ಸಾಂಸ್ಕೃತಿಕ ಲೋಕದ  ಸಾರಥಿ ’ಡಿಂಡಿಮ’ ಚಿದಾನಂದ ಕಾಮತ್ ಕಾಸರಗೋಡು..

Puttur_Advt_NewsUnder_1
Puttur_Advt_NewsUnder_1

 

kamath

ಹ್ಯಾಟ್ಸಪ್

ಕಾಮತ್‌ರೇ…

ಕಾಮತ್‌ರವರು ಬೆನ್ನು ತಟ್ಟಿದರೆಂದರೆ ತೊದಲುವ ಪುಟ್ಟ ಕಂದಮ್ಮ ಕೂಡ ಸಾವಿರ ಸಾವಿರ ಜನರಿರುವ ಸಭೆಯ ಮುಂದೆ ವೇದಿಕೆ ಹತ್ತುತ್ತದೆ. ತಮಗೆ ಇಷ್ಟ ಬಂದಂತೆ ಹಾಡುತ್ತದೆ. ಕುಣಿಯುತ್ತದೆ.ಕೇಕೆ ಹಾಕುತ್ತದೆ. ಇದಕ್ಕಿಂತ ಬೇರೆನೂ ಬೇಕು. ಒಂದು ಪುಟ್ಟ ಮಗು ವೇದಿಕೆ ಹತ್ತಿ ಹತ್ತು ಜನರೆದುರು ಹಾಡಿ ಕುಣಿಯುತ್ತಿರುವುದನ್ನು ನೋಡಿ ಸಂಸತಗೊಳ್ಳುವ ಹೆತ್ತಕರುಳು. ಇವೆಲ್ಲನ್ನೂ ಎಲೆ ಮರೆಯ ಕಾಯಿಯಂತೆ ಕಣ್ತುಂಬಿಸಿಕೊಳ್ಳುತ್ತಿರುವ ಕಾಮತ್. ಪ್ರತಿಭೆಗೆ ಪ್ರೋತ್ಸಾಹ ನೀಡುವ ಸೇವೆ ಅಂದರೆ ಇದಲ್ವಾ… ಹ್ಯಾಟ್ಸ್‌ಅಫ್ ಕಾಮತ್ ಸರ್.

ಹೌದು…ಅವರು ಚಿದಾನಂದ ಕಾಮತ್ ಕಾಸರಗೋಡು, ಆ ಒಂದು ಹೆಸರು ಕೇಳಿದಾಗಲೆಲ್ಲಾ ನಮಗರಿವಿಲ್ಲದಂತೆ ಸಾಂಸ್ಕೃತಿಕ ಲೋಕವೊಂದು ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಬಾರಿಸು ಕನ್ನಡ ಡಿಂಡಿಮವ ಎಂಬ ಕನ್ನಡ ಕಹಳೆ ಸದ್ದಿಲ್ಲದಂತೆ ಹೃದಯದಲ್ಲಿ ಢವಗುಡುತ್ತದೆ. ಕಾರ್ಮಿಕ ಇಲಾಖೆಯಲ್ಲಿ ಸುಮಾರು 33 ವರ್ಷಗಳ ಕಾಲ ವೃತ್ತಿ ಜೀವನ ನಡೆಸಿ, ಸರಕಾರಿ ಕೆಲಸಕ್ಕೆ ಒಂದಿಷ್ಟು ಚ್ಯುತಿ ಬರದಂತೆ ತನ್ನ ಪ್ರವೃತ್ತಿಯಾಗಿರುವ ಸಾಂಸ್ಕೃತಿಕ ಕ್ಷೇತ್ರದಲ್ಲೂ ಬಹಳಷ್ಟು ಸಾಧನೆ ಮಾಡಿರುವ ಚಿದಾನಂದ ಕಾಮತ್ ಕಾಸರಗೋಡುರವರು ಇದೀಗ ವೃತ್ತಿಯಿಂದ ನಿವೃತ್ತಿಯಾಗಿ ಪ್ರವೃತ್ತಿಯತ್ತ ಪಯಣಿಸುತ್ತಿದ್ದಾರೆ. ಪುಟ್ಟ ಮಗುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರೊಂದಿಗೆ ನಗುಮೊಗದಿಂದ ಮಾತನಾಡಿಸುವ ಕಾಮತ್ ಮಾಮ್‌ರವರಿಗೆ ಈ ಶುಭ ಸಂದರ್ಭದಲ್ಲಿ ಶುಭ ಹಾರೈಕೆಗಳೊಂದಿಗೆ ಈ ಬರಹದ ಪ್ರೀತಿಯ ಕಾಣಿಕೆಯನ್ನು ಅರ್ಪಣೆ ಮಾಡುತ್ತಿzವೆ…

