ದ.3ರಿಂದ ಸುದಾನದಲ್ಲಿ 24ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ

Puttur_Advt_NewsUnder_1
Puttur_Advt_NewsUnder_1

* ದ.ಕ.ಜಿಲ್ಲೆಯಲ್ಲಿ 2ನೇ ಬಾರಿ ನಡೆಯುವ ಸಮಾವೇಶ

* ತಾಲೂಕು ಮಟ್ಟದಲ್ಲಿ ಸಂಘಟಿಸಿರುವ ಪ್ರಥಮ ಸಮಾವೇಶ

* 34 ಜಿಲ್ಲೆಗಳಿಂದ 340 ವಿದ್ಯಾರ್ಥಿ ತಂಡಗಳು ಭಾಗವಹಿಸುವಿಕೆ

* 10 ನಿಮಿಷದಲ್ಲಿ ಪ್ರಬಂಧ ಮಂಡನೆ

* ಸಮಾವೇಶದಲ್ಲಿ 30 ನಾಯಕರ ಆಯ್ಕೆ

* ಆಯ್ಕೆಯಾದವರು ದ.29ಕ್ಕೆ ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶದಲ್ಲಿ

* ಸ್ಪರ್ಧೆಯಲ್ಲಿ ಪುತ್ತೂರಿನ ನಾಲ್ಕು ವಿದ್ಯಾಸಂಸ್ಥೆಗಳು ಭಾಗವಹಿಸುವಿಕೆ

* ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿ ಪ್ರದರ್ಶನ

ಪುತ್ತೂರು: ಕನಾಟಕ ರಾಜ್ಯ ವಿಜ್ಞಾನ ಪರಿಷತ್ ದ.ಕ ಜಿಲ್ಲಾ ಸಮಿತಿಯು ರಾಜ್ಯ ಮಟ್ಟದ 24ನೇ ಮಕ್ಕಳ ವಿಜ್ಞಾನ ಸಮಾವೇಶವನ್ನು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಹಕಾರದೊಂದಿಗೆ ನೆಹರುನಗರ ಸುದಾನ ವಸತಿಯುತ ಶಾಲೆಯಲ್ಲಿ ದ.3, 4 ಮತ್ತು 5ರಂದು  ಆಯೋಜಿಸಿದೆ ಎಂದು ಸಹಾಯಕ ಕಮೀಷನರ್ ಡಾ. ರಘುನಂದನ್ ಮೂರ್ತಿಯವರು  ಹೇಳಿದ್ದಾರೆ.

ಮಿನಿ ವಿಧಾನ ಸೌಧದಲ್ಲಿನ ಸಹಾಯಕ ಕಮೀಷನರ್ ಕೋರ್ಟ್ ಹಾಲ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು, ದ.ಕ.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು  ದ.ಕ.ಜಿಲ್ಲಾಡಳಿತ, ಜಿ.ಪಂ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸಮುದಾಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 34 ವರ್ಷಗಳ ಹಿಂದೆ ಸ್ಥಾಪನೆಗೊಂಡ ಕ.ರಾ.ವಿ.ಪ ವೈಜ್ಞಾನಿಕ ಜಾಗೃತಿಯ ಕಾರ್ಯಕ್ರಮಗಳಿಗಾಗಿ ಕೇಂದ್ರ ಸರಕಾರದಿಂದ ಪುರಸ್ಕೃತಗೊಂಡ ಸಂಸ್ಥೆಯಾಗಿದ್ದು ಕಳೆದ 23 ವರ್ಷಗಳಿಂದ ಮಕ್ಕಳ ವಿಜ್ಞಾನ ಸಮಾವೇಶಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿಜ್ಞಾನದ ಪ್ರತಿಭೆಗಳ ಅನಾವರಣ ಮಾಡಿದೆ. ಪುತ್ತೂರು ತಾಲೂಕು ಮಟ್ಟದಲ್ಲಿ ರಾಜ್ಯ ಮಟ್ಟದ ಕಾರ‍್ಯಕ್ರಮ ನಡೆಸುವುದು ಪ್ರಥಮವಾಗಿದ್ದು ಸುಮಾರು ರೂ. 7 ಲಕ್ಷ ಖರ್ಚು ತಗಲುವ ಸಾಧ್ಯತೆ ಇದೆ ಎಂದರು.

