆ ದಾರಿ ವಿಚಾರಕ್ಕೆ ಸಂಬಂಧಿಸಿ ಕೋರ್ಟ್‌ನಲ್ಲಿ ಕೇವಿಯಟ್ ಇರುವುದರಿಂದ ದೂರು ನೀಡಿರುವವರಲ್ಲಿ ಹಿಂದಕ್ಕೆ ಪಡೆಯಲು ಹೇಳಿ ಎಂದರು. ಗಿರಿಧರ ನಾಯ್ಕರವರು ಮಾತನಾಡಿ ಇಂತಹ ರಾಜಕೀಯ ಬೇಡ. ನಮಗೆ ದಲಿತರಿಗೆ 1947 ಸ್ವಾತಂತ್ರ್ಯ ಸಿಕ್ಕಿದೆಯೇ  ಇಲ್ಲವೋ ಎಂಬ ಸಂಶಯವಿದೆ ಎಂದರಲ್ಲದೆ ಮುಂದೆ ಇಲಾಖೆಯಿಂದ ಏನೂ ಕೆಲಸ ಪ್ರಗತಿ ಕಾಣದಿದ್ದರೆ ನಾವು ರಸ್ತೆ ಮಾಡಿಯೇ ಸಿದ್ಧ. ಅದರಿಂದಾಗುವ ಪರಿಣಾಮಕ್ಕೆ ಇಲಾಖೆ ಜವಾಬ್ದಾರಿ ಎಂದರು. ದಲಿತ ಸಂಘರ್ಷ ಸಮಿತಿಯ ಕೂಸಪ್ಪರವರು ಮಾತನಾಡಿ ಎಲ್ಲಾ ಸಂಘಟನೆಯವರು ಇದಕ್ಕೆ ಬೆಂಬಲ ನೀಡಲಿದ್ದಾರೆ ಎಂದರು. ಮಾನವೀಯತೆ ನೆಲೆಯಿಂದಾದರೂ ಅಧಿಕಾರಿಗಳು ಈ ಸಮಸ್ಯೆಗೆ ಸ್ಪಂದಿಸಬೇಕೆಂದು ಶೇಷಪ್ಪ ನೆಕ್ಕಿಲು ಹೇಳಿದರು. ಪುತ್ತೂರು ನಗರ ಪೊಲೀಸ್ ವೃತ್ತನಿರೀಕ್ಷಕ ಮಹೇಶ್ ಪ್ರಸಾದ್ ಮಾತನಾಡಿ ನಗರಸಭೆ ಪೌರಾಯುಕ್ತರು ಅಧಿಕಾರ ಪಡೆದು 2 ತಿಂಗಳಾಯಿತಷ್ಟೆ. ಮುಂದೆ ಅವರು ಪರಿಶೀಲಿಸಲಿದ್ದಾರೆ ಎಂದರು.

ಪೊಲೀಸ್ ಇಲಾಖೆ ಪೂರ್ಣ ಸಹಕಾರ ನೀಡುತ್ತಿದೆ:  ಎಸ್ಪಿಯವರು ಮಾತನಾಡಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಚಾರದಲ್ಲಿ ಯಾವುದಾದರೂ ಪ್ರಶ್ನೆ ಇದ್ದರೆ ತಿಳಿಸಿ ಎಂದರು. ಉತ್ತರಿಸಿದ ಗಿರಿಧರ ನಾಯ್ಕರವರು ಪೊಲೀಸ್ ಇಲಾಖೆಗೆಯಿಂದ ಪೂರ್ಣ ಸಹಕಾರ ಸಿಗುತ್ತಿದೆ. ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ಕಂದಾಯ ಇಲಾಖೆಯದ್ದೆ ಸಮಸ್ಯೆ ಎಂದರು.

