Breaking News

‘ನಿರ್ಣಯಗಳಿಗೆ ಸ್ಪಂದನೆ ಇಲ್ಲವಾದರೆ ಸಭೆಗೆ ಬರುವುದ್ಯಾಕೆ’ ಬಡಗನ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ

Puttur_Advt_NewsUnder_1
Puttur_Advt_NewsUnder_1

21

* ಕೃಷಿಗಾಗಿ ಕೊಳವೆ ಬಾವಿ ಅವಕಾಶ ನೀಡಿ * ಪಡುವನ್ನೂರು ಗ್ರಾಮಕರಣಿಕರನ್ನು ನೇಮಿಸಿ
ದರೋಡೆಕೋರರನ್ನು ಬಂಧಿಸಿ ಬಡಗನ್ನೂರು ಗ್ರಾಮದ ಪಾದೆಕರ್ಯ ಎಂಬಲ್ಲಿ ಅ.25ರಂದು ದರೋಡೆಕೋರರು ಹಾಡಹಗಲೇ ಒಂಟಿ ಮನೆಗೆ ಬಂದು ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ಕಟ್ಟಿ ಹಾಕಿ ನಗದು, ಚಿನ್ನ ದರೋಡೆ ನಡೆಸಿರುವ ಘಟನೆ ಇಡೀ ಗ್ರಾಮವನ್ನು ಬೆಚ್ಚಿ ಬೀಳಿಸಿದೆ. ಇಂತಹ ಘಟನೆ ಮರುಕಳಿಸಬಾರದು ಹಾಗಾಗಿ ಪೊಲೀಸರು ದರೋಡೆಕೋರರನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. ಸಂಪತ್ತು, ಆಸ್ತಿ ಇರುವವರು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ಮನೆಗಳಿಗೆ ಸಿ.ಸಿ ಕ್ಯಾಮರಾ ಅಳವಡಿಸುವುದು ಸೂಕ್ತ ಎಂದು ಕೆಲವು ಸದಸ್ಯರು ಸಲಹೆ ನೀಡಿದರು. ಪಾದೆಕರ್ಯ ದರೋಡೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅಧ್ಯಕ್ಷ ಕೇಶವ ಗೌಡ ಕನ್ನಯ ಹೇಳಿದರು.
ಪುತ್ತೂರು: ಗ್ರಾಮ ಪಂಚಾಯತ್‌ನಿಂದ ನಿರ್ಣಯ ಮಾಡಿ ಕಳಿಸಿದ ಯಾವುದೇ ನಿರ್ಣಯಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ಸ್ಪಂದನೆ ದೊರಕುತ್ತಿಲ್ಲ, ಹಾಗಾಗಿ ನಿರ್ಣಯಗಳಿಗೆ ಬೆಲೆಯೇ ಇಲ್ಲದಂತಾಗಿದೆ, ಇದೇ ರೀತಿಯ ಪರಿಸ್ಥಿತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್ ಸಾಮಾನ್ಯ ಸಭೆಗೆ ಸದಸ್ಯರು ಬರುವ ಅವಶ್ಯಕತೆಯಾದರೂ ಏನು ಎಂದು ಸದಸ್ಯರು ಪ್ರಶ್ನಿಸಿ ಅಸಮಾಧಾನ ಸೂಚಿಸಿದ ಘಟನೆ ಬಡಗನ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆಯು ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ಕೇಶವ ಗೌಡ ಕನ್ನಯ ಅಧ್ಯಕ್ಷತೆಯಲ್ಲಿ ಅ.27ರಂದು ನಡೆಯಿತು.
ಸದಸ್ಯ ರವಿರಾಜ್ ರೈ ಸಜಂಕಾಡಿ ಮಾತನಾಡಿ ಇಲ್ಲಿಂದ ನಿರ್ಣಯ ಮಾಡಿ ಮೇಲಿನ ಇಲಾಖೆಗೆ ನಿರ್ಣಯಗಳನ್ನು ಕಳುಹಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಪಿಡಿಒ ಶಾರದಾ ಉತ್ತರಿಸಿ ಇಲ್ಲಿ ಆದ ಎಲ್ಲ ನಿರ್ಣಯಗಳನ್ನು ಸಂಬಂಧಪಟ್ಟವರಿಗೆ ಕಳುಹಿಸಲಾಗುತ್ತದೆ ಎಂದರು. ಹಾಗಾದರೆ ಕಳುಹಿಸಿದ ನಿರ್ಣಯಗಳು ಏನಾಗುತ್ತಿದೆ, ಅದಕ್ಕೆ ಏಕೆ ಮಾನ್ಯತೆ ದೊರಕುತ್ತಿಲ್ಲ ಎಂದು ರವಿರಾಜ್ ರೈ ಪ್ರಶ್ನಿಸಿದರು. ಇದೇ ರೀತಿಯಾದರೆ ನಾವು