ಸುದಾನದಲ್ಲಿ 24ನೇ ರಾಜ್ಯಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ ವಿಜ್ಞಾನದ ವಿಚಾರದಲ್ಲಿ ಪ್ರಗತಿಪರ ದಿಕ್ಕಿಗೆ ಹೆಜ್ಜೆ ಇಡಬೇಕು-ಸಚಿವ ರೈ

Puttur_Advt_NewsUnder_1
Puttur_Advt_NewsUnder_1

1 2 4 3 *  ಸಂಶೋಧನೆ ಗಳು ಪರಿಸರ, ಜೀವಿಸಂಕುಲಕ್ಕೆ ತೊಂದರೆಯಾಗದಿರಲಿ – ಶಕುಂತಳಾ ಶೆಟ್ಟಿ 
 *   ಮಕ್ಕಳು ಅಧ್ಯಯನಶೀಲರಾಗಬೇಕು – ದಿವ್ಯಪ್ರಭಾ ಚಿಲ್ತಡ್ಕ
 *  ಸಂಶೋಧನೆ ಪರಿಸರವನ್ನು ಉಳಿಸಲಿ – ಮೀನಾಕ್ಷಿ ಶಾಂತಿಗೋಡು

ಪುತ್ತೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ಜಿಲ್ಲಾ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಜಿಲ್ಲಾಡಳಿತ ಮತ್ತು ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಹಕಾರದೊಂದಿಗೆ ದ.೫ರ ತನಕ ಇಲ್ಲಿನ ಸುದಾನ ವಸತಿಯುತ ಶಾಲೆಯಲ್ಲಿ ನಡೆಯುವ ೨೪ನೇ ಅಖಿಲ ಕರ್ನಾಟಕ ರಾಜ್ಯಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶವು ದ.೩ರಂದು ಉದ್ಘಾಟನೆಗೊಂಡಿತ್ತು. ವಿಜ್ಞಾನ ಸಮಾವೇಶವನ್ನು ಸಂಪ್ರದಾಯದಂತೆ ವೇದಿಕೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರೆ, ಪ್ರದರ್ಶನ ಮಳಿಗೆಳನ್ನು ಬೆಲೂನ್‌ಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ವಿವರಣೆ ಕೊಡುವ ಎಲ್.ಸಿ.ಡಿ ಸ್ಕ್ರೀನ್ ನನ್ನು ರಿಮೋಟ್ ಮೂಲಕ ಉದ್ಘಾಟಿಸಲಾಯಿತು.
ಬೆಳಗ್ಗಿನಿಂದ ಸಂಜೆಯ ತನಕ ಮೊದಲ ದಿನ ಶಿಸ್ತು ಬದ್ಧವಾಗಿ ನಡೆದ ಸಮಾವೇಶ ಯಶಸ್ವಿ ಕಂಡಿದೆ. ಸುದಾನ ವಿಜ್ಞಾನ ಸಮಾವೇಶದ ಮುಖ್ಯ ವೇದಿಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ನೋಂದಾವಣೆ ಕೌಂಟರ್ ಹಾಕಲಾಗಿತ್ತು. ಮೈಸೂರು, ಬೆಂಗಳೂರು, ಬೆಳಗಾಂ, ಕಲ್ಬುರ್ಗಿ ಜಿಲ್ಲೆಗೆ ಪ್ರತ್ಯೇಕ ಸ್ಟಾಲ್‌ಗಳಲ್ಲಿ ನೋಂದಾವಣೆ ವ್ಯವಸ್ಥೆ ಮಾಡಲಾಗಿತ್ತು. ನೋಂದಾವಣೆ ಆದ ಬಳಿಕ ಅವರಿಗೆ ಸೂಚಿಸಿದ ಕೊಠಡಿಗಳಿಗೆ ಹೋಗುವ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ವ್ಯವಸ್ಥೆಗೂ ಅಲ್ಲಲ್ಲಿ ಸ್ವಯಂ ಸೇವಕರು ಸಹಕರಿಸುತ್ತಿದ್ದರು.
ವಿಜ್ಞಾನದ ವಿಚಾರದಲ್ಲಿ ಪ್ರಗತಿಪರ ದಿಕ್ಕಿಗೆ ಹೆಜ್ಜೆ ಇಡಬೇಕು: ರೈ – ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಮಾತನಾಡಿ ಸಮಾಜ ಎಷ್ಟು ಮುಂದೆ ಹೋದರು ಕೂಡಾ ಕಂದಾಚಾರ, ಮೂಢನಂಬಿಕೆಗಳು ಪ್ರಗತಿಪರ ವಿಚಾರಗಳನ್ನು ಗೌಣ ಮಾಡುತ್ತಿರುವುದು ಕಾಣುತ್ತಿದೆ. ಇಂದು ವಿಜ್ಞಾನ ಮೊಳಕೆಯೊಡೆದು ಮಕ್ಕಳ ಮನಸ್ಸಿನಲ್ಲಿ ಪ್ರಚೋದನೆಗೊಂಡಾಗ ಸಮಾಜದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಈ ನಿಟ್ಟಿನಲ್ಲಿ ನಾವು ಪ್ರಗತಿಪರ ದಿಕ್ಕಿಗೆ ಹೆಜ್ಜೆ ಇಡಬೇಕೆಂದು ಹೇಳಿದರು. ಕೊಳಚೆ ನೀರನ್ನು ತೆಗೆಯಲು ಶುದ್ಧ ನೀರನ್ನು ಉಪಯೋಗಿಸುವಂತೆ ಮನಸ್ಸಿನ ಕಂದಾಚಾರ ಮೂಢನಂಬಿಕೆಯನ್ನು ತೆಗೆಯಲು ಉತ್ತಮ ವಿಚಾರಗಳನ್ನು ತುಂಬಿದಾಗ ಸಮಾಜದಲ್ಲಿ ಪರಿಣಾಮಕಾರಿ ಬದಲಾವಣೆ ತರಲು ಸಾಧ್ಯವಿದೆ ಎಂದ ಅವರು ಸಮಾಜದಲ್ಲಿ ಹಿಂದಕ್ಕೆ ಎಳೆಯುವವರಿದ್ದಾರೆ ನಾವು ಮುಂದೆ ಹೋಗಬೇಕಾಗಿದೆ ಎಂದರು. ವರ್ತಮಾನದ ಮಕ್ಕಳು ಬುದ್ದಿವಂತರಾಗಿರುತ್ತಾರೆ. ಅವರು ವೈಜ್ಞಾನಿಕ ತಿಳುವಳಿಕೆ ತಿಳಿದು ಕೊಂಡ ಬಳಿಕ ಬಾಲವಿಜ್ಞಾನಿಗಳಾಗುತ್ತಾರೆ ಎಂದರು.
ಸಂಶೋಧನೆ ಪರಿಸರ, ಜೀವಿಸಂಕುಲಕ್ಕೆ ತೊಂದರೆಯಾಗದಿರಲಿ: ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯವರು ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳೆ ವಿಜ್ಞಾನಿಗಳು ನೀವು, ಅಜ್ಞಾನಿಗಳು ನಾವು ಎಂದು ಹೇಳಿದ ಅವರು ಪರಿಸರಕ್ಕೆ, ಜೀವಿ ಸಂಕುಲಕ್ಕೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಸಂಶೋಧನೆ ಮಾಡಿದರೆ ಅದು ಸುಜ್ಞಾನ ಬರಿತವಾಗುತ್ತದೆ. ಅದನ್ನು ಬಿಟ್ಟು ಸಂಶೋಧನೆಯೆಂದು ಹುಡುಕುತ್ತಾ ಹೋದರೆ ಕೊನೆಗೊಂದು ದಿನ ಅಜ್ಞಾನಿಗಳಾಗಿ ಸೋಲನ್ನು ಕಾಣಬೇಕಾಗುತ್ತದೆ. ಯಾವತ್ತೂ ಆರೋಗ್ಯಕರ ವಿಷಯವೇ ಸಂಶೋಧನೆಯಾಗಲಿ ಎಂದರು.
ಮಕ್ಕಳು ಅಧ್ಯಾಯನಶೀಲರಾಗಬೇಕು: ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕರವರು ಮಾತನಾಡಿ ವಿಜ್ಞಾನ ಮತ್ತು ಮನುಕುಲ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಶೋಧನೆ ಆಗದೆ ಇರುತ್ತಿದ್ದರೆ ನಾವಿನ್ನೂ ಶಿಲಾಯುಗದ ಕಾಲದಂತೆ ಕಲ್ಲುಗಳನ್ನು ತಿಕ್ಕಿ ಬೆಂಕಿ ಮಾಡಬೇಕಾಗಿತ್ತು ಎಂದ ಅವರು ಮಕ್ಕಳು ಕೇವಲ ವಿಜ್ಞಾನದಲ್ಲಿ ಮಾತ್ರವಲ್ಲ ಎಲ್ಲಾ ವಿಚಾರದಲ್ಲೂ ಮುಂದುವರಿಯಬೇಕು ಎಂದರು.
ಸಂಶೋದನೆ ಪರಿಸರವನ್ನು ಉಳಿಸಲಿ: ಸುಳ್ಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕಿ ರೇವತಿನಂದನ್‌ರವರ ಇರುವೆ ನೀನೆಲ್ಲಿರುವೆ ಎಂಬ ಕೃತಿಯನ್ನು ಬಿಡುಗಡೆ ಮಾಡಿದ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್‌ರವರು ಮಾತನಾಡಿ ವಿಜ್ಞಾನ ತಂತ್ರಜ್ಞಾನ ಎಷ್ಟು ಮುಂದುವರಿದೆ ಎಂದರೆ ಬಾಲ ವಿಜ್ಞಾನಿಗಳು ರಾಜ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ಆದರೆ ತಂತ್ರಜ್ಞಾನ ಬಳಕೆ ಉತ್ತಮ ವಿಚಾರಕ್ಕೆ ಮಾತ್ರ ಉಪಯೋಗವಾಗಬೇಕು. ಪರಿಸರವನ್ನು ಉಳಿಸುವಂತಾಗಬೇಕೆಂದರು.
