ಕೋಡಿಂಬಾಳದಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆಗೆ ಆಗ್ರಹ-ಯಶವಂತಪುರ-ಕಾರವಾರ ರೈಲು ತಡೆದು ಪ್ರತಿಭಟನೆ; ರೈಲ್ವೇ ನಿಲ್ದಾಣದ ಅಭಿವೃದ್ದಿ, ರೈಲು ನಿಲುಗಡೆ-ಅಧಿಕಾರಿಗಳಿಂದ ಭರವಸೆ: ಪ್ರತಿಭಟನೆ ಹಿಂತೆಗೆತ

Puttur_Advt_NewsUnder_1
Puttur_Advt_NewsUnder_1

whatsapp-image-2016-12-02-at-4-21-30-pm

kodimbala1 kodimbala2 kodimbala3

ಕಡಬ: ತಾಲೂಕು ಕೇಂದ್ರವಾಗಲಿರುವ ಕಡಬಕ್ಕೆ ಸಮೀಪ ಇರುವ ಕೋಡಿಂಬಾಳ ರೈಲ್ವೇ ನಿಲ್ದಾಣದ ಅಭಿವೃದ್ಧಿ ಹಾಗೂ ಯಶವಂತಪುರ-ಕಾರವಾರ ಪ್ಯಾಸೆಂಜರ್ ರೈಲು  ನಿಲುಗಡೆಗೆ ಆಗ್ರಹಿಸಿ ಕೋಡಿಂಬಾಳ ರೈಲ್ವೇ ಸ್ಟೇಷನ್ ಅಭಿವೃದ್ದಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಡಿ.೨ರಂದು ರೈಲು ತಡೆದು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸುಮಾರು 7 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಿದ ಅಧಿಕಾರಿಗಳು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ರೈಲು ತಡೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಯಿತು.

ಡಿ.2ರಂದು ಅಪರಾಹ್ನ 2.30ರ ವೇಳೆಗೆ ಕಡಬದಿಂದ ಬೈಕ್ ರ‍್ಯಾಲಿ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ರೈಲು ಹಳಿಯ ಮೇಲೆ ಕುಳಿತು ಘೋಷಣೆ ಕೂಗಿದರು. ಎಂದಿಗಿಂತ ಸುಮಾರು 1 ಗಂಟೆ ತಡವಾಗಿ ಆಗಮಿಸಿದ ರೈಲು ಸಂಜೆ 4 ಗಂಟೆ ಸುಮಾರಿಗೆ ಕೋಡಿಂಬಾಳ ರೈಲು ನಿಲ್ದಾಣ ತಲುಪಿತ್ತು. ನಿಲ್ದಾಣಕ್ಕೆ ಬರುವಾಗಲೇ ನಿಧಾನಗತಿಯಾದ ರೈಲು ನಿಲ್ದಾಣದಲ್ಲಿ ನಿಲುಗಡೆಯಾಯಿತು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ.ಸದಸ್ಯ ಫಝಲ್, ಗಣೇಶ್ ಕೈಕುರೆ ಸೇರಿದಂತೆ ಹೋರಾಟ ಸಮಿತಿಯವರು ರೈಲು ಏರಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವೆಸ್ಟರ್ನ್ ರೈಲ್ವೇ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಕಾಂಡ್ರಿಯವರಿಗೆ ಹಾಗೂ ಕಬಕ-ಪುತ್ತೂರು-ಹಾಸನ ರೈಲ್ವೇ ವಿಭಾಗದ ಸಹಾಯಕ ಇಂಜಿನಿಯರ್ ಗೋಪಾ ಕುಮಾರ್‌ರವರಿಗೆ ಹೋರಾಟ ಸಮಿತಿಯ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್‌ರವರು ಮನವಿ ಸಲ್ಲಿಸಿದರು.