ಅಕ್ರಮ ಸಾರಾಯಿ ದಂಧೆಗೆ ಕಡಿವಾಣ ಹಾಕಿ:  ನೆಟ್ಟಣಿಗೆಮುಡ್ನೂರು ಗ್ರಾಮದ ನೂಜಿಬೈಲು ದಲಿತ ಕಾಲೋನಿ ಸಮೀಪ ಅಕ್ರಮ ಸಾರಾಯಿ ದಂಧೆ ನಡೆಯುತ್ತಿದೆ. ಕಳೆದ ೫ ವರ್ಷದಿಂದ ಈ ಕುರಿತು ಇಲಾಖೆಯಲ್ಲಿ ಮನವಿ ಮಾಡಿದರೂ ದಂಧೆ ಇನ್ನೂ ನಿಂತಿಲ್ಲ ಎಂದು ಗ್ರಾಮಸ್ಥರೋರ್ವರು ಪ್ರಸ್ತಾಪಿಸಿದರು. ಉತ್ತರಿಸಿದ ಎಸ್ಪಿಯವರು ಈ ಕುರಿತು ಪರಿಶೀಲಿಸಲಾಗುವುದು ಎಂದರು. ಕಡೆಶಿವಾಲಯದಲ್ಲಿ 23 ಕಡೆ ಅಕ್ರಮ ಮದ್ಯ ದಂಧೆ ನಡೆಯುತ್ತಿದೆ. ಆದರೆ ಇಲ್ಲಿ ಪೊಲೀಸರು ರೈಡ್ ಮಾಡುತ್ತಿಲ್ಲ ಎಂದು ಸಭೆಯಲ್ಲಿ ಆರೋಪ ಕೇಳಿ ಬಂತು. ಉತ್ತರಿಸಿದ ಬಂಟ್ವಾಳ ಡಿವೈಎಸ್ಪಿ ರವೀಶ್‌ರವರು ಈ ಕುರಿತು ದಿನ ಬಿಟ್ಟು ದಿನ ರೈಡ್ ಮಾಡಿzವೆ. ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಮುಂದೆ ನಾನೆ ಖುದ್ದಾಗಿ ಪರಿಶೀಲನೆ ನಡೆಸುತ್ತೇನೆ ಎಂದರು. ಬೆಳ್ತಂಗಡಿಯ ಶ್ರೀಧರ್‌ರವರು ಮಾತನಾಡಿ ಬೆಳ್ತಂಗಡಿಯ ೮೧ ಗ್ರಾಮಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದೆ. ಆದರೆ ಇದನ್ನು ಪತ್ತೆ ಮಾಡದ ಪೊಲೀಸರು ಶೇಂದಿ ಮಾರಾಟ ಮಾಡುವವರನ್ನು ಹಿಡಿಯುತ್ತಿದ್ದಾರೆ ಎಂದರು.

ಬ್ರಹ್ಮನಗರದ ದಲಿತ ಮನೆಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ: ಇಲ್ಲಿನ ಬ್ರಹ್ಮನಗರದ ಸುಮಾರು 500 ದಲಿತ ಮನೆಗಳಿಗೆ ಹಲವಾರು ವರ್ಷಗಳಿಂದ ಹಕ್ಕು ಪತ್ರ ಸಿಕ್ಕಿಲ್ಲ. ಜೊತೆಗೆ ಕಾಲೋನಿಗೆ ಹೋಗುವ ದಾರಿಯಲ್ಲಿ ವ್ಯಕ್ತಿಯೋರ್ವರು ಮನೆಯೊಂದು ಕಟ್ಟಿದ್ದಾರೆ. ಇದರಿಂದ ದಾರಿ ಸಮಸ್ಯೆ ಉಂಟಾಗಿದೆ ಎಂದು ಗಿರಿಧರ ನಾಯ್ಕರವರು ಸಭೆಯಲ್ಲಿ ಗಮನಕ್ಕೆ ತಂದರು. ಸಮುದಾಯ ಸಂಘಟಕ ಉಸ್ಮಾನ್‌ರಿಂದ ಮಾಹಿತಿ ಪಡೆದ ಪೌರಾಯುಕ್ತರು ಮಾತನಾಡಿ ಬ್ರಹ್ಮನಗರ ಖಾಸಗಿ ವ್ಯಕ್ತಿಯೋರ್ವರ ಹೆಸರಿನಲ್ಲಿದೆ ಎಂದರು. ಆಕ್ಷೇಪಿಸಿದ ಗಿರಿಧರ ನಾಯ್ಕರವರು ಸ್ಥಳ ಖಾಸಗಿ ವ್ಯಕ್ತಿಯದ್ದು ಆಗಿದ್ದರೂ ಅಲ್ಲಿ ಹಲವು ವರ್ಷಗಳಿಂದ ವಾಸ್ತವ್ಯ ಹೊಂದಿರುವ ದಲಿತರಿಗೆ ಏನು ಗತಿ ಎಂದರು.  ನೀವು ಇನ್ನು ಅದನ್ನು ಪರಿಶೀಲಿಸುತ್ತೇವೆ ಎಂದು ಉತ್ತರಿಸಿದರೂ ಆ ಪರಿಶೀಲನೆ ವೇಳೆ ನೀವು ವರ್ಗಾವಣೆ ಆಗುತ್ತೀರಿ. ಮತ್ತೆ ಹೊಸ ಅಧಿಕಾರಿ ಬಂದಾಗ ಅವರಿಂದಲೂ ಇದೇ ಉತ್ತರ ಎಂದರು. ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾತನಾಡಿ ಒಂದೇ ಸಲ ಎಲ್ಲಾ ಕೆಲಸ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಮಾಡೋಣ ಎಂದರು.

