ಕೋಡಿಂಬಾಡಿ ರೈ ಎಸ್ಟೇಟ್‌ನಲ್ಲಿ ವಿಶಿಷ್ಟ ಶೈಲಿಯಲ್ಲಿ ದೀಪಾವಳಿ ಆಚರಣೆ; ಸತತ ಒಂಬತ್ತು ವರ್ಷಗಳಿಂದ ವಸ್ತ್ರದಾನ-7500ಕ್ಕೂ ಅಧಿಕ ಮಂದಿ ಭಾಗಿ

Puttur_Advt_NewsUnder_1
Puttur_Advt_NewsUnder_1

rai-estate-1 rai-estate-3 rai-estate-2

ಒಟ್ಟಾಗಿ ಸೇರಿ ಹಬ್ಬ ಆಚರಣೆ ಮಾಡಬೇಕೆಂಬುದೇ ಕಾರ್ಯಕ್ರಮದ ಉದ್ದೇಶ-ಅಶೋಕ್ ರೈ

ಪುತ್ತೂರು: ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುವ ಮನೋಭಾವದಡಿ ಬೆಳೆಯಬೇಕೆಂಬ ಉದ್ದೇಶದಿಂದ ಪ್ರತೀ ವರ್ಷ ದೀಪಾವಳಿಯಂದು `ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್’ನ ವತಿಯಿಂದ ವಸ್ತ್ರದಾನ ಮಾಡುತ್ತಿದ್ದೇವೆ. ಎಲ್ಲರೊಂದಿಗೆ ಸೇರಿ ಒಟ್ಟಾಗಿ ಹಬ್ಬ ಆಚರಣೆ ಮಾಡಬೇಕೆಂಬುದೇ ಇದರ ಹಿಂದಿರುವ ಉದ್ದೇಶವಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಉದ್ಯಮಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಕೋಡಿಂಬಾಡಿ ರೈ ಎಸ್ಟೇಟ್‌ನಲ್ಲಿ ನಡೆದ ವಸ್ತ್ರದಾನ ಕಾರ್ಯಕ್ರಮದ ವೇಳೆ ಮಾತನಾಡಿದ ಅಶೋಕ್ ರೈಯವರು ಕಳೆದ 10 ವರ್ಷದಿಂದ ವಸ್ತ್ರದಾನ ಮಾಡುತ್ತಿದ್ದೇವೆ, ಈ ಬಾರಿ ಏಳು ಸಾವಿರ ಜನರಿಗೆ ವಸ್ತ್ರದಾನ ಮಾಡಲಾಗುತ್ತಿದೆ, ಪುರುಷರಿಗೆ ಪಂಚೆ ಹಾಗೂ ಶಾಲು ಮತ್ತು ಮಹಿಳೆಯರಿಗೆ ಸೀರೆಯನ್ನು ವಿತರಿಸಲಾಗುತ್ತಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ ತಲಾ 50 ರೂಪಾಯಿ ದಕ್ಷಿಣೆ ನೀಡಲಾಗುತ್ತಿದೆ, ಬೆಳಗ್ಗಿನಿಂದ ಸಂಜೆಯವರೆಗೆ ಈ ಕಾರ್ಯಕ್ರಮ ನಡೆಯಲಿದ್ದು ಪುತ್ತೂರು ತಾಲೂಕಿನವರು ಮಾತ್ರವಲ್ಲದೆ ಬಂಟ್ವಾಳ, ಸುಳ್ಯ, ವಿಟ್ಲ, ಕಾಸರಗೋಡು ಸೇರಿದಂತೆ ವಿವಿದೆಡೆಯಿಂದ ಜನರು ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು. ಹಿಂದೆ ನಮ್ಮ ತಂದೆಯವರಿದ್ದ ಕಾಲದಲ್ಲಿ ದೀಪಾವಳಿಯ ಸಂದರ್ಭ ನಮ್ಮ ಅನುಕೂಲತೆಗೆ ತಕ್ಕಂತೆ ಸಣ್ಣ ಮಟ್ಟಿನಲ್ಲಿ ದಾನ ಧರ್ಮಗಳನ್ನು ನಡೆಸಿಕೊಂಡು ಬರುತ್ತಿದ್ದರು. ಈಗ ನಾವು ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದ ಅಶೋಕ್ ರೈಯವರು ದೇವರಿಗೆ ಸಮಾನರಾಗಿರುವ ನಮ್ಮ ತಾಯಿಯವರು ನೀಡುತ್ತಿರುವ ಮಾರ್ಗದರ್ಶನದಂತೆ `ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್’ನ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ, ಇದಕ್ಕೆ ತಮ್ಮೆಲ್ಲರ ಸಹಕಾರ ಬೇಕಿದೆ ಎಂದರು. ಅಶೋಕ್ ಕುಮಾರ್ ರೈಯವರ ತಾಯಿ ಗಿರಿಜಾ ಎಸ್. ರೈಯವರು ಸರಳ ಸಭಾಕಾರ್ಯಕ್ರಮದಲ್ಲಿ ವಸ್ತ್ರದಾನಕ್ಕೆ ಚಾಲನೆ ನೀಡಿದರು. ಅಶೋಕ್ ಕುಮಾರ್ ರೈಯವರ ಪತ್ನಿ ಸುಮಾ ಅಶೋಕ್ ರೈ, ಸಹೋದರರಾದ ಸುಬ್ರಹ್ಮಣ್ಯ ರೈ, ರಾಜ್‌ಕುಮಾರ್ ರೈ, ಸಹೋದರಿಯರಾದ ವಿಶಾಲಾಕ್ಷಿ ರೈ, ನಳಿನಾಕ್ಷಿ ಶೆಟ್ಟಿ, ಅತ್ತಿಗೆಯಂದಿರಾದ ವಿನಯಾ ಎಸ್. ರೈ, ಪ್ರೀತಿ ಆರ್. ರೈ ಮತ್ತು ಮನೆಯವರು ಹಾಗೂ ಮಕ್ಕಳು ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಬರಮಾಡಿಕೊಂಡು ಸತ್ಕರಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ಆಮಂತ್ರಣ ಇಲ್ಲದೆಯೇ ಸಾವಿರಾರು ಮಂದಿ ಭಾಗವಹಿಸಿದರು

ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಂದಾಳು ಅಶೋಕ್ ರೈಯವರ ಮಾಲಕತ್ವದ ರೈ ಎಸ್ಟೇಟ್‌ನಲ್ಲಿ ನಡೆದ ವಸ್ತ್ರದಾನ ಕಾರ್ಯಕ್ರಮಕ್ಕೆ ಆಮಂತ್ರಣ ಪತ್ರ ಇಲ್ಲ, ಜಾಹೀರಾತೂ ಇಲ್ಲ, ಪತ್ರಿಕಾ ಹೇಳಿಕೆಯೂ ಇಲ್ಲ, ಪ್ರಚಾರವೂ ಮಾಡುವುದಿಲ್ಲ, ಆದರೂ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಇಷ್ಟೊಂದು ಸಂಖ್ಯೆಯ ಜನರನ್ನು ಯಾವ ರೀತಿ ಆಮಂತ್ರಿಸಿದ್ದೀರಿ ಎಂದು ಪತ್ರಕರ್ತರು ಕೇಳಿದಾಗ ಪ್ರತಿಕ್ರಿಯಿಸಿದ ಅಶೋಕ್ ಕುಮಾರ್ ರೈಯವರು, ಕಳೆದ ಹತ್ತು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸ್ವಯಂಪ್ರೇರಿತರಾಗಿ ಬಂದು ಭಾಗವಹಿಸುತ್ತಿದ್ದಾರೆ. ಮೊದಲೆಲ್ಲಾ ನಮ್ಮ ತೋಟದ ಕೆಲಸಗಾರರಿಗೆ ವಸ್ತ್ರದಾನ ಮಾಡುತ್ತಿದ್ದೆವು. ಬಳಿಕ ಊರಿನ ಬಡವರು ಬರತೊಡಗಿದರು. ಅದು ಕ್ರಮೇಣ ತಾಲೂಕು, ಜಿಲ್ಲೆ ಪ್ರಸಕ್ತ ಹೊರ ಜಿಲ್ಲೆಗಳಿಂದಲೂ ಜನ ಬರತೊಡಗಿ ಈ ವರ್ಷ ೭ ಸಾವಿರಕ್ಕೂ ಮಿಕ್ಕಿ ಜನರಿಗೆ ವಸ್ತ್ರ ದಾನ ಮಾಡುವ ಸೌಭಾಗ್ಯ ಒದಗಿದೆ ಎಂದರು. ಅಂದು ನಾವು ಬಡತನದಲ್ಲಿದ್ದೆವು. ಬಡತನದ ನೋವು ನಮಗರಿವಿದೆ. ಬಡವರೊಂದಿಗೆ ಹಬ್ಬ ಆಚರಿಸುವ ಆಸೆ ನಮ್ಮಲ್ಲಿತ್ತು. ಅದಕ್ಕಾಗಿ ನಮ್ಮ ವ್ಯವಹಾರದಿಂದ ದೇವರು ನಮಗೆ ಏನನ್ನು ದಯಪಾಲಿಸಿದ್ದಾನೋ ಅದರಲ್ಲಿ ಒಂದು ಭಾಗವನ್ನು ಸಮಾಜಕ್ಕೆ ಸಮರ್ಪಿಸುವ ಭಾಗ್ಯವನ್ನೂ ಒದಗಿಸಿದ್ದಾನೆ. ಯಾವ ಆಮಂತ್ರಣವೂ ಇಲ್ಲದೆ ನಮ್ಮ ಮನೆಗೆ ಏಳು ಸಾವಿರ ಜನ ಅತಿಥಿಗಳಾಗಿ ಆಗಮಿಸುತ್ತಿದ್ದಾರೆನ್ನುವುದೇ ನಮ್ಮ ಪಾಲಿನ ಪುಣ್ಯ ಎಂದು ಅಶೋಕ್ ರೈ ಪ್ರತಿಕ್ರಿಯಿಸಿದರು.