ದ.3ರಂದು ಬೆಳಿಗ್ಗೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಶಾಸಕಿ ಶಕುಂತಳಾ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಜ್ಞಾನ ಮತ್ತು ವಸ್ತು ಪ್ರದರ್ಶನವನ್ನು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಐವನ್ ಡಿಸೋಜ, ತಾಂತ್ರಿಕ ಗೋಷ್ಠಿಯನ್ನು ವಿಧಾನ ಪರಿಷತ್ತಿನ ಪ್ರತಿಪಕ್ಷ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಉದ್ಘಾಟಿಸಲಿದ್ದಾರೆ. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕ ಅಂಗಾರ, ಬೆಳ್ತಂಗಡಿ ಶಾಸಕ ವಸಂತ ಬಂಗೇರ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೃಪಾ ಅಮರ್ ಆಳ್ವ, ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಡ್ಕ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ.ಶಾಹುಲ್, ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್, ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್, ಕ.ರಾ.ವಿ.ಪ ಸದಸ್ಯ ಟಿ.ಜಿ.ಕೃಷ್ಣಮೂರ್ತಿ ರಾಜೇ ಅರಸ್ , ಜಿ.ಪಂ ಉಪಕಾರ್ಯದರ್ಶಿ ಎನ್.ಆರ್ ಉಮೇಶ್ ಭಾಗವಹಿಸಲಿದ್ದಾರೆ ಎಂದ ಅವರು ದ.೫ಕ್ಕೆ ಸಮಾರೋಪ ಸಮಾರಂಭದಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಯುವ ವಿಜ್ಞಾನಿ ಪ್ರಶಸ್ತಿಯನ್ನು ಬಾಲ ವಿಕಾಸ ಅಕಾಡೆಮಿ ಧಾರವಾಡ ಇದರ ಅಧ್ಯಕ್ಷ ವೇದವ್ಯಾಸ ಹೆಚ್ ಕೌಲಗಿಯವರು ಪ್ರದಾನ ಮಾಡಲಿದ್ದಾರೆ. ಕ.ರಾ.ವಿ.ಪ. ರಾಜ್ಯ ಕಾರ್ಯದರ್ಶಿ ಡಾ. ವಸುಂಧರಾ ಭೂಪತಿ ಬಹುಮಾನ ವಿತರಣೆ, ಸ.ಜ.ನಾಗಲೋಟ ಮಠ ದತ್ತಿನಿಧಿ ಬಹುಮಾನವನ್ನು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಎಚ್. ವಾಲ್ಟರ್ ಡಿಮೆಲ್ಲೋ ವಿತರಿಸಲಿದ್ದಾರೆ ಎಂದರು ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಶಾಸಕ ಕೆ.ಅಭಯಚಂದ್ರ ಜೈನ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ.ವಿ.ಮೋಹಿಯುದ್ದೀನ್ ಬಾವ, ವಿಧಾನ ಪರಿಷತ್ ಸದಸ್ಯರುಗಳಾದ ಕೋಟ ಶ್ರೀನಿವಾಸ್ ಪೂಜಾರಿ, ಕೆ.ಪ್ರತಾಪಚಂದ್ರ ಶೆಟ್ಟಿ, ನಗರಸಭಾ ಸದಸ್ಯ ಜೀವಂಧರ್ ಜೈನ್ ಕಾರ‍್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು  ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ನಾಗೇಂದ್ರ ಮದ್ಯಸ್ಥ, ಡಯಟ್ ಪ್ರಾಂಶುಪಾಲ ಸಿಪ್ರಿಯನ್ ಮೋಂತೆರೋ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕ್ಯಾಂಪ್ಕೋ ಸಂಸ್ಥೆ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ, ಪುತ್ತೂರು ಗೇರು ಸಂಶೋಧನಾ ಕೇಂದ್ರದ ಪ್ರಭಾರ ನಿರ್ದೇಶಕ ಡಾ. ಎಮ್. ಗಂಗಾಧರ ನಾಯಕ್ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪೂರಕ ಕಾರ್ಯಕ್ರಮ:  ದ.3ರಂದು ಅಪರಾಹ್ನ ಗಂಟೆ 1.30 ರಿಂದ ಸುದಾನ ಸಂಸ್ಥೆಯ ಎಡ್ವರ್ಡ್ ಕಾನ್ಫರೆನ್ಸ್ ಹಾಲ್‌ನಲ್ಲಿ ಡಾ. ರವೀಂದ್ರನಾಥ ಐತಾಳ್‌ರವರಿಂದ ಹಾವು, ನಾವು,ನೀವು ಕಾರ್ಯಕ್ರಮ ಸಂಜೆ ಪ್ರೊ. ನರೇಂದ್ರ ನಾಯಕ್ ವೈಜ್ಞಾನಿಕ ಮನೋಭಾವ ಪ್ರಾತ್ಯಕ್ಷಿಕೆ, ಪ್ರಶ್ನೋತ್ತರ ಬಳಿಕ ಮುಖ್ಯ ವೇದಿಕೆಯಲ್ಲಿ ಸುದಾನ ವಸತಿಯುತ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಲಿದೆ.