ಮಂಗಳೂರು-ಸುಬ್ರಹ್ಮಣ್ಯ ಲೋಕಲ್ ಟ್ರೈನ್ ಸಂಜೆ ಪುತ್ತೂರಿಗೆ ಬರುತ್ತಿದ್ದು ಇದು ಸುಬ್ರಹ್ಮಣ್ಯಕ್ಕೆ ಬರಬೇಕು,ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ರೈಲು ಕೋಡಿಂಬಾಳದಲ್ಲಿ ನಿಲುಗಡೆಯಾಗಬೇಕು, ಕೋಡಿಂಬಾಳ ನಿಲ್ದಾಣದ ಪ್ಲಾಟ್‌ಫಾರಂನ್ನು ಏರಿಸಬೇಕು, ಅಲ್ಲದೆ ನಿಲ್ದಾಣದಲ್ಲಿ ಶೌಚಾಲಯ, ವಿದ್ಯುತ್, ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂಬ ಬೇಡಿಕೆಗಳನ್ನೊಳಗೊಂಡಿರುವ ಮನವಿಯನ್ನು ಅಧಿಕಾರಿಗಳಿಗೆ ಸಲ್ಲಿಸಲಾಯಿತು.ಮನವಿ ಸ್ವೀಕರಿಸಿ ಉತ್ತರಿಸಿದ ವೆಸ್ಟರ್ನ್ ರೈಲ್ವೇ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಕಾಂಡ್ರಿಯವರು, ಲೋಕಲ್ ಟ್ರೈನ್ ರಾತ್ರಿ ಸುಬ್ರಹ್ಮಣ್ಯಕ್ಕೆ ಬರುವಂತೆ ಮಾಡಲು ಒಂದು ತಿಂಗಳು, ಎಕ್ಸ್‌ಪ್ರೆಸ್ ರೈಲು ನಿಲುಗಡೆ ಹಾಗೂ ಪ್ಲಾಟ್‌ಫಾರಂ ಏರಿಸುವಿಕೆಗೆ 3 ತಿಂಗಳು ಕಾಲಾವಕಾಶ ಅಲ್ಲದೆ ಶೌಚಾಲಯ, ವಿದ್ಯುತ್, ನೀರಿನ ವ್ಯವಸ್ಥೆಯನ್ನು 15 ದಿನದೊಳಗೆ ಮಾಡಿಕೊಡುವ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಹೋರಾಟ ಸಮಿತಿಯವರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡು ಹಳಿ ತೆರವುಗೊಳಿಸುವಂತೆ ಪ್ರತಿಭಟನಾಕಾರರಿಗೆ ಸೂಚನೆ ನೀಡಿದರು.ಪ್ರತಿಭಟನೆಯಲ್ಲಿ ಸುಮಾರು 1500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಪೇಚಿಗೆ ಸಿಲುಕಿದ ಅಧಿಕಾರಿಗಳು-ಬಳಿಕ ನಿಟ್ಟುಸಿರು ಬಿಟ್ಟರು… : ಪ್ರತಿಭಟನೆ ಆರಂಭವಾಗುವ ಮೊದಲು ರೈಲ್ವೇ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ನಿಮ್ಮ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದರಲ್ಲದೆ ರೈಲು ತಡೆಯಂತಹ ಪ್ರತಿಭಟನೆಯನ್ನು ಕೈ ಬಿಡುವಂತೆ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೆ ಇದಕ್ಕೆ ಜಗ್ಗದ ಹೋರಾಟ ಸಮಿತಿಯವರು ಇಂದು ರೈಲು ಇಲ್ಲಿ ನಿಲ್ಲಿಸಲೇಬೇಕು ಎಂದು ಪಟ್ಟು ಹಿಡಿದರು.ಬಳಿಕ ಅಧಿಕಾರಿಗಳು ಇಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ರೈಲ್ವೇ ಉನ್ನತಾಧಿಕಾರಿಗಳಿಗೆ ತಿಳಿಸಿದ ಪರಿಣಾಮ ಪ್ರತಿಭಟನೆಯ ವೇಳೆ ರೈಲು ನಿಲುಗಡೆಗೆ ಹಸಿರು ನಿಶಾನೆ ದೊರೆತಿತ್ತು.ರೈಲು ನಿಲ್ಲಿಸಿ ಮನವಿ ಸಲ್ಲಿಸುವ ಕಾರ್ಯಕ್ರಮ ಆರಂಭದಲ್ಲಿ ನಿಗದಿಯಾಗಿರಲಿಲ್ಲವಾದ್ದರಿಂದ ಬೆಂಗಳೂರಿನಿಂದ ಆಗಮಿಸಿದ ರೈಲು ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದಲ್ಲಿ ಸುಮಾರು ೧ ಗಂಟೆ ಕಾಲ ನಿಲುಗಡೆಯಾಗಿತ್ತು.ಇದರಿಂದ ಪೇಚಿಗೆ ಸಿಲುಕಿದ್ದ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ರೈಲು ನಿಲುಗಡೆಗೊಳಿಸುವಲ್ಲಿ ಯಶಸ್ವಿಯಾಗಿ ಕೊನೆಗೂ ನಿಟ್ಟುಸಿರು ಬಿಟ್ಟರು.

