ಪುತ್ತೂರು: ಹಲವಾರು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿರುವ ಭಕ್ತಕೋಡಿಯಿಂದ ರೆಂಜಲಾಡಿವರೆಗಿನ ಸುಮಾರು ಎರಡೂವರೆ ಕಿ.ಮೀ ರಸ್ತೆಗೆ ಗ್ರಾಮಸ್ಥ ರಾಧಾಕೃಷ್ಣ ರೈ ರೆಂಜಲಾಡಿ ಅವರು ತನ್ನ ಸ್ವಂತ ಖರ್ಚಿನಲ್ಲಿ ಕೆಂಪು ಕಲ್ಲು ಮತ್ತು ಮಣ್ಣು ಹಾಕುವ ಮೂಲಕ ರಸ್ತೆಯಲ್ಲಿ ನಿರ್ಮಾಣಗೊಂಡಿದ್ದ ಹೊಂಡಗಳನ್ನು ಮುಚ್ಚಿಸಿದ್ದು ಆ ಮೂಲಕ ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಭಕ್ತಕೋಡಿ-ರೆಂಜಲಾಡಿ ರಸ್ತೆ ಸಂಪೂರ್ಣ ಹದಗೆಟ್ಟು ಹಲವು ವರ್ಷಗಳೇ ಕಳೆದಿದ್ದು ಇದರಿಂದಾಗಿ ಈ ರಸ್ತೆಯಲ್ಲಿ ನಿತ್ಯ ಸಂಚರಿಸುವವರು, ವಾಹನ ಸವಾರರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ರಾಧಾಕೃಷ್ಣ ರೈ ಅವರು ಈ ಹಿಂದೆಯೂ ಕೆಲವು ಬಾರಿ ಇದೇ ರಸ್ತೆಯ ಹೊಂಡ, ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿಸುವ ಕೆಲಸ ಮಾಡಿದ್ದರು.
ಸಂಚಾರಕ್ಕೆ ಅಯೋಗ್ಯವಾಗಿರುವ ರಸ್ತೆಯನ್ನು ನಾನು ನನ್ನ ಕೈಯಿಂದ ಸ್ವಂತ ಸುಮಾರು 10 ಸಾವಿರ ರೂ. ಖರ್ಚು ಮಾಡಿ ಹೊಂಡ, ಗುಂಡಿಗಳನ್ನು ಮುಚ್ಚಿಸಿದ್ದೇನೆ. ಸದ್ರಿ ರಸ್ತೆಯ ದುರಸ್ತಿಯನ್ನು ನಿರ್ಲಕ್ಷಿಸಿರುವ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ರಾಧಾಕೃಷ್ಣ ರೈ ರೆಂಜಲಾಡಿ ಆಗ್ರಹಿಸಿದ್ದಾರೆ.