Home_Page_Advt
Home_Page_Advt
Home_Page_Advt

ಕೊಳ್ತಿಗೆ ಮಾಲೆತ್ತೋಡಿಯಲ್ಲಿ ಆಪರೇಷನ್ ಚಿರತೆ; ಉರುಳಿಗೆ ಬಿದ್ದ ಚಿರತೆ, ಅರಣ್ಯ ಇಲಾಖೆಯಿಂದ 3 ಗಂಟೆಗಳ ಕಾರ‍್ಯಾಚರಣೆ, ಹುಣಸೂರು, ಪಿಲಿಕುಳದಿಂದ ವೈದ್ಯರ ಆಗಮನ, ಚಾರ್ಮಾಡಿ ಬಿಸಿಲೆಗೆ ಚಿರತೆ ರವಾನೆ

Puttur_Advt_NewsUnder_1
Puttur_Advt_NewsUnder_1

kolthige1 kolthige6 kolthige2 kolthige3 kolthige4 kolthige5

2

1

ವರದಿ: ಸಿ.ಶೇ ಕಜೆಮಾರ್

ಪುತ್ತೂರು: ಕಾಡುಹಂದಿಗೆಂದು ಇಟ್ಟ ಉರುಳಿಗೆ ಚಿರತೆಯೊಂದು ಬಿದ್ದು ಜನರಲ್ಲಿ ಆತಂಕ ಸೃಷ್ಟಿಸಿ, ಕೊನೆಯಲ್ಲಿ ಅರಣ್ಯ ಇಲಾಖೆಯವರ ಯಶಸ್ವಿ ಕಾರ‍್ಯಾಚರಣೆ, ಪಿಲಿಕುಳ ಮತ್ತು ನಾಗರಹೊಳೆ ಹುಣಸೂರು ರಾಷ್ಟ್ರೀಯ ಉದ್ಯಾನವನ ವೈದ್ಯರು ಮತ್ತು ಅರಿವಳಿಕಾ ತಜ್ಞರ ಸಹಕಾರದೊಂದಿಗೆ ಚಿರತೆಯನ್ನು ಸೆರೆಹಿಡಿದ ಘಟನೆ ನ.23 ರಂದು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಮೀಪದ ಮಾಲೆತ್ತೋಡಿ ಎಂಬಲ್ಲಿ ನಡೆದಿದೆ. ಸುಮಾರು 7 ವರ್ಷ ಪ್ರಾಯದ, ಸಾಧಾರಣ 45 ರಿಂದ 50 ಕೆ.ಜಿ ತೂಕದ ಗಂಡು ಚಿರತೆಯಾಗಿದೆ. ಚಿರತೆಯ ಸೊಂಟಕ್ಕೆ ಉರುಳು ಸಿಕ್ಕಿಕೊಂಡಿದ್ದು ಯಾವುದೇ ಗಾಯಗಳಾಗಿರದೇ ಇರುವುದರಿಂದ ವೈದ್ಯರ ಸಲಹೆಯಂತೆ ಚಿರತೆಯನ್ನು ಚಾರ್ಮಾಡಿ ಬಿಸಿಲೆ ಘಾಟಿಗೆ ಕೊಂಡೊಯ್ಯಲಾಗಿದೆ.

ಹಂದಿಗೆ ಇಟ್ಟ ಉರುಳಿಗೆ ಚಿರತೆ ಸಿಕ್ಕಿಕೊಂಡಿತು

ಮಾಲೆತ್ತೋಡಿ ಬಾಲಕೃಷ್ಣ ಕೆದಿಲಾಯ ಎಂಬವರ ತೋಟದ ಬದಿಯಲ್ಲಿ ಇಳಿಜಾರು ಪ್ರದೇಶದಲ್ಲಿ ಯಾರೋ ಕಾಡು ಹಂದಿ ಹಿಡಿಯಲೆಂದು ವಾಹನದ ಗೇರ್ ವಯರ್ ಅನ್ನು ಬಳಸಿ ಉರುಳು ಇಟ್ಟಿದ್ದರು. ಈ ಉರುಳಿಗೆ ಚಿರತೆ ಬಿದ್ದಿದ್ದು ಚಿರತೆಯ ಸೊಂಟದಲ್ಲಿ ಉರುಳು ಸಿಕ್ಕಿಕೊಂಡಿತ್ತು. ಉರುಳು ಇಟ್ಟ ಜಾಗದಿಂದ ಕೆಳಕ್ಕೆ ಸ್ವಲ್ಪ ಇಳಿಜಾರು ಇದ್ದು, ಚಿರತೆಯು ಗಾತ್ರದಲ್ಲಿ ದೊಡ್ಡದಾಗಿದ್ದುದರಿಂದ ಇಳಿಜಾರಿಗೆ ಬಿದ್ದರೂ ಮತ್ತೆ ಕೊಸರಿಕೊಂಡು ಮೇಲಕ್ಕೆ ಹತ್ತಿ ಗುಂಡಿಯೊಳಗೆ ಅವಿತು ಕುಳಿತಿತ್ತು.ಚಿರತೆಯ ಕುತ್ತಿಗೆಗೆ ಎಲ್ಲಾದರೂ ಉರುಳು ಸಿಕ್ಕಿಕೊಳ್ಳುತ್ತಿದ್ದರೆ ಸಾಯುವ ಸಂಭವ ಇತ್ತು. ಅದೃಷ್ಟವಶಾತ್ ಚಿರತೆ ಅಪಾಯದಿಂದ ಪಾರಾಗಿದೆ.