ಬೇಡಿಕೆ ಈಡೇರದಿದ್ದರೆ ಹೋರಾಟ ನಿಲ್ಲದು-ಸಯ್ಯದ್ ಮೀರಾ ಸಾಹೇಬ್: ಕೋಡಿಂಬಾಳ ರೈಲ್ವೇ ಸ್ಟೇಷನ್ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್‌ರವರು ಮಾತನಾಡಿ, ಕೋಡಿಂಬಾಳ ರೈಲ್ವೇ ನಿಲ್ದಾಣ ೧೯೮೨ರಲ್ಲಿ ಪ್ರಾರಂಭವಾಗಿದೆ.ಈ ಹಿಂದೆ ಬೆಂಗಳೂರು-ಮಂಗಳೂರು ರೈಲು ಕೋಡಿಂಬಾಳದಲ್ಲಿ ನಿಲುಗಡೆಯಾಗುತ್ತಿತ್ತು.ಹಳಿ ಪರಿವರ್ತನೆಯಾದ (ಬ್ರಾಡ್‌ಗೇಜ್)ಬಳಿಕ ಲೋಕಲ್ ರೈಲುಗಳು ಮಾತ್ರ ನಿಲುಗಡೆಯಾಗುತ್ತಿವೆ.ಕೋಡಿಂಬಾಳ ರೈಲ್ವೇ ನಿಲ್ದಾಣ ಕಡಬಕ್ಕೆ ಸುಮಾರು ಎರಡು ಕಿ.ಮೀ ಅಂತರವಿದ್ದು ಈ ಭಾಗದ ಸುಮಾರು ೨೭ಕ್ಕೂ ಗ್ರಾಮಗಳ ಸುಮಾರು ೭೫ ಸಾವಿರ ಪ್ರಯಾಣಿಕರಿಗೆ ಅನುಕೂಲವಿಲ್ಲದೆ ರೈಲು ಇದ್ದೂ ಇಲ್ಲದಂತಾಗಿದೆ.ಅಲ್ಲದೆ ಇಲ್ಲಿ ಮೂಲಭೂತ ಸೌಕರ‍್ಯಗಳಿಗೂ ಆದ್ಯತೆ ನೀಡಬೇಕು ಒಂದು ವೇಳೆ ಅಧಿಕಾರಿಗಳು ಬೇಡಿಕೆ ಈಡೇರಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಸಯ್ಯದ್ ಮೀರಾ ಸಾಹೇಬ್ ಎಚ್ಚರಿಸಿದರು.

ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್, ರೈಲ್ವೇ ಅಭಿವೃದ್ದಿ ಹೋರಾಟ ಸಮಿತಿಯ ಸಂಚಾಲಕ, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ತಾ.ಪಂ. ಸದಸ್ಯೆ ಪಿ.ವೈ ಕುಸುಮಾ, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ್ ಎಂ.ಎಸ್, ಜೇಸಿಐ ಕಡಬ ಕದಂಬ ಅಧ್ಯಕ್ಷ ಜಯರಾಮ ಆರ್ತಿಲ, ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ರೈ, ಕಡಬ ಸಿ.ಎ ಬ್ಯಾಂಕ್ ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಗೌಡ ಬಳ್ಳೇರಿ, ಎ.ಪಿ.ಎಂ.ಸಿ ಸದಸ್ಯೆ ಶಾಲಿನಿ ಸತೀಶ್ ನಾಕ್, ಕಡಬ ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ಡಿ ಕೋಲ್ಪೆ, ಪ್ರಮುಖರಾದ ಎಲ್ಸಿತೋಮಸ್, ಶ್ಯಾಮ್ ತೋಮಸ್, ಸುಧೀರ್‌ಕುಮಾರ್ ಶೆಟ್ಟಿ, ಚೆನ್ನಪ್ಪ ಗೌಡ, ಸತೀಶ್ ನಾಯಕ್, ನಿವೃತ್ತ ಮುಖ್ಯ ಶಿಕ್ಷಕ ಗಣಪತಿ ಭಟ್, ಕಡಬ ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರು ಪೀಟರ್ ಜಾನ್ ಒ.ಐ.ಸಿ ಮೊದಲಾದವರು ಪ್ರತಿಭಟನೆಯನ್ನು ಉzಶಿಸಿ ಮಾತನಾಡಿದರು.ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ, ಮಜ್ಜಾರು ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಪ್ರಸಾದ್ ಎಡಪತ್ಯ, ಪ್ರಮುಖರಾದ ಸೂರ‍್ಯನಾರಾಯಣ ಭಟ್ ಪಟ್ರೋಡಿ, ಡಿ.ಎಂ.ಆಲಿ ಕೋಡಿಂಬಾಳ, ಹರೀಶ್ ಶೆಟ್ಟಿ ನಡುಮಜಲು, ಜೆಡಿಎಸ್ ಮುಖಂಡ ಸುಂದರ ಗೌಡ ಬಳ್ಳೇರಿ, ನ್ಯಾಯವಾದಿ ಇಸಾಕ್, ಕಡಬ ಒಕ್ಕಲಿಗ ಗೌಡ ಸಂಘದ ಅದ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ತಾಲೂಕು ಜಯ ಕರ್ನಾಟಕ ಸಂಘಟನೆಯ ಉಪಾಧ್ಯಕ್ಷ ಪಿ.ಪಿ.ಎಲಿಯಾಸ್,ಕಡಬ ಕದಂಬ ಹಿತರಕ್ಷಣಾ ಸಂಘಟನೆಯ ಅಧ್ಯಕ್ಷ ಸೀತಾರಾಮ ಕೆ, ಮಹಮ್ಮದಾಲಿ ಹೊಸ್ಮಠ, ಸುಜೀತ್ ಪಿ.ಕೆ, ಹಾಜಿ ಮಹಮ್ಮದ್ ಕುಂಞ, ನೂಜಿಬಾಳ್ತಿಲ ಕ್ರಿಶ್ಚಿಯನ್ ಅಸೋಸಿಯೇಶನ್‌ನ ಕೆ.ಜೆ.ತೋಮಸ್, ಅಶೋಕ್ ಕುಮಾರ್ ರೈ ವಜ್ರಪಾಣಿ, ಎಚ್.ಕೆ, ಇಲ್ಯಾಸ್, ಕರುಣಾಕರ ಗೋಗಟೆ, ಡೆನ್ನಿಸ್ ಫೆರ್ನಾಂಡೀಸ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಶೇಷ ಪೋಲಿಸ್ ಬಂದೋಬಸ್ತ್: ಪ್ರತಿಭಟನೆ ಹಿನ್ನಲೆಯಲ್ಲಿ ಕೋಡಿಂಬಾಳ ರೈಲ್ವೇ ನಿಲ್ದಾಣ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ರೈಲ್ವೇ ಪೊಲೀಸರಲ್ಲದೆ ಹಾಗೂ ಪುತ್ತೂರು  ಗ್ರಾಮಾಂತರ ಪ್ರಭಾರವನ್ನೂ ಹೊಂದಿರುವ ನಗರ ಠಾಣಾ ಇನ್ಸ್‌ಪೆಕ್ಟರ್ ಮಹೇಶ್ ಕುಮಾರ್, ಸಂಪ್ಯ ಠಾಣೆಯ ಎಸ್.ಐ ಅಬ್ದುಲ್ ಖಾದರ್, ಕಡಬ ಠಾಣೆ ಸೇರಿದಂತೆ ವಿವಿಧ ಠಾಣೆಗಳ ಪೋಲಿಸರ ನೇತೃತ್ವದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಧಾನಿ ಕಛೇರಿಯಿಂದ ನಿರ್ದೇಶನ ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ

೧೯೮೫ರಲ್ಲಿ ಕೋಡಿಂಬಾಳದ ಮೂಲಕ ರೈಲು ಸಂಚಾರ ಆರಂಭವಾಗಿದ್ದು, ಊರವರ ಪ್ರಯತ್ನದ ಫಲವಾಗಿ ೧೯೯೨ರ ಮಾರ್ಚ್ ೮ರಂದು ರೈಲು ನಿಲುಗಡೆಗೆ ಆದೇಶ ನೀಡಲಾಗಿತ್ತು.ತದನಂತರ ರೈಲು ಮಾರ್ಗ ಮೀಟರ್ ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಪರಿವರ್ತನೆಯಾಗಿದ್ದು, ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ನೀಡುತ್ತಿಲ್ಲ. ಅದರಿಂದಾಗಿ ಬೆಂಗಳೂರು, ಕೇರಳ ಸೇರಿದಂತೆ ದೂರದೂರಿಗೆ ತೆರಳುವ ಕಡಬ ಪರಿಸರದ ೧೯ ಗ್ರಾಮದ  ಪ್ರಯಾಣಿಕರು ಬಸ್ಸುಗಳನ್ನೇ ಅವಲಂಬಿಸಬೇಕಾಗಿದೆ. ರೈಲು ನಿಲ್ದಾಣದಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಅಸಮರ್ಪಕ ಪ್ಲಾಟ್ ಫಾರಂನಿಂದಾಗಿ ಪ್ರಯಾಣಿಕರು ರೈಲುಬಂಡಿಗೆ ಹತ್ತುವುದು ಮತ್ತು ಇಳಿಯುವುದು ತ್ರಾಸದ ಕೆಲಸವಾಗಿ ಪರಿಣಮಿಸಿದೆ. ತಾಲೂಕು ಕೇಂದ್ರವಾಗಲಿರುವ ಕಡಬ ಪ್ರದೇಶವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಕಡಬ ಪೇಟೆಗೆ ಸಮೀಪದಲ್ಲಿರುವ ಕೋಡಿಂಬಾಳ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವುದರೊಂದಿಗೆ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಅವಕಾಶ ಸಿಗಬೇಕು.ಈ ಕುರಿತು ಪ್ರಧಾನ ಮಂತ್ರಿ, ರೈಲ್ವೇ ಸಚಿವರು, ಸಂಸದರು ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ.ಅವರೆಲ್ಲರೂ ಈ ಕುರಿತು ರೈಲ್ವೇಯ ಹಿರಿಯ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.ಈ ನಿಟ್ಟಿನಲ್ಲಿ ರೈಲ್ವೇ ಅಧಿಕಾರಿಗಳಿಗೆ ಚುರುಕುಮುಟ್ಟಿಸಲು ರೈಲು ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಈ ಬಗ್ಗೆ ಹೋರಾಟ ಸಮಿತಿ ರಚನೆ ಮಾಡಿಕೊಳ್ಳಲಾಗಿತ್ತು.ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸೈಯದ್ ಮೀರಾ ಸಾಹೇಬ್ ಅಧ್ಯಕ್ಷರಾಗಿ, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ ಸಂಚಾಲಕರಾಗಿ, ಕೆ.ವಿ.ಶಿವರಾಮ ಗೌಡ ಕಲ್ಕಳ ಕಾರ‍್ಯದರ್ಶಿಯಾಗಿ, ಕಡಬ ವರ್ತಕ ಸಂಘದ ಪ್ರಧಾನ ಕಾರ‍್ಯದರ್ಶಿ ಸುಜೀತ್ ಪಿ.ಕೆ, ಮಂಜುನಾಥ ಶೆಟ್ಟಿ ನವಸುಮ, ಪಿ.ಟಿ. ಸೈಮನ್, ಸತೀಶ್ ನಾಕ್ ಮೆಲಿನ ಮನೆ, ಅಬ್ದುಲ್ ರಹಿಮಾನ್ ಅಡ್ಕಾಡಿರವನ್ನೊಳಗೊಂಡ ಹೋರಾಟ ಸಮಿತಿಯೊಂದನ್ನು ರಚಿಸಿಕೊಂಡು ರೈಲು ತಡೆಯುವ ನಿರ್ಧಾರ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.