ಎಸ್ಸಿ,ಎಸ್ಟಿ ಕುಂದುಕೊರತೆ ಸಭೆ; ಸಭೆಗೆ ಆಗಮಿಸಿದರೂ ಸಮಸ್ಯೆ ಪರಿಹಾರ ಆಗುವುದಿಲ್ಲ – ದಲಿತ ಕುಂದುಕೊರತೆ ಸಭೆಯಲ್ಲಿ ಸದಸ್ಯರ ಆಕ್ರೋಶ

Puttur_Advt_NewsUnder_1
Puttur_Advt_NewsUnder_1

sc-st

* ಶ್ರೀಮಂತರಿಗೆ ಡಿ.ಸಿ ಮನ್ನಾ ಭೂಮಿ, ದಲಿತರಿಗಿಲ್ಲ

* ಆಡಳಿತ ಕುಸಿದಿದೆ

* ವಿ.ಎಗೆ ಸೈಟ್, ಶರತ್ತು ಉಲ್ಲಂಘನೆ ಮಾಡಿದರೂ ಕೋರ್ಟ್ ಸ್ಟೇ

* ಗುರಂಪುನಾರ್ ಕಾಲನಿಗೆ ಇನ್ನೂ ರಸ್ತೆಯಾಗಿಲ್ಲ

* ನಗರಸಭೆಯಿಂದ ಶಿಕ್ಷಣಕ್ಕೆ ಅನುದಾನ ಕಡಿಮೆಯಾಗಿದೆ

* ಕಡಬದಲ್ಲಿ ತೋಡು ಅಕ್ರಮ, ಕೃಷಿಗೆ ಹಾನಿ

* ಬೋರ್‌ವೆಲ್ ಕೊರೆದರೂ ಯಾವ ಇಲಾಖೆಯದ್ದು ಗೊತ್ತಿಲ್ಲ

* ಪಾಲನಾ ವರದಿಯನ್ನು ಅಂಚೆ ಮೂಲಕ ಕಳಿಸಿ

* ನಿರ್ಜನ ಪ್ರದೇಶದಲ್ಲಿ ಅಂಬೇಡ್ಕರ್ ಭವನ ಯಾಕೆ?

* ಮನೆ ಪಡೆಯಲು ಜಾತಿ ಪ್ರಮಾಣ ಪತ್ರದ ಸಮಸ್ಯೆ

* ಗುದ್ದಲಿ ಪೂಜೆ ಒಂದು ಕಡೆ, ಕಾಮಗಾರಿ ಒಂದು ಕಡೆ

* ಪಾಲನಾ ವರದಿ ಕೊಡದ ಸಾರಿಗೆ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳಿ

* ನಮ್ಮ ಬೇಡಿಕೆಗೆ ವಾರ್ಡ್ ಸದಸ್ಯರ ಸಹಿ ಯಾಕೆ?

* ಸರ್ವೆಯಲ್ಲಿ ರಸ್ತೆಗೆ ಬೇಲಿ

ಪುತ್ತೂರು: ತಮ್ಮ ಸಮಸ್ಯೆಗಳ ಕುರಿತು ಎಸ್ಸಿ. ಎಸ್ಟಿ ಕುಂದುಕೊರತೆ ಸಭೆಯಲ್ಲಿ ಗಮನಕ್ಕೆ ತಂದು ಪರಿಹರಿಸಿಕೊಳ್ಳೋಣ ಎಂದಿದ್ದರೂ  ಇಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಚಹಾ ಕುಡಿಯುವುದಕ್ಕಾಗಿ ಮಾತ್ರ ಸಭೆ ಕರೆದಂತಾಗಿದೆ ಎಂದು ದಲಿತ ಮುಖಂಡರು ಎಸ್ಸಿ ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ನ.30ರಂದು ತಾ.ಪಂ ಸಭಾಂಗಣದಲ್ಲಿ ತಹಶೀಲ್ದಾರ್ ಅನಂತಶಂಕರ್‌ರವರ ಅಧ್ಯಕ್ಷತೆಯಲ್ಲಿ ಎಸ್ಸಿ.ಎಸ್ಟಿ ಕುಂದು ಕೊರತೆ ಸಭೆ ನಡೆಯಿತು.

ಶ್ರೀಮಂತರಿಗೆ ಡಿ.ಸಿ ಮನ್ನಾ ಭೂಮಿ, ದಲಿತರಿಗಿಲ್ಲ:

ಡಿಸಿ ಮನ್ನಾ ಭೂಮಿಯನ್ನು ಮಂಜೂರು ಮಾಡಲು ಅರ್ಜಿ ನೀಡಿದರೆ, ಸೂಕ್ತ ಮಾಹಿತಿಯನ್ನೇ ನೀಡುತ್ತಿಲ್ಲ. ಶ್ರೀಮಂತ ವರ್ಗಕ್ಕೆ ಈಗಾಗಲೇ ಡಿಸಿ ಮನ್ನಾ ಭೂಮಿಯನ್ನು ಮಂಜೂರು ಮಾಡಲಾಗಿದೆ. ಆದರೆ ಬಡವರನ್ನು ಸತಾಯಿಸಲಾಗುತ್ತಿದೆ. ಅಧಿಕಾರಿಗಳು ಪದೇ ಪದೇ ವರ್ಗಾವಣೆ ಆಗುತ್ತಿರುವುದರಿಂದ ಕೆಲಸ ಇನ್ನಷ್ಟು ವಿಳಂಬವಾಗುತ್ತಿದೆ. ಹೊಸ ಅಧಿಕಾರಿ ಬಂದಾಗ ಮತ್ತೆ ತೆರಳಿ, ವಿಷಯವನ್ನು ಮನವರಿಕೆ ಮಾಡಿಕೊಡಬೇಕು. ಪ್ರತಿ ಅಧಿಕಾರಿಯ ಬಳಿ ತೆರಳಿ ವಿಷಯ ವಿವರಿಸಬೇಕು ಸಭೆಯ ಅವಶ್ಯಕತೆ ಇಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಉತ್ತರಿಸಿದ ತಹಶೀಲ್ದಾರ್‌ರವರು ಅಧಿಕಾರಿಗಳು ವರ್ಗಾವಣೆ ಆದರೂ ಕೆಲಸ ವಿಳಂಬವಾಗುತ್ತಿಲ್ಲ. ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸುತ್ತೇನೆಂದರು.

ಆಡಳಿತ ಕುಸಿದಿದೆ:

ಪುತ್ತೂರು ತಾಲೂಕಿನ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಕೂಸಪ್ಪ ತಿಳಿಸಿದರು. ಕುಳ್ಳೇಗೌಡ ತಹಸೀಲ್ದಾರ್ ಆಗಿದ್ದಾಗ, ಪತ್ರಿಕೆಯಲ್ಲಿ ಪ್ರಕಟವಾದ ಸಮಸ್ಯೆಗೂ ತಕ್ಷಣ ಸ್ಪಂದನೆ ನೀಡುತ್ತಿದ್ದರು. ಆದರೆ ಇಂದು ಅಧಿಕಾರಿಗಳಿಗೆ ಮನವಿ ನೀಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಹೊಸ ತಹಸೀಲ್ದಾರ್ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ ಎಂದರು.

 ಶರತ್ತು ಉಲ್ಲಂಘನೆ ಮಾಡಿದರೂ ಕೋರ್ಟ್ ಸ್ಟೇ ತರಲು ಹೇಳ್ತಿರಿ:

ಬಾಲಚಂದ್ರ ಸೊರಕೆ ಮಾತನಾಡಿ, ಸರ್ಕಾರಿ ಉದ್ಯೋಗಿಗಳಿಗೆ ಸೈಟ್ ನೀಡುವಂತಿಲ್ಲ. ಆದರೆ ಹಿಂದೆ ಕಬಕದಲ್ಲಿ ವಿಎ ಆಗಿದ್ದು, ಇದೀಗ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ವೇದಾವತಿ ಎಂಬವರಿಗೆ ಕೆಮ್ಮಿಂಜೆ ಗ್ರಾಮದ ನೈತಾಡಿ ಎಂಬಲ್ಲಿ ನಿವೇಶನ ನೀಡಲಾಗಿದೆ. ಜುಲೈ ತಿಂಗಳಿನಲ್ಲಿ ನಡೆದ ಸಭೆಯಲ್ಲಿ ಇದರ ಬಗ್ಗೆ ದೂರು ನೀಡಲಾಗಿದೆ. ಆದರೆ ಇದೀಗ ನೋಡಿದರೆ, ಮನೆ ಕಾಮಗಾರಿ ಪೂರ್ಣಗೊಂಡಿದೆ. ಮಾಹಿತಿ ನೀಡಿಯೂ ಅಧಿಕಾರಿಗಳು ಸುಮ್ಮನೆ ಕುಳಿತಿzಕೆ ಎಂದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಉತ್ತರಿಸಿದರು. ಗಿರಿಧರ್ ನಾಯ್ಕ್ ಮಾತನಾಡಿ, ಖಾಸಗಿ ಬಸ್ ನಿಲ್ದಾಣದ ಬಳಿ ಸೆಟ್ ಬ್ಯಾಕ್ ಬಿಡದೇ ಚರಂಡಿಯಲ್ಲೇ ಮನೆ ಕಟ್ಟಿದ ಇದರ ತೆರವಿಗೆ ಜಿಲ್ಲಾಧಿಕಾರಿ ಆದೇಶ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದರು. ಧ್ವನಿಗೂಡಿಸಿದ ಬಾಲಚಂದ್ರ ಸೊರಕೆಯವರು ಈ ಕುರಿತು ಜಾಗದ ಮಾಲೀಕರಿಗೆ ಅಧಿಕಾರಿಗಳೇ ಸಲಹೆ ನೀಡಿ, ನ್ಯಾಯಾಲಯದಿಂದ ಸ್ಟೇ ತರಲು ತಿಳಿಸಿಕೊಡುತ್ತೀರಿ ಎಂದರು.