ರಿಕ್ಷಾದವರಿಂದ ಬ್ರಹ್ಮನಗರದ ಯುವತಿಯರಿಗೆ ಸನ್ನೆ: ಇಲ್ಲಿನ ನಗರಸಭಾ ವಾಣಿಜ್ಯ ಸಂಕೀರ್ಣದ ಬಳಿ ಹೂವಿನ ಮಾರುಕಟ್ಟೆಯಿಂದ ಉದ್ದಕ್ಕೆ ರಿಕ್ಷಾಗಳು ಕ್ಯೂ ನಿಲ್ಲುತ್ತವೆ. ಕೆಲವು ರಿಕ್ಷಾ ಚಾಲಕರು ಬ್ರಹ್ಮನಗರದ ಯುವತಿಯರಿಗೆ ಸನ್ನೆ ಮಾಡುತ್ತಾರೆ ಎಂದು ಗಿರಿಧರ ನಾಯ್ಕರವರು ಸಭೆಯಲ್ಲಿ ಪ್ರಸ್ತಾಪಿಸಿದರು. ತಾರಿಗುಡ್ಡೆಯಲ್ಲಿ ರಾತ್ರಿ ಹೊತ್ತು ಆಟವಾಡಿಕೊಂಡು ತೊಂದರೆ ಕೊಡುತ್ತಾರೆ ಎಂದು ವ್ಯಕ್ತಿಯೋರ್ವರು ಪ್ರಸ್ತಾಪಿಸಿದರು. ಉತ್ತರಿಸಿದ ಮಹೇಶ್ ಪ್ರಸಾದ್ ಈ ಕುರಿತು ಪರಿಶೀಲನೆ ನಡೆಸುತ್ತೇನೆ ಎಂದರು.

ಕಟ್ಟಡ ಕಟ್ಟಲು ಬಾರ್ ಮಾಲಕರಿಂದ ಕಿರುಕುಳ: ಪಂಜದ ಮೋನಪ್ಪ ನಾಯ್ಕ ಎಂಬವರು ಮಾತನಾಡಿ ಸರಕಾರದ ಸವಲತ್ತಿನಿಂದ ಕಟ್ಟಡ ಕಟ್ಟಲು ಸಾಲ ಮಂಜೂರಾತಿ ಆಗಿದೆ. ಆದರೆ ಸ್ಥಳೀಯ ಬಾರ್ ಮಾಲಕರೋರ್ವರು ನನಗೆ ಕಿರುಕುಳ ನೀಡಿ ಸಾಲ ಮಂಜೂರುಗೊಳಿಸದಂತೆ ಮಾಡುತ್ತಿದ್ದಾರೆ. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ಕೊಟ್ಟಿzನೆ. ಆದರೆ ಈ ತನಕ ತನಿಖೆಗಾಗಿ ನನ್ನನ್ನು ಕರೆಸಿಲ್ಲ ಪ್ರಭಾವಿ ರಾಜಕಾರಣಿಗಳ ಕೈವಾಡ ಇದರಲ್ಲಿ ಇದೆ ಎಂದು ಹೇಳಿದರು. ಉತ್ತರಿಸಿದ ಎಸ್ಪಿಯವರು ಕ್ರಮ ಕೈಗೊಳ್ಳಲಾಗುವುದು ಎಂದರು.