ತೋಟಕ್ಕೆ ನೀರು ಬಿಡಲು ಬಂದಾಗ ಚಿರತೆ ಕಂಡಿತ್ತು:

ಬಾಲಕೃಷ್ಣ ಕೆದಿಲಾಯರ ಪುತ್ರ ಮಧು ಕೆದಿಲಾಯರವರು ನ.23ರಂದು ಬೆಳಿಗ್ಗೆ ತೋಟಕ್ಕೆ ನೀರು ಬಿಡಲು ಬಂದಾಗ ಅವರೊಂದಿಗೆ ಬಂದ ನಾಯಿಯು ಚಿರತೆಯನ್ನು ನೋಡಿ ಬೊಗಳಿದೆ. ಈ ವೇಳೆ ಚಿರತೆ ಘರ್ಜಿಸಿದ್ದನ್ನು ಕಂಡ ಮಧುರವರು ಚಿರತೆ ಉರುಳಿಗೆ ಬಿದ್ದಿರುವುದನ್ನು ಖಾತ್ರಿಪಡಿಸಿಕೊಂಡು ಬಂದು ತಂದೆಗೆ ವಿಷಯ ತಿಳಿಸಿದ್ದರು. ಚಿರತೆಯ ಘರ್ಜನೆಯನ್ನು ಕಂಡ ಮಧುರವರು ಇದು ಹುಲಿಯಾಗಿರಬಹುದು ಎಂದುಕೊಂಡಿದ್ದರು. ಬಾಲಕೃಷ್ಣರವರು ಕೂಡಲೇ ಕೊಳ್ತಿಗೆ ಗ್ರಾ.ಪಂ ಸದಸ್ಯ ಶಿವರಾಮ ಭಟ್‌ರವರಿಗೆ ವಿಷಯ ತಿಳಿಸಿದ್ದರು. ಮೊದಲಿಗೆ ಹುಲಿ ಉರುಳಿಗೆ ಬಿದ್ದಿದೆ ಎಂದೇ ಗಾಸಿಪ್ ಆಗಿತ್ತು. ಶಿವರಾಮ ಭಟ್‌ರವರು ಸ್ಥಳಕ್ಕೆ ಬಂದು ನೋಡಿದಾಗ ಚಿರತೆ ಬಿದ್ದಿರುವುದು ಕಂಡು ಬಂದಿದ್ದು ಕೂಡಲೇ ಅವರು ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದರು.

3 ಗಂಟೆಗಳ ಕಾರ‍್ಯಾಚರಣೆ/ಹುಣಸೂರು, ಪಿಲಿಕುಳದಿಂದ ವೈದ್ಯರ ಆಗಮನ: 

ಚಿರತೆ ಉರುಳಿಗೆ ಬಿದ್ದದ್ದ ವಿಷಯ ತಿಳಿದು ನೂರಾರು ಮಂದಿ ಸ್ಥಳಕ್ಕೆ ಆಗಮಿಸಿದ್ದರು. ಚಿರತೆಯನ್ನು ಹಿಡಿಯಲು ಸುಮಾರು 3 ಗಂಟೆಗಳ ಕಾರ‍್ಯಾಚರಣೆ ನಡೆಯಿತು. ಬೆಳಿಗ್ಗೆಯಿಂದಲೇ ಅರಣ್ಯಾಧಿಕಾರಿಗಳು ಮತ್ತು ಬೆಳ್ಳಾರೆ ಅರಕ್ಷಕ ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ಸ್ಥಳಕ್ಕೆ ಬಂದ ಪಿಲಿಕುಳ ಹುಲಿ ನಿಸರ್ಗಧಾಮದ ಡಾ. ದೀಪಿಕಾ ಮತ್ತು ಸಹಾಯಕ ದಿನೇಶ್‌ರವರು ಚಿರತೆಯ ದೇಹಸ್ಥಿತಿಯನ್ನು ಅರಿತುಕೊಂಡರು. ಚಿರತೆ ಎಷ್ಟು ಭಾರ ಇರಬಹುದು ಮತ್ತು ಎಷ್ಟು ಪ್ರಾಯವಾಗಿದೆ ಹಾಗೂ ಅದಕ್ಕೆ ಎಷ್ಟು ಡೋಸ್ ಅರಿವಳಿಕೆ ಮದ್ದು ಕೊಡಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಲಾಯಿತು.

