ಬೆಂಗಳೂರಿನ ಸ್ಕ್ವಾಡ್‌ಗೆ ಸಿಕ್ಕಿ ಬಿದ್ದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಬಚಾವ್ ಮಾಡಿದ ವಿಭಾಗ ಮಟ್ಟದ ಅಧಿಕಾರಿ? ಆ ರೀತಿ ಆಗಿಲ್ಲ; ಸ್ಕ್ವಾಡ್‌ನವರನ್ನು ನಾವೇ ಕಳಿಸೋದು: ಡಿ.ಸಿ

Puttur_Advt_NewsUnder_1
Puttur_Advt_NewsUnder_1

 

ksrtcಪುತ್ತೂರು: ಟಿಕೆಟ್ ಚೆಕ್ಕಿಂಗ್‌ಗಾಗಿ ಬಂದ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸ್ಕ್ವಾಡ್‌ಗೆ ಸಿಕ್ಕಿ ಬಿದ್ದ ಸರಕಾರಿ ಬಸ್‌ನ ನಿರ್ವಾಹಕರೋರ್ವರು ತಾನು ಅಪಾಯದಿಂದ ಪಾರಾಗಲು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಸ್ಕ್ವಾಡ್ ವಿರುದ್ಧ ಎತ್ತಿ ಕಟ್ಟಲು ಹೋಗಿ ವಿಫಲವಾದ ಮತ್ತು ಟಿಕೆಟ್ ವಿಚಾರದಲ್ಲಿ ಅಕ್ರಮ ಎಸಗಿದ ನಿರ್ವಾಹಕನನ್ನು ಕೆಎಸ್‌ಆರ್‌ಟಿಸಿಯ ವಿಭಾಗೀಯ ಮಟ್ಟದ ಅಧಿಕಾರಿಯೋರ್ವರು ಸ್ಕ್ವಾಡ್‌ನಿಂದ ಬಚಾವ್ ಮಾಡಿದ ಘಟನೆ ಕಬಕದಲ್ಲಿ ನಡೆದ ಬಗ್ಗೆ ತಡವಾಗಿ ವರದಿಯಾಗಿದೆ.