ಶಿಕ್ಷಕರು ಮಕ್ಕಳ ಮೂಲಕ ಭವ್ಯ ಭಾರತ ಕಟ್ಟುವವರು: ಎಲ್ಲಾ ಕಾರ್ಯಕ್ರಮಗಳ ಪೂರ್ಣ ಚಿತ್ರಣದ ಎಲ್.ಸಿ.ಡಿ ಸ್ಕ್ರೀನ್ ನನ್ನು ಉದ್ಘಾಟಿಸಿದ ಜಿ.ಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್‌ರವರು ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಲು ಶಿಕ್ಷಕರೇ ಕಾರಣ. ಶಿಕ್ಷಕರಿಂದಲೇ ಇವತ್ತು ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದೆ. ವೈಜ್ಞಾನಿಕ ವಿಚಾರಗಳಲ್ಲಿ ಸಾರ್ವಜನಿಕರಲ್ಲಿ ಆಸಕ್ತಿ ಇಲ್ಲದಿದ್ದರೂ ಅವರಿಗೆ ಕಿಚ್ಚು ಕೊಡುವ ಕೆಲಸ ಇವತ್ತಿನ ಸಮಾವೇಶದ ಮೂಲಕ ಆಗುತ್ತಿದೆ ಎಂದರು.
ಮಗುವಿನ ಜ್ಞಾನ ಸಂಪತ್ತಿಗೆ ವಿಜ್ಞಾನದ ಕೊಡುಗೆ ಅಪಾರ: ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ್‌ರವರು ಮಾತನಾಡಿ ಮಗುವಿನ ಜ್ಞಾನ ಸಂಪತ್ತಿಗೆ ವಿಜ್ಞಾನದ ಕೊಡುಗೆ ಅಪಾರವಿದೆ. ಅವರಲ್ಲಿ ಮೂಡಿದ ಚಿಂತನೆಗೆ ಪ್ರೋತ್ಸಾಹ ಸಿಕ್ಕಿದಾಗ ವಿಜ್ಞಾನ ಬೆಳೆಯುತ್ತದೆ ಎಂದರು.
ತಂತ್ರಜ್ಞಾನಕ್ಕೆ ವಿಜ್ಞಾನ ಮಾದರಿ: ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡುರವರು ಮಾತನಾಡಿ ಅಡುಗೆ ಮನೆಯಿಂದ, ಪ್ಯಾಕ್ಟರಿ, ತಂತ್ರಜ್ಞಾನ ಸಂಸ್ಥೆಯಲ್ಲಿ ವಿಜ್ಞಾನದ ಕೊಡುಗೆ ಅಪಾರ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ವಿಜ್ಞಾನವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯೊವ ಕೆಲಸ ಬಾಲ ವಿಜ್ಞಾನಿಗಳ ಮೂಲಕ ಆಗಲಿ ಎಂದು ಶುಭ ಹಾರೈಸಿದರು.
ಮನುಷ್ಯನ ಬದುಕಿಗೆ ಇರುವೆಗಳು ಅಗತ್ಯ: ಇರುವೆ ನಿನೆಲ್ಲಿರುವೆ ಎಂಬ ಕೃತಿಯನ್ನು ಬರೆದ ಸುಳ್ಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ರೇವತಿನಂದನ್‌ರವರು ಮಾತನಾಡಿ ಕಾಡಿನಲ್ಲಿರುವ ಆನೆ, ಹುಲಿ, ಪ್ರಾಣಿಸಂಕುಲಗಳು ಇದ್ದರೆ ಸಾಲದು ಮನುಷ್ಯನು ಭೂಮಿಯ ಮೇಲೆ ಬದುಕನ್ನು ಸುಗಮವಾಗಿ ಸಾಗಿಸಬೇಕಾದರೆ ಮಿಲಿಯಗಟ್ಟಲೆ ಇರುವೆಗಳು ಇರಬೇಕು ಎಂದು ಅವರು ತಮ್ಮ ಕೃತಿ ಪರಿಚಯ ಮಾಡಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಸುದಾನ ವಸತಿಯುತ ಶಾಲೆಯ ಶಾಮಿಲ್ ಅಬ್ಬಾಸ್, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಇಂಚರ ಮತ್ತು ಆವಂತಿ, ಉಜಿರೆ ಎಸ್.ಡಿ.ಎಂ. ಪ್ರೌಢಶಾಲೆಯ ವಿದ್ಯಾರ್ಥಿನಿ ಋತುರವರನ್ನು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಶಿಕ್ಷಕಿ ವಸಂತಿ ಕೆದಿಲರವರು ಸನ್ಮಾನಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಸಹ ಕಾರ್ಯದರ್ಶಿ ಪ್ರೇಮ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ಭವಿಷ್ಯದ ಜ್ಞಾನಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದ್ದು, ಮಕ್ಕಳಲ್ಲಿ ವಿಜ್ಞಾನ ವಿಷಯದಲ್ಲಿ ಆಸಕ್ತಿ, ಕುತೂಹಲ, ಸಂಶೋಧನಾ ಪ್ರವೃತ್ತಿ ಬೆಳೆಸುವುದರೊಂದಿಗೆ ಸೃಜನಶೀಲತೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಲು ಸೂಕ್ತ ವೇದಿಕೆ ಒದಗಿಸುತ್ತದೆ ಎಂದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಕಡಮಜಲು ಸುಭಾಶ್ ರೈ, ಸಹಾಯಕ ಕಮೀಷನರ್ ಡಾ. ರಘುನಂದನ್ ಮೂರ್ತಿ, ಬಾಲವಿಜ್ಞಾನಿ ಕೆ.