ಕಾಮತ್‌ರವರ ಬಾಲ್ಯ: ಕಾಸರಗೋಡು ದಿ.ಶಿವರಾಯ ಕಾಮತ್ ಮತ್ತು ಹೇಮಾವತಿ ಕಾಮತ್‌ರವರ ಪ್ರಥಮ ಪುತ್ರನಾಗಿ ಚಿದಾನಂದ ಕಾಮತ್‌ರವರು 1956 ನವೆಂಬರ್ 25 ರಂದು ಬಂಟ್ವಾಳ ತಾಲೂಕು ವಿಟ್ಲದಲ್ಲಿ ಜನಿಸುತ್ತಾರೆ. ಕಾಸರಗೋಡು ಸರಕಾರಿ ಶಾಲೆಯಲ್ಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಕಾಸರಗೋಡು ಬಿ.ಇ.ಎಂ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆಯುತ್ತಾರೆ. ತನ್ನ 20 ನೇ ವಯಸ್ಸಿನಲ್ಲಿ ಕಂಪೆನಿ ನಾಟಕದತ್ತ ಕಾಮತ್‌ರವರ ಒಲವು ಹರಿಯುತ್ತದೆ. ಕೆಮ್ತೂರು ದೊಡ್ಡಣ್ಣ ಶೆಟ್ಟಿಯವರ ತುಳುನಾಡು ಸಾಹಿತ್ಯ ಕಲಾ ಮಂಡಳಿ ಎಂಬ ನಾಟಕ ಕಂಪೆನಿಗೆ ಸೇರ್ಪಡೆಗೊಳ್ಳುತ್ತಾರೆ. ಆ ಮೂಲಕ ದೇಶದಾದ್ಯಂತ ಕನ್ನಡ, ತುಳು ನಾಟಕಗಳಲ್ಲಿ ಅಭಿನಯ ನೀಡುತ್ತಾರೆ. ಬಳಿಕ ಕಾಸರಗೋಡಿಗೆ ಹಿಂದುರುಗಿದ ಕಾಮತ್‌ರವರು ಮಿತ್ರ ಕಲಾ ವೃಂದ ಎಂಬ ನಾಟಕ ತಂಡಕ್ಕೆ ಸೇರುತ್ತಾರೆ. ಕೆಲವೊಂದು ಉತ್ಸಾಹಿ ತರುಣರು ಸೇರಿಕೊಂಡು ಯವನಿಕ ಎಂಬ ನಾಟಕ ತಂಡ ಕಟ್ಟಿ ಅದರ ಸ್ಥಾಪಕ ಸದಸ್ಯರಾಗುತ್ತಾರೆ. ಕಾಮತ್‌ರವರು ನಾಟಕ ತಂಡಕ್ಕೆ ಸೇರ್ಪಡೆಗೊಂಡು ಕಲಾ ರಂಗಕ್ಕೆ ಬರಲು ಮೂಲಕ ಕಾರಣೀಕರ್ತರು ದಿ.ವೇಣುಗೋಪಾಲ ಕಾಸರಗೋಡುರವರು ಎಂಬುದನ್ನು ಇಲ್ಲಿ ಹೇಳಲೇಬೇಕಾಗುತ್ತದೆ.