ಹುಣಸೂರಿನ ಕರುಂಬಯ್ಯ ಅರಿವಳಿಕೆ ನೀಡಿ ಚಿರತೆಯನ್ನು ಮಲಗಿಸಿದರು:

ಮಂಗಳೂರಿನ ಪಿಲಿಕುಳದ ಅರಿವಳಿಕಾ ವೈದ್ಯರು ಪರಿಶೀಲನೆ ನಡೆಸುತ್ತಿರುವಾಗಲೇ ಸ್ಥಳಕ್ಕೆ ಬಂದ ನಾಗರಹೊಳೆ ಹುಣಸೂರು ರಾಷ್ಟ್ರೀಯ ಉದ್ಯಾನವನದ ಡಾ.ಉಮಾಶಂಕರ್‌ರವರ ಸಹಾಯಕ, ಈಗಾಗಲೇ ಬಹಳಷ್ಟು ಆನೆಗಳನ್ನು ಅರಿವಳಿಕೆ ಮದ್ದು ನೀಡಿ ಹಿಡಿದಿರುವ ಕರುಂಬಯ್ಯರವರು ಆಗಮಿಸಿದರು. ಇವರು ಬರುವಾಗಲೇ ಗನ್‌ಗೆ ಔಷಧ ತುಂಬಿಸಿಕೊಂಡೇ ಬಂದಿದ್ದರು. ಬಂದವರೇ ಚಿರತೆಯನ್ನು ನೋಡಿ ಒಂದಿಷ್ಟೂ ಭಯವಿಲ್ಲದೆ ಅದರ ಹಿಂಬದಿಗೆ ಹೋದರು. ಕರುಂಬಯ್ಯರವರನ್ನು ನೋಡಿದ ಚಿರತೆಯು ಕೋಪದಿಂದ ಎಗರಾಡಿತು ಆದರೂ ವಿಚಲಿತಗೊಳ್ಳದ ಕರುಂಬಯ್ಯರವರು ಒಂದೇ ನೋಟಕ್ಕೆ ಚಿರತೆಯ ತೊಡೆಗೆ ಅರಿವಳಿಕಾ ಔಷಧಿಯನ್ನು ಗನ್ ಮೂಲಕ ಶೂಟ್ ಮಾಡಿದರು.

ಮೂರು ಬಾರಿ ಚುಚ್ಚುಮದ್ದು ನೀಡಲಾಯಿತು:

ಮಂಗಳೂರು ಪಿಲಿಕುಳದ ವೈದ್ಯರು ಚಿರತೆಯ ದೇಹ ಸ್ಥಿತಿ ನೋಡಿ ಔಷಧಿ ರೆಡಿ ಮಾಡಿದ್ದರು. ಆದರೆ ಕರುಂಬಯ್ಯರವರು ತಾವು ರೆಡಿ ಮಾಡಿಕೊಂಡೇ ಬಂದಿದ್ದ ಔಷಧಿಯನ್ನು ಶೂಟ್ ಮಾಡಿದ್ದರು. ಇದರಲ್ಲಿ ಸ್ವಲ್ಪಮಟ್ಟಿನ ಡೋಸ್ ಕಡಿಮೆ ಇದ್ದುದರಿಂದ ಸುಮಾರು ೨೫ ನಿಮಿಷದಲ್ಲಿ ಕೋಮಾ ಸ್ಥಿತಿಗೆ ಹೋಗಬೇಕಾಗಿದ್ದ ಚಿರತೆ ಮುಕ್ಕಾಲು ಗಂಟೆ ಕಳೆದರೂ ನಿದ್ದೆಗೆ ಜಾರಲಿಲ್ಲ. ಬಳಿಕ ಚಿರತೆಗೆ ಕೈಯಿಂದಲೇ ಒಂದು ಇಂಜೆಕ್ಷನ್ ಕೊಡಲಾಯಿತು. ಆದರೂ ಕೋಮಾಕ್ಕೆ ಜಾರದೇ ಇರುವುದರಿಂದ ಮತ್ತೆ ಅರ್ಧ ಗಂಟೆ ಕಳೆದ ಬಳಿಕ ಇನ್ನೊಂದು ಇಂಜೆಕ್ಷನ್ ಮಾಡಲಾಯಿತು. ಕೊನೆಗೆ ಚಿರತೆ ನಿದ್ದೆಗೆ ಜಾರಿತು.

ಬಲೆ ಹಾಕಿ ಗೂಡಿಗೆ ಹಾಕಿ ಬಿಸಿಲೆಗೆ ರವಾನೆ:

ಕೋಮಾ ಸ್ಥಿತಿಗೆ ಜಾರಿದ ಮೇಲೆ ಚಿರತೆಯನ್ನು ಸ್ಥಳೀಯರ ನೆರವಿನೊಂದಿಗೆ ಬಲೆ ಹಾಕಿ ಬಲೆಯ ಮೂಲಕ ಬೋನಿಗೆ ತುಂಬಿಸಲಾಯಿತು. ಬೋನಿಗೆ ತುಂಬಿಸಿದ ಬಳಿಕ ಅದನ್ನು ಪರೀಕ್ಷೆ ನಡೆಸಿದ ವೈದ್ಯರು ಚಿರತೆಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಅದು ಆರೋಗ್ಯದಿಂದಿದೆ ಎಂದು ವರದಿ ಕೊಟ್ಟ ಬಳಿಕ ಅದಕ್ಕೆ ಮತ್ತು ಬರುವ ಔಷಧಿಯನ್ನು ನೀಡಲಾಯಿತು. ಅರ್ಧ ಗಂಟೆ ಕಳೆದ ಬಳಿಕ ಚಿರತೆಗೆ ಮತ್ತೆ ಮತ್ತು ಬರಲಿದೆ, ಗೂಡಿಗೆ ಹಾಕಿದ ಬಳಿಕ ಪಿಕ್‌ಅಪ್ ವಾಹನ ಮೂಲಕ ಚಿರತೆಯನ್ನು ಚಾರ್ಮಾಡಿ ಬಿಸಿಲೆ ಘಾಟಿಗೆ ಕೊಂಡೊಯ್ಯಲಾಯಿತು.

ಚಿರತೆ ನೋಡಲು ಜನಸಾಗರ:

ಚಿರತೆ ಉರುಳಿಗೆ ಬಿದ್ದಿರುವ ವಿಷಯ ತಿಳಿಯುತ್ತಲೇ ಬೆಳಿಗ್ಗೆಯಿಂದಲೇ ಜನಸಾಗರವೇ ತೋಟದೊಳಗೆ ಹರಿದು ಬರುತ್ತಿತ್ತು. ಪೆರ್ಲಂಪಾಡಿ, ಕುಂಬ್ರ, ಪುತ್ತೂರು, ವಿಟ್ಲ, ಮಾಡಾವು, ಬೆಳ್ಳಾರೆ, ಈಶ್ವರಮಂಗಲ ಇತ್ಯಾದಿ ಕಡೆಗಳಿಂದ ಜನರು ಸ್ಥಳಕ್ಕೆ ಬಂದು ಚಿರತೆ ವೀಕ್ಷಣೆ ಮಾಡುತ್ತಿದ್ದರು. ಅರಣ್ಯ ಇಲಾಖಾ ಅಧಿಕಾರಿಗಳು ಮತ್ತು ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಡುವಂತಾಯಿತು.ಜನರು ಫೋಟೋ ತೆಗೆಯಲು ಮತ್ತು ಚಿರತೆಯನ್ನು ನೋಡಲು ಹಾತೊರೆಯುತ್ತಿದ್ದುದರಿಂದ ಚಿರತೆಯನ್ನು ಹಿಡಿಯಲು ಕೆಲಹೊತ್ತು ಸಮಸ್ಯೆ ಉಂಟಾಯಿತು. ಚಿರತೆಗೆ ಅರಿವಳಿಕಾ ಔಷಧಿ ನೀಡಿದ ಬಳಿಕ ಅದಕ್ಕೆ ಯಾವುದೇ ರೀತಿಯ ಸೌಂಡ್ ಆಗದಂತೆ ನೋಡಿಕೊಳ್ಳಬೇಕಾಗಿದೆ. ಜನರು ಮಾತನಾಡುತ್ತಾ ಇದ್ದರೆ ಅಥವಾ ಅದರ ಕಣ್ಣಿಗೆ ಜನರು ಕಾಣುತ್ತಿದ್ದರೆ ಕೆಲವೊಮ್ಮೆ ಅದು ಮಂಪರಿಗೆ ಜಾರುವುದಿಲ್ಲ. ಆದ್ದರಿಂದ ಇಲ್ಲಿ ಕೆಲಹೊತ್ತು ಸಮಸ್ಯೆ ಉಂಟಾಯಿತು.

ಅರಣ್ಯ ಇಲಾಖಾಧಿಕಾರಿಗಳ ಯಶಸ್ವಿ ಕಾರ‍್ಯಾಚರಣೆ:

ಚಿರತೆಯನ್ನು ಸುರಕ್ಷಿತವಾಗಿ ಹಿಡಿದು ಬಿಸಿಲೆ ಘಾಟಿಗೆ ಬಿಡುವಲ್ಲಿ ತನಕ ಪುತ್ತೂರು ಅರಣ್ಯಾಧಿಕಾರಿ ಸುಂದರ್ ಶೆಟ್ಟಿ, ಪುತ್ತೂರು ವಲಯ ಅರಣ್ಯಾಧಿಕಾರಿ ಕಾರ್ಯಪ್ಪ. ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಶೆಟ್ಟಿ, ಆನೆಗುಂಡಿ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಉಪವಲಯ ಅರಣ್ಯಾಧಿಕಾರಿ ಪ್ರಕಾಶ್, ಹಾಗೂ ಪುತ್ತೂರು ಮತ್ತು ಪಂಜ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಸುಂದರ್ ಶೆಟ್ಟಿ, ಪ್ರವೀಣ್ ಶೆಟ್ಟಿಯವರು ಬೆಳಿಗ್ಗೆಯಿಂದಲೇ ಸ್ಥಳದಲ್ಲಿ ಬೀಡುಬಿಟ್ಟಿದ್ದರು. ಚಿರತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದರು.