ಜಿ. ಭರತ್ ಕುಮಾರ್, ಹಿರಿಯ ಉಪನ್ಯಾಸಕ ಗೋವಿಂದ ಮಡಿವಾಳ, ತಹಶೀಲ್ದಾರ್ ಅನಂತಶಂಕರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ಪೌರಾಯುಕ್ತೆ ರೂಪಾ ಶೆಟ್ಟಿ, ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ ವಿಜಯ ಹಾರ್ವಿನ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಎಜ್.ಡಿ ಶಿವರಾಮ್, ಸುದಾನ ಶಾಲೆಯ ಮುಖ್ಯಗುರು ಶೋಭಾ ನಾಗರಾಜ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಮನೋಹರ ರೈ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಸಮಿತಿ ಕಾರ್ಯದರ್ಶಿ ಕರುಣಾಕರ್, ಖಜಾಂಜಿ ರೆನ್ನಿ ಡಿಸೋಜ ಉಪಸ್ಥಿತರಿದ್ದರು. ಸುದಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದಶಕ ವಾಲ್ಡರ್ ಡಿ ಮೆಲ್ಲೊ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ವಂದಿಸಿದರು. ಪ್ರೊ. ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್‍ಯಕ್ರಮದ ಬಳಿಕ ಸುದಾನ ಸಂಸ್ಥೆಯ ಎಡ್ವರ್ಡ್ ಕಾನ್ಫರೆನ್ಸ್ ಹಾಲ್‌ನಲ್ಲಿ ಡಾ. ರವೀಂದ್ರನಾಥ ಐತಾಳ್‌ರವರಿಂದ ಹಾವು, ನಾವು, ನೀವು ಕಾರ್ಯಕ್ರಮ , ಮಧ್ಯಾಹ್ನ ಪ್ರೊ. ನರೇಂದ್ರ ನಾಯಕ್ ರವರಿಂದ ವೈಜ್ಞಾನಿಕ ಮನೋಭಾವ ಪ್ರಾತ್ಯಕ್ಷಿಕೆ, ಪ್ರಶ್ನೋತ್ತರ ನಡೆಯಿತು. ಸಂಜೆ ದಿನೇಶ್ ನಾಯಕ್‌ರವರಿಂದ ಪಶ್ಚಿಮ ಘಟ್ಟದ ಸಸ್ಯ ವೈವಿಧ್ಯತೆಯ ಬಗ್ಗೆ ಉಪನ್ಯಾಸ ನಡೆಯಿತು. ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಉದ್ಘೋಷಕರಾಗಿ ನಿರ್ವಹಿಸಿದರು. ಬಳಿಕ ಮುಖ್ಯ ವೇದಿಕೆಯಲ್ಲಿ ಸುದಾನ ವಸತಿಯುತ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು. ದ.೪ರಂದು ಬೆಳಿಗ್ಗೆ ಡಾ. ಎಂ.ಕೆ.ಶ್ರೀಶ ಕುಮಾರ್ ಇವರಿಂದ ಜಲಸಂರಕ್ಷಣೆ ಕುರಿತು ಉಪನ್ಯಾಸ, ಸಂಜೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆ ಬಗ್ಗೆ ಇಸ್ರೋ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ. ಸಿ.ಡಿ. ಪ್ರಸಾದ್‌ರವರೊಂದಿಗೆ ನೇರ ಸಂವಾದ ಕಾರ್‍ಯಕ್ರಮ, ಸಂಜೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಲಿದೆ. ದ.೫ರಂದು ಬೆಳಿಗ್ಗೆ ಕಾಂಚನ ಸುಬ್ರಹ್ಮಣ್ಯ ಭಟ್ ಇವರಿಂದ ಗಣಿತ ವಿಜ್ಞಾನ ಭೋಧನೋಪಕರಣಗಳ ಬಳಕೆ ಕುರಿತು ಕಾರ್ಯಕ್ರಮ, ಮೂರು ದಿನವು ಐ.ಡಿ ಚಂದ್ರುರವರಿಂದ ಪರಿಸರ ಮತ್ತು ವಿಜ್ಞಾನ ಗೀತೆಗಳ ಗಾಯನ ನಡೆಯಲಿದೆ.

