ಸಂಪಾಜೆ ಯಕ್ಷೋತ್ಸವ ಸಂಪನ್ನ

Puttur_Advt_NewsUnder_1
Puttur_Advt_NewsUnder_1

sampaje

* ಕಲೆ, ಗೋವಿನ ಉದ್ಧಾರದಿಂದ ಸಂಸ್ಕೃತಿ ಉಳಿವು -ಎಡನೀರು ಶ್ರೀ

*ಸಂಪಾಜೆ ಕಲಾ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿದ ಕೇಂದ್ರ-ಸುಬ್ರಹ್ಮಣ್ಯ ಶ್ರೀ

ಪುತ್ತೂರು: ಎಲ್ಲಿ ಕಲೆ ಮತ್ತು ಗೋವಿನ ಉಳಿವಿನ ಬಗ್ಗೆ ಗಂಭೀರ ಚಿಂತನೆಗಳು ನಡೆಯುತ್ತವೆಯೋ ಅಲ್ಲಿ ನಮ್ಮ ಸಂಸ್ಕೃತಿ ತನ್ನಿಂದ ತಾನೆ ಗಟ್ಟಿಗೊಳ್ಳುತ್ತದೆ ಎಂದು ಎಡನೀರು ಕೇಶವಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು. ಅ.29ರಂದು ಕಲ್ಲುಗುಂಡಿಯಲ್ಲಿ ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ನಡೆದ ಸಂಪಾಜೆ ಯಕ್ಷೋತ್ಸವವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ನುಡಿದರು.

ಗೋವು ನಮ್ಮ ತಾಯಿ. ತಾಯಿಯ ಸೇವೆ ಮಾಡುವುದು ಪುಣ್ಯದ ಕೆಲಸ. ತಾಯಿಯ ಸೇವೆ ಹಾಗೂ ಕಲಾಮಾತೆಯ ಸೇವೆ ಎಲ್ಲಿ ಆಗುವುದೋ ಅಲ್ಲಿ ಸಂಸ್ಕೃತಿಯು ಗಟ್ಟಿಗೊಳ್ಳುತ್ತದೆ ಎಂದು ಅವರು ಹೇಳಿದರು. ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠಾಧೀಶರಾದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಂಪಾಜೆಯೆಂದರೆ ಕಲಾಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿದ ಕೇಂದ್ರ, ಗೋಪಾಲಕೃಷ್ಣಯ್ಯರು ಆರಂಭಿಸಿದ ಕಲಾಸೇವೆಯನ್ನು ಅವರ ಮಕ್ಕಳು ಮತ್ತು ಅಳಿಯ ಶ್ಯಾಮಭಟ್ ಮುಂದುವರೆಸಿಕೊಂಡು ಬಂದಿದ್ದಾರೆ. ಯಕ್ಷಗಾನದೊಂದಿಗೆ ಸಮಾಜ ಸೇವೆಯೂ ಇಲ್ಲಿ ಜೊತೆಯಾಗಿದೆ ಎಂದು ಹೇಳಿದರು.

ವೇ|ಮೂ|ಅಮೈ ಅನಂತಕೃಷ್ಣ ಭಟ್ಟರಿಗೆ ಅಭಿನಂದನೆ, ಪ್ರಸಿದ್ದ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿಯವರಿಗೆ ಸನ್ಮಾನ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೋ| ಎಂ.ಎಲ್.ಸಾಮಗರಿಗೆ ಶೇಣಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮೂರ್ತಿ ದೇರಾಜೆ ಸಂಸ್ಮರಣಾ ಭಾಷಣ ಮಾಡಿದರು. ವೇ|ಮೂ|ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡಿದರು.

ಕೀಲಾರು ಪ್ರತಿಷ್ಠಾನದ ಉಪಾಧ್ಯಕ್ಷ ಕೆ.ಜಿ. ರಾಜಾರಾಮ ಭಟ್ ಹಾಗೂ ಕಾರ್ಯದರ್ಶಿ ಸುಮನ ಶ್ಯಾಮಭಟ್ ವೇದಿಕೆಯಲ್ಲಿದ್ದರು. ವಾಸುದೇವ ಭಟ್ ಸ್ವಾಗತಿಸಿ, ಹಿರಣ್ಯ ವೆಂಕಟೇಶ್ವರ ಭಟ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ಲೋಕಾಸೇವಾ ಆಯೋಗದ ಅಧ್ಯಕ್ಷರಾ ಕೀಲಾರು ಪ್ರತಿಷ್ಠಾನದ ಮಾರ್ಗದರ್ಶಕ ಟಿ.ಶ್ಯಾಮ ಭಟ್ ಹಾಗೂ ಮುರಳೀಧರ ಭಟ್ ಒಟ್ಟು ಉಸ್ತುವಾರಿ ವಹಿಸಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್, ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಡಾ| ಪ್ರಭಾಕರ ಭಟ್, ವಿಶ್ವಹಿಂದೂ ಪರಿಷದ್ ಮುಖಂಡ ಎಂ.ಬಿ.ಪುರಾಣಿಕ್, ಕುಂಟಾರು ರವೀಶ್ ತಂತ್ರಿ ಮತ್ತಿತರರು ಆಗಮಿಸಿದ್ದರು.