ಸ್ಕ್ವಾಡ್ ರೈಡ್: ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಂಡೆಕ್ಟರ್: ನ.19ರಂದು ಸಾಯಂಕಾಲದ ವೇಳೆ ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ಸೊಂದಕ್ಕೆ ಕಬಕ ಜಂಕ್ಷನ್ ಸಮೀಪ ಬೆಂಗಳೂರಿನಿಂದ ಬಂದಿದ್ದ ಕೆಎಸ್‌ಆರ್‌ಟಿಸಿ ಸ್ಕ್ವಾಡ್‌ನ ಅಧಿಕಾರಿಗಳು ಹತ್ತಿ ಪ್ರಯಾಣಿಕರ ಟಿಕೆಟ್ ಚೆಕ್ ಮಾಡಲಾರಂಭಿಸಿದರು. ಈ ವೇಳೆ ಕಬಕದಲ್ಲಿ ಇಳಿಯಬೇಕಾಗಿದ್ದ 5ಮಂದಿ ಸೇರಿ ಒಟ್ಟು 14 ಪ್ರಯಾಣಿಕರಲ್ಲಿ ಟಿಕೆಟ್ ಇರಲಿಲ್ಲ. ಈ ಬಗ್ಗೆ ನಿರ್ವಾಹಕನನ್ನು ಸ್ಕ್ವಾಡ್ ಅಧಿಕಾರಿಗಳು ವಿಚಾರಿಸಿದಾಗ ನಿರ್ವಾಹಕ ದಿನೇಶ್ ಎಂಬಾತ ಉಡಾಫೆಯ ಮಾತುಗಳನ್ನಾಡಿದ್ದಲ್ಲದೆ ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ತುಳುವಿನಲ್ಲಿ ಮಾತನಾಡಿ, ಇವರು ನಿಜವಾದ ಚೆಕ್ಕಿಂಗ್ ಅಧಿಕಾರಿಗಳು ಅಲ್ಲ, ನಕಲಿ ಅಧಿಕಾರಿಗಳು ಎಂದು ಹೇಳಿಕೊಟ್ಟು  ಅಧಿಕಾರಿಗಳ ವಿರುದ್ಧ ಪ್ರಯಾಣಿಕರೇ ತಿರುಗಿ ಬೀಳುವಂತೆ ಮಾಡಿದ್ದರು ಎಂದು ಹೇಳಲಾಗಿದೆ. ಆರಂಭದಲ್ಲಿ ಕೆಲವು ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದ್ದರಾದರೂ ನಿರ್ವಾಹಕ ದಿನೇಶ್ ಯಾವಾಗಲೂ ಪ್ರಯಾಣಿಕರೊಂದಿಗೆ ಉಡಾಫೆಯ ವರ್ತನೆ ತೋರುತ್ತಿರುವುದು ಗೊತ್ತಿದ್ದ ಪ್ರಯಾಣಿಕರು ಅಧಿಕಾರಿಗಳ ಪರ ನಿಂತರೆನ್ನಲಾಗಿದೆ. ಪ್ರಯಾಣಿಕರಿಂದ ಹಣ ಪಡೆದುಕೊಂಡು ಟಿಕೆಟ್ ನೀಡದೆ ವಂಚಿಸುತ್ತಿರುವ ನಿರ್ವಾಹಕನ ವಿರುದ್ಧ ಅಧಿಕಾರಿಗಳು ಕೇಸು ಬರೆಯಲು ಮುಂದಾಗುತ್ತಿದ್ದಂತೆಯೇ ನಿರ್ವಾಹಕ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ಮಟ್ಟದ ಅಧಿಕಾರಿಯೋರ್ವರಿಗೆ ದೂರವಾಣಿ ಕರೆ ಮಾಡಿ ತನ್ನನ್ನು ರಕ್ಷಿಸುವಂತೆ ಕೇಳಿಕೊಂಡಿದ್ದರೆನ್ನಲಾಗಿದೆ. ಈತನ ಮಾತಿಗೆ ಒಪ್ಪಿದ ಆ ಅಧಿಕಾರಿ ಚೆಕ್ಕಿಂಗ್‌ಗೆ ಬಂದ ಅಧಿಕಾರಿಗಳಿಗೆ ಕರೆ ಮಾಡಿ ಅಕ್ರಮ ಎಸಗಿದ ನಿರ್ವಾಹಕನ ಪರ ಲಾಬಿ ನಡೆಸಿ ಕೇಸು ದಾಖಲಾಗದಂತೆ ನೋಡಿಕೊಂಡರೆನ್ನಲಾಗಿದೆ. ಟಿಕೆಟ್ ತಪಾಸಣೆಯ ವೇಳೆ ಸುಮಾರು 22ನಿಮಿಷ ಬಸ್ ಕಬಕದಲ್ಲಿಯೇ ನಿಂತಿದ್ದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದರೂ ಅಧಿಕಾರಿಗಳು ಇತ್ತ ತಮ್ಮ ಚಿತ್ತ ಹರಿಸಿರಲಿಲ್ಲ ಎಂದು ಪ್ರಯಾಣಿಕರು ಮತ್ತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಚೆಕ್ಕಿಂಗ್‌ಗೆ ಬಂದ ಅಧಿಕಾರಿಗಳೊಂದಿಗೆ ಉಡಾಫೆಯ ಮಾತುಗಳನ್ನಾಡುತ್ತಿದ್ದ ನಿರ್ವಾಹಕ ಅಧಿಕಾರಿಗಳು ಎಷ್ಟೇ ಕೇಳಿದರೂ ಟಿಕೇಟ್ ಮೆಶಿನ್ ನೀಡಲಿಲ್ಲ. ಸುಮಾರು ಹೊತ್ತು ಬಸ್ಸು ಕಬಕದಲ್ಲಿಯೇ ನಿಂತಿದ್ದು, ಬಸ್ಸಿನಲ್ಲಿ ಏನೋ ಗಲಾಟೆ ನಡೆಯುತ್ತಿರುವುದನ್ನು ಕಂಡು ನಾಗರಿಕರು ಸೇರಿದರು. ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೂಡಾ ತಮಗೆ ತಡವಾಗುತ್ತಿದೆ ಎಂದು ಹೇಳಿ ಬೊಬ್ಬೆ ಹೊಡೆಯುತ್ತಿದ್ದರು. ಈ ಘಟನೆಯಲ್ಲಿ ಅಧಿಕಾರಿಗಳ ತಪ್ಪಿಲ್ಲ ನಿರ್ವಾಹಕ ನಮಗೆ ಮಾತ್ರವಲ್ಲದೆ ಬಸ್ಸಿನಲ್ಲಿದ್ದ ಇನ್ನೂ ಹಲವರಿಗೆ ಟಿಕೆಟ್ ನೀಡಿಲ್ಲ ಎಂದು ಕಬಕದಲ್ಲಿ ಇಳಿದಿರುವ ಪ್ರಯಾಣಿಕರು ತಿಳಿಸಿರುವುದಾಗಿ ಸ್ಥಳೀಯರೋರ್ವರು ತಿಳಿಸಿದ್ದಾರೆ.

ಇಲ್ಲಪ್ಪಾ ಆ ರೀತಿ ಏನೂ ಆಗಿಲ್ಲ: ಡಿಸಿ- ಘಟನೆಯ ಬಗ್ಗೆ  ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿಯವರನ್ನು ಸಂಪರ್ಕಿಸಿದಾಗ ’ಇಲ್ಲಪ್ಪಾ ಆ ರೀತಿ ಏನೂ ಆಗಿಲ್ಲ, ಸ್ಕ್ವಾಡ್‌ನವರನ್ನು ನಾವೇ ಕಳಿಸುವುದು. ಪುನಃ ನಾವು ಅವರ ಕರ್ತವ್ಯಕ್ಕೆ ತಡೆಯೊಡ್ಡುತ್ತೇವೆಯೆ. ಅದು ಬಹಳ ದೊಡ್ಡ ತಪ್ಪಲ್ವೇ..? ಮೊನ್ನೆ ಕಬಕದಲ್ಲಿ ಚೆಕ್ಕಿಂಗ್‌ಗೆ ಅಧಿಕಾರಿಗಳು ಬಂದಾಗ ಬಸ್ ನಿರ್ವಾಹಕ ಹೆದರಿ ಏನೋ ಸಣ್ಣ ಘಟನೆ ನಡೆದಿದೆ.  ಈ ಬಗ್ಗೆ ಇನ್ಸೆಪೆಕ್ಟ್‌ರ್‌ರವರನ್ನು ನಾನು ಸಂಪರ್ಕಿಸಿ  ಮಾತನಾಡಿದ್ದೇನೆ ’ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.