Breaking News

ಕೋಡಿಂಬಾಳ: ರೈಲು ತಡೆದು ಪ್ರತಿಭಟನೆ 17 ಜನರ ವಿರುದ್ಧ ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ಕಡಬ: ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಕೋಡಿಂಬಾಳದಲ್ಲಿ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಹಾಗೂ ನಿಲ್ದಾಣಕ್ಕೆ ವಿವಿಧ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಅಗ್ರಹಿಸಿ ಕೋಡಿಂಬಾಳ ರೈಲ್ವೇ ಸ್ಟೇಷನ್ ಅಭಿವೃದ್ಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ಡಿ.2ರಂದು ಯಶವಂತಪುರ ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಕೋಡಿಂಬಾಳದಲ್ಲಿ ತಡೆದು ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ 17 ಜನ ಹೋರಾಟಗಾರರ ವಿರುದ್ಧ ಹಾಸನ ರೈಲ್ವೇ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಸೇರಿದಂತೆ 17 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.  ಕೋಡಿಂಬಾಳ ರೈಲು ನಿಲ್ದಾಣದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕು, ಫ್ಲಾಟ್‌ಫಾರಂ ಮೇಲ್ದರ್ಜೆಗೆ ಏರಬೇಕು,  ಹಳಿ ಪರಿವರ್ತನೆ ಬಳಿಕ ನಿಂತು ಹೋಗಿದ್ದ ಕಾರವಾರ-ಬೆಂಗಳೂರು ಎಕ್ಸ್‌ಪ್ರೆಸ್ ನಿಲುಗಡೆಯನ್ನು ಮತ್ತೆ ಪ್ರಾರಂಭಿಸಬೇಕು ಮುಂತಾದ ಬೇಡಿಕೆಗಳನ್ನು ಇಟ್ಟುಕೊಂಡು  ಸಾವಿರಕ್ಕೂ ಮಿಕ್ಕಿದ ನಾಗರಿಕರು ಮೂರುವರೆ ಗಂಟೆಗೆ ಸುಮಾರು 10ನಿಮಿಷ (ರೈಲ್ವೇ ಅಧಿಕಾರಿಗಳ ಪ್ರಕಾರ 15 ನಿಮಿಷ) ರೈಲು ತಡೆದು ಪ್ರತಿಭಟನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರೈಲ್ವೇ ಹಾಸನ ವಿಭಾಗದ ರೈಲ್ವೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪ್ರಥಮ ಮಾಹಿತಿ ವರದಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಮಾಹಿತಿ ನೀಡಲು ನಿರಾಕರಿಸಿದ ರೈಲ್ವೇ ಅಧಿಕಾರಿಗಳು: ನಿಲುಗಡೆ ಇಲ್ಲದ ರೈಲನ್ನು ತಡೆಯುವುದು ಕಾನೂನುಬಾಹಿರ ಕೆಲಸವಾದ್ದರಿಂದ ರೈಲ್ವೇ ಮೈಸೂರು ವಿಭಾಗದ ಇಂಜೀನಿಯರ್ ಪ್ರಕಾಶ್ ಕಾಂಡೆ ಅವರ ನಿರ್ದೆಶನದಂತೆ ಪ್ರಕರಣ ದಾಖಲಾಗಿದೆ ಎಂದಿರುವ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ. ರೈಲ್ವೇ ಹಾಸನ ಠಾಣಾ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ಮಾಹಿತಿ ನೀಡಿ ಪ್ರಕರಣ ದಾಖಲಾಗಿದ್ದರೂ ತನಿಖೆಯ ಹಂತದಲ್ಲಿರುವುದರಿಂದ ಎಲ್ಲಾ ವಿವರ ನೀಡಲು ಸಾಧ್ಯವಿಲ್ಲ. ಮಾತ್ರವಲ್ಲ ಹೆಚ್ಚಿನ ಮಾಹಿತಿ ಬೇಕಾದರೆ ಪುತ್ತೂರು ನ್ಯಾಯಾಲಯಕ್ಕೆ ಅರ್ಜಿ ಹಾಕಿ ಪಡೆದುಕೊಳ್ಳಬಹುದು ಎಂದು ಪುಕ್ಕಟೆ ಸಲಹೆ ನೀಡಿದ್ದಾರೆ. ರೈಲು ತಡೆದು ಪ್ರತಿಭಟನೆ ಮಾಡಲಾಗುವುದು ಎನ್ನುವ ಮಾಹಿತಿ ಆಧಾರದಲ್ಲಿ ಗುರುವಾರ ಸಂಜೆ ಪುತ್ತೂರು ಎ.ಎಸ್‌ಪಿ ರಿಷ್ಯಂತ್ ಹೋರಾಟಗಾರರೊಂದಿಗೆ ಕಡಬ ಠಾಣೆಯಲ್ಲಿ ಸಮಾಲೋಚನ ಸಭೆ ನಡೆಸಿದ್ದರು. ಈ ಸಂದರ್ಭದಲಿ ಎಎಸ್‌ಪಿಯವರು ಯಾವುದೇ ಕಾರಣಕ್ಕೆ ರೈಲು ತಡೆದು ಪ್ರತಿಭಟನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಆದ್ದರಿಂದ ಹೋರಾಟವನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಹೋರಾಟಗಾರರು ನಮ್ಮನ್ನು ಜೈಲಿಗೆ ಅಟ್ಟಿದರೂ ಚಿಂತೆಯಿಲ್ಲ, ರೈಲು ತಡೆದೇ ತಡೆಯುತ್ತೇವೆ ಎಂದು ಆವೇಶದಿಂದ ಹೇಳಿಕೊಂಡಿದ್ದರು. ಇದೀಗ ಪ್ರಕರಣ ದಾಖಲಾಗುವುದರ ಮೂಲಕ ಪೋಲಿಸರು ನೀಡಿರುವ ಎಚ್ಚರಿಕೆ ನಿಜವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.