Breaking News

13ರಲ್ಲಿ ಇರುವುದು 4 ಮಂದಿ ಮಾತ್ರ- ಕಾಣಿಯೂರು ಪ್ರಾ.ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಸೇರಿ 9ಹುದ್ದೆ ಖಾಲಿ

Puttur_Advt_NewsUnder_1
Puttur_Advt_NewsUnder_1

kaniyooru

ವಿಶೇಷ ವರದಿ: ಸುಧಾಕರ ಆಚಾರ್ಯ ಕಾಣಿಯೂರು

ಖಾಯಂ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕರಿಗೆ ಪೂರ್ಣ ಸೌಲಭ್ಯ ಸಿಗದಂತಾದ ಪರಿಸ್ಥಿತಿ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣವಾಗಿದೆ. ಸುಸಜ್ಜಿತ ಆಸ್ಪತ್ರೆಯನ್ನು ಹೊಂದಿರುವ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ಖಾಯಂ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಇನ್ನೂ ನೇಮಕಗೊಳಿಸದೆ ಸೌಕರ್ಯವಿದ್ದರೂ ಬಳಸಲಾಗದ ಸ್ಥಿತಿಯಲ್ಲಿದ್ದಾರೆ. ಕಾಣಿಯೂರು, ಬೆಳಂದೂರು ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಈ ಆಸ್ಪತ್ರೆ ಅನಿವಾರ್ಯವಾಗಿದ್ದರೂ ಖಾಯಂ ವೈದ್ಯರಿಲ್ಲ, ಜತೆಗೆ ಸಿಬ್ಬಂದಿ ಕೊರತೆಯೂ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಠಿಸಿದೆ.

13 ಹುದ್ದೆಗಳ ಪೈಕಿ 9 ಹುದ್ದೆಗಳು ಖಾಲಿಯಾಗಿರುವುದರಿಂದ ಆರೋಗ್ಯ ಸೇವೆಯಲ್ಲಿ ಹಿನ್ನಡೆಯಾಗಿ ದೋಳ್ಪಾಡಿ, ಚಾರ್ವಾಕ, ಬರೆಪ್ಪಾಡಿಯಲ್ಲಿ ಉಪಕೇಂದ್ರಗಳನ್ನು ಹೊಂದಿರುವ ಈ ಆಸ್ಪತ್ರೆಯು ದೋಳ್ಪಾಡಿ ಮತ್ತು ಬರೆಪ್ಪಾಡಿಯಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಉಪಕೇಂದ್ರದಲ್ಲಿಯೂ ಕೂಡ ಸಿಬ್ಬಂದಿಗಳ ಕೊರತೆಯಿರುವುದು ಮತ್ತೊಂದು ಸಮಸ್ಯೆಯಾಗಿದೆ. ಆದರೆ ಚಾರ್ವಾಕದಲ್ಲಿ ಕಟ್ಟಡದ ವ್ಯವಸ್ಥೆ ಇಲ್ಲ, ಸಿಬ್ಬಂದಿಯೂ ಇಲ್ಲದಿರುವುದು ಮತ್ತಷ್ಟೂ ಸಮಸ್ಯೆಯಾಗಿ ಪರಿಣಮಿಸಿದೆ.

ಪ್ರಭಾರ ವೈದ್ಯಾಧಿಕಾರಿಗಳು ವಾರದ ಮೂರು ದಿವಸ ಕಾಣಿಯೂರಿನಲ್ಲಿ ಲಭ್ಯ … :

ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿದ್ದ ದೀಪಕ್ ರೈಯವರು ಪಾಲ್ತಾಡಿಯ ಮಂಜುನಾಥನಗರಕ್ಕೆ ವರ್ಗಾವಣೆಗೊಂಡಿದ್ದು ಕಾಣಿಯೂರಿನಲ್ಲಿ ಪ್ರಭಾರ ವೈದ್ಯಾಧಿಕಾರಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅದು ಕೂಡ ವಾರದ ಮೂರು ದಿವಸ ಪಾಲ್ತಾಡಿಯ ಮಂಜುನಾಥನಗರದಲ್ಲಿ ಇದ್ದರೆ ಮಂಗಳವಾರ, ಗುರುವಾರ, ಶನಿವಾರ ಕಾಣಿಯೂರಿನಲ್ಲಿ ಇರುತ್ತಾರಂತೆ. ತಿಂಗಳಲ್ಲಿ ಕನಿಷ್ಠ 5, 6 ಬಾರಿ ನಡೆಯುವ ಮೀಟಿಂಗ್, ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಾಗುತ್ತದೆ. ಅಲ್ಲದೇ ಇಲಾಖೆಯ ವತಿಯಿಂದ ನಡೆಯುವ ರಾಷ್ಟ್ರೀಯ ಕಾರ್ಯಕ್ರಮಗಳು, ಕಾಲ ಕಾಲಕ್ಕೆ ಬರುವ ಸಾಂಕ್ರಾಮಿಕ ರೋಗಗಳ ಮಾಹಿತಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ರೋಗಿಗಳ ಸಂದರ್ಶನಕ್ಕಾಗಿ ಇಲ್ಲಿಯ ವೈದ್ಯಾಧಿಕಾರಿಯವರು ಸಿಗುವುದು ಅಪರೂಪವಾಗಲಿದೆ.

ಉತ್ತಮ ಕಟ್ಟಡ ಹೊಂದಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 13 ಹುದ್ದೆ ಮಂಜೂರಾಗಿದ್ದರೂ ಇರುವುದು 4 ಸಿಬ್ಬಂದಿಗಳು ಮಾತ್ರ.

ಮೂರು ಉಪಕೇಂದ್ರ

ಕಾಣಿಯೂರು ಪ್ರಾಥಮಿಕ ಕೇಂದ್ರಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ಉಪಕೇಂದ್ರಗಳಿವೆ. ದೋಳ್ಪಾಡಿ ಮತ್ತು ಬರೆಪ್ಪಾಡಿಯಲ್ಲಿ ಸ್ವಂತ ಕಟ್ಟಡದ ವ್ಯವಸ್ಥೆ ಇದೆ, ಚಾರ್ವಾಕದಲ್ಲಿ ಸ್ವಂತ ಕಟ್ಟಡ ವ್ಯವಸ್ಥೆಯಿಲ್ಲ.

ಖಾಲಿಯಿರುವ ಹುದ್ದೆಗಳು …

ವೈದ್ಯಾಧಿಕಾರಿ-1, ಪ್ರಥಮ ದರ್ಜೆ ಸಹಾಯಕ-1, ಫಾರ್ಮಾಸಿಸ್ಟ್-1, ಪ್ರಥಮ ದರ್ಜೆ ಸಹಾಯಕ-1, ಕಿರಿಯ ಆರೋಗ್ಯ ಸಹಾಯಕಿ -2, ಕಿರಿಯ ಆರೋಗ್ಯ ಸಹಾಯಕ-2, ಔಷಧ ವಿತರಕ ಹುದ್ದೆ-1.

ಒತ್ತಡಗಳ ಮೇಲೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ – ಡಾ| ದೀಪಕ್ ರೈ:

ಪಾಲ್ತಾಡಿಯ ಮಂಜುನಾಥನಗರ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಕಾಣಿಯೂರಿನಲ್ಲಿ ವಾರದ ಮೂರು ದಿವಸ ಪ್ರಭಾರ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಅದರಲ್ಲೂ ತಿಂಗಳಲ್ಲಿ 5, 6 ಮೀಟಿಂಗ್‌ಗಳಿಗೆ ಕಡ್ಡಾಯವಾಗಿ ಭಾಗವಹಿಸಬೇಕಾಗುತ್ತದೆ. ಅಲ್ಲದೇ ಕಾಲ ಕಾಲಕ್ಕೆ ಬರುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ಮಾಹಿತಿ ಶಿಬಿರ, ರಾಷ್ಟ್ರೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಸಿಬ್ಬಂದಿಗಳ ಹುದ್ದೆ ಖಾಲಿಯಿರುವುದರಿಂದ ತುಂಬಾ ಸಮಸ್ಯೆ ಉಂಟಾಗಿದೆ. ಒಟ್ಟಿನಲ್ಲಿ ಒತ್ತಡಗಳ ಮೇಲೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ| ದೀಪಕ್ ರೈಯವರು ಪ್ರತಿಕ್ರಿಯಿಸಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ನೇಮಕಗೊಳಿಸಲು ಸರಕಾರ ಕ್ರಮಕೈಗೊಳ್ಳಬೇಕು- ಡಾ| ಅಶೋಕ್ ರೈ:

ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಸಮಸ್ಯೆ ಇಲ್ಲಿ ಮಾತ್ರವಲ್ಲ. ಹೆಚ್ಚಿನ ಆರೋಗ್ಯ ಕೇಂದ್ರದಲ್ಲಿಯೂ ಇದೆ. ಖಾಯಂ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಯವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಗೊಳಿಸಲು ಸರಕಾರ ಕ್ರಮಕೈಗೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್ ಕುಮಾರ್ ರೈ ಪ್ರತಿಕ್ರಿಯಿಸಿದ್ದಾರೆ.

ಜನತೆಯ ಅನುಕೂಲಕ್ಕಾಗಿ ಮೇಲ್ದರ್ಜೆಗೇರಿಸುವುದು ಅತ್ಯಂತ ಅವಶ್ಯಕ-ಗೋಪಾಲಕೃಷ್ಣ ಪಟೇಲ್ ಚಾರ್ವಾಕ:

ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಸುಪಾಸಿನ ಜನತೆಯ ಅನುಕೂಲಕ್ಕಾಗಿ ಮೇಲ್ದರ್ಜೆಗೇರಿಸುವುದು ಅತ್ಯಂತ ಅವಶ್ಯಕ. ಪ್ರಕೃತ ಡಾ| ದೀಪಕ್ ರೈಯವರ ವರ್ಗಾವಣೆಯಿಂದಾಗಿ ವೈದ್ಯಾಧಿಕಾರಿ ಹಾಗೂ ಇತರ ಹುದ್ದೆಗಳು ಖಾಲಿಯಾಗಿದ್ದು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ತುರ್ತು ಗಮನಹರಿಸಿ ಜನಹಿತವನ್ನು ಬಯಸಿ ಕಾರ್ಯೋನ್ಮುಖರಾಗಬೇಕೆಂದು ಸುತ್ತಮುತ್ತಲಿನ ಜನತೆಯ ಒಕ್ಕೊರಳ ಬೇಡಿಕೆ. ಅದೇ ರೀತಿ ದೋಳ್ಪಾಡಿ ಮತ್ತು ಚಾರ್ವಾಕ ಗ್ರಾಮಗಳಿಗೆ ಕಿರಿಯ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿಯಿದ್ದು ಕೂಡಲೇ ಭರ್ತಿ ಮಾಡದಿದ್ದಲ್ಲಿ ಹೋರಾಟ ನಡೆಸುವ ಬಗ್ಗೆ ಇಲ್ಲಿನ ನಾಗರೀಕರು ಕಾರ್ಯಪ್ರವೃತ್ತರಾಗುವ ದಿನ ದೂರವಿಲ್ಲ ಎಂದು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್‌ರವರು ಹೇಳಿದ್ದಾರೆ.

ಖಾಯಂ ವೈದ್ಯರು, ಸಿಬ್ಬಂದಿಗಳ ನೇಮಕಕ್ಕೆ ಕ್ರಮಕೈಗೊಳ್ಳುವ ಅಗತ್ಯವಿದೆ- ಪ್ರದೀಪ್ ಆಚಾರ್ಯ ಮಠತ್ತಾರು:

ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರ ಅನುಕೂಲಕ್ಕಾಗಿ ಸುಸಜ್ಜಿತ ಕಟ್ಟಡದ ವ್ಯವಸ್ಥೆಯಿದ್ದರೂ ವೈದ್ಯರ ಸಹಿತ ಸಿಬ್ಬಂದಿ ಹುದ್ದೆಗಳು ಖಾಲಿಯಿರುವುದು ಬೇಸರದ ಸಂಗತಿ. ಇಲ್ಲಿ ಖಾಯಂ ವೈದ್ಯರು ಇದ್ದರೆ ಮಾತ್ರ ರೋಗಿಗಳ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಖಾಯಂ ವೈದ್ಯರ ಸಹಿತ ಖಾಲಿ ಇರುವ ಎಲ್ಲಾ ಸಿಬ್ಬಂದಿ ವರ್ಗದವರನ್ನು ನೇಮಕಗೊಳಿಸಲು ಕ್ರಮಕೈಗೊಳ್ಳಬೇಕೆಂದು ಕಾಣಿಯೂರು ವಿಶ್ವಜ್ಞ ಯುವಕ ಮಂಡಲದ ಅಧ್ಯಕ್ಷ ಪ್ರದೀಪ್ ಆಚಾರ್ಯ ಮಠತ್ತಾರು ಹೇಳಿದ್ದಾರೆ.