ಬೆಳ್ಳಾರೆ ಪೊಲೀಸ್ ಠಾಣೆಯವರಿಂದ ಬಿಗಿ ಬಂದೋಬಸ್ತ್:

ಬೆಳ್ಳಾರೆ ಪೊಲೀಸ್ ಠಾಣೆಯ ಎಸ್.ಐ ಚೆಲುವಯ್ಯ ಮತ್ತು ಸಿಬ್ಬಂದಿಗಳಾದ ನವೀನ್, ಉಮೇಶ್, ಪ್ರವೀಣ್, ಇತರರು ಬೆಳಿಗ್ಗೆಯಿಂದಲೇ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಜನರು ಚಿರತೆ ನೋಡಲು ಮುಗಿಬೀಳುತ್ತಿರುವುದನ್ನು ತಪ್ಪಿಸುವಲ್ಲಿ ಪೊಲೀಸರು ಬಹಳಷ್ಟು ಶ್ರಮಪಡುವಂತಾಯಿತು.

ಗ್ರಾ.ಪಂ ಸದಸ್ಯರಿಂದ ಸಹಕಾರ: ಚಿರತೆ ಉರುಳಿಗೆ ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಗಿರಿಜಾರವರು ಪತಿ ಧನಂಜಯ ಪೂಜಾರಿಯವರ ಸಹಕಾರ ಪಡೆದುಕೊಂಡು ಹತ್ತಿರಕ್ಕೆ ಹೋಗಿ ವೀಕ್ಷಣೆ ಮಾಡಿದರು. ಇವರೊಂದಿಗೆ ಸದಸ್ಯೆ ಯಶೋಧಾ ಕೂಡ ಇದ್ದರು. ಗ್ರಾ.ಪಂ ಸದಸ್ಯ ತೀರ್ಥಾನಂದ ದುಗ್ಗಳರವರು ಬೆಳಿಗ್ಗೆಯಿಂದಲೇ ಸ್ಥಳದಲ್ಲಿದ್ದರು. ಅರಣ್ಯ ಇಲಾಖಾ ಅಧಿಕಾರಿಗಳಿಗೆ, ಮಾಧ್ಯಮದವರಿಗೆ ಚಹಾ ಮತ್ತು ತಿಂಡಿನ ವ್ಯವಸ್ಥೆಯನ್ನು ತೀರ್ಥಾನಂದ ದುಗ್ಗಳರವರು ಮಾಡಿದ್ದರು. ಶಿವರಾಮ ಭಟ್, ಪ್ರಮೋದ್ ಕೆ.ಎಸ್, ರಾಮಚಂದ್ರ ಅಮಳ ಜನಾರ್ಧನ ಗೌಡ.ಪಿ., ಮತ್ತಿತರರ ನೂರಾರು ಮಂದಿ ವಿವಿಧ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದರು.

ಚಿರತೆಯನ್ನು ಹೀಗೆ ಹಿಡಿಯಲಾಗುತ್ತದೆ:

ಮೊದಲಿಗೆ ಅರಿವಳಿಕಾ ತಜ್ಞರು ಮತ್ತು ವೈದ್ಯರು ಆಗಮಿಸಿ ಚಿರತೆಯನ್ನು ಪರಿಶೀಲನೆ ಮಾಡುತ್ತಾರೆ. ಚಿರತೆಯ ಅಂದಾಜು ಪ್ರಾಯ ಮತ್ತು ಅದು ಎಷ್ಟು ಕೆ.ಜಿ ತೂಕ ಇರಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಆ ಬಳಿಕ ಅರಿವಳಿಕಾ ಔಷಧವನ್ನು ಸಿರಿಂಜ್ ಮೂಲಕ ತುಂಬಿಸಿ ಈ ಸಿರಿಂಜ್ ಅನ್ನು ಏರ್‌ಗನ್ (ಪ್ರಾಣಿಗಳಿಗೆ ಔಷಧ ಕೊಡುವ ಗನ್)ಗೆ ಇಡಲಾಗುತ್ತದೆ. ಎಲ್ಲಾ ಆದ ನಂತರ ಪ್ರಾಣಿಯ ದೇಹದ ಸರಿಯಾದ ಜಾಗವನ್ನು ನೋಡಿ ಅಂದರೆ ಸೊಂಟದ ಭಾಗಕ್ಕೆ ಇಂಜೆಕ್ಷನ್ ಶೂಟ್ ಮಾಡಲಾಗುತ್ತದೆ. ಇಂಜೆಕ್ಷನ್ ಶೂಟ್ ಮಾಡಿದ ಬಳಿಕ ಸುಮಾರು ೨೦ ನಿಮಿಷದಲ್ಲಿ ಪ್ರಾಣಿ ಕೋಮಾ ಸ್ಥಿತಿಗೆ ತಲುಪುತ್ತದೆ. ಹಾಗೆ ಕೋಮಾ ಸ್ಥಿತಿಗೆ ತಲುಪಿದ ಬಳಿಕ ಅದನ್ನು ಎತ್ತಿ ಬೋನ್‌ಗೆ ತುಂಬಿಸಲಾಗುತ್ತದೆ. ಬೋನ್‌ಗೆ ತುಂಬಿಸುವಾಗ ವೈದ್ಯರು ದೇಹಸ್ಥಿತಿಯನ್ನು ಪರೀಕ್ಷೆ ಮಾಡುತ್ತಾರೆ. ಪರೀಕ್ಷೆ ನಡೆಸಿದ ಬಳಿಕ ಮತ್ತೆ ಮತಿ(ಜ್ಞಾನ) ಬರುವ ಇಂಜೆಕ್ಷನ್ ನೀಡಲಾಗುತ್ತದೆ. ಜ್ಞಾನ ತಪ್ಪುವ ಇಂಜೆಕ್ಷನ್ ಪವರ್ ಅರ್ಧ ಗಂಟೆ ಇದ್ದರೆ ಮತ್ತೊಮ್ಮೆ ಇಂಜೆಕ್ಟ್ ಮಾಡುವ, ಮತಿ ಬರುವ ಇಂಜೆಕ್ಷನ್ ಪವರ್ ಕೂಡ ಅಧ ಗಂಟೆ ಇರುತ್ತದೆ.