ಅಕ್ರಮ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಿ: ಬಾಲಚಂದ್ರ ಸೊರಕೆಯವರು ಮಾತನಾಡಿ ಪುತ್ತೂರು ನಗರ ವ್ಯಾಪ್ತಿಯಲ್ಲಿ ಸುಮಾರು 21 ಅಕ್ರಮ ಕಟ್ಟಗಳ ಕುರಿತು ಪಟ್ಟಿ ಮಾಡಿ ನಗರಸಭೆಗೆ ನೀಡಲಾಗಿದೆ. ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಅಕ್ರಮ ಕಟ್ಟಡವೆಂದು ಒಂದೇ ಬಾರಿ ಡೆಮೋಲಿಶ್ ಮಾಡಲು ಸಾಧ್ಯವಿಲ್ಲ. ನೋಟೀಸ್ ಮಾಡಲಾಗಿದೆ ಹಂತ ಹಂತ ವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ಹೇಳಿದರು. ಆಕ್ಷೇಪಿಸಿದ ಗಿರಿಧರ ನಾಯ್ಕರವರು ಬಲ್ನಾಡಿನಲ್ಲಿ ಮತ್ತು ಪಡ್ಡಾಯೂರಿನಲ್ಲಿ ಬಡವರಿಗಾಗಿ ಗುಡಿಸಲು ಕಟ್ಟಿದ ತಕ್ಷಣ ನೀವು ಡೆಮೋಲಿಶ್ ಮಾಡಿದ್ದೀರಿ. ಶ್ರೀಮಂತರ ಕಟ್ಟಡ ಆಗುವಾಗ ನಿಮಗೆ ನೋಟೀಸಿನ ಕಾನೂನು ಬರುತ್ತದೆಯೇ ಎಂದು ಪ್ರಶ್ನಿಸಿದರು. ಉತ್ತರಿಸಿದ ರೂಪಾ ಶೆಟ್ಟಿಯವರು ಅದು ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿರುವುದು. ಇದು ವರ್ಗ ಜಾಗದಲ್ಲಿ ಅಕ್ರಮ ಕಟ್ಟಡ ಎಂದರು. ಗಿರಿಧರ ನಾಯ್ಕರವರು ಮಾತನಾಡಿ ಶ್ರೀಮಂತರು ಮತ್ತು ಬಡವರಿಗೆ ಬೇರೆ ಬೇರೆ ಕಾನೂನು ಮಾಡಿದರೆ ನಾವು ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂದರು.

ಗ್ರಾ.ಪಂ ಸದಸ್ಯರಿಂದ ಎಸ್ಸಿ ಸೌಲಭ್ಯ ದುರುಪಯೋಗ: ಕೂಸಪ್ಪರವರು ಮಾತನಾಡಿ ಆರ್ಯಾಪು ಗ್ರಾಮದ ಕುರಿಯ ಒಟೆತ್ತಿಮಾರುವಿನಲ್ಲಿ ಪರಿಶಿಷ್ಟ ಜಾತಿಯವರಿಗೆ ನೀಡಿದ ಸೋಲಾರ್ ಸೌಲಭ್ಯವನ್ನು ಗ್ರಾ.ಪಂ ಸದಸ್ಯರೋರ್ವರು ತಮ್ಮ ಮನೆಗೆ ಅಳವಡಿಸಿ ದುರುಪಯೋಗ ಮಾಡಿದ್ದಾರೆ. ಈ ಕುರಿತು ಗ್ರಾ.ಪಂ ಸದಸ್ಯರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತಾಯಿಸಿದರು. ಅದೇ ಗ್ರಾ.ಪಂ ಸದಸ್ಯರು ವಾರ್ಡ್ ಸಭೆಯಲ್ಲಿ ತಪ್ಪು ಮಾಹಿತಿ ಕೊಡುತ್ತಾರೆ ಎಂದರು.

ಸಬ್‌ರಿಜಿಸ್ಟ್ರಾರ್ ಕಚೇರಿ ಸ್ಥಳವನ್ನು ಅಂಬೇಡ್ಕರ್ ಭವನಕ್ಕೆ ಮೀಸಲಿಡಿ: ಇಲ್ಲಿನ ಸಬ್‌ರಿಸ್ಟ್ರಾರ್ ಕಚೇರಿಯನ್ನು ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರಿಸಲಾಗುವುದು ಎಂದು ಎಲ್ಲರಿಗೂ ತಿಳಿದ ವಿಚಾರ. ಹಿಂದಿನ ಜಿಲ್ಲಾಧಿಕಾರಿಯವರು ಸಬ್‌ರಿಜಿಸ್ಟ್ರಾರ್ ಕಚೇರಿ ಸ್ಥಳವನ್ನು ಸರಕಾರಿ ಆಸ್ಪತ್ರೆಯ ಹೆಸರಿಗೆ ವರ್ಗಾಯಿಸಿದ್ದಾರೆ. ಆದರೆ ಸರಕಾರಿ ಆಸ್ಪತ್ರೆಗೆ ಈಗಾಗಲೆ ಬೇಕಾದಷ್ಟು ಸ್ಥಳಾವಕಾಶವಿದೆ. ಈ ನಿಟ್ಟಿನಲ್ಲಿ ನಮಗೆ ಪುತ್ತೂರು ನಗರದ ಹೃದಯ ಭಾಗದಲ್ಲೇ ಅಂಬೇಡ್ಕರ್ ಭವನಕ್ಕೆ ಜಾಗ ನೀಡಬೇಕಾಗಿ ಕೂಸಪ್ಪ ವಿನಂತಿಸಿದರು.