ಸಾಮಾನ್ಯ ಸಭೆಗೆ ಬರುವ ಅವಶ್ಯಕತೆಯೇನು ಎಂದು ಕೇಳಿದರು. ಬಹುತೇಕ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. ಕೆಲವು ಸದಸ್ಯರು ಮುಂದಿನ ಸಾಮಾನ್ಯ ಸಭೆಗೆ ಗೈರು ಹಾಜರಾಗುವುದಾಗಿಯೂ ಹೇಳಿದರು. ಸದಸ್ಯೆ ಹೇಮಲತಾ ಮಾತನಾಡಿ ಯಾವುದೇ ಮಹತ್ವದ ನಿರ್ಣಯಗಳಿಗೂ ಬೆಲೆ ಇಲ್ಲದಂತಾಗಿದೆ, ನಿರ್ಣಯಗಳು ಇಲ್ಲಿನ ಚರ್ಚೆಗೆ ಮಾತ್ರ ಸೀಮಿತವಾಗುತ್ತಿದೆ ಎಂದರು. ಅಧ್ಯಕ್ಷ ಕೇಶವ ಗೌಡ ಕನ್ನಯ ಮಾತನಾಡಿ ನಾವು ಸಂಬಂಧಪಟ್ಟವರಿಗೆ ಕಳುಹಿಸಿದ ನಿರ್ಣಯಗಳು ಏನಾಗುತ್ತದೆಂದು ತಿಳಿಯುತ್ತಿಲ್ಲ, ಹಾಗಾಗಿ ಅಭಿವೃದ್ದಿ ಕುಂಠಿತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಳವೆಬಾವಿಗೆ ಅವಕಾಶ ಬೇಕು: ಭವಿಷ್ಯದಲ್ಲಿ ನೀರಿನ ಅಭಾವದ ದೃಷ್ಟಿಯಿಂದ ಹೊಸ ಕೊಳವೆ ಬಾವಿ ಕೊರೆಯಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳ ಆದೇಶವಿದೆ, ಈ ಆದೇಶವನ್ನು ಬದಲಾವಣೆ ಮಾಡಬೇಕೆಂದು ಸದಸ್ಯರು ಆಗ್ರಹಿಸಿದರು. ನೂತನ ಆದೇಶದಿಂದ ಕೃಷಿಕರಿಗೆ ತೊಂದರೆಯುಂಟಾಗಲಿದೆ ಹಾಗಾಗಿ ಅಗತ್ಯಕ್ಕೆ ಅನುಸಾರವಾಗಿ ಕೊಳವೆ ಬಾವಿ ಕೊರೆಯಲು ಅವಕಾಶ ಒದಗಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕೊಳವೆ ಬಾವಿ ಕೊರೆಯಲು ಅವಕಾಶ ಕಲ್ಪಿಸುವಂತೆ ಸರಕಾರಕ್ಕೆ ಬರೆಯುವುದು ಸೂಕ್ತ ಎಂದು ಅಧ್ಯಕ್ಷರು ಹೇಳಿದರು. ಅದರಂತೆ ಸರಕಾರಕ್ಕೆ ಬರೆಯುವುದಾಗಿ ನಿರ್ಣಯ ಕೈಗೊಳ್ಳಲಾಯಿತು.
ಪಡುವನ್ನೂರಿಗೆ ಗ್ರಾಮ ಕರಣಿಕರನ್ನು ನೇಮಿಸಿ:ಪಡುವನ್ನೂರು ಗ್ರಾಮಕರಣಿಕರು ವರ್ಗಾವಣೆಯಾಗಿ ಕೆಲವು ತಿಂಗಳು ಕಳೆದರೂ ಇನ್ನೂ ಬದಲಿ ವ್ಯವಸ್ಥೆಯಾಗಿಲ್ಲ, ಇದರಿಂದಾಗಿ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ಸದಸ್ಯ ರವಿರಾಜ್ ರೈ ಮಾತನಾಡಿ ಪಡುವನ್ನೂರಿನಲ್ಲಿ 94ಸಿ ಅರ್ಜಿಗಳೆಲ್ಲವೂ ಹಾಗೆಯೇ ಇದೆ, ಅನಿಷ್ಠಾನಗೊಂಡಿಲ್ಲ ಎಂದು ಹೇಳಿದರು. ಬಳಿಕ ಗ್ರಾಮ ಕರಣಿಕರನ್ನು ನೇಮಿಸುವಂತೆ ಒತ್ತಾಯಿಸಿ ಸಂಬಂಧಪಟ್ಟವರಿಗೆ ಬರೆದುಕೊಳ್ಳುವುದಾಗಿ ನಿರ್ಣಯಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಬೇಬಿ.ಎಸ್, ಸದಸ್ಯರಾದ ಗುರುಪ್ರಸಾದ್ ರೈ ಕುದ್ಕಾಡಿ, ಬಾಲಕೃಷ್ಣ ಮುಂಡೋಳೆ, ದಾಮೋದರ ಆಚಾರ್ಯ ನೆಕ್ಕರೆ, ಜಯಕುಮಾರ್ ಶರಾವು, ಗೋಪಾಲಕೃಷ್ಣ ಸುಳ್ಯಪದವು, ಸುಶೀಲ, ಜಲಜಾಕ್ಷಿ, ಸವಿತಾ ಪದಡ್ಕ, ದೇವಕಿ, ಸವಿತಾ ಮಡ್ಯಾಲಮೂಲೆ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಗುಮಾಸ್ತ ಜಯಪ್ರಸಾದ್ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.