ಅರಿವಳಿಕಾ ಔಷಧದ ಕೊರತೆ:

ಪ್ರಾಣಿಗಳಿಗೆ ಜ್ಞಾನ ತಪ್ಪಿಸಲು ಈಲಿಯಮ್ ಝೈಲಾಜೆಲ್ ಎಂಬ ಔಷಧವನ್ನು ಇಂಜೆಕ್ಷನ್‌ನಲ್ಲಿ ಬಳಕೆ ಮಾಡಲಾಗುತ್ತದೆ. ಇದರೊಂದಿಗೆ ಟೆಟಾಮಿನ್ ಎಂಬ ಔಷಧಿ ಕೂಡ ಉಪಯೋಗಿಸಲಾಗುತ್ತದೆ. ಈ ಔಷಧಿಗಳು ಎಲ್ಲಾ ಕಡೆ ದೊರೆಯುವುದಿಲ್ಲ ಮತ್ತು ಹೆಚ್ಚು ಸಮಯ ದಾಸ್ತಾನು ಇಡಲು ಕೂಡ ಆಗುತ್ತಿಲ್ಲ. ಮಂಗಳೂರಿನ ಪಿಲಿಕುಳದಲ್ಲಿ ಕೂಡ ಔಷಧಿಯ ಕೊರತೆ ಇದೆಯಂತೆ

ಜಿಲ್ಲಾ ಮಟ್ಟದಲ್ಲಿ ಟ್ರೈನರ್ ಬೇಕಾಗಿದೆ

ಪ್ರಾಣಿಗಳಿಗೆ ಅರಿವಳಿಕಾ ಔಷಧಿ ನೀಡಿ ಹಿಡಿಯುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಅರಣ್ಯಾಧಿಕಾರಿಗಳಿಗೆ ಸೂಕ್ತ ಟ್ರೈನಿಂಗ್ ಅವಶ್ಯಕತೆ ಇದೆ. ಜಿಲ್ಲಾ ಮಟ್ಟದಲ್ಲಿ ಪುತ್ತೂರನ್ನು ಗುರುತಿಸಿಕೊಂಡು ಒಟ್ಟು ೫ ಮಂದಿಗೆ ತರಬೇತಿ ನೀಡಿ ಸಿದ್ದಗೊಳಿಸಿಕೊಂಡಿದ್ದರೆ ಯಾವುದೇ ತೊಂದರೆ ಇಲ್ಲ.ಈಗಾಗಲೇ ಅರಣ್ಯ ಇಲಾಖೆಗೆ ಬೋನ್ ಮತ್ತು ಬಲೆಯನ್ನು ನೀಡಲಾಗಿದೆ. ಗನ್ ಮತ್ತು ಔಷಧ ಇಲ್ಲ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ಒಂದು ಕಡೆ ಗನ್, ಔಷಧ, ಬಲೆ, ಬೋನು ಮತ್ತು ತರಬೇತಿ ಹೊಂದಿದ ೫ ಮಂದಿಯನ್ನು ನೇಮಕ ಮಾಡಿಕೊಂಡರೆ ಬಹಳಷ್ಟು ಒಳ್ಳೆಯದು.ಇಲ್ಲದಿದ್ದರೆ ಎಲ್ಲೋ ಒಂದು ಕಡೆ ಚಿರತೆ ಅಥವಾ ಇನ್ನೀತರ ಪ್ರಾಣಿಗಳು ಉರುಳಿಗೆ ಬಿದ್ದಾಗ ಆ ಪ್ರಾಣಿಗಳನ್ನು ಹಿಡಿಯಲು ಅರಿವಳಿಕಾ ತಜ್ಞರು ಎಲ್ಲಿಂದಲೋ ಬರಬೇಕಾಗುತ್ತದೆ. ಸಮಯದ ಉಳಿತಾಯ ಮತ್ತು ರಕ್ಷಣೆಗೆ ಸ್ಥಳೀಯವಾಗಿ ಇಂತಹ ಒಂದು ತಂಡ ಇದ್ದರೆ ಸೂಕ್ತ ಎಂದು ಸ್ಥಳದಲ್ಲಿದ್ದವರು ಹೇಳಿಕೊಳ್ಳುತ್ತಿದ್ದರು.