ಅನಿತಾ ಕಾಮತ್‌ರವರ ಕೈಹಿಡಿದು ದಾಂಪತ್ಯದರ ಮನೆಗೆ ಪ್ರವೇಶ: ಉಜಿರೆಯ ಕಡಿರುದ್ಯಾವರ ದಿ.ಉಮೇಶ ಪ್ರಭು ಮತ್ತು ಪ್ರೇಮಾರವರ ಪುತ್ರಿಯಾಗಿರುವ ಅನಿತಾ ಕಾಮತ್‌ರವರನ್ನು1982 ರಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಕಿರಣ್‌ರಾಜ್ ಮತ್ತು ನೀತಾ ಎಂಬಿಬ್ಬರು ಮುದ್ದಾದ ಮಕ್ಕಳನ್ನು ಪಡೆದಿರುವ ಕಾಮತ್‌ರವರು ಪ್ರಸ್ತುತ ಪುತ್ತೂರು ಪರ್ಲಡ್ಕದ ಕಲಾಸ್ಪೂರ್ತಿ ನಿವಾಸದಲ್ಲಿ ಪತ್ನಿ ಅನಿತಾರವರ ಜೊತೆಯಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ. ಮಗ ಕಿರಣ್‌ರಾಜ್, ಸೊಸೆ ಕಾವ್ಯ, ಮೊಮ್ಮಕ್ಕಳಾದ ಆರ್ಣವಿ, ವಿವಾನ್‌ರವರು ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಪುತ್ರಿ ನೀತಾ ಮತ್ತು ಅಳಿಯ ಸಂತೋಷ್ ಪೈ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

ಸರಕಾರಿ ಸೇವೆಗೆ ಪಾದಾರ್ಪಣೆ: ಅದು 1983 ನೇ ಇಸವಿ. 1982 ರಲ್ಲಿ ಕಾಮತ್‌ರವರಿಗೆ ವಿವಾಹವಾಗುತ್ತದೆ. 83 ರಲ್ಲಿ ಅವರು ಕಾರ್ಮಿಕ ಇಲಾಖೆಗೆ ಕಾರ್ಕಳದಲ್ಲಿ ಸೇರ್ಪಡೆಗೊಳ್ಳುತ್ತಾರೆ.1993 ರಲ್ಲಿ ಮಂಗಳೂರಿನ 4 ನೇ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕರ ಕಛೇರಿಗೆ ವರ್ಗಾವಣೆಗೊಂಡು ಅಲ್ಲಿಂದ 2003 ರಲ್ಲಿ ಪುತ್ತೂರು ಕಛೇರಿಯಲ್ಲಿ ಕರ್ತವ್ಯವನ್ನು ಆರಂಭಿಸುತ್ತಾರೆ. 2016 ರವರೇಗೆ ಅಂದರೆ 13 ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿ ಇದೀಗ ವೃತ್ತಿಯಿಂದ ನಿವೃತ್ತಿಯಾಗಿದ್ದಾರೆ. ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಬಿಡುವಾದಗಲೆಲ್ಲಾ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕನ್ನಡಮ್ಮನ ಸೇವೆಯನ್ನೂ ಮಾಡಿದ್ದಾರೆ. ಕಾರ್ಕಳದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಕಾರ‍್ಯದರ್ಶಿಯಾಗಿ ನೌಕರರನ್ನು, ಅಧಿಕಾರಿಗಳನ್ನು ಒಟ್ಟು ಸೇರಿಸಿ ಅನೇಕ ನಾಟಕಗಳನ್ನು ನಡೆಸಿಕೊಟ್ಟಿದ್ದಾರೆ.1984  ರಿಂದ1992 ರವರೆಗೆ ಕಾರ್ಕಳ ಜೇಸಿ ಸದಸ್ಯರಾಗಿ ಪದಾಧಿಕಾರಿಯಾಗಿ, ಕಾರ‍್ಯಕ್ರಮ ನಿರೂಪಕರಾಗಿ ಕೆಲಸ ಮಾಡಿದ್ದಾರೆ.1993 ರ ಬಳಿಕ ಮಂಗಳೂರು ಕಛೇರಿ ಸೇರಿದ ಮೇಲೆ ಕುಂದಾಪುರ ಕುಳ್ಳಪ್ಪು ನಾಟಕ ಕಂಪೆನಿಯಲ್ಲಿ ಅನೇಕ ನಾಟಕಗಳಲ್ಲಿ ಪಾತ್ರ ನಿರ್ವಹಣೆ ಮಾಡಿದ್ದಾರೆ.