ಗುರಂಪುನಾರ್ ಕಾಲನಿಗೆ ಇನ್ನೂ ರಸ್ತೆಯಾಗಿಲ್ಲ:

ದಲಿತ್ ಸೇವಾ ಸಮಿತಿ ಅಧ್ಯಕ್ಷ ಗಿರಿಧರ್ ನಾಯ್ಕ್‌ರವರು ಮಾತನಾಡಿ, ಗುರುಂಪುನಾರ್ ಕಾಲನಿಗೆ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ. ಸಹಾಯಕ ಆಯುಕ್ತರಿಗೆ ಮನವಿ ನೀಡಿದರೆ, ಸ್ಥಳಕ್ಕೆ ಭೇಟಿ ನೀಡುವ ಕೆಲಸವನ್ನೂ ಮಾಡಿಲ್ಲ. ಪೊಲೀಸ್ ಇಲಾಖೆ ಮುತುವರ್ಜಿ ವಹಿಸಿದರೂ ಕಂದಾಯ ಇಲಾಖೆ ಸಹಕರಿಸುತ್ತಿಲ್ಲ. ಸಮಸ್ಯೆ ಬಗ್ಗೆ ಈಗಲೇ ಸೂಕ್ತ ಭರವಸೆ ನೀಡದೇ ಹೋದರೆ, ಸಭೆಯಿಂದ ಹೊರಗೆ ಹೋಗುವುದಾಗಿ ಎಚ್ಚರಿಸಿದರು. ಇವತ್ತೇ ಸರ್ವೆಯರನ್ನು ಕರೆದುಕೊಂಡು ಸ್ಥಳ ಭೇಟಿ ಮಾಡುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು.

ನಗರಸಭೆಯಿಂದ ಶಿಕ್ಷಣಕ್ಕೆ ಅನುದಾನ ಕಡಿಮೆಯಾಗಿದೆ:

ನಗರಸಭೆಯಿಂದ ಪ.ಜಾತಿ ಮತ್ತು ಪ.ಪಂಗಡದವರ ಅಭಿವೃದ್ಧಿಗೆ ರೂಪಿಸಿದ ಕ್ರಿಯಾ ಯೋಜನೆಯಲ್ಲಿ ಶಿಕ್ಷಣಕ್ಕೆ ಕೇವಲ ರೂ. ೧ಲಕ್ಷ ಇಟ್ಟಿದ್ದಾರೆ ಎಂದು ಮುದ್ದರವರು ಆಕ್ಷೇಪಿಸಿದರು. ಉತ್ತರಿಸಿದ ಪೌರಾಯುಕ್ತರು ಎಸ್ಸಿ, ಎಸ್ಟಿ ಫಲಾನುಭವಿಗಳ ವಿವಿಧ ಅಭಿವೃದ್ಧಿಗಾಗಿ ಅವಕಾಶವಿದ್ದರೂ ಕೇವಲ ೨೨ ಅರ್ಜಿಗಳು ಮಾತ್ರ ಬಂದಿವೆ ಎಂದರು. ಆಕ್ಷೇಪಿಸಿದ ಮುದ್ದರವರು ಕಳೆದ ಸಭೆಯಲ್ಲಿ ಅನುದಾನ ಜಾಸ್ತಿ ಇರಿಸುವುದಾಗಿ ಹೇಳಿದ್ದೀರಿ ಎಂದರು. ಉತ್ತರಿಸಿದ ಸಮುದಾಯ ಸಂಘಟಕ ಉಸ್ಮಾನ್ ಗೈಡ್‌ಲೈನ್ ಪ್ರಕಾರ ಅನುದಾನ ಇಡಲಾಗಿದೆ ಎಂದರು. ಧ್ವನಿಗೂಡಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ರವರು ಮಾತನಾಡಿ ನಗರಸಭೆಗೆ ಅದರz ಆದ ಶರತ್ತುಗಳ ಪ್ರಕಾರ ಯೋಜನೆ ಇಡಬೇಕಾಗುತ್ತದೆ ಎಂದರು.

ಕಡಬದಲ್ಲಿ ತೋಡು ಅಕ್ರಮ, ಕೃಷಿಗೆ ಹಾನಿ:

ಕಡಬದಲ್ಲಿ ತೋಡನ್ನು ವ್ಯಕ್ತಿಯೋರ್ವರು ಅಕ್ರಮವಾಗಿ ಮುಚ್ಚಿದ ಪರಿಣಾಮ ಚೆನ್ನಪ್ಪ ಮುಗೇರ ಎಂಬವರ ಕೃಷಿಗೆ ಹಾನಿಯುಂಟಾಗಿದೆ. ಅನಾದಿ ಕಾಲದಿಂದಲೂ ಇದ್ದ ತೋಡಿನ ಕುರಿತು ಸಂಬಂಧಿಸಿದ ಇಲಾಖೆಗೆ ಮನವಿ ಕೊಟ್ಟು ಒಂದು ವರ್ಷ ಕಳೆದರೂ ಇನ್ನೂ ಪರಿಹಾರವಾಗಿಲ್ಲ ಎಂದು ಗಿರಿಧರ ನಾಯ್ಕರವರು ಆರೋಪಿಸಿದರು. ಉತ್ತರಿಸಿದ ಕಡಬ ತಹಶೀಲ್ದಾರ್ ನಿಂಗಯ್ಯರವರು ಈ ಕುರಿತು ಇನ್ನೊಮ್ಮೆ ಸರ್ವೆ ಮಾಡಲು ಆದೇಶಿಸುತ್ತೇನೆ. ಬಳಿಕ ಅಕ್ರಮ ಸಕ್ರಮ ಬೈಠೆಕ್‌ನಲ್ಲಿ ಅರ್ಜಿಯನ್ನು ಇಟ್ಟು ಪರಿಶೀಲಿಸಲಾಗುವುದು ಎಂದರು.

ಬೋರ್‌ವೆಲ್ ಕೊರೆದರೂ ಯಾವ ಇಲಾಖೆಯದ್ದು ಗೊತ್ತಿಲ್ಲ:

ನರಿಮೊಗರು ಗ್ರಾಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ರಾತ್ರೋ ರಾತ್ರಿ ಬೋರ್‌ವೆಲ್ ಕೊರೆಸಿದ್ದಾರೆ. ಆದರೆ ಅದಕ್ಕೆ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಈ ಕುರಿತು ಇದು ಯಾವ ಇಲಾಖೆಯದ್ದು ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ವಿಚಾರಿಸಿದಾಗ ಸಭೆಯಲ್ಲಿದ್ದ ಅಧಿಕಾರಿಗಳಿಂದ ನಮ್ಮ ಇಲಾಖೆಯದ್ದಲ್ಲ ಎಂಬ ಉತ್ತರ ಬಂತು. ಈ ನಡುವೆ ಮಾತನಾಡಿದ ಕಾಂತುಮಾಸ್ಟರ್‌ರವರು ಅಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಅಲ್ಲಿನ ಸುಮಾರು ೧೫ ಮನೆಯವರು ನನ್ನ ಮನೆಯ ಬಾವಿಯಿಂದ ನೀರು ಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು. ಉತ್ತರಿಸಿದ ಇ.ಒರವರು ನಿಗಮಮಂಡಳಿಯಿಂದ ಬೋರ್‌ವೆಲ್ ಕೊರೆಸಲಾಗಿದೆ ಎಂಬ ಮಾಹಿತಿ ಇದೆ. ಈ ಕುರಿತು ಆದಷ್ಟು ಬೇಗ ವಿದ್ಯುತ್ ಸಂಪರ್ಕ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.

ಪಾಲನ ವರದಿಯನ್ನು ಅಂಚೆ ಮೂಲಕ ಕಳಿಸಿ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಪಾಲನ ವರದಿಯನ್ನು ಕೊಟ್ಟಾಗ ಅಧಿಕಾರಿಗಳು ಕೈಗೊಂಡ ಕ್ರಮದ ಕುರಿತು ಚರ್ಚಿಸಲು ಕಷ್ಟ. ಈ ನಿಟ್ಟಿನಲ್ಲಿ ಅಧಿಕಾರಿಗಳ ಪಾಲನ ವರದಿಯನ್ನು ಪರಿಶೀಲಿಸಲು ಅಂಚೆ ಮೂಲಕ ಮೂರು ದಿನ ಮುಂಚಿತವಾಗಿ ಪಾಲನ ವರದಿಯನ್ನು ಕಳುಹಿಸುವ ವ್ಯವಸ್ಥೆ ತಾ.ಪಂನಿಂದ ಆಗಬೇಕು ಎಂದು ಶೇಷಪ್ಪ ನೆಕ್ಕಿಲು ಮನವಿ ಮಾಡಿದರು. ಉತ್ತರಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ಕುಂದುಕೊರತೆ ಸಭೆಗೆ ಮುಖಂಡರು ಭಾಗವಹಿಸಿದ್ದರೆ ಉತ್ತಮ. ಇಲ್ಲಿ ತಾಲೂಕಿನ ಎಲ್ಲಾ ಸದಸ್ಯರು ಭಾಗವಹಿಸುವುದರಿಂದ ಎಲ್ಲರು ಮಾತನಾಡುವ ವಿಷಯಗಳನ್ನು ದಾಖಲೀಕರಣ ಮಾಡುವುದು ಕಷ್ಟ. ಮುಂಚಿತವಾಗಿ ಪಾಲನಾ ವರದಿ ಕಳುಹಿಸಲು ಕಷ್ಟ ಸಾಧ್ಯ ಎಂದರು.