ಮಾಹಿತಿ ಮತ್ತು ಪ್ರದರ್ಶನ ಕೌಂಟರ್‌ಗಳು
ರಾಷ್ಟ್ರೀಯ ವಿಜ್ಞಾನ ಸಮಾವೇಶದ ಸಭಾ ವೇದಿಕೆಯ ಎಡಭಾಗದಲ್ಲಿ ಮಾಹಿತಿ ಮತ್ತು ಪ್ರದರ್ಶನ ಕೌಂಟರ್‌ಗಳನ್ನು ಹಾಕಲಾಗಿತ್ತು. ಸಮಾವೇಶದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ನೋಂದಾವಣೆ ಮಾಡಿಕೊಳ್ಳಲು ಮೈಸೂರು, ಬೆಳಗಾವಿ, ಬೆಂಗಳೂರು, ಗುಲ್ಬರ್ಗ ವಿಭಾಗಗಳಿಗೆ ಪ್ರತ್ಯೇಕ ಕೌಂಟರ್ ಹಾಕಲಾಗಿತ್ತು. ನಂತರದಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯ, ವಿಜ್ಞಾನ ಪರಿಷತ್‌ನಿಂದ ಕನ್ನಡ ವಿಜ್ಞಾನ ಪುಸ್ತಕ ಪ್ರದರ್ಶನ, ಕೋಲಾರ ವಿಜ್ಞಾನ ಸಮಿತಿಯ ಸ್ಟಾಲ್, ಸುದ್ದಿ ಮಾಹಿತಿ ಟ್ರಸ್ಟ್‌ನಿಂದ ಶಿಕ್ಷಣ-ಉದ್ಯೋಗ ಮಾಹಿತಿ ಕೇಂದ್ರ, ಪುಸ್ತಕ ಪ್ರದರ್ಶನ, ಹಾಗೂ ಸುದಾನ, ಇಂದ್ರಪ್ರಸ್ಥ, ವಿವೇಕಾನಂದ ಆಂಗ್ಲಮಾಧ್ಯಮ, ವಿವೇಕಾನಂದ ಕನ್ನಡ ಮಾಧ್ಯಮ, ಸೈಂಟ್ ವಿಕ್ಟರ್‍ಸ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಗಳ ಪ್ರಾಯೋಗಿಕ ಪ್ರದರ್ಶನದ ಕೌಂಟರ್ ಹಾಕಲಾಗಿತ್ತು.
31 ಜಿಲ್ಲೆಗಳಿಂದ ಒಟ್ಟು 1097 ವಿದ್ಯಾರ್ಥಿಗಳ ಭಾಗವಹಿಸುವಿಕೆ
ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ರಾಜ್ಯದ ಮೈಸೂರು, ಬೆಂಗಳೂರು, ಗುಲ್ಬರ್ಗಾ, ಬೆಳಗಾವಿ ವಿಭಾಗಗಳ 31 ಜಿಲ್ಲೆಗಳಿಂದ ಒಟ್ಟು 266 ತಂಡಗಳಲ್ಲಿ 1095 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಂಗಳೂರು ವಿಭಾಗದಿಂದ ಬೆಂಗಳೂರು ಉತ್ತರ, ಮೈಸೂರು ವಿಭಾಗದಿಂದ ಹಾಸನ, ಗುಲ್ಬರ್ಗಾ ವಿಭಾಗದಿಂದ ರಾಯಚೂರು ಜಿಲ್ಲೆಗಳು ಸಮಾವೇಶದಲ್ಲಿ ಭಾಗವಹಿಸಲಿಲ್ಲ ಎಂದು ನೋಂದಾವಣಾ ವಿಭಾಗದ ಪ್ರಕಟಣೆ ತಿಳಿಸಿದೆ.