ದಲಿತ ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿರುವ ಬೆಳ್ಳಾರೆ ಕಾಲೇಜು ಕೇಸರಿ ಶಾಲು: ಬೆಳ್ಳಾರೆ ಕಾಲೇಜಿನಲ್ಲಿ ಕೇಸರಿ ಶಾಲು ಹಾಕುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲಿ ದಲಿತ ವಿದ್ಯಾರ್ಥಿಗಳೂ ಕೇಸರಿ ಶಾಲು ಹಾಕತೊಡಗಿದ್ದಾರೆ. ಇದೊಂದು ದಲಿತ ವಿದ್ಯಾರ್ಥಿಗಳ ದಾರಿ ತಪ್ಪಿಸುವ ಷಡ್ಯಂತ್ರವಾಗಿದೆ. ಈ ನಿಟ್ಟಿನಲ್ಲಿ ದಲಿತ ಮಕ್ಕಳು ಕೋಮು ಭಾವನೆಗೆ ಒಳಗಾಗದಂತೆ ಎಚ್ಚರಿಕೆ ವಹಿಸುವಂತೆ ಕೂಸಪ್ಪರವರು ಎಸ್ಪಿಗೆ ಮನವಿ ಮಾಡಿದರು.

ಚಕ್ರವರ್ತಿ ಸೂಲಿಬೆಲೆಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ: ಬೆಳ್ತಂಗಡಿಯ ಶ್ರೀಧರ್‌ರವರು ಮಾತನಾಡಿ ದಲಿತರ ಸ್ವಾಮ್ಯಕ್ಕಾಗಿ ಉಡುಪಿ ಚಲೋ ಕಾರ‍್ಯಕ್ರಮ ಮಾಡಿದಾಗ ಸಾಮಾಜಿಕ ಜಾಲತಾಣದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಉಡುಪಿ ಮಲೀನಗೊಂಡಿದೆ. ಇದನ್ನು ಸ್ವಚ್ಛ ಮಾಡಲು ನಮ್ಮೊಂದಿಗೆ ಸಹಕರಿಸುವಿರಾ ಎಂದು ಬರೆದಿದ್ದರು. ಮಾರನೆ ದಿನ ದಲಿತರು ನಡೆದು ಉಡುಪಿ ಮಲೀನವಾಗಿದೆ ಎಂದು ಬರೆದಿದ್ದಾರೆ. ಇದರ ಅರ್ಥ ನಮ್ಮನ್ನು ಅಸ್ಪಶ್ಯತೆ ಮಾಡಿದಂತೆ ಈ ಕುರಿತು ಅವರ ಮೇಲೆ ಅಟ್ರಾಸಿಟಿ ಕೇಸು ಹಾಕಬೇಕು. ಕನಕ ನಡಿಗೆಗೆ ಅವಕಾಶ ನೀಡದಿದ್ದರೂ ಕಾನೂನು ಉಲ್ಲಂಸಿ ಅವರು ಸರಕಾರವನ್ನು ಚಾಲೆಂಜ್ ಆಗಿ ಕಾರ‍್ಯಕ್ರಮ ನಡೆಸಿದ್ದಾರೆ. ಇದು ದಲಿತ ದೌರ್ಜನ್ಯ ಅಲ್ಲವೆ ಎಂದು ನನ್ನ ಪ್ರಶ್ನೆ ಎಂದರು.