ನಿರ್ಜನ ಪ್ರದೇಶದಲ್ಲಿ ಅಂಬೇಡ್ಕರ್ ಭವನ ಯಾಕೆ?

ಕೃಷ್ಣರವರು ಮಾತನಾಡಿ ನಿಡ್ಪಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ಬೇಕೆಂದು ೧೦ ವರ್ಷಗಳ ಹಿಂದೆ ನಾವು ಕೇಳಿದ ಸ್ಥಳಕ್ಕೆ ಅರ್ಜಿ ಹಾಕಿದಾಗ ಅಲ್ಲಿ ಜಾಗವಿಲ್ಲ ಎಂದು ಗ್ರಾ.ಪಂ ಸೂಚಿಸಿತ್ತು. ಅದೇ ೧೦ ವರ್ಷದ ಬಳಿಕ ದೇವಸ್ಥಾನಕ್ಕೆಂದು ನಾವು ಅಂಬೇಡ್ಕರ್ ಭವನಕ್ಕೆ ತೋರಿಸಿದ ಜಾಗ ಮಂಜೂರುಗೊಂಡಿದ್ದು, ಇದೀಗ ಕುಡ್ಚಿಲ್ ಎಂಬ ನಿರ್ಜನ ಪ್ರದೇಶದಲ್ಲಿ ಅಂಬೇಡ್ಕರ್ ಭವನಕ್ಕೆ ಸ್ಥಳ ಕಾದಿರಿಸಿದ್ದಾರೆ ಎಂದರು. ಧ್ವನಿಗೂಡಿಸಿದ ಸುಂದರ ನಿಡ್ಪಳ್ಳಿ ಮತ್ತು ಕೊರಗಪ್ಪ ಈಶ್ವರಮಂಗಲರವರು ಈ ಕುರಿತು ನಾವು ಆಕ್ಷೇಪ ಮಾಡಿದರೆ ನಮ್ಮ ವಿರುದ್ದ ಪೊಲೀಸ್ ದೂರು ನೀಡಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ ಎಂದರು. ಈ ಕುರಿತು ಪರಿಶೀಲನೆ ನಡೆಸುತ್ತೇನೆ ಎಂದು ತಹಶೀಲ್ದಾರ್ ಹೇಳಿದರು.

ಮನೆ ಪಡೆಯಲು ಜಾತಿ ಪ್ರಮಾಣ ಪತ್ರದ ಸಮಸ್ಯೆ:

ಕೆಯ್ಯೂರು ಗ್ರಾ.ಪಂ ಸದಸ್ಯ ಕೆ.ಕಿಟ್ಟ ಅಜಿಲರವರು ಮಾತನಾಡಿ ಎಸ್ಸಿ ಮಹಿಳೆಗೆ ಪಂಚಾಯತ್‌ನಲ್ಲಿ ಸರಕಾರದ ಕಾಯ್ದೆಯಂತೆ ಮನೆ ನೀಡಲು ಜಾತಿ ಪ್ರಮಾಣ ಪತ್ರದ ಸಮಸ್ಯೆ ಉಂಟಾಗಿದೆ. ಜಾತಿ ಪ್ರಮಾಣ ಪತ್ರ ತಾಲೂಕಿನಲ್ಲೇ ಕೊಡಬೇಕು. ಆದರೆ ಆಕೆ ಬೇರೆ ಜಿಲ್ಲೆಯಿಂದ ಬಂದಿದ್ದು ಒಂದೇ ಜಾತಿ ಕುಟುಂಬಕ್ಕೆ ಸೇರಿದ್ದರೂ ಅಲ್ಲಿನ ಜಾತಿಯ ಹೆಸರಿಗೂ ಇಲ್ಲಿನ ಜಾತಿಯ ಹೆಸರಿನಲ್ಲಿರುವ ವ್ಯತ್ಯಾಸವೇ ಸಮಸ್ಯೆಗೆ ಕಾರಣವಾಗಿದೆ. ಭಾಗ್ಯಲಕ್ಷ್ಮಿ ಯೋಜನೆಯ ಅರ್ಜಿ ಕೊಡಬೇಕಾದರೂ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲೇ ಜಾತಿ ಪ್ರಮಾಣ ಪತ್ರ ಸಿಗುವಂತೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಶೇಷಪ್ಪ ನೆಕ್ಕಲು ಮತ್ತು ಕೊರಗಪ್ಪ ಧ್ವನಿಗೂಡಿಸಿದರು. ಉತ್ತರಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ಹೊರ ಜಿಲ್ಲೆಯಲ್ಲೂ ಜಾತಿ ಹೆಸರು ಬದಲಾವಣೆ ಇದ್ದರೂ ಅವರು ಪರಿಶಿಷ್ಟ ಜಾತಿ ಅಥವಾ ಪಂಗಡದವರೇ ಆಗಿರುವುದರಿಂದ ಅವರಿಗೆ ಇಲ್ಲಿ ಮೂಲ ಸೌಕರ್ಯ ಖಂಡಿತಾ ಸಿಗಲಿದೆ ಎಂದರು. ಕೊರಗಪ್ಪರವರು ಮಾತನಾಡಿ ಇಲ್ಲಿನ ಮುಗೇರ ಜಾತಿಗೆ ಮಡಿಕೇರಿಯಲ್ಲಿ ಬೇರೆಯೇ ಹೆಸರಿದೆ. ಅದನ್ನು ಬದಲಾಯಿಸಬೇಕಾಗಿದೆ ಎಂದರು. ಉತ್ತರಿಸಿದ ತಹಶೀಲ್ದಾರ್ ಇದು ಸರಕಾರದ ಹಂತದಲ್ಲಿ ನಿರ್ಣಯ ಆಗಬೇಕಾಗಿದೆ ಎಂದರು.