ದ.4ರಂದು ಬೆಳಿಗ್ಗೆ ಡಾ. ಎಂ.ಕೆ.ಶ್ರೀಶ ಕುಮಾರ್ ರವರಿಂದ ಜಲಸಂರಕ್ಷಣೆ ಕುರಿತು ಉಪನ್ಯಾಸ, ಮಧ್ಯಾಹ್ನ ದಿನೇಶ್ ನಾಯಕ್‌ರವರಿಂದ ಪಶ್ಚಿಮ ಘಟ್ಟದ ಸಸ್ಯ ವೈವಿಧ್ಯತೆಯ ಬಗ್ಗೆ ಉಪನ್ಯಾಸ, ಸಂಜೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆ ಬಗ್ಗೆ ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ. ಸಿ.ಡಿ. ಪ್ರಸಾದ್‌ರವರೊಂದಿಗೆ ನೇರ ಸಂವಾದ ಕಾರ‍್ಯಕ್ರಮ, ಸಂಜೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಲಿದೆ.  ದ.೫ರಂದು ಬೆಳಿಗ್ಗೆ ಕಾಂಚನ ಸುಬ್ರಹ್ಮಣ್ಯ ಭಟ್ ರವರಿಂದ ಗಣಿತ ವಿಜ್ಞಾನ ಭೋಧನೋಪಕರಣಗಳ ಬಳಕೆ ಕುರಿತು ಕಾರ್ಯಕ್ರಮ, ಮೂರು ದಿನವು ಐ.ಡಿ ಚಂದ್ರುರವರಿಂದ ಪರಿಸರ ಮತ್ತು ವಿಜ್ಞಾನ ಗೀತೆಗಳ ಗಾಯನ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಕರುಣಾಕರ ಎಚ್. ಎಸ್ ಹೇಳಿದರು.

ಸಮಾವೇಶ ಯಶಸ್ವಿಯಾಗಲಿದೆ: ರಾಜ್ಯಮಟ್ಟದ ಎಲ್ಲಾ ವಿಜ್ಞಾನ ಸಮಾವೇಶಗಳು ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತದೆ. ಆದರೆ ರಾಜ್ಯಮಟ್ಟದ ವಿಜ್ಞಾನ ಸಮಾವೇಶವನ್ನು ತಾಲೂಕು ಲೆವೆಲ್‌ನಲ್ಲಿ ಸಂಘಟಿಸಿದ್ದು ಇದು ಪ್ರಥಮ. ಈ ನಿಟ್ಟಿನಲ್ಲಿ ಸಮಾವೇಶದ ಪೂರಕವಾಗಿ ಎಲ್ಲಾ ಕೆಲಸ ಆಗಿದೆ. ಜಿಲ್ಲಾ ಮಟ್ಟದಲ್ಲಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಸಭೆಯೂ ನಡೆದಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಕಡಮಜಲು ಸುಭಾಸ್ ರೈ ಹೇಳಿದರು.