ಗಂಡು ಚಿರತೆ, ಬಿಸಿಲೆ ಘಾಟಿಗೆ ಬಿಡುತ್ತೇವೆ

ಸುಮಾರು 7 ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ. ಹಂದಿಗೆ ಇಟ್ಟ ಉರುಳಿಗೆ ಬಿದ್ದಿದೆ. ಯಾವುದೇ ಗಾಯಗಳಾಗಿಲ್ಲ. ಆರೋಗ್ಯದಿಂದಿದೆ. ಸುಮಾರು 45 ರಿಂದ 50 ಕೆ.ಜಿ ತೂಕವಿದೆ. ಯಾವುದೇ ತೊಂದರೆಯಾಗದ ರೀತಿಯಲ್ಲಿ ಹಿಡಿಯಲಾಗಿದೆ. ಮುಂದಕ್ಕೆ ಚಾರ್ಮಾಡಿ ಬಿಸಿಲೆ ಘಾಟಿಗೆ ಬಿಡುತ್ತೇವೆ

-ಸುಂದರ್ ಶೆಟ್ಟಿ, ಎ.ಸಿ.ಎಫ್ ಪುತ್ತೂರು


25 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ

ನಾನು ನಾಗರಹೊಳೆ ಹುಣಸೂರು ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ 25 ವರ್ಷಗಳಿಂದ ಡಾ. ಉಮಾಶಂಕರ್‌ರವರ ಸಹಾಯಕನಾಗಿ ಅರಿವಳಿಕಾ ತಜ್ಞನಾಗಿ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಸುಮಾರು 6 ಆನೆಗಳನ್ನು , ಹಲವಾರು ಚಿರತೆ, ಹುಲಿಗಳನ್ನು ಅರಿವಳಿಕಾ ಮದ್ದು ನೀಡಿ ಹಿಡಿದಿದ್ದೇನೆ. ಮುಂದೆ ಬೆಂಗಳೂರಿನಲ್ಲಿ ಆನೆಗಳನ್ನು ಹಿಡಿಯಲು ಹೋಗುವವನಿದ್ದೇನೆ.

ಕರುಂಬಯ್ಯ, ಅರಿವಳಿಕಾ ತಜ್ಞ ಹುಣಸೂರು


ಚಿರತೆ ಆರೋಗ್ಯದಿಂದಿದೆ, ಯಾವುದೇ ಗಾಯಗಳಾಗಿಲ್ಲ

ಉರುಳಿಗೆ ಬಿದ್ದಿದ್ದರು ಸೊಂಟದಲ್ಲಿ ಉರುಳು ಸಿಕ್ಕಿಕೊಂಡಿದ್ದರಿಂದ ಯಾವುದೇ ಗಾಯಗಳಾಗಿಲ್ಲ. ಚಿರತೆ ಆರೋಗ್ಯವಾಗಿದೆ.

ಡಾ. ದೀಪಿಕಾ, ವೈದ್ಯರು ಪಿಲಿಕುಳ ನಿಸರ್ಗಧಾಮ:


ನನ್ನ ಮಗ ನೋಡಿದ್ದರಿಂದ ಗೊತ್ತಾಯಿತು

ಚಿರತೆ ಉರುಳಿಗೆ ಬಿದ್ದಿರುವ ವಿಷಯ ಬೆಳಿಗ್ಗೆ ನನ್ನ ಮಗ ಮಧುರವರು ತೋಟಕ್ಕೆ ಸ್ಪಿಂಕ್ಲರ್ ಹಾಕಲು ಬಂದಿದ್ದರಿಂದ ಗೊತ್ತಾಯಿತು. ಅವನೊಂದಿಗೆ ನಾಯಿಯು ತೋಟಕ್ಕೆ ಬಂದಿದ್ದರಿಂದ ನಾಯಿ ಚಿರತೆಯನ್ನು ನೋಡಿ ಬೊಗಳಿದ್ದರಿಂದ ಗೊತ್ತಾಯಿತು. ನಮ್ಮ ತೋಟದಲ್ಲಿ ಉರುಳು ಇಟ್ಟದ್ದು ಯಾರು ಎಂದು ಗೊತ್ತಾಗುತ್ತಿಲ್ಲ.ನಮಗೂ ಮೊದಲಿಗೆ ಚಿರತೆ ಎಂದು ಗೊತ್ತಾಗಿಲ್ಲ. ಹುಲಿಯ ಹಾಗೆ ಕಂಡಿತು. ಆ ಕೂಡಲೇ ನಾನೂ ಶಿವರಾಮ ಭಟ್‌ಗೆ ವಿಷಯ ತಿಳಿಸಿದೆ.