ನಾಟಕ ರಂಗದಲ್ಲಿ ಕಾಮತ್: ಚಿದಾನಂದ ಕಾಮತ್ ಕಾಸರಗೋಡುರವರು ಕೊಂಕಣಿ, ಕನ್ನಡ ಮತ್ತು ತುಳು ಸೇರಿದಂತೆ ಸುಮಾರು 500 ಕ್ಕೂ ಮಿಕ್ಕಿ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಣೆ ಮಾಡಿದ್ದಾರೆ. ಮುಖ್ಯವಾಗಿ ಶ್ರೀನಿವಾಸ್ ಪ್ರಭುರವರ ’ಬಂದಾ ಬಂದಾ ಸರದಾರ’, ದಿ.ವಿಶು ಕುಮಾರ್‌ರವರ ’ಡೊಂಕು ಬಾಲದ ನಾಯಕರುೞ, ದಿ.ವೇಣುಗೋಪಾಲ್ ಕಾಸರಗೋಡುರವರ ’ಮಣ್ಣಿನ ಗೊಂಬೆೞ, ಬೇಲೂರು ಕೃಷ್ಣಮೂರ್ತಿಯವರ ’ ರಾಮು’, ಕೆಮ್ಟೂರು ದೊಡ್ಡಣ್ಣ ಶೆಟ್ರ ’ಇಂಚಂಡಾ ಎಂಚಾ?’ ಇತ್ಯಾದಿ ನಾಟಕಗಳಲ್ಲಿ ಕಾಮತ್‌ರವರು ಅಮೋಘ ಅಭಿನಯವನ್ನು ನೀಡಿದ್ದಾರೆ.

ಬೆಳ್ಳಿ ಪರದೆಯ ಮೇಲೆ ಕಾಮತ್: ಚಿದಾನಂದ ಕಾಮತ್‌ರವರು 1980 ರಲ್ಲಿ ತನ್ನ ಯೌವನದಲ್ಲಿಯೇ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಖ್ಯಾತ ನಿರ್ದೇಶಕಿ ಪ್ರೇಮಾ ಕಾರಂತ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ಸಿನಿಮಾ ಪಣಿಯಮ್ಮದ ಮೂಲಕ ಕಾಮತ್‌ರವರು ಸಿನಿ ರಂಗ ಪ್ರವೇಶ ಮಾಡಿದರು. ಅಲ್ಲಿಂದ ಕೊಂಕಣಿ ಸಿನಿಮಾ ಉಜ್ವಾಡ್, ಕನಸು ಕಣ್ಣು ತೆರೆದಾಗ, ಸುಂದರ್ ರೈ ಮಂದಾರರ ಪನೊಡಾ ಬೊಡ್ಚಾ, ಈ ತಿಂಗಳ ಕೊನೆಯಲ್ಲಿ ತೆರೆ ಕಾಣಲಿರುವ ಗುಡ್ಡೆದ ಭೂತ ಇತ್ಯಾದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಿರುತೆರೆಯಲ್ಲಿ ಕಾಮತ್: ಸರಕಾರಿ ಕೆಲಸದ ಬಿಡುವಿನ ವೇಳೆಯಲ್ಲಿ ಕಿರುತೆರೆಯಲ್ಲೂ ಕೆಲಸ ಮಾಡಿರುವ ಕಾಮತ್‌ರವರು ಝೀ ಕನ್ನಡ ಚಾನೆಲ್‌ನಲ್ಲಿ ಯಶಸ್ವಿ ಪ್ರದರ್ಶನ ಕಂಡ ಪ್ರೀತಿ ಎಂಬ ಮಾಯೆ ಧಾರಾವಾಹಿಯಲ್ಲಿ ನಾಯಕಿಯ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಹಾಸ್ಯ ಧಾರಾವಾಹಿ ಗುಗ್ಗು ನನ್ ಮಕ್ಳು, ಮಂಗಳೂರು ಹುಡುಗಿ ಹುಬ್ಳಿ ಹುಡುಗ, ಶಿವಧ್ವಜ್ ನಿರ್ದೇಶನದ ಸುವರ್ಣದಲ್ಲಿ ಪ್ರಸಾರಗೊಂಡ ಗೊತ್ತಾನಗ ಪೊರ್ತಾಂಡ್,ಮಂದಾರ ನಿರ್ದೇಶನದ ನಮ ತೆಲಿಪುಗ, ಕುಡ ತೆಲಿಪುಗ ಇತ್ಯಾದಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ’ಕಲ್ಕುಡ ಕಲ್ಲುರ್ಟಿ’, ಸಸ್ಪೆನ್ಸ್ ಹಾಗೂ ಇದೀಗ ಚಿತ್ರೀಕರಣಗೊಳ್ಳುತ್ತಿರುವ ಕೊಂಕಣಿ ಕಿರುಚಿತ್ರ ’ಅಂತು’ವಿನಲ್ಲಿಯೂ  ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ…: ಕಾಮತ್‌ರವರ ಸಾಧನೆಗೆ, ಅವರ ಕನ್ನಡ ಸೇವೆಗೆ, ಸಾಂಸ್ಕೃತಿಕ ರಂಗದಲ್ಲಿ ಮಾಡಿದ ಸಾಧನೆಗೆ ಅವರಿಗೆ ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಅದರಲ್ಲಿ ಮುಖ್ಯವಾಗಿ 2010 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಕೂಡ ಸೇರಿಕೊಂಡಿದೆ.