ಸುದಾನ ಕ್ಯಾಂಪಸ್‌ನಲ್ಲಿ ನಲಿದಾಡಿದ ಮಕ್ಕಳು

ಸಮಾವೇಶದಲ್ಲಿ ಭಾಗವಹಿಸಲು ಬಾಲವಿಜ್ಞಾನಿಗಳು ಆಗಮಿಸಿದ್ದರೂ ಸುದಾನ ಶಾಲೆಯ ಪ್ರಶಾಂತವಾದ ವಾತಾವರಣ ಮಕ್ಕಳಿಗೆ ಮುದ ನೀಡಿತ್ತು. ಮೊದಲೇ ಕ್ಯಾಂಪಸ್ ಮರಗಿಡಗಳಿಂದ, ಪ್ರಾಣಿ ಪಕ್ಷಿಗಳಿಂದ ಕೂಡಿದ್ದ ಕ್ಯಾಂಪಸ್ ಮಕ್ಕಳನ್ನು ಇನ್ನಷ್ಟು ಆಕರ್ಷಿಸಿತ್ತು. ಸುದಾನ ಶಾಲೆಯ ತರಗತಿ ಕೊಠಡಿಗಳನ್ನು ಜಿಲ್ಲಾವಾರು ತಂಡಗಳಿಗೆ ನೀಡಲಾಗಿತ್ತು. ಪ್ರತೀ ಜಿಲ್ಲೆಯಿಂದ ಓರ್ವ ಸಂಯೋಜಕ ಹಾಗೂ ವಿವಿಧ ಶಾಲಾ ತಂಡಗಳ ಮಾರ್ಗದರ್ಶಕ ಶಿಕ್ಷಕರು ಭಾಗವಹಿಸಿದ್ದಾರೆ. ಉಟೋಪಚಾರದ ವ್ಯವಸ್ಥೆಯೂ ಅಚ್ಚುಕಟ್ಟಾಗಿ ನಡೆಸಲಾಗಿತ್ತು. ಸುದಾನ ಭೋಜನ ಶಾಲೆಯಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನ. ಸಂಜೆಯ ಉಪಾಹಾರ ಹಾಗೂ ರಾತ್ರಿಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಸುದಾನ ಶಾಲಾ ಕ್ಯಾಂಪಸ್ ಹೊರಭಾಗದಲ್ಲಿ ಸುವ್ಯವಸ್ಥಿತವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ತಂಗಲು ಸುದಾನ ಹಾಗೂ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗಿನಿಂದಲೇ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸುರಕ್ಷತೆಗಾಗಿ ಅಗ್ನಿಶಾಮಕ ದಳ, ತುರ್ತು ಆರೋಗ್ಯ ಸೇವೆಗಾಗಿ 108 ರಕ್ಷಾಕವಚವನ್ನು ಕ್ಯಾಂಪಸ್‌ನಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು.

.