ಪಾಲನಾ ವರದಿ ಕೊಡದ ಸಾರಿಗೆ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳಿ:

ಶೇಷಪ್ಪ ನೆಕ್ಕಿಲುರವರು ಮಾತನಾಡಿ ಕುಂಬ್ರ, ಮುಂಡೂರು, ಕುರಿಯ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ದರ್ಬೆತನಕ ಮಾತ್ರ ಕೆ.ಎಸ್.ಆರ್.ಟಿ.ಸಿ ಬಸ್ ಪಾಸ್ ನೀಡಲಾಗುತ್ತಿದೆ. ಅದನ್ನು ಬಸ್‌ಸ್ಟೇಂಡ್ ತನಕ ವಿಸ್ತರಿಸುವಂತೆ ಹಿಂದಿನ ಸಭೆಗಳಲ್ಲಿ  ಒತ್ತಾಯಿಸಲಾಗಿತ್ತು. ಆದರೆ ಪ್ರತಿ ಬಾರಿ ಕೆ.ಎಸ್.ಆರ್.ಟಿ.ಸಿಯವರು ಪಾಲನಾ ವರದಿ ಕೊಡುವುದಿಲ್ಲ ಎಂದರು. ಉತ್ತರಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ಮಾತ್ರ ಇಲಾಖೆಯಿಂದ ಪಾಸ್ ಕೊಡುವ ವ್ಯವಸ್ಥೆ ಇದೆ ಎಂದರು. ಆಕ್ಷೇಪಿಸಿದ ಶೇಷಪ್ಪ ನೆಕ್ಕಿಲುರವರು ಈ ಕುರಿತು ಕಳೆದ ೨ ವರ್ಷಗಳಿಂದ ಮನವಿ ಮಾಡಲಾಗಿದೆಯಾದರೂ ಇನ್ನೂ ಈ ವಿಚಾರವಾಗಿ ಸರಿಯಾದ ನಿಮ್ಮ ವರದಿಯನ್ನು ಪಾಲನಾ ವರದಿಯಲ್ಲಿ ಕೊಟ್ಟಿಲ್ಲ. ಈ ಕುರಿತು ನಮಗೆ ನೀವು ಹೇಳುವುದು ಬೇಡ. ಮೇಲಾಧಿಕಾರಿಗೆ ವರದಿ ಮಾಡಿ. ಈ ಸಭೆಯಲ್ಲಿ ಡಿಪೋ ಮನೇಜರ್ ವಿರುದ್ಧ ಸೂಕ್ತ ಶಿಸ್ತು ಕ್ರಮಕ್ಕೆ ನಿರ್ಣಯ ಆಗಬೇಕೆಂದು ಪಟ್ಟು ಹಿಡಿದರು.

ಗುದ್ದಲಿ ಪೂಜೆ ಒಂದು ಕಡೆ, ಕಾಮಗಾರಿ ಒಂದು ಕಡೆ:

ನಿಡ್ಪಳ್ಳಿ ಕುಕ್ಕುಪುಣಿ ರಸ್ತೆ ನಿರ್ಮಾಣ ಸಂದರ್ಭದಲ್ಲಿ ರುಕ್ಮಯ್ಯ ಎಂಬವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕೇಸು ಆಗಿದೆ. ಆದರೆ ಅಲ್ಲಿ ರಸ್ತೆಗಾಗಿ ಗುದ್ದಲಿ ಪೂಜೆ ಮಾಡಿದ ಸ್ಥಳವನ್ನು ಬಿಟ್ಟು ರುಕ್ಮಯ ಎಂಬವರ ಪಟ್ಟಾ ಸ್ಥಳದ ಅಡಿಕೆ ಮರ ಕಡಿದು ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಈ ಕುರಿತು ಸರಕಾರಿ ರಜೆ ಸಂದರ್ಭ ಅವರ ಅಡಿಕೆ ಮರಗಳನ್ನು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಸ್ತೆ ಮಾಡಲು ಕಡಿದು ಹಾಕಿದ್ದಲ್ಲದೆ ಅವರಿಗೆ ಜೆಸಿಬಿ ತಾಗಿಸಿದ್ದಾರೆ ಎಂದು ಸುಂದರ ನಿಡ್ಪಳ್ಳಿ ಆರೋಪಿಸಿದರು. ಇದೇ ವಿಚಾರವಾಗಿ ಈ ಹಿಂದೆ ನನ್ನ ಮೇಲೆ ಮಹಿಳೆಯ ಮಾನಭಂಗ ಕುರಿತು ಸುಳ್ಳು ಕೇಸು ಮಾಡಲಾಗಿದೆ ಎಂದ ಅವರು ಜಾಗದಲ್ಲಿ ಇಲ್ಲದವರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು ಸರಿಯೇ ಎಂದು ಪ್ರಶ್ನಿಸಿದರು. ಉತ್ತರಿಸಿದ ಎಸ್.ಐ ಅಬ್ದುಲ್ ಖಾದರ್‌ರವರು ರುಕ್ಮಯ್ಯ ಮತ್ತು ಆನಂದ ನಿಡ್ಪಳ್ಳಿಯವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು. ಇದೊಂದು ಸುಳ್ಳು ದೂರು. ನಾನು ಪ್ರಕರಣ ನಡೆದ ಸಮಯ ಪುತ್ತೂರಿನಲ್ಲಿದ್ದೆ ಎಂದು ಸುಂದರ ನಿಡ್ಪಳ್ಳಿ ಹೇಳಿದರು. ಉತ್ತರಿಸಿದ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್‌ರವರು ಮಹಿಳೆ ಮಾನಭಂಗ ಪ್ರಕರಣದಲ್ಲಿ ಆಕೆಯ ಪ್ರಮಾಣ ಮತ್ತು ಸಾಕ್ಷಿ ಆಧಾರದಲ್ಲಿ ಪ್ರಕರಣ ದಾಖಲಾಗುತ್ತದೆ. ಈ ಕುರಿತು ನೀವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದರು.

ನಮ್ಮ ಬೇಡಿಕೆಗೆ ವಾರ್ಡ್ ಸದಸ್ಯರ ಸಹಿ ಯಾಕೆ?

ಗ್ರಾ.ಪಂನಲ್ಲಿ ನಾವು ಯಾವುದಾದರು ಬೇಡಿಕೆ ಇಟ್ಟಾಗ ಅಲ್ಲಿನ ಪಿಡಿಒರವರು ಬೇಡಿಕೆ ಕುರಿತು ಆಯಾ ವಾರ್ಡ್‌ಗೆ ಸಂಬಂಧಿಸಿದ ಸದಸ್ಯರ ಸಹಿ ಪಡೆದು ಅರ್ಜಿ ತನ್ನಿ ಎಂದು ಹೇಳುತ್ತಾರೆ ಎಂದು ಲೋಹಿತ್ ಅಮ್ಚಿನಡ್ಕ ಹೇಳಿದರು. ಉತ್ತರಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.

ನಗರಸಭೆಯಲ್ಲಿ ಜಾಗದ ಕೊರತೆ ಇದ್ದರೆ ಫ್ಲ್ಯಾಟ್ ಕಟ್ಟಿ ಕೊಡಲಿ:

ನಗರಸಭೆಯಲ್ಲಿ ಬಡವರಿಗೆ ಸರಕಾರದ ಸವಲತ್ತಿನಲ್ಲಿ ಮನೆ ಕಟ್ಟಿಕೊಡಲು ಜಾಗದ ಸಮಸ್ಯೆ ಉಂಟಾಗಿದ್ದರೆ ಕಡಿಮೆ ಸ್ಥಳದಲ್ಲಿ ಒಂದು ಫ್ಲ್ಯಾಟ್ ಕಟ್ಟಿ ಕೊಡಲಿ. ಈ ರೀತಿ ಮಾಡಿದರೆ ಅನೇಕ ಮಂದಿ ನಿರಾಶ್ರಿತರಿಗೆ ಮನೆ ಮಾಡಿ ಕೊಡಬಹುದು ಎಂದು ಗಿರಿಧರ ನಾಯ್ಕರವರು ಸಲಹೆ ನೀಡಿದರು. ಈ ಕುರಿತು ತಾ.ಪಂ ನಿರ್ಣಯಿಸಿ ಸರಕಾರಕ್ಕೆ ಬೇಡಿಕೆ ಇಡುವಂತೆ ಒತ್ತಾಯಿಸಿದರು.