ಡಿಂಡಿಮ ಕಾಮತ್….: ಚಿದಾನಂದ ಕಾಮತ್ ಎಂದ ಕೂಡಲೇ ನೆನಪಿಗೆ ಬರುವುದು ಬಾರಿಸು ಕನ್ನಡ ಡಿಂಡಿಮವ. 2004 ರಲ್ಲಿ ದಿ.ಬೊಳುವಾರು ಮಾಧವ ನಾಯಕ್ ಮಕ್ಕಳು ನೀಡಿದ ಕೊಠಡಿಯಲ್ಲಿ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿಯವರ ನಾಮ ನಿರ್ದೇಶನದಂತೆ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಎಂಬ ಕನ್ನಡಮ್ಮನ ಸೇವೆ ಮಾಡುವ ಕಲಾ ಕೇಂದ್ರವೊಂದನ್ನು ಆರಂಭ ಮಾಡಿದ ಕಾಮತ್‌ರವರು ಆ ಮೂಲಕ ತಾಲೂಕಿನಾದ್ಯಂತ ಇರುವ ಬಹಳಷ್ಟು ಪ್ರತಿಭೆಗಳಿಗೆ ವೇದಿಕೆ ನೀಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಪ್ರತಿಯೊಬ್ಬ ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಇದೆ ಅದಕ್ಕೆ ಸೂಕ್ತವಾದ ವೇದಿಕೆ ನೀಡಿದಾಗ ಆ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂಬುದನ್ನು ಅರಿತುಕೊಂಡ ಚಿದಾನಂದ ಕಾಮತ್‌ರವರು 2007 ರಲ್ಲಿ ಬಾರಿಸು ಕನ್ನಡ ಡಿಂಡಿಮವ ಎಂಬ ತಂಡವೊಂದನ್ನು ಕಟ್ಟುತ್ತಾರೆ. ಅದೆಷ್ಟೋ ಮಕ್ಕಳ ಸಭಾ ಕಂಪನ ಹೋಗಲಾಡಿಸಿ, ಪ್ರತಿಭೆಗಳಿಗೆ ವೇದಿಕೆ ನೀಡುತ್ತಿದ್ದಾರೆ. ಎಲ್‌ಕೆಜಿಯಿಂದ ಹಿಡಿದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ವೇದಿಕೆ ನೀಡಿ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ.  ನಿಮ್ಮ ಮುಂದಿನ ಜೀವನ ಸುಖಮಯವಾಗಿರಲಿ…ವೃತ್ತಿಯಿಂದ ನಿವೃತ್ತಿಯಾಗಿರುವ ನೀವು.. ಮುಂದೆ ಪ್ರವೃತ್ತಿಯ ಮೂಲಕ ನಾಡಿನ ಪ್ರತಿಭೆಗಳಿಗೆ ಬೆಳಕು ತೋರಿಸುವ ಜ್ಯೋತಿಯಾಗಿ ಬೆಳಗಿ…ನಿಮ್ಮಿಂದ ಪ್ರತಿಭೆಗಳು ಅನಾವರಣಗೊಳ್ಳಲಿ…ಕನ್ನಡ ತಾಯಿ ಭುವನೇಶ್ವರಿ ನಿಮ್ಮನ್ನು ಹರಸಲಿ…ಶುಭ ಹಾರೈಕೆಗಳು….

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.