6 2 3 5

whatsapp-image-2016-12-03-at-3-49-34-pm

ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ಪ್ರಬಂದ ಮಂಡನೆ 

ವಿಜ್ಞಾನ ಸಮಾವೇಶದಲ್ಲಿ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ಎಂಬ ಕೇಂದ್ರ ವಿಷಯದಡಿ ವಿವಿಧ ವಿಷಯಗಳ ಕುರಿತು ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ಐವರು ವಿದ್ಯಾರ್ಥಿಗಳನ್ನೊಳಗೊಂಡ ತಂಡವು ತಮ್ಮ ಶಾಲಾ ವ್ಯಾಪ್ತಿಯ ಪರಿಸರದಲ್ಲಿನ ಸಮಸ್ಯೆಗಳನ್ನು ಗುರುತಿಸಿ ಸ್ವತಃ ಸಮೀಕ್ಷೆ ಕೈಗೊಂಡು ಸಂಶೋಧಿಸಿ, ವಿಶ್ಲೇಷಿಸುವ ಮೂಲಕ ವೈಜ್ಞಾನಿಕ ಯೋಜನೆ ತಯಾರಿಸಿ ಹಿರಿಯ ವಿಜ್ಞಾನಿಗಳಂತೆ ಪ್ರಬಂಧ ಮಂಡಿಸಿದರು.
24 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆಗೆ ಸಂಬಂಧಿಸಿದಂತೆ ಶಕ್ತಿ, ಆರೋಗ್ಯ,ಸ್ವಚ್ಚತೆ ಮತ್ತು ಪೋಷಣೆ, ನವೀನ ಆಹಾರ ಮತ್ತು ವ್ಯವಸಾಯ,ಜೀವನಶೈಲಿ ಮತ್ತು ಜೀವನಾಧಾರ, ವಿಪತ್ತು ನಿರ್ವಹಣೆ, ನೀರಿನ ಸಂರಕ್ಷಣೆ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಭೂಮಿಯ ಸಂಪನ್ಮೂಲಗಳು, ಪರಿಸರ ವ್ಯವಸ್ಥೆಗಳು, ಇತ್ಯಾದಿ ಕಾರ್ಯ ಮತ್ತು ಚಟುವಟಿಕೆಗಳು ಮುಂತಾದ ವಿಷಯಗಳ ಕುರಿತು ತಮ್ಮ ಪ್ರಯೋಗಗಳ ಮೂಲಕ ತಮ್ಮ ಶಾಲೆಯ ಸುತ್ತಮುತ್ತ ಕೈಗೊಂಡ ಸಮೀಕ್ಷೆಯನ್ನು ಕಿರಿಯ ವಿಜ್ಞಾನಿಗಳು ಅಂಕಿ ಅಂಶಗಳ ಸಮೇತ ಸಮಾವೇಶದಲ್ಲಿ ಅನಾವರಣಗೊಳಿಸಿದರು. ಐವರನ್ನೊಳಗೊಂಡ ತಂಡದಲ್ಲಿ ರಚಿಸಿದ ಯೋಜನೆಗಳನ್ನು ಯಶಸ್ವಿಯಾಗಿ ಮಂಡಿಸಿ ತಮ್ಮ ಪ್ರತಿಭೆ ಮೆರೆದರು. ಗ್ರಾಮೀಣ ಭಾಗದ ಮಕ್ಕಳು ಗ್ರಾಮಾಂತರ ಪ್ರದೇಶದ ಸಮಸ್ಯೆಗಳನ್ನು ಗುರುತಿಸಿ ಪರಿಸರ ಅಧ್ಯಯನ ಕೈಗೊಂಡು ಹಿರಿಯ ವಿಜ್ಞಾನಿಗಳ ಮಾದರಿಯಲ್ಲಿಯೇ ಪ್ರಬಂಧ ಮಂಡಿಸಿದ್ದು ಗಮನ ಸೆಳೆಯಿತು. ದ. 4ರಂದು ಪ್ರಬಂಧ ಮಂಡನೆಗಳು ಮುಂದುವರಿಯಲಿವೆ.