– ಬಾಲಕೃಷ್ಣ ಕೆದಿಲಾಯ, ಜಾಗದ ಓನರ್


ಅರಣ್ಯ ಇಲಾಖಾ ಅಧಿಕಾರಿಗಳಿಗೆ ವಿಷಯ ತಿಳಿಸಿದೆ

ಚಿರತೆ ಉರುಳಿಗೆ ಬಿದ್ದಿರುವ ವಿಷಯವನ್ನು ನನಗೆ ಬಾಲಕೃಷ್ಣ ಕೆದಿಲಾಯರವರು ತಿಳಿಸಿದ್ದರು. ಮೊದಲಿಗೆ ಹುಲಿ ಎಂದುಕೊಂಡಿದ್ದೆವು. ಬಳಿಕ ಸ್ಥಳಕ್ಕೆ ಬಂದು ನೋಡಿದಾಗ ಚಿರತೆ ಎಂದು ಗೊತ್ತಾಯಿತು. ಆ ಕೂಡಲೇ ನಾನು ಸ್ಥಳೀಯ ಫಾರೆಸ್ಟರ್‌ಗೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದೆ.

-ಶಿವರಾಮ ಭಟ್, ಗ್ರಾ.ಪಂ ಸದಸ್ಯ ಕೊಳ್ತಿಗೆ


ಆ ಕೂಡಲೇ ಅಧಿಕಾರಿಗಳು ಸ್ಪಂದನೆ ನೀಡಿ ಸ್ಥಳಕ್ಕೆ ಬಂದಿದ್ದಾರೆ.-ಇದೀಗ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ

ಕೊಳ್ತಿಗೆ ಗ್ರಾಮದಲ್ಲಿ ಈ ವರೇಗೆ ಚಿರತೆ ಕಂಡು ಬಂದಿರಲಿಲ್ಲ. ಇದೀಗ ಉರುಳಿಗೆ ಚಿರತೆ ಬಿದ್ದಿರುವುದನ್ನು ನೋಡಿ ಗ್ರಾಮಸ್ಥರಲ್ಲಿ ಒಂದು ರೀತಿಯ ಆತಂಕ ಶುರುವಾಗಿದೆ. ಇದು ಎಲ್ಲಿಂದ ಬಂತು ಎನ್ನುವುದು ಗೊತ್ತಾಗುತ್ತಿಲ್ಲ. ಚಿರತೆಯನ್ನು ಸುರಕ್ಷಿತವಾಗಿ ಹಿಡಿದು ಸಾಗಿಸುವಲ್ಲಿ ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ಗ್ರಾಮಸ್ಥರು ಒಳ್ಳೆಯ ಸಹಕಾರ ನೀಡಿದ್ದಾರೆ.

-ಪ್ರಮೋದ್ ಕೆ.ಎಸ್. ಅಧ್ಯಕ್ಷರು, ಅರಣ್ಯ ಗ್ರಾಮ ಸಮಿತಿ ಕೊಳ್ತಿಗೆ


ಚಿರತೆಯನ್ನು ನೋಡಿ ಖುಷಿ ಮತ್ತು ಭಯ ಆಯಿತು

ನಮ್ಮ ಗ್ರಾಮದಲ್ಲಿ ಚಿರತೆಯನ್ನು ನೋಡಿ ಒಮ್ಮೆಗೆ ಖುಷಿ ಆಯಿತು. ಆದರೆ ಅಷ್ಟೇ ಭಯ ಕೂಡ ಆಯಿತು. ಗ್ರಾಮದಲ್ಲಿ ಈ ರೀತಿ ಚಿರತೆಗಳು ಕಂಡು ಬಂದಿರುವುದು ಒಂದು ರೀತಿಯ ಆತಂಕವನ್ನು ಸೃಷ್ಟಿ ಮಾಡಿದೆ.

-ಕು.ಲೀಲಾವತಿ ಮಾಲೆತ್ತೋಡಿ


ಎಲ್ಲಿಂದ ಬಂತು..?

ಸ್ಥಳದಲ್ಲಿ ಸೇರಿದ್ದವರೆಲ್ಲರೂ ಕೇಳುತ್ತಿದ್ದ ಪ್ರಶ್ನೆ ’ಇಲ್ಲಿಗೆ ಚಿರತೆ ಎಲ್ಲಿಂದ ಬಂದಿರಬಹುದು’ ಎಂಬುದಾಗಿತ್ತು. ನಿಜಕ್ಕೂ ಈ ಭಾಗಕ್ಕೆ ಚಿರತೆ ಬಂದುದಾದರೂ ಎಲ್ಲಿಂದ? ಆನೆಗುಂಡಿ ರಕ್ಷಿತಾರಣ್ಯದ ಮೂಲಕ ಬಂದಿರಬಹುದೇ? ಎಂದು ನಾಗರಿಕರು ಮಾತನಾಡಿಕೊಳ್ಳುತ್ತಿದ್ದರು.

3

4

5

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.