Breaking News

ಅಕ್ರಮ ಸಕ್ರಮ ಕುಮ್ಕಿ ಹಕ್ಕುಪತ್ರ ವಿತರಣೆಗೆ ಕ್ರಮ ಉಪ್ಪಿನಂಗಡಿ ಜನಸಂಪರ್ಕ ಸಭೆಯಲ್ಲಿ ಶಕುಂತಳಾ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

56ಸಿಡಿಲು ಬಡಿದು ಮೃತಪಟ್ಟಿರುವ ನೆಲ್ಯಾಡಿಯ ನವೀನ್ ಕುಮಾರ್ ಎಂಬವರ ಪತ್ನಿ ಪುಷ್ಪಾವತಿಯವರಿಗೆ 4 ಲಕ್ಷ ರೂಪಾಯಿ ಪರಿಹಾರಧನದ ಚೆಕ್‌ನ್ನು ಶಾಸಕಿ ಶಕುಂತಳಾ ಶೆಟ್ಟಿ  ವಿತರಿಸಿದರು. 

ಉಪ್ಪಿನಂಗಡಿ: ಅಕ್ರಮ-ಸಕ್ರಮ ಕೃಷಿ ಭೂಮಿಯಲ್ಲಿರುವ ಕುಮ್ಕಿ ಜಾಗದ ಹಕ್ಕು ಪತ್ರ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿದ್ದು, ಅದರಂತೆ ಈ ಭಾಗದ ರೈತರ ಬಹುಕಾಲದ ಬೇಡಿಕೆ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಸಂಸದೀಯ ಕಾರ್ಯದರ್ಶಿ, ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಡಿ. 3ರಂದು ಉಪ್ಪಿನಂಗಡಿಯಲ್ಲಿ ಕಂದಾಯ ಇಲಾಖೆಯ ಉಪ್ಪಿನಂಗಡಿ ಹೋಬಳಿ ಮಟ್ಟದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕ್ರಮ ಸಕ್ರಮ ಕೃಷಿ ಭೂಮಿ ಹೊಂದಿ ಅದರಲ್ಲಿ ಉಳಿಕೆಯಾಗಿ ಸ್ವಾಧೀನ ಇರುವ ಭೂಮಿಯ ಕುಮ್ಕಿ ಹಕ್ಕಿಗಾಗಿ 1997-98ರಲ್ಲಿ ಫಾರಂ ನಂಬ್ರ 50ರಲ್ಲಿ ಅರ್ಜಿ ಸಲ್ಲಿಸಿರುವ ಮತ್ತು ಈಗಾಗಲೇ ಜಾಗ ಹೊಂದಿರುವಂತೆ ಒಟ್ಟು 4.94 ಎಕ್ರೆ ಜಾಗ ಮೀರದಂತೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು, ಈ ಬಗ್ಗೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಸ್ಥಳದಲ್ಲಿ ಇದ್ದ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೋರ್ ನಿಷೇಧ ಹಿಂಪಡೆಯುವಂತೆ ಆಗ್ರಹ: ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ ಮಾತನಾಡಿ ದ.ಕ. ಜಿಲ್ಲಾಧಿಕಾರಿಯವರು ಬೋರ್‌ವೆಲ್ ಕೊರೆಯದಂತೆ ನಿಷೇಧ ಹೇರಿದ್ದಾರೆ. ಆ ಬಳಿಕವೂ ಅಧಿಕ ಮಂದಿ ಬೋರ್‌ವೆಲ್ ಕೊರೆಯುತ್ತಿದ್ದಾರೆ. ಆದರೂ ಬಹುತೇಕ ಮಂದಿ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಬೋರ್‌ವೆಲ್ ಕೊರೆಯದಿದ್ದರೆ ಕೃಷಿ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ. ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶವನ್ನು ಕೃಷಿಕರ ಹಿತದೃಷ್ಠಿಯಿಂದ ಹಿಂಪಡೆಯಬೇಕು, ಈ ನಿಟ್ಟಿನಲ್ಲಿ ಶಾಸಕರು ಸರ್ಕಾರದ ಮತ್ತು ಜಿಲ್ಲಾಧಿಕಾರಿಯವರ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು.