ಕಿಕ್ಕಿರಿದು ಸೇರಿದ ಜನರು- ಜಾತ್ರೆಯ ಸಂಭ್ರಮ

ರೈ ಎಸ್ಟೇಟ್‌ನಲ್ಲಿ ನಡೆದ ವಸ್ತ್ರದಾನ ಕಾರ್ಯಕ್ರಮದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ವಿವಿದೆಡೆಯಿಂದ ತಂಡೋಪತಂಡವಾಗಿ ಸರತಿ ಸಾಲಿನಲ್ಲಿ ಬಂದ ಊರ-ಪರವೂರ ಜನರು ವಸ್ತ್ರದಾನ ಸ್ವೀಕರಿಸಿ, ದೀಪಾವಳಿಯ ತಿಂಡಿ ತಿನಿಸು, ಉಪಾಹಾರ ಸ್ವೀಕರಿಸಿ ತೆರಳಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮಾರು 7500 ಮಂದಿ ಭಾಗವಹಿಸುವ ಮೂಲಕ ರೈ ಎಸ್ಟೇಟ್‌ನಲ್ಲಿ ಜಾತ್ರೆಯ ಸಂಭ್ರಮ ಕಂಡು ಬಂದಿತ್ತು. ಪತ್ರಿಕೆ ಮತ್ತು ಟಿ. ವಿ. ಮಾಧ್ಯಮದವರೂ ವಿವಿದೆಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

3

4

2

asr_4493 asr_4468 asr_4474 asr_4478 asr_4480 asr_4490

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.