ಸರ್ವೆಯಲ್ಲಿ ರಸ್ತೆಗೆ ಬೇಲಿ:

ಸರ್ವೆಯಲ್ಲಿ ಕುಂಞ ಮತ್ತು ದಿನೇಶ್ ಎಂಬವರು ಮನೆಗೆ ಹೋಗುವ ರಸ್ತೆಗೆ ಅಕ್ರಮವಾಗಿ ಬೇಲಿ ಹಾಕಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಸಹಾಯಕ ಕಮೀಷನರ್‌ಗೂ ದೂರು ನೀಡಲಾಗಿದೆ. ಇಲ್ಲಿನ ತನಕ ಯಾವ ಅಧಿಕಾರಿಗಳೂ ಸ್ಥಳ ತನಿಖೆಗೆ ಬಂದಿಲ್ಲ ಎಂದು ಮಾಧವ ಬಾವಿ ಕಟ್ಟೆ ಹೇಳಿದರು. ಬಲ್ಲೇರಿ ರಕ್ಷಿತಾರಣ್ಯದಲ್ಲಿ ಪರಿಶಿಷ್ಟ ಪಂಗಡದ ಜನರಿಗೆ ಅನ್ವಯವಾಗುವಂತೆ ಇಲಾಖಾ ಆದೇಶದ ತಿದ್ದುಪಡಿ ಮಾಡಿಸಿ ಲ್ಯಾಂಪ್ಸ್‌ಗೆ ಕೊಡಬೇಕು ಎಂದು ನ್ಯಾಯವಾದಿ ಮಂಜುನಾಥ್ ಎನ್.ಎಸ್ ಹೇಳಿದರು. ಕೊರಗಪ್ಪರವರು ಮಾತನಾಡಿ ಕೌಕ್ರಾಡಿಯಲ್ಲಿ ಈರ್ವರು ವಿದ್ಯಾರ್ಥಿಗಳಿಗೆ ಇನ್ನೂ ವಿದ್ಯಾರ್ಥಿವೇತನ ಬಂದಿಲ್ಲ ಎಂದರು. ಪಾಲ್ತಾಡಿಯಲ್ಲಿ ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರಾಗಿದ್ದರೂ ಆರ್.ಟಿ.ಸಿ ಇಲ್ಲದೆ ಮನೆ ಕಟ್ಟಲಾಗಿಲ್ಲ ಎಂದು ಗಿರಿಧರ ನಾಯ್ಕರವರು ಸಭೆಯಲ್ಲಿ ತಿಳಿಸಿದರಲ್ಲದೆ ತಕ್ಷಣ ಅಲ್ಲಿ ಸ್ಥಳ ತನಿಖೆ ಮಾಡಿಸುವಂತೆ ಒತ್ತಾಯಿಸಿದರು. ಕೆಯ್ಯೂರು ದೇವಿನಗರದ ಸುಂದರಿ ನಿಧನರಾಗಿದ್ದು, ಅವರಿಗೆ ಗ್ರಾ.ಪಂನಿಂದ ಸಿಗುವ ಮನೆಯನ್ನು ಅವರ ವಾರಿಸುದಾರರು ಅರ್ಜಿ ಹಾಕಿದಲ್ಲಿ ಉಳಿಸಿಕೊಳ್ಳಬಹುದು ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು. ತಾ.ಪಂ ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಲಲಿತಾ, ಮೀನಾಕ್ಷಿ ಮಂಜುನಾಥ್, ಹರೀಶ್ ಬಿಜತ್ರೆ, ಕಡಬ ತಹಶೀಲ್ದಾರ್ ನಿಂಗಯ್ಯ ಉಪಸ್ಥಿತರಿದ್ದರು.

ಪ.ಜಾತಿ, ಪ.ಪಂಗಡದ ಪೊಲೀಸ್ ಸಭೆಗೂ ಪಿಡಿಒ, ವಿ.ಎ, ಆರ್.ಐ ಭಾಗವಹಿಸುವಂತೆ ಸೂಚನೆ

ಪೊಲೀಸ್ ಇಲಾಖೆಯಿಂದ ನಡೆಯುವ ಪ.ಜಾತಿ ಮತ್ತು ಪ.ಪಂಗಡದ ಕುಂದುಕೊರತೆ ಸಭೆಯಲ್ಲೂ ಆಯಾ ಗ್ರಾಮದ ಅಭಿವೃದ್ಧಿ ಅಧಿಕಾರಿ, ಕಂದಾಯ ಅಧಿಕಾರಿ, ಗ್ರಾಮಕರಣಿಕರು ಭಾಗವಹಿಸಿದರೆ ತಾ.ಪಂ ನಲ್ಲಿ ನಡೆಯುವ ಸಭೆಯಲ್ಲಿ ಒತ್ತಡ ಕಡಿಮೆ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಿಡಿಒ, ವಿ.ಎ, ಆರ್.ಐ ಭಾಗವಹಿಸುವಂತೆ ಸೂಚನೆ ನೀಡುವ ಕುರಿತು ಸಭೆಯಲ್ಲಿ ನಿರ್ಣಯ ಮಾಡುವ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಹೇಳಿದರು. ಧ್ವನಿಗೂಡಿಸಿದ ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್‌ರವರು ಈ ರೀತಿ ಆದರೆ ನಮ್ಮ ಕೆಲಸ ಸುಲಭವಾಗುತ್ತದೆ ಎಂದು ಹೇಳಿ ತಹಶೀಲ್ದಾರ್ ಮತ್ತು ಕಾರ್ಯನಿರ್ವಹಣಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.