ನೆಲ್ಯಾಡಿ ಕರೆ ಒತ್ತುವರಿ ತೆರವಿಗೆ ಆಗ್ರಹ: ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ವಿಷಯ ಪ್ರಸ್ತಾಪಿಸಿ ನೆಲ್ಯಾಡಿಯಲ್ಲಿ ೩ ಎಕ್ರೆ ಪ್ರದೇಶದಲ್ಲಿ ಕೆರೆ ಇತ್ತು. ಆದರೆ ಇದೀಗ ಬಹುಭಾಗ ಒತ್ತುವರಿ ಆಗಿದ್ದು, ಅದರಲ್ಲಿ ಮನೆಗಳು ನಿರ್ಮಾಣ ಆಗಿರುತ್ತದೆ. ಅದಕ್ಕೆ ಹಕ್ಕುಪತ್ರವನ್ನೂ ನೀಡಲಾಗಿದೆ. ಆದರೆ ಅದೇ ಜಾಗದಲ್ಲಿ ಅಂಗನವಾಡಿಯೊಂದು ಕಾರ್‍ಯಾಚರಿಸುತ್ತಿದೆ. ಇದಕ್ಕೆ ಹಕ್ಕುಪತ್ರ, ದಾಖಲೆ ಸಿದ್ಧಪಡಿಸಲು ಇಲಾಖೆಗೆ ಸೂಚಿಸುವಾಗ ಅದು ಕೆರೆ ಜಾಗ ಎಂದು ಸಬೂಬು ಹೇಳುತ್ತಿದ್ದಾರೆ. ಆದ ಕಾರಣ ಇಲ್ಲಿ ಕೆರೆ ಒತ್ತುವರಿ ಆಗಿರುವುದು ಸಂಪೂರ್ಣವಾಗಿ ತೆರವು ಆಗಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಉಪ್ಪಿನಂಗಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊದುಕುಟ್ಟಿ, ಹಿರ್ತಡ್ಕ ಮಠ ಶಾಲಾ ಅಧ್ಯಕ್ಷ ಆದಂ ಕೊಪ್ಪಳ, ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶೇಷಪ್ಪ ನೆಕ್ಕಿಲು ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಪಿ.ಪಿ. ವರ್ಗೀಸ್, ಶ್ರೀಮತಿ ಶಯನಾ ಜಯಾನಂದ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಭವಾನಿ ಚಿದಾನಂದ, ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಉಪ್ಪಿನಂಗಡಿಯ ಶ್ರೀಮತಿ ಸುಜಾತ ಕೃಷ್ಣ, ನೆಲ್ಯಾಡಿಯ ಶ್ರೀಮತಿ ಉಷಾ ಅಂಚನ್, ಬಿಳಿನೆಲೆಯ ಶ್ರೀಮತಿ ಆಶಾ ಲಕ್ಷ್ಮಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಪ್ಪಿನಂಗಡಿಯ ಕೆ. ಅಬ್ದುಲ್ ರಹಿಮಾನ್, ೩೪-ನೆಕ್ಕಿಲಾಡಿಯ ಶ್ರೀಮತಿ ರತಿ ನಾಯ್ಕ್, ಬಜತ್ತೂರು ಸಂತೋಷ್ ಕುಮಾರ್, ಜಿಲ್ಲಾ ಕೆಡಿಪಿ ಸದಸ್ಯ ಯು.ಕೆ. ಅಯೂಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
143 ಮಂದಿಗೆ 94/ಸಿ ಹಕ್ಕುಪತ್ರ, ಸಂಧ್ಯಾ ಸುರಕ್ಷಾ-20, ವಿಧವಾ ವೇತನ-15 ವಿತರಣೆ: ಸಭೆಯಲ್ಲಿ ಸಿರಿಬಾಗಿಲು-84, ಶಿರಾಡಿ-14, ಹಿರೇಬಂಡಾಡಿ-14, ಕೌಕ್ರಾಡಿ-3, ನೆಲ್ಯಾಡಿ-4, ಕೋಡಿಂಬಾಡಿ-10, ಬೆಳ್ಳಿಪ್ಪಾಡಿ-7, ಉಪ್ಪಿನಂಗಡಿ-7 ಸೇರಿದಂತೆ ಒಟ್ಟು 143 ಮಂದಿಗೆ 94/ಸಿ ಹಕ್ಕುಪತ್ರ ವಿತರಣೆ ಮಾಡಲಾಯಿತು. ಹಾಗೂ 20 ಮಂದಿಗೆ ಸಂಧ್ಯಾಸುರಕ್ಷಾ, 15 ಮಂದಿಗೆ ವಿಧವಾ ವೇತನ ಮಂಜೂರಾತಿ ಪತ್ರ ವಿತರಿಸಲಾಯಿತು. ಹಾಗೂ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟಿರುವ ನೆಲ್ಯಾಡಿಯ ನವೀನ್ ಕುಮಾರ್ ಅವರ ಪತ್ನಿ ಶ್ರೀಮತಿ ಪುಷ್ಪಾವತಿಯವರಿಗೆ 4 ಲಕ್ಷ ರೂಪಾಯಿ ಪರಿಹಾರಧನದ ಚೆಕ್‌ನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ತಹಸೀಲ್ದಾರ್ ಅನಂತ ಶಂಕರ ಸ್ವಾಗತಿಸಿ, ಉಪತಹಸೀಲ್ದಾರ್ ಸದಾಶಿವ ನಾಯ್ಕ್ ವಂದಿಸಿದರು. ಉಪ ತಹಸೀಲ್ದಾರ್ ಗುಡ್ಡಪ್ಪ ಶೆಟ್ಟಿ, ಕಂದಾಯ ನಿರೀಕ್ಷಕ ಮಂಜುನಾಥ ಕಾರ್‍ಯಕ್ರಮ ನಿರೂಪಿಸಿದರು.

* 143 ಮಂದಿಗೆ 94/ಸಿ ಹಕ್ಕುಪತ್ರ, ಸಂಧ್ಯಾ ಸುರಕ್ಷಾ-20, ವಿಧವಾ ವೇತನ-15 ವಿತರಣೆ
* ಸಿಡಿಲು ಬಡಿದು ಸಾವು 4 ಲಕ್ಷ ಪರಿಹಾರ ಚೆಕ್ ವಿತರಣೆ
* ಬೋರ್ ಕೊರೆಯಲು ಹೇರಿದ್ದ ನಿಷೇಧ ಹಿಂಪಡೆಯಲು ಆಗ್ರಹ
* ನೆಲ್ಯಾಡಿ ಕರೆ ಒತ್ತುವರಿ ತೆರವಿಗೆ ಆಗ್ರಹ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.