ಪೇಜಾವರ ಸಾಮೀಜಿಗೆ ಅಸ್ಪಶ್ಯತೆ ಕುರಿತು ಮಾತನಾಡುವ ಹಕ್ಕಿಲ್ಲ: ಬೇರೆ ಬೇರೆ ದಲಿತ ಕಾಲೋನಿಗೆ ಹೋಗಿ ಅಸ್ಪಶ್ಯತೆ ನಿವಾರಣೆ ಮಾಡುತ್ತೇನೆ ಎಂದು ಹೇಳುವ ಪೇಜಾವರ ಶ್ರೀಗಳು ಹುಟ್ಟೂರಾದ ರಾಮಕುಂಜದಲ್ಲಿ ಅಸ್ಪಶ್ಯತೆಯನ್ನು ಎಷ್ಟು ನಿವಾರಣೆ ಮಾಡಿದ್ದಾರೆ ಎಂದು ದಲಿತ ಸದಸ್ಯರೋರ್ವರು ಪ್ರಶ್ನೆ ಮಾಡಿದರು.

ಪತ್ರಕರ್ತನೆಂದು ಹೇಳುವ ಇಬ್ಬತ್ತುಲ್ಲ ಪತ್ತೆ ಮಾಡಿಲ್ಲ: ತಾನು ಪತ್ರಕರ್ತ ಎಂದು ಹೇಳಿಕೊಂಡಿರುವ ಇಬ್ಬತ್ತುಲ್ಲ ಎಂಬಾತನ ಮೇಲೆ ವಾರಂಟ್ ಮತ್ತು ಹಲವು ಪ್ರಕರಣಗಳಿದ್ದರೂ ಆತನನ್ನು ಪೊಲೀಸರು ಬಂಧಿಸುತ್ತಿಲ್ಲ ಯಾಕೆ ಎಂದು ಪದ್ಮನಾಭ ಅಳಿಕೆಯವರು ಪ್ರಶ್ನಿಸಿದರು. ಉತ್ತರಿಸಿದ ಎಸ್ಪಿಯವರು ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್ ಕುಲಕರ್ಣಿಯವರಿಗೆ ನೋಟ್ ಮಾಡುವಂತೆ ತಿಳಿಸಿದರು.

ಬಂಟ್ವಾಳದಲ್ಲಿ ಟ್ರಾಫಿಕ್ ಸಮಸ್ಯೆ: ವಿಶ್ವನಾಥ ಬಂಟ್ವಾಳರವರು ಮಾತನಾಡಿ ಬಂಟ್ವಾಳ ಪೇಟೆಯಲ್ಲಿ ೧೦ ಚಕ್ರದ ಲಾರಿಗಳ ಅಟ್ಟಹಾಸದಿಂದ ಪೇಟೆಯಲ್ಲಿ ಸಂಚಾರಕ್ಕೆ ತೊಂದರೆ ಆಗಿದೆ. ಶಾಲಾ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಆಗುತ್ತಿಲ್ಲ ಎಂದು ಹೇಳಿದರು. ವ್ಯಕ್ತಿಯೋರ್ವರು ಪುತ್ತೂರು ಪುರಭವನಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ ಎಂದರು. ಶೇಷಪ್ಪ ನೆಕ್ಕಿಲುರವರು ಮಾತನಾಡಿ ಎಸ್ಸಿ. ಎಸ್ಟಿ ಮೀಸಲಾತಿ ಜಾಸ್ತಿ ಮಾಡಲು ಮನವಿ ಮಾಡಿದರು.  ಗಿರಿಧರ ನಾಯ್ಕರವರು ಮಾತನಾಡಿ ನೆಲ್ಯಾಡಿಯ ಮಹಿಳೆಯೋರ್ವರು ಬಸವವಸತಿ ಯೋಜನೆಯ ಫಲಾನುಭವಿಯಾಗಿದ್ದರೂ ಪ್ರಭಾವಿ ವ್ಯಕ್ತಿ ಯೋರ್ವರು ಮನೆ ಕಟ್ಟಲು ತೊಂದರೆ ಕೊಡುತ್ತಿದ್ದಾರೆ ಎಂದರು. ಈ ಕುರಿತು ಎಸ್ಪಿಯವರು ಮಾತನಾಡಿ ಗ್ರಾಮಾಂತರ ಸರ್ಕಲ್ ಕುಲಕರ್ಣಿಯವರಲ್ಲಿ ವಿಚಾರಣೆ ಮಾಡಲು ತಿಳಿಸಿದರು. ದಲಿತ ಹೆಣ್ಣು ಮಕ್ಕಳು ಕಾಣೆಯಾಗಿರುವ ಕುರಿತು ತನಿಖೆ ನಡೆಸುವಂತೆ ಮಹಿಳೆಯೋರ್ವರು ಸಭೆಯಲ್ಲಿ ತಿಳಿಸಿದರು. ಬೆಳ್ತಂಗಡಿಯ ಶ್ರೀಧರ್‌ರವರು ಮಾತನಾಡಿ ಪರಿಶಿಷ್ಟ ಜಾತಿಯ ಯುವತಿಯೋರ್ವರು ನರ್ಸಿಂಗ್‌ಗೆ ಅರ್ಜಿ ಸಲ್ಲಿಸಿದರೆ ಸಮಾಜಕಲ್ಯಾಣ ಇಲಾಖೆ ಇಲ್ಲಸಲ್ಲದ ದಾಖಲೆ ಕೇಳುತ್ತಿದೆ ಎಂದರು. ಕೆದಂಬಾಡಿ ದಲಿತರ ಐದಾರು ಮನೆಗಳಿಗೆ ದಾರಿ ಇಲ್ಲ ಎಂದು ಸಭೆಯಲ್ಲಿ ವ್ಯಕ್ತಿಯೋರ್ವ ತಿಳಿಸಿದರು. ವೇದಿಕೆಯಲ್ಲಿ ಸಿಡಿಪಿಒ ಶಾಂತಿ ಹೆಗ್ಡೆ, ಸಮಾಜ ಕಲ್ಯಾಣ ಇಲಾಖೆಯ ಅನ್ನಪೂರ್ಣೇಶ್ವರಿ ಮತ್ತು ಕಂದಾಯ ವಿಭಾಗದ ಅಧಿಕಾರಿ ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆ ಮೇಲಿನ ಗೌರವಕ್ಕೆ ಧನ್ಯವಾದಗಳು