ಪ್ರಬಂಧ ಮಂಡನೆ ಪುಸ್ತಕ ರೂಪದಲ್ಲಿ ಹೊರ ಬರಲಿದೆ: ವಿದ್ಯಾರ್ಥಿಗಳು ಮಂಡಿಸಿದ ಪ್ರಬಂಧಗಳು ಮುಂದೆ ಪುಸ್ತಕ ರೂಪದಲ್ಲಿ ಹೊರ ಬರಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್ ರವರು ವಿವರಣೆ ನೀಡಿದರಲ್ಲದೆ ಕಾರ‍್ಯಕ್ರಮಕ್ಕೆ ಈಗಾಗಲೇ ಕಾರ್ಯಕ್ರಮ ಪೂರ್ಣ ಜವಾಬ್ದಾರಿಯನ್ನು ೧೫ ಸಮಿತಿಗಳಿಗೆ ನೀಡಲಾಗಿದೆ. ಸಮಾವೇಶಕ್ಕೆ ಬರುವ ವಿದ್ಯಾರ್ಥಿಗಳಿಗೆ ಪುತ್ತೂರಿನ ಪ್ರೇಕ್ಷಣಿಯ ಸ್ಥಳಗಳನ್ನು ತೋರಿಸುವ ಉzಶದಿಂದ ಕ್ಯಾಂಪ್ಕೋ ಸಂಸ್ಥೆ ಮತ್ತು ಬಾಲವನವನ್ನೆ ಭೇಟಿ ಮಾಡಿಸುವ ಯೋಜನೆ ಇದೆ ಎಂದು ಹೇಳಿದರು.

ಆಯ್ದ ಶಾಲಾ ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರದರ್ಶನ: ವಿಜ್ಞಾನ ಸಮಾವೇಶಕ್ಕೆ ಒಂದು ಕಡೆ ಪ್ರಬಂಧ ಮಂಡನೆಗಳು ನಡೆಯುತ್ತಿದ್ದಂತೆಯೇ ಸಮಾವೇಶವನ್ನು ನೋಡಲು ಆಗಮಿಸುವವರು ವಿವಿಧ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ನೋಡುವ ಅವಕಾಶ ಒದಗಿಸಲಾಗಿದೆ. ಜೊತೆಗೆ ಆಯ್ದ ಶಾಲಾ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿ ಪ್ರದರ್ಶನ ನಡೆಯಲಿದೆ ಎಂದ ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ ವಿಜಯ ಹಾರ್ವಿನ್ ರವರು ಪುತ್ತೂರು ತಾಲೂಕಿನ ಪೈಕಿ ಸುದಾನ ವಿದ್ಯಾಸಂಸ್ಥೆ, ಶ್ರೀ ರಾಮಕೃಷ್ಣ ಪ್ರೌಢಶಾಲೆ, ಇಂದ್ರಪ್ರಸ್ಥ, ವಿವೇಕಾನಂದ ತೆಂಕಿಲ ಶಾಲೆಯವರು ಸಮಾವೇಶದಲ್ಲಿ ಭಾಗಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ಎಂಬ ಮುಖ್ಯ ವಿಷಯಕ್ಕೆ ಸಂಬಂಧಿಸಿ ವಿವಿಧ ಉಪ ವಲಯಗಳ ಅಭ್ಯಾಸಾತ್ಮಕ ಚಟುವಟಿಕೆಗಳ ವೈಜ್ಞಾನಿಕ ಯೋಜನಾ ವರದಿಯನ್ನು ೫ ವಿದ್ಯಾರ್ಥಿಗಳ ತಂಡವು ಸಿದ್ದಪಡಿಸಿ ಸಮಾವೇಶದಲ್ಲಿ ಮಂಡಿಸಲಿದೆ.  ಪ್ರತಿ ಜಿಲ್ಲೆಗೆ ಸಂಬಂಧಿಸಿ ಗ್ರಾಮೀಣ ಮತ್ತು ನಗರ ವಿಭಾಗಗಳಲ್ಲಿ ತಲಾ ೧೦ ರಿಂದ ೧೪  ಮತ್ತು ೧೪ ರಿಂದ ೧೭ ವಯೋಮಾನದ ೨ ಕಿರಿಯ ಮತ್ತು ೩ ಹಿರಿಯ ತಂಡಗಳು ಭಾಗವಹಿಸುತ್ತವೆ. ಒಟ್ಟು ೩೪ ಜಿಲ್ಲೆಗಳಿಂದ ಒಟ್ಟು ೩೪೦ ತಂಡಗಳು ಪಾಲ್ಗೊಳ್ಳುತ್ತವೆ. ಸಮಾವೇಶದಲ್ಲಿ ಆಯ್ಕೆಗೊಂಡ ೩೦ ನಾಯಕರುಗಳು ದ.೨೯ಕ್ಕೆ ಮಹಾರಾಷ್ಟ್ರದ ಭಾರಮತಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಡಾ. ರಘುನಂದನ್ ಮೂರ್ತಿ, ಸಹಾಯಕ ಕಮೀಷನರ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.