ಜಾತ್ರೋಪಾದಿಯಲ್ಲಿ ಜಮಾಯಿಸಿದ ಕಲಾಭಿಮಾನಿಗಳು

ಸಂಪಾಜೆ ಯಕ್ಷೋತ್ಸವ ಎಂದರೆ ಯಕ್ಷಜಾತ್ರೆ ಎಂದೇ ಹೆಸರಿಸಬಹುದು. ಜಿಲ್ಲೆಯ ನಾನಾ ಕಡೆಗಳಿಂದ ಹರಿದು ಬರುವ ಕಲಾಭಿಮಾನಿಗಳ ವ್ಯವಸ್ಥೆಗಾಗಿ ವಿಶಾಲ ಮೈದಾನದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೂ ವೇದಿಕೆಯ ಇಕ್ಕೆಲಗಳಲ್ಲಿ ವಿಐಪಿಗಳಿಗೆ, ವಿಶೇಷ ಪಾಸ್ ಹೊಂದಿದ್ದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆಗಳಿತ್ತು.

ಬಿಗು ಬಂದೋಬಸ್ತ್: ಯಕ್ಷೋತ್ಸವಕ್ಕೆ ಸಾವಿರಾರು ಜನರು ಸೇರುವುದರಿಂದ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು. ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯದ ಪೊಲೀಸರು ಸಂಪಾಜೆ ಹೊರಠಾಣೆಯ ಪೊಲೀಸರು, ಜಿಲ್ಲಾ ಮೀಸಲು ಪೊಲೀಸ್ ಪಡೆ ರಕ್ಷಣೆಯಲ್ಲಿ ತೊಡಗಿದ್ದರು. ಸುಳ್ಯ ಸರ್ಕಲ್ ಕೃಷ್ಣಯ್ಯ ಹಾಗೂ ಎಸ್.ಐ.ಚಂದ್ರಶೇಖರ್ ನೇತೃತ್ವ  ವಹಿಸಿದ್ದರು.

ನಿರಂತರ ಊಟ-ಉಪಹಾರದ ವ್ಯವಸ್ಥೆ: ಅ.29ರಂದು ಮಧ್ಯಾಹ್ನ ಆರಂಭಗೊಂಡ ಸಂಪಾಜೆ ಯಕ್ಷೋತ್ಸವ ಅ.೩೦ರ ಮಧ್ಯಾಹ್ನದ ತನಕ ನಡೆಯಿತು. ಯಾವುದೇ ಸಮಯದಲ್ಲಿ ಭೋಜನಶಾಲೆಯ ಕೌಂಟರ್‌ಗೆ ಬಂದಾಗ ಊಟ ಹಾಗೂ ಉಪಹಾರದ ವ್ಯವಸ್ಥೆ ನಿರಂತರವಾಗಿತ್ತು.

ಬೃಹತ್ ಎಲ್‌ಸಿಡಿ: ಯಕ್ಷಗಾನ ನಡೆಯುವ ವೇದಿಕೆಯಿಂದ ಬಹಳ ದೂರದಲ್ಲಿ ಕುಳಿತಿದ್ದ ಯಕ್ಷಗಾನ ಅಭಿಮಾನಿಗಳಿಗೆ ವೇದಿಕೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹಾಗಾಗಿ ಅಲ್ಲಲ್ಲಿ ಬೃಹತ್ ಗಾತ್ರದ ಎಲ್‌ಸಿಡಿ ಪರದೆಗಳನ್ನು ಅಳವಡಿಸಿ ಅದರ ಮೂಲಕ ವೇದಿಕೆಯಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ಹತ್ತಿರದಿಂದ ಕಾಣುವಂತೆ ಮಾಡಲಾಗಿತ್ತು. ಇದರಿಂದಾಗಿ ನಾಟ್ಯ, ಪದ, ಮಾತುಗಾರಿಕೆಯನ್ನು ಕುಳಿತಲ್ಲಿ ಸ್ಪಷ್ಟವಾಗಿ ನೋಡುವಂತೆ ಕೇಳುವಂತೆ ಆಯಿತು.

ಗೋ ಸಂರಕ್ಷಣಾ ನಿಧಿ ಸಮರ್ಪಣೆ

ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಈ ವರ್ಷದಿಂದ ಗೋ ಸಂರಕ್ಷಣಾ ನಿಧಿ ಸಮರ್ಪಣೆ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಗೋವುಗಳ ರಕ್ಷಣೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ ಪ್ರತಿವರ್ಷ ಯಕ್ಷೋತ್ಸವದಲ್ಲಿ ನಿಧಿ ಸಮರ್ಪಣೆ ಮಾಡಲಾಗುವುದು. ಗೋ ಸಂರಕ್ಷಣಾ ನಿಧಿ ಸಮರ್ಪಣೆ ಬಗ್ಗೆ ವಿವರಿಸಿದ ವೇ| ಮೂ|ಹಿರಣ್ಯ ವೆಂಕಟೇಶ್ವರ ಭಟ್ ರವರು ’ನಮ್ಮ ಪ್ರಧಾನಿ ಮೋದಿಜಿಯವರು ಇತ್ತೀಚೆಗೆ ಹೇಳಿದಂತೆ ಈ ನಿಧಿ ನಕಲಿ ಗೋ ಸಂರಕ್ಷಕರ ಕೈಗೆ ಸಿಗದಂತೆ ಎಚ್ಚರಿಕೆಯಿಂದ ಆಯ್ಕೆ ಮಾಡಿ, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುವ ಗೋಸಂರಕ್ಷಣಾ ಸಂಸ್ಥೆಗಳಿಗೆ ಮಾತ್ರ ನೀಡಲಾಗುವುದು’ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.