ಮಕ್ಕಳ ಮನಸ್ಸಿಗೆ ಶುದ್ಧ ವಿಜ್ಞಾನ ತುಂಬಿಸುವ ಕೆಲಸ ಆಗಬೇಕು
ಮಕ್ಕಳ ಮನಸ್ಸು ದೇವರ ಮನಸ್ಸಿನಂತೆ. ಅವರಲ್ಲಿ ದ್ವೇಷ, ಅಸೂಯೆ, ಮದ, ಮತ್ಸರ ಯಾವುದು ಇಲ್ಲ. ಇಂತಹ ಮಕ್ಕಳು ಮುಂದಿನ ಸುಂದರ ಜಗತ್ತು ಆಗಬೇಕಾದರೆ ಇವತ್ತಿನ ಆಧುನಿಕ ವಿಷಯಗಳನ್ನು ತಿಳಿದು ಕೊಂಡು ಹೆಜ್ಜೆ ಇಡುವ ಅಗತ್ಯವಿದೆ ಎಂದ ಅವರು ವರ್ತಮಾನ ಕಾಲಘಟ್ಟದಲ್ಲಿ ಕಣ್‌ಕಟ್ಟಿನ ಜಾದೂ ಆಗುತ್ತಿದೆ. ಅದು ಮಕ್ಕಳ ಮೇಲೆ ಪರಿಣಾಮ ಬೀರುವ ಮುನ್ನ ಮಕ್ಕಳ ಮನಸ್ಸಿಗೆ ಶುದ್ದ ವಿಜ್ಞಾನದ ತುಂಬಿಸುವ ಕೆಲಸ ಆಗಬೇಕು. ಹಾಗೆ ಶುದ್ದೀಕರಣವಾದ ಸಮಾಜದಲ್ಲಿ ನಾವೆಲ್ಲ ಬದುಕಲು ಅವಕಾಶ ಮಾಡಿಕೊಡಬೇಕು. ಬಿ. ರಮಾನಾಥ ರೈ, ಸಚಿವರು

ನಂಬಿಕೆಯನ್ನು ವಿರೋಧ ಮಾಡಿಲ್ಲ
ಕಲ್ಪುರ್ಗಿಯವರ ವೈಚಾರಿಕ ವಿಚಾರಧಾರೆಗಳನ್ನು ಒಪ್ಪಿಕೊಳ್ಳದ ಜನ ಅವರನ್ನು ಹತ್ಯೆ ಮಾಡಿರಬಹುದು ಎಂದ ರಮಾನಾಥ ರೈಯವರು ಮೂಢನಂಬಿಕೆ ವಿರುದ್ಧ ಮಾತನಾಡುವ ಮೂಲಕ ನಂಬಿಕೆ ಯನ್ನು ವಿರೋಧ ಮಾಡುತ್ತೇವೆ ಎಂದರ್ಥವಲ್ಲ. ಮೂಢನಂಬಿಕೆ ಸಾಕಷ್ಟು ಸಮಸ್ಯೆಯನ್ನು ಕೊಡುತ್ತದೆ. ವಿಜ್ಞಾನ ಅದನ್ನು ದೂರ ಮಾಡಲು ಸಾಧ್ಯವಾಗುತ್ತದೆ ಎಂದು ಮನಗಾಣಬೇಕು ಎಂದರು.

ನಾವು ಸಣ್ಣವರಿದ್ದಾಗ ಪೆಪ್ಪರ್ ಮಿಠಾಯಿಯನ್ನು ಅಂಗಡಿಗಳಲ್ಲಿ ಪೇಪರ್‌ನಲ್ಲಿ ಕಟ್ಟಿ ಕೊಡುತ್ತಿದ್ದರು. ಇಂದು ಬದಲಾವಣೆ ದಿನವಾಗಿ ಪ್ಲಾಸ್ಟಿಕ್ ಅವಿಷ್ಕಾರ ನಡೆಯಿತು. ಪೆಪ್ಪರ್ ಮಿಠಾಯಿ ಕಟ್ಟಿ ಕೊಡಲು ಪ್ಲಾಸ್ಟಿಕ್ ಬಳಕೆಯಾಯಿತು. ಎಲ್ಲೆಂದರಲ್ಲೂ ಪ್ಲಾಸ್ಟಿಕ್ ತುಂಬಿತು. ಅದು ಇವತ್ತು ಪರಿಸರಕ್ಕೆ ವಿಷಕಾರಿಯಾಗಿದೆ. ಇಂದು ಅದರ ಬಳಕೆ ನಿಷೇಧಿಸಲು ಕಾನೂನು ಜಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಒಳ್ಳೆಯ ವಿಚಾರಕ್ಕೆ ಅವಿಷ್ಕಾರ ನಡೆದರೂ ಅದರ ಬಳಕೆ ಪರಿಸರಕ್ಕೆ ಮಾರಾಕವಾಗಬಾರದು.
ಶಕುಂತಳಾ ಶೆಟ್ಟಿ, ಶಾಸಕರು ಪುತ್ತೂರು

45

23

123

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.