ಸಣ್ಣ ಪುಟ್ಟ ಖಾಯಿಲೆಗಳಿಗೂ ಪುತ್ತೂರಿಗೆ ಹೋಗಬೇಕಾದ ಅನಿವಾರ್ಯತೆ-ರಾಮಣ್ಣ ಗೌಡ ಮುಗರಂಜ:

ಕಾಣಿಯೂರು ಈ ಭಾಗದ ಹತ್ತಾರು ಗ್ರಾಮಗಳಿಗೆ ಕೇಂದ್ರ ಸ್ಥಳವಾಗಿದೆ. ಈ ಭಾಗದ ಬಡ ರೋಗಿಗಳು ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಆದರೆ ಇಲ್ಲಿ ಮುಖ್ಯವಾಗಿ ವೈದ್ಯಾಧಿಕಾರಿ, ಸಿಬ್ಬಂದಿಗಳ ಕೊರತೆ ಇದೆ ಮತ್ತು ಸರಿಯಾದ ಔಷಧಿ ಇಲ್ಲ. ಸಣ್ಣ ಪುಟ್ಟ ಖಾಯಿಲೆಗಳಿಗೂ ಪುತ್ತೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಇಲ್ಲಿಗೆ ಖಾಯಂ ವೈದ್ಯಾಧಿಕಾರಿಗಳ ನೇಮಕ ಮತ್ತು ಹೆಚ್ಚಿನ ಸಿಬ್ಬಂದಿಗಳ ನೇಮಕವಾಗಬೇಕಾಗಿದೆ. 108 ಅಂಬುಲೆನ್ಸ್ ಕೂಡ ಇಲ್ಲಿನ ಮುಖ್ಯ ಬೇಡಿಕೆಯಾಗಿದೆ ಎಂದು ಕಾಣಿಯೂರು ಗ್ರಾ.ಪಂ ಸದಸ್ಯ ರಾಮಣ್ಣ ಗೌಡ ಮುಗರಂಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖಾಯಂ ವೈದ್ಯರ ನೇಮಕಕ್ಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸಿಕೊಡಲಾಗಿದೆ- ಜಯಂತ್ ಅಬೀರ:

ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲದೇ ಇರುವುದರಿಂದ ಈ ಭಾಗದ ಜನರಿಗೆ ತುಂಬಾ ತೊಂದರೆಯಾಗಿದೆ. ಇಲ್ಲಿಗೆ ಕೇವಲ ವೈದ್ಯರ ನೇಮಕ ಮಾತ್ರವಲ್ಲ ರಕ್ತ ಪರೀಕ್ಷೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ, ಸಿಬ್ಬಂದಿಗಳ ವ್ಯವಸ್ಥೆ, ೧೦೮ ಇದರ ವ್ಯವಸ್ಥೆಯಾಗಬೇಕಾಗಿದೆ. ಖಾಯಂ ವೈದ್ಯರನ್ನು ನೇಮಕ ಮಾಡುವಂತೆ ಬೆಳಂದೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸಂಬಂಧ ಪಟ್ಟ ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ತುರ್ತು ಕ್ರಮಕೈಗೊಂಡು ಈ ಭಾಗದ ಜನರ ಬೇಡಿಕೆ ಈಡೇರಿಸುವುದು ಅತೀ ಅಗತ್ಯವಾಗಿದೆ ಎಂದು ಬೆಳಂದೂರು ಗ್ರಾ.ಪಂ ಸದಸ್ಯ ಜಯಂತ ಅಬೀರರವರು ತಿಳಿಸಿದ್ದಾರೆ.