ಎಸ್ಪಿ ಭೂಷನ್ ಜಿ ಗುಲಾಬ್ ರಾವ್ ಬೊರಸೆಯವರು ಸಭೆಯ ಕೊನೆಯಲ್ಲಿ ಮಾತನಾಡಿ ಪೊಲೀಸ್ ಇಲಾಖೆ ಮೇಲಿನ ಗೌರವಕ್ಕೆ ಧನ್ಯವಾದಗಳು ಎಂದು ಹೇಳಿದರು. ಇವತ್ತಿನ ಸಭೆಯಲ್ಲಿ ೫೦ ಮನೆಗಳಿಗೆ ರೋಡ್ ಇಲ್ಲದು ಟಾಪ್ ಪ್ರೇರಿಟಿ. ಈ ಕುರಿತು ಜಿಲ್ಲಾಧಿಕಾರಿಯವರಲ್ಲಿ ಮಾತನಾಡುತ್ತೇನೆ. ಕಡೇಶಿವಾಲಯದಲ್ಲಿ ಅಕ್ರಮ ಮದ್ಯಕ್ಕೆ ರೈಡ್ ಆಗಿಲ್ಲ ಎಂದು ಹೇಳಿದ್ದೀರಿ. ಮುಂದಿನ ತಿಂಗಳ ಸಭೆಯಲ್ಲಿ ಎಷ್ಟು ರೈಡ್ ಆಗಿದೆ ಎಂಬ ಮಾಹಿತಿ ನೀಡುತ್ತೇನೆ. ಲಿಕ್ಕರ್ ಸಮಸ್ಯೆ ವೇರಿ ಕಾಂಪ್ಲಿಕೇಟ್ ಇಶ್ಯೂ. ಒಂದು ಕಡೆ ಕೇಸ್ ಮಾಡಲು ಹೇಳುತ್ತೀರಿ. ಆದರೆ ಅಬಕಾರಿ ಇಲಾಖೆಗೆ ಒಂದು ಕಡೆ ಟಾರ್ಗೆಟ್ ಕೂಡಾ ಇದೆ. ಬ್ಯಾನ್ ಮಾಡೋದು ದೊಡ್ಡ ವಿಚಾರ. ಆದರೆ ಕುಡಿಯುವುದನ್ನು ಕಡಿಮೆ ಮಾಡಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು. ಮುಂದಿನ ಮೀಟಿಂಗ್‌ನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಳ್ಳುತ್ತೇನೆ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.