ವೈದ್ಯರ, ಸಿಬ್ಬಂದಿಗಳ ಕೊರತೆಯಿಂದಾಗಿ ಸಮರ್ಪಕ ಸೇವೆ ದೊರೆಯುತ್ತಿಲ್ಲ – ನಾರಾಯಣ ಭಟ್ ಕಾಣಿಯೂರು:

ಸರಕಾರಿ ಆಸ್ಪತ್ರೆ, ಸರಕಾರಿ ಶಾಲೆಗಳ ಕಡೆ ಜನರು ಒಲವು ತೋರುತ್ತಿಲ್ಲ ಎಂಬುದು ಎಲ್ಲೆಡೆ ಕೇಳಿಬರುವ ಮಾತು. ಆದರೆ ಕಾಣಿಯೂರು ಇದಕ್ಕೆ ಹೊರತಾಗಿದೆ. ಇಲ್ಲಿನ ಸರಕಾರಿ ಶಾಲೆಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ, ಸರಕಾರಿ ಆಸ್ಪತ್ರೆಗೂ ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳು ಹೋಗುತ್ತಿದ್ದಾರೆ. ಆದರೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ವರ್ಗಾವಣೆ ಮತ್ತು ಇತರ ಸಿಬ್ಬಂದಿಗಳ ಕೊರತೆಯಿಂದಾಗಿ ಇತ್ತೀಚೆಗೆ ಇಲ್ಲಿ ಸಮರ್ಪಕ ಸೇವೆ ದೊರೆಯುತ್ತಿಲ್ಲ ಎಂಬುದು ಜನರ ಅಭಿಪ್ರಾಯ. ಸಂಬಂಧ ಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ತಕ್ಷಣ ಈ ಸಮಸ್ಯೆಯನ್ನು ಪರಿಹರಿಸುವ ವ್ಯವಸ್ಥೆ ಮಾಡಿದಲ್ಲಿ ಬಡರೋಗಿಗಳಿಗೂ ಅನುಕೂಲವಾದೀತು, ಮಾತ್ರವಲ್ಲ ಸರಕಾರಿ ಆಸ್ಪತ್ರೆಯ ಬಗೆಗಿನ ಇಲ್ಲಿನ ವಿಶ್ವಾಸ ಉಳಿದೀತು ಎಂದು ನಾರಾಯಣ ಭಟ್ ಕಾಣಿಯೂರುರವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಎರಡು ಗ್ರಾಮ ಪಂಚಾಯತ್ ವ್ಯಾಪ್ತಿಗಳಿಗೆ ಒಳಪಟ್ಟಿದ್ದು 6 ಗ್ರಾಮಗಳಲ್ಲಿ ಒಟ್ಟು 13 ಸಾವಿರ ಜನಸಂಖ್ಯೆಯಿರುವ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ವೈದ್ಯರ ಸಹಿತ ಎಲ್ಲಾ ಹುದ್ದೆಗಳೂ ಭರ್ತಿಯಾಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ಧರ್ಜೆಗೇರಿಸಬೇಕು, ಜೊತೆಗೆ ಆರೋಗ್ಯ ಕವಚ – 108 ರ ವ್ಯವಸ್ಥೆಯನ್ನೂ  ಅಗತ್ಯವಾಗಿ ಕಲ್ಪಿಸಿಕೊಡಬೇಕೆಂಬ ಸಾರ್ವಜನಿಕರ ಕೂಗು ಬಲವಾಗಿ ಕೇಳಿ ಬರುತ್ತಿದೆ.

ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು

ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಸೌಲಭ್ಯ ಹಾಗೂ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ವಿಚಾರವಾಗಿ ಹಿಂದೆ ನಾನು ತಾಲೂಕು ಪಂಚಾಯತ್ ಉಪಾಧ್ಯಕ್ಷೆಯಾಗಿರುವ ಸಂದರ್ಭದಲ್ಲಿಯೇ ನಿರ್ಣಯಮಾಡಿ ಸರಕಾರಕ್ಕೆ ಕಳುಹಿಸಲಾಗಿತ್ತು. ಖಾಯಂ ವೈದ್ಯರ ನೇಮಕ ಹಾಗೂ ಸಿಬ್ಬಂದಿಗಳ ಕೊರತೆಯ ಕುರಿತು ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಯವರ ಗಮನಕ್ಕೆ ತಂದಿರುತ್ತೇನೆ. ಮುಂದಿನ ದಿವಸಗಳಲ್ಲಿ ಇಲ್ಲಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಬೆಳಂದೂರು ಜಿ.ಪಂ ಕ್ಷೇತ್ರದ ಸದಸ್ಯೆ ಪ್ರಮೀಳಾ ಜನಾರ್ದನರವರು ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.